• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೀಪಕ್‌ಗೆ ನಿಜವಾಗಲೂ ಆಗಿದ್ದೇನು? ಈಗ ಪವನ್‌ ಎಲ್ಲಿದ್ದಾನೆ?

By Staff
|

ಡ್ಯಾನ್‌ ಅವಳನ್ನು ಪ್ರಾಮಾಣಿಕವಾಗಿ ಕೇಳಿಕೊಂಡ. ಇದು ಭಾರತವಾಗಿರಲಿಲ್ಲ, ಹಾಗು ಅವಳಿಗೆ ಅಮೇರಿಕದಲ್ಲಿನ ಕಾನೂನು ವ್ಯವಸ್ಥೆ ಅರ್ಥವಾಗಿರಲಿಲ್ಲ. ಇದು ಡ್ಯಾನ್‌ನ ಇಲಾಖೆ. ನಾನು ಸುಮ್ಮನೆ ಅವನ ಮಾತು ಕೇಳಬೇಕು.

‘ಡ್ಯಾನ್‌, ರೂಪಾಳಿಗೂ ಒಬ್ಬ ಲಾಯರ್‌ನ ಅವಶ್ಯಕತೆ ಇರಬಹುದು. ದಯವಿಟ್ಟು ಅವಳಿಗೆ ಸಹಾಯ ಮಾಡು!’

‘ಮೊದಲ ವಿಷಯ ಮೊದಲಿಗೆ. ಅವಳದ್ದನ್ನು ನಾನು ಆಮೇಲೆ ನೋಡುತ್ತೇನೆ. ನೀನು ಈಗ ಈ ವಿಷಯದಲ್ಲಿ ನನ್ನನ್ನು ನಂಬಬೇಕು. ’

ಡ್ಯಾನ್‌ ಅವಳನ್ನು ಹೊರಗಿದ್ದ ಡಿಟೆಕ್ಟಿವ್‌ಗಳ ಬಳಿಗೆ ಕರೆದುಕೊಂಡು ಹೋದ. ‘ನಾನೆ ಇವಳನ್ನು ಪೋಲಿಸ್‌ ಠಾಣೆಗೆ ಕರೆದುಕೊಂಡು ಬರುತ್ತೇನೆ. ಮೊದಲಿಗೆ ನಮಗೊಬ್ಬ ಲಾಯರ್‌ ಬೇಕು. ’

‘ಸರಿ, ’ ಒಲ್ಲದ ಮನಸ್ಸಿನಿಂದ ಸ್ಮಿತ್‌ ಒಪ್ಪಿಕೊಂಡ. ‘ನಾವು ಅವರನ್ನು ಕೇವಲ ಪ್ರಶ್ನಿಸುತ್ತಿದ್ದೇವೆ, ಡ್ಯಾನ್‌. ಅವರ ಮೇಲೆ ಯಾವುದೆ ಆರೋಪಗಳಿಲ್ಲ. ನಾವು ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ಪ್ರಶ್ನಿಸಿಬೇಕು, ಅಷ್ಟೆ. ಗೊತ್ತಾಯಿತೆ? ಸರಿ, ಹಾಗಿದ್ದರೆ ನಾವು ನಿಮ್ಮನ್ನು ಅಲ್ಲಿಯೆ ನೋಡುತ್ತೇವೆ. ’

ಡ್ಯಾನ್‌ ತನ್ನ ಲಾಯರ್‌ ಸ್ನೇಹಿತನಿಗೆ ಕರೆ ಮಾಡಿದ. ಆತ ಇವರನ್ನು ಪೋಲಿಸ್‌ ಠಾಣೆಗೆ ಬಂದು ಭೇಟಿಯಾಗಲು ಒಪ್ಪಿಕೊಂಡ. ಇಷ್ಟೆಲ್ಲ ಆಗುತ್ತಿದ್ದರೂ ಅನೂಳಿಗೆ ಯಾವುದೆ ಯೋಚನೆ ಆಗಲಿಲ್ಲ. ನನಗೆ ಅವರು ಏನೂ ಮಾಡಲಾಗುವುದಿಲ್ಲ. ನಾನು ಅಲ್ಲಿ ಇರಲೆ ಇಲ್ಲ. ಇಲ್ಲಿಯ ತನಕ ನಾನು ರೂಪಾಳನ್ನು ನೋಡೇ ಇಲ್ಲ.

ಡ್ಯಾನ್‌ ಅನೂಳನ್ನು ತನ್ನ ಕಾರಿನಲ್ಲಿ ಡೌನ್‌ಟೌನ್‌ನಲ್ಲಿದ್ದ ಠಾಣೆಗೆ ಕರೆದುಕೊಂಡು ಹೊರಟ. ಅದು ಅವಳ ಮನೆಯಿಂದ 15 ಮೈಲಿ ದೂರ ಇತ್ತು. ರಷ್‌-ಅವರ್‌ ಟ್ರಾಫಿಕ್‌ನಲ್ಲಿ ಬೇರೆ ಕಾರುಗಳು ಒಂದರ ಹಿಂದೆ ಒಂದು ತೆವಳುತ್ತಿದ್ದಾಗ ಡ್ಯಾನ್‌ ಹಾಗು ಅನು ಕಾರ್‌ಪೂಲ್‌ ಲೇನಿನಲ್ಲಿ ವೇಗವಾಗಿ ಹೊರಟರು.

ಸೆಲ್‌ಫೋನ್‌ ಶಬ್ದ ಮಾಡಿತು. ಪುಣ್ಯಕ್ಕೆ ಅದು ನನ್ನ ಸೆಲ್‌ಫೋನ್‌ ಅಲ್ಲ ಎಂದುಕೊಂಡಳು ಅನು.

ಡ್ಯಾನ್‌ ಅದಕ್ಕೆ ಕೂಡಲೆ ಉತ್ತರಿಸಿದ. ‘ಕೂಪರ್‌ ಇಲ್ಲಿ. ನಾವೀಗ ದಾರಿಯಲ್ಲಿದ್ದೇವೆ. ಬಹುಶಃ ಇನ್ನೊಂದು ಹತ್ತು ನಿಮಿಷ ಅಷ್ಟೆ... ಸರಿ, ನಿಮ್ಮ ಜೊತೆ ಶ್ರೀಮತಿ ರಂಜನ್‌ ಇದ್ದಾರ? ನಾವು ಬೇಗ ಅಲ್ಲಿರುತ್ತೇವೆ. ’

‘ರೂಪಾಳೂ ಠಾಣೆಗೆ ಬರುತ್ತಿದ್ದಾಳಾ, ಡ್ಯಾನ್‌?’

ಹೌದು. ಅವನ ಗಮನವೆಲ್ಲ ರಸ್ತೆಯ ಮೇಲೆಯೆ ಇದ್ದಂತಿತ್ತು. ಅವನಿಗೆ ನನ್ನ ಮೇಲೆ ಕೋಪವೆ? ಅಥವ ಒತ್ತಡದಲ್ಲಿ ಇದ್ದಾನೆಯೆ?

ಅವನ ಕಾರು ಪೋಲಿಸ್‌ ಠಾಣೆಯ ಮುಂದೆ ನಿಂತಿತು. ಕಾರಿನ ಮುಂದಿನ ಪಾರ್ಕಿಂಗ್‌ ಬೋರ್ಡಿನ ಮೇಲೆ ‘ಅಧಿಕೃತ ಕಾರುಗಳು ಮಾತ್ರ’ ಎಂದಿತ್ತು. ದೀಪಕ್‌ ಹೇಗೆ ಸತ್ತ? ಯಾಕೆ ಅದು ಅಷ್ಟು ನಿಗೂಢವಾಗಿದೆ? ಅವನನ್ನು ಬಹುಶಃ ರೂಪಾಳೆ ಕೊಂದಿರಬೇಕು. ನನಗೆ ಅವಳ ಬಗ್ಗೆ ಹೆಮ್ಮೆಯೆನಿಸುತ್ತದೆ. ಅವಳು ಅವನನ್ನೇದರೂ ಸ್ವಯಂರಕ್ಷಣೆಗಾಗಿ ಕೊಂದಿದ್ದರೆ ನ್ಯಾಯಾಲಯ ಅವಳನ್ನು ಆರೋಪಮುಕ್ತಳನ್ನಾಗಿ ಮಾಡಬೇಕು... ಆದರೆ ಬಹುಶಃ ಅವನು ಬೇರೆ ಯಾರಿಂದಲೊ ಕೊಲೆ ಆಗಿರಬಹುದು. ಹಾಗೆ ನೋದಿದರೆ ನಮ್ಮೆಲ್ಲೆರ ಒಳಗೆ ಕೊಲೆ ಮಾಡುವ ಸಹಜಪ್ರವೃತ್ತಿ ಇರುವುದಿಲ್ಲವೇನು? ಅಂದು ರಾತ್ರಿ ಪವನ್‌ ಊಟ ಮಾಡುತ್ತ ಅವನ ಜೊತೆಯೆ ಇದ್ದ. ಅವರಿಗೇನಾದರೂ ಡ್ಯಾನ್‌ ಸಹಾಯ ಮಾಡಿದನೆ? ಈ ಮೂವರಿಗೂ ದೀಪಕ್‌ನ ಬಗ್ಗೆ ಜಿಗುಪ್ಸೆ ಇತ್ತು, ಅಥವ ಅವನ ಮೇಲೆ ಕೋಪವಿತ್ತು. ಹಾಗೆಂದು ಯೋಚಿಸುತ್ತ ಅನು ಮುಗುಳ್ನಕ್ಕಳು. ಬಹುಶಃ ಮೂವರೂ ಸೇರಿಕೊಂಡು ಮಾಡಿರಬೇಕು. ವಿಚಿತ್ರವಾಗೆಂಬಂತೆ, ಡ್ಯಾನ್‌ ಅಥವ ಪವನ್‌ ಇದರಲ್ಲಿ ಭಾಗಿಯಾಗಿರಬಹುದಾದ ಆಲೋಚನೆಯೆ ಅವಳಲ್ಲಿ ರೋಮಾಂಚನ ಉಂಟು ಮಾಡಿತು. ಅಷ್ಟಕ್ಕೂ, ದೀಪಕ್‌ ಅದಕ್ಕೆ ಅರ್ಹನೆ ಆಗಿದ್ದ.

ಪೋಲಿಸ್‌ ಠಾಣೆಯಲ್ಲಿ ಹಲವರಿಗೆ ಡ್ಯಾನ್‌ ಪರಿಚಯದ ಕೈ ಬೀಸಿದ. ಅವರೆಲ್ಲರೂ ಅವನಿಗೆ ಗೊತ್ತಿರುವುದು ಸಹಜ. ಕೆಲವರು ಅವನತ್ತ ಕುತೂಹಲದಿಂದ ನೋಡಿದರು. ಭಾರತದಲ್ಲಿ ಹುಟ್ಟಿದ ಅವನ ರಹಸ್ಯಾತ್ಮಕ ಗರ್ಲ್‌ಫ್ರೆಂಡ್‌ ಎಂದು ಅವರು ಅಂದುಕೊಳ್ಳುತ್ತಿರಬೇಕು. ನಾನು ಅಷ್ಟೇನೂ ಚೆನ್ನಾಗಿಲ್ಲದ ಬಟ್ಟೆ ಹಾಕಿಕೊಂಡು ಬಂದಿದ್ದೇನೆ. ಸರಿಯಾಗಿ ಕೂದಲು ಸಹ ಬಾಚಿಕೊಂಡಿಲ್ಲ! ಡ್ಯಾನ್‌ ಒಂದು ಕೋಣೆಯ ಬಾಗಿಲನ್ನು ತನ್ನ ಆ್ಯಕ್ಸೆಸ್‌ ಕಾರ್ಡ್‌ನಿಂದ ತೆರೆದ. ಅವರು ಫ್ಲೋರೊಸೆಂಟ್‌ ದೀಪಗಳಿಂದ ಪ್ರಕಾಶವಾಗಿದ್ದ ಒಂದು ವಿಶಾಲವಾದ ಕೊಣೆಯ ಒಳಗೆ ಅಡಿಯಿಟ್ಟರು. ಫೋನುಗಳು ರಿಂಗುಣಿಸುತ್ತಿದ್ದವು. ಎಲ್ಲಾ ಕಡೆಯೂ ಚಿಕ್ಕಚಿಕ್ಕ ಟೇಬಲ್‌ಗಳಿದ್ದು, ಅವುಗಳ ಮೇಲೆಲ್ಲ ಕಾಗದಗಳ ರಾಶಿ ಇದ್ದವು. ಆದರೆ ಆ ಟೇಬಲ್‌ಗಳ ಹಿಂದಿನ ಬಹಳಷ್ಟು ಕುರ್ಚಿಗಳು ಖಾಲಿ ಇದ್ದವು. ಅನೂಗೆ ವಾಡಿಕೆಯಾಗಿದ್ದ ಹೈಟೆಕ್‌ ಕಂಪನಿಗಳ ಸದ್ದುಗದ್ದಲವಿಲ್ಲದ, ನೀಟಾದ ಕ್ಯೂಬಿಕಲ್‌ಗಳಿಗೆ ಇಲ್ಲಿನ ಪರಿಸರ ಹೊರತಾಗಿತ್ತು.

ಡ್ಯಾನ್‌ ದಪ್ಪನೆಯ ಬಾಗಿಲೊಂದನ್ನು ತೆರೆದು, ಒಳಗೆ ಒಂದು ಕುರ್ಚಿ ಹಾಗು ಚೌಕಾಕಾರದ ಕಾನ್ಫರೆನ್ಸ್‌ ಟೇಬಲ್‌ ಇದ್ದ ಕೋಣೆಯಾಳಗೆ ಅವಳನ್ನು ಕರೆದುಕೊಂಡು ಹೋದ.

‘ನಾನು ಒಂದೆರಡು ನಿಮಿಷಗಳಲ್ಲಿ ವಾಪಸು ಬರುತ್ತೇನೆ, ’ ಎಂದು ಹೇಳಿ ಅವನು ಅವಸರದಿಂದ ಹೊರಗೆ ಹೋದ. ಆ ಭಾರವಾದ ಬಾಗಿಲು ಅವನ ಹಿಂದೆ ಮುಚ್ಚಿಕೊಂಡಿತು.

ಆ ದೊಡ್ಡನೆಯ, ಬೋಳುಗೋಡೆಗಳ, ಸ್ವಲ್ಪ ತಣ್ಣಗಿದ್ದ ರೂಮಿನಲ್ಲಿ ಒಂದು ಕುರ್ಚಿಯ ಮೇಲೆ ಅನು ಕುಳಿತುಕೊಂಡಳು. ಛಾವಣಿಯಿಂದ ತೂಗು ಹಾಕಿದ್ದ ದೀಪ ಟೇಬಲ್‌ನ ಮೇಲೆ ಬಿರುಸಾದ ಬೆಳಕನ್ನು ಬೀರುತ್ತಿತ್ತು. ಅವಳು ಟೇಬಲ್‌ ಅನ್ನು ಸೂಕ್ಷ್ಮವಾಗಿ ಗಮನಿಸಿದಳು. ಅದು ಹಳೆಯದಾಗಿದ್ದು, ಅಲ್ಲಲ್ಲಿ ಒರಟೊರಟಾಗಿ ಕೆತ್ತಿದ್ದ, ಗೀರಿದ್ದ ಗುರುತುಗಳಿದ್ದವು. ಉದ್ದನೆಯ ಕನ್ನಡಿ ಗೋಡೆಯಾಂದನ್ನು ಆವರಿಸಿತ್ತು. ಆ ಕನ್ನಡಿಯ ಹಿಂದಿನಿಂದ ಅವರು ನನ್ನನ್ನು ನೋಡಬಹುದು ಎಂದು ಅನು ಅಂದುಕೊಂಡಳು.

ಅನು ತನ್ನ ಗಡಿಯಾರದ ಕಡೆ ನೋಡಿದಳು. ಆಗಲೆ 9 ಗಂಟೆ ಮೀರಿತ್ತು. ಆ ದಿನ ಅವಳಿಗೆ ಹಲವಾರು ಮೀಟಿಂಗ್‌ಗಳಿದ್ದವು. ನಾನು ಕೆಲಸದಲ್ಲಿ ಅವರಿಗೆ ಏನು ಹೇಳಲಿ? ತಕ್ಷಣ ಸೂಸನ್‌ಗೆ ಫೋನ್‌ ಮಾಡಿ ಅವಸರದಲ್ಲಿ ಒಂದು ಧ್ವನಿಸಂದೇಶವನ್ನು ಬಿಟ್ಟಳು. ‘ಸೂಸನ್‌, ಪರ್ಸನಲ್‌ ಎಮರ್ಜೆನ್ಸಿಯಿಂದಾಗಿ ನಾನಿವತ್ತು ರಜಾ ತೆಗೆದುಕೊಳ್ಳಬೇಕಿದೆ. ಕುಟುಂಬದಲ್ಲಿ ಒಂದು ಸಾವು ಘಟಿಸಿದೆ.’

ಅದನ್ನು ಹೇಳಲು ಅವಳು ಅಳುಕಿದಳು. ಆದರೆ ಒಂದು ರೀತಿಯಲ್ಲಿ ಅದು ನಿಜವಾಗಿತ್ತು. ‘ದಯವಿಟ್ಟು ನನ್ನ ಎಲ್ಲ ಸಂದರ್ಶನಗಳನ್ನು ಈ ವಾರದ ಕೊನೆಗೆ ಮುಂದೂಡು. ನಾನೀಗ ಹೋಗಬೇಕು. ಆಮೇಲೆ ನಿನಗೆ ಕರೆ ಮಾಡುತ್ತೆನೆ. ಬಹಳ ಧನ್ಯವಾದಗಳು, ಸೂಸನ್‌. ಟೇಕ್‌ ಕೇರ್‌.’

ಆ ಭಾರವಾದ ಬಾಗಿಲನ್ನು ತಟ್ಟಿದ್ದು ಕೇಳಿಸಿತು. ಅದರ ಹಿಂದೆಯೆ ಅದು ದೊಡ್ಡದಾಗಿ ತೆರೆದುಕೊಂಡಿತು. ಈ ಸಲ ಡ್ಯಾನ್‌ ಬೇರೊಬ್ಬ ಬಿಳಿಯ ವ್ಯಕ್ತಿಯ ಜೊತೆ ಪ್ರತ್ಯಕ್ಷನಾದ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more