ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಾಯ 16 : ಎದೆಯ ಕೂಗು ಮೀರಿ...

By Staff
|
Google Oneindia Kannada News

'ದೀಪಕ್‌ನನ್ನು ಇಂಪ್ರೆಸ್‌ ಮಾಡಲು ಅನು ಮುಂದಾದಳೇ?ಆ ವಾರವೆಲ್ಲ ಡ್ಯಾನ್‌ಗೆ ಫೋನ್‌ ಮಾಡಬೇಕೊ ಬೇಡವೊ ಎಂದು ಅನು ಬಹಳ ಯೋಚಿಸಿದಳು. ಅವಳು ಆತನೆಡೆಗೆ ನಿಜವಾಗಲೂ ಆಕರ್ಷಿತಳಾಗಿದ್ದಳು. ಆದರೆ ಅವನೊಂದಿಗೆ ಅವಳಿಗೆ ಭವಿಷ್ಯವಿತ್ತೆ? ಆವಳೇನಾದರೂ ಈಗ ಡ್ಯಾನ್‌ಗೆ ಫೋನ್‌ ಮಾಡಿದರೆ, ಆಗೇನಾದರೂ ಅವನು ಬರುವ ವಾರಾಂತ್ಯಕ್ಕೆ ಭೇಟಿಯಾಗೋಣ ಎಂದರೆ ಏನು ಮಾಡುವುದು? ಅದು ಅಂತಹ ಒಳ್ಳೆಯ ಯೋಚನೆ ಅಲ್ಲ! ಅದಕ್ಕಿಂತ ಮೊದಲು ಬೆಂಗಳೂರಿನವನಾದ, ಕನ್ನಡ ಮಾತನಾಡುವ ಭಾರತೀಯ ದೀಪಕ್‌ನನ್ನು ಭೇಟಿಯಾಗಿ, ಅವನೇನು ಹೇಳುತ್ತಾನೆ ಎಂದು ತಿಳಿದುಕೊಂಡ ನಂತರ ಮುಂದಿನದನ್ನು ಯೋಚಿಸಲು ನಿರ್ಧರಿಸಿದಳು. ಆತನೊಂದಿಗೆ ಎಲ್ಲವೂ ಸುಗಮವಾಗಿ ಸಾಗಿದ ಪಕ್ಷದಲ್ಲಿ ಅದಕ್ಕಿಂತ ಹೆಚ್ಚಿನದು ಅವಳಿಗೆ ಏನೂ ಇರಲಿಲ್ಲ.

ಶುಕ್ರವಾರ ಬೆಳಗ್ಗೆಯೆ ಈ ಸಾರಿಯೂ ತಪ್ಪದಂತೆ ದೀಪಕ್‌ನಿಂದ ಇ-ಮೇಯ್ಲ್‌ ಬಂತು.

ಆತ್ಮೀಯ ಅನು,

ಜಪಾನ್‌ನಿಂದ ವಾಪಸು ಬಂದಿದ್ದೇನೆ. ಇಂದು ರಾತ್ರಿಗೆ ಕರೆ ಮಾಡುತ್ತೇನೆ. ನಾಳೆಯ ಸಾಯಂಕಾಲದ ಊಟಕ್ಕೆ ರೆಸ್ಟಾರೆಂಟ್‌ನಲ್ಲಿ ಈಗಾಗಲೆ ಸೀಟು ಕಾದಿರಿಸಿದ್ದೇನೆ.

ಆದರದಲ್ಲಿ,

ದೀಪಕ್‌.

ಅವಳು ನಸುನಕ್ಕಳು. ಇದೆಲ್ಲ ನಿಜ ಎಂದು ನಂಬುವುದೇ ಕಷ್ಟವಾಯಿತು ಅವಳಿಗೆ!

ಅಂದು ರಾತ್ರಿ ಅವಳು ತನ್ನ ಯೋಗಾಭ್ಯಾಸದ ತರಗತಿ ಮುಗಿಸಿಕೊಂಡು ಮನೆಗೆ ಬಂದಾಗ ಅವಳ ಆನ್ಸರಿಂಗ್‌ ಯಂತ್ರದ ಸಂದೇಶ ದೀಪ ಮಿನುಗುತ್ತಿತ್ತು. ದೀಪಕ್‌! ನಾನು ಅವನ ಕರೆಯನ್ನು ತಪ್ಪಿಸಿಕೊಂಡೆನೇನು? ಹೊಸ ಸಂದೇಶಗಳಿಗಾಗಿ ಅವಳು ಯಂತ್ರದ ಗುಂಡಿಯನ್ನು ಒತ್ತಿದಳು.

'ಹಾಯ್‌, ಅನು, ನಾನು ಡ್ಯಾನ್‌. ಸುಮ್ಮನೆ ಕರೆ ಮಾಡಿದೆ. ಹೇಗಿದ್ದೀರಾ? ನಿಮಗೆ ಸಮಯ ಸಿಕ್ಕಾಗ ನನಗೊಂದು ಕರೆ ಮಾಡಿ." ಓಹ್‌ ಹೋ, ಏನಿದು? ಇಲ್ಲಿ ಅಮೇರಿಕಾದಲ್ಲಿ ಶುಕ್ರವಾರವಾದರೆ ಸಾಕು ಜನ ಏಕಾಂಗಿಗಳಾಗಿಬಿಡುತ್ತಾರೇನು?

ಮುಂದಿನ ಸಂದೇಶ : 'ಹಾಯ್‌, ಅನು, ಶುಭ ಇಲ್ಲಿ. ಈ ಶನಿವಾರ ಒಂದು 40 ಜನ ಔತಣದ ಪಾರ್ಟಿಗೆ ಸೇರುತ್ತಿದ್ದೇವೆ. ನೀನೂ ಬಾ." ಪರಿಚಿತ ಭಾರತೀಯ ಬಳಗದಲ್ಲಿ ಹೀಗೇ ಪರಸ್ಪರರ ಸಮಾನ ಸ್ನೇಹಿತರಿಂದ ಪರಿಚಯಿಸಲ್ಪಟ್ಟಿದ್ದವಳು ಶುಭ. ಇನ್ನೂ ಅವಿವಾಹಿತೆಯಾಗಿರುವ ನನ್ನ ಬಗ್ಗೆ ಈ ಭಾರತೀಯ ಸ್ನೇಹಿತರಿಗೆ ಕಾಳಜಿ ಹೆಚ್ಚಾಗಿ ಕೊನೆಯ ನಿಮಿಷದಲ್ಲಿ ಪಾರ್ಟಿಗೆ ಆಹ್ವಾನಿಸುತ್ತಿದ್ದಾರೆ. ಕೊನೆಯ ನಿಮಿಷದಲ್ಲಿ ಬರುವ ಆಹ್ವಾನವನ್ನು, ಅದೂ 40-50 ಜನ ಅಪರಿಚಿತರನ್ನು ಭೇಟಿಯಾಗಲು ಅವಳೆಂದೂ ಒಪ್ಪಿಕೊಳ್ಳುತ್ತಿರಲಿಲ್ಲ. ಧನ್ಯವಾದಗಳು, ಆದರೆ ಬೇಡ, ಧನ್ಯವಾದಗಳು. ಅವಳ ಸಾಮಾಜಿಕ ಜೀವನ ಏನೇ ಇರಬಹುದು, ಆದರೆ ನೀರಸವಾಗಿಯಂತೂ ಇಲ್ಲ ಎಂದು ಅವರಿಗೆಲ್ಲ ಗೊತ್ತಿಲ್ಲ! ಭಾರತೀಯ ದಂಪತಿಗಳೆಲ್ಲ ಪ್ರತಿ ವಾರಾಂತ್ಯವೂ ಏನೋ ಒಂದು ಪಾರ್ಟಿ ಎಂದು ಭೇಟಿಯಾಗುತ್ತಲೇ ಇರುವಂತಹ ಸಂಪ್ರದಾಯದಿಂದ ಹೊರಗೆ ಅವಳು ತನ್ನ ಜೀವನವನ್ನು ನಡೆಸುತ್ತಿದ್ದಳು.

ಯಂತ್ರ ಮುಂದಿನ ಸಂದೇಶಕ್ಕೆ ಮುಂದುವರಿಯಿತು. 'ಹಲೋ, ಅನು, ನಾನು ದೀಪಕ್‌. ನಿಮ್ಮ ಹತ್ತಿರ ನನ್ನ ಮೊಬೈಲ್‌ ನಂಬರ್‌ ಇದೆ. ಈಗ ಮನೆಯಲ್ಲಿದ್ದೇನೆ. ದಯವಿಟ್ಟು ಕರೆ ಮಾಡಿ." ಅವಳು ಆ ಮನುಷ್ಯನನ್ನು ಇನ್ನೂ ಚೆನ್ನಾಗಿ ಅರಿತುಕೊಂಡೇ ಇಲ್ಲ. ಹಾಗೂ ಆತ ಬಂದು ಅವಳನ್ನು ಅವಳ ಮನೆಯಿಂದ ಕರೆದೊಯ್ಯುವುದು ಅವಳಿಗೆ ಬೇಕಿರಲಿಲ್ಲ. ಅವನಿಗೆ ನೇರವಾಗಿ ರೆಸ್ಟಾರೆಂಟ್‌ನಲ್ಲಿ ಭೇಟಿಯಾಗಲು ಹೇಳುವುದೇ ಒಳ್ಳೆಯದು.

ಅನು ತನ್ನ ವಾರ್ಡ್‌ರೋಬಿನ ಮುಂದೆ ನಿಂತಳು. ನಾನು ಯಾವ ಬಟ್ಟೆಗಳನ್ನು ಧರಿಸಬೇಕು? ಮಿಲಿಯನ್‌ ಡಾಲರಿನ ಪ್ರಶ್ನೆ! ಅರೇಂಜ್‌ಡ್‌ ಮದುವೆಯನ್ನು ಏರ್ಪಾಟು ಮಾಡುವಾಗ, ಹುಡುಗ ಮತ್ತು ಹುಡುಗಿ ಒಂದು ನಿರ್ಧಾರಕ್ಕೆ ಬರುವ ಮುಂಚೆ ಒಂದು ಗಂಟೆಗಿಂತ ಕಮ್ಮಿ ಕಾಲ ಪರಸ್ಪರೊಂದಿಗೆ ಭೇಟಿಯಾಗಿರುತ್ತಾರೆ. ಆದರೆ ಅವಳು ಮತ್ತು ದೀಪಕ್‌ ವಿಮಾನದಲ್ಲಿ ಐದು ಗಂಟೆಗಳ ಕಾಲ ಜೊತೆಯಾಗಿ ಇದ್ದರು. ಇದೇ ಭಾರತದಲ್ಲಾಗಿದ್ದರೆ, ಅವರಿಬ್ಬರೂ ಪರಸ್ಪರ ಮೆಚ್ಚಿಕೊಂಡಿದ್ದ ಪಕ್ಷದಲ್ಲಿ, ಮದುವೆಗೆ ಬೇಕಾದ ಕನಿಷ್ಠ ಅರ್ಹತೆಯನ್ನು ಅವರ ಐದು ಗಂಟೆಗಳ ಭೇಟಿ ಎಷ್ಟೋ ಪಾಲು ಹೆಚ್ಚಿಗೆ ಮೀರಿಸಿದ್ದುದಾಗಬಹುದಿತ್ತು.

ಕೊನೆಗೆ, ತುಂಡು ಸ್ಕರ್ಟ್‌ನ ಪೀಚ್‌ ಬಣ್ಣದ ಸೂಟು ಮತ್ತು ಅವಳು ಬಹಳ ಚೆನ್ನಾಗಿ ಕಾಣಿಸುತ್ತವೆ ಎಂದು ಭಾವಿಸಿದ್ದ ಎತ್ತರದ ಹಿಮ್ಮಡಿಯ ಪಾದರಕ್ಷೆಗಳನ್ನು ಧರಿಸಲು ಅವಳು ನಿರ್ಧರಿಸಿದಳು.

ಬಹಳ ಉತ್ತಮವಾದ ಇಟಾಲಿಯನ್‌ ರೆಸ್ಟಾರೆಂಟ್‌ ಒಂದರಲ್ಲಿ ಟೇಬಲ್‌ ಕಾದಿರಿಸಿದ್ದ ದೀಪಕ್‌, ಅನೂಳಿಗಾಗಿ ಟೇಬಲ್‌ನ ಮುಂದೆ ಕಾಯುತ್ತ ಕುಳಿತಿದ್ದ. ಅವಳು ಒಳಬರುತ್ತಿದ್ದ ಹಾಗೆಯೆ ಎದ್ದು ನಿಂತ ಆತ, ಅವಳ ಬಳಿಗೇ ನಡೆದು, ಆಪ್ತವಾದ ಆಲಿಂಗನವೊಂದನ್ನು ಕೊಟ್ಟು, ತಾನು ಕುಳಿತುಕೊಳ್ಳುವ ಮುಂಚೆ ಅವಳು ಕುಳಿತುಕೊಳ್ಳುವಂತಾಗಲು ಅವಳ ಕುರ್ಚಿಯನ್ನು ಎಳೆದುಕೊಟ್ಟು ಕುಳ್ಳಿರಿಸಿದ. ಅವನು ಕಣ್ಣುಕುಕ್ಕುವಷ್ಟು ಸುಂದರಾಂಗ ಎಂದುಕೊಂಡಳು ಅನು. ಬಹಳ ಸಭ್ಯನಾಗಿ ಕಾಣಿಸುತ್ತಾನೆ. ಭಾರತೀಯ ಪುರುಷನೊಬ್ಬ ಹೆಣ್ಣೊಂದನ್ನು ಅಷ್ಟು ಗೌರವಯುತವಾಗಿ ನಡೆಸಿಕೊಂಡಿದ್ದನ್ನು ಅವಳೆಂದೂ ಈ ಮುಂಚೆ ಕಂಡಿರಲಿಲ್ಲ. ಆತನಿಗೆ ಇವೆಲ್ಲ ಅನುಭವವಾಗಿರಬೇಕು.

'ನಿಮ್ಮ ಇಂದಿನ ದಿನ ಹೇಗಿತ್ತು ಅನು?"

'ಅದ್ಭುತವಾಗಿತ್ತು. ಇಂದು ಮಧ್ಯಾಹ್ನ ಕಿಕ್‌ಬಾಕ್ಸಿಂಗ್‌ ತರಗತಿಗೆ ಹೋಗಿದ್ದೆ."

'ಕಿಕ್‌ಬಾಕ್ಸಿಂಗ್‌?! ನಾನು ನಿಜವಾಗಲೂ ಇಂಪ್ರೆಸ್‌ ಆಗಿದ್ದೇನೆ."

ಅನು ಮುಗುಳ್ನಕ್ಕಳು. 'ಅದಾದ ಮೇಲೆ ಹೀಗೆ ಪುಸ್ತಕಗಳ ಮೇಲೆ ಕಣ್ಣಾಡಿಸಲು ಪುಸ್ತಕದ ಅಂಗಡಿಯಾಂದಕ್ಕೆ ಹೋಗಿದ್ದೆ. ಮತ್ತೆ ನಿಮ್ಮ ದಿನ ಹೇಗಿತ್ತು?"

'ಜೆಟ್‌ಲ್ಯಾಗಿನಿಂದಾಗಿ ಬಹಳ ನಿದ್ದೆ ಮಾಡಿದೆ. ಈ ವಿದೇಶಿ ಪ್ರವಾಸಗಳು ತಮ್ಮ ಸುಂಕವನ್ನು ಪಡೆದೇ ತೀರುತ್ತವೆ."

'ಹಾಗಿದ್ದರೂ ನನ್ನನ್ನು ಊಟಕ್ಕೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು, ದೀಪಕ್‌. ನೀವು ಇಷ್ಟೆಲ್ಲ ದಣಿದಿರುತ್ತೀರೆಂದು ಭಾವಿಸಿ, ನಿಮ್ಮ ಕರೆಯನ್ನು ನಾನು ನಿಜವಾಗಲೂ ಇಂದು ನಿರೀಕ್ಷಿಸಿರಲಿಲ್ಲ."

'ಅನು, ನಾನು ನಿಮ್ಮೊಂದಿಗೆ ನೇರವಾಗಿ, ಪ್ರಾಮಾಣಿಕವಾಗಿ ಹೇಳಿಬಿಡುತ್ತೇನೆ. ನಾವು ವಿಮಾನದಲ್ಲಿ ಭೇಟಿಯಾದಾಗಿನಿಂದ ನಾನು ನಿಮ್ಮ ಬಗ್ಗೆ ಬಹಳವೆ ಇಂಪ್ರೆಸ್‌ಡ್‌ ಆಗಿದ್ದೇನೆ. ನೀವು ಬುದ್ಧಿವಂತೆ, ಕಾಳಜಿ ಇರುವವರು ಮತ್ತು ಬಹಳ ಮುಕ್ತ ಮನಸ್ಸಿನಿಂದ ಮಾತನಾಡುವವರು. ನನ್ನ ಒಂದೇ ಪ್ರಶ್ನೆ ಏನೆಂದರೆ, ನೀವು ಬೇರೆ ಯಾರನ್ನೂ ಈಗ ನೋಡುತ್ತಿರದೆ, ಲಭ್ಯ ಇರುವಿರೇ ಎಂದು?"

ಕೂಡಲೆ ಬಿಸಿಯಾದ ಗಾಳಿ ರಭಸವಾಗಿ ಅವಳೆಡೆಗೆ ಬೀಸಿದಂತಾಗಿ, ಅನು ಬೆವರಲು ಪ್ರಾರಂಭಿಸಿದಳು. ಅವಳ ರಕ್ತ ತೀವ್ರಗತಿಯ ಚಲನೆಯಲ್ಲಿ ತೊಡಗಿ, ಅವಳಿಗೆ ಬೆಂಕಿಯ ಮೇಲೆ ನಿಂತಂತೆ ಭಾಸವಾಗುತ್ತಿತ್ತು. ಮಾತನಾಡಲು ಪದಗಳೇ ಸಿಗದಂತಾಗಿ, ಮುಗುಳ್ನಗುತ್ತ, ದೃಷ್ಟಿಯನ್ನು ತನ್ನ ಮುಂದಿದ್ದ ಬಿಳಿಯ ಕರವಸ್ತ್ರದ ಮೇಲೆ ಹೊರಳಿಸಿದಳು. ಉತ್ತರಿಸಲು ಸ್ವಲ್ಪ ಸಮಯವನ್ನು ಪಡೆದುಕೊಳ್ಳಲು ಅನುವಾಗುವಂತೆ, ಅವಳ ಒಳಗೆ ಹರಡುತ್ತಿದ್ದ ಜ್ವಾಲೆಗಳನ್ನು ನಂದಿಸಲು ಗ್ಲಾಸು ಪೂರ್ತಿ ನೀರನ್ನು ನಿಧಾನವಾಗಿ ಗುಟುಕರಿಸಿದಳು. ಹಾಗೆಯೇ ಕರವಸ್ತ್ರವನ್ನು ತನ್ನ ತೊಡೆಯ ಮೇಲೆ ಹರಡಿಕೊಂಡಳು.

'ದೀಪಕ್‌, ನೀವು ಹೇಳಿದ್ದನ್ನು ಕೇಳಿ ನನಗೆ ಮಾತೇ ಹೊರಡದಂತಾಗಿಬಿಟ್ಟಿದೆ. ಆದರೆ, ನಿಮಗೆ ನನ್ನ ಬಗ್ಗೆ ಏನೂ ತಿಳಿದಿಲ್ಲ. ಅದ್ಭುತವಾದ ಓದಿನ ಮತ್ತು ನೌಕರಿಯ ಪರಿಚಯ ಪತ್ರ ನಿಮ್ಮದು ಎನ್ನುವುದನ್ನು ಬಿಟ್ಟರೆ ನಿಮ್ಮ ಬಗ್ಗೆಯೂ ನನಗೆ ಏನೂ ತಿಳಿದಿಲ್ಲ." ಈಗ ತಾನೆ ನಾನು ಏನು ಹೇಳಿದೆ ಎಂದು ನನಗೇ ನಂಬಲಾಗುತ್ತಿಲ್ಲ.

'ನನ್ನ ಜೀವನ ಪೂರ್ತಿ ನಿಮ್ಮಂತಹವರಿಗಾಗಿ ನಾನು ಹುಡುಕುತ್ತಿದ್ದೆ. ನಾನು ಪ್ರತಿ ಬಾರಿ ಬೆಂಗಳೂರಿಗೆ ಹೋದಾಗಲೂ ನನ್ನ ಪೋಷಕರು ಒಂದು ಹುಡುಗಿಯಾದ ನಂತರ ಇನ್ನೊಂದು ಹುಡುಗಿಯನ್ನು ಸಾಲು ನಿಲ್ಲಿಸುತ್ತಿದ್ದರು. ಭಾರತದಲ್ಲಿ ಕೇವಲ 10 ನಿಮಿಷಗಳ ಕಾಲ ಭೇಟಿಯಾದ ಹುಡುಗಿಯನ್ನು ಮದುವೆಯಾಗುವುದು ನನಗೆ ಎಂದೂ ಬೇಕಿರಲಿಲ್ಲ. ನೀವು ಚೆನ್ನಾಗಿ ಓದಿದ್ದೀರ. ಬಹಳ ಪ್ರವಾಸವನ್ನೂ ಮಾಡಿದ್ದೀರ. ಹಾಗಾಗಿ, ನಿಮ್ಮ ವ್ಯಕ್ತಿತ್ವಕ್ಕೆ ನಾನು ತಕ್ಷಣ ಆಕರ್ಷಿತನಾಗಿದ್ದೆ. ನಾವು ಇಲ್ಲಿ ಒಂದೇ ಊರಿನಲ್ಲಿರುವುದರಿಂದ ಪರಸ್ಪರರನ್ನು ಚೆನ್ನಾಗಿ ಅರಿತುಕೊಳ್ಳಲೂ ಬಹುದು."

ಈತನಿಗೆ ಎಷ್ಟು ವಯಸ್ಸಾಗಿದೆ? ಮುವ್ವತ್ತು? ನಲವತ್ತು? ಅರೇಂಜ್‌ಡ್‌ ಮದುವೆಗಳ ತರಹವೆ ಇದೂ ಸಹ ಬಹಳ ಬೇಗನೆ ಘಟಿಸುತ್ತಿದೆ!

'ದೀಪಕ್‌, ನಾನು ಎಲ್ಲರಂತಹ ಸಾಮಾನ್ಯ ಭಾರತೀಯ ಹೆಣ್ಣು ಅಲ್ಲ. ಸಂಭಾಳಿಸಲು ಕಷ್ಟವಾದಂತಹ ಹೆಣ್ಣು."ಅವಳಿಗೆ ತನ್ನ ಬಗ್ಗೆಯೆ ನಗು ಬಂತು. 'ಬಹುಶಃ ಅದಕ್ಕಾಗಿಯೆ ಇರಬಹುದು ನಾನಿನ್ನೂ ಅವಿವಾಹಿತೆಯಾಗಿಯೇ ಇರುವುದು. ಜೊತೆಗೆ, ನಾನು ಅರೇಂಜ್‌ಡ್‌ ಮದುವೆಯಾಗುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಏಕೆಂದರೆ ನನ್ನ ಸ್ವತಂತ್ರ ಮನೋಭಾವದ ಪೋಷಕರು ನನ್ನನ್ನು ಬಹಳ ಸ್ವತಂತ್ರವಾಗಿ ಬೆಳೆಸಿದರು. ಹಾಗಾಗಿ ಬಹಳಷ್ಟು ಬಾರತೀಯ ಗಂಡಸರಿಗೆ ನನ್ನೊಡನೆ ಹೇಗೆ ವರ್ತಿಸುವುದೆಂದೇ ತಿಳಿಯುವುದಿಲ್ಲ."

'ಆದರೆ ನಿಮ್ಮಲ್ಲಿ ನಾನು ಇಷ್ಟಪಡುವುದು ಅದನ್ನೆ; ನಿಮ್ಮ ಸ್ವತಂತ್ರ ಮನೋಭಾವವನ್ನು. ನಾನು ನಿಮ್ಮ ಬಗ್ಗೆ ನಿಜವಾಗಲೂ ಬಹಳ ಇಂಪ್ರೆಸ್‌ಡ್‌ ಆಗಿದ್ದೇನೆ. ನೀವು ಇಷ್ಟು ದೂರ ಬಂದು, ನೀವಾಗಿಯೇ ಇದನ್ನೆಲ್ಲ ಸಾಧಿಸಿದ್ದೀರ. ನಾನು ಹೇಳುತ್ತಿರುವುದೆಲ್ಲ ಏನೆಂದರೆ, ನೀವು ಯಾರನ್ನೂ ಡೇಟ್‌ ಮಾಡುತ್ತಿಲ್ಲವಾದರೆ, ನಿಮ್ಮನ್ನು ಇನ್ನಷ್ಟು ಅರಿತುಕೊಳ್ಳುವ ಇಚ್ಚೆ ಇದೆ ನನಗೆ."

ಆದರೆ ಅವಳು ಡ್ಯಾನ್‌ನನ್ನು ಡೇಟ್‌ ಮಾಡುತ್ತಿದ್ದಳೆ? ಪವನ್‌ಗಾಗಿ ಕಾಯುತ್ತಿದ್ದಳೆ? 'ನಾನು ಈಗ ಸದ್ಯಕ್ಕೆ ಯಾರನ್ನೂ ನೋಡುತ್ತಿಲ್ಲ." ಇದನ್ನು ನಾನು ಹೇಳಿದೆನೆ? ಇದು ಮೊದಲ ನೋಟದಲ್ಲಿಯ ಪ್ರೇಮವೇ ಇರಬೇಕು. 'ನೀವು ಈ ಮುಂಚೆ ಯಾರನ್ನಾದರೂ ಡೇಟ್‌ ಮಾಡಿದ್ದೀರಾ, ದೀಪಕ್‌?" ಮೂರ್ಖತನ. ಮುಟ್ಟಾಳ ಪ್ರಶ್ನೆ!

ಅವನು ಅವಳಿಂದ ಆ ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲ. ಅವನು ಉತ್ತರಕ್ಕಾಗಿ ಕಷ್ಟ ಪಡುತ್ತಿರುವುದನ್ನು ಅವಳು ಗಮನಿಸಿದಳು.

'ದೀಪಕ್‌, ಅದಕ್ಕೆ ನೀವು ಉತ್ತರಿಸುವ ಅವಶ್ಯಕತೆಯಿಲ್ಲ. ಅದೇನೂ ಅಂತಹ ದೊಡ್ಡ ವಿಷಯವಲ್ಲ."

'ಪರವಾಗಿಲ್ಲ. ಹೌದು! ಹಾರ್ವರ್ಡ್‌ ಬ್ಯುಸಿನೆಸ್‌ ಶಾಲೆಯಲ್ಲಿ ಒಬ್ಬಳು ಅಮೇರಿಕನ್‌ ಹುಡುಗಿಯಲ್ಲಿ ನನಗೆ ಪ್ರೀತಿಯಿತ್ತು. ಅದು ಮುಂದಕ್ಕೆ ಸಫಲವಾಗಲಿಲ್ಲ."

'ಯಾಕೆ? ಅವಳು ಬಹಳ ಆಕ್ರಮಣಕಾರಿ, ಅಥವ ಬಹಳ ಸ್ವತಂತ್ರ ಮನೋಭಾವದವಳಾಗಿದ್ದಳೇನು? ಇಲ್ಲ, ವೃತ್ತಿಜೀವನದ ಮೇಲೆ ಬಹಳ ಮನಸ್ಸು ಕೇಂದ್ರೀಕರಿಸಿದ್ದವಳೇನು?"

'ಮೇಲಿನ ಎಲ್ಲವೂ ಹೌದು!"

'ದೀಪಕ್‌, ನಾನೂ ಸಹ ಮೇಲಿನ ಎಲ್ಲವೂ ಹೌದು. ಹೆಂಗಸರಲ್ಲಿ ಈ ಗುಣಗಳಿರುವುದು ಭಾರತೀಯ ಪುರುಷರಿಗೆ ಅಭ್ಯಾಸವಾಗಿಲ್ಲ." ನಾನು ಏನನ್ನು ಮಾತನಾಡುತ್ತಿದ್ದೇನೆ? ಆತ ತನ್ನ ಮನಸ್ಸು ಬದಲಾಯಿಸಿಕೊಳ್ಳುವಂತೆ ಮಾಡುತ್ತಿದ್ದೀನೇನು?

'ನೀವು ನನ್ನನ್ನು ಹೆದರಿಸುತ್ತಿದ್ದೀರೇನು? ಆ ಹುಡುಗಿ ಮತ್ತು ನಾನು ಬೇರೆಯಾಗಿದ್ದು ಅದಕ್ಕಾಗಿಯಲ್ಲ. ಆ ಗುಣಗಳನ್ನು ಹೆಸರಿಸಿದ್ದು ನೀವು, ಅನು, ನಾನಲ್ಲ. ಅದನ್ನು ನಾನು ಹೇಳಲಿಲ್ಲ. ಆ ಹುಡುಗಿಗೆ ಮದುವೆಯಾಗುವುದು ಬೇಕಿರಲಿಲ್ಲ. ಅವಳು ಹೇಳಿದ್ದು, 'ಮೊದಲು ನಾನು ನನ್ನ ವೃತ್ತಿಯಲ್ಲಿ ಮೇಲೆ ಬರಬೇಕು," ಎಂದು. ದೊಡ್ಡ ದೊಡ್ಡ ಆಕಾಂಕ್ಷೆ ಮತ್ತು ಗುರಿಗಳನ್ನು ಹೊಂದಿಲ್ಲದವರು ಹಾರ್ವರ್ಡ್‌ ಬ್ಯುಸಿನೆಸ್‌ ಶಾಲೆಗೆ ಸೇರುವುದಿಲ್ಲ ಎನ್ನುವುದನ್ನು ನೀವು ನೆನಪಿನಲ್ಲಿಟ್ಟಿರಬೇಕು."

'ನನಗೆ ಗೊತ್ತು, ನನಗೆ ಗೊತ್ತು. ನಾನು ಸುಮ್ಮನೆ ಚುಡಾಯಿಸುತ್ತಿದ್ದೆ. ನಿಮಗೆ ಬೇಕಾಗಿದ್ದ ರೀತಿಯಲ್ಲಿ ಆ ವಿಷಯಗಳು ಘಟಿಸದೇ ಇದ್ದುದಕ್ಕೆ ನಾನು ವಿಷಾದಿಸುತ್ತೇನೆ." ಈಗ ನಾನು ಸುಮ್ಮನೆ ಬಾಯಿ ಮುಚ್ಚಿಕೊಂಡಿರುವುದೇ ಒಳ್ಳೆಯದು.

'ನಾನು ಬಹಳ ಟೀ ಕುಡಿಯುವವನು. ನಿಮಗೆ ಏನಾದರೂ ಮದ್ಯಪಾನದ ಪಾನೀಯ ಬೇಕೇನು?"

ಒಳ್ಳೆಯದೆ! ಈತ ಮದ್ಯಪಾನ ಮಾಡುವುದಿಲ್ಲ. 'ನಾನೂ ಮದ್ಯಪಾನ ಸೇವಿಸುವುದಿಲ್ಲ. ನಾನೂ ಕೂಡ ಟೀಯನ್ನೆ ತೆಗೆದುಕೊಳ್ಳುತ್ತೇನೆ."

ಊಟವಾದ ನಂತರ ದೀಪಕ್‌ ಅನೂಳನ್ನು ಅವಳ ಕಾರಿನಿಂದ ಎರಡು ಕಾರುಗಳ ದೂರದಲ್ಲಿ ನಿಲ್ಲಿಸಿದ್ದ ತನ್ನ ಕಾರಿನ ಬಳಿಗೆ ಕರೆದುಕೊಂಡು ಹೋದ. ಆ ಕಾರು ಆಧುನಿಕವಾದ ಪೋರ್ಷ್‌ ಆಗಿತ್ತು. ಆತನ ಬಳಿ ಬಹಳ ದುಡ್ಡಿದೆ ಎನ್ನುವುದನ್ನು ಕಡೆಗಣಿಸುವ ಹಾಗಿಲ್ಲ.

ಆತ ಕಾರಿನೊಳಗಡೆ ಬಾಗಿ, ಅಲ್ಲಿಂದ ಕೆಂಪುಗುಲಾಬಿಗಳ ಹೂಗುಚ್ಚ ತೆಗೆದುಕೊಂಡ. 'ಕ್ಷಮಿಸಿ, ಅವನ್ನು ಒಳಗೆ ತರಲು ಮರೆತಿದ್ದೆ." ಅಥವ ಆತ ಎಂತಹ ಕಾರನ್ನು ಓಡಿಸುತ್ತಾನೆ ಎನ್ನುವುದನ್ನು ತೋರಿಸುವುದಕ್ಕೋಸ್ಕರವೆ ಹಾಗೆ ಮಾಡಿದನೆ?

'ಧನ್ಯವಾದಗಳು, ದೀಪಕ್‌. ಇವು ಬಹಳ ಸುಂದರವಾಗಿವೆ." ಅವಳು ಆ ಹೂವುಗಳನ್ನು ಬಹಳ ಜತನದಿಂದ ತನ್ನ ಕಾರಿನಲ್ಲಿ ಇಟ್ಟುಕೊಂಡಳು. ಆತ ಅವಳ ಕಾರಿನ ಡ್ರೈವರ್‌ ಕಡೆಯ ಬಾಗಿಲನ್ನು ಹಾಗೆಯೇ ತೆರೆದಿಟ್ಟುಕೊಂಡು ತನ್ನ ಬಾಹುಗಳನ್ನು ಆಲಿಂಗನಕ್ಕಾಗಿ ತೆರೆದ. ಆತ ಭಾರತೀಯ ಹೆಂಗಸನ್ನು ಆಲಿಂಗಿಸುತ್ತಾನೆ ಎಂದಾದರೆ ಬಹಳವೇ ಪಾಶ್ಚಿಮಾತ್ಯನಾಗಿ ಬದಲಾಯಿಸಿರಬೇಕು.

'ಶುಭರಾತ್ರಿ, ದೀಪಕ್‌. ಔತಣಕ್ಕಾಗಿ ಧನ್ಯವಾದಗಳು."

'ನಾನು ಕರೆ ಮಾಡುತ್ತೇನೆ, ಅನು. ಜೋಪಾನವಾಗಿ ಡ್ರೈವ್‌ ಮಾಡಿ."

ಕಾರನ್ನು ಹೊರಗೆ ತೆಗೆಯುತ್ತ, ಇದನ್ನೆಲ್ಲ ನಂಬಲಸಾಧ್ಯ ಎಂದುಕೊಂಡಳು ಅವಳು. ಇಷ್ಟು ದಿನ ಕಾಯುತ್ತ, ಕಣ್ಣು ತೆರೆದುಕೊಂಡು ನೋಡುತ್ತಿದ್ದುದೇ ಮುಂದೆಯೂ ಶಾಶ್ವತ ಎಂದುಕೊಂಡಿದ್ದದ್ದು ಬದಲಾಗಿತ್ತು. ಇಲ್ಲಿ, ಈಗ, ಅತಿ ಯೋಗ್ಯನಾದ ಅವಿವಾಹಿತ ಭಾರತೀಯನೊಬ್ಬ ಅವಳನ್ನು ಕಾಣಲು ಬಯಸುತ್ತಿದ್ದಾನೆ. ಇದೇ ಜೋಡಿ ಅರೇಂಜ್‌ಡ್‌ ಮದುವೆಯಲ್ಲೇನಾದರೂ ಜೊತೆಯಾಗಿಬಿಟ್ಟಿದ್ದರೆ, ಸ್ವರ್ಗದಲ್ಲಿ ಕೂಡಿಸಿದ ದಾಂಪತ್ಯ ಎನ್ನುವುದಕ್ಕೆ ಇದೇ ಉದಾಹರಣೆಯಾಗಿರುತ್ತಿತ್ತು.

ತಾನು ಒಬ್ಬನನ್ನು ಇಂದು ಭೇಟಿಯಾದೆ ಎನ್ನುವುದನ್ನು ಹೇಳಲು ಅಂದು ರಾತ್ರಿ ಅನು ತನ್ನ ಪೋಷಕರಿಗೆ ಕರೆ ಮಾಡಿದಳು. ಇವಳು ತನ್ನ ವೃತ್ತಿಜೀವನದ ಬಗ್ಗೆ ಬಹಳ ಗಮನ ಕೊಡುವವಳು, ಅಮೇರಿಕದಲ್ಲಿ ಅವಳಿಗೆ ಯಾರೊಬ್ಬರೂ ಸಿಗುವುದಿಲ್ಲ, ಮತ್ತು ಅವಳು ಜೀವನದಲ್ಲಿ ಎಂದೂ ನೆಲೆಯಾಗುವುದಿಲ್ಲ ಎಂದುಕೊಂಡು ಸಕಾರಣವಾಗಿಯೇ ಬೆಳೆಯುತ್ತಿದ್ದ ಅವರ ಕಾಳಜಿಯ ಬಗ್ಗೆ ಅನೂಗೆ ಅರಿವಿತ್ತು. ಇವೆಲ್ಲವುಗಳಿಂದಾಗಿ ದೀಪಕ್‌ನ ಬಗ್ಗೆ ತಿಳಿದುಕೊಳ್ಳಲು ಅವಳ ಪೋಷಕರು ಕಾತರರಾಗಿದ್ದರು. ಅವರ ಆ ಸಂತೋಷ, ಅಂತಾರಾಷ್ಟ್ರೀಯ ಕರೆಗೆ ಎಷ್ಟೆಲ್ಲ ಫೋನ್‌ ಬಿಲ್‌ ಬರುತ್ತದೆ ಎನ್ನುವ ಅವಳ ಲೆಕ್ಕಾಚಾರವನ್ನು, ಕನಿಷ್ಠ ಅಂದಿನ ಮಟ್ಟಿಗಾದರೂ ಅವಳಿಂದ ಹಿಮ್ಮೆಟ್ಟಿಸಿತ್ತು.

(ಸಶೇಷ)

ಅಧ್ಯಾಯ - 15 ಅಧ್ಯಾಯ - 17

(c) ಹಕ್ಕುಗಳು : ಲೇಖಕರದು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X