ಪಂಪ ಕನ್ನಡ ರಾಜ್ಯೋತ್ಸವದಲ್ಲಿ ಮಿಂಚಿದ ಮಿಚಿಗನ್ನಡಿಗರು

Posted By: ವಿವೇಕಾನಂದ ಆರ್, ಡೆಟ್ರಾಯ್ಟ್, ಮಿಚಿಗನ್
Subscribe to Oneindia Kannada

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ, ಕನ್ನಡಿಗರಿಗೆ ದೇಶ ಬಿಟ್ಟು ಬಂದರು ಕನ್ನಡದ ಹಂಬಲ ಹೋಗುವುದಿಲ್ಲ.

ಈ ಮಿಡಿತದ ಕಾರಣದಿಂದಲೆ, ಅಮೆರಿಕದ ಮಿಚಿಗನ್ ರಾಜ್ಯದಲ್ಲಿ ಸ್ಥಳೀಯ, ಲಾಭರಹಿತ ಸಂಸ್ಥೆಯಾದ "ಪಂಪ ಕನ್ನಡ ಕೂಟ"ವು ಪ್ರತಿ ವರ್ಷದಂತೆ, ನವೆಂಬರ್ ಮೊದಲ ವಾರದಲ್ಲಿ, ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಹಬ್ಬಗಳ ಆಚರಣೆಯ ಸಂಭ್ರಮವನ್ನು ಸಂಘದ ಅಧ್ಯಕ್ಷರಾದ ದಿವಾಕರ್ ಅವರ ನೇತೃತ್ವದಲ್ಲಿ ಆಯೋಜಿಸಿತ್ತು.

ರಾಜ್ಯೋತ್ಸವ ವಿಶೇಷ: ಮಿನ್ನೆಸೋಟದ ಸಂಗೀತ ಕನ್ನಡ ಕೂಟ

ಮಿಚಿಗನ್ನಿನ ಎಲ್ಲ ಭಾಗಗಳ ಸ್ನೇಹಿತರು, ಹಳೆಯ ಹಾಗು ಹೊಸ ಸದ್ಯಸ್ಯರು ಒಟ್ಟಿಗೆ ಸೇರಿ ಅಚರಿಸುವ ವಿಷೇಶ ಕಾರ್ಯಕ್ರಮ ಎಲ್ಲರಿಗು ಆಪ್ತವಾಗಿ "ಹಚ್ಚೋಣ ಕನ್ನಡದ ದೀಪ"ವಾಗಿತ್ತು.

Michigan Pampa Kannada Koota celebrates Kannada Rajyotsava

ನವೆಂಬರ್ 11ರಂದು ಇಲ್ಲಿನ, ಡೆಟ್ರಾಯ್ಟ್ ನಗರಕ್ಕೆ ಹೊಂದಿಕೊಂಡಿರುವ "ಸೌತ್ ಫೀಲ್ಡ್"ನ ಡಿವೈನ್ ಪ್ರೊವಿಡೆನ್ಸ್ ಚರ್ಚ್ ಸಭಾಂಗಣದಲ್ಲಿ, ಸುಮಾರು 450 ಕನ್ನಡಿಗರ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಭಾಂಗಣವು ಕನ್ನಡ ಕೂಟದ ಬ್ಯಾನರ್ಗಳು ಹಾಗು ಶೃತಿ ಆಮೃತನಾಥ್ ಅವರ ಸಾರಥ್ಯದಲ್ಲಿ ತಯಾರಾದಂಥ ಅಲಂಕಾರಿಕ ಚಿತ್ರಣಗಳಿಂದ ಸಿಂಗಾರಗೊಂಡಿತ್ತು. ಸಂಜೆ 4 ಘಂಟೆಗೆ ಸ್ಥಳೀಯ ಗಾನ ಕೋಗಿಲೆಗಳು "ಜಯ ಭಾರತ ಜನನಿಯ ತನುಜಾತೆ" ಎಂದು ನಾಡಗೀತೆ ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕುವೈತ್ ಕನ್ನಡ ಸಂಘದಿಂದ ರಾಜ್ಯೋತ್ಸವಕ್ಕೆ ವಿಡಿಯೋ ಆಹ್ವಾನ

ಕರ್ನಾಟಕದ ಸಂಸ್ಕೃತಿ ಮತ್ತು ಕನ್ನಡ ಭಾಷಾಭಿಮಾನವನ್ನು ಸಾರುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಚಿಣ್ಣರ ಹಾಡುಗಾರಿಕೆ, ನೃತ್ಯ, ಸಾಂಪ್ರದಾಯಿಕ ಹಬ್ಬಗಳನ್ನು ಪರಿಚಯಿಸುವ, ಕನ್ನಡಾಭಿಮಾನ ಸಾರುವ ನೃತ್ಯ ರೂಪಕಗಳು, ಕಿರು ನಾಟಕಗಳು ಪ್ರೇಕ್ಷಕರನ್ನು ಮುಗ್ಧಗೊಳಿಸಿದವು.

Michigan Pampa Kannada Koota celebrates Kannada Rajyotsava

ಆಶೋಕ್ ಕಲ್ವಾಡ್ರವರು ರಚಿಸಿ ನಿರ್ದೇಶಿಸಿದ್ದ ಹಾಸ್ಯ ನಾಟಕಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿ, ಪ್ರಶಂಸೆಗೆ ಪಾತ್ರವಾದವು. ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಕೂಟದ ಕಾರ್ಯದರ್ಶಿಗಳಾದ ರವೀಶ್ ರವರು ಅಚ್ಚುಕಟ್ಟಾಗಿ, ಸಮಯೋಚಿತ ವಿವರಣೆಗಳೊಂದಿಗೆ ನಿರೂಪಿಸಿದರು.

ಸ್ಥಳೀಯ ಸಂಗೀತ ಪ್ರತಿಭೆಗಳ, ಕನ್ನಡಿಗರದ್ದೆ ಆದ "ಹೃಧ್ವನಿ" ಮ್ಯೂಸಿಕ್ ಬ್ಯಾಂಡ್ ತಂಡವು, ವೀಣೆ, ತಬಲ, ಕೀಬೋರ್ಡ್, ಗಿಟಾರ್, ಡ್ರಮ್ಸ್, ಕೊಳಲು ಮುಂತಾದ ವಾದ್ಯಗಳ ಸಂಗೀತ ಸಮ್ಮಿಲನದ ನಡುವೆ, ಮೈಸೂರು ಅನಂತಸ್ವಾಮಿಯವರ ಹಾಡುಗಳ ಗಾಯನದಿಂದ ಪ್ರೇಕ್ಷಕರನ್ನು ರಂಜಿಸಿದರು.

ಇಂದಿನ ಯುವ ಪೀಳಿಗೆಗೆ, ನಮ್ಮ ಕರ್ನಾಟಕ ಹಾಗು ಕನ್ನಡದ ವೈಭವ ಪರಿಚಯಿಸಲು ಆಯೋಜಿಸಿದ ಕಾರ್ಯಕ್ರಮ ಅದ್ಭುತವಾಗಿತ್ತು. 5ರಿಂದ 10 ವರ್ಷದ ಮಕ್ಕಳು ಪಂಪ ಮಹಾಕವಿ, ಬಸವಣ್ಣನವರು, ಅಕ್ಕಮಹಾದೇವಿ, ರಾಣಿ ಅಬ್ಬಕ್ಕ, ಕೃಷ್ಣದೇವರಾಯ, ಪುರಂದರದಾಸರು, ಒನಕೆ ಓಬವ್ವ, ರಾಣಿ ಚೆನ್ನಮ್ಮ, ಸರ್ ಎಮ್. ವಿಶ್ವೇಶ್ವರಯ್ಯ, ದ.ರಾ.ಬೇಂದ್ರೆ, ಕುವೆಂಪು, ಡಾ. ರಾಜ್ ಕುಮಾರ್ ಹಾಗು ಕರ್ನಾಟಕ ಮಾತೆಯರ ವೇಷಭೂಷಣ ಧರಿಸಿ ಕರ್ನಾಟಕದ ಮಹಾನ್ ಚೇತನಗಳನ್ನು ಪರಿಚಯಿಸಿದರು. "ಹೃಧ್ವನಿ" ತಂಡ ನೀಡಿದ ಹಿನ್ನೆಲೆ ಸಂಗೀತದೊಂದಿಗೆ ಮೂಡಿ ಬಂದ ಈ ಕರ್ನಾಟಕ ವೈಭವ ಪ್ರದರ್ಶನ ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿಸಿತು.

Michigan Pampa Kannada Koota celebrates Kannada Rajyotsava

ಸಾಂಪ್ರದಾಯಿಕ ಬಟ್ಟೆ ಧರಿಸಿದ್ದ ಚಿಣ್ಣರು ಕೈಯಲ್ಲಿ ಕನ್ನಡ ಬಾವುಟ ಹಿಡಿದು ಸಭಾಂಗಣದ ತುಂಬೆಲ್ಲ ಓಡಾಡಿ, ವಾತಾವರಣವನ್ನು ಇನ್ನಷ್ಟು ಕನ್ನಡಮಯಗೊಳಿಸಿದರು.
ಕಾರ್ಯಕಾರಿ ಸಮಿತಿಯ ಸದಸ್ಯರು ಸಣ್ಣ ನಗೆ ನಾಟಕವನ್ನು ಪ್ರಸ್ತುತಪಡಿಸುವ ಮೂಲಕ ಕನ್ನಡ ಕೂಟದ ಕಾರ್ಯಕ್ರಮಗಳಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಆಗಮಿಸಬೇಕು ಎಂದು ಕರೆ ನೀಡಿದರು.

Michigan Pampa Kannada Koota celebrates Kannada Rajyotsava

ಕಾರ್ಯಕ್ರಮದ ನಡುವೆ ಇಲ್ಲಿನ ಭರತನಾಟ್ಯ ಗುರುಗಳಾದ ವಿದ್ಯಾ ಕೃಷ್ಣಮೂರ್ತಿ, ರೂಪ ಶ್ಯಾಂಸುಂದರ್, ಧನ್ಯ ಕುಮಾರ್ ರಾವ್ ಹಾಗು ನಮ್ಮೊಟ್ಟಿಗೆ ಉಪಸ್ಥಿತರಿದ್ದ ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರಾದ, ಸುವರ್ಣ ಕರ್ನಾಟಕ ಚೇತನ ಅರ್ ಕೆ ಪ್ರಸನ್ನಕುಮಾರ್ ರವರನ್ನು ಕೂಟದವತಿಯಿಂದ ಸನ್ಮಾನಿಸಲಾಯಿತು.

ಕೂಟದ ಸದಸ್ಯರು ಮಕ್ಕಳಿಗಾಗಿ ನಡೆಸುತ್ತಿರುವ ಕನ್ನಡ ಕಲಿಕಾ ತರಗತಿಗಳ ಬಗ್ಗೆ ಮಾಹಿತಿ ನೀಡಿದರು. ಮಿಚಿಗನ್ ನಲ್ಲಿ ನೆಲೆಸಿರುವ, ಶೈಕ್ಷಣಿಕ ಹಾಗು ಪಠ್ಯೇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರ ಮಕ್ಕಳಿಗೆ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಹಾಗೆಯೆ, ಕೂಟದ ಖಜಾಂಚಿಗಳಾದ ಸುನಿಲ್ ರವರು ಸಂಘದ ಹಣಕಾಸು ಹಾಗು ಕಾರ್ಯಕ್ರಮದ ಅಯ-ವ್ಯಯಗಳನ್ನು ವರದಿ ಮಾಡಿದರು.

Michigan Pampa Kannada Koota celebrates Kannada Rajyotsava

"ಅಕ್ಕ"ದ ಚೇರ್ಮನ್ನರಾದ ಅಮರನಾಥ್ ಗೌಡ ಮತ್ತು ಖಜಾಂಚಿಗಳಾದ ತುಮಕೂರು ದಯಾನಂದ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮುಂಬರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ವಿವರಗಳನ್ನು ತಿಳಿಸಿ, ಸಮ್ಮೇಳನದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು.

ಈ ಎಲ್ಲ ಕಾರ್ಯಕ್ರಮಗಳ ನೆನಪನ್ನು ಇಲ್ಲಿನ ವಿದ್ಯಾರ್ಥಿಗಳಾದ ಸಂದೀಪ್, ನಿಖಿಲ್ ಹಾಗು ಕಾರ್ತಿಕ್ ತಮ್ಮ ಛಾಯಾ ಚಿತ್ರಗಳಲ್ಲಿ ಸೆರೆಹಿಡಿದರು. ಕಾರ್ಯಕ್ರಮದ ಕೊನೆಗೆ ತವರು ತೊರೆದು ಬಂದ ಹಕ್ಕಿಗಳ ಕನ್ನಡ ಕಲರವ ಮುಗಿಲು ಮುಟ್ಟಿತ್ತು.

Michigan Pampa Kannada Koota celebrates Kannada Rajyotsava

ಮನತಣಿಸಿದ ಕಾರ್ಯಕ್ರಮಗಳ ನಂತರ ಹೊಟ್ಟೆ ತುಂಬಿಸಲು ಇಲ್ಲಿನ "ಅತಿಥಿ ಇಂಡಿಯನ್ ರೆಸ್ಟೊರಂಟ್" ಕಡೆಯಿಂದ ರುಚಿಕರವಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವ್ಯವಸ್ಥೆಯು ಮಂಜುಳರವರ ನೇತೃತ್ವದ ತಂಡದ್ದಾಗಿತು.

Michigan Pampa Kannada Koota celebrates Kannada Rajyotsava

ರಾತ್ರಿ 9.30ಕ್ಕೆ ಮುಕ್ತಾಯಗೊಂಡ ಕಾರ್ಯಕ್ರಮದ ವಾತಾವರಣ ಭಾಷಾಭಿಮಾನವನ್ನು ಪುನ: ಬಡಿದೆಬ್ಬಿಸುವಲ್ಲಿ ಯಶಸ್ವಿಯಾಗಿದ್ದರಲ್ಲಿ ಸಂಶಯವಿಲ್ಲ. ಸಂಘದ ನಿರ್ದೇಶಕ ಮಂಡಳಿಯ ವಿಜಯ ಪಂಡಿತ್, ರಮೇಶ್ ಗೌಡ ಮತ್ತು ವಿಶ್ವನಾಥ್ ಹಣಸೊಗೆ ಅವರ ಮಾರ್ಗದರ್ಶನದಲ್ಲಿ, ಯುವ ಉತ್ಸಾಹಿ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಸ್ವಯಂಸೇವಕರು ಮತ್ತೊಂದು ಯಶಸ್ವಿ ಮೈಲಿಗಲ್ಲಿಗೆ ಪಂಪ ಕನ್ನಡ ಕೂಟವನ್ನು ಮುನ್ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pampa Kannada Koota in Michigan celebrated Kannada Rajyotsava and Deepavali together on November 11 in Southfield. Array of cultural activities were organized by the enthusiastic youth. Talented young artists were felicitated too.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ