ಕಲ್ಲೆಸೆಯದೇ ಬಿಟ್ಟು ಬಿಟ್ನಲ್ಲ ...!

Posted By: ನಾಗರಾಜ ಎಂ, ಕನೆಕ್ಟಿಕಟ್
Subscribe to Oneindia Kannada

ಕೆಟ್ಟ ಶೆಖೆಗೆ ಬೆಂದು ಬಳಲಿದ ದೇಹ , ಬಾಯಾರಿದ ನಾಲಿಗೆಗೆ ಊಟ ಸೇರದೆ ..ಸ್ವಲ್ಪ ತಣ್ಣನೆಯ ಮಜ್ಜಿಗೆ ಬೇಕೆನಿಸಿ ..."ಲೇ , ನಂಗೆ ಈ ಬಿಸಿಲಿಗೆ ಊಟ ಬೇಡ ಅನ್ನಿಸ್ತಿದೆ ...ಅದರ ಬದಲು ಸ್ವಲ್ಪ ತಣ್ಣನೆಯ ಮಜ್ಜಿಗೆ ಇದ್ದರೆ ಅದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು - ಬೆಳ್ಳುಳ್ಳಿ - ಹಸಿ ಶುಂಠಿ ಜಜ್ಜಿ ಹಾಕಿ ಕೊಡು" ಅಂತಾ ಕೂಗಿ ಹೇಳಿದ್ದೆ ಮೊಗಸಾಲೆಯಲ್ಲೇ ಕೈಯಲ್ಲಿದ್ದ ಬೀಸಣಿಕೆಯಿಂದ ಗಾಳಿ ಬೀಸು ಕೊಳ್ತಾ ಕುಂತು ...!

"ನೋಡು , ನಿಮ್ಮಪ್ಪಗೆ ತಣ್ಣನೆಯ ಮಸಾಲಾ ಮಜ್ಜಿಗೆ ಬೇಕಂತೆ ...ಈ ಸೆಖೆಯಲ್ಲಿ ಒಲೆ ಮುಂದೆ ಕೂತು ಬೆವರು ಇಳ್ಸ್ಕೊತಾ ಮಾಡಿದ ಅಡಿಗೆಯ ಉಣ್ಣೊದು ಬಿಟ್ಟು ಮಜ್ಜಿಗೆ ಅಂತೇ ಮಜ್ಜಿಗೆ !" ಮಗನ ಮುಂದೆ ವಟ ವಟಾ ಅಂತಾ ಬಯ್ಯೋ ರೀತಿಯಲ್ಲಿ ಹೆಂಡ್ತಿ ನುಡಿದಿದ್ದು ಕೇಳಿದರೂ ಕೇಳಿಸದಂತೆ "ವಟ ವಟಾ ಅಂತಾ ಅನ್ನದೆ ಎಂದು ಯಾವ ಕೆಲಸ ಮಾಡ್ತಾಳೋ ಇವಳು?" ಮನದಲ್ಲೇ ಅಂದುಕೊಳ್ತಾ (ಕೇಳದಂತೆ ಮನದನ್ನೆಗೆ) ಜೋರಾಗೆ ಬೀಸಣಿಕೆಯಿಂದ ಗಾಳಿ ಬೀಸುಕೊಂಡ್ರೂ , ಬಂದಿದ್ದು ಬರೀ ಬಿಸಿಗಾಳಿನೆ...! ):

story

ಹಾಗೇ ನಿದ್ದೆಯ ಜೊಂಪು ಹತ್ತಿದಂತಾಗಿ ತೂಕಡಿಸುವಾಗ , "ಅಪ್ಪ ..ಅಪ್ಪಾ ..ತಗೋ ಮಜ್ಜಿಗೆ" ಅಂತಾ ಮಗ ಮಜ್ಜಿಗೆ ತಂದುಕೊಟ್ಟಾಗ ಸೊರ್ರನೆ ಹೀರಿ ಮತ್ತೆ ನಿದ್ದೆಗೆ ಜಾರಿದ್ದೆ.

ಒಮ್ಮೆಲೇ ಛಟೀರೆಂತ ಬೆಳಕು ಬಂದಂತಾಗಿ , ಅದರ ಹಿಂದೆ ಧಡ್ ಧಡ್ ಅಂತಾ ಗುಡುಗಿನ ಶಬ್ದ ಕೇಳಿದಾಗ ಒಮ್ಮೆಲೇ ಬೆಚ್ಚಿ ಎದ್ದು ಕುಳಿತು ಕಣ್ಣು ಬಿಟ್ರೆ.. ಧೋ ಅಂತಾ ಸುರೀತಿತ್ತು ಮಳೆ ಹೊರಗಡೆ !

"ಅಬ್ಬಾ ..ಇವತ್ತಾದ್ರು ಮಳೆ ಬರ್ತಾ ಇದೆಯಲ್ಲ ..ಬರ್ಲಿ ಬರ್ಲಿ ..ಸ್ವಲ್ಪ ಹೆಚ್ಚು ಹೊತ್ತು ಜೋರಾಗೆ ಬರ್ಲಿ" ಅಂತಾ ಅಂದುಕೊಂಡು ಹೊರಗಡೆ ಜಗುಲಿ ಕಟ್ಟೆಯ ಮೇಲೆ ಬಂದು ಕುಳಿತು ನೋಡ್ತಾ ಇದ್ದೆ ಮಳೆನೇ !

"ಹೇ ಮಹೇಶ ...ಏನು ಮಾಡ್ತಾ ಇದಿಯೋ ? ಬಾರೋ ಇಲ್ಲಿ" ಅಂತಾ ಮಗನನ್ನು ಕೂಗಿ ಕರೆದಿದ್ದೆ ಮಳೆಯ ಅಂದವ ನೋಡಲು.
"ನೋಡೋ ನಿಮ್ಮ ಅಪ್ಪ ಕರೀತಿದಾರೆ , ಈಗ ಈ ಮಳೆಗೆ ಮಂಡಕ್ಕಿ- ಈರುಳ್ಳಿ ಬಜ್ಜಿ ಬೇಕು ಅಂತಾ ಅನ್ನಿಸಿರಬೇಕು ಅವ್ರಿಗೆ" ಹೋಗಿ ಕೇಳು ಏನು ಅಂತಾ? " ಮತ್ತೆ ಅದೇ ವಟ ವಟಾ ಧ್ವನಿ ಕೇಳಿ ಬಂದಿತ್ತು ಒಳಗಡೆಯಿಂದ.
"ಎಲ್ಲಾ ಇವಳಾ ? ನಾನು ಅದರ ಬಗ್ಗೆ ಇನ್ನು ಯೋಚನೆನೇ ಮಾಡಿದ್ದಿಲ್ಲ ..ಎಲ್ಲಾ ಇವಳೇ ಹೇಳ್ತಾಳಲ್ಲ ...ವಟ ವಟಾ ಅಂತಾ ಅಂದು ಪರ್ವಾಗಿಲ್ಲ ...ನನ್ನ ಮನಸ್ಸನ್ನು ಚೆನ್ನಾಗಿ ಅರ್ತಾ ಮಾಡಿಕೊಂಡಿದ್ದಾಳಲ್ಲ" ಅಂತಾ ಸಮಾಧಾನ ಪಟ್ಟುಕೊಂಡು ..."ಮಹೇಶ , ಆ ಹಳೆ ಪೇಪರ್ ತಗೊಂಡು ಬಾರೋ ...ನಿಂಗೆ ದೋಣಿ ಮಾಡಿಕೊಡ್ತೀನಿ ...ಈ ಮಳೆ ನೀರಲ್ಲಿ ತೇಲಿಬಿಡಂತೆ" ಅಂತಾ ಕೂಗಿ ಕರೆದಿದ್ದೆ ಮಗನ್ನ!

ಜಗುಲಿ ಮುಂದೆ ಇದ್ದ ಸಣ್ಣ ಚರಂಡಿ ತುಂಬಿ ಹರಿತಿತ್ತು ಮಳೆ ನೀರಿಂದ,
ಅದರಲ್ಲೇ ಪೇಪರ್ ದೋಣಿಯ ತೇಲಿಬಿಡ್ತಾ ಕೇಕೆ ಹಾಕ್ತಾ ಇದ್ದ ಮಹೇಶ...
ಸುಮಾರು ಎರಡು ತಾಸು ಜೋರಾಗಿ ಸುರಿದ ಮಳೆಗೆ,
ಬರ್ತಾ ಇದ್ದ ತಂಪಾದ ಮಣ್ಣಿನ ವಾಸನೆ ಕುಡಿತಾ ಇದ್ದೆ..ನಾ ನಾಗೇಶ ..!

ಅಂತೂ ಜೋರಾಗಿಯೇ ಬಂದು ನಿಂತ ಮಳೆಗೆ..ಮರಗಿಡಗಳೆಲ್ಲ ಮಳೆ ಸ್ನಾನ ಮಾಡಿ ಕಂಗೊಳಿಸಿದಂತಾಗಿತ್ತು...ಮರದಲ್ಲಿ ಅಡಗಿ ಕೂತಿದ್ದ ಹಕ್ಕಿಗಳು ಚಿಲಿಪಿಲಿ ಅಂತಾ ಗೂಡಿಂದ ಹೊರಗೆ ಹಾರಿದ್ದವು. ಹಕ್ಕಿಗಳು ಹಾರಿಹೋದ ಕಡೆನೇ ನೋಡ್ತಾ ಇದ್ದ ನಂಗೆ "ಕ್ವಾಟ್ರು ಕ್ವಾಟ್ರು" ಅಂತಾ ಕಪ್ಪೆಯ ಶಬ್ದ ಕೇಳಿ ಬಂದಾಗ ನೋಡಿದರೆ ..ಚರಂಡಿ ನೀರಲ್ಲಿ ಕಂಡಿತ್ತು ಕಪ್ಪೆ. ಮಳೆ ಬಂದ ಖುಷಿಗೆ ಅದು ಸಹಾ ಜೋರಾಗೆ ಶಬ್ದ ಮಾಡ್ತಿತ್ತು ! :)

ಕುಪ್ಪಳಿಸೋ ಕಪ್ಪೆಯ ಶಬ್ದಕ್ಕೆ , ದೋಣಿಯಾಟವ ಬಿಟ್ಟು ಕುಪ್ಪಳಿಸುತ್ತಾ ಬಂದಿದ್ದ ಮಹೇಶ ! ಕಪ್ಪೆಯ ನೋಡಿ ಖುಷಿಯಾದ ಅವನು ..ಅಲ್ಲೇ ಇದ್ದ ಒಂದು ಸಣ್ಣ ಕಲ್ಲನ್ನು ತಗೊಂಡು ಅದರೆಡೆ ಬಿಸಾಕಲು ಇನ್ನೇನು ರೆಡಿ ಆಗಿದ್ದಾಗ ..."ಹೇ ಕಪ್ಪೆಗೆ ಕಲ್ಲು ಹೊಡಿಬೇಡ್ವೊ ! ಮುಂದೆ ಮೂಕಿ ಹೆಂಡ್ತಿ ಸಿಗ್ತಾಳೆ ನೋಡು ನಿಂಗೆ" ಅಂತಾ ನನ್ನ ಹಿಂದಿನಿಂದ ಹೆಂಡ್ತಿಯ ಧ್ವನಿ ಕೇಳಿ ತಿರುಗಿ ನೋಡಿದಾಗ , "ಮನೇಲಿ ಎಣ್ಣೆ ಖಾಲಿ ಖಾಲಿ ಆಗಿದೆ, ಜೊತೆಗೆ ಹಾಲು ಖಾಲಿ...ಅದಕ್ಕೆ ಭಜ್ಜಿ-ಗಿಜ್ಜಿ ಏನು ಮಾಡಿಲ್ಲ ...ತಗೊಳ್ಳಿ ಬರೀ ಕರಿ ಕಾಫೀ..." ಅಂತಾ ವಟ ವಟನೇ ನುಡಿದು ತಟ್ಟ್ ಅಂತಾ ಕಾಫಿ ಲೋಟ ಕೆಳಗಿಟ್ಟು , ಬರ ಬರನೇ ವೈಯಾರದಿಂದ ಮತ್ತೆ ಒಳಗೆ ಹೋಗಿದ್ದಳು ಹೆಂಡ್ತಿ !

ಸೊರ ಸೊರನೆ ಅದೇ ಕರಿ ಕಾಫಿ ಕುಡಿಯುತ್ತಿದ್ದ ನಂಗೆ " ಅಪ್ಪ ..ಹೌದ ಅಪ್ಪ ? ಅಮ್ಮ ಹೇಳಿದ್ದು ನಿಜಾನಾ ? " ಮಗ ಪ್ರಶ್ನೆ ಕೇಳಿದಾಗ..."ಹೇ ಇಲ್ಲ ಕಣೋ ..ಅದು ಬರಿ ವಾಡಿಕೆ, ನೀನು ಆಡ್ಕೊಳೋ " ಅಂತಾ ನುಡಿಯುವಾಗ ಮನದಲ್ಲೇ " ಅಂದು ನಾನೂ ಸಹಾ ಮಹೇಶನ ಹಾಗೇ, ಮಳೆ ಬಂದಾಗ ವಟ ವಟ ಅಂತಿದ್ದ ಕಪ್ಪೆಯ ಮೇಲೆ ಕಲ್ಲೆಸೆಯುವಾಗ ತಡೆದಿದ್ದ ನನ್ನಪ್ಪನ ಮಾತು ಕೇಳದೆ , ಕಲ್ಲೆಸೆದಿದ್ದರೆ ಸದಾ ವಟ ವಟ ಅನ್ನೋ ಹೆಂಡ್ತಿ ಬದಲು ಮೂಕಿ ಹೆಂಡ್ತಿ ಸಿಕ್ಕಿರ್ತಿದ್ಲು ..ಛೆ ! ಅಂದು ಕಪ್ಪೆಗೆ , ಕಲ್ಲೆಸೆಯದೇ ಬಿಟ್ಟು ಬಿಟ್ನಲ್ಲ" ಅಂತಾ ಮೆಲ್ಲಗೆ ನಾ ಗೊಣಗಿದ್ದ ಕೇಳಿ ..."ಏನ್ರಿ ? ಅದು ಗೊಣಗ್ತಾ ಇದೀರಿ ? ನಾ ಮಾಡಿದ್ದ ಕಾಫೀ ನಿಮಗೆಲ್ಲಿ ಇಷ್ಟ ಆಗುತ್ತೆ ಹೇಳಿ ?" ಅಂತಾ ಮತ್ತೆ ವಟ ವಟಾ ಅಂದು , ಗೃಹಶೋಭಾ ಮ್ಯಾಗಜಿನ್ ಹಿಡಿದು ಓದೋಕ್ಕೆ ಬಂದು ಕೂತಿದ್ದಳು ಜಗುಲಿಯ ಮೇಲೆ, ನನ್ನ ಹೆಂಡ್ತಿ ಕಮಲಿ ! ):

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A short story Kallesayde bittu bitnalla a short story written by an nri M.Nagaraj

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ