• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕಥಾವಾಹಿನಿ’ ಮತ್ತು ಎನ್‌ಆರ್‌ಐ ಕತೆಗಾರರು!

By Staff
|
 • ಆಹಿತಾನಲ, ಆರ್ಕೇಡಿಯ, ದ. ಕ್ಯಾಲಿಫೋರ್ನಿಯ
 • ‘ಚಕ್ರವ್ಯೂಹ’ ಎಂಬ ಗಿರೀಶ್‌ ಜಮದಗ್ನಿಯವರ ಕತೆಯ ವಿನ್ಯಾಸ, ಅವರು ಬಳಸಿದ ಶೈಲಿ ನನಗೆ ತುಂಬಾ ಹಿಡಿಸಿತು. ಮುಂಬಯಿಯಲ್ಲಿ ಜೀವನ ನಡೆಸುತ್ತಿದ್ದ ಪ್ರಮೋದ, ಪಾವುಸ್ಕರ್‌ ಮತ್ತು ಮೋರೆ - ಇವರ ಜೀವನಗಳನ್ನು ಒಂದಕ್ಕೊಂದು ಜೋಡಿಸಿ, ಒಂದು ಸೊಗಸಾದ ಕತೆಯನ್ನೇ ಹೆಣೆದಿದ್ದಾರೆ.

  ಮೋರೆ ಖಳನಾಯನಾಗಿದ್ದಲ್ಲಿ, ಪ್ರಮೋದ್‌ ಬಲಿಪಶುವಾಗಿ, ಪಾವುಸ್ಕರ್‌ ಅವನ ಇಚ್ಛೆಗೆ ವಿರೋಧವಾಗಿ ಸೂತ್ರದಾರನಾಗುತ್ತಾನೆ. ಎಷ್ಟು ದುಡಿದರೂ, ಹಣದ ಅಡಚಣೆಯಲ್ಲೇ ತೊಳಲುತ್ತಿರುವ ಪಾವುಸ್ಕರನ ಆರ್ಥಿಕ ಸಮಸ್ಯೆ ಕಾಂಪೌಂಡರ್‌ ಮೋರೆಯ ವಕ್ರ ತಂತ್ರದಿಂದ ಬಗೆಹರಿಯುತ್ತದೆ. ರೈಲು ಪ್ರಯಾಣದಲ್ಲಿ ನೂಕು-ನುಗ್ಗುಲುಗಳಿಂದಾಗಿ ಪ್ರಮೋದ್‌ ತನ್ನ ಐಡೆಂಟಿಟಿ ಕಾರ್ಡನ್ನು ಕಳೆದುಕೊಂಡಾಗ ಅದರಲ್ಲಿ ಕಾಣಿಸಿದ ಪ್ರಮೋದನ ಬ್ಲಡ್‌ ಗ್ರೂಪ್‌ ‘ಎ-ಮೈನಸ್‌’ಎಂಬ ವಿಷಯ ಈ ಕತೆ ಬೆಳೆಯುವಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ. ಈ ‘ಎ-ಮೈನಸ್‌’ ವಿಚಾರವನ್ನು ತನ್ನ ಆರ್ಥಿಕ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಮೋರೆಯ ವಕ್ರಸಲಹೆಯಿಂದ ತನ್ನ ರೂಮ್‌ಮೇಟ್‌, ಪ್ರಮೋದನ ತಿಳುವಳಿಕೆ ತಪ್ಪಿಸಿ ಅವನ ‘ರಕ್ತ ಹೀರುವ’ ಹೀನಾಯ ಕೆಲಸಕ್ಕೆ ಪಾವುಸ್ಕರ ಕೈಒಡ್ಡುತ್ತಾನೆ. ಹಾಗೆ ಶೇಖರಿಸಿದ ರಕ್ತವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಹಣ ಸಂಪಾದಿಸುತ್ತಾನೆ. ಇಂಥ ಹೀನಾಯ ವೃತ್ತಿ ನಡೆಯುವ ಮುಂಬಯಿ ಜೀವನ ಕ್ರಮ ಈ ಕತೆಯಲ್ಲಿ ಚೆನ್ನಾಗಿ ಮೂಡಿಬಂದಿದೆ.

  Naga Aithalರೈಲ್ವೇ ಪ್ರಯಾಣದ ನೂಕು-ನುಗ್ಗಲು, ಒಂದೇ ಕೋಣೆಯವಾಸಸ್ಥಳದಲ್ಲಿನ ಬವಣೆಗಳ ವಿವರ, ರೂಮಿನ ಕಿಟಿಕಿಯಿಂದ ‘ಎಕ್‌ ಚಾಯ್‌ು ಲಾವೋ’ ಎಂದು ರೂಮಿನ ಕೆಳಗಿರುವ ಹೋಟೆಲ್‌ನ್ನು ಕೂಗಿ ಕರೆಯುವ ಮಾತು - ಇವೆಲ್ಲವೂ ಮುಂಬಯಿ ನಗರದ ಜೀವನಕ್ರಮಗಳನ್ನು ಸೂಕ್ಷ್ಮವಾಗಿ ವಿವರಿಸುತ್ತದೆ.

  ಸಂಧ್ಯಾ ರವೀಂದ್ರನಾಥ್‌ ಅವರ ‘ಧ್ಯಾನ’ದಲ್ಲಿ ಒಂದು ಸಾಮಾನ್ಯ ಸಂದರ್ಭವನ್ನು ಸ್ವಾರಸ್ಯವಾಗಿ ವಿವರಿಸುವ ನಿರೂಪಣೆ ಇಲ್ಲಿ ಕತೆಯ ರೂಪ ತಾಳುತ್ತದೆ. ಮಗಳು ಬರುವ ವಿಮಾನ ಒಂದು ಗಂಟೆ ತಡವಾಗಿ ಸ್ಯಾನ್‌ ಹೊಸೆ ವಿಮಾನ ನಿಲ್ದಾಣವನ್ನು ತಲುಪುತ್ತದೆ. ಆ ಒಂದು ಗಂಟೆಯನ್ನು ಸದುಪಯೋಗ ಪಡಿಸಲೆಂದು ರಘು ತನ್ನ ಯೋಗ-ಗುರುಗಳಿಂದ ಪಡೆದ ಶಿಕ್ಷಣ, ‘ಮೆಡಿಟೇಷನ್‌’ನ್ನು ಅಭ್ಯಸಿಸಲು ಅಲ್ಲೆ ‘ಧ್ಯಾನ’ದಲ್ಲಿ ನಿರತನಾಗುತ್ತಾನೆ.

  ಕಣ್ಣು ಮುಚ್ಚಿ, ಮನಸ್ಸನ್ನು ಹತೋಟಿಗೆ ತರಲು ಎಷ್ಟು ಪ್ರಯತ್ನಿಸಿದರೂ ಸುತ್ತಲೂ ನಡೆಯುವ ಆಗುಹೋಗುಗಳು, ಅಲ್ಲಿ ನಡೆಯುತ್ತಿರುವ ಸಂಭಾಷಣೆಗಳು ಅದಕ್ಕೆ ಪ್ರತಿಕೂಲವಾಗುತ್ತದೆ. ಆದರೆ, ಅದರಿಂದ ಅವನು ಪ್ರಯೋಜನವನ್ನೇ ಪಡೆಯುತ್ತಾನೆ. ಎಲ್ಲಿಯವರೆಗೆಂದರೆ, ಸುತ್ತು-ಮುತ್ತಲಿನವರು ತನಗೆ ಚಿರ-ಪರಿಚಿತರೆನ್ನುವಷ್ಟು. ಅವನ ಆ ಆಳ ‘ಧ್ಯಾನ’ಕ್ಕೆ ಆಗ ತಾನೇ ಬಂದ ಮಗಳ ‘ಏನು ಡ್ಯಾಡಿ, ನಿದ್ರೆ ಮಾಡುತ್ತಿದ್ದೀಯಾ.....?’ ಎಂಬ ಮಾತು ಭಂಗ ತರುತ್ತದೆ. ಅಲ್ಲಿ ಬಳಸಿದ ವಿವಿಧ ಸಂಭಾಷಣೆಗಳು ಸ್ವಾರಸ್ಯಮಯವಾಗಿವೆ. ರಘು ತನ್ನ ಅಲೆಯುತ್ತಿರುವ ಮನಸ್ಸನ್ನು ಹತೋಟಿಗೆ ತರಲು ವಿಫಲನಾಗಿರಬಹುದು. ಆದರೆ, ಬಿಡುವಿಲ್ಲದ ಇಲ್ಲಿಯ ‘ಫಾಸ್ಟ್‌ ಲೈಫ್‌’ನ ಮಧ್ಯೆ ಆ ಒಂದು ಗಂಟೆಯ ಕಾಲ ಅವನ ಮನಸ್ಸಿಗೆ ಪರಿಹಾರ ದೊರೆಯಲು ಆ ‘ಧ್ಯಾನ’ ಅನುಕೂಲ ಮಾಡಿಕೊಟ್ಟಿದ್ದಂತೂ ನಿಜ!

  ಬದುಕಿನಲ್ಲಿ ಒಂದಲ್ಲ ಒಂದು ಕಾಲ ಎಲ್ಲರೂ ದುಃಖ ಸನ್ನಿವೇಶವನ್ನು ಎದುರಿಸಲೇ ಬೇಕಾಗುತ್ತದೆ. ಶಶಿ ಚಂದ್ರಶೇಖರ್‌ ಅವರ ‘ವರ್ತುಲ’ದಲ್ಲಿ ಮೂವರು ಮಹಿಳೆಯರ ಮನಸ್ಸಿಗೆ ನೋವನ್ನುಂಟುಮಾಡಿದ ಸನ್ನಿವೇಶಗಳನ್ನು ಒಂದಕ್ಕೊಂದು ಜೋಡಿಸಿ, ತಮ್ಮೊಳಗೆ ಅವನ್ನು ಹಂಚಿಕೊಂಡು ಸಾಂತ್ವನ ಪಡೆಯುವ ಸಂದರ್ಭಗಳನ್ನು ಹೆಣೆದ ಒಂದು ಸ್ವಾರಸ್ಯ ಹಾಗೂ ಸೊಗಸಾದ ಕತೆಯ ರಚನೆಯಾಗಿದೆ ಇಲ್ಲಿ.

  ತಾಯಿಯನ್ನು ಭಾರತಕ್ಕೆ ಕಳುಹಿಸಿಕೊಟ್ಟಾಗ ಉಂಟಾದ ಸುಜಲಳ ನೋವು, ಡಯಾನಳ ಸೋಫಿಯ ಮೇಲೆ ಬೆಳೆದಿರುವ ಪ್ರೀತಿ, ಮಗಳು ಮಾಲಿ ಮೇಲಿನ ಸೂಸನ್‌ಳ ಮಾತೃ ಪ್ರೇಮ - ಇವುಗಳ ಜೋಡಣೆಯೊಂದಿಗೆ, ಬೆಳೆದುಬಂದ ಈ ಕತೆ ಹೃದಯಸ್ಪರ್ಶಿ. ನನಗೆ ಅತಿಯಾಗಿ ಹಿಡಿಸಿದುದು ಮೂಕ ಪ್ರಾಣಿ, ಗೋಲ್ಡನ್‌ ರಿಟ್ರೀವರಿನ ಮುಪ್ಪಿನ ಕಾಲದ ಬಳಲುವಿಕೆಯಿಂದ ಪಾರುಮಾಡಲು ಅದನ್ನು ಮನಸ್ಸಿಲ್ಲದ ಮನಸ್ಸಿನಿಂದ ‘ಪುಟ್‌ ಟು ಸ್ಲೀಪ್‌’ ಕಾರ್ಯದಲ್ಲಿ ಡಯಾನಳು ಅನುಭವಿಸಿದ ಸಂಕಟದ ವರ್ಣನೆ. ಅವರು ತಮ್ಮ ಕೈಗಳನ್ನು ವರ್ತುಲಾಕಾರದಲ್ಲಿ ಜೋಡಿಸಿ ಒದಗಿ ಬಂದಿರುವ ದುಃಖವೆಲ್ಲ ಶಮನವಾಗಲೆಂದು ಹಾರೈಸುವ ತಮ್ಮ ‘ನಾಳೆಯನ್ನು ಎದುರಿಸುವ ಒತ್ತಾಸೆ’ಯೊಡನೆ ಕತೆ ಕೊನೆಗೊಳ್ಳುತ್ತದೆ.

  ಪೂರ್ಣಿಮಾ ರಾಮಪ್ರಸಾದ್‌ ಅವರ ಕತೆ ‘ಪಾಲಿಗೆ ಬಂದದ್ದೇನು?’ ಎಂಬ ಕತೆಯಲ್ಲಿ ಜ್ಯೋತ್ಸ್ನಾ ಮತ್ತು ವಿವೇಕ್‌ ಇವರಿಬ್ಬರೊಳಗಿನ ‘ಟೀನೇಜ್‌ ಕ್ರಷ್‌’ ಮದುವೆಯಲ್ಲಿ ಪರಿಣಮಿಸುವುದಿಲ್ಲ. ಅವಳು ಅಮೆರಿಕೆಯಿಂದ ‘ಪಾಲಿನ ಪಂಚಾಂಬೃತ’ವಾಗಿ ಬಂದ ಅವಿನಾಶನನ್ನು ಭಾರತದಲ್ಲೇ ಇದ್ದ ವಿವೇಕನಿಗೆ ಬದಲಾಗಿ ವರಿಸಿ ಅಮೆರಿಕಕ್ಕೆ ಹಾರುತ್ತಾಳೆ. ಆದರೆ, ವಿವೇಕ್‌ ಮುಂದೆ, ಅಮೆರಿಕದಲ್ಲೇ ಒಂದು ಯಶಸ್ವಿ ಕಂಪನಿಯೊಂದನ್ನು ಪ್ರಾರಂಭಿಸಿ, ಅದರಲ್ಲಿ ಜ್ಯೋತ್ಸ್ನಾಳ ಗಂಡ ಅವಿನಾಶನಿಗೆ ಉದ್ಯೋಗ ಒದಗಿಸುತ್ತಾನೆ. ಈ ವಿಷಯ ಅವಳಿಗೆ ವಿವೇಕ್‌ ತನ್ನ ಕಂಪನಿಯ ಉದ್ಯೋಗಿಗಳಿಗೆ ಕೊಟ್ಟ ಒಂದು ಭೋಜನಕೂಟದಲ್ಲಿ ತಿಳಿದಾಗ ಅಂಥ ಯಶಸ್ವಿ ಉದ್ಯಮಿಯ ಹೆಂಡತಿಯಾಗುವ ಅದೃಷ್ಟವನ್ನು ಕಳೆದುಕೊಂಡುದಕ್ಕಾಗಿ ಜ್ಯೋತ್ಸ್ನಾ ಕರುಬುತ್ತಾಳೆ.

  ಪಾರ್ಟಿಯಲ್ಲಿ ವಿವೇಕ್‌ ತನ್ನ ಹೆಂಡತಿ, ಪ್ರೀತಿಯ ಪರಿಚಯ ಮಾಡಿಕೊಡುತ್ತ ‘ಇವಳೇ ನನ್ನ ಪಾಲಿಗೆ ಬಂದ ಪಂಚಾಮೃತ’ ಎಂದು ಹೇಳಿದಾಗ ಜ್ಯೋತ್ಸ್ನಾಳ ಮನ ಚುಚ್ಚುತ್ತದೆ. ಯಾಕೆಂದರೆ ಹಿಂದೆ ಅವಿನಾಶನೇ ಅವಳ ಪಾಲಿಗೆ ಬಂದ ಪಂಚಾಮೃತವೆಂದು ವಿವೇಕ್‌ಗೆ ಹೇಳಿದ್ದಳು. ಈ ಮಾತು ಅವಳ ವಿವೇಕವನ್ನೂ ಎಚ್ಚರಿಸುತ್ತದೆ. ಅವಿನಾಶ ರೂಪದಲ್ಲೂ ಗುಣದಲ್ಲೂ ಕಡಿಮೆಯಿಲ್ಲ, ತನ್ನನ್ನು ಬಹಳವಾಗಿ ಪ್ರೀತಿಸುತ್ತಿದ್ದಾನೆ, ಅವನೇ ತನ್ನ ಪಾಲಿನ ಪಂಚಾಮೃತ - ಎಂಬ ಅರಿವು ಮೂಡಿಬಂದಾಗಲೇ ಅವಳ ಕದಡಿದ ಮನಕ್ಕೆ ನೆಮ್ಮದಿ ಸಿಗುತ್ತದೆ. ಕತೆಯ ಶೀರ್ಷಿಕೆಯನ್ನು ‘ಪಾಲಿಗೆ ಬಂದ ಪಂಚಾಮೃತ’ವೆಂದೇ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ನನ್ನ ಅನಿಸಿಕೆ.

  ಪ್ರಕಾಶ್‌ ಹೇಮಾವತಿಯವರ ‘ಗ್ರಾಮದೇವತೆ’ಯಲ್ಲಿ ಪರಿಸರ ಚಳುವಳಿ ಮತ್ತು ರಾಜಕೀಯಗಳೊಳಗಿನ ತಿಕ್ಕಾಟಗಳ ವಿವರಗಳಿವೆ. ಪ್ರಾರಂಭದಲ್ಲಿ ಕತೆ ಪರಿಸರದ ಪ್ರಾಮುಖ್ಯತೆಯನ್ನು ಕವಿ ಸಿದ್ದಲಿಂಗಯ್ಯನವರ ಕವನದೊಂದಿಗೆ ಹೇಳ ಹೊರಟಿದ್ದರೂ, ಅದು ಬೆಳೆಯುತ್ತಿದ್ದಂತೆ ರಾಜಕಾರಣಿಗಳ ವಿಡಂಬನೆಯೇ ಅಲ್ಲಿ ಮುಖ್ಯ ಪಾತ್ರ ವಹಿಸಿದ್ದುದು ನನ್ನ ಗಮನ ಸೆಳೆಯಿತು.

  ಕತೆ ಮುಗಿದ ಮೇಲೆ ಕಥಾನಾಯಕ ತಾನು ಬಯಸಿದ್ದ ಪ್ರತಿಫಲವನ್ನು ಪಡೆದನೇ ಎಂದೂ ವಿಸ್ಮಯಪಡುವಂತಾಯ್ತು. ರಾಜಕಾರಣ ಹೇಗೆ ಒಂದು ಆದರ್ಶ ಸಾಧನೆಯನ್ನು ಕಬಳಿಸಬಲ್ಲುದು ಎಂಬುದನ್ನು ಪ್ರಕಾಶ್‌ ಅವರು ಕತೆಯಲ್ಲಿ ಸ್ವಾರಸ್ಯವಾಗಿ ವರ್ಣಿಸಿದ್ದಾರೆ. ಕತೆಯಲ್ಲಿ ಬರುವ ಕಾನು ಗುಡ್ಡೆಯ ಮೇಲಿನ ಸೂರ್ಯೋದಯ ಮತ್ತು ಅಲ್ಲಿನ ಪ್ರಕೃತಿ ವರ್ಣನೆಗಳಂತೂ ಓದುಗರನ್ನು ಬಹಳವಾಗಿ ಆಕರ್ಷಿಸುತ್ತದೆ. ಅಲ್ಲದೆ, ಕತೆಯಲ್ಲಿ ಬಳಸಿದ ಮಿತವಾದ, ಹಿತವಾದ ಗ್ರಾಮೀಣ ಸಂಭಾಷಣೆಗಳೂ ನಮ್ಮ ಗಮನವನ್ನು ವಿಶೇಷವಾಗಿ ಸೆಳೆಯುತ್ತದೆ.

  ಇತ್ತೀಚೆಗೆ ಅಮೆರಿಕದಿಂದ ಸಾಹಿತ್ಯಕ್ಕೆಂದೇ ಮೀಸಲಾದ ‘ಕನ್ನಡ ಸಾಹಿತ್ಯ ರಂಗ’ ಪ್ರಕಟಿಸಿದ ‘ಆಚೀಚೆಯ ಕತೆಗಳು’ ಎಂಬ ಕಥಾ ಸಂಕಲನಕ್ಕೆ ಈ ‘ಕಥಾವಾಹಿನಿ’ ಪೂರಕವೆಂಬಂತಿದೆ. ಉತ್ತಮ ಕತೆಗಳಿಂದ ಕೂಡಿದ ಈ ‘ಕಥಾವಾಹಿನಿ’ ಒಂದು ಅಪೂರ್ವ ಕೊಡುಗೆ. ಅಮೆರಿಕನ್ನಡಿಗರಿಗೆ ಇದೊಂದು ಹೆಮ್ಮೆಯ ವಿಚಾರ. ಓದುಗರು ಈ ಸಂಕಲವನ್ನು ಮೆಚ್ಚಿಯಾರೆಂಬ ನಂಬಿಕೆ ನನ್ನಲ್ಲಿದೆ.

  ಹಿಂದಿನ ವಿಶ್ವಕನ್ನಡ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆಯನ್ನು ತರುತ್ತಿದ್ದ ವಾಡಿಕೆಗೆ ಬದಲಾಗಿ ಇದನ್ನು ಒಂದು ಪ್ರತ್ಯೇಕ ಗ್ರಂಥವಾಗಿ ಹೊರತರುತ್ತಿರುವ ಈ ಸಾಹಸ ಇದೇ ಮೊದಲನೆಯ ಹಾಗೂ ಒಂದು ದಿಟ್ಟ ಹೆಜ್ಜೆ. ಇದಕ್ಕಾಗಿ ನಿಸ್ವಾರ್ಥತೆಯಿಂದ ದುಡಿದ ಮೈ.ಶ್ರೀ. ನಟರಾಜ, ಸಂಜೀವ ಮನಗೋಳಿ, ಶಶಿಕಲಾ ಚಂದ್ರಶೇಖರ್‌ - ಇವರೆಲ್ಲರೂ ಅಭಿನಂದನಾರ್ಹರು.

  ಸುಂದರ ಮುಖಪುಟವನ್ನು ನಿರ್ಮಿಸಿಕೊಟ್ಟ ಜನಾರ್ದನ ಸ್ವಾಮಿಯವರಿಗೂ ಅಭಿನಂದನೆಗಳು. ಪ್ರೊ. ಅಶ್ವತ್ಥನಾರಾಯಣ ಅವರ ರಸವತ್ತಾದ ಹಾಗೂ ಪ್ರೋತ್ಸಾಹ ನೀಡುವ ಮುನ್ನುಡಿ ‘ಕಥಾವಾಹಿನಿ’ಗೆ ವಿಶೇಷ ಕಳೆಕೊಟ್ಟಿದೆ. ಅಮೆರಿಕದಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಉತ್ತಮ ಗ್ರಂಥಗಳು ಪ್ರಕಟವಾಗುತ್ತಿದ್ದು, ಆ ಮೂಲಕ ಅಮೆರಿಕನ್ನಡಿಗರ ಸಾಹಿತ್ಯಾಭಿಮಾನ ಹೆಚ್ಚಲು ಪ್ರೋತ್ಸಾಹ ಸಿಗುತ್ತಿರಲೆಂದು ಹಾರೈಸುತ್ತೇನೆ.

  ವಿಶ್ವಕನ್ನಡ ಸಮ್ಮೇಳನದಲ್ಲಿ ಹರಿದು ಬಂದ ‘ಕಥಾವಾಹಿನಿ’ (ಭಾಗ 1)

  ನುಡಿ ಹಬ್ಬದ ಚಿತ್ರಪಟಗಳು :

  ಮತ್ತೆ ಸಿಗೋಣ - 3ನೇ ದಿನ

  ಮೆರವಣಿಗೆಯ ನೋಟ- 2ನೇ ದಿನ

  ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ

  ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ

  ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

  ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ

  ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?

  ಪೂರ್ವ ಸಿದ್ಧತೆ Be a patronate! Use .in e-mail Post Your Views

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more