ಕಪ್ಪಿನಿಯ*
ಕಾಲ್ಬೆರಳಿಲ್ಲದ್ ಪಾಬ್ಲಿ ಕತೆ

- ಕಪ್ಪಿನಿಯ*
[email protected]
ನಮ್ಗಿದ್ದಷ್ಟೇ ಬೆರಳಿತ್ತಂತೆ
ಯಾರೋ ‘‘ಮುಂದೊಂದ್ ದಿವಸ ನೀನು
ಬೆರೆಳೆಲ್ಲಾನೂ ಕಳಕೋಳ್ಳೋನು’’
ಅಂದಾಗವನು ‘‘ಲೊಟ್ಟಂಬಟ್ಟೆ,
ನೀನೇ ಕೆಟ್ಟೆ, ನೋಡಿಗೊ ನಾನು
ಹೊರಟೇ ಬಿಟ್ಟೆ’’ ಅಂತಂದ್ಬಿಟ್ಟು
ಹೊರ್ಟ್‌ಬಿಟ್ನಂತೆ
ಪಾಬ್ಲಿ ಅತ್ತೆ ಪಾರ್ವತಮ್ಮ
ಕೆಂಪು ಕಾಫಿ ಕಷಾಯಾನ
ಕೊಟ್ಬಿಟ್ಟವನಿಗ್ ಹೇಳಿದರಂತೆ
‘‘ಲೋಕಕ್ಕೆಲ್ಲಾ ಗೊತ್ತೇ ಗೊತ್ತು
ಪಾಬ್ಲಿ ಕಾಲಿಗ್ ಕಷಾಯದಷ್ಟು
ಒಳ್ಳೇದ್ಬೇರೆ ಏನೂ ಇಲ್ಲ
ತಿಂದ್ರೆ ಜೊತೇಗ್ ಉಂಡೆ ಬೆಲ್ಲ’’
ಕಾಲ್ಬೆರಳಿಲ್ಲದ್ ಪಾಬ್ಲಿ ಒಮ್ಮೆ
ರಾಮೇಶ್ವರಕ್ ಹೋಗಿದ್ನಂತೆ
ಹೋಗಲ್ ನೀರ್ನಲ್ ಈಜಿದ್ನಂತೆ
ಮೊದಲೇ ಚೆಕ್‌ಚೆಕ್ ಕರ್ಚೀಫಿಂದ
ಚೆನ್ನಾಗ್ ಮೂಗನ್ ಸುತ್ಕೊಂಡ್ನಂತೆ
ಯಾಕೇಂತಂದ್ರೆ ಪಾರ್ವತಮ್ಮ
‘‘ಮೂಗನ್ ಚೆನ್ನಾಗ್ ಸುತ್ತಿಟ್ಕೊಂಡ್ರೆ
ಕಾಲ್ಬೆರಳೇನೂ ಆಗೋದಿಲ್ಲ
ಲೋಕಕ್ಕೆಲ್ಲಾ ಗೊತ್ತೇ ಗೊತ್ತು
ಪಾಬ್ಲಿ ಕಾಲಿನ್ ಎಲ್ಲಾ ಬೆರಳು
ಕಾಪಾಡಿಟ್ಕೊಳ್ಳೋದರ ತಿರುಳು
ಮೂಗೊಂದ್ ಚೆನ್ನಾಗ್ ನೋಡ್ಕೋಬೇಕು
ಕರ್ಚೀಫ್ ಗಂಟ್ಕಟ್ ಹಾಕ್ಕೋಬೇಕು’’
ಅಂತ ಪಕ್ಕದ್ ಮನೇವ್ರ್ಗೆಲ್ಲಾ
ದಿನಬೆಳಗಾಗ್ತಾ ಹೇಳ್ತಿದ್ರಂತೆ
ಪಾಬ್ಲಿ ಜೋಕಾಗೀಜಿದ್ನಂತೆ
ದೋಣಿ ಹಡಗು ಏನಾದ್ರೂನು
ಹತ್ರ ಹತ್ರ ಬಂದಾಗ್ ಔನು
ಠಣ್ಣ-ಢಣ್ಣ-ಠಣ್ಣ ಅಂತ
ಗಂಟೆ ಇಟ್ಕೊಂಡ್ ಹೊಡದ್ಬಿಟ್ನಂತೆ
ಎಲ್ಲಾರೂನೂ ‘‘ನೋಡಿ! ನೋಡಿ!
ಪಾಬ್ಲಿ ಮೀನನ್ ಹಿಡಿಯೋದ್ ನೋಡಿ!
ಪಾರ್ವತಮ್ಮಾವ್ಳ್ ಬೆಕ್ಕಿಗ್ ನಾಳೆ
ಹಬ್ಬದೂಟ ಮಾಡ್‌ಹಾಕ್ತಾಳೆ’’
ಅಂತ ಘನವಾಗ್ ಕಿರಚಿದ್ರಂತೆ
ಆದ್ರೆ ಪಾಬ್ಲಿ ದಡಕ್ ಸೇರೋ
ಅಷ್ಟ್ರಲ್ ಸರ್ರಂತ್ ಒಂದ್ಬಿಳಿ ಶಾರ್ಕು
ಪರ್ರಂತ್ ಪಾಬ್ಲಿ ಚೆಕ್‌ಚೆಕ್ ಕರ್ಚೀಫ್
ಎಳಕೊಂಡ್ ಎಲ್ಲೋ ಹೋಗೇ ಬಿಡ್ತು
ಪಾಬ್ಲಿ ನೀರಿಂದ್ ಹೊರಗ್ಬಂದ್ ಬಗ್ಗಿ
ನೋಡ್ದಾಗ್ ಸಾಲಾಗಿದ್ ಕಾಲ್ಬೆರಳು
ಒಂದ್ನೆ ಬೆರಳು ಎರಡ್ನೆ ಬೆರಳು
ಮೂರ್ನೆ ನಾಕ್ನೆ ಐದ್ನೆ ಬೆರಳು
ಆರ್ನೆ, ಏಳ್ನೆ, ಎಂಟ್ನೆ ಬೆರಳು
ಒಂಬತ್ನೇದು ಹತ್ನೇ ಬೆರಳು
ಎರಡ್ಕಾಲ್ನಲ್ಲಿದ್ ಮಣಿಮಣಿ ಬೆರಳು
ಒಂದೂ ಇಲ್ದೆ ಮಂಗಮಾಯ
ಇದ್ಯಾವ್ ನ್ಯಾಯ? ಏನನ್ಯಾಯ!
ಆವತ್ತಿಂದ ಈವತ್ವರ್ಗೂ
ಯಾರ್ಗೂ ಪಾಬ್ಲಿ ಮಣಿಮಣಿ ಬೆರಳು
ಯಾರ್ಕಚ್ಕೊಂಡ್ಬಿಟ್ ಹೋಗ್ಬಿಟ್ರೂನ್ನೋದ್
ಗೊತ್ತೆ ಇಲ್ಲ ಪತ್ತೆ ಇಲ್ಲ
ಮೀನ್ಕಚ್ಕೊಂಡ್ಳೊ, ಮೊಸಳೆ ತಿಂದ್ಲೋ
ಹನುಮಂತನ್ ಹಿಡ್ದ್ ಸುರಸೆ ಉಂಡ್ಳೋ,
ಯಾರ್ಗೂನೂನೂ ಗೊತ್ತೇ ಇಲ್ಲ,
ಹೇಗದ್‌ಹೋಯ್ತೋ ದೇವ್ರೇ ಬಲ್ಲ.
ಬೆರಳೇ ಇಲ್ಲದ್ ಪಾಬ್ಲೀನ್ ಯಾರೋ
ದೋಣೀಲ್ ವಾಪಸ್ ಮನೇಗ್ ಕಳ್ಸಿ
ಪಾರ್ವತಮ್ಮ ಅಡಿಗೆ ಮಾಡ್ಸಿ
ಶಾವ್ಗೆ ಉಪ್ಪಿಟ್, ಖೀರನ್ ಬಡ್ಸಿ
ಹೇಳಿದ್ರಂತೆ, ‘‘ಪಾಬ್ಲಿ! ಮುತ್ತು!
ಲೋಕಕ್ಕೆಲ್ಲಾ ಗೊತ್ತೇ ಗೊತ್ತು
ಚಂದದ್ ಮೂಗಿಗ್ ಮೂಗ್ತಿ ಬೇಕೆ?
ಪಾಬ್ಲಿ ಕಾಲಿಗ್ ಕಾಲ್ಬೆರ್ಳ್ ಯಾಕೆ?’’
*ಕಪಿನಯ್ಯ ಅಲ್ಲ











Click it and Unblock the Notifications