ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ: ಅಣ್ಣಾಮಲೈ ಮುಂದಿನ ನಡೆ ಏನು?
ನವದೆಹಲಿ: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಪಕ್ಷ ತೊರೆಯುವ ನಿರ್ಧಾರ ಬಹುತೇಕ ಅಂತಿಮವಾಗಿದ್ದು, ಶುಕ್ರವಾರ ಅವರು ಚೆನ್ನೈನಲ್ಲಿ ಅಧಿಕೃತವಾಗಿ ರಾಜೀನಾಮೆ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಹೈ ಕಮಾಂಡ್ ಅನ್ನು ದೆಹಲಿಯಲ್ಲಿ ಭೇಟಿಯಾದ ಅಣ್ಣಾಮಲೈ ತಮ್ಮ ಬೇಡಿಕೆಯನ್ನು ಪಕ್ಷದ ಮುಂದಿಟ್ಟಿದ್ದು, ಅದನ್ನು ನಾಯಕರು ನಿರಾಕರಸಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಈಗಾಗಲೇ ಪಕ್ಷದಿಂದ ದೂರು ಸರಿಯುತ್ತಾರೆಂಬ ಊಹಾಪೋಹಗಳು ಚಿಗುರಿಕೊಂಡಿದ್ದು, ಬಿಜೆಪಿಗೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.
ಜೂ.2ರಂದು ದೆಹಲಿಗೆ ತೆರಳಿದ ಅಣ್ಣಾಮಲೈ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿದ್ದರು. ಅಲ್ಲದೇ ತಮ್ಮ ರಾಜೀನಾಮೆ ಇಂಗಿತ ಏನೆಂದು ಸ್ಪಷ್ಟವಾಗಿ ವಿವರಿಸಿದ್ದರು. ನಿತಿನ್‌ಗೆ ಸುದೀರ್ಘ 5 ಪುಟಗಳ ಪತ್ರ ನೀಡಿ, ಪಕ್ಷ ತೊರೆಯುವ ನಿರ್ಧಾರವನ್ನು ತಿಳಿಸಿದ್ದಾರೆ, ಎನ್ನಲಾಗಿದೆ. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಆರ್‌ಎಸ್‌ಎಸ್ ಮಧ್ಯಸ್ಥಿಕೆ ವಹಿಸಿದ್ದರೂ ಯಾವುದೇ ಪ್ರಯತ್ನ ಫಲಕೊಡದೆ, ಕರ್ನಾಟಕದ ಸಿಂಗಂ ಪಕ್ಷದಿಂದ ನಿರ್ಗಮಿಸುವುದು ನಿಶ್ಚಯವಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜೀನಾಮೆಗೆ ಕಾರಣ?:
ಬಿಜೆಪಿಯು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಣ್ಣಾಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳುವುದು ಅಣ್ಣಾಮಲೈಗೆ ಇಷ್ಟವಿರಲಿಲ್ಲ. ಕಳೆದ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಬೇಕು ಎಂಬುದು ಅವರ ಆಶಯವಾಗಿತ್ತು. ಆದರೂ ಬಿಜೆಪಿ-ಅಣ್ಣಾಡಿಎಂಕೆ ಮೈತ್ರಿ ಮಾಡಿಕೊಂಡಿತು. ಅಲ್ಲಿಂದಲೇ ಬಿರುಕು ಆರಂಭವಾಯಿತು. ನಂತರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದರು. ಪಕ್ಷದಲ್ಲಿ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಇತ್ತೀಚೆಗೆ ಕೇಂದ್ರದ ತ್ರಿಭಾಷಾ ಸೂತ್ರವನ್ನೂ ಅವರು ವಿರೋಧಿಸಿ, ಬಿಜಿಪೆ ಜೊತೆಗಿನ ಮುನಿಸನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರು.
ಮುಂದೇನು?
ಅಣ್ಣಾಮಲೈ ಸದ್ಯ ರಾಜಕೀಯೇತರ ಚಳವಳಿಯೊಂದನ್ನು ಆರಂಭಿಸಲಿದ್ದಾರೆ. ರಾಷ್ಟ್ರೀಯತೆ ಮತ್ತು ತಮಿಳು ತತ್ವಶಾಸ್ತ್ರದ ಸಿದ್ಧಾಂತದ ಮೇಲೆ ಅದು ಕೆಲಸ ಮಾಡಲಿದೆ. ಮುಂದೆ ಅದನ್ನೇ ರಾಜಕೀಯ ಪಕ್ಷವಾಗಿ ಪರಿವರ್ತಿಸಲಿದ್ದಾರೆ ಎನ್ನಲಾಗಿದೆ.

ಮಧ್ಯಾಹ್ನ 12 ಗಂಟೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಣ್ಣಾಮಲೈ ಮಹತ್ವದ ಭಾಷಣ ಮಾಡಲಿದ್ದು, ಅವರ ಮುಂದಿನ ರಾಜಕೀಯ ನಡೆ ಏನು ಎಂಬುದರ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಇತ್ತೀಚಿನ ರಾಜೀನಾಮೆ ಮತ್ತು ಹೊಸ ಪಕ್ಷ ಸ್ಥಾಪನೆ ಕುರಿತ ಊಹಾಪೋಹಗಳ ನಡುವೆಯೇ, ಅಣ್ಣಾಮಲೈ ನಿರ್ಧಾರ ಏನಾಗಲಿದೆ ಎಂದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ. ತಮಿಳುನಾಡಿನ ರಾಜಕೀಯ ಭವಿಷ್ಯದ ಬಗ್ಗೆ ಅವರು ಯಾವುದೇ ಮಹತ್ವದ ಘೋಷಣೆ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಲಾಗುತ್ತಿದೆ.
ಮೈತ್ರಿ ನಿರ್ಧಾರ ಮತ್ತು ಅಣ್ಣಾಮಲೈ ಅಸಮಾಧಾನ: ತಮಿಳುನಾಡಿನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಬೇಕೆಂಬುದು ಕೆ. ಅಣ್ಣಾಮಲೈ ಅವರ ಇಚ್ಛೆಯಾಗಿತ್ತು. ಆದರೆ, ಪಕ್ಷದ ಹೈಕಮಾಂಡ್ ಎಐಎಡಿಎಂಕೆ (AIADMK) ಜೊತೆ ಮೈತ್ರಿ ಮಾಡಿಕೊಂಡಿದ್ದು ಯುವ ನಾಯಕನ ಮುನಿಸಿಗೆ ಕಾರಣವಾಯಿತು. ಅಲ್ಲದೇ ಯಾವುದೇ ಕ್ಷೇತ್ರದಿಂದಲೂ ಚುನಾವಣೆಗೆ ಸ್ಪರ್ಧಿಸದೇ ತಮ್ಮ ಅಂತರ ಕಾಯ್ದಕೊಂಡಿದ್ದರು ಮಾಜಿ ಐಪಿಎಸ್ ಅಧಿಕಾರಿ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 1 ಸ್ಥಾನವನ್ನು ಮಾತ್ರ ಗೆದ್ದು ಭಾರಿ ಹಿನ್ನಡೆ ಅನುಭವಿಸಿತು.
ರಾಜ್ಯಸಭಾ ಸ್ಥಾನಕ್ಕೂ ಕುತ್ತು:
ಬಿಜೆಪಿ ಅಣ್ಣಾಮಲೈ ಅವರನ್ನು ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಕಳುಹಿಸಲು ಚಿಂತಿಸಿತ್ತು. ಅಲ್ಲಿ ಈಗ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಟಿಜಿಪಿ-ಬಿಜೆಪಿಯಿಂದ ಮೂರಾ ಹಾಗೂ ಪವನ್ ಕಲ್ಯಾಣ ನೇತೃತ್ವದ ಜೆಎಸ್‌ಪಿಯಿಂದ ಒಂದು ಸ್ಥಾನಕ್ಕೆ ಸದಸ್ಯರನ್ನು ಚುನಾಯಿಸಲು ನಿರ್ಧರಿಸಲಾಗಿತ್ತು. ಆದರೆ, ಇದೀಗ ಅಣ್ಣಾಮಲೈ ಪಕ್ಷ ತೊರೆಯುವ ಸುಳಿವು ಸಿಕ್ಕಿದ್ದರಿಂದ ಟಿಡಿಪಿಯಿಂದಲೇ ಮೂವರು ಸದಸ್ಯರನ್ನು ಕಳುಹಿಸಲಾಗುತ್ತದೆ ಎನ್ನಲಾಗಿದೆ.
ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯವರೆಗೆ
ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು 2020ರ ಆಗಸ್ಟ್‌ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. 2021ರ ಜುಲೈ 16ರಿಂದ 2025ರ ಏಪ್ರಿಲ್ 11ರವರೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಾಗೂ ಎಂ.ಬಿ.ಎ ಪದವೀಧರರಾದ ಅಣ್ಣಾಮಲೈ ಅವರು 2011ರಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕರ್ನಾಟಕ ಪೊಲೀಸ್ ಸೇವೆಗೆ ಸೇರಿದ್ದರು. ಕಾರ್ಕಳದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ (ASP) ಸೇವೆ ಆರಂಭಿಸಿದ ಅವರು ಬಳಿಕ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಎಸ್‌ಪಿಯಾಗಿ ಕಾರ್ಯನಿರ್ವಹಿಸಿ, ಬೆಂಗಳೂರಲ್ಲೂ ಸೇವೆ ಸಲ್ಲಿಸಿದ್ದರು. 2019ರಲ್ಲಿ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ ಬಳಿಕ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ರಾಜಕೀಯಕ್ಕೆ ಕಾಲಿಟ್ಟಿದ್ದರು.
ಚುನಾವಣೆಯಲ್ಲಿ ಸೋಲು
ಅಣ್ಣಾಮಲೈ ಅವರು 2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅರವಕುರಿಚಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ 2024ರ ಲೋಕಸಭೆ ಚುನಾವಣೆಯಲ್ಲಿ ಕೋಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ತಾವು ಬಿಜೆಪಿಯ "ಸಾಮಾನ್ಯ ಕಾರ್ಯಕರ್ತ" ಎಂದು ಗುರುತಿಸಿಕೊಂಡಿದ್ದ ಅಣ್ಣಾಮಲೈ ಈಗ ಟಿವಿಕೆ ಜೋಸೆಫ್ ವಿಜಯ್ ಹೊಸ ಪಕ್ಷ ಸ್ಫಾಪಿಸಿ, ಗೆಲವು ಸಾಧಿಸಿದ ಬೆನ್ನಲ್ಲೇ, ಅಣ್ಣಾಮಲೈ ಹೊಸ ರಾಜಕೀಯ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ.














Click it and Unblock the Notifications