ಇಂಗ್ಲೆಂಡಿನಲ್ಲಿ ರತ್ನಮಾಲಾ ಪ್ರಕಾಶ್‌ರಿಂದ 'ಭಾವ ಸಂಗಮ'
ಕನ್ನಡದ ಸಂಗೀತದ ಮಾಧುರ್ಯ ಇಂಗ್ಲೆಂಡ್ ಜನರ ಚಳಿಯನ್ನು ಮರೆಯುವಂತೆ ಮಾಡಲಿದೆ. ಬರುವ ನವೆಂಬರ್ 28 ಹಾಗು 29ರಂದು 'ಹಾಡುಹಕ್ಕಿ' ಖ್ಯಾತ ಹಿನ್ನೆಲೆ ಗಾಯಕಿ ರತ್ನಮಾಲಾ ಪ್ರಕಾಶ್ ಇಂಗ್ಲೆಂಡಿನಲ್ಲಿ "ಭಾವ ಸಂಗಮ" ಕಾರ್ಯಕ್ರಮದಲ್ಲಿ ತಮ್ಮ ಸುಮಧುರ ಕಂಠದಿಂದ ಜನರನ್ನು ಭಕ್ತಿ ಸಂಗೀತ ಹಾಗು ಭಾವಗೀತೆಗಳಿಂದ ರಂಜಿಸಲಿದ್ದಾರೆ.
ಗ್ರೇಟ್ ಬ್ರಿಟನ್ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ್ (GB-SRSB) ಸಂಸ್ಥೆಯು ಈ ಕಾರ್ಯಕ್ರಮವನ್ನು ಇಂಗ್ಲೆಂಡಿನ ಕನ್ನಡ ಸಾಹಿತ್ಯ, ಸಂಗೀತ ಪ್ರೇಮಿಗಳಿಗಾಗಿ ನವೆಂಬರ್ ತಿಂಗಳ ಕೊನೆಯ ಶನಿವಾರ ಮತ್ತು ಭಾನುವಾರದಂದು ಆಯೋಜಿಸುತ್ತಿದೆ.
ಲಂಡನ್, ಬರ್ಮಿಂಗ್ಹ್ಯಾಮ್ ಹಾಗು ಸಮೀಪದ ಅನೇಕ ನಗರಗಳಿಂದ ಸುಮಾರು ಐನೂರಕ್ಕೂ ಹೆಚ್ಚು ಕನ್ನಡ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆ ಇರುವ ಈ ಕಾರ್ಯಕ್ರಮವನ್ನು ಇಂಗ್ಲೆಂಡ್ ದೇಶದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರಿಗೆ ಮಠ ನಿರ್ಮಾಣದ ಮಹಾ ಯೋಜನೆಯ ಜವಾಬ್ದಾರಿಯನ್ನು ಪ್ರಪ್ರಥಮ ಬಾರಿಗೆ ಕೈಗೆತ್ತಿಕೊಂಡ GBSRS ಬೃಂದಾವನ್ ಈ ಕಾರ್ಯಕ್ರಮವನ್ನು ಆಯೋಜಿಸಿದೆ. [ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ]

ಈ ಸಂಸ್ಥೆ ಇಂಗ್ಲೆಂಡ್ನಲ್ಲಿ ಹಲವಾರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಹೆಸರುವಾಸಿಯಾಗಿದ್ದು, ಪ್ರತಿ ಕಾರ್ಯಕ್ರಮದಂತೆ ಈ ಕಾರ್ಯಕ್ರಮದಲ್ಲಿ ಬರುವ ಜನರು ಸುಮಧುರ ಸಂಗೀತವನ್ನು ಸವಿಯುವುದಲ್ಲದೆ, ನಮ್ಮ ಕರ್ನಾಟಕದ ರುಚಿಕರ ಊಟದ ಸ್ವಾದವನ್ನು ಸವಿಯಲಿದ್ದಾರೆ. ಈ ಕಾರ್ಯಕ್ರಮದಿಂದ ಬಂದ ಹಣವನ್ನು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಸ್ಥಾಪನೆ ಕಾರ್ಯಕ್ರಮಕ್ಕೆ ವಿನಿಯೋಗಿಸಲಾಗುವುದು.
GBSRS ಬೃಂದಾವನ್, ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರಿಗೆ ಮಠ ನಿರ್ಮಾಣದ ನಿಟ್ಟಿನಲ್ಲಿ ಸುಮಾರು 5 ವರ್ಷಗಳಿ೦ದ ಕಾರ್ಯನಿರತವಾಗಿದ್ದು, ಆಗಸ್ಟ್ 2015ನಿ೦ದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಇಂಗ್ಲೆಂಡ್ ಶಾಖೆ ಆಗಿ ಕಾರ್ಯಾಚರಣೆ ಮಾಡುತ್ತಿದೆ. ವಿವಿಧ ಸಾಂಸ್ಕೃತಿಕ ಹಾಗು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಬಂದ ಹಣದಿಂದ/ದಾನದಿಂದ ಈ ಯೋಜನೆಗೆ ಹಣ ಹೊಂದಿಸಲಾಗುತ್ತಿದೆ.
ಕರ್ನಾಟಕದ ರಾಘವೇಂದ್ರ ಸ್ವಾಮಿಗಳ ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಮಹೋನ್ನತ ಕಾರ್ಯದಲ್ಲಿ ಭಾಗಿಯಾಗಿ, ಯಥಾಶಕ್ತಿ ದಾನ ಮಾಡಲು GB-SRSB ಸಂಸ್ಥೆ ವಿನಂತಿಸಿದೆ. (ದಾನ ಮಾಡಲು ಅಂತರ್ಜಾಲದಲ್ಲಿ ವಿವರವಿದೆ) ಅಥವಾ ಇಮೇಲ್ [email protected] ಸಂಪರ್ಕಿಸಬಹುದು.
ರತ್ನಮಾಲಾ ಪ್ರಕಾಶ್ ಅವರ "ಭಾವಸಂಗಮ" ಇಂಗ್ಲೆಂಡಿನಲ್ಲಿ ಕನ್ನಡದ ಸುಮಧುರ ಭಾವಗೀತೆಗಳ ಕಂಪನ್ನು ಹರಡಲಿ ಹಾಗೂ GB-SRS ಬೃಂದಾವನ್ ಸಂಸ್ಥೆಯ ಈ ಒಂದು ಒಳ್ಳೆಯ ಉದ್ದೇಶವು ಜನರ ಸಹಕಾರದಿಂದ ಪೂರ್ಣಗೊಳ್ಳಲಿ ಎಂದು ಹಾರೈಸೋಣ.












Click it and Unblock the Notifications