ಎತ್ತಣ ಜೆಡಿಎಸ್ - ಎತ್ತಣ ಕಾಂಗ್ರೆಸ್, ಎತ್ತಣಿಂದೆತ್ತ ಸಂಬಂಧವಯ್ಯ?
ಅಂತೂ ಅತ್ತೂ ಕರೆದೂ.. ನಂಗೆ ಹುಷಾರಿಲ್ಲ, ಸಾಯೋ ಹಾಗೆ ಇದೀನಿ... ಹುಷಾರಾಗಬೇಕು ಅಂದ್ರೆ ನನ್ನ ಸಿಎಂ ಮಾಡಿ ಅಂತ ಗೋಗರೆದ ಕುಮಾರಣ್ಣ... ಇದು ನಂದು ಕಡೆ ಚುನಾವಣೆ... ನನ್ನನ್ನೇ ಗೆಲ್ಲಿಸಿ ಮತ್ತೊಮ್ಮೆ ಮುಖ್ಯಮಂತ್ರಿ ಮಾಡಿ ಅಂತ ದರ್ಪದಿಂದಲೇ ಕೇಳಿದ ಸಿದ್ರಾಮಣ್ಣ...
ಹಾವು - ಮುಂಗಸಿಯ ತರಹ ಹೋರಾಡಿ - ನಂತರ ಕೈ-ಕೈ ಮಿಲಾಯಿಸಿ ಅಂತೂ ಅಧಿಕಾರ ಹಿಡಿದಿದ್ದಾರೆ. ಇದ್ದರೂ ರಾಜ್ಯದ ಮುಕ್ಕಾಲು ಭಾಗ ಜನರ ವಿರೋಧ!
ಎತ್ತಣ ಜೆಡಿಎಸ್ - ಎತ್ತಣ ಕಾಂಗ್ರೆಸ್
ಎತ್ತಣಿಂದೆತ್ತ ಸಂಬಂಧವಯ್ಯ...? ಅಂತಾ ಕೇಳುವಿರಾ...
ಅದೇ ಅಧಿಕಾರದ ಮಹಿಮೆಯಯ್ಯ...!

ಒಂದು ರೀತಿಯಲ್ಲಿ ಬಿಜೆಪಿ ಈ ಬಾರಿ ವಿರೋಧ ಪಕ್ಷದಲ್ಲೇ ಕೂತಿರೋದು ಅವರ ಪಕ್ಷಕ್ಕೇ ಒಳಿತು. ಸುಮ್ಮನೆ ಜೆಡಿಎಸ್-ಕಾಂಗ್ರೆಸ್ ಎಂಎಲ್ಎಗಳನ್ನು ಕರೆದುತಂದು ಅವರಿಂದ ಇನ್ನೂ ಹೆಚ್ಚಿನ ಕಷ್ಟ ತಂದುಕೊಂಡು, ಸರಿಯಾಗಿ ಕೆಲಸ ಮಾಡಲಾಗದೆ ಜನರಿಂದ ತಿರಸ್ಕಾರ ಮಾಡಿಸಿಕೊಳ್ಳೋಬದ್ಲು... ಜನಗಳ ಸಮಸ್ಯೆಗಳಿಗೆ ಸ್ಪಂದಿಸಿ, ಮುಂದಿನ ಲೋಕಸಭಾ ಚುನಾವಣಾ ಕಡೆ ಗಮನ ಕೊಟ್ಟು... ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ದೇಶದ ಸುಭದ್ರತೆಗೆ ಮೋದಿಜಿಯವರ ಕೈ ಬಲಪಡಿಸಿದರೆ ಅದಕ್ಕಿಂತ ಮತ್ತೇನು ಬೇಕು?
ಏನೇ ಹೇಳಿ... ಈ ಚುನಾವಣೆಯಿಂದ ಮತ್ತೆ ರುಜುವಾತಾಗಿದ್ದು ರಾಜಕಾರಣಿಗಳಿಗೆ ಇರೋದು ಎರಡು ನಾಲಿಗೆ ಅಲ್ಲ... ಇನ್ನು ಹೆಚ್ಚಿಗೆ ಅಂತ. ಮತದಾರರು ಕಲಿತ ಪಾಠ ಏನೆಂದ್ರೆ, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಹಾಕಿ.. ಯಾವುದಾದ್ರು ಒಂದು ಪಕ್ಷಕ್ಕೆ ಬಹುಮತ ಬರೋ ಹಂಗೆ ಮಾಡ್ಬೇಕು ಅಂತ.
ಇಲ್ಲಾ ಅಂದ್ರೆ, ಈ ಮಿಶ್ರ ಸರ್ಕಾರದ ಮಿತ್ರರು... ಹೀಗೆಯೇ ಮಿತ್ರರಾಗಿರ್ತಾರೆ ಅಂತ ಹೆಂಗೆ ನಂಬೋದು ಅವ್ರನ್ನ? ಯಾಕೆಂದ್ರೆ ಅವರು ನುಡಿಯೋದೇ ಒಂದು... ಮಾಡೋದೇ ಒಂದು.
ಕಳೆದ ಎರಡು ತಿಂಗಳಿಂದ ತಮ್ಮ ಬಗ್ಗೆನೇ ಹೆಚ್ಚು ಬಾರಿ ಮಾತಾಡ್ತಿದ್ದುದನ್ನು ಕೇಳಿದ ವಿಶ್ವಮಾನವರಾದ ಶ್ರೀ ಜಗಜ್ಯೋತಿ ಬಸವಣ್ಣನವರು... ಹೀಗೇನು ಅಂದುಕೊಳ್ತಿದ್ದಾರೋ ಏನೋ... ಅಲ್ವಾ?
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯಾ?
ಹೊಸ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ... ಬಸವಣ್ಣನವರ ಮೇಲಿನ ವಚನವನ್ನು ಈ ಬಾರಿಯಾದ್ರು ಪಾಲನೆ ಮಾಡಿ ಅಂತಾ ಹೇಳುತ್ತಾ.... ಮುಂದಿನ ದಿನಗಳತ್ತ ಆಶಾಭಾವನೆಯಿಂದ ನೋಡುತ್ತಿರುವ... ಇಂತಿ ನಾಗರಾಜ್ ಎಂ.












Click it and Unblock the Notifications