ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಅಭ್ಯರ್ಥಿಗಳ ಪಟ್ಟಿ ರಿಲೀಸ್; ರಾಜ್ಯದಿಂದ ಖರ್ಗೆ ಸೇರಿ ಮೂವರಿಗೆ ಟಿಕೆಟ್
ಬೆಂಗಳೂರು: ದೇಶದ ಒಟ್ಟು 10 ರಾಜ್ಯಗಳ 24 ಸ್ಥಾನಗಳಿಗೆ ಜೂನ್ 18 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಗುರುವಾರ ಒಟ್ಟು 7 ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಈ ಪೈಕಿ ಕರ್ನಾಟಕದಿಂದ ಮೂವರಿಗೆ ಮಣೆ ಹಾಕಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಪವನ್ ಖೇರಾ ಮತ್ತು ಮನ್ಸೂರ್ ಅಲಿ ಖಾನ್ ಅವರಿಗೆ ಕರ್ನಾಟಕದಿಂದ ಸ್ಪರ್ಧಿಸಲು ಹೈಕಮಾಂಡ್ ಟಿಕೆಟ್ ನೀಡಿದೆ.
ಕರ್ನಾಟಕದಿಂದ ಒಟ್ಟು ನಾಲ್ಕು ರಾಜ್ಯಸಭೆ ಸ್ಥಾನಗಳು ತೆರವಾಗುತ್ತಿದ್ದು, ವಿಧಾನಸಭೆಯ ಪ್ರಸ್ತುತ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಸುಲಭವಾಗಿ ಮೂರು ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಇನ್ನುಳಿದ ಒಂದು ಸ್ಥಾನ ಬಿಜೆಪಿಗೆ ಒಲಿಯಲಿದೆ. ಮರು ಆಯ್ಕೆ ಬಯಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಮಧ್ಯಾಹ್ನ ವಿಧಾನಸೌಧದಲ್ಲಿ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಸಾಥ್ ನೀಡಲು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸುತ್ತಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕದ ಮೂವರಲ್ಲದೆ, ಇತರ ರಾಜ್ಯಗಳ ಪ್ರಮುಖ ನಾಯಕರಿಗೂ ಸ್ಥಾನ ಸಿಕ್ಕಿದೆ. ಮಧ್ಯಪ್ರದೇಶದಿಂದ ಮೀನಾಕ್ಷಿ ನಟರಾಜನ್, ರಾಜಸ್ಥಾನದಿಂದ ನೀರಜ್ ದಂಗಿ, ತಮಿಳುನಾಡಿನಿಂದ ಪ್ರವೀಣ್ ಚಕ್ರವರ್ತಿ ಹಾಗೂ ಜಾರ್ಖಂಡ್‌ನಿಂದ ಪ್ರಣವ್ ಜಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಈ ಮೂಲಕ ವಿವಿಧ ರಾಜ್ಯಗಳಲ್ಲಿ ತನ್ನ ಸಂಖ್ಯಾಬಲಕ್ಕೆ ತಕ್ಕಂತೆ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ತಂತ್ರ ರೂಪಿಸಿದೆ.
ರಾಜ್ಯಸಭೆ ಚುನಾವಣೆಯ ಅಧಿಕೃತ ವೇಳಾಪಟ್ಟಿಯ ಪ್ರಕಾರ, ಜೂನ್ 8 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂನ್ 18 ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಅಂದೇ ಸಂಜೆ ಫಲಿತಾಂಶ ಹೊರಬೀಳಲಿದೆ.
The Congress President, Shri Mallikarjun Kharge, has approved the candidature of the following persons as Congress candidates to contest the biennial/bye-elections to the Council of States from the states mentioned against their names: pic.twitter.com/oZFaSziENT
— AICC Communications (@AICCMedia) June 4, 2026
ಬಿಜೆಪಿಯಲ್ಲಿ ಮುಂದುವರಿದ ಗೊಂದಲ
ಮತ್ತೊಂದೆಡೆ, ವಿರೋಧ ಪಕ್ಷವಾದ ಬಿಜೆಪಿ ಇನ್ನೂ ತನ್ನ ಪಾಲಿನ ಒಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಿಲ್ಲ. ಮೈತ್ರಿ ಪಕ್ಷದ ನಾಯಕರಾದ ಹೆಚ್.ಡಿ. ದೇವೇಗೌಡರಿಗೆ ಈ ರಾಜ್ಯಸಭೆ ಸ್ಥಾನವನ್ನು ಬಿಟ್ಟುಕೊಡುವ ಕುರಿತು ಎನ್‌ಡಿಎ ಮೈತ್ರಿಕೂಟದಲ್ಲಿ ಇನ್ನು ಗೊಂದಲ ಮುಂದುವರಿದಿದೆ ಎನ್ನಲಾಗಿದೆ.
ಈ ನಡುವೆ, ರಾಜ್ಯ ಬಿಜೆಪಿ ಘಟಕವು ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಹಾಗೂ ಮಾಜಿ ಶಾಸಕ ನಿರ್ಮಲ ಕುಮಾರ್ ಸುರಾನ ಅವರ ಹೆಸರುಗಳನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಿ ಕಳುಹಿಸಿದೆ. ಶೀಘ್ರದಲ್ಲೇ ದೆಹಲಿ ಮಟ್ಟದಲ್ಲಿ ಸಭೆ ನಡೆಸಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.ದೆಹಲಿ ಮಟ್ಟದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಯಾರಿಗೆ ಮನ್ನಣೆ ನೀಡಲಿದ್ದಾರೆ ಮತ್ತು ಮೈತ್ರಿ ಧರ್ಮವನ್ನು ಹೇಗೆ ಪಾಲಿಸಲಿದ್ದಾರೆ ಎಂಬುದು ಮುಂದಿನ ಒಂದೆರಡು ದಿನಗಳಲ್ಲಿ ಸ್ಪಷ್ಟವಾಗಲಿದೆ. ರಾಜಕೀಯ ಪಕ್ಷಗಳ ಈ ತಂತ್ರ-ಪ್ರತಿತಂತ್ರಗಳಿಂದಾಗಿ ರಾಜ್ಯಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಒಟ್ಟಾರೆಯಾಗಿ, ಜೂನ್ 8 ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿರುವುದರಿಂದ ರಾಜ್ಯ ರಾಜಕಾರಣದಲ್ಲಿ ಮುಂದಿನ ಮೂರು ದಿನಗಳ ಕಾಲ ತೀವ್ರ ಕುತೂಹಲ ಮೂಡಿಸಿದೆ.












Click it and Unblock the Notifications