ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯಕೀಯ ಕೋರ್ಸ್ ಅವಧಿ ಕಡಿಮೆ ಮಾಡಬೇಕೆ?

By ಭರತ್ ಶಾಸ್ತ್ರಿ
|
Google Oneindia Kannada News

ಮತ್ತೊಮ್ಮೆ ಗ್ರಾಮೀಣ ಆರೋಗ್ಯ ಭಾಗ್ಯದ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಇತ್ತೀಚೆಗಷ್ಟೇ ಯಾವುದೇ ವೈಜ್ಞಾನಿಕ ವರದಿಗಳ ಆಧಾರವೇ ಇಲ್ಲದೆ ಅಡಕೆಯನ್ನು ನಿಷೇಧಿಸ ಹೊರಟ ಕೇಂದ್ರ ಆರೋಗ್ಯ ಸಚಿವರು ತಮ್ಮ ಅನುಭವಾಮೃತದ ಅಣಿಮುತ್ತುಗಳನ್ನು ಉದುರಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸಲು ಮೂರು ವರ್ಷದ ಎಂ ಬಿ ಬಿ ಎಸ್ ಕೋರ್ಸ್ ಪ್ರಾರಂಭಿಸಲಿದ್ದಾರಂತೆ.

ವೈದ್ಯಕೀಯ ಶಿಕ್ಷಣದ ಅವಧಿಯನ್ನು ಕಡಿಮೆ ಮಾಡುವ ಪ್ರಯತ್ನ ಇದೇ ಮೊದಲಲ್ಲ. ಹಲವಾರು ಚಿಂತಕರು ಇದರ ಪರ/ ವಿರೋಧವಾಗಿ ತಮ್ಮ ಅಭಿಪ್ರಾಯಗಳನ್ನು ಪ್ರಕಟಪಡಿಸಿದ್ದಾರೆ. ಇದರಲ್ಲಿ ನನ್ನದೂ "ಎರಡು ಕಾಸಿನ" ಚಿಂತನೆ.

ಹಿಂದೆಲ್ಲ ಕೇವಲ ಉತ್ತಮ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕಾಗಿ ಮೆಡಿಕಲ್ ಕಾಲೇಜುಗಳಿಗೆ ಸೇರುತ್ತಿದ್ದರು. ಇಂದಿಗೆ ಉತ್ತಮ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನೂ "ಒಂದು ಆಯ್ಕೆ"ಯಾಗಿ ಪರಿಗಣಿಸುತ್ತಿದ್ದಾರೆ. ಇದರರ್ಥ ವೈದ್ಯಕೀಯ ವಿದ್ಯಾರ್ಥಿಗಳೇ ಉತ್ತಮರು ಎಂದು ಯಾರೂ ಭಾವಿಸಬೇಕಾದ್ದಿಲ್ಲ. ಸಾಧಾರಣ ಬುದ್ಧಿಮತ್ತೆ ಇರುವ ಯಾವುದೇ ವಿದ್ಯಾರ್ಥಿಗಳು, ವೈದ್ಯಕೀಯ ಶಿಕ್ಷಣ ಬೇಡುವ ಪರಿಶ್ರಮ, ಸಾಧನೆ ತೋರಿದರೆ, ಸಮರ್ಥ ವೈದ್ಯರಾಗಬಹುದು. ಮಿಕ್ಕ ವಾಹಿನಿಗಳಾದ ಎಂಜಿನಿಯರಿಂಗ್, ಕಾಮರ್ಸ್, ಸಮಾಜಶಾಸ್ತ್ರ, ಅಥವಾ ಕಂಪ್ಯೂಟರ್ ಕೋರ್ಸ್ ಗಳು ಕೊಡಬಹುದಾದ ಝಟ್ ಶಿಕ್ಷಣ - ಫಟ್ ಉದ್ಯೋಗದ ಭರವಸೆ ಇದರಲ್ಲಿ ಇಲ್ಲ.

Should MBBS course duration be decreased

ಈ ಹಿನ್ನೆಲೆಯಲ್ಲಿ ವೈದ್ಯ ಶಿಕ್ಷಣದ ಮುಖ್ಯ ನ್ಯೂನತೆಯನ್ನು ಗಮನಿಸೋಣ. ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಒಬ್ಬ ಜನರಲ್ ಪ್ರಾಕ್ಟೀಸ್ ವೈದ್ಯನನ್ನು ತಯಾರು ಮಾಡಲು ಕನಿಷ್ಠ ಏಳು ವರ್ಷಗಳ ಶಿಕ್ಷಣದ ಅಗತ್ಯವಿದೆ. ಒಬ್ಬ ಸ್ಪೆಶಲಿಸ್ಟ್ ವೈದ್ಯನನ್ನು ತಯಾರು ಮಾಡಲು ಕನಿಷ್ಠ ಹತ್ತರಿಂದ ಹನ್ನೆರಡು ವರ್ಷಗಳ ಅವಶ್ಯಕತೆಯಿದೆ. ಇದು ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲೂ ಇರುವ ಪರಿಸ್ಥಿತಿ. ಇದು ನ್ಯೂನತೆಯಾದರೂ ಇದೇ ಸಮರ್ಥ ವೈದ್ಯರ ತಂಡವನ್ನು ನಿರ್ಮಾಣ ಮಾಡುವ ಶಕ್ತಿ ಕೂಡ. ವೈದ್ಯಕೀಯ ಶಿಕ್ಷಣದಲ್ಲಿ ಇರುವ ಅನೇಕ ವಿಷಯಗಳ ಅಧ್ಯಯನ ಮತ್ತು ಪ್ರತ್ಯಕ್ಷ ಕಾರ್ಯನಿರ್ವಹಣೆಯ ಅನುಭವ ಪಡೆಯಲು ಇಷ್ಟು ಸಮಯ ಬೇಕಾಗುವುದು ಸಮಂಜಸವೆನ್ನಿಸುತ್ತದೆ.

ನಮ್ಮ ಮಾನ್ಯ ಆರೋಗ್ಯ ಸಚಿವರ ಮಾತನ್ನು ಕೇಳಿದಾಗ ಮುಗ್ಧರಿಗೆ, ಮೂರು ವರ್ಷಗಳಲ್ಲಿ ಇವರು ವೈದ್ಯರನ್ನು ಸೃಷ್ಟಿ ಮಾಡಬಹುದಾದರೆ, ವೈದ್ಯಕೀಯ ಕಾಲೇಜುಗಳು ಇಷ್ಟು ಸಮಯ ಹಾಳು ಮಾಡುವುದೇಕೆ? ಅನ್ನಿಸಬಹುದು. ಇವರು ಸೃಷ್ಟಿಸುವ "ಈ ಬರಿಗಾಲು ವೈದ್ಯರು" ವೈದ್ಯರು ತಮ್ಮ ಕೋರ್ಸ್ ನ ಆಶಯದಂತೆ ಕೇವಲ ಗ್ರಾಮೀಣ ಪ್ರದೇಶದಲ್ಲೇ ಕೆಲಸ ಮಾಡುತ್ತಾರೆ ಎನ್ನುವ ಭರವಸೆ ಏನಿದೆ? ಇವರು ಗ್ರಾಮೀಣ ಪ್ರದೇಶ ಬಿಟ್ಟು ಪಟ್ಟಣದ ಸಣ್ಣ ಆಸ್ಪತ್ರೆಗಳಲ್ಲಿ "ಡ್ಯೂಟಿ ಡಾಕ್ಟರ್"ಗಳಾಗಿ ದುಡಿದರೆ ತಡೆಯುವವರ್ಯಾರು? ಅದು ಕಾನೂನು ಬಾಹಿರವೇ, ಅಥವಾ ಅಲ್ಲವೇ ಎನ್ನುವುದು ಸ್ಪಷ್ಟವಾಗಿಲ್ಲ.

ಒಂದುವೇಳೆ ಇವರು ಗ್ರಾಮೀಣ ಪ್ರದೇಶದಲ್ಲೇ ದುಡಿಯುವ ನಿರ್ಧಾರ ಮಾಡಿದರೆ ಅವರಿಗೆ ಬಾಧ್ಯತೆಗಳೇನು? ಇವರಿಗೆ ಸರ್ಕಾರಿ ಆಸ್ಪತ್ರೆಗಳೇ ಉದ್ಯೋಗ ಕೊಡುತ್ತವೆಯೋ ಅಥವಾ ಖಾಸಗಿಯಾಗೂ ವೃತ್ತಿ ನಡೆಸಲು ಇವರಿಗೆ ಅನುಮತಿ ಇರುತ್ತದೆಯೋ? ಇವರನ್ನು ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಇಡಲಾಗುತ್ತದೆಯೆ? ಏಕೆಂದರೆ ಕಡಿಮೆ ಅವಧಿಯ ಕೋರ್ಸ್ ಮುಗಿಸಿದ ಈ ವೈದ್ಯರಿಗೆ ಸಾಕಷ್ಟು ತರಬೇತಿ ಆಗಿಲ್ಲವಲ್ಲ! ಜತೆಗೆ, ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ವೈದ್ಯರಿಗೆ ಮೂರು ವರ್ಷದ ತರಬೇತಿಯೇ ಸಾಕು, ನಗರವಾಸಿಗಳಿಗೆ 5 ವರ್ಷ ಓದಿದವರೇ ಬೇಕು, ಎನ್ನುವ ವಾದ ಕೂಡ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ.

ಹಾಗಿದ್ದರೆ, ಮುಂದುವರಿದ ದೇಶಗಳಲ್ಲಿ ಇಂತಹ ಕಡಿಮೆ ಅವಧಿಯ ಕೋರ್ಸ್ ಗಳು ಲಭ್ಯವಿಲ್ಲವೆ? ಎನ್ನುವ ಪ್ರಶ್ನೆ ವಾಚಕರಲ್ಲಿ ಏಳಬಹುದು. ಖಂಡಿತ ಇವೆ; ಉದಾಹರಣೆಗೆ, ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ನರ್ಸ್ ಪ್ರಾಕ್ಟೀಷನರ್, ಅಥವಾ ಫಿಸಿಶಿಯನ್ ಅಸಿಸ್ಟಂಟ್ ಕೋರ್ಸ್ ಗಳು ಲಭ್ಯವಿದೆ. ಈ ಪದವಿ ಪಡೆದವರು ತರಬೇತಿ ಪಡೆದ ವೈದ್ಯರಿಗೆ ಸರಿಸಮನಾಗಿ ಕೆಲಸಗಳನ್ನು ಮಾಡುತ್ತಾರೆ. ರೋಗಿಗಳನ್ನು ಪರೀಕ್ಷಿಸುತ್ತಾರೆ, ಔಷಧಿಗಳನ್ನು ಸೂಚಿಸುತ್ತಾರೆ, ಕೆಲವೊಮ್ಮೆ, ತಮ್ಮ ಮೇಲ್ವಿಚಾರಕ ವೈದ್ಯರ ಸ್ಪೆಷಾಲಿಟಿಗೆ ಸಂಬಂಧಿಸಿದ ಕೆಲವು ಕ್ಲಿಷ್ಟ ವಿಧಿಗಳನ್ನೂ (ಉದಾ. ಎಂಡೋಸ್ಕೊಪಿ, ಪ್ರಸವದ ಸಮಯದಲ್ಲಿ ಮಾಡುವ ಎಪಿಸಿಯಾಟಮಿ, ಇತ್ಯಾದಿ) ಮಾಡುತ್ತಾರೆ. ಆದರೆ ಅವರು ಸ್ವತಂತ್ರವಾಗಿ ಕೆಲಸ ನಿರ್ವಹಿಸುವಂತಿಲ್ಲ. ಬದಲಿಗೆ ಅವರು ಯಾವುದಾದರೂ ವೈದ್ಯರ ಅಧೀನರಾಗಿಯೇ ಕೆಲಸ ಮಾಡಬೇಕು. ಬ್ರಿಟನ್ನಿನಲ್ಲಿ ಕೂಡ ನರ್ಸ್ ಪ್ರಾಕ್ಟೀಷನರ್ ಕೋರ್ಸ್ ಗಳು ಹಲವಾರು ಯೂನಿವರ್ಸಿಟಿಗಳ ಮೂಲಕ ಕೊಡಲ್ಪಡುತ್ತವೆ. ಲೇಬರ್ ನರ್ಸ್ ಗಳು ಹೆರಿಗೆಯ ಎಲ್ಲ ವಿಧಿಗಳನ್ನೂ ಮಾಡುತ್ತಾರೆ. ಕೇವಲ ತಾಂತ್ರಿಕವಾಗಿ ಜಟಿಲವಾದ ಆಪರೇಷನ್ ಗಳಿಗೆ ಅವರು ಓ ಬಿ ಜಿ ತಜ್ಞರನ್ನು ಕರೆಸುತ್ತಾರೆ. ಅಲ್ಲಿ ಕೂಡ ಅವರ ಕೆಲಸದ ಮಿತಿಗಳನ್ನು ತಜ್ಞ ವೈದ್ಯರ ಅಧೀನಕ್ಕೆ ಒಳಪಡಿಸಲಾಗುತ್ತದೆ.

ಮೂರು ವರ್ಷದ ಕೋರ್ಸ್ ನ ಸುದ್ದಿಯನ್ನು ಓದಿದಾಗ ನಮ್ಮ ಆರೋಗ್ಯ ಮಂತ್ರಿಗಳು ಇಂತಹ ತರಬೇತಿಯ ಬಗ್ಗೆ ಮಾತನಾಡುತ್ತಿದ್ದರೆಂದು ಅನ್ನಿಸಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 66 ವರ್ಷಗಳಾದರೂ ಗ್ರಾಮೀಣ ಪ್ರದೇಶಗಳಿಗೆ ಬೇಕಾದ ಮೂಲಭೂತ ಸೌಕರ್ಯ ಮಾಡಿಕೊಡದೆ, ಅವರಿಗೆ ಕಡಿಮೆ ತರಬೇತಿಯಾದ ವೈದ್ಯರನ್ನು ಕೊಡಲು ಹೊರಡುವಂತಹ ಯೋಜನೆಗಳೇಕೆ? ಉತ್ತಮ ಶಿಕ್ಷಣ, ಚೆನ್ನಾಗಿರುವ ರಸ್ತೆಗಳು, ಶುದ್ಧವಾದ ಕುಡಿಯುವ ನೀರು, ದೂರಸಂಪರ್ಕ ಮತ್ತು ವಿದ್ಯುಚ್ಛಕ್ತಿ. ಇವೆಲ್ಲ ಕೊಡಲು ಸಾಧ್ಯವಿಲ್ಲದ್ದರಿಂದ ನಿಮಗೆ "ಸಂತೆ ಹೊತ್ತಿಗೆ ಮೂರು ಮೊಳ ನೇಯ್ದ" ವೈದ್ಯರನ್ನು ಕೊಡುತ್ತೇವೆ, ಎಂದೇ ಮಾನ್ಯ ಆರೋಗ್ಯ ಸಚಿವರು ಹೇಳುತ್ತಿದ್ದಾರೆ ಎನ್ನಿಸದೆ?

English summary
Bharat Sastry from USA asks why duration of MBBS course in India should be reduced? Though it take more years to make a complete doctor after the course, reduction of course duration will decrease the quality too, he argues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X