ದೇವರೇ ನನ್ನ ಕುಟುಂಬ ನಗುನಗುತ್ತಾ ಇರುವಂತೆ ನೋಡಿಕೋ

By: ಹೊಳೆ ನರಸೀಪುರ ಮ೦ಜುನಾಥ
Subscribe to Oneindia Kannada

ಮಧ್ಯಾಹ್ನದ ಅಡುಗೆಗೆ ಮಟನ್ ಖೈಮಾ ಸಾರು, ಮಗಳಿಗಾಗಿ ಸ್ಪೆಷಲ್ ಮೀನು ತವಾ ಫ್ರೈ ಸಿದ್ಧವಾಗುತ್ತಿತ್ತು, ಮಗಳೊಡನೆ ಕುಳಿತು ಅವಳ ಪಠ್ಯ ವಿಷಯಗಳ ಬಗ್ಗೆ ಕೇಳುತ್ತಾ, ಅವಳಿಗೆ ಅನುಮಾನವಿದ್ದ ವಿಚಾರಗಳನ್ನು ಬಗೆಹರಿಸುತ್ತಾ ಮಗನಿಗೆ ಅಕ್ಷರಾಭ್ಯಾಸ ಮಾಡಿಸುತ್ತಾ ಇವನು ಕಾಲ ಕಳೆದಿದ್ದ.

ಮಧ್ಯಾಹ್ನವಾಗುತ್ತಾ ಹೋದಂತೆ ಹೊರಗಡೆ ಹೋಗಬೇಕೆಂಬ ಬಯಕೆ ಇವನಲ್ಲಿ ಹೆಚ್ಚಾಗುತ್ತಾ ಹೋಗುತ್ತಿತ್ತು, ಆದರೆ ಮಕ್ಕಳಿಬ್ಬರೂ ಇವನನ್ನು ಆಚೆಗೆ ಹೋಗಲು ಬಿಡುತ್ತಿರಲಿಲ್ಲ! ಕೊನೆಗೊಮ್ಮೆ ಅಡಿಗೆ ಕೆಲಸ ಮುಗಿಸಿ ಮಡದಿ ರೂಮಿಗೆ ಬಂದಾಗ ಅವಳಿಗಾಗಿ ತಂದಿದ್ದ ಹೂವಿನ ಪೊಟ್ಟಣವನ್ನು ಅವಳ ಕೈಗಿತ್ತು, ಮಕ್ಕಳ ಕಣ್ತಪ್ಪಿಸಿ ಚುಂಬಿಸಿದ್ದ.

ನಾಚಿ ನೀರಾದ ಅವಳನ್ನು ಒಪ್ಪಿಸಿ, ಅರ್ಧ ಘಂಟೆಯಲ್ಲಿ ಬರುವದಾಗಿ ಮನೆಯಿಂದ ಹೊರಬಂದಿದ್ದ. ಬೈಕಿನವರೆಗೂ ಬಂದ ಅವಳು ಅವನ ಕೈ ಹಿಡಿದು "ಯಾವುದೇ ಕಾರಣಕ್ಕೂ ಜಾಸ್ತಿ ಕುಡಿಬೇಡಿ, ಬೇಕಾದ್ರೆ ಮನೆಗೇ ತೊಗೊಂಡು ಬನ್ನಿ, ಬಾರಿನಲ್ಲಿ ಜಾಸ್ತಿ ಹೊತ್ತು ಕೂರಬೇಡಿ"ಎಂದು ತಾಕೀತು ಮಾಡಿದ್ದಳು.

Joyful family and Sunday outing, Article by H Manjunatha - Part 3

ಹೂಗುಟ್ಟಿ ಹೊರಟವನು ಸೀದಾ ಹೋಗಿ ಬೈಕ್ ನಿಲ್ಲಿಸಿದ್ದು ವಿಜಯಲಕ್ಷ್ಮಿ ಬಾರಿನ ಮುಂದೆ! ವಾರಕ್ಕೊಮ್ಮೆ ಸಿಗುವ ರಜಾ ದಿನದಂದು ಮನಕ್ಕೆ ಇಷ್ಟವಾದುದನ್ನು ತಿಂದು, ಮನಸ್ಸಿಗೆ ಸಮಾಧಾನವಾಗುವಷ್ಟು ಕುಡಿಯದೆ ಇದ್ದರೆ ಅವನಿಗೆ ಇರಲಾಗುತ್ತಿರಲಿಲ್ಲ!

ಬಾರಿನ ಮೂಲೆಯೊಂದರಲ್ಲಿ ಕುಳಿತು ತನಗಿಷ್ಟವಾದ ಸಿಗ್ನೇಚರ್ ವಿಸ್ಕಿ ತರಿಸಿ ಹುರಿದ ಕಡಲೆ ಬೀಜದೊಡನೆ ಎರಡು ಪೆಗ್ ಏರಿಸಿದ್ದ. ಅಷ್ಟರಲ್ಲಿ ಒಬ್ಬೊಬ್ಬರಾಗಿ ಬಂದ ಅವನ ಗೆಳೆಯರ ಸೈನ್ಯದಿಂದ ಆ ಟೇಬಲ್ ತುಂಬಿ ಹೋಗಿತ್ತು. ಅಲ್ಲಿಂದ ಶುರುವಾದ ಮಾತು, ಮಾತು, ಮಾತು, ಅಷ್ಟೇ,,,,ಸಮಯ ಸರಿದು ಹೋದ ಪರಿವೆ ಅವರಾರಿಗೂ ಇರಲಿಲ್ಲ!

ಮಧ್ಯಾಹ್ನದ ಊಟಕ್ಕಾಗಿ ಕಾದು ಕಾದು ಸುಸ್ತಾದ ಮಡದಿ ಅವನ ಮೊಬೈಲಿಗೆ ಫೋನ್ ಮಾಡಿದಾಗಲೇ ಅವನಿಗೆ ಗೊತ್ತಾಗಿದ್ದು, ತಾನಿನ್ನೂ ಊಟ ಮಾಡಿಲ್ಲ, ಮನೆಯಲ್ಲಿ ತನಗಾಗಿ ಮಡದಿ, ಮಕ್ಕಳು ಕಾಯುತ್ತಿದ್ದಾರೆಂದು! ಗೆಳೆಯರಿಗೆಲ್ಲಾ ಬೈ ಬೈ ಹೇಳಿ, ಆತುರಾತುರವಾಗಿ ಬಿಲ್ ಪಾವತಿಸಿ, ರಾತ್ರಿಗೆಂದು ಇನ್ನೊಂದು ಕ್ವಾಟರ್ ಪಾರ್ಸೆಲ್ ಮಾಡಿಸಿಕೊಂಡು ಮನೆಗೆ ಬಂದಿದ್ದ.

ಇವನ ಗಾಡಿಯ ಸದ್ದು ಕೇಳಿದೊಡನೆ ಮುದ್ದಿನ ನಾಯಿ ಟಾಮಿ ಕುಣಿದಾಡುತ್ತಾ ಬಂದು ಇವನನ್ನು ಸ್ವಾಗತಿಸಿತ್ತು. ಮನೆಯೊಳಕ್ಕೆ ಹೋದವನನ್ನು ಧುಮುಧುಮನೆ ಉರಿಯುತ್ತಿದ್ದ ಮಡದಿಯ ಕೋಪೋದ್ರಿಕ್ತ ಮುಖ ಸ್ವಾಗತಿಸಿತ್ತು. ಎಷ್ಟು ಹೊತ್ತು ನಿಮಗೋಸ್ಕರ ಕಾಯೋದು, ವಾರಕ್ಕೊಂದು ದಿನ ಹೆಂಡತಿ ಮಕ್ಕಳ ಜೊತೆ ಕೂತು ಊಟ ಮಾಡೋದಿಕ್ಕೆ ಆಗೋದಿಲ್ವಾ ನಿಮಗೆ ಎಂದು ಸರಿಯಾಗಿ ಜಾಡಿಸಿದ್ದಳು.

ಅಲ್ಲಿ ನನ್ನ ಗೆಳೆಯರೆಲ್ಲಾ ಬಂದ್ರು, ಅದಕ್ಕೇ ತಡವಾಯ್ತು ಎಂದು ಕೈ ತೊಳೆದು ಊಟಕ್ಕೆ ಕುಳಿತಿದ್ದ. ಮಕ್ಕಳಿಬ್ಬರೂ ಬಂದು ಎದ ಬಲದಲ್ಲಿ ಆಸೀನರಾಗಿದ್ದರು, ಅವರೊಡನೆ ಜಾಲಿಯಾಗಿ ಮಾತನಾಡುತ್ತಾ, ನಗಿಸುತ್ತಾ, ಮುನಿಸಿಕೊಂಡಿದ್ದ ಮಡದಿಯನ್ನೂ ಜೋಕುಗಳನ್ನು ಹೇಳಿ ನಗಿಸುತ್ತಾ ಮಟನ್ ಖೈಮಾ, ರಾಗಿ ಮುದ್ದೆಯ ಊಟ, ಜೊತೆಗೆ ಸ್ವಲ್ಪ ಬಿರಿಯಾನಿ, ಒಂದು ಮೀನು ಫ್ರೈ ತುಂಡು ಖಾಲಿ ಮಾಡಿದ್ದ! ಇಡೀ ಕುಟುಂಬ ಅಂದು ಸಂತೋಷದಿಂದ ಭಾನುವಾರದ ಭರ್ಜರಿ ಬಾಡೂಟದ ಸವಿಯನ್ನು ಸವಿದಿದ್ದರು, ಮೆತ್ತಗೆ ರೂಮು ಸೇರಿದ ಇವನು ಮತ್ತೊಮೆ ಗಾಢ ನಿದ್ರೆಗೆ ಜಾರಿದ್ದ.

ಸುಮಾರು ಎರಡು ಘಂಟೆಗಳ ನಿದ್ದೆಯ ತರುವಾಯ ಮತ್ತೊಮ್ಮೆ ಮಗನ ಗಲಾಟೆಗೆ ಮಣಿದು ಎದ್ದ, ಮುಖ ತೊಳೆದು ಮಡದಿ ತಂದಿತ್ತ ಕಾಫಿ ಕುಡಿದು ಹಾಲಿನಲ್ಲಿದ್ದ ದಿವಾನ್ ಮೇಲೆ ಪವಡಿಸಿದ. ಸಂಜೆ ಉದಯ ಟಿವಿಯಲ್ಲಿ ವಿಷ್ಣುವರ್ಧನ್ ಅಭಿನಯದ ಚಲನಚಿತ್ರ ಬರುತ್ತಿತ್ತು, ದಿವಾನ್ ಮೇಲೆ ಎರಡು ದಿಂಬು ಹಾಕಿ ಮಲಗಿಕೊಂಡು ಇವನು ಚಿತ್ರ ವೀಕ್ಷಿಸುತ್ತಿದ್ದರೆ ಅವನ ಎಡ ತೋಳಿನ ಮೇಲೆ ಮಗ, ಬಲ ತೋಳಿನ ಮೇಲೆ ಮಗಳು ಅವನನ್ನು ಅಪ್ಪಿಕೊಂಡೇ ಮಲಗಿ ಚಿತ್ರ ವೀಕ್ಷಿಸುತ್ತಿದ್ದರು.

ಮಡದಿ ದಿವಾನ್ ಪಕ್ಕದಲ್ಲಿ ಕುಳಿತು ಚಿತ್ರದಲ್ಲಿ ಬರುತ್ತಿದ್ದ ರಸವತ್ತಾದ ಸನ್ನಿವೇಶಗಳಿಗೆ ನಗುತ್ತಾ, ಮಕ್ಕಳನ್ನೂ ನಗಿಸುತ್ತಾ ಇದ್ದಳು. ಚಿತ್ರ ನೋಡುತ್ತಲೇ ಮಕ್ಕಳಿಬ್ಬರೂ ಅವನ ತೋಳಿನ ಮೇಲೆಯೇ ಮಲಗಿ ನಿದ್ದೆ ಹೋಗಿದ್ದರು. ಒಬ್ಬೊಬ್ಬರನ್ನೇ ಎತ್ತಿಕೊಂಡು ಹೋಗಿ ಅವರ ಹಾಸಿಗೆಯ ಮೇಲೆ ಮಲಗಿಸಿ ಬಂದ ಮಡದಿ ಈಗ ಅದೇ ದಿವಾನ್ ಮೇಲೆ ಅವನನ್ನು ತಬ್ಬಿ ಮಲಗಿದ್ದಳು.

ಅವಳ ಆ ಬೆಚ್ಚನೆಯ ಅಪ್ಪುಗೆ ಅವನಲ್ಲಿ ಕಿಚ್ಚು ಹತ್ತಿಸಿತ್ತು. ಆ ಭಾನುವಾರ ಅವರಿಬ್ಬರಿಗೂ ಶೃಂಗಾರಮಯವಾಗಿತ್ತು, ಲೋಕ ಮರೆತ ಪ್ರಣಯಪಕ್ಷಿಗಳಂತೆ ಸುಖದ ಸುಪ್ಪತ್ತಿಗೆಯಲ್ಲಿ ಅವರಿಬ್ಬರೂ ತೇಲಿ ಹೋಗಿದ್ದರು.
ಅಂದಿನ ತನ್ನ ಸಂಸಾರ ಸುಖವನ್ನು ಕಂಡ ಇವನು ಮನಸ್ಸಿನಲ್ಲಿಯೇ ತನ್ನ ಮನೆದೇವರಿಗೆ ಪ್ರಾರ್ಥಿಸುತ್ತಿದ್ದ, ದೇವರೇ ಈ ನನ್ನ ಕುಟುಂಬ ಯಾವಾಗಲೂ ಹೀಗೆಯೇ ನಗುನಗುತ್ತಾ ಇರುವಂತೆ ನೋಡಿಕೋ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Joyful family and Sunday outing with family, An article by Holenarasipura Manjunatha - Part 3

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ