ಆ ಬೆಂಕಿಯ ಕೆಂಪು ಬೆಳಕಲ್ಲಿ ಅಂಜಿದ್ದ ಮಲ್ಲಿ!

By: ನಾಗರಾಜ ಎಂ., ಕನೆಕ್ಟಿಕಟ್
Subscribe to Oneindia Kannada

"ಲೇ, ರಾಜು ಎದ್ದೇಳೋ.. ಗಂಟೆ 7 ಆಯಿತು, ಇವತ್ತು ಸಂಕ್ರಾಂತಿ ಹಬ್ಬ... ಬೇಜಾನು ಕೆಲಸ ಇದೆ.. ಅಂಗಳ ಸಾರಿಸಿ ರಂಗೋಲಿ ಹಾಕ್ಬೇಕು ನಾನು, ಎದ್ದು ಸಗಣಿ ರಾಡಿ ಮಾಡಿಕೊಂಡು ಬಾ.. ಆಮೇಲೆ ನಿಮ್ಮ ಅಪ್ಪನಿಗೆ ಸ್ವಲ್ಪ ದನದ ಕೊಟ್ಟಿಗೆಯಲ್ಲಿ ಕ್ಲೀನ್ ಮಾಡಿ, ಎತ್ತು - ಹಸು - ಕರುಗೆ ಸ್ನಾನ ಮಾಡಿಸಿ ತಯಾರು ಮಾಡಲು ಸಹಾಯ ಮಾಡುವೆಯಂತೆ.." ಅಡುಗೆ ಮನೆಯಿಂದಲೇ ಕೂಗಿದ ಅವ್ವನ ಕೂಗಿಗೆ... ಹೂ ಎಂದಿದ್ದೆ.

ಜನವರಿ ತಿಂಗಳ ಮುಂಜಾವಿನ ಚುಮು ಚುಮು ಚಳಿಗೆ ಅಲ್ಲಲ್ಲೇ ಹರಿದಿದ್ದ ಕರಿ ಕಂಬಳಿಯನ್ನು ಮತ್ತೆ ಎಳೆದು ಹೊದ್ದರೂ, ಬೆನ್ನ ಕೆಳಗೆ ಹಾಸಿದ್ದ ಗೋಣಿ ಚೀಲ ಒತ್ತುತ್ತಿದ್ದರೂ, ಇನ್ನು ಸ್ವಲ್ಪ ಹೊತ್ತು ಮಲಗೋಣ ಎಂದು ಕಣ್ಣು ಮುಚ್ಚಿದರೆ... ಮೇಲೆ ಹಂಚಿನ ಚಾವಣಿಯ ಸಂದಿಯಿಂದ ಆಗಲೇ ಮೇಲೆ ಬೀಳುತ್ತಿದ್ದ ಸೂರ್ಯ ದೇವನ ಬೆಳಕಿಗೆ ಕಣ್ಣಲ್ಲಿದ್ದ ನಿದ್ದೆಯ ಮಂಪರು ಹೋಗಿತ್ತು.

ಎದ್ದವನೇ, ಅವ್ವ ಕಾಯಿಸಿಟ್ಟಿದ್ದ ಬುರು ಬುರನೆ ನೊರೆ ಬಂದಿದ್ದ ಹಾಲನ್ನ... ಸೊರ ಸೊರನೆ ಕುಡಿದು, ಬರ ಬರನೆ ಹಿತ್ತಲಿನ ಕೊಟ್ಟಿಗೆಗೆ ಬಂದಿದ್ದೆ. ಅಷ್ಟೊತ್ತಿಗೆ ಅಪ್ಪ ಕೊಟ್ಟಿಗೆ ಕ್ಲೀನ್ ಮಾಡಿ ಸಗಣಿಯನ್ನು ಒಂದೆಡೆ ಹಾಕಿದ್ದರು. ಒಂದು ಬಕೆಟ್ ನಲ್ಲಿ ಸಗಣಿ ರಾಡಿ ಮಾಡಿಕೊಂಡು ಮುಂದಿನ ಅಂಗಳಕ್ಕೆಲ್ಲ ಹಾಕಿ ಪೊರಕೆಯಲ್ಲಿ ಎಲ್ಲ ಕಡೆ ಸಮವಾಗಿ ಕಾಣುವಂತೆ ಮಾಡಿ, ಅವ್ವಾ ನೀ ರಂಗೋಲಿ ಹಾಕು ಅಂತಾ ಹೇಳಿ ಕೊಟ್ಟಿಗೆಗೆ ಮತ್ತೆ ಬಂದಿದ್ದೆ.

Sankranti - short story by Nagaraja Maheswarappa

ಅಪ್ಪ ಆಗಲೇ ಎತ್ತುಗಳನ್ನು ಕರೆದುಕೊಂಡು "ರಾಜು ನಾ ಎತ್ತುಗಳಿಗೆ ಮತ್ತು ಹಸುವಿಗೆ ಇಲ್ಲೇ ಸಮೀಪ ಇರುವ ಕೆರೆಯಲ್ಲಿ ಸ್ನಾನ ಮಾಡಿಸಿಕೊಂಡು ಬರ್ತೀನಿ, ನೀನು ಈ ಕರುವಿಗೆ ಇಲ್ಲೇ ಸ್ನಾನ ಮಾಡಿಸು" ಅಂತ ಹೇಳಿ ಹೋದಾಗ ಸರಿ ಅಂತ ಹೇಳಿ ಚಂಗನೆ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಕುಣಿದಾಡುತ್ತಾ ಓಡಾಡುತ್ತಿದ್ದ ಒಂದು ತಿಂಗಳ ಕರು "ಲಕ್ಷ್ಮಿ" (ನಾ ಇಟ್ಟಿದ್ದ ಹೆಸರು)ಯನ್ನು ಹಿಡಿಯಲು ಹೋದಾಗ ಅದು ಕೈಗೆ ಸಿಗದೇ ನನ್ನ ಓಡಾಡಿಸುತ್ತಿತ್ತು.

ಅಂತೂ ಇಂತೂ ಅದನ್ನು ಹಿಡಿದು ಸ್ನಾನಕ್ಕೆ ರೆಡಿ ಮಾಡಿಕೊಂಡಾಗ ಹಿಂದಿನಿಂದ "ರಾಜು, ನಾನು ಸಹ ಬರ್ಲಾ ಲಕ್ಷ್ಮಿಯನ್ನು ತಯಾರು ಮಾಡಲು?" ಅಂತ ಕೇಳಿಬಂದ ಶಬ್ದಕ್ಕೆ ತಿರುಗಿ ನೋಡಿದರೆ... ನಿಂತಿದ್ದಳು ಪಕ್ಕದ ಮನೆಯ ಮಲ್ಲಿ.

ನನಗಿಂತ ಒಂದು ವರ್ಷ ಚಿಕ್ಕವಳಾದ 5ನೇ ತರಗತಿಯಲ್ಲಿ ಓದುತ್ತಿದ್ದ ಮಲ್ಲಿಯ ಕಂಡು "ಅಬ್ಬ ಸದ್ಯ ಯಾರಾದ್ರೂ ಸಹಾಯಕ್ಕೆ ಸಿಕ್ಕರಲ್ಲಾ! ಈ ಲಕ್ಷ್ಮಿ ಸ್ನಾನ ಮಾಡಿಸಿಕೊಳ್ಳಲಿಕ್ಕೆ ಬಹಳ ಹಠ ಮಾಡ್ತಿದೆ, ನೀನು ಬಂದದ್ದು ಒಳ್ಳೆದಾಯ್ತು ನೋಡು.. ಬೇಗ ಬಾ" ಅಂತಾ ಅವಳನ್ನು ಕರೆದು "ಮಲ್ಲಿ ನೋಡಿದ್ರೆ ನೀನು ಆಗಲೇ ಸ್ನಾನ ಮಾಡಿ ಹೊಸ ಬಟ್ಟೆ ಉಟ್ಟಂಗೆ ಕಾಣ್ತದೆ. ನೀನು ಲಕ್ಷ್ಮಿಗೆ ಹುಲ್ಲು ತಿನಿಸು.. ನಾನು ಸ್ನಾನ ಮಾಡಿಸ್ತೀನಿ" ಅಂತ ಹೇಳಿ ಅವ್ವ ನನಗೆಂದು ಹಂಡೆಯಲ್ಲಿ ಕಾಯಿಸಿಟ್ಟಿದ್ದ ನೀರನ್ನೇ ತೆಗೆದುಕೊಂಡು ಬಂದು ಸ್ನಾನ ಮಾಡಿಸಿದ್ದೆ.

ಮಲ್ಲಿ ಬಂದ ತಕ್ಷಣ ಲಕ್ಷ್ಮಿನು ಸಹ ಒಳ್ಳೆಯವಳಾಗಿ ಸುಮ್ಮನೆ ಸ್ನಾನ ಮಾಡಿಸಿಕೊಂಡಿತ್ತು. ನಂತರ ಲಕ್ಷ್ಮಿಗೆ ಸಿಂಗಾರ ಮಾಡಲಿಕ್ಕೆ ಅವ್ವನ ಬಳಿ ಕಾಸು ಇಸಿದುಕೊಂಡು ಮಲ್ಲಿಯ ಜೊತೆ ಓಡಿದ್ದೆ ಶೆಟ್ಟರ ಅಂಗಡಿಗೆ. ಒಂದಿಷ್ಟು ಬಲೂನು, ರಿಬ್ಬನ್ನು, ಬಣ್ಣ ಬಣ್ಣದ ಪೇಪರ್ ಖರೀದಿ ಮಾಡಿ, ಮಲ್ಲಿಗೆ ಒಂದು ದೊಡ್ಡ ಬಲೂನು ಮತ್ತೆ ಚಾಕಲೇಟ್ ಕೊಡಿಸಿ (ಸಹಾಯ ಮಾಡಿದ್ದಕ್ಕೆ), ಎದುರಿಗೆ ಸಿಕ್ಕ ಹೂವು ಮಾರೋ ಹನುಮಕ್ಕನ ಬಳಿ ಸ್ವಲ್ಪ ಮಲ್ಲಿಗೆ ಹೂವು ತಗೊಂಡು, ಅದರಲ್ಲೇ ಸ್ವಲ್ಪ ಕೊಟ್ಟಿದ್ದೆ ಮಲ್ಲಿಗೆ!

ಅಷ್ಟೊತ್ತಿಗೆ ಅಪ್ಪನೂ ಸಹ ಎತ್ತು - ಹಸುವಿನ ಸ್ನಾನ ಮಾಡಿಸಿಕೊಂಡು ಬಂದಿದ್ದರು. ಮೂರು ಜನರೂ ಸೇರಿ ಅವಕ್ಕೆಲ್ಲ ಅಲಂಕಾರ ಮಾಡಿ, ಬಣ್ಣದ ಪೇಪರನ್ನು ಕೊಂಬಿನ ಸುತ್ತ ಸುತ್ತಿ, ಬಲೂನು ಊದಿ ಕಟ್ಟಿದ್ದೆವು.

ಎತ್ತು - ಹಸು-ಕರು ತಯಾರಾಗೋದರಲ್ಲಿ.. ಒಪ್ಪವಾಗಿ ಅಂಗಳದಲ್ಲಿ ರಂಗೋಲಿ ಹಾಕಿ, ಮನೆ ಸಾರಿಸಿ, ಹಸಿರು ತೋರಣ ಕಟ್ಟಿ ರೆಡಿ ಮಾಡಿದ್ದ ಅವ್ವ, ನನ್ನನ್ನು ಹಿತ್ತಲಿಗೆ ಕರೆದೊಯ್ದು ಚೆನ್ನಾಗಿ ಎಣ್ಣೆ ಹಚ್ಚಿ, ಸೀಗೆಕಾಯಿ ಪುಡಿಯನ್ನು ಚೆನ್ನಾಗಿ ತಲೆಗೆ ಉಜ್ಜಿ.. ಬಿಸಿ ಬಿಸಿ ನೀರು ಸ್ನಾನ ಮಾಡಿಸಿದ್ದಳು.

ಸ್ನಾನವಾದ ಬಳಿಕ ಅವ್ವ ಮಾಡಿದ್ದ ಬಿಸಿ ಬಿಸಿ ಸಜ್ಜೆ ರೊಟ್ಟಿ, ಮುಳುಗಾಯಿ ಪಲ್ಯ, ಗೋಧಿ ಹುಗ್ಗಿ ತಿಂದು ಮಧ್ಯಾನ್ಹ ಸ್ವಲ್ಪ ಹೊತ್ತು ಬಯಲಲ್ಲಿ ಗಾಳಿಪಟ ಹಾರಿಸಲಿಕ್ಕೆ ಮಲ್ಲಿಯ ಜೊತೆ ಬಸ್ಯ, ಸೂರಿ ಎಲ್ಲರನ್ನು ಕರೆದುಕೊಂಡು ಹೋಗಿದ್ದೆ. ಲಕ್ಷ್ಮಿಗೆ ಅಲಂಕಾರ ಮಾಡಲೆಂದು ತಂದಿದ್ದ ಬಣ್ಣ ಬಣ್ಣದ ಪೇಪರಲ್ಲಿ ಸುಂದರವಾದ ಗಾಳಿಪಟ ಮಾಡಿ ಮಲ್ಲಿಗೆ ಹಾರಿಸಲು ಕೊಟ್ಟಿದ್ದೆ. ಪಟ ಮೇಲೆ ಮೇಲೆ ಹೋದಂತೆ ನಮ್ಮ ಉತ್ಸಾಹ, ಹರ್ಷೋದ್ಗಾರ, ಉಲ್ಲಾಸ ಇಮ್ಮಡಿಯಾಗಿತ್ತು!

ಲೇ, ಬನ್ರೋ ಟೈಮ್ ಆಯಿತು.. ಈಗ ಎತ್ತಿನ ಬಂಡಿಗಳ, ಎತ್ತಿನ ಸವಾರಿಗಳ ಮೆರವಣಿಗೆ ಇದೆ ಅಂತ ಎಲ್ಲರನ್ನು ಕರೆದು ಓಡಿ ಬಂದಿದ್ದೆವು ಮರಳಿ ಮನೆಗೆ. ನಮ್ಮಳ್ಳಿಯಲ್ಲಿ ಒಬ್ಬರಿಗಿಂತ ಒಬ್ಬರು ಚೆನ್ನಾಗಿ ತಮ್ಮ ತಮ್ಮ ಎತ್ತು, ಹಸು ಕರುಗಳಿಗೆ ಅಲಂಕಾರ ಮಾಡಿ ಪೂಜೆ ಮಾಡಿ ಅಕ್ಕಿ,ಬೇಳೆ, ಹಣ್ಣು ತಿನ್ನಿಸಿ ಸಾಲಾಗಿ ಬರುತ್ತಿದ್ದರೆ ಅದ ನೋಡಲು ಎರಡು ಕಣ್ಣುಗಳು ಸಾಲದು. ಅಪ್ಪ ಎತ್ತುಗಳನ್ನು ಹಿಡಿದು ಮುಂದೆ ಹೆಜ್ಜೆ ಹಾಕಿದರೆ, ನಾ.. ಲಕ್ಷ್ಮಿಯನ್ನು ಹಿಡಿದು ಹೊರಟಿದ್ದೆ ಮೆರವಣಿಗೆಯಲ್ಲಿ! ಮೆರವಣಿಗೆ ನಮ್ಮ ಗಲ್ಲಿಯಲ್ಲಿ ಬಂದೊಡನೆ ದೂರದಿಂದಲೇ ಅವ್ವನಿಗೆ ಕೈ ಮಾಡಿ, ಮನೆಮುಂದೆ ನಿಂತಿದ್ದ ಮಲ್ಲಿಗೂ ಕೈ ಮಾಡಿ ಕರೆದಿದ್ದೆ ಅವಳಿಗೂ ಬರಲು.

ಸವಾರಿಗೆ ಈಗ ಇನ್ನೂ ಹೆಚ್ಚು ಮಜಾ ಬಂದಿತ್ತು ಮಲ್ಲಿ ಸೇರಿದ ಮೇಲೆ. ಲಕ್ಷ್ಮಿಯನ್ನು ಒಂದು ಕೈಯಲ್ಲಿ ಹಿಡಿದು, ಮತ್ತೊಂದು ಕೈಯಲ್ಲಿ ಮಲ್ಲಿಯ ಕೈ ಹಿಡಿದು ಹೆಜ್ಜೆ ಹಾಕಿದರೆ, ಹಿಂದೆ ಬಸ್ಯ - ಸೂರಿ ತಮ್ಮ ಹಸು-ಕಾರುಗಳನ್ನು ಹಿಡಿದು ಹೆಜ್ಜೆ ಹಾಕಿದ್ದರು.

ಒಂದು ತಾಸು ಹೀಗೇ ನಡೆದ ಮೆರವಣಿಗೆ ಕೊನೆಯಾದದ್ದು ಊರ ಹೊರಗಿನ ಈಶ್ವರನ ದೇವಸ್ಥಾನದ ಬಳಿ. ಅಲ್ಲಿ ಎಲ್ಲರೂ ದೇವರಿಗೆ ನಮಸ್ಕರಿಸಿ, ಈ ಸಂಕ್ರಾಂತಿ ಹಬ್ಬ ಹೀಗೆಯೇ ಎಲ್ಲರ ಮನೆಯಲ್ಲಿ ದವಸ-ಧಾನ್ಯ, ಆರೋಗ್ಯ ಉಲ್ಲಾಸ ಕೊಡಲಿ ಎಂದು ಪ್ರಾರ್ಥಿಸಿ ಮನೆಗೆ ಬರುವುದರಲ್ಲಿ ಸಂಜೆಯಾಗಿತ್ತು.

"ರಾಜು, ಕಬ್ಬನ್ನು ಸಣ್ಣದಾಗಿ ಕಡಿದು ರೆಡಿ ಮಾಡಿ ಇಟ್ಕೋ, ಮನೆಗೆ ಬಂದೊವ್ರಿಗೆ, ನಿನ್ನ ಗೆಳೆಯರಿಗೆ ಕೊಡುವಿಯಂತೆ ಎಳ್ಳು-ಬೆಲ್ಲದ ಜೊತೆ" ಅಂತ ಅವ್ವ ಕೂಗಿದಾಗ ಮನದಲ್ಲೇ ಅವ್ವನಿಗೆ ಹೇಳಿದ್ದೆ...

"ಮಲ್ಲಿಗೆ ಏನು ಇಷ್ಟಾ
ಅಂತಾ ನಾ ಬಲ್ಲೆ...
ಅವಳಿಗೆ ಕೊಡುವೆ ಸವಿಯಾದ
ಎರಡು ಕಬ್ಬಿನ ಜಲ್ಲೆ!"

ಸಂಜೆ 6ಕ್ಕೆ ತಟ್ಟಂತ ಬಂದಿದ್ದಳು ಮಲ್ಲಿ, ಬಸ್ಯ-ಸೂರಿಯೊಂದಿಗೆ. ಹೊಸ ರೇಷ್ಮೆ ಲಂಗ ಹಾಕಿಕೊಂಡು ಎರಡು ಜಡೆ ಹೆಣೆದು ಮಲ್ಲಿಗೆ ಹೂವು ಮುಡಿದು ನಿಂತಿದ್ದ ಮಲ್ಲಿ.. ಸೂಜಿ ಮಲ್ಲಿಗೆಯಂತೆ ಸುಂದರವಾಗಿ ಕಾಣುತ್ತಿದ್ದಳು!

ನಾನು ಸಹಾ ಅಪ್ಪ ತಂದಿದ್ದ ಹೊಸ ಬಟ್ಟೆ ತೊಟ್ಟು ಅವರೆಲ್ಲರ ಜೊತೆ ಸೇರಿ ಎಲ್ಲರ ಮನೆಗಳಿಗೆ ಹೊರಟಿದ್ದೆ ಬೀರಲು "ಎಳ್ಳು-ಬೆಲ್ಲ-ಶೇಂಗಾ-ಕಬ್ಬು". "ಎಳ್ಳು ಬೆಲ್ಲ ತಿಂದ ಹಾಗೆ ನಿಮಗೆ ಎಲ್ಲ ಕಷ್ಟಗಳ ಸಹಿಸೋ ಶಕ್ತಿ ನೀಡಿ, ಬೆಲ್ಲದಂತೆ ಸವಿಯಾಗಲಿ ನಿಮ್ಮ ಬಾಳ್ವೆ!" ಅವ್ವಾ ಹೇಳಿದ್ದ ಮಾತನ್ನೇ ಎಲ್ಲರಿಗೂ ಹೇಳಿ ಬಂದು ಜಗಲಿ ಮೇಲೆ ಕುಳಿತು ಎಳ್ಳು ಬೆಲ್ಲ ತಿಂದು ಕಬ್ಬನ್ನು ಜಗಿಯುತ್ತಾ ಕೂತಿದ್ದೆವು.

ಕತ್ತಲಾದ ಮೇಲೆ ಶುರುವಾಗಿತ್ತು ಕೆಂಡ ತುಳಿತ! ದೇವಸ್ಥಾನದ ಮುಂದೆ ಜಗಮಗ ಉರಿಯುತ್ತಿದ್ದ ಬೆಂಕಿ ಕೆಂಡದ ಮೇಲೆ ಎತ್ತುಗಳನ್ನು ಹಿಡಿದು "ಓಂ ನಮ ಶಿವಾಯ" ಅಂತ ಜೋರಾಗಿ ನುಗ್ಗಿ ಬರುತ್ತಿದ್ದ ಜನರ ಕಂಡು ಏನೋ ಒಂತರ ಮಜಾ ಅನ್ನಿಸಿದರು ಮನದಲ್ಲೇ ಏನಾದರು ಅನಾಹುತ ಆದರೆ? ಅನ್ನೋ ಭಯ ಒಂದೆಡೆ! ಆ ಬೆಂಕಿಯ ಕೆಂಪು ಬೆಳಕಲ್ಲಿ ಅಂಜಿದ್ದ ಮಲ್ಲಿಯ ಕಣ್ಣುಗಳನ್ನು ಕಂಡು "ಏನೂ ಹೆದರ್ಕೋ ಬೇಡ" ಅಂತಾ ಸಮಾಧಾನಿಸಿದ್ದೆ.

ಕೊನೆಗೆ ಊರಿನ ಗೌಡರು ಚೆನ್ನಾಗಿ ಅಲಂಕೃತವಾದ ಎತ್ತಿನ ಗಾಡಿಗಳಿಗೆ, ಎತ್ತಿನ ಜೋಡಿಗೆ ಬಹುಮಾನ ಘೋಷಿಸಿದಾಗ, ಚಿಕ್ಕವರ ವಿಭಾಗದಲ್ಲಿ ನನ್ನ ಲಕ್ಷ್ಮಿಯ ಹೆಸರು ಹೇಳಿದ ತಕ್ಷಣ ಹುರ್ರೇ ಅಂತಾ ಅರಿವಿಲ್ಲದೆ ಕುಣಿದಿದ್ದೆ ಹಿಡಿದು ಮಲ್ಲಿಯ ಕೈ!

ಅಂತೂ ಎಲ್ಲ ಕಾರ್ಯಕ್ರಮಗಳು ನಡೆದ ಮೇಲೆ ಮನೆಗೆ ಬಂದು ಅವ್ವ, ಅಪ್ಪನ ಜೊತೆ ಕೂಡಿ ಕೂತು ಸೇರಿಸಿದ್ದೆ ಮತ್ತೆ ಗೋಧಿ ಹುಗ್ಗಿಯನ್ನು ಬಿಸಿ ಬಿಸಿ ತುಪ್ಪದ ಜೊತೆ. ಅವ್ವ, ಜೊತೆಯಲ್ಲೇ ಇದ್ದ ಮಲ್ಲಿ, ಬಸ್ಯ - ಸೂರಿಗೂ ಊಟಕ್ಕೆ ಹಾಕಿ ಕೊಟ್ಟಾಗ ಕೇಳಿದ್ದೆ "ಹೇಗಿದೆ ಅವ್ವ ಮಾಡಿದ ಹುಗ್ಗಿ?"

ಹೇಳಿದ್ದರು ಅವರು...

"ಮಸ್ತಿದೆ ಅವ್ವ ಮಾಡಿದ ಹುಗ್ಗಿ..
ಪ್ರತಿ ದಿವಸವು ಹೀಗೇ ಇರಲಿ ಸುಗ್ಗಿ!"

***
"ರ್ರೀ ,ರ್ರೀ ಎದ್ದೇಳ್ತಿರಾ? 8 ಹೊಡೀತು... ಇನ್ನು ಮಲಗಿದಿರಲ್ಲಾ?" ಅಂತ ಯಾರೋ ಜೋರಾಗಿ ಕರೆದಾಗ "ಹುಗ್ಗಿ, ಸುಗ್ಗಿ" ಅಂತಾ ತಡಬಡಿಸಿದ್ದೆ.

"ಹುಗ್ಗಿನು ಇಲ್ಲ ಸುಗ್ಗಿನೂ ಇಲ್ಲ, ಇವೊತ್ತು ಸಂಕ್ರಾಂತಿ ಹಬ್ಬ, ಎಷ್ಟೊಂದು ಕೆಲಸ ಇದೆ. ಎದ್ದು ಬೇಗನೆ ಹೋಗಿ ಇಂಡಿಯನ್ ಸ್ಟೋರ್ ನಲ್ಲಿ ಎಳ್ಳು-ಬೆಲ್ಲ ತಗೊಂಡು ಬನ್ನಿ" ಅಂತ ನುಡಿದಿದ್ದಳು ಎದುರು ನಿಂತಿದ್ದ ಮನೆಯಾಕೆ.

ಓ... ಲಕ್ಷ್ಮಿ, ಬಸ್ಯ, ಸೂರಿ, ಮಲ್ಲಿ... ಅಂತ ಹಳೇದನ್ನೆಲ್ಲ ನೆನೆಸಿಕೊಂಡು ಈ ಜನವರಿಯ ಮೈ ಕೊರೆಯೋ ಮೈನಸ್ ಡಿಗ್ರಿ ಟೆಂಪರೇಚರ್ ನಲ್ಲಿ ದೊಡ್ಡ ಕೋಟು ಹಾಕಿಕೊಂಡು ಇಂಡಿಯನ್ ಸ್ಟೋರ್ ಗೆ ಹೋಗಲು ಹೊರಗಡೆ ಹೆಜ್ಜೆ ಇಟ್ಟಿದ್ದೆ. "ಹಾಯ್, ಗುಡ್ ಮಾರ್ನಿಂಗ್" ಅಂತಾ ಯಾರೋ ಅಂದಾಗ ನೋಡಿದರೆ ನಾಯಿ ಮರಿಯನ್ನು ವಾಕ್ ಗೆ ಕರೆದುಕೊಂಡು ಬಂದು ಚಳಿಗೆ ಧಂ ಎಳೆಯುತ್ತಿದ್ದ... ಎದುರು ಮನೆಯ ಕೆಲ್ಲಿ!

"ಹ್ಯಾಪಿ ಸಂಕ್ರಾ.. ನೋ ನೋ.. ಗುಡ್ ಮಾರ್ನಿಂಗ್, ಹ್ಯಾವೆ ಗ್ರೇಟ್ ಡೇ" ಅಂತ ಕೆಲ್ಲಿಗೆ ಮೆಲ್ಲಗೆ ಉತ್ತರಿಸಿ, ಛೆ! ಯಾರು ಇಲ್ಲವಲ್ಲ ಅಕ್ಕಪಕ್ಕ, ಸಂಕ್ರಾಂತಿ ಹಬ್ಬದ ಶುಭಾಶಯ ಹೇಳಲು ಅಂತ ಮನದಲ್ಲೇ ಬೇಜಾರು ಮಾಡಿಕೊಂಡು :-( ಕಾರು ಸ್ಟಾರ್ಟ್ ಮಾಡಿದ್ದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sankranti - A Kannada short story by Nagaraja Maheswarappa, Connecticut, USA. This festival of prosperity is celebrated all over Karnataka and wherever Kannadigas are there in the world in the month of January.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ