ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಜಂಪ್ ವೀರ ಗಿರೀಶಗೆ ಕನ್ನಡಿಗರುಯುಕೆ ಸನ್ಮಾನ

By Prasad
|
Google Oneindia Kannada News

ಲಂಡನ್ನಿನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ 2012ರಲ್ಲಿ ಪ್ರಥಮ ಹಾಗೂ ಏಕೈಕ ಪದಕ ಗಳಿಸಿ, ಭಾರತೀಯರು, ಅದರಲ್ಲೂ ಕನ್ನಡಿಗರು ಹೆಮ್ಮೆ ಪಡುವಂತಹ ಸಾಧನೆ ಮಾಡಿದ ಕನ್ನಡದ ಕುವರ ಗಿರೀಶ ಹೊಸನಗರ ನಾಗರಾಜೇಗೌಡ ಅವರನ್ನು ಕನ್ನಡಿಗರುಯುಕೆ ಸಂಸ್ಥೆ ಪ್ಯಾರಲಿಂಪಿಕ್ಸ್ ನ ಅಂತಿಮ ದಿನದಂದು ಲಂಡನ್ನಿನಲ್ಲಿ ಗೌರವಿಸಿ, ಸನ್ಮಾನ ಮಾಡಿತು.

ಗಿರೀಶ ಅವರು ಲಂಡನ್ನಿನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ 2012ರ ಎತ್ತರ ಜಿಗಿತದಲ್ಲಿ 1.74 ಮೀ. ಎತ್ತರಕ್ಕೆ ಜಿಗಿದು ರಜತ ಪದಕ ಗೆದ್ದಿದ್ದಾರೆ. ಕನ್ನಡದ ಹುಡುಗ ಮಾಡಿದ ಈ ಸಾಧನೆಯನ್ನು ಗುರುತಿಸಿ, ಗೌರವಿಸುವುದಕ್ಕೋಸ್ಕರ ಕನ್ನಡಿಗರುಯುಕೆ ರೆಡಿಂಗ್ ನಗರದಲ್ಲಿ ಸೆಪ್ಟೆಂಬರ್ 9ರಂದು ಬ್ರೌನ್ ಮತ್ತು ಬರ್ಕ್ ಯುಕೆ ಸಂಸ್ಥೆಯೊಂದಿಗೆ ಜಂಟಿಯಾಗಿ ಒಂದು ಸನ್ಮಾನ ಸಮಾರಂಭವನ್ನು ಏರ್ಪಡಿಸಿತ್ತು.

ಆರಂಭದಲ್ಲಿ ಕನ್ನಡಿಗರುಯುಕೆಯ ಶಶಿಕಾಂತ್ ಅವರು ಗಿರೀಶರವರನ್ನು ಸ್ವಾಗತಿಸಿ ಅವರು ಮಾಡಿದ ಸಾಧನೆಯನ್ನು ಪ್ರಶಂಸಿಸಿ ಮಾತನಾಡಿದರು. ಕನ್ನಡಿಗರುಯುಕೆಯ ಅಧ್ಯಕ್ಷ ವಿವೇಕ್ ಹೆಗ್ಡೆಯವರು, ಯುಕೆಯಲ್ಲಿ ನೆಲೆಸಿರುವ ಕನ್ನಡಿಗರ ಪರವಾಗಿ 2,250 ಪೌಂಡ್ (ಸುಮಾರು ರು. 2,00,000) ಮೊತ್ತದ ಚೆಕ್ ಅನ್ನು ಗಿರೀಶ ಅವರಿಗೆ ಉಡುಗೊರೆಯಾಗಿ ನೀಡಿದರು. ಅಲ್ಲಿ ಉಪಸ್ಥಿತರಿದ್ದ ಅತಿಥಿಗಳಲ್ಲೊಬ್ಬರಾದ ಹೊತುರ್ ಇಕ್ಬಾಲ್ ಕನ್ನಡಿಗರುಯುಕೆಯ ಈ ಕಾರ್ಯದಿಂದ ಪ್ರೇರೇಪಿತರಾಗಿ ರು. 5 ಲಕ್ಷ ಧನಸಹಾಯ ಭಾರತದಲ್ಲಿ ನೀಡುವುದಾಗಿ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಮಾತಾಡಿದ ಗಿರೀಶ, ತಾವು ಬೆಳೆದುಬಂದ ರೀತಿ, ಕೌಟುಂಬಿಕ ಹಿನ್ನೆಲೆ, ಕ್ರೀಡೆಯಲ್ಲಿರುವ ಅತೀವ ಆಸಕ್ತಿ, ಎದುರಿಸಿದ ಸಮಸ್ಯೆಗಳು, ತರಬೇತುದಾರರಿಂದ, ವಿವಿಧ ಸಂಸ್ಥೆಗಳಿಂದ ದೊರೆತ ಪ್ರೋತ್ಸಾಹ, ಸಾಧನೆಯ ಪಯಣ, ಈ ಎಲ್ಲ ಅನುಭವಗಳನ್ನು ನೆರೆದಿದ್ದ ಸಭಿಕರಲ್ಲಿ ಹಂಚಿಕೊಂಡಾಗ ಎಲ್ಲರೂ ಭಾವಪರವಶರಾದರು. ಗಿರೀಶರ ಸಾಧನೆಗೆ ಅವರ ಪ್ರತಿಭೆಯೇ ಮುಖ್ಯ ಕಾರಣ, ತಾನು ನಿಮಿತ್ತ ಮಾತ್ರ ಎಂದು ಗಿರೀಶರ ತರಬೇತುದಾರ ಸತ್ಯನಾರಾಯಣ ಅಭಿಪ್ರಾಯಪಟ್ಟರು.

ಪ್ರಶ್ನೋತ್ತರ ವೇಳೆಯಲ್ಲಿ ಸಭಿಕರು ಕೇಳಿದ ಪ್ರಶ್ನೆಗಳಿಗೆ ಸದುತ್ತರ ನೀಡಿದ ಗಿರೀಶ, ಲಂಡನ್ನಿನಲ್ಲಿ ಕನ್ನಡಿಗರ ಉತ್ಸಾಹ, ಪ್ರೋತ್ಸಾಹ, ಅಭಿಮಾನ ಹಾಗೂ ಕಳಕಳಿ ನೋಡಿ ಭಾವುಕರಾದರು. ಪ್ಯಾರಾಲಿಂಪಿಕ್ಸ್ ನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಗಿರೀಶ ತೆರಳಬೇಕಾದುದರಿಂದ ಬಹಳ ಸಮಯ ಸಭಿಕರೊಂದಿಗೆ ವ್ಯಯಿಸಲಾಗಲಿಲ್ಲ.

ಭಾರತದ ತ್ರಿವರ್ಣ ಧ್ವಜ ಲಂಡನ್ನಿನ ಪ್ಯಾರಾಲಿಂಪಿಕ್ಸ್ 2012ರಲ್ಲಿ ರಾರಾಜಿಸಲು ಕಾರಣಕರ್ತರಾದ ಈ ಅಪ್ರತಿಮ ಕ್ರೀಡಾಪಟು, ಕನ್ನಡದ ಕುವರನೊಂದಿಗೆ ಸಮಯ ಕಳೆದ ಸಂತೋಷ, ತೃಪ್ತಿಯೊಂದಿಗೆ ಕನ್ನಡಿಗರು ಮನೆತೆರಳಿದರು. ಈ ಸದವಕಾಶವನ್ನು ಕಲ್ಪಿಸಿಕೊಟ್ಟ, ಅಂಗ್ಲನಾಡಿನಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕನ್ನಡಿಗರುಯುಕೆಗೆ ಸಭಿಕರೆಲ್ಲ ಕೃತಜ್ಞತೆಗಳನ್ನು ಸೂಚಿಸಿದರು.

ಕನ್ನಡಿಗರುಯುಕೆ ಪ್ರಕಟಣೆ

English summary
KannadigaruUK, London felicitates Girisha HN, who won the silver medal for high jump and his coach Satyanarayana in Paralympics 2012 in Reading, London on September 9, 2012. Girish shared his experience with Kannadigas of UK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X