Karuppu OTT: 'ಕರುಪ್ಪು' ಬಾಕ್ಸ್ ಆಫೀಸ್ ದರ್ಬಾರ್, ಒಟಿಟಿ ಬಿಡುಗಡೆ ದಿನಾಂಕದ ಅಪ್ಡೇಟ್ಸ್ ಇಲ್ಲಿದೆ
Karuppu OTT Release Date: ತಮಿಳು ನಿರ್ದೇಶಕ ಆರ್.ಜೆ. ಬಾಲಾಜಿ ಅವರು 'ಕರುಪ್ಪು' ಸಿನಿಮಾಗೆ ಕನ್ನಡ ಕಾಂತಾರ ಸ್ಪೂರ್ತಿ ನೀಡಿದೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಕ್ಲೈಮ್ಯಾಕ್ಸ್ ಚಿತ್ರೀಕರಣ ಕುರಿತು ಅವರು ಮಾತನಾಡಿದ್ದಾರೆ. ಇನ್ನೂ ಅವರ ನಿರ್ದೇಶನದಲ್ಲಿ ಸೂರ್ಯ ಅಭಿನಯದ "ಕರುಪ್ಪು" ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಬಿಡುಗಡೆಯಾದ ಕೇವಲ 10 ದಿನಗಳಲ್ಲಿ, ಧೈವ ಕುರಿತ ಆಕ್ಷನ್ ಡ್ರಾಮಾ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡುತ್ತಲೇ ಯಶಸ್ಸು ಕಂಡಿದೆ.
ತಮಿಳು ಚಿತ್ರರಂಗದಲ್ಲಿ ಆಗಸ್ಟ್ 2025ರ ನಂತರ ಯಾವೊಂದು ಸಿನಿಮಾವು ಹೇಳಿಕೊಳ್ಳುವಂತಹ ದಾಖಲೆ, ಯಶಸ್ಸು ಗಳಿಸಲಿಲ್ಲ. 'ಕರುಪ್ಪು' ಆ ಕೊರತೆಯನ್ನು ನೀಗಿಸಿದೆ. "ಕರುಪ್ಪು" ತಮಿಳುನಾಡಿನಲ್ಲಿ 130 ಕೋಟಿ ರೂಗು ಅಧಿಕ ಗಳಿಕೆ ಕಂಡಿದೆ. ರಾಜ್ಯದಲ್ಲಿ 100 ಕೋಟಿ ರೂ. ಗಡಿ ದಾಟಿದ 22ನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾಗತಿಕವಾಗಿ ಕೇವಲ ಎಂಟು ದಿನಗಳಲ್ಲಿ 200 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ನಟ ಸೂರ್ಯ ಅವರ ಸಿನಿ ಜೀವನದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಮತ್ತು ತಮಿಳುನಾಡಿನಲ್ಲಿ ಅವರ ಮೊದಲ 100 ಕೋಟಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಿನಿಮಾ ಯಾವಾಗ ಓಟಿಟಿಗೆ ಬರುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಯಾವಾಗ OTTಗೆ ಬರಲಿದೆ ಎಂಬ ಮಾಹಿತಿ ಮುಂದಿದೆ.

ದೇಶ, ವಿದೇಶಗಳಲ್ಲಿ ಭರ್ಜರಿ ಗಳಿಕೆ
ಈ ಸಿನಿಮಾ ಭಾರತದಾದ್ಯಂತ 180 ಕೋಟಿ ರೂ.ಗಳಿಸಿ ಮುಂದೆ ಸಾಗಿದೆ. ಇನ್ನೂ ವಿದೇಶಗಳಲ್ಲಿ ಸಿನಿಮಾ ತೆರೆ ಕಂಡಿದ್ದು, ಅಲ್ಲಿ ಒಟ್ಟು 250 ಕೋಟಿ ರೂ.ನಷ್ಟು ಹಣ ಬಾಚಿಕೊಂಡಿದೆ. ಸದ್ಯಕ್ಕೆ 'ಕರುಪ್ಪು' ಓಟ ನಿಲ್ಲುವಂತೆ ಕಾಣುತ್ತಿಲ್ಲ. ಸೂರ್ಯ ಅಭಿಮಾನಿಗಳು, ಚಿತ್ರತಂಡದಲ್ಲಿ ಸಂಭ್ರಮ ಮನೆ ಮಾಡಿದೆ. "ಕರುಪ್ಪು" ಕೇವಲ ನಾಲ್ಕು ದಿನಗಳಲ್ಲಿ "ಸಿಂಗಂ 2" ನ 13 ವರ್ಷಗಳ ಹಳೆಯ ಜೀವಮಾನದ ದಾಖಲೆಯನ್ನು ಸರಿಗಟ್ಟಿದ್ದು, ಸೂರ್ಯ ಅವರಿಗೆ ದೊಡ್ಡ ಬ್ರೇಕ್ ನೀಡಿದೆ ಎಂದು ಸಿನಿ ಪಂಡಿತರು ವಿಶ್ಲೇಷಿಸಿದ್ದಾರೆ.
ಇದು "ಮೆರ್ಸಲ್", "ಪೇಟಾ", "ತುನಿವು" ನಂತಹ ದೊಡ್ಡ ಚಿತ್ರಗಳನ್ನು ಹಿಂದಿಕ್ಕಿ, ಎಂಟು ದಿನಗಳಲ್ಲಿ 200 ಕೋಟಿ ರೂ. ಗಳಿಸಿ ಜಾಗತಿಕ ಕ್ಲಬ್ ಸೇರಿದೆ. ಕೇರಳದಲ್ಲೂ "ಕರುಪ್ಪು" ಸೂರ್ಯರ ಅತಿ ದೊಡ್ಡ ಯಶಸ್ಸು ಕಂಡು ಸಿನಿಮಾ ಎನ್ನಲಾಗಿದೆ..
ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಿಸಿರುವ "ಕರುಪ್ಪು" ಚಿತ್ರದಲ್ಲಿ ಸೂರ್ಯ ಮತ್ತು ತ್ರಿಷಾ ಕೃಷ್ಣನ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ನಿರ್ದೇಶಕ ಆರ್.ಜೆ. ಬಾಲಾಜಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಇಂದ್ರನ್ಸ್, ನಟ್ಟಿ ಸುಬ್ರಮಣಿಯಂ, ಸ್ವಾಸಿಕಾ, ಶಿವದ, ಸುಪ್ರಿತ್ ರೆಡ್ಡಿ, ಯೋಗಿ ಬಾಬುವೂ ತಾರಾಗಣದಲ್ಲಿದ್ದಾರೆ. ಸಾಯಿ ಅಭಯಂಕರ್ ಸಂಗೀತ, ಜಿ. ಕೆ. ವಿಷ್ಣು ಛಾಯಾಗ್ರಹಣ, ಆರ್. ಕಲೈವನನ್ ಸಂಕಲನ ಈ ಚಿತ್ರಕ್ಕಿದೆ, ಇದು ತಾಂತ್ರಿಕವಾಗಿ ಉತ್ತಮವಾಗಿದೆ.
OTT ಬಿಡುಗಡೆ ಯಾವಾಗ?
'ಕರುಪ್ಪು' ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಆದರೆ ನಿರ್ಮಾಪಕರು ಮಾಹಿತಿ ಬಹಿರಂಗಪಡಿಸಿಲ್ಲ. ಸಾಮಾನ್ಯವಾಗಿ, ದಕ್ಷಿಣ ಭಾರತದ ಚಿತ್ರಗಳು ಥಿಯೇಟರ್ ಪ್ರದರ್ಶನನಂತರ 4-5 ವಾರಗಳಲ್ಲಿ ಸ್ಟ್ರೀಮಿಂಗ್‌ಗೆ ಬರುವುದು ವಾಡಿಕೆ. ಅದೇ ರೀತಿ ಜೂನ್ 16 ಅಥವಾ 17ರ ಸುಮಾರಿಗೆ ಇದು ಪ್ರೈಮ್‌ನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಸಿನಿಮಾ ತಂಡ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಶೀಘ್ರವೇ ಮಾಹಿತಿ ನೀಡುವ ನಿರೀಕ್ಷೆ ಇದೆ.













Click it and Unblock the Notifications