ಕನ್ನಡಿಗರುಯುಕೆ ದಶಮಾನೋತ್ಸವದ ಕರೆಯೋಲೆ
ಆಂಗ್ಲನಾಡಿನಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಬೆಳೆಸಿ ಪಸರಿಸುವ ಭಗೀರಥ ಪ್ರಯತ್ನವನ್ನು ಕಳೆದ 9 ವರ್ಷಗಳಿಂದ ಸತತವಾಗಿ ಮಾಡಿ ತನ್ನ 10ನೇ ವರ್ಷಕ್ಕೆ ಕಾಲಿಡುತ್ತಿರುವ ಸುಸಂದರ್ಭದಲ್ಲಿ, ಲಾಭೋದ್ದೇಶರಹಿತ ಕನ್ನಡ ಸಂಸ್ಥೆ, ಕನ್ನಡಿಗರುಯುಕೆ ತನ್ನ ದಶಮಾನೋತ್ಸವವನ್ನು ಹಮ್ಮಿಕೊಂಡಿದೆ.
ಈ ಸಮಾರಂಭವನ್ನು ಸೆಪ್ಟೆಂಬರ್ 27, 2014, ಶನಿವಾರದಂದು ಲಂಡನ್ ಹೊರವಲಯದಲ್ಲಿರುವ ಸ್ಲೌ ನ "ದಿ ಸೆಂಟರ್ ಕಾನ್ಫೆರೆನ್ಸ್ ವೆನ್ಯು"ನಲ್ಲಿ ಬಹಳ ವಿಜೃಂಭಣೆಯಿಂದ ನಡೆಸಲು ಏರ್ಪಾಡು ಮಾಡಿದೆ. ಕನ್ನಡಿಗರುಯುಕೆಯ ಈ ಮೈಲಿಗಲ್ಲು ಕಾರ್ಯಕ್ರಮಕ್ಕೆ ಕನ್ನಡ ನಾಡಿನ ಹೆಸರಾಂತ ಕಲಾವಿದರನ್ನು ಆಹ್ವಾನಿಸಲಾಗಿದೆ.
ಗುರುಕಿರಣ್ ಸಂಗೀತ ರಸಸಂಜೆ : ಗಾನರಸಿಕರಿಗೆ ಎಂದಿಗೂ ನಿರಾಸೆ ಮಾಡದ ಕನ್ನಡಿಗರುಯುಕೆ ಈ ಬಾರಿ ಭರ್ಜರಿ ಸಂಗೀತ ಸಂಜೆಯನ್ನೇ ಏರ್ಪಡಿಸಿದೆ. ಸಂಗೀತ ನಿರ್ದೇಶಕ ಗುರುಕಿರಣ್ ತಮ್ಮ ತಂಡದೊಂದಿಗೆ ತಮ್ಮ ಸಂಗೀತ ಸಂಯೋಜನೆಯ ಹಾಡುಗಳನ್ನು ಪ್ರಸ್ತುತಪಡಿಸಿ ಕನ್ನಡಿಗರ ಮನರಂಜಿಸಲಿದ್ದಾರೆ. ಡ್ರಮ್ ದೇವ, ಸೊಲೊಮನ್ ಮತ್ತು ಇತರ ಸಂಗೀತ ವಾದಕರು ತಂಡದಲ್ಲಿದ್ದು ತಮ್ಮ ವಿವಿಧ ವಾದ್ಯಗೋಷ್ಠಿಗಳೊಂದಿಗೆ ಗುರುಕಿರಣ್ ಗೆ ಸಹಯೋಗ ನೀಡಿದರೆ, ಯುವ ಗಾಯಕರಾದ ಅನುರಾಧ ಭಟ್ ಮತ್ತು ಚೇತನ್ ಸೋಸ್ಕಾ ಅವರು ತಮ್ಮ ಸುಶ್ರಾವ್ಯ ಕಂಠದಿಂದ ಸುಮಧುರ ಗೀತೆಗಳನ್ನು ಹಾಡಲಿದ್ದಾರೆ.

ಕೃಷ್ಣೇಗೌಡರ ನಗೆಚಟಾಕಿ : ಹಾಸ್ಯ, ಕನ್ನಡಿಗರುಯುಕೆಯ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲೂ ಹಾಸುಹೊಕ್ಕಾಗಿದೆ. ಇದು, ನಮ್ಮೆಲ್ಲರಿಗೂ ಚಿರಪರಿಚಿತ ಹಾಸ್ಯ ಕಲಾವಿದ ಕೃಷ್ಣೇಗೌಡರ ಹಾಸ್ಯ ಚಟಾಕಿಯ ನಗೆಹೊನಲಿನಲ್ಲಿ ತುಂಬಿಬರಲಿದೆ. ಕನ್ನಡ ಚಲನಚಿತ್ರ/ರಂಗ ಕಲಾವಿದ ಹಾಗು ಕನ್ನಡ ನಾಡಿನ ಮನೆ ಮಾತಾಗಿರುವ ರೇಡಿಯೋ ಜಾಕಿ ವಿನಾಯಕ್ ಜೋಶಿ ತಮ್ಮ ಕಲಾಪ್ರತಿಭೆಯನ್ನು ಕಾರ್ಯಕ್ರಮ ನಿರೂಪಣೆ, ಮತ್ತಿತರ ರೂಪಗಳಲ್ಲಿ ಆಂಗ್ಲನಾಡಿನ ಕನ್ನಡಿಗರಿಗೆ ಪರಿಚಯಿಸಲಿದ್ದಾರೆ.
ಆಮಂತ್ರಿತ ವೃತ್ತಿಪರ ಕಲಾವಿದರ ಕಲಾಪ್ರದರ್ಶನವಲ್ಲದೆ, ಸ್ಥಳೀಯ ಕನ್ನಡಿಗರಿಂದ ಗಾಯನ, ನೃತ್ಯ, ನಾಟಕ, ಇನ್ನಿತರ ಕಾರ್ಯಕ್ರಮಗಳ ಮೂಲಕ ಪ್ರತಿಭಾಪ್ರದರ್ಶನವಾಗಲಿದೆ. ಈ ಸಮಾರಂಭಕ್ಕೆ ಆಗಮಿಸುವ ಪ್ರೇಕ್ಷಕರೆಲ್ಲರಿಗೂ ದಕ್ಷಿಣ ಭಾರತ ಶೈಲಿಯ ಮಧ್ಯಾಹ್ನದ ಭೋಜನ ಹಾಗು ರಾತ್ರಿಯ ಲಘು ಉಪಹಾರವನ್ನು ಏರ್ಪಾಡುಮಾಡಲಾಗಿದೆ.
ದಶಮಾನೋತ್ಸವ ಸಮಾರಂಭದ ವಿವರ:
ದಿನಾಂಕ : 27 ಸೆಪ್ಟೆಂಬರ್ 2014
ಸ್ಥಳ : ದಿ ಸೆಂಟರ್ ಕಾನ್ಫೆರೆನ್ಸ್ ವೆನ್ಯು, ಫಾರ್ನಾಮ್ ರಸ್ತೆ, ಸ್ಲೌ, ಯುನೈಟೆಡ್ ಕಿಂಗ್ ಡಮ್, SL1 4UT
ಸಮಯ : ಬೆಳಿಗ್ಗೆ 11ರಿಂದ ರಾತ್ರಿ 9ರವರೆಗೆ
ಕನ್ನಡಿಗರುಯುಕೆ ಎಲ್ಲ ಕನ್ನಡಿಗರಿಗೂ, ಕಲಾರಸಿಕರಿಗೂ ಹಾಗೂ ಸಂಗೀತಪ್ರೇಮಿಗಳಿಗೂ ಈ ಕರೆಯೋಲೆಯ ಮೂಲಕ ಆದರದಿಂದ ಸ್ವಾಗತಿಸುತ್ತದೆ. ಸಮಾರಂಭದ ಹೆಚ್ಚಿನ ವಿವರಗಳಿಗೆ ದಯವಿಟ್ಟು http://www.kannadigaruuk.com ಅಂತರ್ಜಾಲ ತಾಣವನ್ನು ಭೇಟಿ ಮಾಡಿ. ಎಂದಿನಂತೆ ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಆಂಗ್ಲನಾಡಿನ ಕನ್ನಡ ಸಮುದಾಯದ ಸೇವೆಯಲ್ಲಿ ನಿರತವಾಗಿರುವ ಕನ್ನಡಿಗರುಯುಕೆಗೆ ತಮ್ಮ ಅಮೂಲ್ಯ ಪ್ರೋತ್ಸಾಹ ನೀಡುವಿರೆಂದು ನಮ್ಮ ಆಶಯ.












Click it and Unblock the Notifications