ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನುಗೂಚಿ-ಯೂಕೋ

By * ಸಿಡ್ನಿ ಶ್ರೀನಿವಾಸ್
|
Google Oneindia Kannada News

Sydney Srinivas, Australia
ಶನಿವಾರ ಸಂಜೆ. ತನುಗೂಚಿ ಹಲ್ಲು ಕಡಿಯುತ್ತಲೇ ಕಂಪ್ಯೂಟರ್ ಸ್ಕ್ರೀನಿನತ್ತ ಒಮ್ಮೆ, ಸೆನ್ಸೆಯತ್ತ ಒಮ್ಮೆ ನೋಡುತ್ತಿದ್ದ. ಆಗಲೇ ಐದೂವರೆ ಹತ್ತಿರ, ಇನ್ನೂ ಸೆನ್ಸೆ (ಗುರು ಫ್ಯೂಜಿಸಾವ) ಅಲ್ಲೇ ಕೂತಿದ್ದಾರೆ, ಮನೆಗೆ ಹೋಗಿಲ್ಲ. ಆರು ಗಂಟೆಗೆ ಗೆಳತಿ ಯೂಕೋ ಜೊತೆ ಸಿನೀಮಾಕ್ಕೆ ಹೋಗುವ ಕಾರ್ಯಕ್ರಮ. ಶನಿವಾರ ಸೆನ್ಸೆ ಲ್ಯಾಬಿಗೆ ಬರುವುದು ಅಪರೂಪ. ಸೋಮವಾರ ಯಾವುದೋ ಕಾನ್ಫೆರೆನ್ಸಿಗೆ ಪೇಪರ್ ಕಳುಹಿಸಬೇಕು. ಅದಕ್ಕಾಗಿ ಸೆನ್ಸೆ ಕುಳಿತು ತಮ್ಮ ವಿದ್ಯಾರ್ಥಿಗಳಿಂದ ಕೆಲಸ ತೆಗೆಯುತ್ತಿದ್ದಾರೆ. ತನ್ನ ಸ್ನೇಹಿತರೆಲ್ಲಾ ಅದೂ, ಇದೂ ಮಾಡುತ್ತಾ ಇರುವ ಹಾಗಿದೆ. ಸೆನ್ಸೆ ಅವರು ಅಲ್ಲಿಂದ್ದೆದ್ದು ಹೋಗುವವರೆಗೂ ವಿದ್ಯಾರ್ಥಿಗಳು ಹೋಗುವಂತಿಲ್ಲ. ವೇಳೆ ಮೀರುತ್ತಿತ್ತು; ತಡೆಯಲಾಗಲಿಲ್ಲ ತನುಗೂಚಿಗೆ. ಧೈರ್ಯ ತಂದುಕೊಂಡ. ನೇರ ಸೆನ್ಸೆ ಬಳಿ ಹೋಗಿ ಹೇಳಿದ.

"ನನಗ್ಯಾಕೊ ವಿಪರೀತ ತಲೆನೋವು, ನನ್ನ ರೂಮಿಗೆ ಹೋಗುತ್ತೇನೆ" ಸೆನ್ಸೆಗೆ ಸಿಟ್ಟು ಬಂತು; "ಈ ತಲೆನೊವು ನಾನು ಬಹಳ ನೋಡಿದ್ದೇನೆ. ಸೋಮವಾರ ಪೇಪರ್ ಕಳಿಸಬೇಕು ಅನ್ನುವುದು ಗೊತ್ತಿದೆ ತಾನೆ? ಅಲ್ಲದೆ ಮುಂದಿನ ತಿಂಗಳು ಬೋಸ್ಟನ್‌ನಲ್ಲಿ ಅದನ್ನ ಪ್ರೆಸೆಂಟ್ ಮಾಡಬೇಕು. ಇಷ್ಟೆಲ್ಲಾ ಕೆಲಸ ಇಟ್ಟುಕೊಂಡು ತಲೆನೋವು ಅಂತ ಬೇರೆ ಹೇಳ್ತ್ಯಾ? ಸರಿ ಹೋಗು. ನಾಳೆ ಬಂದು ಕೆಲಸ ಮುಗಿಸಬೇಕು. ಸೋಮವಾರ ಪೇಪರ್ ಹೋಗಲೇ ಬೇಕು!" ಕತ್ತು ಬಗ್ಗಿಸಿ "ಹೈ (ಸರಿ)" ಎಂದವನೇ ತನುಗೂಚಿ ತನ್ನ ಸೀಟಿಗೆ ಬಂದು ಹೊರಡಲು ಅನುವಾದ. ಅವನ ಸ್ನೇಹಿತರಿಗೆ ಅವನ "ತಲೆನೋವಿನ" ವಿಚಾರ ಚೆನ್ನಾಗಿಗೊತ್ತಿತ್ತು. "ಗೆದ್ದುಕೊಂಡ ಇವನು" ಎನ್ನುವಂತೆ ಎಲ್ಲರೂ ಅವನತ್ತ ನಗುತ್ತಾ ನೋಡಿದರು.

ತನುಗೂಚಿ ಮಾಡುತ್ತಿದ್ದ ಸಂಶೋಧನೆ ಬ್ರೈನ್ ವೇವ್ ಗಳಿಗೆ ಸಂಬಂಧಿಸಿದ್ದು; ಜಪಾನಿನ ಸೆಂಡಾಯಿನಲ್ಲಿರುವ ಟ್ಸುಬಾಕಿ ವಿಶ್ವವಿದ್ಯಾಲಯದಲ್ಲಿ. ವಿಶ್ವದ ಕೆಲವೇ ಕಡೆಗಳಲ್ಲಿ ಆ ಸಂಶೋಧನೆ ನಡೆಯುತ್ತಿತ್ತು. ಅವನ ಸೆನ್ಸೆ ಫ್ಯೂಜಿಸಾವ ಈ ಕ್ಷೇತ್ರದಲ್ಲಿ ಜಗತ್ತಿಗೇ ಪ್ರಸಿದ್ಧರಾಗಿದ್ದವರು. ತೀರ ಕಟ್ಟುನಿಟ್ಟಾದ ಪ್ರಾಧ್ಯಾಪಕ ಅವರು. ವಿದ್ಯಾರ್ಥಿಗಳು ಲ್ಯಾಬಿನಲ್ಲಿ ಮೊಬೈಲ್ ಫೋನ್ ಉಪಯೋಗಿಸುವುದಿರಲಿ, ಒಳಗೆ ತರುವಂತೆಯೂ ಇರಲಿಲ್ಲ. ಏನನ್ನೂ ತಿನ್ನುವಂತಿಲ್ಲ. ತಾವು ಕಾಫಿ ಕುಡಿಯುತ್ತಾ ಇದ್ದರು, ಆದ್ದರಿಂದ ವಿದ್ಯಾರ್ಥಿಗಳೂ ಕಾಫಿ ಅಥವ ಟೀ ಕುಡಿಯಬಹುದಾಗಿತ್ತು. ಆ ವಿದ್ಯಾರ್ಥಿಗಳಿಗೂ ಕೂಲಿ ಆಳುಗಳಿಗೂ ಏನೂ ವ್ಯತ್ಯಾಸ ಇಲ್ಲ ಎನ್ನಿ. ವಾರಾಂತ್ಯದಲ್ಲಿ ಬಂದು ಕೆಲಸ ಮಾಡುವುದು ಅವರಿಗೆ ಒಗ್ಗಿ ಹೋಗಿತ್ತು. ವಾರದ ದಿನಗಳಲ್ಲಿ ಎಷ್ಟೋ ಸಲ ಅವರುಗಳು ಅಲ್ಲೇ ಮಲಗುವುದೂ ಉಂಟು. ಸೆನ್ಸೆ ವಾಕ್ಯ ವೇದವಾಕ್ಯ. ಎಲ್ಲವೂ ಅವರು ಹೇಳಿದಂತೆ. ಅವರಿಗೆ ವ್ಯತಿರಿಕ್ತವಾಗಿ ನಡೆಯುವವ ಇಲ್ಲಿಯೂ ಸಲ್ಲ, ಅಲ್ಲಿಯೂ ಸಲ್ಲ! ಒಂದು ಮಾತು ಹೇಳಲೇಬೇಕು. ಜಪಾನಿನ ಸೆನ್ಸೆಗಳನ್ನು ನೋಡಿದ್ದವರಿಗೆ ಇಲ್ಲಿ ಯಾವ ಆಶ್ಚರ್ಯವೂ ಇಲ್ಲ. ಬಹುತೇಕ ಸೆನ್ಸೆಗಳು ವಿದ್ಯಾರ್ಥಿಗಳನ್ನು ಹೀಗೇ ದುಡಿಸಿಕೊಳ್ಳುತ್ತಾರೆ.

ತನುಗೂಚಿ ಅಲ್ಲಿಂದ ಹಾರಿ ಹೊರಬಂದು, ಅಲ್ಲಿದ್ದ ಲಾಕರಿನಿಂದ ತನ್ನ ಮೊಬೈಲ್ ಫೋನನ್ನು ತೆಗೆದುಕೊಂಡು ಹತ್ತಿರವೇ ಇದ್ದ ಇಚಿಬಾಂಚೋ ಕಡೆಗೆ ಹೊರಟ. ಒಂದು ದಮ್ಮು ಸಿಗರೇಟ್ ಎಳೆದು ಅಲ್ಲಿಯೇ ಮಾರ್ಬಲ್ ಬೀದಿಯಲ್ಲಿದ್ದ "ಹ್ಯಾಕು ಎನ್" ಅಂಗಡಿಯ (ಅಂದರೆ ನೂರು ಎನ್ ಅಂಗಡಿ ಅಂತ ಅರ್ಥ. ಇಲ್ಲಿ ಏನುಕೊಂಡರೂ ಅದಕ್ಕೆ ನೂರು ಎನ್ ಮಾತ್ರ ಬೆಲೆ) ಹತ್ತಿರ ಬಂದ. ಅಲ್ಲಿಗೆ ಯೂಕೋ ಬರಬೇಕು, ನಂತರ ಇಬ್ಬರೂ ಸಿನಿಮಾಕ್ಕೆ ಹೋಗಬೇಕು. ಇದು ಅವರ ಕಾರ್ಯಕ್ರಮ. ಇನ್ನೂ ಆರು ಗಂಟೆ ಆಗಿರಲಿಲ್ಲ. ಅಂಗಡಿಯ ಮುಂದೆಯೇ ನಿಂತ ತನುಗೂಚಿ. ಜನ, ಜನ, ಜನ, ಎಳೆ ಮಕ್ಕಳಿಂದ ಹಿಡಿದು ನಡುಗುವ ಮುದುಕರವರೆಗೆ. ಸಾವಿರಾರು ಅಂಗಡಿಗಳು ಅಲ್ಲಿ. ಜನ ನುಗ್ಗಿದ್ದೇ ನುಗ್ಗಿದ್ದು, ಕೊಂಡದ್ದೇ ಕೊಂಡದ್ದು.

ತನುಗೂಚಿಯ ಮನಸ್ಸು ಅಲ್ಲೋಲಕಲ್ಲೋಲವಾಯಿತು. ಲ್ಯಾಬಿನಿಂದ ಬಂದು ಬಿಟ್ಟ. ಅದು ಸರಿಯೇ? ಸೆನ್ಸೆ ಮಾತಿಗೆ ಬೆಲೆಕೊಟ್ಟು ಅಲ್ಲೇ ಇರಬೇಕಾಗಿತ್ತೇ? ನಂತರ ಅನ್ನಿಸಿತು, "ಹೇಗೆ ಸಾಧ್ಯ? ಯೂಕೋ ಜೊತೆ ಸಿನಿಮಾ ಮಜ ಆ ಗೊಡ್ಡು ರಿಸರ್ಚಿನಲ್ಲಿ ಸಿಗೋದಿಲ್ಲ! ಅಲ್ಲದೆ ಈ ಸಿನಿಮಾ ಇಂದೇ ಕಡೇ ಆಟ!" ಆದದ್ದಾಯಿತು ಎಂದುಕೊಂಡ ತನುಗೂಚಿ.

ಇನ್ನೇನು ಆರುಗಂಟೆ ಆಯಿತು ಅನ್ನುವಷ್ಟರಲ್ಲಿ ಯೂಕೋ ದೂರದಲ್ಲಿ ಕಾಣಿಸಿದಳು. ತೆಳ್ಳ ಬೆಳ್ಳಗೆ ಹುಡುಗಿ. ಕಾಲೇಜಿನಲ್ಲಿ ಕಡೆಯ ವರ್ಷ. ಇನ್ನೇನು ಡಿಗ್ರಿ ಬರಬೇಕು. ಅಲ್ಲಿಯೇ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ, ಶನಿವಾರ, ಭಾನುವಾರಗಳಂದು. ಯೂಕೋ ಯಥಾಪ್ರಕಾರ ಫೋನಿನಲ್ಲಿ ಯಾರೊಡನೆಯೋ ಮಾತಾಡುತ್ತಿದ್ದಳು. ತನುಗೂಚಿಗೆ ಅವಳು ಫೋನಿನಲ್ಲಿ ಮಾತಾಡುವುದು ಸ್ವಲ್ಪವೂ ಇಷ್ಟವಿಲ್ಲ, ಕಾರಣ ಗಂಟೆ ಒಂದೆರಡಾದರೂ ಮಾತು ಮುಗಿಯುವುದೇ ಇಲ್ಲ. ದೇಶ ಕಾಲಗಳೆಲ್ಲಾ ಸ್ತಬ್ಧವಾಗುತ್ತವೆ!

ಇವನು ನೋಡುತ್ತಲೇ ಇದ್ದ. ಮೊದಲೇ ಇವನಿಗೆ ಸೆನ್ಸೆಯವರಿಂದ ಮಾತು ಕೇಳಬೇಕಾಯಿತಲ್ಲ ಎಂಬ ದುಃಖ, ಮಿಕ್ಕ ವಿದ್ಯಾರ್ಥಿಗಳ ಎದುರು ಅವಮಾನ ಸಹಿಸಿದ್ದು ಬೇರೆ. ಸೆನ್ಸೆ ನನ್ನ ಮೇಲೆ ಕಣ್ಣಿಟ್ಟುಬಿಟ್ಟರೆ ಏನು ಗತಿ? ಇವಳೋ ಫೋನ್ ಹಿಡಿದು ಮಾತಾಡುತ್ತಾ ಬರುತ್ತಿದ್ದಾಳೆ! ಇವಳಮೇಲೆ ಕೂಡಲೆ ಸಿಟ್ಟು ಬಂತು. "ಇವಳಿಂದ ಅಲ್ಲವೇ ಸೆನ್ಸೆಯಿಂದ ನಾನು ಮಾತು ಕೇಳಿದ್ದು? ಇವಳು ಸಿನೀಮಾಗೆ ಹೋಗಬೇಕು ಅಂತ ಹಟ ಹಿಡಿಯದೆ ಇದ್ದಿದ್ದರೆ, ನಾನು ಸೆನ್ಸೆ ಮುಂದೆ ಕೆಲಸ ಮಾಡುತ್ತಲೇ ನಿಲ್ಲಬಹುದಾಗಿತ್ತು." ಹತ್ತಿರ ಬರುತ್ತಲೇ ಯೂಕೋ ಇವನಿಗೆ ಕೈತೋರಿಸಿ "ಚೊತ್ತೊ (ಒಂದು ನಿಮಿಷ)" ಎಂದು ಹೇಳಿ ಪಕ್ಕದ ಅಂಗಡಿಯ ಆಚೆ ನಿಂತು ಮಾತು ಮುಂದುವರಿಸಿದಳು. ಐದು ನಿಮಿಷ ಆಯಿತು, ಹತ್ತಾಯಿತು, ಮಾತು ಮುಗಿಯಲೇ ಇಲ್ಲ.

"ಥೂ, ಎಂಥಾ ಕೆಲಸ ಮಾಡ್ತಾ ಇದಾಳೆ ಇವಳು! ನನ್ನ ಸಮಯಕ್ಕೆ ಬೆಲೆಯೇ ಇಲ್ಲವಾ? ಅಲ್ಲದೆ ಸಿನಿಮಾದವರು ನಮಗೊಸ್ಕರ ಕಾದಿರ್ತಾರಾ? ಆಗಲೇ ಲೇಟಾಯಿತು." ಎಂದುಕೊಂಡು ಅವಳತ್ತಲೇ ನೊಡುತ್ತಿದ್ದ. ಮಾತು ಮುಗಿಯುವ ಸೂಚನೆಯೇ ಇಲ್ಲ. ಅದೂ ನಗುನಗುತ್ತಾ ಮಾತಾಡುತ್ತಾ ಇದಾಳೆ. ಸಿನಿಮಾನೂ ಇಲ್ಲ, ನನ್ನ ಕೆಲಸಾನೂ ಆಗಲಿಲ್ಲ, ಇನ್ನು ಐದೇ ನಿಮಿಷ. ನಾನು ವಾಪಸ್ ಲ್ಯಾಬಿಗೆ ಹೋಗ್ತೀನಿ"; ತೀರ್ಮಾನ ಕೈಗೊಂಡಾಯಿತು. ಐದಲ್ಲ, ಹತ್ತು ನಿಮಿಷ ಆಯಿತು. ಮಾತು ಮುಗಿಯಲಿಲ್ಲ. "ಹೀಗೆ ನಿಂತು ಪ್ರಯೋಜನ ಇಲ್ಲ, ಇವಳಿಗೆ ಏನೋ ಆಗಿದೆ, ಬುದ್ಧಿ ಕಲಿಸಬೇಕು' ಅನ್ನುತ್ತಲೇ ತನುಗೂಚಿ ಅಲ್ಲಿಂದ ಹೊರಟ.

ನೋಡಿದ ಯೂಕೋ "ಬೈ" ಹೇಳಿ ಓಡಿ ಬಂದಳು. "ರಿಶಿತೋ, ರಿಶಿತೋ ". (ಅವನ ಪೂರ್ಣಹೆಸರು ರಿಶಿತೋ ತನುಗೂಚಿ). ಇವನು ತಿರುಗಿಯೂ ನೋಡಲಿಲ್ಲ. ಅವಳು ಓಡಿಬಂದು ಅವನ ಮುಂದೆ ನಿಂತು, "ಸುಮಿಮಸೇನ್, (ಕ್ಷಮಿಸು). ಸುಮಿರೆ ನನ್ನ ಜತೆ ಏನೋ ಪರ್ಸನಲ್ ವಿಚಾರ ಮಾತಾಡ್ತಾ ಇದ್ದಳು, ಲೇಟ್ ಆಯಿತು" ಕೆಂಡವಾಗಿತ್ತು ಅವನ ಮುಖ.
"ಹಾಗಿದ್ದರೆ ಅವಳ ಜೊತೇನೇ ಹೋಗು. ನನ್ನ ಹತ್ತಿರ ಏಕೆ ಬಂದಿ?" ಎಂದವನೇ ಅವಳ ಪಕ್ಕದಿಂದ ಹೋಗಲೆತ್ನಿಸಿದ. ಯೂಕೋ ಬಿಡಲಿಲ್ಲ. ಅವನ ಎರಡೂ ಕೈಗಳನ್ನ ತನ್ನ ಎರಡೂ ಕೈಗಳಲ್ಲಿ ಹಿಡಿದು "ಮುಂದೆ ಹೀಗೆ ಆಗದಂತೆ ನೋಡಿಕೋತೀನಿ, ಸುಮಿಮಸೇನ್" ಎಂದಳು. ಕಣ್ಣಲ್ಲಿ ನೀರು. ಮತ್ತಷ್ಟು ಕೋಪಗೊಂಡ ತನುಗೂಚಿ ಅವಳ ಕೈಗಳನ್ನು ಜಾಡಿಸಿಕೊಂಡು ಹೊರಟುಬಿಟ್ಟ.

"ಏನಂದುಕೊಡಿದ್ದಾಳೆ ನನ್ನನ್ನ?" ಮತ್ತೆರಡು ಸಿಗರೇಟ್ ಸೇದಿ ಲ್ಯಾಬಿಗೆ ಬಂದ. ಮೊಬೈಲ್ ಫೋನನ್ನು ಲಾಕರಿನಲ್ಲಿ ಇಟ್ಟು ಒಳಬಂದು ನೇರ ಸೆನ್ಸೆ ಹತ್ತಿರ ಹೋಗಿ, "ಸ್ವಲ್ಪ ಹೊರಗಡೆ ಓಡಾಡಿದ್ದು ಒಳ್ಳೆಯದಾಯಿತು, ತಲೆನೋವು ಹೋಯಿತು." ಎಂದ. "ಸೋ ದೆಸ್ಕಾ (ಹಾಗೋ ಸಮಾಚಾರ), ಸರಿ ಹಾಗಾದರೆ ಬೇಗಬೇಗ ಕೆಲಸ ಮುಂದುವರಿಸು." ಸಿನಿಮಾ ತಪ್ಪಿದ್ದು ಒಳ್ಳೆಯದೇ ಆಯಿತು ಅಂದುಕೊಂಡ.

ಇತ್ತ ಯೂಕೋಗೆ ದಿಕ್ಕು ತೋರದಾಯಿತು. ಜೋರಾಗಿ ಕಿರಿಚಿಕೊಂಡಳು. ಸುತ್ತಮುತ್ತ ಜನರಿದ್ದದ್ದು ನೋಡಿ ನಾಚಿಕೆ ಆಯಿತು. ಕೂಡಲೇ ಅಲ್ಲಿಂದ ಓಡಿ ಹತ್ತಿರವೇ ಇರುವ ಹಿರೋಸೆ ನದಿಯ ತೀರಕ್ಕೆ ಬಂದಳು. ಸೆಂಡಾಯಿ ನಗರವನ್ನು ಇಬ್ಬಾಗಮಾಡಿ ಹರಿಯುವ ನದಿ ಅದು. ಅಲ್ಲಿಯ ಜನರ ನೋವು, ನಲಿವು, ಆಶೆ, ನಿರಾಶೆ, ಸೋಲು, ಗೆಲವು ಎಲ್ಲವಕ್ಕೂ ಸಾಕ್ಷಿಯಾಗಿ ಹರಿಯುವ ಜೀವನದಿ. ಯೂಕೋ ಮತ್ತು ತನುಗೂಚಿ ಅದೆಷ್ಟು ದಿನ ಅದರ ತೀರದಲ್ಲಿ ಮಾತನಾಡುತ್ತಾ, ಒಬ್ಬರನ್ನೊಬ್ಬರು ರೇಗಿಸುತ್ತಾ, ಸರಸವಾಡುತ್ತಾ ಕಾಲ ಕಳೆದಿದ್ದರೋ! ಇಂದು ಯೂಕೋ ಒಬ್ಬಳೇ ಹೋಗಿ ಕುಳಿತಳು; ದುಃಖ ಉಮ್ಮಳಿಸಿ ಬಂತು. ಜೋರಾಗಿ ಅತ್ತು ಬಿಟ್ಟಳು.

"ವಿಶ್ವ ವಿಖ್ಯಾತ ಸೆನ್ಸೆ ಜತೆ ಸಂಶೋಧನೆ ಮಾಡುವ ರಿಶಿತೋ ಕೂಡ ನಾಳೆ ಹಾಗೇ ಆಗುತ್ತಾನೆ. ಅಂತಹ ಮೇಧಾವಿಗೆ ಸಿಟ್ಟು ಬರುವ ಹಾಗೆ ನಡೆದುಕೊಂಡು ಬಿಟ್ಟೆ. ನನಗೇಕೆ ಬೇಕಾಗಿತ್ತು ಆ ಸುಮಿರೆ ಗೊಡವೆ. ಅವಳು ಪ್ರೇಮದಲ್ಲಿ ಕೈಸುಟ್ಟುಕೊಂಡಿದ್ದರೆ ನನಗೇನು. ಅವಳನ್ನೇಕೆ ಸಮಾಧಾನ ಮಾಡಹೋದೆ ನಾನು? ನನ್ನಂಥ ಸ್ಟೋರ್ ಗರ್ಲ್‌ಗೆ ಅವನನ್ನು ಕಾಯಿಸುವ ಪ್ರತಿಷ್ಠೆಯೇ?" ತಕ್ಷಣ ಫೋನ್ ತೆಗೆದುಕೊಂಡು ತನುಗೂಚಿಗೆ ರಿಂಗ್ ಮಾಡಿದಳು. "ಫೋನ್ ಸ್ವಿಚ್ ಆಫ್ ಆಗಿದೆ. ಮೆಸೇಜ್ ಬೇಕಾದರೆ ಬಿಡಿ" ಎಂದು ಹೇಳಿತ್ತು ಫೋನ್. ಇರಲಿ ಎಂದು SMS ಕಳುಹಿಸಿದಳು. ಉತ್ತರವಿಲ್ಲ. "ಅವನಿಗೆ ತೀರಾ ಕೋಪ ಬಂದಿರಬೇಕು."
"ಥೂ, ಈ ಫೊನ್‌ನಿಂದ ಅಲ್ಲವೆ ಇಷ್ಟೆಲ್ಲಾ ", ಅಂದಿದ್ದೇ ಅದನ್ನು ಅತ್ತ ಎಸೆದಳು. ಕತ್ತಲಾಗುತ್ತಿತ್ತು. ಅಲ್ಲಿ ಕರಡಿಯ ಕಾಟ ಬೇರೆ ಅಂತ ಜನ ಹೇಳುತ್ತಾರೆ. ಎದ್ದವಳೇ ಇಚಿಬಾಂಚೋದಲ್ಲಿದ್ದ Cafe Velocheಗೆ ನಡೆದಳು. ತಣ್ಣಗಿನ ಟೀ ಆರ್ಡರ್ ಮಾಡಿ ಟೇಬಲ್ಲಿಗೆ ಮುಖಕೊಟ್ಟು ಕುಳಿತುಕೊಂಡಳು. ನಿದ್ದೆ ಬಂದಹಾಗಾಯಿತು.

ಇತ್ತ ತನುಗೂಚಿಗೆ ಕಂಪ್ಯೂಟರ್ ಸ್ಕ್ರೀನ್ ಮೇಲಿನ ಅಕ್ಷರ, ಸಂಖ್ಯೆ ಯಾವುದರ ಮೇಲೆಯೂ ಗಮನವಿಲ್ಲ, ಏನೂ ಹೊಳೆಯತ್ತಲೂ ಇಲ್ಲ. ಬದಲಾಗಿ ಅಲ್ಲಿ ಯೂಕೋ ಫೋನಿನಲ್ಲಿ ತನ್ನ ಗೆಳತಿಯ ಜತೆ ಮಾತಾಡುವ ಚಿತ್ರವಷ್ಟೇ ಕಾಣುತಿತ್ತು. ಹಾಗೇ ಕುಳಿತ. ಹಲ್ಲು ಕಡಿದ. ಶಾಪ ಹಾಕಿದ. ಆಗಾಗ ಕಾಫಿ ಕುಡಿದ; ಹೊರಹೋಗಿ ಸಿಗರೇಟ್ ಸೇದಿ ಬಂದ. "ಥೂ, ಎಂಥ ಕೆಲಸ ಮಾಡಿಬಿಟ್ಟಳು!"

ರಾತ್ರಿ ಎಂಟೂವರೆ ಆಯಿತು. ಇದ್ದಕ್ಕಿದ್ದಂತೆ ಸೆನ್ಸೆ ಎದ್ದು ನಿಂತು "ನಡೀರಿ, ಎಲ್ಲಾ pubಗೆ ಹೋಗೋಣ" ಅಂದರು. ವಿದ್ಯಾರ್ಥಿಗಳಿಗೆ ಖುಷಿಯೋ ಖುಷಿ. ಖಾನಾ, ಪೀನಾ ಎಲ್ಲಾ ಸೆನ್ಸೆ ಖರ್ಚಿನಲ್ಲೇ ಆಗಿಹೋಗುತ್ತೆ! ಗುರು ಶಿಷ್ಯರುಗಳೆಲ್ಲಾ ಕಾಲೇಜಿನ ಮುಂದೆಯೇ ಇದ್ದ ಚಿಕ್ಕ ಖಾನಾವಳಿಗೆ ಹೋದರು. ಅದು ಎಲ್ಲರಿಗೂ ಚಿರಪರಿಚಿತ. ಅದರ ಮ್ಯಾನೇಜರ್ ಎಲ್ಲರನ್ನೂ ನಗುಮುಖದಿಂದ ಸ್ವಾಗತಿಸಿದ, ಅವರು ಸದಾ ಕೂರುವ ಕೊಠಡಿ ಖಾಲಿ ಇದೆ ಎಂದು ಹೇಳಿದ. ಎಲ್ಲರೂ ತಂತಮ್ಮ ಚಪ್ಪಲಿ, ಷೂ ಗಳನ್ನು ಬಿಚ್ಚಿ ಹೊರಗಿಟ್ಟು, ಖಾನಾವಳಿಯ ಚಪ್ಪಲಿಗಳನ್ನು ಧರಿಸಿ ಒಳಹೋಗಿ ಕುಳಿತರು. ಇವರನ್ನು "ಏನು ಬೇಕು" ಎಂದು ಕೇಳುವ ಅವಶ್ಯಕತೆ ಇರಲಿಲ್ಲ ಅಲ್ಲಿಯ ಸರ್ವರ್ ಹುಡುಗಿಗೆ. ಎಲ್ಲರಿಗೂ ಮೊದಲು ಬಿಸಿ ಬಿಸಿಯಾದ ಒದ್ದೆಯ ಟವಲ್ ನೀಡಿ ಆಯಿತು. ಇವರುಗಳ ತಲೆ ಎಣಿಸಿ ಹದಿನೈದು ಬಿಯರ್ ಬಾಟಲ್‌ಗಳನ್ನು ತೆರೆದು ಇವರ ಮುಂದೆ ಇರಿಸಿ, ಲೋಟಗಳನ್ನು ತಂದಿಟ್ಟಳು. ಅಲ್ಲದೆ, ಉಪ್ಪು, ಖಾರ ಹಾಕಿದ ಕಡಲೆಲಾಯಿ, ಮೀನು, ಹುರಿದ ಶ್ರಿಂಪ್ ಎಲ್ಲವನ್ನೂ ಒಂದಾದ ಮೇಲೆ ಒಂದರಂತೆ ತಂದಿಟ್ಟಳು. ಯಾರೂ ಏನನ್ನೂ ಇನ್ನೂ ಮುಟ್ಟುವಂತಿಲ್ಲ. ಎಲ್ಲರಿಗೂ ಬೀರು ಬಂದಿದೆ ಅನ್ನುವುದನ್ನು ಖಾತ್ರಿ ಮಾಡಿಕೊಂಡ ಸೆನ್ಸೆ ತಮ್ಮ ಲೋಟವನ್ನೆತ್ತಿ ಹಿಡಿದು "ಕಾಂಪೈ" ಎಂದರು. ಶಿಷ್ಯವೃಂದ ತಾವೂ ತಂತಮ್ಮ ಲೋಟಗಳನ್ನೆತ್ತಿ "ಕಾಂಪೈ" ಎಂದರು. ಮಧ್ಯಪ್ರವಾಹ ಪ್ರಾರಂಭವಾಯಿತು. ಕೇವಲ ಅರ್ಧಗಂಟೆಯ ನಂತರ ಮತ್ತೆ ಹದಿನೈದು ಬಾಟಲ್ ಬೀರಿನ ಅವಶ್ಯಕತೆ ತಲೆದೋರಿತು. ಖಾನಾ ಕೂಡ ಬರಲಾರಂಭಿಸಿತು - ಕೋಳಿ, ಬೀಫ್, ತರಕಾರಿ ಮತ್ತಷ್ಟು ಮೀನು. ಅವರ ಮುಂದಿದ್ದ ದೊಡ್ಡ ಅಗ್ಗಿಷ್ಟಿಕೆಗಳನ್ನು ಹೊತ್ತಿಸಿ ಅವುಗಳ ಮೇಲೆ ನೀರಿಟ್ಟು ಕುದಿಸಿದಳು ಸರ್ವರ್. ನಂತರ ಮಕ್ಕಳಾಟ ಎನ್ನುವಂತೆ, ಒಬ್ಬೊಬ್ಬರೂ ಚಿಕನ್, ಬೀಫ್, ಮೀನುಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಆನಂದಿಸಿದರು. ತೆಗೆದು ತಿಂದರು. ಮತ್ತಷ್ಟು ಕುಡಿತ. ರಾತ್ರಿ ಹನ್ನೊಂದಾಗುತ್ತಾ ಬಂತು. ಸೆನ್ಸೆ ಕುಳಿತಲ್ಲೇ ಗೊರಕೆ ಹೊಡೆಯಲಾರಂಭಿಸಿದರು. ಮ್ಯಾನೇಜರ್ ಬಂದು "ರಾತ್ರಿ ಹನ್ನೆರಡಕ್ಕೆ ಬಾಗಿಲು ಹಾಕಬೇಕು. ನಿಮಗಿನ್ನೇನಾದರೂ ಬೇಕಾ " ಎಂದು ಕೇಳಿ ಹೋದ.

ಇದ್ದಕ್ಕಿದ್ದಂತೆ ಕಣ್ಣು ತೆರೆದರು ಸೆನ್ಸೆ. ಕುಡಿದ ಅಮಲಿನಲ್ಲಿ ಅವರು ಸಾಮಾನ್ಯವಾಗಿ ಉಪದೇಶ ನೀಡುತ್ತಿದ್ದರು - ರಾಜಕೀಯ, ನಡತೆ, ಮಾನವೀಯತೆ ಇತ್ಯಾದಿ, ಇತ್ಯಾದಿ. ನಿಜಕ್ಕೂ ಇವು ಅಮೂಲ್ಯ ನೀತಿ ಚಿಂತಾಮಣಿಗಳಾಗಿರುತ್ತಿದ್ದವು. ಇವತ್ತಿನ ವಿಷಯವೇನಿರಬಹುದು ಎಂದು ಶಿಷ್ಯರು ಕಾತರರಾಗಿದ್ದರು. ಪ್ರಾರಂಭಿಸಿದರು, ಗುರುಗಳು.

"ನೋಡಿ, ಜೀವನದಲ್ಲಿ ನೀವು ಹೇಗೆ ಬಾಳುತ್ತೀರಿ ಅನ್ನುವುದು ಮುಖ್ಯ. ಆಮೇಲೆ ಈ ಸಂಶೋಧನೆ ಅದೆಲ್ಲಾ. ಮೊದಲು ನೀವು ಉತ್ತಮ ಮಾನವರಾಗಬೇಕು. ರಿಸರ್ಚ್ ಮಾಡದೆ ಹೊದರೆ ಏನೂ ನಷ್ಟವಿಲ್ಲ. ಆದರೆ ಹೆಂಗಸಿನ ಮನಸ್ಸನ್ನು ನೋಯಿಸಬೇಡಿ. ಹೆಣ್ಣು ಮಕ್ಕಳ ಮನಸ್ಸು ಸೂಕ್ಷ್ಮ. ಅದನ್ನು ನೋಯಿಸಿದ್ದೇ ಆದರೆ ನೀವು ಜೀವನವಿಡೀ ವ್ಯಥೆಪಡುತ್ತೀರ. ಅದಕ್ಕೆ ಉದಾಹರಣೆ ನಾನೇ ನೋಡಿ. ನನ್ನ ಕಾಟ ತಡೆಯಲಾರದೆ ಆಕೆ ಸತ್ತೇ ಹೋದಳು. ಅವಳ ನೆನಪು ಇವತ್ತೂ ನನ್ನನ್ನ ಕಾಡುತ್ತಿದೆ."

ಮತ್ತೆ ನಿದ್ದೆ ಹೋಗುವುದರಲ್ಲಿದ್ದರು ಗುರುಗಳು. ಆಗ ಶಿಷ್ಯರು ಎಚ್ಚರಿಸಿದರು, "ಇದು ಪಬ್ ಮುಚ್ಚುವ ಸಮಯ. ಇನ್ನು ಮನೆಗೆ ಹೋಗಬೇಕು". ಮ್ಯಾನೇಜರ್ ಸೆನ್ಸೆಯವರ ಕ್ರೆಡಿಟ್ ಕಾರ್ಡ್ ತೆಗೆದುಕೊಂಡು, ಸಂಬಂಧಿಸಿದ ಪರಿಕ್ರಮವನ್ನು ಮುಗಿಸಿದ. ಅವರ ಸಹಿ ಪಡೆದು ಬಾಗಿಲ ಬಳಿ ನಿಂತ. ಅದು "ಇನ್ನು ನೀವು ಹೊರಡಿ" ಎಂಬ ಸೂಚನೆ. ಎಲ್ಲರೂ ಹೊರಬಂದರು. ಅಲ್ಲೇ ನಿಂತಿದ್ದ ಟಾಕ್ಸಿ ಕರೆದು ಇಬ್ಬರು ಶಿಷ್ಯರು ಸೆನ್ಸೆಯವರನ್ನು ಅದರಲ್ಲಿ ತಳ್ಳಿ ಕೂಡಿಸಿದರು. ಡ್ರೈವರಿಗೆ ಸೆನ್ಸೆ ವಿಳಾಸ, ತಗಲುವ ಟಾಕ್ಸಿ ಬಾಡಿಗೆ ಹಣವನ್ನು ಕೊಟ್ಟರು. "ವಕಾರಿಮಸ್ತಾ (ಅರ್ಥವಾಯಿತು) ", ಅನ್ನುತ್ತಾ ಡ್ರೈವರ್ ಟಾಕ್ಸಿ ಸ್ಟಾರ್ಟ್ ಮಾಡಿದ.

ಗುರು ಉಪದೇಶ ಶಿಷ್ಯರಿಗೆ ಹಾಸ್ಯಾಸ್ಪದ ಅನ್ನಿಸಿತು. ಆದರೆ ತನುಗೂಚಿಗೆ ಜ್ಞಾನೋದಯವಾಯಿತು. "ಹೆಣ್ಣು ಮಕ್ಕಳನ್ನು ನೋಯಿಸಬೇಡಿ". "ನಾನು ಮಾಡಿದ್ದು ಅದೇ ಅಲ್ಲವೆ? ಒಂದು ನಿಮಿಷದಲ್ಲಿ ತಾಳ್ಮೆ ಕಳೆದುಕೊಂಡೆ. ಸೆನ್ಸೆ ನನಗೇ ಹೇಳಿರುವಂತಿದೆ ಈ ಮಾತು. ನಾನು ಮಾಡಿದ್ದು ತಪ್ಪು. ಹುಡುಗಿಯರನ್ನು ನೋಯಿಸಬಾರದು. ಈಗಲೇ ಕ್ಷಮೆ ಕೇಳಬೇಕು " ಕೂಡಲೆ ಫೊನ್ ತೆಗೆದುಕೊಂಡು ಯೂಕೋ ನಂಬರ್ ರಿಂಗ್ ಮಾಡಿದ. ಉತ್ತರವಿಲ್ಲ. SMS ಕಳಿಸಿ ಕಾದು ನೋಡಿದ, ನಿರುತ್ತರಾ. ಆಗ ಅವನಿಗೆ ಹೊಳೆದದ್ದೂ ಹಿರೊಸೇ ನದಿಯೇ. ಅವನ ನೋವು ನಲಿವಿಗೂ ಅದೇ ಸಾಕ್ಷಿಯಲ್ಲವೇ? ನದಿಯತ್ತ ಸರಸರ ನಡೆದ, ಯೂಕೋ ಮತ್ತು ತನ್ನ ಪ್ರಿಯ ಸ್ಥಾನಕ್ಕೆ ಹೋದ. ಯೂಕೋ ಇರಲಿಲ್ಲ. ರಾತ್ರಿಯಲ್ಲಿ ಅದು ಸಾಧ್ಯವೂ ಅಲ್ಲ. ಅಲ್ಲೇ ಕುಳಿತ. ಎಲ್ಲೋ ಫೋನ್ ರಿಂಗ್ ಆಯಿತು. ತನ್ನದಂತೂ ಅಲ್ಲ. ಧ್ವನಿ ಬಂದ ದಿಕ್ಕಿನತ್ತ ಸಾಗಿದ. ನೋಡಿದರೆ ಅದು ಯೂಕೋ ಫೋನು. ತೆಗೆದುಕೊಂಡು "ಮೋಶಿ ಮೊಶ್ (ಹಲೋ) ಅಂದ.

"ನಾನು ಸುಮಿರೆ ಮಾತನಾಡೊದು. ಯೂಕೋ ಇಲ್ಲವಾ?"
"ಇಲ್ಲ, ಅವಳೆಲ್ಲಿದಾಳೊ ಗೊತ್ತಿಲ್ಲ. ನಾನೂ ಹುಡುಕ್ತಾ ಇದೀನಿ."
"ಅವಳು ಸಿಕ್ಕಾಗ ಎಲ್ಲಾ ಸರಿ ಹೋಯಿತು ಅಂತ ಹೇಳಿ"
"ಆಗಲಿ"

ಸ್ವಲ್ಪ ಗಾಬರಿ ಆಯಿತು ತನುಗೂಚಿಗೆ. ಏನಾದರೂ ಅನಾಹುತ ಸಂಭವಿಸಿದೆಯಾ? ಇಲ್ಲ, ಇಲ್ಲ ಯೂಕೋ ಅಂತಹ ಹೆಂಗಸಲ್ಲ. ಎಲ್ಲೋ ಫೋನ್ ಅವಳ ಬ್ಯಾಗಿನಿಂದ ಬಿದ್ದಿರಬೇಕು. ಮುಂದೇನು ಮಾಡುವುದು ಹೊಳೆಯಲಿಲ್ಲ. ಬ್ರೈನ್ ವೇವುಗಳ ಸಂಶೋಧಕ ಈಗ ಪೆದ್ದು ಪೆದ್ದಾಗಿ ಕುಳಿತ. "ಫೋನು ಏಕೆ ಇಲ್ಲಿದೆಯೊ ಎನೋ, ಇಲ್ಲೇ ಇರಲಿ. ಬೆಳಕಾದ ಮೇಲೆ ಅವಳೇ ಹುಡುಕಿಕೊಂಡು ಬರಬಹುದು" ಅಂದುಕೊಂಡು ಅಲ್ಲೆ ಇದ್ದ ಬೆಂಚಿನ ಮೇಲೆ ಅದನ್ನಿರಿಸಿ, ಒಂದು ಚೀಟಿ ಬರೆದಿಟ್ಟ. ನಂತರ ಅವಳನ್ನು ಹುಡುಕಿಕೊಂಡು ಹೊರಟ.

Cafe Velocheಯಲ್ಲಿ ಸಾಕಷ್ಟು ಸಮಯ ಹಾಗೇ ಕುಳಿತಿದ್ದಳು, ಯೂಕೋ. ಯಾರೋ ಬಂದು ಬೆನ್ನಮೇಲೆ ಕೈಸವರಿದಾಗ ಎದ್ದು ಮೇಲೆ ನೋಡಿದಳು. ಸ್ನೇಹಿತೆ ಮಿಗೂಮಿ.
"ಏನು ಯೂಕೋ, ಹೀಗೆ ಕೂತಿದ್ದೀಯಾ? ಏನಾಗಿದೆ ನಿನಗೆ?"
"ಏನೂ ಅಂತ ಹೇಳಲಿ, ಆ ಸುಮಿರೆ ಇಂದ ಆಗಬಾರದ್ದು ಆಯಿತು." ಯೂಕೋ ಆದದ್ದನ್ನೆಲ್ಲಾ ವಿವರಿಸಿ ಹೆಳಿದಳು.
"ಮೊದಲು ನಿನಗೆ ಬುದ್ಧಿ ಇಲ್ಲ. ಆ ಸುಮೀರೆ ಮಾತು ಕೇಳ್ತಾ ಹೀಗೆ ಮಾಡಿಕೊಂಡೆಯಾ? ಅವಳು ಯಾವಾಗಲೂ ಹೀಗೆ. ಎಲ್ಲೋ ರಂಪ ಮಾಡಿಕೊಂಡು ಎಲ್ಲರ ಕೆಲಸ ಕೆಡಿಸ್ತಾಳೆ. ರಿಶಿತೊ ಕಾಯ್ತಾ ಇದ್ದರೂ ನೀನು ಹೀಗೆ ಮಾಡಿದ್ದು ತಪ್ಪು."
"ಈಗೇನು ಮಾಡಲಿ ಹೇಳು"
"ಆದರೆ ಒಂದು ವಿಷಯ ತಿಳ್ಕೊ. ಈ ಗಂಡಸರು ಕೋಪ ಮಾಡಿಕೊಂಡೇನೋ ಹೋಗ್ತಾರೆ. ಆದರೆ ಕೋಪ ಅಡಗಿಹೋದ ಮೇಲೆ ಮುದುರಿಕೊಂಡು ವಾಪಸ್ ಬರ್ತಾರೆ. ಏನೇ ಅಗಲಿ ಮೊದಲು ಫೋನ್ ಮಾಡು ಅವನಿಗೆ" ತಡಕಾಡಿ ನೋಡಿಕೊಂಡಳು ಯೂಕೋ. ಫೋನ್ ಇರಲಿಲ್ಲ.
"ಆಯ್ಯೋ, ಬೇಜಾರಾಗಿ, ಅದನ್ನ ಹಿರೋಸೇ ಹತ್ತಿರ ಬಿಸಾಕ್‌ಬಿಟ್ಟೆ."
"ಪೆದ್ದ ಹುಡುಗಿ, ಹೋಗಲಿ ನನ್ನ ಫೋನ್ ತೊಗೊ."
"ಅವನ ನಂಬರ್ ಗೊತ್ತಿಲ್ಲ."
"ಸರಿ ಬಾ ಹುಡುಕೋಣ"

ಒಂದು ಟಾಕ್ಸಿ ಮಾಡಿಕೊಂಡು ಇಬ್ಬರೂ ಹಿರೋಸೇ ನದಿಯತೀರಕ್ಕೆ ಬಂದರು. ಡ್ರೈವರಿಗೆ ಕಾದಿರುವಂತೆ ಹೇಳಿ, ಯೂಕೋ ಮುಂಚೆ ಕುಳಿತಿದ್ದ ಸ್ಥಳದ ಹತ್ತಿರ ಹೋಗಿ ನೋಡಿದರು. ಫೋನ್ ಕಾಣಲಿಲ್ಲ. ಅಲ್ಲೇ ಇದ್ದ ಬೆಂಚೊಂದರ ಹತ್ತಿರ ನೋಡಿದರು. ಅದರ ಮೇಲಿತ್ತು ಫೋನ್. ಯಾರೋ ತೆಗೆದು ಅಲ್ಲಿಟ್ಟಿರಬೇಕು. ಅದರ ತಳದಲ್ಲಿ ಕಾಗದ ಒಂದು.

"ನಿನಗೆ ಫೋನ್ ಮಾಡಿ ಸಾಕಾಯಿತು. ಹೀಗೆ ಫೋನ್ ಅಲ್ಲಿ, ಇಲ್ಲಿ ಎಸೆಯಬೇಡ. ನಾನು ಇಚಿ ಬಾಂಚೋ HMV ಮುಂದೆ ಇನ್ನೂ ಸ್ವಲ್ಪ ಹೊತ್ತು ಕಾದಿರುತ್ತೀನಿ, ರಿಶಿತೋ". ಒಂದೂ ಅರ್ಥವಾಗಲಿಲ್ಲ ಯೂಕೋಗೆ. ತಕ್ಷಣ ಅವನಿಗೆ ಫೋನ್ ಮಾಡಿದಳು. ತನುಗೂಚಿ ಫೋನ್ ತೆಗೆದುಕೊಂಡು, "ಸುಮಿಮಸೇನ್, ಸುಮಿಮಸೇನ್ (ಕ್ಷಮಿಸು) ", ಎಂದು ಜೋರಾಗಿ ಹೇಳಿದ. ಇವಳೂ ಸುಮಿಮಸೇನ್ ಹೇಳಿದಳು.
"HMV ಹತ್ತಿರ ಬಾ." ಯೂಕೋ ಮಿಗೂಮಿಯನ್ನು ತಬ್ಬಿಕೊಂಡು, ಫೋನಿಗೆ ಮುತ್ತಿಟ್ಟಳು. "ಇನ್ನು ಈ ರಾತ್ರಿ ನಿಮ್ಮಿಬ್ಬರಿಗೆ ಬಿಟ್ಟಿದ್ದು. ನನ್ನನ್ನ ಇಚಿಬಾಂಚೋನಲ್ಲಿ ಬಿಡು, ಅಲ್ಲಿ ನನ್ನ ಸೈಕಲ್ ಇದೆ, ತಗೊಂಡು ಮನೇಗೆ ಹೋಗ್ತೀನಿ. ", ಮಿಗೂಮಿ ಹೇಳಿದಳು. ಇಬ್ಬರೂ ಕಾದಿದ್ದ ಟಾಕ್ಸಿಯತ್ತ ಹೊರಟರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X