• search

ಸತ್ಯಕಥೆ : ಬಾಯಿತುಂಬ ತಂಬಾಕು ಪ್ಯಾಚ್ ಸ್ಮೆಲ್!

By ನಾಗರಾಜ್ ಎಂ, ಕನೆಕ್ಟಿಕಟ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನೀನು ಮಲಗಿರು, ನಂಗೆ ಕಾಯಬೇಡ ಅಂತಾ ಹೆಂಡತಿಗೆ ಹೇಳಿ ಮನೆಯ ಬಾಗಿಲು ಎಳೆದುಕೊಂಡು ಹೊರಗಡೆ ಹೆಜ್ಜೆ ಇಟ್ಟಾಗ ರಾತ್ರಿ ಹತ್ತಾಗಿತ್ತು. ಮನಸ್ಸಿನಲ್ಲಿ ಏನೋ ಒಂತರಾ ಅಸಮಾಧಾನ, ಕೋಪ, ನೋವು, ಹೇಳಲಾರದ ಸಂಕಟ... ರಾತ್ರಿ ಚಳಿಗೆ ಸ್ವಲ್ಪ ಮೈ ನಡುಗುತ್ತಿದ್ದರೂ, ಅಲ್ಲೇ ಸ್ವಲ್ಪ ದೂರದಲ್ಲೇ ಇದ್ದ ಕಲ್ಲುಬಂಡೆಯ ಮೇಲೆ ಕಲ್ಲಿನಂತೆ ಕುಳಿತು ಕೆಮ್ಮು ಬಂದರೂ ಊಪ್ ಊಪ್ ಅಂತಾ ಸಿಗರೇಟಿನ ಹೊಗೆಯನ್ನು ಉಗಿಬಂಡಿ ತರಹ ಬಿಡುತ್ತಾ ಇದ್ದರೂ ನಿಲ್ಲದ ಸಂಕಟ!

  ಮನೆಗೆ ಮಗು ಬರ್ತಾ ಇದೆ, ಇವಾಗಾದ್ರು ನಿಮ್ಮ ಈ ಕೆಟ್ಟ ಸಿಗರೇಟಿನ ಸಹವಾಸ ಬಿಡ್ತಿರೋ ಇಲ್ವೋ? ಅಂತ ಮುಖ ಸಿಂಡರಿಸಿ ಅಸಹ್ಯ ಪಟ್ಟು ಹೇಳುವ ಹೆಂಡ್ತಿ, ನಾಳೆ ಮೊದಲ ಬಾರಿಗೆ ಅಮೆರಿಕಾಕ್ಕೆ ಬರ್ತಿರೋ ನನ್ನ ತಾಯಿ, ಎಲ್ಲಾದರೂ ಮಗ ಸಹ ಸಿಗರೇಟಿನ ದಾಸ ಆಗಿದಾನೆ ಅಂತ ಕೇಳಿದರೆ, ಮೊದಲೇ ಜೀವನದಲ್ಲಿ ನೊಂದಿರುವ ತಾಯಿ ಮತ್ತಷ್ಟು ನೋವು ಮಾಡಿಕೊಳ್ಳೋದರಲ್ಲಿ ಸಂದೇಹವೇ ಇಲ್ಲ. ಛೇ, ನಂದೂ ಒಂದು ಲೈಫಾ? ಇವತ್ತು ಏನಾದರು ಸರಿ, ಈ ದುಶ್ಚಟವನ್ನು ಬಿಡಲೇ ಬೇಕು ಅಂದುಕೊಂಡು ಕೈಯಲ್ಲೇ ಇದ್ದ ಮಾರ್ಲ್ಬೋರೋ ಪ್ಯಾಕ್ಕನ್ನೇ ದಿಟ್ಟಿಸಿದ್ದೆ.

  ಇನ್ನು ಒಂದೇ ಒಂದು ಸಿಗರೇಟು ಸೇದಿ ಬಿಟ್ಟು ಬಿಡೋಣಾ ಅಂತ ಸೇದಿದಾಗ ಮತ್ತೆ ಬೇಕೆನಿಸಿ, ಒಂದು, ಎರಡು, ಮೂರು ಸಿಗರೇಟುಗಳು ಉರಿದು ಬೂದಿಯಾಗಿದ್ದವು. ಜೋರಾಗಿ ಕೆಮ್ಮು ಬಂದಂತೆನಿಸಿ, ಛೇ ಅಂತ ಅಂದುಕೊಂಡು ಮಾರ್ಲ್ಬೋರೋ ಪ್ಯಾಕನ್ನು ಕಾಲಿನಿಂದ ಹೊಸಕಿ ಹಾಕುವಾಗ ಹೆಂಡತಿಯೇ ನನ್ನ ಬಿಟ್ಟು ಹೋದಳೇನೋ ಅನ್ನುವಷ್ಟರ ಮಟ್ಟಿಗೆ ದುಃಖ ಒತ್ತರಿಸಿ ಬಂದು ಹಾಗೇ ಗಳಗಳನೆ ಅತ್ತಿದ್ದೆ. ಇನ್ನು ಸ್ವಲ್ಪ ಹೊತ್ತು ಅಲ್ಲೇ ಕುಳಿತು, ಬಾಯಿ ತುಂಬಾ ತುಂಬಿದ್ದ ಹೊಗೆಯನ್ನು ಊಫ್ ಎಂದು ಹೊರಗಡೆ ಬಿಟ್ಟಾಗ ಆ ಚಳಿಗೆ ಅದು ಸುರುಳಿಯಾಕಾರದಲ್ಲಿ ಮೇಲೆ ಹೋಗುತ್ತಿದ್ದಂತೆ... ಮನದಲ್ಲಿ ನೆನಪುಗಳ ಸುರುಳಿ ಮೂಡಿತ್ತು. [ಧೂಮಪಾನಿಗಳೆ ನಿಮಗಿದು ನೆನಪಿರಲಿ]

  My beloved companion Marlboro cigarette

  5 ವರ್ಷಗಳ ಹಿಂದೆ ಮೊದಲ ಬಾರಿ ಬಿಸಿನೆಸ್ ವೀಸಾ ಮೇಲೆ ಅಮೆರಿಕಾಕ್ಕೆ ಮೂರು ತಿಂಗಳ ಪ್ರವಾಸ ಹೊರಟಾಗ ಮನೆಯೆಲ್ಲಿ ಎಲ್ಲರಿಗೂ ಖುಷಿಯೋ ಖುಷಿ. ನಮ್ಮ ಪರಿವಾರದಲ್ಲೇ ಇದುವರೆಗೂ ಯಾರೂ ಹೋಗದ ದೂರದ ಅಮೆರಿಕಾಕ್ಕೆ ಮಗ ಹೋಗ್ತಾ ಇದಾನೆ ಅನ್ನೋ ಖುಷಿಯಲ್ಲಿ ಆರೋಗ್ಯ ಚೆನ್ನಾಗಿರದ ಅಪ್ಪ ಬಹಳ ಗೆಲುವಿನಿಂದಲೇ ನಮ್ಮ ಶಿವಮೊಗ್ಗೆಯಿಂದ ಬೆಂಗಳೂರಿಗೆ ಬಂದು ಬೀಳ್ಕೊಟ್ಟಿದ್ದರು. ನನಗೂ ಒಂದೆಡೆ ಖುಷಿ ಇದ್ದರೆ ಮತ್ತೊಂದೆಡೆ ಬಂಧು - ಬಳಗ ಬಿಟ್ಟು ಅರಿಯದ ಈ ನಾಡಿಗೆ ಹೇಗಪ್ಪ ಹೋಗೋದು? ಅದರಲ್ಲೂ ಅಪ್ಪನಿಗೆ ಹುಷಾರು ಬೇರೆ ಇಲ್ಲ ಅನ್ನೋ ಯೋಚನೆಯಲ್ಲೇ ನ್ಯೂಯಾರ್ಕ್ ಗೆ ಕಾಲಿಟ್ಟಿದ್ದೆ.

  ಫೆಬ್ರವರಿ ಬಂತೆಂದರೆ ನಮ್ಮಲ್ಲಿ, ಥರ ಥರ ಅನ್ನಿಸೋ ಚಳಿ ಹೋಗಿ, ಹರ ಹರ ಅನ್ನಿಸೋ ಸುಡು ಬಿಸಿಲು ಸ್ಟಾರ್ಟ್ ಆಗೋ ಶಿವರಾತ್ರಿ ಟೈಮಲ್ಲಿ.. ಇಲ್ಲೂ ಅದೇ ರೀತಿ ಇರಬಹುದೆಂದು ಅಮ್ಮ ಕೊಟ್ಟಿದ್ದ ಹಗುರವಾದ ಶಾಲನ್ನು ಹೊದ್ದುಕೊಂಡು ಏರ್ ಪೋರ್ಟ್ ಹೊರಗಡೆ ಬಂದರೆ... ಶಿವ ಶಿವ... ಮೈಯೆಲ್ಲಾ ಕೊರೆಯುವ ಚಳಿಗೆ ಗಡಗಡ ನಡುಗಿ ಹೋಗಿದ್ದೆ. ಟ್ಯಾಕ್ಸಿಯಿಂದ ಇಳಿದು ಕಂಪನಿ ಕೊಟ್ಟಿದ್ದ ಹೋಟೆಲ್ ರೂಮ್ಗೆ ಬಂದ ತಕ್ಷಣ ಬೆಂಕಿ ಹಚ್ಚಿದ್ದೆ... ಅಪ್ಪ, ಅಮ್ಮನಿಗೆ ಕಾಣಿಸದ ಹಾಗೆ ಪ್ಯಾಕ್ ಮಾಡಿ ತಂದಿದ್ದ ITC ಕಿಂಗ್ ಸಿಗರೇಟಿಗೆ! ಅಬ್ಬ ಈ ಚಳಿಗೆ ಹೋದ ಜೀವ ಬಂದಂತಾಗಿ ಎದೆಯಲ್ಲಾ ಬೆಚ್ಚಗಾಗಿತ್ತು. [ಈ ಕ್ಷಣದಿಂದ ಸಿಗರೇಟು ಸೇದೋದು ಬಿಟ್ಟುಬಿಡಿ]

  ಬಂದು ಹದಿನೈದು ದಿನಗಳು ಕಳೆಯೋದರಲ್ಲಿ ಸಾಕಾಗಿ ಹೋಗಿತ್ತು. ಮೊದಲೇ ಊಟದ ತೊಂದರೆ, ಅದರ ಮೇಲೆ ಮೈ ಕೊರೆಯುವ ಚಳಿ. ಹೋಟೆಲ್ ರೂಮಿಂದ ಆಫೀಸಿಗೆ, ಆಫೀಸಿಂದ ರೂಮಿಗೆ ಇದೇ ಆಗಿತ್ತು ಜೀವನ. ರೂಮಿನಿಂದ ಬಗ್ಗಿ ನೋಡಿದರೂ ಒಂದೂ ನರಪಿಳ್ಳೆಯ ಸುಳಿವಿಲ್ಲದ ಈ ಹೊಸ ಪ್ರದೇಶದಲ್ಲಿ ಜೀವನ ಆಗಲೇ ಬೋರು ಹೊಡೆಯ ತೊಡಗಿತ್ತು. ಸ್ನೇಹಿತರು ಬೇರೆ ಯಾರೂ ಇಲ್ಲದ ಈ ಸಮಯದಲ್ಲಿ ನನಗರಿವಿಲ್ಲದೇ ಆಗಿತ್ತು ಸಂಗಾತಿ.. ಈ ಸುಟ್ಟು ಉರಿಯುವ ITC ಕಿಂಗ್. ಎರಡೇ ವಾರಕ್ಕೆ ತಂದ ಎಲ್ಲ ಪ್ಯಾಕ್ಕೆಟ್ಗಳು ಖಾಲಿ ಆದಮೇಲೆ ಕಿಂಗ್ ಹೋಗಿ ಅಮೆರಿಕನ್ ಬ್ರಾಂಡ್ ಮಾರ್ಲ್ ಬೋರೋ ಬಂದಿತ್ತು. ಊರಲ್ಲಿ ಅಪ್ಪ ಸಿಗರೇಟು ಸೇದಿ ಸೇದಿ ಎದೆ ಉಬ್ಬಸ ಅಂತ ತೊಂದರೆ ಪಡೋ ಕಷ್ಟ ನೆನಪಾದರೂ, ಕಾಲೇಜ್ ನಲ್ಲಿ ದೋಸ್ತ್ ಗಳು ಕಲಿಸಿದ್ದ ಈ ಚಟ ಬಿಡಲಾರದೆ ಜಾಸ್ತಿ ಆಗಿ... ಒಂದು ರೀತಿ ಜೀವನದ ಸಂಗಾತಿ ಆದ ಹಾಗೆ ಆಗಿತ್ತು.

  ಏನೋ ಸೀರಿಯಸ್ ಆಗಿ ಕೋಡ್ ಬಗ್ ಫಿಕ್ಸ್ ಮಾಡ್ತಾ ಕಾಫಿ ಹೀರುತ್ತಿದ್ದಾಗ ಆಫೀಸಿನ ಫೋನ್ ರಿಂಗಾಗಿತ್ತು. ಒಮ್ಮೆಲೇ ಅತ್ತ ಕಡೆಯಿಂದ ಕೇಳಿಬಂದ ತಮ್ಮನ ವಾಯ್ಸ್ ಕೇಳಿ ಮುಖ ಕಳೆಗುಂದಿದ್ದನ್ನು ನೋಡಿದ ಪಕ್ಕದ ಸೀಟಿನಲ್ಲೇ ಕೂತಿದ್ದ ಮ್ಯಾನೇಜರ್ ಮಾರ್ಕ್ ಕೇಳಿದ್ದ "ವಾಟ್ ಹ್ಯಾಪನ್ಡ್? ಎವ್ರಿಥಿಂಗ್ ಇಸ್ ಓಕೆ?". "ನೋ ಮಾರ್ಕ್ ..ಮೈ ಫಾದರ್ ಇಸ್ ಸೀರಿಯಸ್ ಅಂಡ್ ಇನ್ ಹಾಸ್ಪಿಟಲ್. ಐ ಮೇ ಹ್ಯಾವ್ ಟು ಫ್ಲೈ ಬ್ಯಾಕ್" ಅಂತ ತಡವರಿಸಿ ಹೇಳಿದಾಗ.. ಶ್ಯೂರ್ ಮ್ಯಾನ್.. ನಾಟ್ ಅ ಪ್ರಾಬ್ಲಮ್.. ಜಸ್ಟ್ ಟ್ರಾನ್ಸ್ಫರ್ ದಿ ನಾಲೆಜ್ ಟು ಸ್ಟೇಸಿ" ಅಂತಾ ಹೋಗಲಿಕ್ಕೆ ಪರ್ಮಿಷನ್ ಕೊಟ್ಟೆ ಬಿಟ್ಟಿದ್ದ. ಆ ದಿನವೆಲ್ಲ ರಾತ್ರಿಯಿಡಿ ಎಲ್ಲಾ ಡಾಕ್ಯುಮೆಂಟ್ ರೆಡಿ ಮಾಡಿ ಸ್ಟೇಸಿಗೆ ಅರ್ಥ ಆಗೋ ಹಾಗೆ ಹೇಳಿ ಬೆಳಿಗ್ಗೆಯ ಫ್ಲೈಟ್ ಹಿಡಿದು ಹೊರಟಿದ್ದೆ ಇಂಡಿಯಾಕ್ಕೆ.

  ಏರ್ ಪೋರ್ಟ್ಗೆ ಮಾವನ ಮಗ ಕೀರ್ತಿ ನನ್ನ ಕರೆದೊಯ್ಯಲು ಬಂದಿದ್ದ. ಕಾರಲ್ಲಿ ಸುಮ್ಮನೇ ಕೂತಿದ್ದ ನನ್ನ ಕಡೆ ಡ್ರೈವ್ ಮಾಡುತ್ತಾ ಹಾಗೆ ಮಿರರ್ ನಲ್ಲಿ ನೋಡಿ.. ಹೇಳಲೋ ಬೇಡವೋ ಅಂತ "ಬಸು.. ಮಾಮ ಹೋಗಿಬಿಟ್ರು ಕಣೋ".. ಅಷ್ಟೇ.. ತಕ್ಷಣ ನನ್ನ ಮನದಲ್ಲಿ ಅವಿತಿದ್ದ ದುಃಖ ಉಮ್ಮಳಿಸಿ ಕಣ್ಣಿರಾಗಿ ಹೊರ ಬಂದಿತ್ತು. ಸಮಾಧಾನ ಮಾಡುತ್ತಾ ಕೀರ್ತಿ ಹೇಳಿದ್ದ, "ಮಾಮ ವಿಪರೀತ ಸಿಗರೇಟು ಸೇದುತ್ತಿದ್ದುದರಿಂದ ಅವರ ಶ್ವಾಶಕೋಶ ಎಲ್ಲ ಬಹಳ ಡ್ಯಾಮೇಜ್ ಆಗಿತ್ತಂತೆ. ಡಾಕ್ಟರ್ ಬಹಳ ಟ್ರೈ ಮಾಡಿದ್ರು, ಆದ್ರೆ ಸಾಧ್ಯವಾಗಲಿಲ್ಲ ಕಣೋ." ಆವಾ ಏನು ಹೇಳ್ತಾ ಇದಾನೆ ಅನ್ನೋದು ಕೇಳಿಸಿಕೊಳ್ಳೋ ಸ್ಥಿತಿಯಲ್ಲಿ ನಾನಿರಲಿಲ್ಲ. ತಲೆನೋವು ಜೋರಾದಂತೆ ಆಗಿ, ತಕ್ಷಣ ಏನೋ ಬೇಕೆನೆಸಿ ಜೇಬಲ್ಲಿ ಕೈ ಹಾಕಿದ್ದೆ. ಸಿಗರೇಟು ಸಿಗದೇ "ಕೀರ್ತಿ.. ಇಲ್ಲೇ ಸೈಡಲ್ಲಿ ಪಾರ್ಕ್ ಮಾಡು ಕಾರನ್ನು.. 5 ನಿಮಿಷ ಬ್ರೇಕ್ ಬೇಕು".. ಅಂತ ಕೆಳಗಿಳಿದು ಅವನತ್ತಿರಾನೆ ಒಂದು ಸಿಗರೇಟು ಕೊಡಲೇ ಅಂತಾ ಕೇಳಿ ಇಬ್ಬರು ಸೇದಿ.. ಮತ್ತೆ ಹೊರಟಿದ್ದೆವು.

  ಶಿವಮೊಗ್ಗದ ಹತ್ತಿರದ ನಮ್ಮ ಹಳ್ಳಿಗೆ ಬಂದಾಗ ಆಗಲೇ ಮಧ್ಯಾನ್ಹ 3.30.. ಬಹಳ ಲೇಟ್ ಆಯಿತು.. ಬಾಡಿ ಇನ್ನು ಹೆಚ್ಚು ಇಡೋದು ಬೇಡ ಅಂತಾ ಎಲ್ಲರು ತಯಾರಿ ಮಾಡಿಕೊಂಡಿದ್ದರು ರುದ್ರಭೂಮಿಯ ಕಡೆ ಹೊರಡಲು. ಹೇ ಬಸು ಬಂದ... ಕರೆಕ್ಟ್ ಟೈಮ್.. ಕೊನೆಗಳಿಗೆಯಲ್ಲಾದರು ಅಪ್ಪನ ಮುಖ ದರ್ಶನ ಸಿಗ್ತಲ್ಲ ಪಾಪ ಅವನಿಗೆ.. ಅಂತ ಅಲ್ಲಿ ನೆರೆದಿದ್ದವರು ಹೇಳುತ್ತಿದ್ದುದ ಕೇಳಿಸಿಕೊಂಡು... ಹೋದವನೇ ಸೀದಾ ದುಃಖದ ಮಡುವಿನಲ್ಲಿದ್ದ ಅಮ್ಮನ ಬಳಿ ಮತ್ತೆ ತಮ್ಮನ ಬಳಿ ಹೋಗಿ ಇಬ್ಬರನ್ನೂ ಸಮಧಾನಿಸಿದ್ದೆ.

  ನೆರೆದಿದ್ದ ಕೆಲವರಿಗೆ "ಅಮೆರಿಕಾದಿಂದ ಬಸು ಯಾವ ರೀತಿ ರಿಯಾಕ್ಟ್ ಮಾಡ್ತಾನೆ" ಅನ್ನೋ ಕುತೂಹಲ ಆದರೆ, ಕೆಲವರಿಗೆ ಆಗಲೇ ಟೈಮ್ ಆಗಿದೆ ನಡೀರಿ ಹೋಗೋಣ.. ಕತ್ತಲಾಗದರೊಳಗೆ ಮಣ್ಣು ಮಾಡಬೇಕು ಅಂತ ಹೊರಟೇ ಬಿಟ್ಟಿದ್ದರು. ಎಲ್ಲಾ ಕಾರ್ಯಕ್ರಮ ಮುಗಿಯೋದರಲ್ಲಿ ಕತ್ತಲಾಗಿತ್ತು. ಲಾಂಗ್ ಜರ್ನಿ ಬೇರೆ ಮಾಡಿ ಬಂದಿದ್ದರಿಂದ ಸುಸ್ತಾದಂತಾಗಿ ತಲೆನೋವು ಬಂದಿತ್ತು. ಎಲ್ಲಿ ನೋಡಿದರೂ ಬಂದು-ಬಳಗದವರು, ಊರ ಪರಿಚಯದ ಜನ... ಒಂದೇ ಒಂದು ಧಂ ಎಳಿಬೇಕು ಅಂತ ಮನಸ್ಸು ಚಟಪಟಿಸಿದರು ಸಾಧ್ಯವಾಗದೆ ಹಾಗೆ ಮನೆಗೆ ಹೋಗಿ ಸ್ನಾನ ಮಾಡಿ ಮುಂದಿನ ಕಾರ್ಯಕ್ರಮಗಳನ್ನು ಮುಗಿಸಿ ಮತ್ತೆ ಅಮ್ಮನಿಗೆ ಸಮಾಧಾನ ಮಾಡಿ ಹಾಗೇ ದಿಂಬಿಗೆ ತಲೆಯಾನಿಸಿದಾಗ... ನಿದ್ರಾದೇವಿ ಯಾವಾಗ ಬಂದು ಆವರಿಸಿದಳೋ ಗೊತ್ತಾಗಲಿಲ್ಲ.

  ಎಲ್ಲಾ ಕಾರ್ಯಕ್ರಮಗಳು ಮುಗಿದ ಬಳಿಕ 2 ವಾರದ ನಂತರ ಮತ್ತೆ ಡ್ಯೂಟಿಗೆ ಹಾಜರಾಗಿದ್ದೆ ಬೆಂಗಳೂರಿನಲ್ಲಿದ್ದ ನಮ್ಮ ಆಫೀಸ್ಗೆ. ಹದಿನೈದು ದಿನಗಳ ಬಳಿಕ ಮ್ಯಾನೇಜರ್ ಬಂದು ಹೇಳಿದ್ದರು "ಬಸು.. ನ್ಯೂಯಾರ್ಕ್ ಕಸ್ಟಮರ್ ಅವರ ಅಪ್ಲಿಕೇಶನ್ ನಲ್ಲಿ ಏನೋ ತೊಂದರೆ ಇದೆಯಂತೆ.. ಸೋ.. ಅವರಿಗೆ ನೀನೆ ಬೇಕಂತೆ.. ಹೋಗಬೇಕಲ್ಲ ನೀನು.. ಈ ಬಾರಿ ಲಾಂಗ್ ಟರ್ಮ್.. H1B ವೀಸಾ" ಮೇಲೆ ಅಂತ ಹೇಳಿ.. 15 ದಿನಗಳಲ್ಲೇ ವೀಸಾ ರೆಡಿ ಮಾಡಿಸಿದ್ದರು.

  ಅಪ್ಪ ಹೋದ ದುಃಖದಲ್ಲಿದ್ದ ಅಮ್ಮನನ್ನು ಹೇಗೋ ಒಪ್ಪಿಸಿ ಮತ್ತೆ ವಾಪಸು ಅದೇ ಜಾಗಕ್ಕೆ ಬಂದಿದ್ದೆ. ಊರಲ್ಲಿದ್ದ ಅಮ್ಮನನ್ನು, ಮತ್ತೆ ಅಗಲಿದ ಅಪ್ಪನನ್ನು ದಿನಾ ನೆನೆಸಿಕೊಳ್ಳುತ್ತಾ ಕಾಲ ಹಾಕುತ್ತಿದ್ದ ನನಗೆ ಮತ್ತೆ ಮಾರ್ಲ್ಬೋರೋ ಪ್ರಿಯ ಸಂಗಾತಿಯಾಗಿತ್ತು. ಸ್ವಲ್ಪ ದಿನಗಳಲ್ಲೇ ಹಿಂದೆ ಕೂರುತ್ತಿದ್ದ ಜೆಫ್, ಸ್ಟೇಸಿ ಅವರು ಸಿಗರೇಟ್ ಸೇದಲು ಹೋದಾಗ ಜೊತೆಯಾಗಿದ್ದರು. ಏನೋ ಅಂತಾರಲ್ಲ.. "ಒಳ್ಳೆಯವರಿಗೆ ಫ್ರೆಂಡ್ಸ್ ಸಿಗೋದು ಕಷ್ಟ, ಆದ್ರೆ ಈ ರೀತಿ ಸೇದೋ ಅಥವಾ ಕುಡಿಯೋ ಚಟ ಇರೋರಿಗೆ ಬೇಜಾನ್ ಫ್ರೆಂಡ್ಸ್ ಸಿಕ್ಕಿಬಿಡ್ತಾರೆ ಬೇಗ" ಅದರಂತೆ ಸಿಗರೇಟು ಸೇದೋ ಒಂದು ದೊಡ್ಡ ಗುಂಪೇ ಆಗಿತ್ತು. ಒಂದೊಂದು ಗಂಟೆಗೂ ಎದ್ದು ಹೋಗುತ್ತಿದ್ದ ನನ್ನ ಮತ್ತು ಜೆಫ್ ಅನ್ನು ನೋಡಿ ಮ್ಯಾನೇಜರ್ ಮಾರ್ಕ್ ಕೇಳಿದ್ದ "ವೇರ್ ಆರ್ ಯು ಗಾಯ್ಸ್ ಗೋಯಿಂಗ್ ಎವ್ರಿ ಅವರ್". ಅದಕ್ಕೆ ಒಂದು ಪ್ಲಾನ್ ಮಾಡಿದ್ದೆವು ನೆಕ್ಸ್ಟ್ ಟೈಮ್. ಅದರಂತೆ ಜೆಫ್ ಅವನು ಕುಳಿತಲ್ಲಿಂದಲೇ "ಚಲೋ" ಅಂತ ಉಸುರಿ, ಅವನು ಹೋದ ಸ್ವಲ್ಪ ಹೊತ್ತಿನ ಮೇಲೆ ನಾನು ಹೊರ ಹೋಗುತ್ತಿದ್ದೆ. ಅವನಿಗೆ ಒಂದು ಹಿಂದಿ ಶಬ್ದ "ಚಲೋ" ಹೇಳಿಕೊಟ್ಟಿದ್ದಕ್ಕೂ ಸಾರ್ಥಕವಾಗಿತ್ತು. :)

  ಹಾಗೂ ಹೀಗೂ ಒಂದು ವರ್ಷವಾಗುತ್ತಾ ಬಂದಿದ್ದಾಗ ಅಮ್ಮನಿಂದ ಫೋನ್ ಬಂದಿತ್ತು. "ಅಪ್ಪ ತೀರಿಕೊಂಡು ಒಂದು ವರ್ಷವಾಗುತ್ತ ಬಂತು, ನೀನೆ ದೊಡ್ಡ ಮಗ.. ಮದುವೆ ಮಾಡಬೇಕು ಅದಕ್ಕೆ ಒಂದು ತಿಂಗಳು ರಜಾ ಹಾಕಿ ಬಾ" ಅಂತ ಚೊಕ್ಕದಾಗಿ ಹೇಳಿ ಫೋನ್ ಇಟ್ಟಿದ್ದರು. ಇನ್ನು ಅದರ ಬಗ್ಗೆ ತಲೆಕೆಡಿಸಿಕೊಳ್ಳದ ನಾನು, ಅರ್ಧ ಸವೆದಿದ್ದ ಅಮ್ಮನ ಮಾತಿಗೆ ಎದುರಾಡದೆ ರಜದ ಮೇಲೆ ಹೋಗಿದ್ದೆ. ಆಗಲೇ ಒಂದೆರಡು ಕಡೆ ಸಂಬಂಧ ನೋಡಿ ಇಟ್ಟಿದ್ದರು ಅಮ್ಮ. ಅವರಲ್ಲೇ ಇಂಜಿನಿಯರ್ ಓದಿದ್ದ ಒಂದು ಹುಡುಗಿಗೆ ಒಪ್ಪಿಗೆ ಹೇಳಿದಾಗ ಹೊರಡುವ ಅವಸರದಲ್ಲೇ ನಿಶ್ಚಿತಾರ್ಥ ಮಾಡಿ ಕಳಿಸಿದ್ದರು.

  ಅವಸರದಲ್ಲಿ ಬಂದಿದ್ದರಿಂದ ಹುಡುಗಿಯ ಜೊತೆ ಸರಿಯಾಗಿ ಮಾತಾಡಲೂ ಪುರುಸೊತ್ತು ಆಗಿರಲಿಲ್ಲ. ಆಗಿನ್ನೂ ಈ ಫೇಸ್ಬುಕ್, ಟ್ವಿಟ್ಟರ್, ವಾಟ್ಸ್ ಆಪ್ ಅನ್ನೋ ಚಾಟ್ ಮೀಡಿಯಾಗಳು ಬಂದಿದ್ದಿಲ್ಲ. ಅಲ್ಲದೇ ಕಾಲಿಂಗ್ ಕಾರ್ಡ್ಸ್ ಸಹ ದುಬಾರಿ.. ಹಾಗಾಗಿ ವಾರಕ್ಕೊಮ್ಮೆ 5-10 ನಿಮಿಷ ಮಾತಾಡುತ್ತಿದ್ದೆ ಹುಡುಗಿ ಜೊತೆ. ಒಂದು ತಿಂಗಳು ಆದಮೇಲೆ ನನ್ನ ಸಿಗರೇಟ್ ಅಭ್ಯಾಸದ ಬಗ್ಗೆ ಹೇಳಿಯೇ ಬಿಟ್ಟಿದ್ದೆ. 2, 3 ನಿಮಿಷ ಆ ಕಡೆಯಿಂದ ಸೈಲೆಂಟ್.." ಓಹ್ ಮುಂಚೆನೇ ಹೇಳಿದ್ದರೆ ಚೆನ್ನಾಗಿತ್ತು, ಏನೂ ಮಾಡೋಕೆ ಆಗೋಲ್ಲ ಈಗ. ಆದಷ್ಟು ಕಡಿಮೆ ಮಾಡಿಕೊಂಡು ಮದುವೆಗೆ ಇನ್ನು 6 ತಿಂಗಳು ಇದೆ, ಆ ಹೊತ್ತಿಗೆ ಪೂರ ಬಿಟ್ಟುಬಿಡಿ" ಅಂತಾ ಮೆಲ್ಲಗೇ ನುಡಿದಿದ್ದಳು.

  ಮದುವೆಯ ಸಮಯ ಬಂದೇಬಿಟ್ಟಿತ್ತು. ಆದರೆ ನನ್ನ ಮತ್ತು ಮಾರ್ಲ್ ಸಂಬಂಧ ಜಾಸ್ತಿ ಆಗಿತ್ತೇ ವಿನಃ ಕಡಿಮೆಯ ಸುದ್ದಿಯೇ ಇದ್ದಿಲ್ಲ. ಕೇವಲ 15 ದಿವಸ ರಜಾ ಕೊಟ್ಟಿದ್ದರಿಂದ, ಮದುವೆಯ ಹಿಂದಿನ ದಿನದಂದೇ ಬಂದಿಳಿದಿದ್ದೆ. ನಮ್ಮ ಶಿವಮೊಗ್ಗದಲ್ಲೇ ಮದುವೆ ಇದ್ದಿದ್ದರಿಂದ ಸುತ್ತಮುತ್ತಲ ಎಲ್ಲೆಡೆಯಿಂದ ನೆಂಟರಿಷ್ಟರ ದಂಡೇ ನನಗಿಂತ ಮುಂಚೆನೇ ಬಂದಿಳಿದಿತ್ತು. ಮಾರನೇ ದಿನ ಬೆಳಿಗ್ಗೆ 5 ಗಂಟೆಗೇ ಎದ್ದೇಳಿಸಿ ಪ್ರಾರಂಭಿಸಿದ್ದ ಅರಿಶಿಣ ಹಚ್ಚುವ ಶಾಸ್ತ್ರ 8 ಗಂಟೆಗೆ ಬಿಸಿಬಿಸಿ ನೀರಿನ ಸ್ನಾನದೊಂದಿಗೆ ಮುಗಿದಿತ್ತು. 9 ಗಂಟೆಗೇ ಶುಭ ಮುಹೂರ್ತ ಇದ್ದಿದ್ದರಿಂದ ಸ್ನಾನದ ಬಳಿಕ ಸೀದಾ ಮಂಟಪಕ್ಕೆ ಕರೆದೊಯ್ದಿದ್ದರು.

  ಗಂಟೆಗೊಂದು ಪ್ಯಾಕ್ ಖಾಲಿಮಾಡೋ ಅಭ್ಯಾಸ ಇದ್ದ ನಂಗೆ, ಅಷ್ಟೊತ್ತಿಗಾಗಲೇ ಸಿಗರೇಟು ಸೇದದಿದ್ದಕ್ಕೆ ಸಿಡಿಮಿಡಿ, ಎಷ್ಟೊತ್ತಿಗೆ ಈ ಮದುವೆ ಶಾಸ್ತ್ರ ಮುಗಿಯೋತ್ತೋ ಅನ್ನೋ ಹಾಗಾಗಿತ್ತು! ಘಟ್ಟಿ ಮೇಳ, ಘಟ್ಟಿ ಮೇಳ ಅಂತಾ ಯಾರೋ ಕೂಗಿದ್ದಕ್ಕೆ ವಾಲಗದವರು ಘಟ್ಟಿ ಮೇಳ ಬಾರಿಸಿದ ತಕ್ಷಣ ಹುಡುಗಿಯ ಕುತ್ತಿಗೆಗೆ ತಾಳಿ ಸರ ಕಟ್ಟಿದ್ದೆ. ಸರಿ, ಗಂಡು ಹೆಣ್ಣಿಗೆ ಅಲಂಕಾರ ಮಾಡಿಕೊಳ್ಳಲು ರೂಮಿಗೆ ಕರೆದೊಯ್ಯಿರಿ, 15 ನಿಮಿಷ ಟೈಮ್ ಇದೆ, ಡ್ರೆಸ್ ಆಗಿ ಬನ್ನಿ.. ಆರತಕ್ಷತೆಗೆ ಜನ ಆಗಲೇ ಬಂದು ಕಾಯ್ತಿದಾರೆ ಅಂತ ಅಂದ ತಕ್ಷಣ ಹಸೆಮಣೆಯಿಂದ ಚಂಗನೆ ಎದ್ದು ಹೊರಟಿದ್ದೆ.

  ಲೋ ಕೀರ್ತಿ, ಏನಾದರಾಗಲಿ ಒಂದು ಸಿಗರೇಟು ಸೇದಲೇಬೇಕಮ್ಮ ಅಂತ ನಾ ಹೇಳಿದಾಗ, ಅವನು "ಬಸು, ಈ ಟೈಮ್ ನಲ್ಲಿ ಎಲ್ಲಿ ಸೇದ್ತಿಯಾ? ನೀನು ಹೊರಗಡೆ ಹೋಗೋ ಹಾಗು ಇಲ್ಲ. ಇಲ್ಲಿ ಚೌಟ್ರಿಯಲ್ಲಂತೂ ಸಾಧ್ಯವೇ ಇಲ್ಲ ಇಷ್ಟೊಂದು ಜನಗಳ ಮಧ್ಯೆ.. ಇನ್ನೊಂದೆರಡು ಗಂಟೆ ತಳ್ಳು ಹೇಗಾದರೂ ಮಾಡಿ. ಆಮೇಲೆ ಸೇದುವೆ" ಅಂತ ಹೇಳಿದ್ದ ಕೇಳಿ, ಎಲ್ಲಿಲ್ಲದ ಸಿಟ್ಟು ಬಂದಿತ್ತು. ಏನಾದ್ರು ಹಾಗಲಿ ನಂಗೆ ಈಗ ಬೇಕೇ ಬೇಕು ಅಂತ ಸಿಗರೇಟಿನ ದಾಸನಾಗಿದ್ದ ನಾನು ಹೊರಟೇಬಿಟ್ಟಿದ್ದೆ ಕೀರ್ತಿಯನ್ನು ಎಳೆದುಕೊಂಡು ಹೊರಗಡೆ... ಏನೋ ಒಂದು ಸಬೂಬು ಹೇಳಿ ಅಲ್ಲೇ ಇದ್ದ ಅಮ್ಮ, ತಮ್ಮನಿಗೆ. ಹೊರಗಡೆ ಬಂದು ನೋಡಿದರೆ ಇದ್ದದು ಒಂದೇ ಒಂದು ಅಂಗಡಿ, ಆದ್ರೆ ಅಲ್ಲಿ ಎಲ್ಲ ನಮ್ಮ ಮದುವೆಗೆ ಬಂದ ನೆಂಟರಿಷ್ಟರೇ ತುಂಬಿದ್ದರು. ಅವರ ಮುಂದೆ ಹೇಗೆ ಸೇದುವುದು. ಸರಿ ಅಂತ ಕೀರ್ತಿಗೆ ಬೈಕ್ ಓಡಿಸಲಿಕ್ಕೆ ಹೇಳಿದ್ದೆ ಸ್ವಲ್ಪ ಮುಂದೆ... ಕೊನೆಗೆ ಒಂದು ಅಂಗಡಿ ಸಿಕ್ಕಿತ್ತು ಅರ್ಧ ಗಂಟೆಯಾದ ಮೇಲೆ. ಸರಿ ಅಂತ 3 ಸಿಗರೇಟುಗಳನ್ನು ಬರಬರನೆ ಸೇದಿ ಉಳಿದ ಪ್ಯಾಕ್ಕನ್ನು ಜೇಬಲ್ಲೇ ಇಟ್ಟುಕೊಂಡು ಮತ್ತೆ ಬರುವ ವೇಳೆಗೆ ಒಂದೂವರೆ ಗಂಟೆ ಸವೆದಿತ್ತು.

  ಚೌಟ್ರಿಯಲ್ಲಿ.. ಮದುಮಗ ಎಲ್ಲೂ ಕಾಣಿಸ್ತಿಲ್ಲ, ಏನಾಯ್ತೋ ಏನೋ ಅಂತ ಎಲ್ಲರಿಗೂ ಏನೋ ಒಂದು ಗಾಬರಿ, ದುಗುಡ. ಹೆಣ್ಣಿನ ರೂಮಿನಲ್ಲಿ ಆಗಲೇ ಅಳುವ ಧ್ವನಿಗಳು. ನನ್ನ ನೋಡಿದ ತಕ್ಷಣವೇ ಅಮ್ಮ, ತಮ್ಮ, ಹುಡುಗಿಯ ಅಪ್ಪ ಓಡಿ ಬಂದು ಒಮ್ಮೆಲೇ ಕೇಳಿದ್ದರು "ಎಲ್ಲಿಗೆ ಹೋಗಿದ್ದಿರಿ? ಎಲ್ಲ ಜನ ಬಂದು ಕಾಯ್ತಾ ನಿಂತಿದ್ದಾರೆ... ಊಟಕ್ಕೆ ಎಲ್ಲಾ ರೆಡಿ ಮಾಡಿಕೊಂಡು ಕೂತಿದಾರೆ?". ನನ್ನ ಬಾಯ್ ತುಂಬಾ ಸಿಗರೇಟಿನ ಸ್ಮೆಲ್ಲು, ಕೆಮ್ಮು ಬರುತ್ತಿದ್ದುದ ಕಂಡು ಕೀರ್ತಿನೇ ಉತ್ತರಿಸಿದ್ದ "ಬಸುಗೇ ಸಿಕ್ಕಾಪಟ್ಟೆ ತಲೆ ನೋವು ಬಂದಿತ್ತು, ಹಾಗೆ ಮೆಡಿಕಲ್ ಶಾಪ್ಗೆ ಹೋಗಿ ಮೆಡಿಸಿನ್ ತರೋದರಲ್ಲಿ ಲೇಟ್ ಆಯಿತು" ಅಂತ ಏನೋ ಒಂದು ರೀಲ್ ಬಿಟ್ಟಿದ್ದ. ಸರಿ ಸರಿ, ಈಗ ಬೇಗ ಬನ್ನಿ ಅಂತ ಆರತಕ್ಷತೆಗೆ ಕರೆದೊಯ್ದು ಕೂರಿಸಿದ್ದರು. ಮದುಮಗಳು ಹಾಗೇ ನನ್ನ ಕಡೆ ಒಮ್ಮೆ ನೋಡಿ, ಕೇಳಿದ್ದಳು "ಎಲ್ಲಿಗೆ ಹೋಗಿದ್ದಿರಿ?" ..ನಾನು ಏನೋ ಹೇಳಲು ಹೋಗಿ ಕೆಮ್ಮು ಬಂದಿದ್ದಕ್ಕೆ, ಅವಳಿಗೆ ಅರ್ಥವಾಗಿತ್ತು.. ಕೆಮ್ಮಿನ ಜೊತೆ ತೇಲಿಬಂದ ಆ ಸಿಗರೇಟಿನ ವಾಸನೆಯಿಂದ ಮುಖ ಕಿವುಚಿ ಆಚೆ ಕಡೆ ತಿರುಗಿದ್ದಳು. ಸಿಗರೇಟು ಸೇದಿ ಬಂದಿದ್ದರಿಂದ ನನಗಂತೂ ಒಂತರಾ ತಲೆಭಾರ ಕಡಿಮೆಯಾದಂತಾಗಿ, ಮದುಮಗಳು ಬೇಜಾರಾಗಿದ್ದನ್ನು ಕಂಡರೂ ಏನೂ ಅನ್ನಿಸಿರಲಿಲ್ಲ.

  ಅಂತು ಇಂತೂ ಮದುವೆ ಶಾಸ್ತ್ರ ಮುಗೀತು. ಕೇವಲ 15 ದಿನ ರಜ ಕೊಟ್ಟಿದ್ದರಿಂದ ಹನಿಮೂನಿಗೂ ಸಹ ಹೋಗಲು ಟೈಮ್ ಸಿಗದೇ.. ಹೆಂಡತಿಗೆ ಕಂಪನಿಯವರು ತತ್ಕಾಲ್ ವೀಸಾ ಮಾಡಿಸಿಕೊಟ್ಟಿದ್ದರಿಂದ ಜೊತೆಯಲ್ಲೇ ಅಮೆರಿಕಾಕ್ಕೆ ಕರೆದುಕೊಂಡು ಬಂದಿದ್ದೆ. ಯಾವಾಗಲೂ ಊಪ್ ಊಪ್ ಅಂತ ರೈಲು ಇಂಜಿನ್ ನಂತೆ ಸಿಗರೇಟಿನ ಹೊಗೆ ಬಿಡುತ್ತ ಇರುತಿದ್ದ ನನಗೆ, ಮೊದಮೊದಲು ಏನೂ ಹೇಳದ ಹೆಂಡತಿ ಸ್ವಲ್ಪ ತಿಂಗಳಾದ ಬಳಿಕ ನಿಧಾನವಾಗಿ "ನಿಮಗೆ ಪೂರಾ ನಿಲ್ಲಿಸಲು ಆಗದಿದ್ದರೆ, ಸ್ವಲ್ಪನಾದರು ಕಡಿಮೆ ಮಾಡಿ" ಅಂತಾ ಹೇಳಿದ್ದಳು. ಒಂದು ವರುಷ, ಎರಡು ವರುಷವಾದರೂ ನನ್ನಲ್ಲಿ ಏನೂ ಬದಲಾವಣೆ ಕಾಣದ ಅವಳು ಒಮ್ಮೊಮ್ಮೆ ಮೌನಕ್ಕೆ, ಅಳುವಿಗೆ ಶರಣಾಗಿದ್ದಳು. ಅಷ್ಟೊತ್ತಿಗೆ ಮನೆಗೊಂದು ಮಗು ಬರಲಿದೆ ಅನ್ನೋ ಸಂತಸದ ಸುದ್ದಿಯನ್ನು ಡಾಕ್ಟರ್ ಹೇಳಿದಾಗ.. "ನೋಡಿ ಈಗಲಾದರೂ ಬಿಟ್ಟು ಬಿಡಿ.. ಮಗುವಿನ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತೆ" ಅಂತ ಅಂದಾಗ, ನಾನು ಸಹಾ ಯೋಚನೆ ಮಾಡಿದ್ದೆ "ಛೆ! ಈಗಲಾದರೂ ಕಡಿಮೆ ಮಾಡಬೇಕು, ಇಲ್ಲ ಪೂರ್ತಿ ನಿಲ್ಲಿಸಲೇಬೇಕು" ಅಂತ ಒಂದೆರಡು ವಾರ ಕಡಿಮೆ ಮಾಡಲು, ನಿಲ್ಲಿಸಲು ಟ್ರೈ ಮಾಡಿದ್ದೆ. ಹಿಂದಿನ ಸೀಟಿನ ಜೆಫ್ "ಚಲೋ" ಅಂತಾ ಜೋರಾಗಿ ಕೂಗಿದಾಗಲೂ ಎದ್ದು ಹೋಗದೆ ಮನಸನ್ನು ಗಟ್ಟಿ ಮಾಡಿ ಕೂತಿದ್ದೆ. ಹುಂ.. ಒಂದು ದಿನ, ಎರಡು ದಿನಗಳು ಕಳೆಯೋದರಲ್ಲಿ ಎರಡು ಯುಗಗಳು ಆದಂತೆ ಭಾಸವಾಗಿತ್ತು. ತಲೆಯೆಲ್ಲ ಚಿಟ್ಟು ಹಿಡಿದು ಮೂರನೇ ದಿನ ಯಾವಾಗ "ಚಲೋ" ಅನ್ನೋ ಶಬ್ದ ಕೇಳಿ ಬರುವುದನ್ನೇ ಕಾಯುತ್ತ ಕುಳಿತಿದ್ದೆ. :)

  "ರ್ರೀ, ರ್ರೀ... ಏನೂ ಅದು ಕನವರಿಸ್ತಾ ಇರೋದು.. ಎದ್ದೇಳಿ... ನೀವು ಏರ್ ಪೋರ್ಟ್ಗೆ ಹೋಗ್ಬೇಕು ಇವತ್ತು, ನಿಮ್ಮ ತಾಯಿ ಮೊದಲ ಬಾರಿ ಅಮೆರಿಕಾಕ್ಕೆ ಬರ್ತಾ ಇದಾರೆ... ಸ್ವಲ್ಪ ಬೇಗನೆ ಹೋಗಿ ಕರೆದುಕೊಂಡು ಬನ್ನಿ" ಅಂತ ಜೋರಾಗಿ ಅಲುಗಾಡಿಸಿ ಎದ್ದೇಳಿಸಿದಾಗ... ಕನಸಲ್ಲಿ 5 ವರುಷಗಳ ಹಿಂದೆ ಹೋಗಿದ್ದ ನನಗೆ ಎಚ್ಚರವಾಗಿತ್ತು. ಮೊಮ್ಮಗು ಹುಟ್ಟೋ ಸಮಯಕ್ಕೆ ಸರಿಯಾಗಿ ಮೊದಲ ಬಾರಿ ಅಮೆರಿಕಕ್ಕೆ ಬರುತ್ತಿರುವ ಅಮ್ಮನನ್ನು ಕರೆದೊಯ್ಯಲು ಕೆನಡಿ ಏರ್ ಪೋರ್ಟ್ಗೆ ರೆಡಿ ಆಗಿದ್ದೆ. ನಿಮ್ಮ ಅಮ್ಮ ಬರ್ತಾರೆ, ಇನ್ನು ಮೇಲಾದರೂ ಸಿಗರೇಟು ಸ್ಟಾಪ್ ಮಾಡಿ, ಅಮ್ಮನಿಗೆ ಏನಾದರು ಗೊತ್ತಾದರೆ.. ಮೊದಲೇ ಸಿಗರೇಟಿನ ಸಹವಾಸದಿಂದ ಆರೋಗ್ಯ ಹಾಳು ಮಾಡಿಕೊಂಡು ಅಪ್ಪ ಹೋದಮೇಲೆ ಅರ್ಧ ಸೊರಗಿರುವ ಅಮ್ಮನಿಗೆ ಏನಾದರು, ಅದೇ ಸಿಗರೇಟಿಗೆ ದಾಸನಾಗಿರುವ ನಿಮ್ಮ ವಿಷಯ ಏನಾದರೂ ಗೊತ್ತಾದರೆ ಅಷ್ಟೇ?

  ನಿನ್ನೆ ರಾತ್ರಿನೇ ಎಲ್ಲಾ ಸಿಗರೇಟು ಬಿಸಾಕಿ, ಸೇದುವುದನ್ನು ಬಿಟ್ಟೆ ಅಂತ ಹೆಂಡತಿಗೆ ಹೇಳಿದಾಗ... ಅವಳು ಆಶ್ಚರ್ಯ ಆಗಬಹುದೇನೋ ಅಂತ ನೋಡ್ತಾ ಇದ್ದ ನನಗೆ "ನೀವು ಏನೂ ಹೇಳಬೇಡಿ, ನಿಮ್ಮ ಶಪಥ, ಪ್ರಾಮಿಸ್ ಎಲ್ಲಾ ಚೆನ್ನಾಗಿ ಗೊತ್ತು ನಂಗೆ... ನಾಯಿ ಬಾಲ ಡೊಂಕೆ" ಅಂತಾ ನುಡಿದಿದ್ದಳು.

  "ಅಪ್ಪನ ಪರಿಸ್ಥಿತಿ ಮತ್ತು ಹೋದ ತಿಂಗಳು ಕೆಮ್ಮಿ ಕೆಮ್ಮಿ ಬಾಯಿಂದ ರಕ್ತ ಬಂದಿದ್ದು, ಅದನ್ನು ಹೆಂಡತಿಗೆ ಹೇಳದೆ ಬಾತ್ರೂಮ್ ಎಲ್ಲ ಕ್ಲೀನ್ ಮಾಡಿದ್ದು, ಇತ್ತೀಚೆಗೆ ಯಾಕೋ ಆಫೀಸಿನ ಒಂದೆರಡು ಮೆಟ್ಟಿಲು ಹತ್ತೋ ವೇಳೆಗೆ ಎದೆ ಉಬ್ಬುಸ ಬಂದಿದ್ದು" ಎಲ್ಲಾ ಕಂಗಳ ಮುಂದೆ ಹಾದು ಹೋಗಿ, ಮನದಲ್ಲಿ ಘೋರ ಶಪಥ ಮಾಡಿ ಆಗಿತ್ತು.

  ಏರ್ ಇಂಡಿಯಾ ವಿಮಾನ ಬಂದಿಳಿದಾಗ ಅಮ್ಮನ ಆಗಮನಕ್ಕೆ ಕಾಯುತ್ತಿದ್ದೆ JFK ಏರ್ ಪೋರ್ಟ್ನಲ್ಲಿ. ಸ್ವಲ್ಪ ಹೊತ್ತಿನ ನಂತರ ಅಮ್ಮ ಲಗೇಜ್ ಜೊತೆ ಬರುವುದ ನೋಡಿ, ಓಡಿ ಕಾಲಿಗೆರಗಿ ಲಗೇಜ್ ಪಿಕಪ್ ಮಾಡಿದ್ದೆ. ಬರುವಾಗ ವೈಟ್ ಸ್ಟೋನ್ ಬ್ರಿಡ್ಜ್, ಅದರ ಮೇಲೆ ಹಾದು ಬರುವಾಗ ಕಾಣುವ ನ್ಯೂಯಾರ್ಕ್ ಮ್ಯಾನ್ಹಟನ್ ಸುಂದರ ದೃಶ್ಯ, ಇಲ್ಲಿನ ರೋಡುಗಳ ಬಗ್ಗೆ ಮಾತಾಡುತ್ತಾ ಬಂದಿದ್ದೆ ಎಲ್ಲ ದೇಶೀಗಳಂತೆ ನಾನು ಸಹ. ಅಂತೂ ಒಂದು ದಿನ ಮುಗಿದಿತ್ತು... ಮಾರ್ಲ್ ಬೊರೋ ಸೇದದೆ.. ಮರು ದಿನ ಎದ್ದಾಗ ಮೈಯೆಲ್ಲಾ ಏನೋ ಒಂತರ... ಏನೋ ಚಡಪಡಿಕೆ, ತಲೆಭಾರ. ಛೆ! ಹೆಂಡತಿ ಬೇಕಾದರು ಬಿಡಬಹುದು, ಹಾಳಾದ್ದು... ಈ ಸಿಗರೇಟು ಮಾತ್ರ ಬಿಡಲಿಕ್ಕೆ ಎಷ್ಟು ಕಷ್ಟವಲ್ಲ? ಅಂತ ತಲೆ ಮೇಲೆ ಕೈಯೂರಿ ರೂಮಲ್ಲಿ ಕೂತಿದ್ದಾಗ, ಬೆಳಿಗ್ಗೆ ಬೇಗನೆ ಎದ್ದಿದ್ದ ಅಮ್ಮ ಕಾಫಿ ಲೋಟದೊಂದಿಗೆ ಬಂದಿದ್ದರು.

  ಎರಡು ದಿನಗಳು ಕಳೆಯೋ ವೇಳೆಗೆ ನಂಗೆ ವಿಪರೀತ ತಲೆನೋವು, ಸುಮ್ಮನೆ ಎಲ್ಲದಕ್ಕೂ ಕೋಪ ಬಂದಿದ್ದ ನೋಡಿ... ಸ್ವಲ್ಪ ಹೊತ್ತು ಹೊರಗೆ ಹೋಗಿ ಬರುತ್ತೇನೆ ಎಂದು ಹೊರಬಿದ್ದಿದ್ದೆ. ಪಾನ್ / ಜರ್ದ ತಿಂದರೆ ಈ ತಂಬಾಕಿನ ಆಸೆ ಬೇಗ ಬಿಡಬಹುದು ಅಂತ ಯಾರೋ ಪುಣ್ಯಾತ್ಮ ಹೇಳಿದ್ದಕ್ಕೆ ಅದನ್ನು ಟ್ರೈ ಮಾಡಿದ್ದೆ ಒಂದು ವಾರ.. ಹೂ ಹೂ... ಸಿಗರೇಟಿನ ಬದ್ಲು ಈ ಜರ್ದಾ ತಿನ್ನೋದು ಜಾಸ್ತಿ ಆದಾಗ... ಯಾರೋ ಹೇಳಿದ್ದ ತಂಬಾಕಿನ ಪ್ಯಾಚ್ ಅನ್ನು ಕೈಗೆ ಹಾಕೋ ರೂಡಿ ಮಾಡಿಕೊಂಡೆ. ಅದರಿಂದ ಸ್ವಲ್ಪ ಸಿಗರೇಟು ಸೇದಬೇಕೆಂಬ ಬಯಕೆ ಕಡಿಮೆ ಆದರೂ, ಅದರ ಪ್ರಭಾವ ಬೀರಿದ ಮೇಲೆ ಮತ್ತೆ ಅದೇ ತಲೆನೋವು, ಎಲ್ಲರ ಮೇಲೆ ಚಿಕ್ಕದ್ದಕ್ಕು ಸಿಡಿಮಿಡಿ, ಕೋಪ. ಒಂದು ತಿಂಗಳು ಹಾಗೇ ಮುಗಿದಿತ್ತು.

  ಮೊಮ್ಮಗ ಹುಟ್ಟಿದ್ದಾನೆ ಎಂದು ಅಮ್ಮನಿಗೆ ಎಲ್ಲಿಲ್ಲದ ಸಂತೋಷ.. ನನಗೂ ಒಂದೆಡೆ ಸಂತೋಷವಾದರೂ.. ಆ ಚಿಕ್ಕ ಮಗುವನ್ನು ಎತ್ತಿ ಅಪ್ಪಿ ಮುದ್ದಾಡಲು ಹೊರಟೆ ಅಂದರೆ ನನ್ನ ಬಾಯಿಂದ ಬರುತ್ತಿದ್ದ ಆ ಜರ್ದ, ತಂಬಾಕಿನ ಪ್ಯಾಚ್ ಸ್ಮೆಲ್.. ಹತ್ತಿರ ಹೋಗಲು ಬಿಡುತ್ತಿರಲಿಲ್ಲ.

  ಅಮ್ಮನಿಗೆ ಒಮ್ಮೆ ನ್ಯೂ ಯಾರ್ಕ್, ನಯಾಗರ ಫಾಲ್ಸ್ ತೋರಿಸಿಕೊಂಡು ಬಂದಿದ್ದೆ. ದಾರಿಯುದ್ದಕ್ಕೂ ಅವರು ಅದು ಇದು ಕೇಳುತ್ತಿದ್ದರೆ.. ನಂಗೆ ಸಿಗರೇಟು ಸೇದದ ಕೋಪ. ಪಾಪ ಅವರ ಮೇಲೂ ಸಹಾ ಕೋಪಿಸಿದ್ದೆ, ಸರಿಯಾಗಿ ಉತ್ತರ ಮಾಡಿರಲಿಲ್ಲ. ಯಾಕೋ ಮಗ ಒಂತಾರ ಆಡ್ತಿದನಲ್ಲಮ್ಮ ಅಂತ ಹೆಂಡತಿ ಹತ್ತಿರ ಗೊಣಗುತ್ತಿದ್ದಿದ್ದು ಕೇಳಿಸಿತ್ತು. ಛೆ, ಅವರಿಗೆ ಹೇಗಂತಾ ನಾ ಬಿಡಿಸಿ ಹೇಳಲಿ ನನ್ನ ಕಷ್ಟವನ್ನು?

  ಈ ತಂಬಾಕು ಪ್ಯಾಚ್ ಹಾಕಿ ಹಾಕಿ ಕೈ ರಟ್ಟೆ ಮೇಲಿನ ಚರ್ಮ ಸ್ವಲ್ಪ ಕಿತ್ತು ಬಂದಂತಾಗಿತ್ತು. ಅದಕ್ಕೆ ಎಣ್ಣೆ ಹಚ್ಚಿ ಕೊಳ್ಳುವಾಗ ನೋಡಿದ್ದ ಮಡದಿ ಕೇಳಿದ್ದಳು "ಏನು ಅದು? ಅಂತ". ಎಲ್ಲ ವಿವರಿಸಿ ಹೇಳಿದ್ದೆ ಅವಳಿಗೆ.. ಸಿಗರೇಟು ಬಿಟ್ಟು ಈ ಜರ್ದ , ತಂಬಾಕಿನ ಪ್ಯಾಚ್ ದುರಬ್ಯಾಸ ಮಾಡಿಕೊಂದಿದ್ದಿರಲ್ಲ ಈಗ? ಇದೆಲ್ಲ ಬೇಕಿತ್ತಾ? ಅಂತ ಮತ್ತೆ ಅವಳು ಮುನಿದಾಗ... ಕೋಪಾನೆ ಬಂದಿತ್ತು. ಸರಿ ಮತ್ತೆ ಇವುಗಳ ದಾಸ ಆಗೋದು ಬೇಡ ಅಂತ ಇವೆರಡನ್ನು ಸಹಾ ಕಡಿಮೆ ಮಾಡಿದ್ದೆ.

  ಅಂತೂ ಮಗ ಹುಟ್ಟಿ, ಎರಡು ತಿಂಗಳು ಮುಗಿಯೋದರಲ್ಲಿ ನನ್ನ ಈ ಸಿಡಿಮಿಡಿಗೆ, ಕೋಪಕ್ಕೆ "ಮಗ ಯಾಕೋ ಚೇಂಜ್ ಆಗಿದಾನೆ ಅಮೆರಿಕಾಕ್ಕೆ ಬಂದ ಮೇಲೆ, ಸುಮ್ಮನೆ ನಾ ಯಾಕೆ ಇಲ್ಲಿರುವುದು ಅಂತ?" ಅಮ್ಮ.. ಊರಿಂದ ತಮ್ಮ ಫೋನ್ ಮಾಡಿದ್ದಾಗ ಅವನಿಗೆ ಹೇಳಿ ರಿಟರ್ನ್ ಟಿಕೆಟ್ ಮಾಡಿಸಪ್ಪ ಅಂತ ಒತ್ತಾಯ ಮಾಡಿ ಹೊರಟೇ ಬಿಟ್ಟಿದ್ದರು. ಛೆ, ಅಮ್ಮ ಹೋದರೆ ಮತ್ತೆ ನಾ ಎಲ್ಲಿ ಸಿಗರೇಟಿನ ದಾಸನಾಗುವೇನೋ ಅಂತ ಯೋಚಿಸಿ ಎಷ್ಟೇ ಒತ್ತಾಯ ಮಾಡಿದರು ಅಮ್ಮ ತನ್ನ ಮನಸ್ಸು ಬದಲಾಯಿಸದೆ ಹೋಗಿಯೇ ಬಿಟ್ಟಿದ್ದರು ಇಂಡಿಯಾಗೆ ಮೂರು ತಿಂಗಳು ಮುಗಿಯೋದರಲ್ಲಿ.

  ಛೆ, ಅಷ್ಟು ದೂರದಿಂದ ಮೊದಲ ಬಾರಿ ಬಂದಿದ್ದ ಅಮ್ಮನನ್ನು ಈ ಹಾಳಾದ್ದು ಚಟದಿಂದ ಸರಿಯಾಗಿ ಮಾತನಾಡಿಸಲು, ನೋಡಿಕೊಳ್ಳಲು ಆಗಲಿಲ್ಲವಲ್ಲ.. ಅಂತ ಮನಸ್ಸಿಗೆ ಒಂದೆಡೆ ನೋವಾದರೆ, ಅಮ್ಮನ ಈ ಬರುವಿಕೆ ... ಸಾವಿನ ದವಡೆಯತ್ತ ಕರೆದೊಯ್ದಿದ್ದ ಈ ಸಿಗರೇಟಿನ ದುಶ್ಚಟ ಇನ್ನಿಲ್ಲದಂತೆ ಮಾಯವಾಗಿ, ನನ್ನನ್ನೂ ಒಬ್ಬ ಉತ್ತಮ ಮನುಷ್ಯ, ಒಳ್ಳೆ ಗಂಡ, ಒಳ್ಳೆ ಅಪ್ಪ ಆಗುವಂತೆ ಮಾಡಿ "ಮರುಜನ್ಮ" ನೀಡಿದ್ದಳು ಅಮ್ಮ.

  ಇಂದು 7 ವರ್ಷದ ಮಗ "ಲೆಟ್ಸ್ ರನ್ ಅಪ್ಪಾ..." ಅಂತ ಹೇಳಿದಾಗ ಅವನಿಗೆ ಸರಿಸಮನಾಗಿ ಓಡಿ ಅವನನ್ನು ಸ್ಕೂಲ್ ಬಸ್ ಹತ್ತಿಸಿ ನಂತರ ನಾನೂ ಸಹ ರೆಡಿ ಆಗಿ ಆಫೀಸಿನ 30 ಮೆಟ್ಟಿಲುಗಳನ್ನು ಸಲೀಸಾಗಿ ಹತ್ತಿ ಬಂದು ಸೀಟಲ್ಲಿ ಕುಳಿತಾಗ... ಜೆಫ್ ಬಂದು ಹೇಳಿದ್ದ "ಚಲೋ...", ನಾ ನಗುತ್ತಾ ಹೇಳಿದ್ದೆ... ಬರೀ "ಹಲೋ" ;)

  ಧೂಮಪಾನ ಆರೋಗ್ಯಕ್ಕೆ ಅಷ್ಟೇ ಹಾನಿಕರವಲ್ಲ, ಸಂಬಂಧಗಳನ್ನೂ ಸಹಾ ಹಾಳು ಮಾಡುತ್ತದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Smoking is not only dangerous to health, it also spoils your relation with your beloved one. This Short story written by Nagaraja Maheshwarappa is not fictitious, but a real one.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more