ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ-ಸಕ್ರಮ : ಇದು ಎಲ್ಲರ ಕಥೆ

By * ಭರತ್ ಎನ್ ಶಾಸ್ತ್ರಿ, ಮೆಸ್ಸಾಚುಸೆಟ್
|
Google Oneindia Kannada News

Bharat N Shastry
ಧಡ್, ಧಾಡ್ ಧಡೀರೆಂದು ಗೋಡೆ ಬಿದ್ದ ಸದ್ದಿಗೆ ಲಕ್ಷ್ಮಿ ಎದೆಗವಚಿಕೊಂಡಿದ್ದ ಎಳೆಮಗು ಬೆಚ್ಚಿ ಎದ್ದು ಚೀರಲಾರಂಭಿಸಿತು. ತನ್ನ ಕಣ್ಣೆದುರಿಗೇ ಕಷ್ಟ ಪಟ್ಟು ಕಟ್ಟಿದ್ದ ಮನೆ ನೆಲಸಮವಾಗಿದ್ದು ನೋಡಿ, ಪ್ರಕಾಶ್ ಮೇಷ್ಟರ ಕಣ್ಣು ಮಂಜಾಯಿತು. ತಾನು ಕಣ್ಣೀರು ಹಾಕುವುದನ್ನು ನೋಡಿದರೆ ಮಗಳು ಕಂಗೆಟ್ಟಾಳು ಎಂದು ಬಾರದ ಕೆಮ್ಮನ್ನು ನಟಿಸಿ ಮುಖಕ್ಕೆ ಟವೆಲು ಅಡ್ಡ ಹಿಡಿದರು.

ಬೆತ್ತದ ಆರಾಮಕುರ್ಚಿಯಲ್ಲಿ ಮಲಗಿಸಿದ್ದ ಹೆಂಡತಿ, ತೆಳುವಾದ ಹಾಸಿಗೆಯಿಂದಲೋ, ಬಿಸಿಲಿನಿಂದಲೋ, ಅಥವಾ ಮಲಗಿಸಿದ ಭಂಗಿ ನೋವುಕೊಡಲು ಹಚ್ಚಿದ್ದರಿಂದಲೋ, "ಏ ಏ.." ಎಂದು ಕರೆಯಲು ಶುರುಮಾಡಿದಳು. ಅವಳ ಹತ್ತಿರ ಹೋಗಿ "ಏನಾಯಿತೇ?" ಎಂದು ಕೇಳಿದಾಗ, ಅವಳಿಗೆ ಮಲಗಿಸಿದಲ್ಲೇ ಎರಡು ಆಗಿದ್ದು ತಿಳಿಯಿತು. ಪಕ್ಕದ ಮನೆಯ ಮಂಜಯ್ಯ ಮತ್ತವರ ಮಕ್ಕಳು ಇನ್ನೂ ಒಡೆಯದ ತಮ್ಮ ಮನೆಯಿಂದ ಒಳಗೆ ಉಳಿದಿರಬಹುದಾದ ಬಳಕೆಯ ವಸ್ತುಗಳನ್ನು ತರಲು ಒಳಗೂ ಹೊರಗೂ ಓಡಾಡುತ್ತಿದ್ದರು, ರಸ್ತೆ ಆಚೆಯ ಸಾಲಿನ ಮನೆಗಳೆಲ್ಲ ಆಗಲೇ ಉದುರಿದ್ದವು. ತನ್ನಂತೆ ಹತಾಶ ನೋಟ ಬೀರುತ್ತಿದ್ದ ಲಿಂಗಯ್ಯ ಮೇಷ್ಟರು ರಸ್ತೆಗೆ ಬರುವುದನ್ನು ನೋಡಿ "ಲಿಂಗಯ್ಯ ಮೇಷ್ಟರೇ, ಸ್ವಲ್ಪ ಇಲ್ಲಿ ಬನ್ನಿ.. ಇವಳಿಗೆ ಹಿಂದೆ ಹೊಂಗೆ ಮರದ ಕೆಳಗೆ ಇಡಬೇಕು.." ಎಂದಾಗ ಈ ಲೋಕಕ್ಕೆ ಮರಳಿ ಬಂದವರಂತೆ "ಬಂದೆ ಸಾರ್.." ಎಂದು ಇವರ ಮನೆಯ ಹತ್ತಿರ ಬಂದರು.

ಹೊಲಸು ವಾಸನೆಗೆ ಅವರು ಮುಖ ಕಿವಿಚಬಹುದೆಂದು "ನೀವು ಅವಳ ತಲೆದೆಸೆಯಲ್ಲಿ ಹಿಡಕೊಳ್ಳಿ ಸಾರ್, ನಾನು ಕಾಲ ಹತ್ತಿರ ಹಿಡಕೊಳ್ತೀನಿ.." ಎಂದರು. ಹೊಂಗೆ ಮರದ ಬುಡದಲ್ಲಿ ನೆರಳು ಚೆನ್ನಾಗಿತ್ತು. ಅಲ್ಲಿ ಆಗಲೇ ಪಕ್ಕದ ಮನೆಯ ನೀಲಕಂಠಮೂರ್ತಿಗಳ ಹೆಂಡತಿ ಮತ್ತು ಕಿರಿಯ ಮಕ್ಕಳಿಬ್ಬರು ಕುಳಿತಿದ್ದರು. ಅವರ ಹಿರಿಮಗ ಮೂರ್ತಿಗಳ ಜತೆ ಅದಾಗಲೇ ಗೋಡೆ ಉದುರಿದ ಮನೆಯಿಂದ ಇನ್ನೂ ಮುರಿಯದೆ ಇರುವ ಸಾಮಾನುಗಳನ್ನು ತರಲು ಸಹಾಯ ಮಾಡುತ್ತಿದ್ದ. ಎಲ್ಲೆಡೆ ದೂಳು, ಕೆಮ್ಮು, ಮತ್ತು ಕಂಗಾಲಾದ ಜನರ ಧಾವಂತದ ಓಡಾಟ..ಮರದ ನೆರಳಲ್ಲೇ ಪದ್ಮಾವತಿಯನ್ನು ಮಲಗಿಸಿ, ಅವಳ ಪಕ್ಕದಲ್ಲೇ ಇರುತ್ತಿದ್ದ ಪಾಂಡ್ಸ್ ಪೌಡರಿನ ಡಬ್ಬಿಯಿಂದ ಸ್ವಲ್ಪ ಸಿಡಿಸಿ, "ಇರೇ, ಗೌರೀನ ಕರಕೊಂಡು ಬರ್ತೀನಿ" ಎಂದು ಮೊಬೈಲ್ ಫೋನ್ ತೆಗೆದು ಫೋನ್ ಮಾಡಲು ಹಚ್ಚಿದರು.

ಜೆಸಿಬಿ ಯಂತ್ರ ಅದಾಗಲೇ ನಾಲ್ಕೈದು ಮನೆಗಳನ್ನು ಉರುಳಿಸಿ ಮುಂದೆ ಹೋಗಿದ್ದರೂ ರಾಕ್ಷಸ ಸದ್ದನ್ನು ಮಾಡುತ್ತಾ ಕೆಲಸ ಮಾಡುತ್ತಿತ್ತು. ಅಳುತ್ತಿದ್ದ ಹೆಂಗಸರು ಮಕ್ಕಳು, ಕಂಗೆಟ್ಟು ಅತ್ತಿಂದಿತ್ತ ಓಡಾಡುತ್ತಿದ್ದ ಗಂಡಸರು, ಇನ್ನೂ ಉರುಳಿಲ್ಲದ ಮನೆಗಳಿಂದ ಕೊನೆಕ್ಷಣದಲ್ಲಿ ಬೆಲೆಬಾಳುವ ವಸ್ತುಗಳನ್ನು ಹೊರಗೆಳೆಯುತ್ತಿದ್ದ ಕಾಲೋನಿ ವಾಸಿಗಳು, ಎಲ್ಲ ಕಡೆ ಹತ್ತು ಅಡಿಗಳಿಗೆ ಒಬ್ಬರಂತೆ ನಿಂತಿದ್ದ ಖಾಕಿಧಾರಿಗಳು, ನಿರ್ಭಾವುಕರಾಗಿ ಕೆಲಸ ಮಾಡುತ್ತಿದ್ದ ಜೆಸಿಬಿ ಯಂತ್ರದ ಮತ್ತು ನಗರಾಭಿವೃದ್ಧಿ ಮಂಡಳಿಯ ಉದ್ಯೋಗಿಗಳು, ಎಲ್ಲವೂ ಸೇರಿ ಅಲ್ಲೊಂದು ಸನ್ನಿವೇಶವನ್ನು ನಿರ್ಮಿಸಿದ್ದವು.

ಗೌರಿಯ ಗಂಡ ಸದಾಶಿವ ಫೋನ್ ತೆಗೆದುಕೊಂಡು "ಮೇಷ್ಟ್ರೇ, ಇನ್ನೊಂದು ಹತ್ತು ನಿಮಿಷದಲ್ಲಿ ಕಳಿಸಿಕೊಡ್ತೀನಿ.." ಎಂದು ಹೇಳಿದ. ಮೇಷ್ಟ್ರು "ಸದಾಶಿವ, ನಿಮ್ಮ ಮನೆಗೆ ಬಂದು ಮಾತಾಡ್ತೀನಪ್ಪ!.. ನೀನು ಹ್ಞೂ ಅಂದರೆ ನಿನ್ನ ಉಪಕಾರ ಜನ್ಮೇಪಿ ಮರೆಯಲ್ಲ.." ಎಂದರು. ಸದಾಶಿವ ದಿಗ್ಭ್ರಮೆಗೊಳಗಾಗಿ "ಇದೇನು ಮೇಷ್ಟ್ರೆ ಹೀಗಂತೀರಿ! ಎಲ್ಲ ಆರೋಗ್ಯ ತಾನೆ.. ಪದ್ಮಾವತಮ್ಮ, ಲಕ್ಷಿ, ಮಗು..." ಎಂದು ತಡವರಿಸಿದ. "ಎಲ್ಲ ಚೆನ್ನಾಗಿದ್ದಾರಪ್ಪ.. ಆದರೆ ಎಲ್ಲ ಮುಗಿದು ಹೋಯಿತು.." ಎಂದು ತುಟಿ ಮೀರಿ ಬಂದ ಮಾತಿಗೆ ಮನಸ್ಸಿನಲ್ಲೇ ಹಲುಬಿದರು. ಸದಾಶಿವ "ಮೇಷ್ಟ್ರೆ..ಎಲ್ಲಿದ್ದೀರಿ? ನಾನು ಈಗಲೇ ಬರ್ತಿದ್ದೀನಿ..ಹೇಳಿ, ಏನಾಯ್ತು?" ಎಂದ. ಸ್ವಲ್ಪ ಸಮಾಧಾನ ತಂದುಕೊಂಡ ಮೇಷ್ಟ್ರು "ನಿಮ್ಮ ಮನೆಯಲ್ಲಿ ಒಂದು ನಾಲ್ಕು ದಿನ ಇರುಕ್ಕೆ ಅವಕಾಶ ಕೊಡ್ತೀಯಾ?" ಎಂದರು. ಸದಾಶಿವ ತಟ್ಟನೆ ಹೊಳೆದಂತೆ.. "ಅಂದರೆ.. ಅಯ್ಯೋ ದೇವರೆ! ನಿಮ್ಮ ಏರಿಯಾದಲ್ಲಿ ಶುರು ಮಾಡಿದರಾ?" ಎಂದು ಕೇಳಿದ. ಉಕ್ಕಿ ಬರುತ್ತಿದ್ದ ದುಃಖವನ್ನು ಪ್ರಯತ್ನಪೂರ್ವಕವಾಗಿ ಹತ್ತಿಕ್ಕಿ ಉತ್ತರಿಸಿದರು "ಹೌದಪ್ಪಾ.. ಅದಕ್ಕೆ ಈಗ ಉಟ್ಟ ಬಟ್ಟೇಲಿ ರಸ್ತೆಯಲ್ಲಿ ನಿಂತಿದ್ದೀವಿ" ಎಂದರು. ಸದಾಶಿವ "ಮೇಷ್ಟ್ರೆ, ನಾನೀಗಲೇ ಬರ್ತೀನಿ, ನೀವು ಏನೂ ಯೋಚನೆ ಮಾಡಬೇಡಿ, ನನ್ನ ಫ್ರೆಂಡ್ ಒಬ್ಬಂದು ಟೆಂಪೊ ಇದೆ ಅದನ್ನು ತಗೊಂಡು ಬರ್ತೀನಿ.. ಎಲ್ಲಾ ಸಾಮಾನು ತಗೊಂಡು ಬರುವ.." ಎಂದ.

ಪ್ರಕಾಶ ಮೇಷ್ಟ್ರಿಗೆ ಆಗಷ್ಟೆ ನಿವೃತ್ತಿಯಾಗಿತ್ತು. ಮಗ ಸತೀಶ ಬಿಎಸ್ಎಫ್ ಗೆ ಇನ್ಸ್ ಪೆಕ್ಟರ್ ಆಗಿ ಸೇರಿ, ಮಗಳಿಗೆ ಚಿತ್ರದುರ್ಗದ ವರನ ಜತೆ ಲಗ್ನ ಗೊತ್ತಾಗಿತ್ತು. ಯಾವಾಗಲೋ ಊರಾಚೆ ಕೊಂಡಿಟ್ಟಿದ್ದ ರೆವಿನ್ಯೂ ಸೈಟಿನಲ್ಲಿ ಮನೆ ಕಟ್ಟಿಸುವ ಅಂದಾಜು ಬಂದದ್ದು ಆಗಲೇ. ಅಲ್ಲಿ ಇಲ್ಲಿ ಸಾಲ ಸೋಲ ಮಾಡಿ, ಮನೆ ಕಟ್ಟಿ ಗೃಹಪ್ರವೇಶ ಮಾಡುವ ಹೊತ್ತಿಗೆ, ತೇಲುಗಣ್ಣು ಮೇಲುಗಣ್ಣಾಗುವಂತೆ ಆಗಿತ್ತು. ಲಕ್ಷ್ಮಿಯ ಮದುವೆಗೆ ಕೂಡಿಟ್ಟಿದ್ದ ಹಣಕ್ಕೇ, ಸದ್ಯ, ಕೈಹಾಕಲಿಲ್ಲವಾದ್ದರಿಂದ ಅವಳ ಮದುವೆ ಸುಗಮವಾಗಿ ನಡೆಯಿತು. ಮನೆ ಬದಲಾಯಿಸಿದ ಆರು ತಿಂಗಳಿಗೆ 'ಟಿಬಿ ಮೆನಿಂಜೈಟಿಸ್' ಎಂಬ ಕಾಯಿಲೆ ಆಗಿ ಪದ್ಮಾವತಿಗೆ ಬಲಗೈ ಬಲಗಾಲು ಸ್ವಾಧೀನ ತಪ್ಪಿ, ಮಾತು ನಿಂತುಹೋಗಿತ್ತು. ಒಂದು ಎರಡು ಎಲ್ಲವೂ ಮಲಗಿದಲ್ಲೇ ನಡೆಯುವಂತಹ ಸ್ಥಿತಿಯಲ್ಲಿ, ಕನಿಷ್ಠ ಸ್ವಂತ ಮನೆಯಲ್ಲಿರುವ ನೆಮ್ಮದಿಯಾದರೂ ಇತ್ತು. ಒಂದು ಕಡೆ ಹೆಂಡತಿಗೆ ಆದ ಅನಾರೋಗ್ಯ ಬಾಧಿಸುತ್ತಿದ್ದರೂ, ಅವಳು ಇನ್ನೂ ಬದುಕಿದ್ದಾಳಲ್ಲ ಎಂಬ ಸಮಾಧಾನ ಇತ್ತು. ಜತೆಗೆ, ಮುಪ್ಪಿನ ದಿನಗಳಲ್ಲಿ ಇನ್ನೊಬ್ಬರ ಅಥವಾ ಮಕ್ಕಳ ಮನೆಗೆ ಹೋಗಿ ಇರಬೇಕಾದ ಅಗತ್ಯವೂ ಇಲ್ಲದೆ ನೆಮ್ಮದಿಯಿಂದ ಇರಲು ಮನೆಯಿದೆ ಎಂದೇ ಕಾಲ ಹಾಕುತ್ತಿದ್ದರು. ಅವರ ಶಿಷ್ಯ ಹಾಗೂ ವಾವೆಯಲ್ಲಿ ಸೋದರಳಿಯನಾದ ಸದಾಶಿವ ಇದೇ ಊರಲ್ಲಿ ಸಣ್ಣ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದು, ಅವನ ಹೆಂಡತಿ ಗೌರಿ, ತುಂಬ ಒಳ್ಳೆಯ ಹುಡುಗಿ, ಮಧ್ಯಾಹ್ನ ಬಂದು ಒಮ್ಮೆ ಪದ್ಮಾವತಿಗೆ ಊಟ ಮಾಡಿಸಿ ಹೋಗಲು ಒಪ್ಪಿದ್ದರಿಂದ, ಹೇಗೋ ಕಾಲ ಹೋಗುತ್ತಿತ್ತು.

ಹೆಸರಿಗೆ ಪಟ್ಟಣವಾದರೂ, ಊರಾಚೆ ಇದ್ದುದರಿಂದ ಮತ್ತು ರೆವಿನ್ಯೂ ಸೈಟಿನ ಮನೆಯಾದ್ದರಿಂದ ಎಲ್ಲಕ್ಕೂ ತತ್ವಾರ, ಬಸ್ಸು ಕೂಡ ಒಂದು ಕಿಲೋಮೀಟರ್ ಆಚೆ ಇದ್ದ ಕುವೆಂಪುನಗರದ ಸರ್ಕಲ್ ನಲ್ಲಿ ನಿಲ್ಲುತ್ತಿತ್ತು. ಕಚ್ಚಾರಸ್ತೆಯಲ್ಲಿ ಸೈಕಲ್ ಓಡಿಸುವುದಾಗಲೀ, ಅಥವಾ ಟೂ ವೀಲರ್ ಓಡಿಸುವುದಾಗಲೀ ನೈಪುಣ್ಯದ ವಿಷಯ. ಹೀಗಿದ್ದರೂ, ಹತ್ತಿರ ಹತ್ತಿರ ಐವತ್ತು ಕುಟುಂಬಗಳು ಆಗಲೇ ಒಕ್ಕಲಿದ್ದವು. ಸೈಟು ಮಾಡಿಸಿದವರ ದುರಾಸೆಯೋ, ಅಥವಾ ಅಸಂಬದ್ಧ ಯೋಜನೆಯೋ, ಬೀದಿಗಳು ಇಕ್ಕಟ್ಟಾಗಿಯೂ, ಎಡ್ಡ ತಿಡ್ಡ ಅಳತೆಯ ನಿವೇಶನಗಳೂ ಇದ್ದವು. ಬೀದಿ ದೀಪಗಳಿಲ್ಲದೆ, ಕತ್ತಲಾದ ನಂತರ ಹೊರಗೆ ಓಡಾಡುವುದಕ್ಕೆ ಟಾರ್ಚ್ ಆಬಾಲವೃದ್ಧರ ಕೈಲೂ ಇರುತ್ತಿತ್ತು. ಸಾಲದ್ದಕ್ಕೆ ಬೀದಿನಾಯಿಗಳೂ ಈ ಅಯೋಮಯ ಸ್ಥಿತಿಗೆ ತಮ್ಮ ಕೊಡುಗೆ ನೀಡುತ್ತಿದ್ದವು. ಹೆಚ್ಚಿನ ಮನೆಗಳಲ್ಲಿ 'ಪಿಟ್' ವ್ಯವಸ್ಥೆಯ ಶೌಚಾಲಯಗಳಿದ್ದರೂ, ಬಹುತೇಕ ಮಕ್ಕಳು ಮರಿ ರಸ್ತೆಯಲ್ಲಿ ಕಕ್ಕ ಮಾಡುತ್ತಿದ್ದದ್ದೂ ಅನಿವಾರ್ಯವಾಗಿತ್ತು. ಇನ್ನು ಮಳೆಗಾಲದಲ್ಲಂತೂ ದೇವರಿಗೇ ಪ್ರೀತಿ, ಯಾವುದೇ 'ಸ್ಟಾರ್ಮ್ ಡ್ರೇನ್' ವ್ಯವಸ್ಥೆಯಿಲ್ಲದೆ ನೀರು ನಿಂತು ಹಲವು ದಿನಗಳ ತನಕ ರಸ್ತೆಗಳು ಕೆಸರುಮಯವಾಗಿರುತ್ತಿದ್ದವು. ನಗರಾಭಿವೃದ್ಧಿ ಮಂಡಳಿ ಈ ಏರಿಯಾವನ್ನು ನಗರಸಭೆಗೆ ಸೇರಿಸಿದಾಗ ಎಲ್ಲ ಸರಿಯಾಗುತ್ತದೆ ಎಂಬ ಆಸೆ ಹೊತ್ತು ಎಲ್ಲ ಮನೆಗಳೂ ತಮ್ಮ ಶಕ್ತ್ಯಾನುಸಾರ ಬೆಳೆದಿದ್ದವು. ಕೆಲವರಂತೂ ಧೈರ್ಯ ಮಾಡಿ, ಮಹಡಿ ಮನೆಗಳನ್ನೂ ಕಟ್ಟಿದ್ದರು.

ನಾಲ್ಕು ತಿಂಗಳ ಕೆಳಗೆ ಅಳಿಯ ಫೋನ್ ಮಾಡಿ ಮಗಳನ್ನು ಹೆರಿಗೆಗೆ ಕಳಿಸಿಕೊಡುವುದಾಗಿ ಹೇಳಿದಾಗ ಮೇಷ್ಟರಿಗೆ ಸಂತೋಷವೇ ಆಗಿತ್ತು. ಮೊದಲ ಹೆರಿಗೆ, ತಾಯಿ ಇದ್ದೂ ಇಲ್ಲದ ಹುಡುಗಿಯಂತೆ ಆದ ಮಗಳಿಗೆ ಯಾವುದೇ ಕೊರತೆ ಬಾರದಂತೆ ಊರಿನಿಂದ ತನ್ನ ಹಿರಿಯತ್ತೆಯನ್ನು ಕರೆಸಿ ಮುತುವರ್ಜಿಯನ್ನು ಪ್ರಕಾಶ್ ಮೇಷ್ಟ್ರು ವಹಿಸಿದರು.

ಎರಡು ಮೂರುವಾರದ ನಂತರ ಅವರು ಮರಳಿ ಹೊರಡುವ ಮೊದಲು "ಹದಿನೈದು ದಿನಗಳಲ್ಲಿ ಉತ್ತರ ಕೊಡುವಂತೆ" ನಗರಾಭಿವೃದ್ಧಿ ಮಂಡಳಿಯಿಂದ ಒಂದು ನೋಟಿಸ್ ಬಂತು. ಅದರ ಒಕ್ಕಣೆ ನಿಮ್ಮ ಮನೆಯಿರುವ ಸದರಿ ನಿವೇಶನ ನಗರಾಭಿವೃದ್ಧಿ ಮಂಡಳಿಯ ನಿಯಮಗಳಿಗೆ ಅನುಸಾರವಾಗಿ ನಿರ್ಮಾಣವಾಗಿಲ್ಲ. ಆದ್ದರಿಂದ ಅದು ಅಕ್ರಮ ನಿವೇಶನ, ಹೀಗಾಗಿ ಸಕ್ರಮಗಳಿಸಲು ದಂಡ ಕಟ್ಟಬೇಕು. ಇಲ್ಲದಿದ್ದರೆ ಮನೆಯನ್ನು ಅಕ್ರಮ ಕಟ್ಟಡವೆಂದು ಪರಿಗಣಿಸಿ ಕೆಡವಲಾಗುತ್ತದೆ. ಇದನ್ನು ಓದಿ ಮೇಷ್ಟರು ಆಚೀಚೆ ಎಲ್ಲ ಮನೆಗಳಿಗೂ ಅದೇ ನೋಟಿಸ್ ಬಂದಿದೆಯೆಂದು ತಿಳಿದ ನಂತರ, "ನೋಡಿಕೊಳ್ಳೋಣಾ.. ಎಲ್ಲರಿಗೂ ಆದದ್ದೇ ನಮಗೂ ಆಗತ್ತೆ.." ಎಂಬ ಭಂಡ ಧೈರ್ಯ ತಂದುಕೊಂಡಿದ್ದರು. ಒಂದಿಬ್ಬರು ಕೋರ್ಟು, ಇಂಜಂಕ್ಷನ್ನು, ಸ್ಟೇ, ಕೇಸೆಂದು ಮಾತು ತೆಗೆದಾಗ ಅದು ಅರ್ಥವಾಗುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. "ನಗರಸಭೆಗೆ ಎಂದೋ ಸೇರಬೇಕಿದ್ದ ಜಾಗ.. ಇವತ್ತಲ್ಲಾ ನಾಳೆ ಸೇರಿಸಿಕೊಳ್ತಾರೆ.. ಅದಕ್ಕೆ ನಾವು ಯಾಕೆ ಕೋರ್ಟು ಕಚೇರಿ ಅಂತ ಗುದ್ದಾಡಬೇಕು" ಎಂದು ಯೋಚಿಸಿದವರೇ ಹೆಚ್ಚು ಮಂದಿ. ಹಾಗೂ ಹತ್ತಿಪ್ಪತ್ತು ಮಂದಿ ಯಾವುದೋ ವಕೀಲರನ್ನು ಕಂಡು ಬರಲು ಹೊರಟಾಗ, ಪಕ್ಕದ ಮನೆಯ ನೀಲಕಂಠ ಮೂರ್ತಿಗಳಿಗೆ ಪ್ರಕಾಶ ಮೇಷ್ಟ್ರೂ ಒಂದೈನೂರು ಹಾಕಿ "ನನ್ನದೂ ಹೆಸರು ಕೊಡಿ" ಎಂದಿದ್ದರು. ಮನೆಯಲ್ಲಿ ಕೈತುಂಬಾ ಕೆಲಸಗಳನ್ನು ಇಟ್ಟುಕೊಂಡು ವಕೀಲರ ಕಚೇರಿ, ಕೋರ್ಟು ಸುತ್ತುವುದಕ್ಕೆ ಅವರಿಗೂ ಕಷ್ಟ ಎಂದು ನೀಲಕಂಠ ಮೂರ್ತಿ "ಆಗಲಿ" ಎಂದಿದ್ದರು.

ಆದರೆ ಆಡಳಿತ ಇಷ್ಟು ತ್ವರಿತಗತಿಯಲ್ಲಿ ಕೆಲಸ ಮಾಡುತ್ತದೆ ಅಂತ ಯಾರೂ ಊಹಿಸಿರಲಿಲ್ಲ. ಹಿಂದಿನ ಸಾಯಂಕಾಲ ಸರ್ಕಲ್ಲಿನ ಕಡೆಯಿಂದ ಎರಡು ಜೆಸಿಬಿ ಯಂತ್ರಗಳೂ, ಒಂದು ಬುಲ್ ಡೋಜರೂ ಬಂದಾಗ ಎಲ್ಲರೂ ಅಂದು ಕೊಂಡಿದ್ದು ರಸ್ತೆ ಅಗಲ ಮಾಡಲಿಕ್ಕೋ, ಅಥವಾ ಇಲ್ಲಿ ನೀಲನಕ್ಷೆಯ ಪ್ರಕಾರ ಹೋಗಬೇಕಿದ್ದ ದೊಡ್ಡ ಮೋರಿ ತೋಡಲೋ ಬಂದ ಯಂತ್ರಗಳು ಅಂದುಕೊಂಡು ಎಲ್ಲರೂ ಸುಮ್ಮನಿದ್ದರು. ಕತ್ತಲಾದ ನಂತರ ಆ ಯಂತ್ರಗಳ ಹತ್ತಿರ ಯಾರೂ ಇಲ್ಲದೆ ಹೋದದ್ದೂ ಜನರಿಗೆ ಪ್ರಶ್ನೆ ಕೇಳಲಿಕ್ಕೆ ಅವಕಾಶವಾಗಲಿಲ್ಲ. ಭಾನುವಾರವಾದ್ದರಿಂದ ಬೆಳಗಾದ ನಂತರ, ಇನ್ನೂ ಎಲ್ಲರೂ ತಮ್ಮ ತಮ್ಮ ರಜಾದಿನದ ಮೂಡಿನಲ್ಲಿರುವಾಗಲೇ, ನಗರಾಭಿವೃದ್ಧಿ ಮಂಡಳಿಯ ಮುಖ್ಯ ಆಫೀಸರೂ, ಮತ್ತು ಸಶಸ್ತ್ರ ಪೋಲಿಸ್ ಸಿಬ್ಬಂದಿಯೂ ಬಂದು ಎಲ್ಲರಿಗೂ ಈ ಮನೆಗಳನ್ನು ಕೆಡವಲಿದೆಯೆಂದು ಹೇಳಿದಾಗ, ಒಮ್ಮೆಲೇ, ಜೇನುಗೂಡಿಗೆ ಕಲ್ಲೆಸೆದಂತಾಯಿತು. ಕೆಲವು ಬಿಸಿರಕ್ತದ ತರುಣರು, ಕಲ್ಲೆಸೆಯಲು ಮುಂದಾದರೂ, ಕೈಯಲ್ಲಿ ಬಂದೂಕು ಹಿಡಿದ ಪೋಲಿಸ್ ಪಡೆ ನೋಡಿ, ಹೆಚ್ಚಿನ ಜನರಿಗೆ ಬೆವರಿಳಿಯಿತು.

ಯಂತ್ರ ನಡೆಸುವವರ ಕಣ್ತಪ್ಪಿನಿಂದಲೋ, ಅಥವಾ ಸೈಟುಗಳ ಅಂದಾಜಿಲ್ಲದೆಯೋ, ಒಂದೆರಡು ಮನೆಗಳಿಗೆ ಅಂತ ಹೇಳಿಕೊಳ್ಳುವ ಹಾನಿಯೇನೂ ಆಗಿರಲಿಲ್ಲ. ಅವರ ಮನೆಯಲ್ಲಿ ಅತ್ತು ಅತ್ತು ಸುಸ್ತಾಗಿದ್ದ ಹೆಂಗಸರು, ಮಕ್ಕಳು, ಮತ್ತು ಕೆಲವು ಕೈಲಾಗದ ವೃದ್ಧರನ್ನು ಕೂಡಿಸಿ, ಮನೆಯ ಯಜಮಾನರೆನ್ನಿಸಿಕೊಳ್ಳುವ ಎಲ್ಲರೂ ಕಾಲೋನಿಯ ಅಂಚಿನಲ್ಲಿದ್ದ ಅರಳಿ ಮರದ ಕೆಳಗೆ ಸೇರಿದರು. ಯಾರೋ ಹೋಗಿ ವಕೀಲರನ್ನು ಕರೆದು ತಂದರು. ಸದಾಶಿವ ಮತ್ತು ಗೌರಿಯ ದಾರಿ ಕಾಯುತ್ತಿದ್ದ ಪ್ರಕಾಶ ಮೇಷ್ಟ್ರು, ಲಿಂಗಯ್ಯ ಮತ್ತು ನೀಲಕಂಠ ಮೂರ್ತಿಗಳಿಗೆ "ನೀವು ಹೋಗಿ, ನಾನು ಇವಳಿಗೆ ಏನಾದರೂ ವ್ಯವಸ್ಥೆ ಮಾಡಿ ಬರುತ್ತೇನೆ" ಎಂದರು. ಲಕ್ಷ್ಮಿ ಅಮ್ಮನ ಹತ್ತಿರವೇ ಕುಳಿತಿದ್ದು, ಅವಳ ಮಗು ಮತ್ತೊಮ್ಮೆ ನಿದ್ದೆಗೆ ಜಾರಿತ್ತು. ಬಿಳಿಚಿಕೊಂಡ ಅವಳ ಮುಖದಲ್ಲಿ ಕಂಬನಿ ಒಣಗಿದ ಕರೆಯಿತ್ತು.

ಸದಾಶಿವ ತರಾತುರಿಯಲ್ಲಿ ಟೆಂಪೋವೊಂದರಲ್ಲಿ ತನ್ನೊಬ್ಬ ಸ್ನೇಹಿತನನ್ನೂ ಕರೆದು ತಂದ. ಹಿಂದೆ ಆಟೋ ಒಂದರಲ್ಲಿ ಬಂದ ಗೌರಿಯನ್ನು ಕಂಡು ಲಕ್ಷ್ಮಿಗೆ ಕೊಂಚ ತಡೆಹಿಡಿದಿದ್ದ ದುಃಖ ಮತ್ತೊಮ್ಮೆ ಕಟ್ಟೆ ಒಡೆದಂತೆ ಹರಿಯಿತು. "ನೋಡಿ ಅಕ್ಕಾ, ಹೇಗಾಗಿಹೋಯಿತು.. ಮನೆ.." ಎಂದು ಬಿಕ್ಕಿ ಬಿಕ್ಕಿ ಅತ್ತಳು. ಗೌರಿಯ ಕಣ್ಣಲ್ಲೂ ನೀರು ತುಂಬತೊಡಗಿತು. ಸದಾಶಿವ ಮತ್ತವನ ಗೆಳೆಯ ಮೇಷ್ಟ್ರನ್ನು ಯಾವ ಸಾಮಾನುಗಳನ್ನು ಸಾಗಿಸಬೇಕೆಂದು ವಿಚಾರಿಸಲು ಪ್ರಾರಂಭಿಸಿದರು. ಗೌರಿಯ ಗುರುತು ಹತ್ತಿದ ಪದ್ಮಾವತಿಗೆ ಅವಳು ಮತ್ತು ಮಗಳು ಅಳುತ್ತಿರುವುದನ್ನು ಕಂಡು ಅದೇನು ತೋಚಿತೋ, "ಏ ..ಏ.." ಎಂದು ಕಣ್ಣೀರು ಹಾಕತೊಡಗಿದರು.

ನಿವೃತ್ತಿಯ ನಂತರ ಪಿಂಚಿಣಿ ಹಣವಷ್ಟೇ ಮನೆ ನಡೆಸಲು, ಮತ್ತು ಪದ್ಮಾವತಿಯ ಔಷಧೋಪಚಾರದ ಖರ್ಚನ್ನು ಭರಿಸಲು ಸಾಧ್ಯವಿಲ್ಲ ಎಂದು, ಪ್ರಕಾಶ್ ಮೇಷ್ಟರು ಬಟ್ಟೆಯ ಮಾರಾಟ ಪ್ರಾರಂಭಿಸಿದ್ದರು. ಪೇಟೆಯ ಸರ್ಕಲ್ ನಲ್ಲಿ ಇದ್ದ ಬಟ್ಟೆ ಅಂಗಡಿಯ ಸೋಮನ ಹತ್ತಿರ ಕಟ್ ಪೀಸುಗಳನ್ನು ತಂದು, ಸೈಕಲ್ ಕ್ಯಾರಿಯರ್ ಗೆ ಒಂದು ಲೋಡು ಬಟ್ಟೆ ಪೇರಿಸಿಕೊಂಡು ಪದ್ಮಾವತಿಗೆ ಗೌರಿ ಊಟ ಮಾಡಿಸುವ ಹೊತ್ತಿಗೆ ಒಂದು ಐದು, ಆರು ಪ್ಯಾಂಟ್ ಪೀಸುಗಳು, ಇಲ್ಲವೇ ಷರಟು ಪೀಸುಗಳನ್ನು ಹತ್ತಿರದ ಹಳ್ಳಿಗಳಲ್ಲಿ ಇಲ್ಲವೆ ಅದೇ ಕಾಲೊನಿಯಲ್ಲಿ ಮಾರಿ ಬರುತ್ತಿದ್ದರು. ಆ ಬಟ್ಟೆಯ ಲೋಡನ್ನು ಜೋಪಾನವಾಗಿ ಮೊದಲು ಟೆಂಪೋದಲ್ಲಿ ಪ್ರಕಾಶ್ ಮೇಷ್ಟರು ಇಟ್ಟರು. ಹೆಚ್ಚಿನ ಸಾಮಾನೇನೂ ಇರದಿದ್ದರೂ, ಗಾಜಿನ, ಪಿಂಗಾಣಿಯ, ಪಾತ್ರೆಗಳನ್ನು, ಜತೆಯಲ್ಲಿ ಮಗನ ಎನ್ ಸಿ ಸಿ ಯ ಫೋಟೊಗಳು, ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಳಿಸಿದ ಟ್ರೋಫಿಗಳನ್ನು ಇಟ್ಟಿದ್ದ ಶೋ ಕೇಸಿಗೆ ಪೆಟ್ಟಾಗದೇ ಉಳಿದಿದ್ದರಿಂದ ಅವುಗಳನ್ನು ಪ್ಯಾಕ್ ಮಾಡುವಾಗ ಸ್ವಲ್ಪ ಸಮಯ ಹಿಡಿಯಿತು. ಅಳಿದುಳಿದ ಎಲ್ಲ ಸಾಮಗ್ರಿಗಳನ್ನು ಟೆಂಪೊ ಹಿಂದೆ ಹಾಕಿ, ಪದ್ಮಾವತಮ್ಮನವರನ್ನು ಆರಾಮಕುರ್ಚಿಯ ಸಮೇತ ಟೆಂಪೊದಲ್ಲೇ ಇರಿಸಿದರು. ಆಟೊದಲ್ಲಿ ಕೈಲಿ ಹಿಡಿದುಕೊಳ್ಳುವ ಬಟ್ಟೆಗಳನ್ನೂ ಮತ್ತು ಮಗುವನ್ನು ಕರೆದುಕೊಂಡು ಲಕ್ಷ್ಮಿಯೂ, ಪದ್ಮಾವತಮ್ಮನವರ ಜತೆಗೆ ಟೆಂಪೋದಲ್ಲಿ ಗೌರಿಯೂ ಹೋಗುವುದೆಂದಾಯಿತು. ಸದಾಶಿವ "ಮೇಷ್ಟ್ರೆ, ನಮ್ಮ ಪಕ್ಕದ ಮನೆಯವರ ಮಹಡಿಯಲ್ಲಿ ಒಂದು ರೂಮ್ ಖಾಲಿ ಇದೆ. ಅವರಜತೆ ಮಾತಾಡಿದ್ದೀನಿ, ಎರಡು ಮೂರು ತಿಂಗಳಿಗೆ ಬಾಡಿಗೆಗೆ ಕೊಡೋದಕ್ಕೆ ತೊಂದರೆ ಇಲ್ಲ ಅಂದಿದ್ದಾರೆ. ಇವತ್ತು ರಾತ್ರಿಗೆ ಅಡಿಗೆ ಮಾಡೋದೇನೂ ಬೇಡಾ. ಲಕ್ಷ್ಮಿ ಮತ್ತು ಮಗು ಎರಡು ದಿನ ನಮ್ಮನೇಲಿ ಇರಲಿ.." ಎಂದ.

ಅದುವರೆಗೆ ಕನಸಿನಲ್ಲಿ ನಡೆಯುತ್ತಿದ್ದಂತೆ ಇದ್ದ ಪ್ರಕಾಶ್ ಮೇಷ್ಟರಿಗೆ ವರ್ತಮಾನದ ಅರಿವಾಗಿ ಕಣ್ಣು ತುಂಬಿ ಬಂತು. "ನೀನೇ ನನ್ನ ಹಿರಿ ಮಗ ಅಂತ ತಿಳಕೊಳ್ತೀನಪ್ಪ.. ಇಂಥಾ ಪರಿಸ್ಥಿತಿ ಬರುತ್ತೆ ಅಂತ ಕನಸುಮನಸಿನಲ್ಲೂ ಯೋಚಿಸಿರಲಿಲ್ಲ.." ಮತ್ತೇನೂ ಹೇಳಲಾರದೆ ಗದ್ಗದಿತರಾದರು. ಅವರೂ ಟೆಂಪೋ ಏರಲು ಬಂದಾಗ ಸದಾಶಿವ "ಮೇಷ್ಟರೆ ನೀವು ಮೀಟಿಂಗಿಗೆ ಹೋಗಿಬನ್ನಿ..ನೀವಿದ್ದರೆ ನಿಮಗೆ ಏನು ನಡೆಯುತ್ತಿದೆ ಅಂತ ತಿಳಿಯುತ್ತದೆ..ನಾವೆಲ್ಲ ನೋಡಿಕೊಳ್ತೀವಿ.." ಎಂದ. ಹೌದೆನ್ನಿಸಿ ಅರಳಿಕಟ್ಟೆಯ ಕಡೆ ಮೇಷ್ಟ್ರು ಸೈಕಲ್ ಓಡಿಸಿದರು.

ದಾರಿಯುದ್ದಕ್ಕೂ ಬಿದ್ದ ಮನೆಗಳಿಂದ ಅಳಿದುಳಿದ ಉಪಯುಕ್ತ ಸಾಮಾನುಗಳನ್ನು ಹೆಕ್ಕುವ ಕಾಲೊನಿಯ ಜನತೆ, ನಡೆದ ಘಟನೆಗಳನ್ನು ಇನ್ನೂ ನಂಬಲಾಗದೆ ಅಳುತ್ತಿದ್ದ ಹೆಂಗಳೆಯರು, ನಡೆದ ಘಟನೆಗಳಿಗೆ ಮೂಕ ಪ್ರೇಕ್ಷಕರಾದ ಹತ್ತಿರದ ದಾರಿಹೋಕರು, ಇವರನ್ನೆಲ್ಲ ದಾಟಿ, ಪ್ರಕಾಶ್ ಮೇಷ್ಟರು ಅರಳಿಕಟ್ಟೆ ತಲುಪಿದರು. ಅದಾವ ಮಾಯದಲ್ಲಿ ರಾಜಕೀಯದವರಿಗೂ ಇದರ ವಾಸನೆ ಹತ್ತಿತ್ತೋ, ವಕೀಲರಿಗೆ ಹಾಕಿದ್ದ ಕುರ್ಚಿಯಲ್ಲಿ ಇತ್ತೀಚೆಗಷ್ಟೇ ವಿಶ್ವವಿದ್ಯಾಲಯದ ಸಿಂಡಿಕೇಟ್ ಗೆ ಸ್ಪರ್ಧಿಸಿ ಪ್ರೊ ತಾರಾನಾಥರನ್ನು ಸೋಲಿಸಿದ್ದ ವಿಜಯಪ್ರಕಾಶ್ ಮತ್ತೊಂದು ಕುರ್ಚಿಯಲ್ಲಿ ದಳದ ನರಸೇಗೌಡರು ಇಬ್ಬರೂ ಕುಳಿತಿದ್ದಿದ್ದು ಸಭೆ ಸಮೀಪಿಸುತ್ತಿದ್ದ ಪ್ರಕಾಶ್ ಮೇಷ್ಟರಿಗೆ ಕಾಣಿಸಿತು. ಲಾಯರು ಜಯದತ್ತ ನಗರಸಭೆಯ ಯಾವ ಕಾನೂನಿನ ಪ್ರಕಾರ ಅದು ಸಕ್ರಮ ಸೈಟುಗಳಲ್ಲವೆಂಬುದನ್ನು ಹೇಳುತ್ತಿದ್ದರು.

ಅವರು ಹೇಳುವುದನ್ನು ಕೇಳಿದ ನಂತರ ತುಸು ದೂರದಲ್ಲಿ ಕಟ್ಟೆಯ ಮೆಟ್ಟಲಿನ ಹತ್ತಿರ ಕುಳಿತಿದ್ದ ಕೆಲವು ಯುವಕರು "ಅದ್ಯಾವ ಕಾನೂನು ಸಾರ್.. ಈಗ ಉರುಳಿಸಿದ ಮನೆಗಳಿಗೆ ಯಾರು ಪರಿಹಾರ ಕೊಡ್ತಾರೆ?" ಎಂದು ಸಿಟ್ಟಿನಿಂದ ಕೇಳಿದರು. ಈ ಪ್ರಶ್ನೆಯಿಂದ ಸ್ವಲ್ಪವೂ ವಿಚಲಿತರಾಗದೆ ಜಯದತ್ತರು "ನೋಡಿ, ನೀವು ಈ ಪ್ರಶ್ನೆಯನ್ನು ನನಗೆ ಕೇಳುವುದರಿಂದ ಪ್ರಯೋಜನ ಇಲ್ಲ.. ನಾಳೆ ನಗರಾಭಿವೃದ್ಧಿ ಮಂಡಲಿ ನಿರ್ದೇಶಕರನ್ನು ನೋಡಕ್ಕೆ ಹೋದಾಗಲೂ ಇದಕ್ಕೆ ಪರಿಹಾರ ಸಿಗುವ ಗ್ಯಾರಂಟಿ ಕೂಡಾ ಇಲ್ಲ.. ಇದಕ್ಕೆ ನೀವು ನಿಮ್ಮ ಶಾಸಕರಿಗೆ, ಸ್ಥಳೀಯ ಲೋಕಸಭಾ ಸದಸ್ಯರಿಗೆ, ಮತ್ತು ಮುಖ್ಯಮಂತ್ರಿಗಳಿಗೆ ಒಂದು ಮನವಿ ಕೊಡುವ ಕೆಲಸ ಮಾಡಬೇಕಾಗುತ್ತದೆ.." ಎಂದರು.

ಇದನ್ನೇ ಕಾಯುತ್ತಿದ್ದ ವಿಜಯಪ್ರಕಾಶ ಬಾಯಿ ಹಾಕಿ "ಅಂದರೆ ನೀವು ಹೇಳುವುದು ಕೈ ಪಾರ್ಟಿಯವರನ್ನ ನೋಡಿ ಬನ್ನಿ ಅಂತಲಾ.. ಅದಕ್ಕೇ ನಾನು ಹೇಳುವುದು.. ಅವರ ಕೈಲಿ ಏನೂ ಸಾಗಲ್ಲ ಅಂತ.. ಅವರ ಪಾರ್ಟಿಯವರೇ ಮಂಡಳಿ ಅಧ್ಯಕ್ಷರೂ ಆಗಿದ್ದಾರೆ.. ನಿಮಗೆ ನ್ಯಾಯ ಸಿಗೋದು ಇನ್ನು ದೂರದ ಮಾತೇ ಬಿಡಿ.." ಅಂದ. ಜಯದತ್ತರು ಅವನ ಕಡೆ ಒಮ್ಮೆ ಅಸಮಾಧಾನದಿಂದ ನೋಡಿ ಸಭೆಗೆ ಹೇಳಿದರು.."ನೋಡಿ, ಕಾನೂನಿನ ಪ್ರಕಾರ ಏನು ಮಾಡಬಹುದು ಅಂತ ನಾನು ಹೇಳಲಿಕ್ಕೆ ಬಂದಿದ್ದೀನಿ, ಮೊಟ್ಟ ಮೊದಲನೆಯದಾಗಿ ಇದು ರೆವಿನ್ಯೂ ನಿವೇಶನಗಳ ಬಡಾವಣೆ. ಇದನ್ನ ನಗರಸಭೆ ಅಕ್ರಮ ನಿವೇಶನಗಳು ಅಂತ ನಿರ್ಣಯಿಸುವುದಕ್ಕೆ ಅವರ ಹತ್ತಿರ ಕಾನೂನಿನ ನಿಯಮಾವಳಿ ಇದೆ. ಕೃಷಿಭೂಮಿಯಾಗಿದ್ದ ಇದನ್ನ ನಿವೇಶನಗಳಾಗಿ, ವಸತಿಯೋಗ್ಯ ಅಂತ ಮಾಡಬೇಕಾದರೆ ಇರುವ ನಿಯಮಾವಳಿಗಳನ್ನ ಪಾಲಿಸಲಿಲ್ಲ ಅಂತ ನಿವೇಶನ ಹಂಚಿದವರ ಮೇಲೆ ಕ್ರಮ ಕೈಗೊಳ್ಳಬಹುದು.."

ಇದನ್ನು ಕೇಳಿ ನರಸೇಗೌಡರ ಮುಖ ವಿವರ್ಣವಾಯಿತು.. ಏಕೆಂದರೆ ಬಡಾವಣೆ ನಿರ್ಮಿಸಿದ್ದು ಅವರ ದಾಯಾದಿಗಳೇ ಆದ ಮರಿತಿಮ್ಮೇಗೌಡರು." ಆದರೆ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲ.. ಯಾಕೆಂದರೆ, ಅವರ ಹತ್ತಿರ ನಿಮಗೆ ಕಿಲುಬು ಕಾಸೂ ಹತ್ತುವುದಿಲ್ಲ.. ಈಗ ಇರುವ ಆಯ್ಕೆ ಅಂದರೆ ನಿಮಗೆ ಈ ತನಕ ಆಗಿರುವ ನಷ್ಟ ಮೀರಿ ಇನ್ನೇನೂ ಆಗದ ಹಾಗೆ ನೋಡಿಕೊಳ್ಳುವುದು ಮುಖ್ಯ.." ವಿಜಯಪ್ರಕಾಶ ಮತ್ತೆ ಬಾಯಿ ಹಾಕಿದ "ಅದು ಹೇಗೆ ಇದನ್ನ ಅಕ್ರಮ ಅಂತ ನಿರ್ಣಯಿಸಿದರು ಸಾರ್.. ನಾವ್ಯಾರೂ ಓಟು ಹಾಕಲಿಲ್ಲವಾ ಕಳೆದ ಎಲೆಕ್ಷನ್ನಲ್ಲಿ? ಇಲ್ಲಿ ಅಕ್ರಮ ಬಡಾವಣೆ ಅಂದರೆ ಓಟರ್ ಲಿಸ್ಟ್ ಎಲ್ಲಿಂದ ತಂದರು..ನಾನು ಇತ್ತೀಚೆಗಷ್ಟೇ ಸಿಂಡಿಕೇಟ್ ಗೆ ಚುನಾಯಿತನಾಗಿದ್ದೀನಿ" ಕೊಂಚ ಹೆಮ್ಮೆಯಿಂದ ಹೇಳಿದ".. ನನ್ನ ಓಟರ್ ಗಳಿಗೆ ಇದೇ ವೆಂಕಟಾದ್ರಿಪುರ ಅಂತ ಅಡ್ರೆಸ್ ಹಾಕಿದರೆ ನನ್ನ ಮನವಿ ತಲುಪ್ತಾ ಇತ್ತಲ್ಲ!" ಎನ್ನುವಾಗ ಅವನ ನೋಟ ಪ್ರಕಾಶ್ ಮೇಷ್ಟರು ಮತ್ತು ನೀಲಕಂಠ ಮೂರ್ತಿಗಳ ಕಡೆ ಹರಿಯಿತು..

ಪ್ರಕಾಶ್ ಮೇಷ್ಟರಿಗೆ ತಮ್ಮೂರಿನವರಾದ ಪ್ರೊ ತಾರಾನಾಥರಿಗೆ ನೀಲಕಂಠ ಮೂರ್ತಿಗಳ ಜತೆ ಸೇರಿ ಕ್ಯಾನ್ವಾಸ್ ಮಾಡಿದ್ದು ನೆನಪಾಗಿ ಮನಸ್ಸು ಕೊಂಚ ಮುಕ್ಕಾಯಿತು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ನಮಗೆ ಸಿಗಬಹುದಾದ ಪರಿಹಾರಕ್ಕೆ ಏನಾದರೂ ತೊಂದರೆ ಮಾಡ್ತಾನಾ ಎನ್ನುವ ಭಾವನೆ ಇಬ್ಬರ ಮನಸ್ಸಿನಲ್ಲೂ ಹರಿದು ಹೋಯಿತು. ಲಾಯರು ಜಯದತ್ತರು ಮತ್ತೆ ಮಾತನಾಡಲು ಶುರು ಮಾಡಿದರು.."ನೋಡಿ, ಈಗ ಒಡೆದು ಹಾಕಿದ ಮನೆಗಳಿಗೆ ಪರಿಹಾರ ಸಿಗುವುದು ಕಷ್ಟ.. ಆದರೂ ಮನವಿ ಕೊಟ್ಟು ನೋಡುವುದರಲ್ಲಿ ನಷ್ಟವಿಲ್ಲ. ಈವತ್ತು ಸಾಯಂಕಾಲ ಯಾರಾದರೂ ಆಫೀಸಿಗೆ ಬನ್ನಿ, ನಾನು ಮನವಿಯ ಒಂದು ಡ್ರಾಫ್ಟ್ ಮಾಡಿ ಕೊಡ್ತೀನಿ. ನಾಳೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಕಳಿಸೋಣ. ಶಾಸಕರಿಗೆ ಮತ್ತು ಎಮ್ ಪಿ ಯವರಿಗೆ ಈ ರಾತ್ರೀನೇ ಒಂದು ನಿಯೋಗ ತೊಗೊಂಡು ಹೋಗಿ ಕೊಡೋಣ.." ಎಂದರು. "ನಾನು ನಿಮ್ಮ ಪರವಾಗಿ ನಿಯೋಗದಲ್ಲಿ ಬರುವುದಕ್ಕೆ ತಯಾರಿದ್ದೀನಿ, ನಮ್ಮ ಪಾರ್ಟಿಯ ಹಿರಿಯ ನಾಯಕರಿಗೆಲ್ಲ ಹೇಳಿ, ಸಾಧ್ಯವಾದರೆ ಅಸೆಂಬ್ಲಿಯಲ್ಲೂ ಚರ್ಚೆ ಮಾಡಕ್ಕೆ ಮನವಿ ಮಾಡ್ತೀನಿ" ಎಂದು ವಿಜಯ ಪ್ರಕಾಶ ಮತ್ತೊಮ್ಮೆ ಬಾಯಿ ಹಾಕಿದ. ಕೆಲವರು ಮಿಸುಕಾಡಿದರು. "ಅದೇಸರಿ.." ಎಂದು ಒಂದಿಬ್ಬರು ಬಿಸಿರಕ್ತದ ಹುಡುಗರು ಜೋರಾಗಿ ಕೂಗಿದರು.

ನೀಲಕಂಠ ಮೂರ್ತಿಗಳು ಎದ್ದು ನಿಂತುಕೊಂಡು ಮೆಲ್ಲಗೆ ಗಂಟಲು ಸರಿಮಾಡಿಕೊಂಡರು. ಅವರ ವಿದ್ಯಾರ್ಥಿ ಆಗಿರಬಹುದಾದ ವಯಸ್ಸಿನ ವಿಜಯಪ್ರಕಾಶ ಅವರ ಕಡೆ ಕೊಂಚ ಅಸಹನೆಯಿಂದ ನೋಡಿದ "ಸಾರ್ ವಿಜಯಪ್ರಕಾಶ್ ಅವರೆ.. ನಿಮ್ಮ ಸಲಹೆ ತುಂಬ ಚೆನ್ನಾಗಿದೆ, ಆದರೆ ಕಾಲೋನಿಯಲ್ಲಿ ವಾಸ ಇರೋ ಹಿರಿಯರು ಯಾರಾದರೂ ನಿಯೋಗ ತೊಗೊಂಡು ಹೋಗೋದು ಸೂಕ್ತ ಅನ್ನಿಸುತ್ತೆ.." ಎಂದರು. ತಾನು ಕಾಲೋನಿಯಲ್ಲಿ ವಾಸಕ್ಕೆ ಇಲ್ಲ ಅಂತ ಸೂಚ್ಯವಾಗಿ ಹೇಳ್ತಿದ್ದಾರೆ ಅಂತ ಅವನ ಮುಖ ಚಿಕ್ಕದಾಯಿತು. ಆದರೂ.. "ನರಸೇಗೌಡರು ಹೋಗುವುದಾದರೆ ನನ್ನ ಅಭ್ಯಂತರವಿಲ್ಲ.." ಎಂದ. ಜಯದತ್ತರೂ ಇದಕ್ಕೇ ಕಾಯುತ್ತಿದ್ದಂತೆ "ಆಗಲಿ ನರಸೇಗೌಡರೆ..ನೀವು ಮತ್ತೊಂದಿಬ್ಬರು ಈವತ್ತು ಸಾಯಂಕಾಲ ಆಫೀಸಿಗೆ ಬನ್ನಿ, ನಾನು ಅಷ್ಟು ಹೊತ್ತಿಗೆ ಎಮ್ಎಲ್ಎ ಮತ್ತು ಎಮ್ ಪಿ ಗಳ ಟೈಮ್ ಹೇಗಿದೆಯೋ ನೋಡಿ ಒಂದು ಅಪಾಯಿಂಟ್ ಮೆಂಟ್ ತಗೊಳ್ತೀನಿ" ಎಂದರು. ಸಭೆ ಬರಕಾಸ್ತಾಯಿತು.

ವಿಜಯಪ್ರಕಾಶ ಮೇಷ್ಟರ ಹತ್ತಿರ ಬಂದು "ಸತೀಶ ಹೇಗಿದ್ದಾನೆ ಮೇಷ್ಟರೆ.. ಕಾಗದ ಪತ್ರ ಏನಾದರೂ ಇತ್ತಾ? ಪದ್ಮಾವತಮ್ಮನವರು ಹೇಗಿದ್ದಾರೆ? ಲಕ್ಷ್ಮಿ ಇನ್ನೂ ಇದ್ದಾಳಾ? ಮಗು ಹೇಗಿದೆ?.." ಎಂದೆಲ್ಲ ಬಾಯಿತುಂಬಾ ವಿಚಾರಿಸಿಕೊಂಡ. ಪ್ರಕಾಶ್ ಮೇಷ್ಟರು ಹಾಂ ಹೂಂ ಎಂದೇನೋ ಉತ್ತರ ಕೊಟ್ಟು ಚುಟುಕು ಮಾತಿನಲ್ಲೇ ಮುಗಿಸಲು ಪ್ರಯತ್ನಿಸಿದರು. ಆದರೆ ಅವನು ಬಿಡವೊಲ್ಲ.."ಸತೀಶ ಫೋನ್ ಮಾಡಿದರೆ ನಾನು ಕೇಳಿದೆ ಅಂತ ಹೇಳಿ ಮೇಷ್ಟರೆ.. ಊರಿಗೆ ಬಂದಾಗ ಒಂದ್ಸರ್ತಿ ನಮ್ಮನೆಗೆ ಬರಕ್ಕೆ ಹೇಳಿ," ಎಂದ. ಆಗಲೆಂದರು.

***
ಜಿಲ್ಲಾಧಿಕಾರಿಗಳು ಇನ್ನೂ ಯುವಕ, ಇಷ್ಟು ಜನ ವಯಸ್ಸಾದವರು ಬಂದು ಮನವಿ ಕೊಡಲಿಕ್ಕೆ ಬಂದಿದ್ದಾರೆ ಅಂತ ಗೊತ್ತಾಗಿ ಹೆಚ್ಚು ಕಾಯಿಸದೆ ಒಳಗೆ ಕರೆಸಿಕೊಂಡರು. ಹೊರಗಿನ ಮಟ ಮಟ ಬಿಸಿಲಿಂದ ಒಳಗೆ ಎಸಿ ಕೋಣೆಗೆ ಬಂದಾಗ ಎಲ್ಲರಿಗೂ ಹಾಯೆನ್ನಿಸಿತು. ನರಸೇಗೌಡರು "ಸಾರ್, ನಮ್ಮ ಮನೆಗಳೆಲ್ಲವೂ ಕಳೆದ ಏಳೆಂಟು ವರ್ಷಗಳಿಂದ ಇವೆ. ಎಲ್ಲ ಮನೆಗಳಿಗೂ ರೇಷನ್ ಕಾರ್ಡ್ ಸಹ ಇವೆ.. ಹೀಗೆ ಏಕಾಏಕಿ ಮನೆಗಳನ್ನು ಒಡೆದಿದ್ದು ನಮಗೆಲ್ಲರಿಗೂ.." ಎನ್ನುತ್ತಿದ್ದಂತೆ ಜಿಲ್ಲಾಧಿಕಾರಿಗಳ ಸಹಾಯಕರು "ಏಕಾಏಕಿ ಅಲ್ಲ ಗೌಡರೆ, ನೋಟೀಸ್ ಕಳಿಸಿತ್ತಲ್ಲ, ಹದಿನೈದು ದಿನಗಳಲ್ಲಿ ಉತ್ತರ ಕೊಡಬೇಕು ಅಂತ.." ಎಂದಾಗ, ಲಾಯರ್ ಜಯದತ್ತ ಅವರು "ಸರ್.. ನನ್ನದೊಂದು ಸಲಹೆ..ಪಾಪ ಈ ಎಲ್ಲ ಜನರೂ ಮನೆ ಕಳೆದುಕೊಂಡ ದುಃಖದಲ್ಲಿ ಒಂದು ವೇಳೆ ಏನಾದರೂ ಹೇಳಿದರೆ ಅದನ್ನ ಅನ್ಯಥಾ ತಿಳಕೊಳ್ಳಬೇಡಿ.." ಎಂದರು.

ಜಿಲ್ಲಾಧಿಕಾರಿಗಳು "ಇದು ನಮ್ಮ ನೋಟೀಸಿಗೆ ಬರದೆ ಆದ ಘಟನೆ ಅಲ್ಲ.. ನನಗೆ ನಿಮ್ಮ ಬಗ್ಗೆ ಸಹಾನುಭೂತಿ ಇದೆ. ಆದರೆ ಅಕ್ರಮ ಕಟ್ಟಡಗಳ ಬಗ್ಗೆ ಸರಕಾರ ಕಠಿಣ ನಿರ್ಧಾರ ತೊಗೊಳ್ಳಬೇಕಾಗತ್ತೆ. ನಿಮ್ಮ ಮನವಿಯನ್ನ ಆದಷ್ಟೂ ಮಾನವೀಯ ದೃಷ್ಟಿಕೋಣದಿಂದ ಪರಿಗಣಿಸಬೇಕು ಅಂತ ಮುಖ್ಯಮಂತ್ರಿಗಳಿಗೆ ನನ್ನ ಸಂದೇಶವನ್ನೂ ಕಳಿಸುತ್ತೇನೆ" ಎನ್ನುತ್ತಿದ್ದಂತೆ ಪ್ರಕಾಶ್ ಮೇಷ್ಟರ ಫೋನ್ ರಿಂಗಣಿಸಲು ಪ್ರಾರಂಭಿಸಿತು. ಕಸಿವಿಸಿಯಿಂದ ಅವರು ಎದ್ದು ಹೊರಗೆ ಹೋಗಿ ಫೋನ್ ತೆಗೆದುಕೊಂಡರು. ಆಚೆತುದಿಯಲ್ಲಿ ಸದಾಶಿವನ ಆತಂಕಭರಿತ ಧ್ವನಿ ಕೇಳಿತು. "ಮೇಷ್ಟ್ರೆ, ಮೀಟಿಂಗ್ ಮುಗಿದ ತಕ್ಷಣ ಡಿಸ್ಟ್ರಿಕ್ಟ್ ಜನರಲ್ ಆಸ್ಪತ್ರೆಗೆ ಬಂದುಬಿಡಿ.." ಎಂದ. "ಯಾಕಪ್ಪಾ..ಏನಾಯಿತು?" ಎಂದರು. "ಪದ್ಮಾವತಮ್ಮನವರಿಗೆ ಫಿಟ್ಸ್ ಬಂತು.. ಹದಿನೈದು ನಿಮಿಷ ಆದ್ರೂ ನಿಲ್ಲಲಿಲ್ಲ.. ನಮ್ಮ ರಸ್ತೇಲಿರೋ ಕಿಣಿ ಡಾಕ್ಟರನ್ನ ಕರೆಸಿದಿವಿ, ಅವರು ಈಗಲೇ ಕಾರ್ ಮಾಡಿಕೊಂಡು ಆಸ್ಪತ್ರೆಗೆ ಕರಕೊಂಡು ಹೋಗಿ ಎಂದರು. ಎಮರ್ಜೆನ್ಸೀಲಿ ಇದ್ದಾರೆ, ಗ್ಲೂಕೋಸು, ಔಷಧಿ ಎಲ್ಲ ಕೊಟ್ಟ ಮೇಲೆ ಫಿಟ್ಸ್ ನಿಂತಿದೆ.." ಎಂದ. ಪ್ರಕಾಶ್ ಮೇಷ್ಟರ ಮುಖ ಕಳಾಹೀನವಾಯಿತು. ಏನೂ ತೋಚದೆ, ಸ್ಪ್ರಿಂಗ್ ಡೋರುಗಳನ್ನು ತೆಗೆದು ಒಳಗೆ ಹೋಗಲೋ, ಅಥವಾ ಬೇಡವೋ ಯೋಚಿಸುವಷ್ಟರಲ್ಲಿ ವಿಜಯಪ್ರಕಾಶ ಮತ್ತವನ ಇಬ್ಬರು ಚೇಲಾಗಳು ಮಹಡಿ ಹತ್ತಿ ಬಂದರು. ಇವರನ್ನು ನೋಡಿ "ನಮಸ್ಕಾರ ಮೇಷ್ಟ್ರೆ.. ಮೀಟಿಂಗ್ ಇನ್ನೂ ನಡೀತಿದೆಯಾ? ಎಂದು ಕೇಳಿದ. ಬಾಗಿಲ ಬಳಿ ನಿಂತಿದ್ದ ತಲಾಟಿಗೆ ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟು ಇವರ ಕಡೆ ತಿರುಗಿದ. ಮೇಷ್ಟರು ಚುಟುಕಾಗಿ ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸಿದ ಬಗ್ಗೆ ಹೇಳಿ ಒಳಗೆ ಹೋದರು.

ಲಾಯರು ಜಯದತ್ತರ ಮುಖ ವಿಜಯಪ್ರಕಾಶನ ಮುಖ ನೋಡಿ ಅಪ್ರಸನ್ನವಾಯಿತು. ಆದರೂ ತೋರಗೊಡದೆ "ಸರ್, ಕೋರ್ಟಿನಿಂದ ಸ್ಟೇ ತರುವ ಮೊದಲೇ ಕಟ್ಟಡಗಳನ್ನು ಕೆಡವಿದ್ದು ಸರಿಯಾದ ಕ್ರಮ ಅಲ್ಲ.." ಎಂದೇನೋ ಹೇಳ ಹೊರಟರು. ಅದನ್ನು ತುಂಡರಿಸಿ ಜಿಲ್ಲಾಧಿಕಾರಿಗಳು "ಮಿಸ್ಟರ್ ಜಯದತ್, ಇದುವರೆಗೆ ನಗರದ ಸುತ್ತ ಎಷ್ಟು ಇಲ್ಲೀಗಲ್ ಬಡಾವಣೆಗಳು ಎದ್ದಿವೆ ಗೊತ್ತೆ? ಹದಿಮೂರು..ಇನ್ನೂ ತಲೆ ಏಳುವುದಕ್ಕೆ ತಯಾರಾಗಿರುವ ಕಾಲೋನಿಗಳು ಕನಿಷ್ಠ ಒಂಬತ್ತು. ಇಟ್ ಈಸ್ ಅನ್ ಫಾರ್ಚುನೇಟ್ ದಟ್ ವೆಂಕಟಾದ್ರಿಪುರ ವಾಸ್ ದ ಫಸ್ಟ್..ಬಟ್..ದಿಸ್ ಈಸ್ ದ ಓಲ್ಡೆಸ್ಟ್..ಯು ಸೀ..." ಎಂದರು. "ಅಂಡ್ ದ ಓನ್ಲೀ ಲೊಕಾಲಿಟಿ ದಟ್ ಎಲೆಕ್ಟೆಡ್ ಅವರ್ ಪಾರ್ಟೀಸ್ ಕ್ಯಾಂಡಿಡೇಟ್ ಇನ್ ದ ಮುನಿಸಿಪಲ್ ಎಲೆಕ್ಷನ್ಸ್.." ಎಂದು ಒಳಬಂದಿದ್ದ ವಿಜಯಪ್ರಕಾಶ ಸೇರಿಸಿದ. "ಓಹ್ ಸಿಂಡಿಕೇಟ್ ಮೆಂಬರ್ ಸಾಹೇಬ್ರು.. ಬನ್ನಿ ಬನ್ನಿ.." ಎಂದು ಜಿಲ್ಲಾಧಿಕಾರಿಗಳು ಮುಗುಳುನಕ್ಕರು. ನರಸೇಗೌಡರು ವಿಜಯಪ್ರಕಾಶನ ಆಗಮನದಿಂದ ಹೆಚ್ಚು ಪುಳಕಿತರಾದಂತೆ ಕಂಡುಬಂದರೂ ಮಿಕ್ಕ ಹಿರಿತಲೆಗಳು ಇನ್ನೇನು ಭಾನಗಡಿ ಮಾಡುತ್ತಾನೋ ಎಂದು ಆತಂಕಿತರಾದರು.

ಪ್ರಕಾಶ್ ಮೇಷ್ಟರಿಗೆ ಆಸ್ಪತ್ರೆಯ ಕಡೆ ಮನಸ್ಸು ಹೊರಳಿ, ಇಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಜಡವಾಯಿತು. ಅಲ್ಲಿ ಏನಾಗುತ್ತಿದೆಯೋ, ಲಕ್ಷ್ಮಿ ಹೇಗಿದ್ದಾಳೋ, ಹೆಂಡತಿ ಹೇಗಿದ್ದಾಳೋ ತಿಳಿಯದೆ ಅವರ ಮನಸ್ಸು ಆತಂಕಿತವಾಯಿತು. ಲಾಯರ್ ಜಯದತ್ತರು "ಆಗಲಿ ಸರ್, ಇಫ್ ಲೀಗಲ್ ರಿಕೋರ್ಸ್ ಹ್ಯಾಸ್ ಟು ಬಿ ಟೇಕನ್ ಐ ವುಡ್ ಲೈಕ್ ಟು ಟೆಲ್ ಯು ದಟ್ ಇಟ್ ವಿಲ್ ಬಿ ದ ಲಾಸ್ಟ್ ಆಪ್ಷನ್.." ಎಂದು ಜಿಲ್ಲಾಧಿಕಾರಿಗಳ ಕೈ ಕುಲುಕಿದರು. ಜಿಲ್ಲಾಧಿಕಾರಿಗಳು ಜಯದತ್ತರ ಕೈ ಕುಲುಕಿ, ನರಸೇಗೌಡರ ಕೈ ಕುಲುಕಿ, ಮಿಕ್ಕೆಲ್ಲರ ಕಡೆ ಕೈಯೆತ್ತಿ ನಮಸ್ಕಾರ ಮಾಡಿದರು. ವಿಜಯಪ್ರಕಾಶ ಮತ್ತವನ ಚೇಲಾಗಳು ಇನ್ನೂ ಕುಳಿತೇ ಇದ್ದರು. ಜಯದತ್ತರ ಜತೆ ಎಲ್ಲೆ ಹಿರಿತಲೆಗಳು ಹೊರ ಬರುವಾಗ ಮತ್ತೆ ಇಹಲೋಕಕ್ಕೆ ಬಂದ ಪ್ರಕಾಶ್ ಮೇಷ್ಟರು ನರಸೇಗೌಡರಿಗೆ ತಾವು ಆಸ್ಪತ್ರೆಗೆ ಹೋಗುತ್ತಿರುವುದಾಗಿ ಹೇಳಿ ಸೈಕಲ್ ಸ್ಟಾಂಡಿಗೆ ನಡೆದರು. ಹಿಂದಿನಿಂದ ವಿಜಯಪ್ರಕಾಶನ ಚೇಲಾ ಒಬ್ಬ ಬಂದು "ಮೇಷ್ಟ್ರೆ, ಕಾರು ಬೇಕಾದರೆ ಕಳಿಸ್ತೀನಿ ಅಂತ ವಿಜಯ್ ಸಾಹೇಬ್ರು ಹೇಳ್ತಿದ್ದಾರೆ.." ಎಂದ. ಪ್ರಕಾಶ್ ಮೇಷ್ಟರು "ಬೇಡ ಬಿಡಿ, ನನ್ನ ಸೈಕಲ್ ಇಲ್ಲೇ ಉಳಕೊಳ್ಳತ್ತೆ.. ಆಮೇಲೆ ಅದನ್ನ ತರೋಕೆ ಆಸ್ಪತ್ರೆಯಿಂದ ಇಷ್ಟು ದೂರಕ್ಕೆ ಆಟೋ ಮಾಡಿಕೊಂಡು ಬರಬೇಕಾಗತ್ತೆ.." ಎಂದರು.

ಆಸ್ಪತ್ರೆ ತಲುಪಿದಾಗ ಡಾಕ್ಟರು ಆಗಷ್ಟೆ ರೌಂಡ್ಸ್ ಮುಗಿಸಿ ಸದಾಶಿವನ ಹತ್ತಿರ "ಪದ್ಮಾವತಮ್ಮನವರ ರಿಲೇಷನ್ ನೀವೇನಾ?" ಎಂದು ಕೇಳುತ್ತಿದ್ದರು. ಗಡಿಬಿಡಿಯಿಂದ ಹತ್ತಿರ ಬಂದ ಮೇಷ್ಟರು "ನಾನು ಅವಳ ಗಂಡ ಡಾಕ್ಟರೆ.." ಎಂದರು. "ನೋಡಿ, ಇವರೆ, ಅವರಿಗೆ ಫಿಟ್ಸ್ ಗೆ ಕೊಡುವ ಔಷಧಿ ಒಂದು ಡೋಸೂ ತಪ್ಪಬಾರದು, ನಿನ್ನೆ ಮೊನ್ನೆ ಮಾತ್ರೆ ಕೊಡುವುದು ಮಿಸ್ ಆಗಿದೆಯಾ.." ಎಂದು ಕೇಳಿದರು. ಮೇಷ್ಟರು ನೆನಪಿಸಿಕೊಂಡು ಹೇಳಲಾರಂಭಿಸಿದರು "ಇಲ್ಲ ಡಾಕ್ಟರೆ, ನಿನ್ನೆ ಬೆಳಿಗ್ಗೆ ಮತ್ತು ಮಧ್ಯಾಹ್ನ ಮಾತ್ರೆ ಮಿಸ್ ಆಗಿದೆ..ನಮ್ಮ ಮನೆ ಕೆಡವಿ.." ಗದ್ಗದಿತರಾದರು.."ಅಕ್ರಮ ಕಟ್ಟಡ ಅಂತ..ನಿನ್ನೆ ಸಡನ್ನಾಗಿ ಮನೆ ಬದಲಾಯಿಸಬೇಕಾಯಿತು.. ಅದಕ್ಕೆ.." ಎಂದು ತೊದಲಿದರು. ಡಾಕ್ಟರು ನಿರ್ವಿಕಾರ ಭಾವನೆಯಿಂದ ಕೇಳಿ, "ಡೋಸ್ ಸ್ವಲ್ಪ ಜಾಸ್ತಿ ಮಾಡ್ತಿದ್ದೀವಿ, ಒಂದು ವೇಳೆ ಮಿಸ್ ಆದರೆ ಮುಂದಿನ ಡೋಸಿಗೆ 100 ಮಿಲಿಗ್ರಾಮಿನಷ್ಟು ಹೆಚ್ಚು ಮಾಡಿ ಕೊಡಿ, ಈಗ ನಿದ್ರೆ ಮಾಡ್ತಾ ಇದ್ದಾರೆ, ಎಚ್ಚರ ಆದ ಮೇಲೆ ಮನೆಗೆ ಕರ್ಕೊಂಡು ಹೋಗಬಹುದು, ನಾಳೆ ತನಕ ಆಗಬಹುದು ಎಚ್ಚರ ಆಗಕ್ಕೆ.." ಎಂದರು. "ಜೀವಕ್ಕೇನೂ ಅಪಾಯ ಇಲ್ಲ ತಾನೇ ಡಾಕ್ಟರೇ.." ಎಂದು ಕೇಳಿದರು. ಡಾಕ್ಟರು ಆಗ ಒಮ್ಮೆ ಮಾತ್ರ ಮುಗುಳ್ನಕ್ಕು "ಇಲ್ಲ.. ಔಷಧಿ ಮಾತ್ರ ಮರೆಯಬೇಡಿ.." ಎಂದರು. ಎರಡು ಜಡೆ ಹಾಕಿದ್ದ ಕಾರಣ ಪದ್ಮಾವತಮ್ಮನವರ ಮುಖ ತುಂಟ ಹುಡುಗಿಯ ಮುಖದಂತೆ ಮುದ್ದಾಗಿ ಕಾಣುತ್ತಿತ್ತು.

***
ಆಸ್ಪತ್ರೆಯಿಂದ ಮನೆಗೆ ಬಂದಾಗ ಗೌರಿ ಮಗುವಿನ ಬಟ್ಟೆಗಳನ್ನು ಮನೆಯ ಹೊರಗೆ ಟೆರೇಸಿನಲ್ಲಿ ಹೊಸದಾಗಿ ಕಟ್ಟಿದ ಹಗ್ಗಕ್ಕೆ ಒಣಹಾಕಿ ಕ್ಲಿಪ್ ಹಾಕುತ್ತಿದ್ದಳು. "ನೀನು ಕಷ್ಟ ಪಡುವುದು ಬೇಡ ಬಿಡಮ್ಮ.." ಎಂದರೂ ಕೇಳದೆ "ಇರಲಿ ಬಿಡಿ ಮಾವಯ್ಯ" ಎಂದು ಪದ್ಮಾವತಮ್ಮನವರ ಬೆತ್ತದ ಕುರ್ಚಿಯನ್ನು ತಲೆದೆಸೆಯಲ್ಲಿ ಭದ್ರವಾಗಿ ಹಿಡಿದುಕೊಂಡು ಮಹಡಿ ಹತ್ತಿಸಿದಳು. ಪ್ರಕಾಶ್ ಮೇಷ್ಟರಿಗೆ ಈ ಹುಡುಗಿಯ ಕಾಳಜಿಯ ಅರಿವಾಗಿ ಮನಸ್ಸು ಮೂಕವಾಯಿತು. ಎರಡು ಕೋಣೆಗಳ ಹೊಸ ಬಿಡಾರದಲ್ಲಿ ಒಂದು ಕೋಣೆಯಲ್ಲಿ ಮಗಳು ಲಕ್ಷ್ಮಿ ಮತ್ತು ಮಗು, ಹೊರಗಿನ ದೊಡ್ಡ ಕೋಣೆಯಲ್ಲಿ ಬೆಡ್ ಷೀಟ್ ಕಟ್ಟಿ ಮರೆ ಮಾಡಿದ ಒಂದು ಭಾಗದಲ್ಲಿ ಪದ್ಮಾವತಮ್ಮನವರ ಹಾಸಿಗೆ, ಮತ್ತೊಂದು ಭಾಗದಲ್ಲಿ ತಾತ್ಕಾಲಿಕ ಅಡುಗೆಕೋಣೆಯ ವ್ಯವಸ್ಥೆಯಾಗಿತ್ತು. ಹೊರಗಿದ್ದ ನಲ್ಲಿಯಲ್ಲಿ ಕಾಲು ತೊಳೆದು ಅಡುಗೆಮನೆಯಲ್ಲಿ ಮೇಷ್ಟರು ಉಸ್ಸಪ್ಪ! ಎಂದು ಕುಳಿತರು. ಬೆಳಿಗ್ಗೆ ಒಮ್ಮೆ ಎದ್ದು ತಿಂಡಿ ತಿಂದಿದ್ದ ಪದ್ಮಾವತಮ್ಮ ಮತ್ತೆ ನಿದ್ದೆಗೆ ಜಾರಿದ್ದರು. ಕೊಂಚ ವಿಶ್ರಾಂತಿ ತೆಗೆದುಕೊಂಡು ನಂತರ ಬಟ್ಟೆಯ ಮಾರಾಟಕ್ಕೆ ಹೋಗಿ ಬರುವುದೆಂದು ಬಾಗಿಲು ತೆಗೆದಿಟ್ಟು ಮೇಷ್ಟರೂ ಸಣ್ಣ ನಿದ್ದೆ ತೆಗೆಯಲು ಪ್ರಾರಂಭಿಸಿದರು.

ಫೋನ್ ರಿಂಗಣಿಸಿ ಮತ್ತೆ ಎಚ್ಚರವಾಯಿತು. ಸತೀಶ ಫೋನ್ ಮಾಡಿದ್ದ, ಹೇಗಿದ್ದಾರೆಂದು ಕೇಳಿ, ಸದಾಶಿವ ನಗರಸಭೆಯವರು ಮನೆ ಉರುಳಿಸಿದ ಸುದ್ದಿ ತಿಳಿಸಿದ ಬಗ್ಗೆ ಹೇಳಿದ. ಹತ್ತು ದಿನಗಳ ನಂತರ ರಜೆ ಸಿಗುತ್ತಿದೆಯೆಂದೂ ಮಾಲ್ದಾದಿಂದ ಬೆಂಗಳೂರಿಗೆ ಬರಲು ಇನ್ನೊಂದು ದಿನ ಬೇಕೆಂದೂ ತಿಳಿಸಿದ. "ಅಮ್ಮ ಹೇಗಿದ್ದಾಳೆ?" ಎಂದು ಕೇಳಿದ. ಆಸ್ಪತ್ರೆಯಿಂದ ಮರಳಿ ಕರೆತಂದದ್ದನ್ನು ಹೇಳುವಷ್ಟರಲ್ಲಿ ಫಳಾರೆಂದು ಮಿಂಚು ಹೊಡೆದು ಆಕಾಶ ಕಪ್ಪಿಟ್ಟಿತು. ಫೋನ್ ಗೊರಗೊರ ಸದ್ದು ಮಾಡಲು ಆರಂಭಿಸಿತು. ಮತ್ತೆ ಫೋನ್ ಮಾಡುತ್ತೇನೆಂದು ಹೇಳಿ ಡಿಸ್ ಕನೆಕ್ಟ್ ಮಾಡಿ, ಒಣಗಹಾಕಿದ್ದ ಬಟ್ಟೆಗಳನ್ನು ತರಲಿ ಗಡಿಬಿಡಿಯಿಂದ ಹೊರಗೆ ಓಡಿದರು.

ರಾತ್ರಿಯಿಡೀ ಸುರಿದ ಮೊದಲ ಮಳೆಯಿಂದ ನೆಲ ತಂಪಾಗಿ ಪ್ರಕಾಶ್ ಮೇಷ್ಟರ ದುಗುಡ ಕೊಂಚ ಕಡಿಮೆ ಆದರೂ ಮನೆ ಹೇಗಿದೆಯೋ ನೋಡಲು ಅವರ ಮನಸ್ಸು ತವಕಿಸಿತು. ನೆಲಕ್ಕೆ ಮೊಸಾಯಿಕ್ ಹಾಕಿಸಿದ್ದು ಈಗೆಲ್ಲ ಬಿಸಿಲಿನಿಂದ ನಿರಾಬಾಧಿತವಾಗಿ ಒಣಗಿದ್ದರೆ, ನೆಲ ಬಿರುಕು ಬಿಟ್ಟಿರಬಹುದು ಎನ್ನಿಸಿತು. ಬೆಳಿಗ್ಗೆ ಎದ್ದ ತಕ್ಷಣ ಲಕ್ಷ್ಮಿಗೆ "ನಾನು ಕೊಂಚ ಸೈಟಿನ ಹತ್ತಿರ ಹೋಗಿ ಬರ್ತೀನಮ್ಮ, ನನಗೆ ಊಟಕ್ಕೆ ಕಾಯಬೇಡ." ಎಂದು ಹೇಳಿ ಮನೆಯಿಂದ ಹೊರ ಬಿದ್ದರು. ಹತ್ತು ನಿಮಿಷದಲ್ಲಿ ಮನೆಯ ಭಗ್ನಾವಶೇಷದ ನಡುವೆ ತಲುಪಿದ್ದರು.

ಜೆ ಸಿ ಬಿ ಯಂತ್ರದ ರಕ್ಕಸ ಚಕ್ರದ ಗುರುತು ಅಜಗರದ ಪಟ್ಟೆಗಳಂತೆ ಮನೆಯ ಬೇಲಿಯನ್ನು ಮುರಿದು ಅಂಗಳದ ಒಳಗೆ ನುಗ್ಗಿದ ಕುರುಹಿತ್ತು. ತುಲಸಿ ಬೆಳೆದ ವೃಂದಾವನಕ್ಕೆ ಯಾವುದೇ ಪೆಟ್ಟು ತಾಕಿರಲಿಲ್ಲ, ಎರಡು ದಿನ ಕಳೆದಿದ್ದರೂ, ಹಿಂದಿನ ರಾತ್ರಿ ಮಳೆಯಿಂದ ಹೊಸದಾಗಿ ನೀರು ಬಿದ್ದ ಕಾರಣಕ್ಕೋ ಏನೋ, ತುಲಸಿ ನಳನಳಿಸುತ್ತಿತ್ತು. ಗೋಡೆಯೊಂದಿಗೆ ಅಡ್ಡಲಾಗಿ ಬಿದ್ದಿದ್ದ ಬಾಗಿಲ ಅವಶೇಷಗಳನ್ನು ದಾಟಿ ಮುಂದಿನ ಕೋಣೆಯಿದ್ದ ಜಾಗದಲ್ಲಿ ಪ್ರಕಾಶ್ ಮೇಷ್ಟರು ಬಂದು ನಿಂತರು. ಇಷ್ಟು ದಿನಗಳ ದುಃಖವೆಲ್ಲ ಒಮ್ಮೆಲೇ ತುಂಬಿ ಬಂದಂತೆ ಆಗಿ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು.

ಎದೆ ಹಗುರಾದ ಭಾವದೊಂದಿಗೆ ವರ್ತಮಾನಕ್ಕೆ ಮರಳಿದ ಮೇಷ್ಟರು ಮನೆಯ ಅವಶೇಷಗಳಿಂದ ಹೊರ ಬಂದು ಅಂಗಳದಲ್ಲಿ ಕಣ್ಣು ಹಾಯಿಸಿದರು. ಬೇಲಿಯ ಅಂಚಿನಲ್ಲಿ ಮಾವಿನ ಸಸಿಯೊಂದು ತನ್ನ ಕೆಂಪಾದ ಚಿಗುರಿನ ಮೊಳಕೆಯೊಡೆದಿದ್ದು ಲಕ್ಷ್ಮಿಯ ಮಗುವಿನ ಕೈಯಂತೆ ಕಾಣುತ್ತಿತ್ತು.

English summary
Akrama Sakrama, A kannada short story by Bharat Shastry, USA. It is the story of every resident who has faced problems regularising the constructed house in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X