ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪ ಏನಾದರೂ ದೀಪಕ್‌ನ ಕೊಲೆ ಮಾಡಿಬಿಟ್ಟರೆ?

By Staff
|
Google Oneindia Kannada News


‘‘ದೆವ್ವದ ಬಗ್ಗೆ ಯೋಚಿಸಿದರೆ ಸಾಕು ಎದುರು ಕಾಣಿಸಿಬಿಡುತ್ತದೆ,’’ ಅನು ತಮಾಷೆ ಮಾಡಿದಳು.

‘‘ಬೆಳಿಗ್ಗೆ ಇಷ್ಟೊತ್ತಿಗೆಲ್ಲ ನೀನು ನನ್ನ ಬಗ್ಗೆ ಯೋಚಿಸುತ್ತಿದ್ದೀಯ? ಈ ವಿಷಯ ಗೊತ್ತಾಗಿದ್ದು ತುಂಬಾ ಸಂತೋಷ.’’

‘‘ನೀನು ಯಾಕೆ ಇಷ್ಟು ಹೊತ್ತಿಗೆ ಕರೆ ಮಾಡಿದ್ದು?’’

‘‘ನಾನು ರಾತ್ರಿಯೆಲ್ಲ ಕೆಲಸ ಮಾಡುತ್ತಿದ್ದೆ.’’ ಆದರೂ ಅವನು ಉಲ್ಲಾಸವಾಗಿದ್ದಂತೆ ಕಂಡ. ‘‘ನಮಗೆ ಇನ್ನೊಂದು ಹೊಸ ಕೊಲೆಯ ಕೇಸು ಬಂದಿದೆ. ಈಗ ತಾನೆ ಕೆಲಸದಿಂದ ಬರುತ್ತಾ ನೀನು ಕೆಲಸಕ್ಕೆ ಹೋಗುವ ಮುಂಚೆ ತಿಂಡಿ ತಿನ್ನಲು ಬರುತ್ತೀಯ ಎಂದು ಯೋಚಿಸುತ್ತಿದ್ದೆ.’’

‘‘ನೀನು ಇಡೀ ರಾತ್ರಿ ಕೊಲೆ ಕೇಸಿನ ಮೇಲೆ ಕೆಲಸ ಮಾಡುತ್ತಿದ್ದೆ! ಸರಿ, ತಿಂಡಿಗೆ ಹೋಗಲು ಯಾಕಾಗಬಾರದು? ಹೋಗೋಣ.’’ ಇಂದು ಅವಳಿಗೆ ಕೆಲಸಕ್ಕೆ ಇಂತಹುದೇ ಸಮಯಕ್ಕೆ ಹೋಗಬೇಕು ಎಂದೇನೂ ಇರಲಿಲ್ಲ. ‘‘ನಾನು ಈಗ ತಾನೇ ಮನೆ ಬಿಡುತ್ತಿದ್ದೇನೆ. ನೀನು ಎಲ್ಲಿದ್ದೀಯ?’’

‘‘ನಾನು ನಿಮ್ಮ ಆಫೀಸಿನ ಹತ್ತಿರ ಭೇಟಿಯಾಗುತ್ತೇನೆ. ಅಲ್ಲೇ ಇರುವ ಆ ಚಿಕ್ಕ ಹೋಟೆಲಿಗೆ ಹೋಗೊಣ.’’

‘‘ಸರಿ. ಇನ್ನು ಸ್ವಲ್ಪ ಹೊತ್ತಿಗೆ ನೋಡೋಣ.’’ ಅವನು ಈಗ ನನಗೆ ಹಗಲು ರಾತ್ರಿ ಕರೆ ಮಾಡುತ್ತಾನೆ. ಅವನು ನನ್ನ ಪ್ರೇಮದಲ್ಲಿ ಬೀಳುತ್ತಿದ್ದಾನಾ? ತನ್ನ ಆಶಾದಾಯಕ ಮನಸ್ಥಿತಿ ಮತ್ತೆ ಹಿಂದಿರುಗುತ್ತಿರುವ ಭಾವನೆ ಅನೂಳಿಗೆ ಆಯಿತು. ಆದರೆ, ಇಷ್ಟು ಬೇಗ ಯಾವುದೇ ಹೊಸ ಸಂಬಂಧಕ್ಕೆ ತಾನು ಸಿದ್ದ ಎಂದು ಅವಳಿಗನ್ನಿಸಲಿಲ್ಲ. ಆದರೆ ದೀಪಕ್‌ ಈಗಾಗಲೆ ಇನ್ನೊಂದು ಮದುವೆ ಮಾಡಿಕೊಂಡಿದ್ದಾನೆ. ಇಷ್ಟರಲ್ಲೆ ಅವನಿಗೆ ಮಗುವೂ ಆಗಲಿದೆ. ಅವನಿಗೆ ಯಾವ ಪಶ್ಚಾತ್ತಾಪವೂ ಇದ್ದಂತಿಲ್ಲ. ಯಾಕೆ ಇವಳು ಮಾತ್ರ ತನ್ನ ಜೀವನವನ್ನು ಸ್ಥಗಿತ ಮಾಡಿಕೊಳ್ಳಬೇಕು? ಅವಳು ಮತ್ತೆ ಇನ್ನೆಂದೂ ಮಗುವನ್ನು ಹೆರುವುದು ಸಾಧ್ಯವಿಲ್ಲ ಎಂದು ಗೊತ್ತಾದ ಮೇಲೆಯೂ ಅವಳ ಬಗ್ಗೆ ಕಾಳಜಿ ವಹಿಸುತ್ತಿರುವ ಡ್ಯಾನ್‌ನನ್ನು ನೋಡಿದರೆ ಅವನು ಎಷ್ಟೊಂದು ತೆರೆದ ಮನಸ್ಸಿನವನು ಎಂದು ಗೊತ್ತಾಗುತ್ತದೆ. ತನಗೆ ವಂಶಾಧಿಕಾರಿಯನ್ನು, ಅದರಲ್ಲೂ ಸಾಧ್ಯವಾದರೆ ಗಂಡು ಮಗುವನ್ನು ಕೊಡಲಾರದ ಒಂದು ಹೆಣ್ಣಿನ ಜೊತೆಗೆ ಯಾವ ಭಾರತೀಯ ಗಂಡಸೂ ತನ್ನ ಸಮಯವನ್ನು ಹಾಳು ಮಾಡಿಕೊಳ್ಳುವುದಿಲ್ಲ.

ಅನು ಹೋಟೆಲ್‌ ತಲುಪಿದಾಗ ಡ್ಯಾನ್‌ ಟೇಬಲ್‌ ಒಂದರಲ್ಲಿ ಕುಳಿತು ಕಾಫಿ ಗುಟುಕುರಿಸುತ್ತಿದ್ದ. ಅವಳು ಹತ್ತಿರ ಬಂದಾಗ ಎದ್ದು ನಿಂತು, ಅವಳನ್ನು ಆಲಿಂಗಿಸಿಕೊಂಡು ಕೆನ್ನೆಯನ್ನು ಚುಂಬಿಸಿದನು. ಅನು ನಾಚಿದಳು, ಎಂದಿನಂತೆ. ಜನರ ಮುಂದೆ ನನಗೆ ಮುತ್ತಿಡಬೇಡ! ‘‘ರಾತ್ರಿಯೆಲ್ಲ ಕೆಲಸ ಮಾಡಿ ಸಾಕಾಗಿದೆ,’’ ಡ್ಯಾನ್‌ ನಕ್ಕ. ‘‘ನನಗೀಗ ನಿದ್ದೆಬೇಕು. ಆದರೆ, ನಾನು ಇಲ್ಲಿ ಈಗ ಕೆಫೀನ್‌ ಅನ್ನು ತುಂಬಿಸಿಕೊಳ್ಳುತ್ತಿದ್ದೇನೆ.’’

‘‘ನನಗೆ ಇಂದು ಕಚೇರಿಯಲ್ಲಿ ಮಾಡುವುದಕ್ಕೆ ಬಹಳ ಕೆಲಸಗಳಿವೆ. ಪ್ರತಿದಿನವೂ ಏನೋ ಒಂದು ಹೊಸ ಸಮಸ್ಯೆ ಇದ್ದೇ ಇರುತ್ತದೆ.’’ ಅನು ಉಲ್ಲಾಸದಿಂದ ಹೇಳಿದಳು. ‘‘ನಾನೇನು ಆಕ್ಷೇಪಣೆ ಮಾಡುತ್ತಿಲ್ಲ. ಗ್ರಾಹಕರಿಗೆ ಯಾವ ಸಮಸ್ಯೆಗಳೂ ಇಲ್ಲ ಅಂದರೆ, ಆಗ ನನಗೆ ನೌಕರಿಯೇ ಇರುವುದಿಲ್ಲ. ಮತ್ತೆ, ಈಗ ಯಾರು ಕೊಲೆಯಾಗಿದ್ದರೆ?’’

‘‘ಯಾವಾಗಲೂ ಯಾರಾದರೊಬ್ಬರು ಸಾಯುತ್ತಲೆ ಇರುತ್ತಾರೆ. ಅದೂ ನಿಗೂಢವಾಗಿ. ಕೊಲೆಗಾರ ತನ್ನಷ್ಟಕ್ಕೆ ತಾನೆ ಮುಂದೆ ಬಂದರೆ, ಆಗ ನನಗೆ ನೌಕರಿ ಇರುವುದಿಲ್ಲ. ನನ್ನ ಸಂಬಳ ಬರುತ್ತಿರುವಂತೆ ನೋಡಿಕೊಳ್ಳುವುದು ಈ ನಿಗೂಢಗಳೆ. ’’

‘‘ನೀನು ಈ ತರಹದಿಂದ ಜೀವನ ಸಾಗಿಸಬೇಕಿರುವುದು ತುಂಬ ವಿಷಾದದ ವಿಷಯ,’’ ಅನು ತಮಾಷೆ ಮಾಡಿದಳು. ಅವಳು ಅವನಿಗೆ ರೂಪಾಳ ಬಗ್ಗೆ ಹೇಳಬೇಕೆ? ಇವಳಿಗೆ ಡ್ಯಾನ್‌ನ ಪೋಲಿಸ್‌ ಬುದ್ಧಿ ಗೊತ್ತಿರುವ ಪ್ರಕಾರ, ಇವನು ರೂಪಾಳನ್ನು ಅಲ್ಲಿಂದ ಹೊರಗೆ ತರಲು ಬಯಸುತ್ತಾನೆ, ಇಲ್ಲವೆ ದೀಪಕ್‌ನನ್ನು ಬಂಧಿಸುವಂತೆ ಮಾಡುತ್ತಾನೆ. ಬೇಡ. ಯಾರಿಗೂ ಹೇಳಬೇಡ ಎಂದು ರೂಪ ನನಗೆ ಹೇಳಿದಳು. ಹೇಳಿದರೆ ನಾನು ಇನ್ನೂ ಹೆಚ್ಚಿನ ಸಮಸ್ಯೆ ಹುಟ್ಟುಹಾಕಿದಂತಾಗುತ್ತದೆ.

ಆದರೆ ಅವಳು ಯೋಚಿಸಿದಳು. ರೂಪ ಏನಾದರೂ ದೀಪಕ್‌ನ ಕೊಲೆ ಮಾಡಿಬಿಟ್ಟರೆ? ನಾನೇನಾದರು ಅವನನ್ನು ಕೊಲೆ ಮಾಡಿ ಅದರಿಂದ ಬಿಡಿಸಿಕೊಂಡು ಹೊರಬರುತ್ತಿದ್ದೆನೆ? ‘‘ನೀನು ಬಂಧಿಸಿದ ಆ ಹೆಂಗಸಿಗೆ ಕೊನೆಗೆ ಏನಾಯಿತು? ಅದೇ, ನಿನ್ನ ಚಿತ್ರ ಪತ್ರಿಕೆಯಲ್ಲಿ ಬಂದ ಕೇಸು.’’

‘‘ಓ, ಗಂಡನನ್ನು ಕೊಲೆ ಮಾಡಿದವಳ ವಿಷಯವೆ? ಸ್ವಯಂರಕ್ಷಣೆಗಾಗಿ ಮಾಡಿದ್ದು ಅಂತೇನಾದರೂ ಒಂದು ಕೇಸಿದ್ದರೆ ಅದು ಇದೇ. ಖಂಡಿತವಾಗಿ. ಆದರೆ ಅದನ್ನು ರುಜುವಾತು ಮಾಡುವುದು ಕಷ್ಟವಾಯಿತು.’’

‘‘ಯಾಕೆ?’’

‘‘ಅವಳು ಅವನನ್ನು ಕೊಂದ ರಾತ್ರಿ ಅವರ ಮಧ್ಯೆ ಜಗಳವಾದ ಯಾವ ಕುರುಹೂ ಇರಲಿಲ್ಲ. ನಾವು ಅವಳನ್ನು ಬಂಧಿಸಿದಾಗ ಅವಳ ಮೈಮೇಲೆ ಕಾಣಿಸುವಂತಹ ಗಾಯದ ಗುರುತುಗಳು ಇರಲಿಲ್ಲ. ಹೇಳಬೇಕೆಂದರೆ, ಆ ಇಡೀ ವಾರ ಅವನು ಅವಳ ಮೇಲೆ ಕೈ ಎತ್ತಿರಲಿಲ್ಲ. ಆದರೆ ಅವನು ಅವಳನ್ನು ಹತ್ತಾರು ವರ್ಷಗಳಿಂದ ಹೊಡೆಯುತ್ತಿದ್ದದ್ದು ಮಾತ್ರ ನಿಜ. ಜೊತೆಗೆ ಕಳೆದ ಮೂರು ವಾರದಿಂದ ಅವನು ಅವಳನ್ನು ಗುಂಡು ಹೊಡೆದು ಸಾಯಿಸುತ್ತೇನೆ ಎಂದು ಹೆದರಿಸುತ್ತಿದ್ದದ್ದೂ ನಿಜ. ಅವಳು ಅವನ ಬೆದರಿಕೆ, ದೌರ್ಜನ್ಯದಿಂದೆಲ್ಲ ರೋಸಿ ಹೋಗಿದ್ದಳು.’’

‘‘ಆ ಪತ್ರಿಕಾ ವರದಿಯಲ್ಲಿ ದವಡೆ ಹಲ್ಲು ಮುರಿದ ಬಗ್ಗೆ ಮತ್ತು ಚಾಕು ಚೂರಿಗಳಿಂದ ಆದ ಗಾಯಗಳಿಗೆ ನೂರಕ್ಕೂ ಮೇಲೆ ಹೊಲಿಗೆ ಹಾಕಿರುವ ಬಗ್ಗೆ ಬಂದಿತ್ತು.’’

ಡ್ಯಾನ್‌ ತಲೆ ಅಲ್ಲಾಡಿಸಿದ. ‘‘ಖಂಡಿತವಾಗೂ ಅಲ್ಲಿ ದೌರ್ಜನ್ಯದ ಇತಿಹಾಸವೇ ಇತ್ತು. ಆದರೆ ಕಾನೂನಿನ ಪ್ರಕಾರ, ಅವನು ಆ ರಾತ್ರಿ ಕುಡಿದಿದ್ದ ಕಾರಣದಿಂದ ದೌರ್ಜನ್ಯ ಎಸಗಲು -ತಾಂತ್ರಿಕವಾಗಿ- ಅಸಮರ್ಥನಾಗಿದ್ದ. ಅವಳು ಅವನ ಮೇಲೆ ಗುಂಡು ಹಾರಿಸಿದಾಗ ಅವನು ಹಾಸಿಗೆಯ ಮೇಲೆ ಬೋರಲು ಬಿದ್ದುಕೊಂಡಿದ್ದ. ಅದರ ಅರ್ಥ ಏನೆಂದರೆ, ಅವಳು ಅವನನ್ನು ಕೊಲ್ಲಬೇಕು ಎಂದು ಮೊದಲೆ ಯೋಚಿಸಿದ್ದಳು; ಅವಕಾಶ ಸಿಕ್ಕ ತಕ್ಷಣ ಮಾಡಿದ್ದಳು. ಅದೇನೂ ಆ ಸಮಯದಲ್ಲಿ ಏನು ಮಾಡಬೇಕು ಎಂದು ಗೊತ್ತಾಗದೆ, ಬಿಸಿಯಲ್ಲಿ’ ಮಾಡಿದ್ದು ಆಗಿರಲಿಲ್ಲ. ಇದು ಸ್ವಯಂರಕ್ಷಣೆಗಾಗಿ ಎನ್ನುವ ವಾದವನ್ನು ತಳ್ಳಿಹಾಕಿ, ಪೂರ್ವಯೋಜಿತ ಕೊಲೆ ಎಂದು ನಿರೂಪಿಸುತ್ತದೆ.’’

‘‘ಪಾಪ!’’ ದೀಪಕ್‌ ಅನೂಳಿಗಿಂತ ಎರಡು ಪಟ್ಟು ಹೆಚ್ಚು ತೂಕವಿದ್ದ. ಇನ್ನು ರೂಪ ದೀಪಕ್‌ನನ್ನು ಎದುರಿಸಬಲ್ಲಷ್ಟು ಬಲಶಾಲಿಯಾಗಿರಬಹು ಎಂದೇನೂ ಅವಳು ಭಾವಿಸಲಿಲ್ಲ. ಅದೂ ಅವನು ಕೋಪಗೊಂಡಾಗಲಂತೂ ಕಲ್ಪಿಸಲೂ ಸಾಧ್ಯವಿಲ್ಲ. ‘‘ಸಾಮಾನ್ಯವಾಗಿ ಹೆಂಗಸರು ಚಿಕ್ಕದಾಗಿ, ಗಂಡಸರಿಗಿಂತ ದುರ್ಬಲವಾಗಿರುತ್ತಾರೆ. ಅವಳು ಮತ್ತೆ ಹೇಗೆ ತಾನೆ ಸ್ವಯಂರಕ್ಷಣೆ ಮಾಡಿಕೊಳ್ಳಲು ಸಾಧ್ಯ? ’’

‘‘ಸ್ವಯಂ ರಕ್ಷಣೆ ಅಂದರೆ ಹೀಗಿರುತ್ತದೆ: ಏನಾದರೂ ಜಗಳವಾಗಿ, ಆ ಮನುಷ್ಯನ ಕೈಯಲ್ಲಿ ಯಾವುದಾದರೂ ಆಯುಧ ಇದ್ದಾಗ, ಅಥವ, ಅವಳನ್ನು ಹೊಡೆಯುತ್ತ, ಕೊಲ್ಲುತ್ತೇನೆ ಎಂದು ಬೆದರಿಸುತ್ತಿದ್ದಾಗ, ಅಂತಹ ಸಮಯದಲ್ಲಿ ಅವಳು ಅವನನ್ನು ಚಾಕುವಿನಿಂದ ತಿವಿದರೆ, ಇಲ್ಲವೆ ಗುಂಡು ಹೊಡೆದರೆ, ಅದು ಸ್ವಯಂರಕ್ಷಣೆಯಾಗುತ್ತದೆ. ಅದರ ಜೊತೆಗೆ, ತಾನು ಮಾಡಿದ್ದು ಕೇವಲ ತನ್ನನ್ನು ಸಂರಕ್ಷಿಸಿಕೊಳ್ಳುವುದಕ್ಕೆ ಮಾತ್ರ ಎಂದು ನ್ಯಾಯಮಂಡಳಿಗೆ ಚೆನ್ನಾಗಿ ಮನದಟ್ಟು ಮಾಡಬೇಕು. ’’

‘‘ಡ್ಯಾನ್‌, ಕಾನೂನುಗಳು ವಿಚಿತ್ರವಾಗಿರುತ್ತವೆ. ದೌರ್ಜನ್ಯಕ್ಕೊಳಗಾದ ವ್ಯಕ್ತಿಗೆ ಮಾತ್ರ ಅದು ಎಷ್ಟು ಭಯಾನಕವಾಗಿರುತ್ತದೆ ಎಂದು ಗೊತ್ತಿರುತ್ತದೆ. ಹತ್ತು ವರ್ಷದಿಂದ ತನ್ನ ಗಂಡನ ಭಯದಲ್ಲಿದ್ದ ಈ ನಿಷ್ಪಾಪಿ ಹೆಂಗಸಿನ ಬಗ್ಗೆ ನಾನು ಕೇವಲ ಊಹಿಸಿಕೊಳ್ಳಬಲ್ಲೆ. ಜೀವನಪೂರ್ತಿ ದೌರ್ಜನ್ಯಕ್ಕೊಳಗಾಗುವುದೊ, ಇಲ್ಲ ಸೆರೆಮನೆ ವಾಸವೊ, ಎರಡರಲ್ಲಿ ಯಾವುದು ಉತ್ತಮ?’’

‘‘ನ್ಯಾಯಾಲಯ ಇಂತಹ ದೌರ್ಜನ್ಯಕ್ಕೊಳಗಾದ ಹೆಂಗಸರ ಮಾನಸಿಕ ಸ್ಥಿತಿ ಹಾಗು ಇತರ ವಿಷಯಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತದೆ. ಅವಳಿಗೆ ಮರಣದಂಡನೆಯೂ ಕೊಡಲಿಲ್ಲ, ಜೀವಾವಧಿ ಶಿಕ್ಷೆಯನ್ನೂ ನೀಡಲಿಲ್ಲ.’’ ಡ್ಯಾನ್‌ ನಿಲ್ಲಿಸಿದ. ‘‘ನಾವು ನೋಡಿರುವ ಶಿಕ್ಷೆಗಳಲ್ಲೆಲ್ಲ ಅವಳಿಗೆ ಕೊಟ್ಟಿರುವ ಶಿಕ್ಷೆ ಬಹಳ ಮೆದುವಾದದ್ದು. ಅವಳು ಇನ್ನು ಐದು ವರ್ಷಕ್ಕೆಲ್ಲ ಪೆರೋಲ್‌ಗೆ ಅರ್ಹಳಾಗುತ್ತಾಳೆ. ಅಮೇಲೆ ಬಹುಶಃ ಬೇಗ ಬಿಡುಗಡೆಯೂ ಅಗಬಹುದು.’’

‘‘ನನಗೀಗ ನೆಮ್ಮದಿ ಆಯ್ತು. ಅವಳು ಜೈಲು ವಾಸಕ್ಕೆ ಅರ್ಹಳಲ್ಲ. ದೌರ್ಜನ್ಯ ಎಸಗುವ ಗಂಡನನ್ನು ಕೊಲ್ಲುವ ಯಾವ ಹೆಂಗಸನ್ನೂ ಶಿಕ್ಷಿಸಬಾರದು. ತನ್ನನ್ನು ಬದುಕಲು ಬಿಡುವುದಿಲ್ಲ ಎಂದಾಗ ಮಾತ್ರ ಹೆಂಗಸು ಗಂಡನನ್ನು ಕೊಲ್ಲುತ್ತಾಳೆ.’’

ಡ್ಯಾನ್‌ ಕೊಂಕು ನಗೆ ಬೀರಿದ. ‘‘ನಿನಗೆ ಕೋಪ ಬರದೆ ಇರುವಂತೆ ನಾನು ಹುಷಾರಿನಿಂದ ಇರುತ್ತೇನೆ. ಗಂಭೀರವಾಗಿ ಹೇಳಬೇಕೆಂದರೆ, ನನ್ನ ಕೆಲಸ ನಿನ್ನ ಕೆಲಸದಂತಲ್ಲ. ಅದು ಪ್ರತಿದಿನ ನನ್ನ ಜೊತೆಗೆ ಮನೆಗೂ ಬರುತ್ತದೆ. ಕೆಲವು ಸಲ, ನಾನು ನಿದ್ದೆ ಮಾಡಲು ಪ್ರಯತ್ನಿಸುತ್ತಿರುವಾಗಲೂ, ಆ ಕೊನೆಯ ಕ್ಷಣಗಳಲ್ಲಿ ಏನಾಯಿತು ಎಂದು ಊಹಿಸಿಕೊಳ್ಳುತ್ತ ಇರುತ್ತೇನೆ. ಗೊತ್ತಲ್ಲ, ಸತ್ತವರು ಅಲ್ಲಿ ನಿಜವಾಗಲೂ ಏನಾಯಿತು ಎಂದು ನಮಗೆ ಎಂದೂ ಹೇಳಲು ಸಾಧ್ಯವಿಲ್ಲ.’’

ಅಷ್ಟರಲ್ಲಿ ತಿಂಡಿ ಬಂತು. ಅನೂಳಿಗೆ ಒಂದೇ ಒಂದು ಕಡೆದು ಬೇಯಿಸಿದ ಮೊಟ್ಟೆ, ಹಾಗೂ ಡ್ಯಾನ್‌ಗೆ ಸಿಹಿದೋಸೆಗಳ ರಾಶಿಯೆ ಬಂತು.

‘‘ಅದು ಹೇಗೆ ನೀನು ಬೆಳಿಗ್ಗೆ ತಿಂಡಿಗೆ ಇಷ್ಟು ಸಿಹಿಯಾದ ತಿಂಡಿಯನ್ನು ತಿನ್ನುತ್ತೀಯ?’’ ಅವಳು ಕೇಳಿದಳು. ‘‘ಮಫ್ಫಿನ್‌ಗಳು, ಪ್ಯಾನ್‌ಕೇಕ್ಸ್‌, ಡ್ಯಾನಿಷ್‌ ಬೇಕರಿ ತಿಂಡಿಗಳು, ಇವೆಲ್ಲ ಜಂಕ್‌ ಫುಡ್‌’’

‘‘ಭಾರತದಲ್ಲಿ ನೀವು ಬೆಳಿಗ್ಗೆ ತಿಂಡಿಗೆ ಏನು ತಿನ್ನುತ್ತೀರ?’’

‘‘ಅಕ್ಕಿ ಅಥವ ಗೋಧಿಗೆ ಉಪ್ಪು, ಖಾರ, ಮಸಾಲೆ ಪದಾರ್ಥಗಳನ್ನು ಹಾಕಿ ಮಾಡಿದ ತಿಂಡಿಗಳು. ಸಿಹಿ ಖಾದ್ಯಗಳು ಅಲ್ಲ.’’ ಅನು ನಸುನಕ್ಕಳು. ‘‘ಭಾರತದಲ್ಲಿ ಏನು ಮಾಡುತ್ತಾರೆ ಎಂದು ಪ್ರತಿಯೊಂದರ ಬಗ್ಗೆಯೂ ನಾನು ಇಲ್ಲಿಗೆ ಬಂದ ಮೇಲೆ ಬಹಳಷ್ಟು ದಿನ ಹೋಲಿಸುತ್ತಿದ್ದೆ. ನಂತರ ನಿಧಾನವಾಗಿ ಅಮೇರಿಕಾದ ವಿಧಾನಗಳಿಗೆ ಹೊಂದಿಕೊಂಡೆ. ಈಗ ನೋಡಿದರೆ, ನೀನು ಹೋಲಿಕೆ ಮಾಡಲು ಪ್ರಾರಂಭಿಸಿಬಿಟ್ಟಿದ್ದೀಯ!!’’

‘‘ಆರೋಪಿಯ ಮೇಲೆ ಆರೋಪಿಸಿರುವ ಆರೋಪಗಳು ನಿಜವೆಂದು ಸಾಬೀತಾಗಿವೆ!’’

‘‘ಡ್ಯಾನ್‌, ನೀನು ಈ ವಾರಾಂತ್ಯ ಕೆಲಸ ಮಾಡುತ್ತಿದ್ದೀಯ?’’

‘‘ಮಾಡಬಹುದೇನೊ.’’

‘‘ಮಾಡಲೆ ಬೇಕೆ? ಅಥವ ನಿನಗೆ ಬೇಕಾದರೆ ಮಾತ್ರವೆ?’’

‘‘ಈಗ ಈ ಕೇಸ್‌ ಇರುವುದರಿಂದ ನನಗೆ ಗೊತ್ತಿಲ್ಲ. ಇದು ಬೇಗ ಪರಿಹಾರವಾಗ ಬಹುದು ಇಲ್ಲವೆ ಇನ್ನೂ ಜಾಸ್ತಿ ಕೆಲಸ ಮಾಡಬೇಕಾಗಿ ಬರಬಹುದು.’’ ಡ್ಯಾನ್‌ನ ಕಣ್ಣುಗಳು ಇದ್ದಕ್ಕಿದ್ದಂತೆ ಬೆಳಗಿದವು. ‘‘ಯಾಕೆ? ನಾವು ಡೇಟ್‌ ಮೇಲೆ ಹೋಗೋಣ ಎಂದೇನಾದರೂ ನೀನು ಕೇಳುತ್ತಿದ್ದೀಯ?’’

ಕೇಳುತ್ತಿರಬಹುದು. ಅನು ಅವನ ಪ್ರತಿಕ್ರಿಯೆಗಾಗಿ ಕಾಯುತ್ತ ಕಾಫೀಯನ್ನು ಹೀರಿದಳು.

‘‘ಕೇಳುತ್ತಿರಬಹುದು ಅಥವ ಕೇಳುತ್ತಿದ್ದೀಯ?’’

ಅವನ ಜೊತೆ ವಿನೋದ ಮಾಡುವುದಕ್ಕೆ ಅನೂಳಿಗೆ ಬಹಳ ಇಷ್ಟವಾಗುತ್ತಿತ್ತು. ಅವನು ಬಹಳ ಮುದ್ದಾದವನು. ನಾನು ಅದನ್ನು ಬಾಯಿಬಿಟ್ಟು ಹೇಳಲು ಬಯಸುತ್ತಾನೆ. ‘‘ನೀನು ಈ ಮುಂಚೆ ಕೊಟ್ಟಿದ್ದ ಬೈಕ್‌ ಸವಾರಿ ಪ್ರಸ್ತಾಪವನ್ನು ನಾನು ಈಗ ಸ್ವೀಕರಿಸಬಯಸುತ್ತೇನೆ. ನಿನ್ನ ಆ ಸೆಕ್ಸಿ ನಿಂಜಾ ಬೈಕ್‌ ಮೇಲೆ ನಾವು ಸವಾರಿ ಹೋಗೋಣವೆ?’’

‘‘ಒಂದು ನಿಮಿಷ - ಸೆಕ್ಸಿಯಾಗಿರುವುದು ನಿಂಜಾನಾ ಅಥವ ನಾನಾ?’’ ಡ್ಯಾನ್‌ ತನ್ನ ಮಾಮೂಲು ಸರಸಪ್ರವೃತ್ತಿಗೆ ಮರಳಿ, ಅವಳ ವಿನೋದವನ್ನು ತಾನೂ ಆಸ್ವಾದಿಸಲು ಪ್ರಾರಂಭಿಸಿದ.

‘‘ಹ್ಞುಂ... ನಿನ್ನ ಬೇರೆ ಹುಡುಗಿಯರು ಅದರ ಬಗ್ಗೆ ಏನು ಹೇಳಿದ್ದರು?’’

‘‘ನಾನು ಸೆಕ್ಸಿ ಎಂದು. ಆದರೆ ಅವರು ನಿನ್ನಷ್ಟು ಸಾಹಸಪ್ರವೃತ್ತಿಯವರಲ್ಲ. ಅವರೆಲ್ಲ ಮೋಟಾರ್‌ಬೈಕುಗಳು ಅಪಾಯಕಾರಿ ಎಂದು ಭಾವಿಸುತ್ತಾರೆ.’’

ಅವರೆಲ್ಲ? ಬೇರೆ ಯಾವ ಹುಡುಗಿಯರೂ ಇಲ್ಲ ಎಂದು ಅನು ಅಂದುಕೊಂಡಿದ್ದಳು. ಬಹಳ ಕಾಲದಿಂದ ಅವಳು ಮಾತ್ರ ಇದ್ದಾಳೆ, ಬೇರೆ ಯಾವ ಗರ್ಲ್‌ಫ್ರೆಂಡೂ ಇಲ್ಲ ಎಂದು ಅವಳು ತಿಳಿದಿದ್ದಳು.

‘‘ಸರಿ, ನಾನು ನಿನ್ನನ್ನು ಶನಿವಾರ ಬೆಳಿಗ್ಗೆ ಪಿಕ್‌ ಮಾಡುತ್ತೇನೆ.’’

‘‘ಸರಿ. ನಾವು ಲಾ ಹೋಂಡಾಗೆ ಹೈವೇ 9 ರಲ್ಲಿ ಹೋಗೋಣವೆ? ನಾನು ಆ ಕಡೆ ಕಾರಿನಲ್ಲಿ ಹೋಗುವಾಗ ಬಹಳ ಬೈಕುಗಳನ್ನು ನೋಡುತ್ತೇನೆ.’’

‘‘ಹೌದು. ಬೈಕ್‌ ಸವಾರರು ಆ ದಾರಿಯನ್ನು ಬಹಳ ಇಷ್ಟ ಪಡುತ್ತಾರೆ.’’

‘‘ಸರಿ ಮತ್ತೆ, ಇದು ಡೇಟ್‌,’’ ಅವಳು ಒಪ್ಪಿಕೊಂಡಳು. ‘‘ಹಾಗೂ, ಈ ಸಾರಿ ನಾನು ನಿನಗೆ ಊಟ ಕೊಡಿಸುತ್ತೇನೆ.’’

‘‘ಆಯ್ತು. ಇದು ಡೇಟ್‌.’’

ಅನು ಎದ್ದು ನಿಂತಳು. ಕನಿಷ್ಠ ಈಗಲಾದರೂ ಡೇಟ್‌ ಅಂದರೆ ಏನೆಂದು ನನಗೆ ಗೊತ್ತಾಯಿತು. ಹಿಂದೆ ಅನ್ನಿಸುತ್ತಿದ್ದಂತೆ ಆ ವಿಚಾರವಾಗಿ ನಾನೊಬ್ಬಳು ಶತಮೂರ್ಖಳು ಎಂದು ಈಗ ಅನ್ನಿಸುತ್ತಿಲ್ಲ.

‘‘ಡ್ಯಾನ್‌, ಅವರು ನನ್ನನ್ನು ಹುಡುಕಲು ಆರಂಭಿಸುವ ಮುಂಚೆ ನಾನು ಕಚೇರಿಗೆ ಹೋಗಬೇಕು. ಆಮೇಲೆ ಕರೆ ಮಾಡು... ನೀನು ಸ್ವಲ್ಪ ಹೊತ್ತು ನಿದ್ದೆ ಮಾಡಿದ ಮೇಲೆ.’’

‘‘ನನಗೊಂದು ಮುತ್ತು ಕೊಡು.’’ ಡ್ಯಾನ್‌ ಅವಳನ್ನು ತನ್ನತ್ತ ಸೆಳೆದ.

‘‘ಇಲ್ಲ! ನಾವು ಭಾರತದಲ್ಲಿ ಹಾಗೆ ಮಾಡುವುದಿಲ್ಲ.’’

ಅವನು ಸುತ್ತ ನೋಡಿದ. ‘‘ನಿನಗೆ ಈ ಜಾಗ ಭಾರತದಲ್ಲಿರುವ ತರಹ ಕಾಣಿಸುತ್ತಿದೆಯ?’’

ಅನು ಜೋರಾಗಿ ನಗುತ್ತ ಬಾಗಿಲಿನತ್ತ ನಡೆದಳು. ಹೊರಹೋಗುತ್ತ ಕಡೆಗಣ್ಣಿನಲ್ಲಿ ಡ್ಯಾನ್‌ ಮತ್ತೆ ಕುಳಿತು, ಕಾಫಿಯನ್ನು ಕೈಗೆತ್ತಿಕೊಂಡದ್ದನ್ನು ಗಮನಿಸಿದಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X