ಸಿಂಗಪುರದಲ್ಲಿ ನಾಲ್ಕು ದಿನಗಳ 'ಯಕ್ಷಗಾನೋತ್ಸವ'
ಕನ್ನಡ ಸಂಘ (ಸಿಂಗಪುರ) ಆಶ್ರಯದಲ್ಲಿ, ಸಿಂಗಪುರದಲ್ಲಿನ ವಿವಿಧ ದೇವಸ್ಥಾನಗಳು ಹಾಗು WOODLANDS COMMUNITY CLUBನ ಸಂಯೋಗದೊಂದಿಗೆ ಮೊದಲ ಬಾರಿಗೆ ತೆಂಕತಿಟ್ಟು ಶೈಲಿಯ "ಯಕ್ಷಗಾನ"ದ ಸವಿಯನ್ನು ಸವಿಯುವ ಸುವರ್ಣಾವಕಾಶ ಸಿಂಗನ್ನಡಿಗರಿಗೆ ಒದಗಿ ಬಂದಿದೆ. ಈ ಬಾರಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ಪ್ರಸಾಧಿತ ದಶಾವತಾರ ಯಕ್ಷಗಾನ ಮಂಡಳಿಯಿಂದ 4 ದಿನಗಳು ಸತತವಾಗಿ ಕನ್ನಡನಾಡಿನ ಹೆಮ್ಮೆಯ ಪ್ರಾಚೀನ ಜನಪದ ಕಲೆಯ ಮೂಲಕ ವಿವಿಧ ಪೌರಾಣಿಕ ಪ್ರಸಂಗಗಳನ್ನು ಪ್ರಸ್ತುತಪಡಿಸಿ ಯಕ್ಷಗಾನದ ರಸದೌತಣವನ್ನು ಉಣಬಡಿಸಲಿದ್ದಾರೆ.
ಈ ಉತ್ಸವವು ಅಕ್ಟೋಬರ್ 25ರಂದು ಮಾರ್ಸ್ಲಿಂಗ್‌ನ ಶ್ರೀ ಶಿವ ಕೃಷ್ಣ ದೇವಸ್ಥಾನದ ಆವರಣದಲ್ಲಿ "ದಕ್ಷಯಜ್ಞ (ದಕ್ಷಾಧ್ವರ), ಭಸ್ಮಾಸುರ ಮೋಹಿನಿ" ಪ್ರಸಂಗವನ್ನು ಪ್ರದರ್ಶಿಸುವುದರೊಂದಿಗೆ ಶ್ರೀಗಣೇಶವಾಯಿತು. ಎರಡು ಪ್ರಸಂಗಗಳು ನೆರೆದಿದ್ದ ಪ್ರೇಕ್ಷಕರನ್ನು ಸಂಪೂರ್ಣವಾಗಿ ಆವರಿಸಿ 3 ಗಂಟೆಗಳು ಕದಲದೆ ಮೂಖವಿಸ್ಮಿತರಾಗಿ ವೀಕ್ಷಿಸುವಂತೆ ಮಾಡುವಲ್ಲಿ ಸಫಲವಾದವು.
ಶ್ರೀ ಗೌರಿಯ ತವರು ಮನೆಯ ಕಡೆಗಿನ ಸೆಳೆತ, ಶಿವನನ್ನು ಸಂತೈಸುವ ರೀತಿ, ದಕ್ಷನ ಅಹಂಕಾರ, ಶಿವನ ಕಡೆಗಿನ ನಿರ್ಲಕ್ಷ, ಶಿವನ ಪ್ರಳಯಕಾಲದ ಆವೇಶ, ವೀರಭದ್ರನ ಸೃಷ್ಟಿ ಹಾಗು ದಕ್ಷನ ವಧೆಯ ನವರಸಗಳನ್ನಾಧರಿತ ಪ್ರಸಂಗವು ಪ್ರೇಕ್ಷಕರನ್ನು ಸೆಳೆದಿಟ್ಟುಕೊಂಡಿತ್ತು. ಕೊನೆಯಲ್ಲಿ ವೀರಭದ್ರನು ದಕ್ಷಬ್ರಹ್ಮನ ಶಿರಸ್ಸನ್ನು ಚೆಂಡಾಡಿದಾಗ ಪ್ರೇಕ್ಷರರೆಲ್ಲರೂ ಚಪ್ಪಾಳೆ ತಟ್ಟಿ ಪ್ರಶಂಸಿಸಿದ್ದು ಅವರ ತಲ್ಲೀನತೆಗೆ ಹಿಡಿದ ಕನ್ನಡಿಯಾಗಿತ್ತು. ಭಸ್ಮಾಸುರ ಮೋಹಿನಿಯ ಪ್ರಸಂಗದಲ್ಲಿ ಭಸ್ಮಾಸುರ ಮತ್ತು ಶಿವನ ನಡುವಿನ ಸಂಭಾಷಣೆ ನೆರೆದಿದ್ದ ಮಕ್ಕಳನ್ನು ಕೂಡ ಸೆರೆದಿಟ್ಟು, ಕೊನೆಯಲ್ಲಿ ಭಸ್ಮಾಸುರನು ಮೋಹಿನಿ ರೂಪದ ವಿಷ್ಣುನೊಂದಿಗಿನ ನಾಟ್ಯದಲ್ಲಿ ತನ್ನ ತಲೆಯ ಮೇಲೆ ಕೈಯಿಟ್ಟುಗೊಂಡು ಭಸ್ಮವಾಗುವ ಸನ್ನಿವೇಶವನ್ನು ನೋಡಲು ರೋಮಾಂಚನವಾಗಿತ್ತು.

ಹಿಮ್ಮೇಳದಲ್ಲಿ ಭಾಗವತರ ಅಮೋಘ ಗಾಯನ, ಮೃದಂಗ ಹಾಗು ಚಂಡೆಯ ವಾದನ ಮತ್ತು ಮುಮ್ಮೇಳದ ಸುಮಧುರ ಸಂಭಾಷಣೆಯ ಸಮ್ಮಿಲನವು ಸಿಂಗಪುರದಲ್ಲಿನ ಕಲಾಭಿಮಾನಿಗಳಿಗೆ ಮರೆಯಲಾರದಂತಹ ಸವಿ ಅನುಭವವೆನ್ನಬಹುದು. ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಖಚಾಂಚಿ ಶೀನಿವಾಸ್ ಅವರಿಂದ ವಂದನಾರ್ಪಣೆ, ಕನ್ನಡ ಸಂಘದ ಅಧ್ಯಕ್ಷರಾದ ಡಾ.ವಿಜಯಕುಮಾರ್ ಹಾಗು Shree Siva Krishna Templeನ ಆಡಳಿತ ಮಂಡಳಿಯಿಂದ ಕಲಾವಿದರಿಗೆ ನೆನಪಿನ ಕಾಣಿಕೆ ಹಾಗು ಪ್ರಸಾದದ ವಿತರಣೆಯೊಂದಿಗೆ ಕಾರ್ಯಕ್ರಮದ ಮಂಗಳವಾಯಿತು.
ಶ್ರೀ ಕಟೀಲು ದುರ್ಗಾಪರಮೇಶ್ವರಿ ಪ್ರಸಾಧಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಇನ್ನೂ ಎರಡು ದಿನಗಳ ಕಾಲ ನಡೆಯುವ ಈ "ಯಕ್ಷಗಾನೋತ್ಸವ" ನಡೆಯಲಿದೆ. 26ರಂದು ಪೋಟೊಂಗ್ ಪಾಸಿರ್‌ನ ಶ್ರೀ ಶಿವ ದುರ್ಗ ದೇವಸ್ಥಾನದಲ್ಲಿ "ಶ್ರೀದೇವಿ ಮಹಾತ್ಮೆ" ನಡೆದರೆ, 27ರಂದು ಪಯಾಲೇಬರ್ ಹತ್ತಿರದ ಶ್ರೀ ಶಿವನ್ ದೇವಸ್ಥಾನದಲ್ಲಿ "ಶ್ರೀ ಗಿರಿಜಾ ಕಲ್ಯಾಣ ಹಾಗು ಕುಮಾರ ವಿಜಯ" ಹಾಗು ಕೊನೆಯದಾಗಿ 28ರಂದು WOODLANDS COMMUNITY CLUB ಸಭಾಂಗಣದಲ್ಲಿ "ಶ್ರೀ ಗಾಯತ್ರಿ ಮಹಾತ್ಮೆ"ಯ ಆಖ್ಯಾನಗಳನ್ನು ಪ್ರದರ್ಶಿಸಲಿದ್ದಾರೆ.
ಇಂತಹ ಸುವರ್ಣಾವಕಾಶವನ್ನು ಸಿಂಗಪುರದಲ್ಲಿ ಕನ್ನಡ ಸಂಘದ ಮೂಲಕ ಏರ್ಪಡಿಸುವಂತೆ ಮಾಡಿದ ಪ್ರಾಯೋಜಕರಾದ 'ULB Realty, SING HEALTH, HDFC HOME LOAN, HSBC, LIFE STYLE PROPERTY, GITA JAYANTHI SINGAPORE ಹಾಗು ಗಣೇಶ ವಿಲಾಸ್ ಸಿಂಗಪುರ ಇವರಿಗೆ ಸಿಂಗನ್ನಡದ ಎಲ್ಲಾ ಕಲಾಭಿಮಾನಿಗಳು ಈ ಮೂಲಕ ಅಭಿನಂದನೆಗಳನ್ನು ತಿಳಿಸಲು ಇಚ್ಛಿಸುತ್ತಾರೆ.












Click it and Unblock the Notifications