KIA: ಮುಂಬೈ ಏರ್‌ಪೋರ್ಟ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಬೆಂಗಳೂರು ಏರ್‌ಪೋರ್ಟ್
ಬೆಂಗಳೂರು: ವಾರ್ಷಿಕ ಸುಮಾರು 4.4 ಕೋಟಿ ಪ್ರಯಾಣಿಕರ ಸಂಚಾರಕ್ಕೆ ಸಾಕ್ಷಿಯಾಗಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (KIAL) ಇದೀಗ ದೇಶದ ವಾಣಿಜ್ಯ ನಗರಿ ಎಂದೇ ಖ್ಯಾತವಾದ ಮುಂಬೈ ಅನ್ನು ಹಿಂದಿಕ್ಕಿದೆ. ಭಾರತದ ಎರಡನೇ ಅತಿ ಹೆಚ್ಚು ಜನದಟ್ಟಣೆಯ ದೇಶೀಯ ವಿಮಾನ ನಿಲ್ದಾಣ ಪಟ್ಟಿಯಲ್ಲಿ ಮುಂಬೈಗಿಂತ ಮುಂದಿದೆ ಎಂದು ಎಎಐ ವರದಿ ಬಹಿರಂಗಪಡಿಸಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ನೀಡಿರುವ ಮಾಹಿತಿ ಪ್ರಕಾರ, ಏಪ್ರಿಲ್ ತಿಂಗಳಿನಲ್ಲಿ ಕೆಐಎಎಲ್ 3.28 ಮಿಲಿಯನ್ (32.8 ಲಕ್ಷ) ದೇಶೀಯ ಪ್ರಯಾಣಿಕರ ಸಂಚಾರಕ್ಕೆ ಸಾಕ್ಷಿಯಾಗಿದೆ. ಇದೇ ಅವಧಿಯಲ್ಲಿ ಮುಂಬೈ 2.89 ಮಿಲಿಯನ್ (28.9 ಲಕ್ಷ) ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ಬೆಂಗಳೂರಿನ ನಂತರದ ಸ್ಥಾನಕ್ಕೆ ಕುಸಿದಿದೆ. ಇವೆರಡು ನಗರಗಳ ಮಧ್ಯೆ ಒಟ್ಟು ಸುಮಾರು 3.9 ಲಕ್ಷ ಪ್ರಯಾಣಿಕರ ಅಂತರವಿದೆ.

ಅಂತಾರಾಷ್ಟ್ರೀಯ ಯಾನದಲ್ಲಿ ಮುಂಬೈಗೆ 2ನೇ ಸ್ಥಾನ
ಬೆಂಗಳೂರು ದೇಶೀಯ ವಿಮಾನ ಸಂಚಾರದಲ್ಲಿ ಮುಂಬೈಗಿಂತ ಮುಂದಿದೆ. ಆದರೆ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಚಾರಕ್ಕೆ ಬಂದರೆ ಮುಂಬೈ ವಿಮಾನ ನಿಲ್ದಾಣವು ಒಟ್ಟಾರೆಯಾಗಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಏಪ್ರಿಲ್‌ನಲ್ಲಿ ಮುಂಬೈನಲ್ಲಿ ಸುಮಾರು 4 ಮಿಲಿಯನ್ (40 ಲಕ್ಷ) ಒಟ್ಟು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ನಿರ್ವಹಿಸಿದೆ. ಇತ್ತ ಬೆಂಗಳೂರು 3.68 ಮಿಲಿಯನ್ (36.8 ಲಕ್ಷ) ಪ್ರಯಾಣಿಕರನ್ನು ದಾಖಲಿಸಿದೆ.
ಮುಂಬೈ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಸಂಪರ್ಕ ಜಾಲ ಬೃಹದಾಕಾರವಾಗಿದೆ. ಎಲ್ಲಾ ಪಟ್ಟಿಗಳ ಪ್ರಕಾರ ದೆಹಲಿ ವಿಮಾನ ನಿಲ್ದಾಣವು ಭಾರತದ ಅತ್ಯಂತ ಹೆಚ್ಚು ಜನದಟ್ಟಣೆಯ ವಿಮಾನ ನಿಲ್ದಾಣವಾಗಿ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
ಮುಂಬೈನಲ್ಲಿ ಹೊಸ ಏರ್‌ಪೋರ್ಟ್ ಕಾರ್ಯಾರಂಭ
2020-21ರ ಕೋವಿಡ್ ಸಮಯದಲ್ಲಿ ದೇಶಿಯ ಪ್ರಯಾಣಿಕರಲ್ಲಿ ಬೆಂಗಳೂರು ಮತ್ತು ಮುಂಬೈಗೆ ತಾತ್ಕಾಲಿಕವಾಗಿ ಹಿನ್ನಡೆಯಾಗಿತ್ತು. ಆದರೆ, ಪ್ರಸ್ತುತ ಬದಲಾವಣೆ ಶಾಶ್ವತವಾಗುವ ಸಾಧ್ಯತೆಯಿದೆ. ಇದಕ್ಕೆ ಕಾರಣ, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದೇ ರನ್‌ವೇಯ ಸ್ಲಾಟ್‌ಗಳು ತುಂಬಿಹೋಗಿವೆ. ಹೀಗಾಗಿ, ಮುಂಬೈ ಮಹಾನಗರ ಪ್ರದೇಶದ ಹೆಚ್ಚುವರಿ ದೇಶೀಯ ಬೆಳವಣಿಗೆಯನ್ನು ಹೊಸದಾಗಿ ಕಾರ್ಯಾರಂಭ ಮಾಡಿದ ನವೀ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಿಭಾಯಿಸುತ್ತಿದೆ.
ಏಪ್ರಿಲ್‌ನಲ್ಲಿ ಮುಂಬೈ ಮಹಾನಗರ ಪ್ರದೇಶದ (ಎಂಎಂಆರ್) ಎರಡು ವಿಮಾನ ನಿಲ್ದಾಣಗಳು ಒಟ್ಟಾಗಿ 3.4 ಮಿಲಿಯನ್ (34 ಲಕ್ಷ) ದೇಶೀಯ ಪ್ರಯಾಣಿಕರನ್ನು ಸಂಪರ್ಕಿಸಿವೆ. ಇದು ಬೆಂಗಳೂರಿನ 3.28 ಮಿಲಿಯನ್ (32.8 ಲಕ್ಷ) ಪ್ರಯಾಣಿಕರಿಗಿಂತ ಕೊಂಚ ಅಧಿಕ ಎನ್ನಲಾಗಿದೆ. ಆದರೆ, ನವೀ ಮುಂಬೈ ವಿಮಾನ ನಿಲ್ದಾಣವು ಸ್ವಾಯತ್ತವಾಗಿ ಬೆಳೆದಂತೆ, ಬೆಂಗಳೂರಿನ ಪರವಾಗಿ ಈ ಅಂತರವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ವಿಮಾನಯಾನ ಅಧಿಕಾರಿಯೊಬ್ಬರು ಹೇಳುವಂತೆ, ವಿಮಾನಯಾನಕ್ಕೆ ಆಧಾರವಾಗಿರುವ ಚಾಲಕರಿಗೆ ಬೇಡಿಕೆ ಹೆಚ್ಚಿದೆ. ಸೇವೆಗೆ ವಿಮಾನ ಸಂಸ್ಥೆಗಳು ಬದ್ಧವಾಗಿವೆ. 2019ರಿಂದ ಸಮಾನಾಂತರ ರನ್‌ವೇಗಳನ್ನು ನಿರ್ವಹಿಸುತ್ತಿರುವ ಬೆಂಗಳೂರಿನಲ್ಲಿ ವಿಮಾನಯಾನ ಸಂಸ್ಥೆಗಳು ಮುಂಬೈಗಿಂತಲೂ ಉತ್ತಮವಾಗಿ ಜನದಟ್ಟಣೆಯನ್ನು ಸುಲಭವಾಗಿ ನಿರ್ವಹಿಸುತ್ತಿದೆ ಎಂದು ಅವರು ಅಭಿಪ್ರಾಯ ಹೊರ ಹಾಕಿದ್ದಾರೆ.
ಮುಂಬೈ ವಿಮಾನ ನಿಲ್ದಾಣದ ಮೇಲೆ ಜನದಟ್ಟಣೆ ಒತ್ತಡ ಹೆಚ್ಚಾಗಿದ್ದರಿಂದ ಹೆಚ್ಚುವರಿ ದೇಶೀಯ ವಿಮಾನಯಾನವನ್ನು ನವೀ ಮುಂಬೈ ವಿಮಾನ ನಿಲ್ದಾಣಕ್ಕೆ 2025ರ ಡಿಸೆಂಬರ್ 25ರಂದು ಸ್ಥಳಾಂತರಿಸಿತು. ಇದರಿಂದ ಬೆಂಗಳೂರಿಗೆ ದೇಶೀಯ ವಿಮಾನಯಾನದಲ್ಲಿ ಎರಡನೇ ಸ್ಥಾನಕ್ಕೇರಲು ಸಾಧ್ಯವಾಗಿದೆ.
ಮುಂಬೈನಲ್ಲಿ ದೇಶೀಯ ಪ್ರಯಾಣಿಕರ ದಟ್ಟಣೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ. 12ರಷ್ಟು ಇಳಿಕೆ ಆಗಿದೆ. ಬೆಂಗಳೂರಲ್ಲಿ ಮಾತ್ರವೇ ಶೇ. 0.8ರಷ್ಟು ಇಳಿಕೆ ದಾಖಲಾಗಿದೆ. ದೆಹಲಿಯ ಪ್ರಯಾಣಿಕರ ದಟ್ಟಣೆ ಶೇ. 1.8ರಷ್ಟು ಏರಿಕೆ ಕಂಡು ಬಂದಿದೆ. 2030ರ ಹೊತ್ತಿಗೆ ಮುಂಬೈ ನಿಲ್ದಾಣಕ್ಕಿಂತ ನವಿ ಮುಂಬೈ ನಿಲ್ದಾಣವು ಹೆಚ್ಚಿನ ಪ್ರಯಾಣಿಕರನ್ನು ನಿರ್ವಹಣೆ ಮಾಡುವ ನಿರೀಕ್ಷೆಗಳು ಇವೆ ಎಂದು ಹೇಳಲಾಗುತ್ತಿದೆ.














Click it and Unblock the Notifications