ಬಣ್ಣಬಣ್ಣದ ಗುಂಡನ್ನುರುಳಿಸಿದ ಸಿಂಗನ್ನಡಿಗರು

ಈ ಬಾರಿ ಸ್ಪರ್ಧೆಯಲ್ಲಿ ಭಾಗವಹಿಸಲು ಸದಸ್ಯರ ನೋಂದಣಿಗೆ ಕನ್ನಡ ಸಂಘ ಮಿಂಚಂಚೆ ಕಳುಹಿಸಿದ ಕೇವಲ 24 ಗಂಟೆಗಳಲ್ಲಿ ಲಭ್ಯವಿದ್ದ ಎಲ್ಲಾ ಸ್ಥಾನಗಳು ಭರ್ತಿಗೊಂಡಿರುವುದು ಸದಸ್ಯರ ಉತ್ಸುಕತೆಗೆ ಹಿಡಿದ ಕನ್ನಡಿಯಾಗಿತ್ತು. ಅನೇಕ ಸದಸ್ಯರು ಈ ಮೂಲಕ ಮೊದಲಬಾರಿಗೆ ಕನ್ನಡ ಸಂಘದ ಸದಸ್ಯತ್ವವನ್ನು ಪಡೆದರು.
ಕಾರ್ಯಕ್ರಮದ ರೂವಾರಿಗಳಾದ ಜಯಶಂಕರ್ ಗೌಡ ಮತ್ತು ರಾಮನಾಥ್ ಅವರು ನಿರೂಪಿಸಿ, ನಿರ್ವಹಿಸಿದ ಸ್ಪರ್ಧೆಗಳು ಸುಗಮವಾಗಿ ನಡೆದು ಎಲ್ಲರ ಪ್ರಶಂಸೆ ಪಡೆಯುವಲ್ಲಿ ಸಫಲವಾದವು. ಮುಂಚಿತವಾಗಿಯೇ ನೋಂದಾಯಿಸಿದ ಸದಸ್ಯರನ್ನು 12 ಸಮಗುಂಪುಗಳಾಗಿ ವಿಂಗಡಿಸಿದ್ದರಿಂದ ಯಾವುದೇ ತರಹದ ಗೊಂದಲಗಳಿಲ್ಲದೆ ಆಡಲು ಅವಕಾಶವಾಯಿತು. ಸ್ಪರ್ಧೆ ಪ್ರಾರಂಭಗೊಳ್ಳುವುದ್ದಕ್ಕೆ ಮುಂಚಿತವಾಗಿ ಅಭ್ಯಾಸಕ್ಕೆಂದು 10 ನಿಮಿಷಗಳ ಕಾಲವನ್ನು ಮೀಸಲಿಡಲಾಗಿತ್ತು.
ಕೆಲವರು ತಮಗೆ ಸರಿಹೊಂದುವ / ಸರಿಹೊಂದದ ಚೆಂಡುಗಳನ್ನು ಪರೀಕ್ಷಿಸುವಲ್ಲಿ ನಿರತರಾದರು. ಗುಂಡುಗಳನ್ನು ಉರುಳಿಸಿ ಅವು ಗುರಿ ಮುಟ್ಟುವವರಿಗೂ ತಲ್ಲೀನರಾಗಿ ಬಗ್ಗಿ ದೂರದಿಂದಲೇ ವಾಲಿಕೊಂಡು, ಕೈ, ಕಾಲುಗಳನ್ನು ತಿರುಗಿಸುತ್ತಾ ಉರುಳುತ್ತಿರುವ ಗುಂಡುಗಳ ದಿಕ್ಕನ್ನೇ ಬದಲಾಯಿಸುವ ಮಾಯಮಂತ್ರದ ತಂತ್ರಕ್ಕೆ ಶರಣಾಗಿ ಪ್ರಯತ್ನಿಸುವರು ಒಂದು ಕಡೆಯಾದರೆ, ಪ್ರಾರಂಭದಲ್ಲೇ ದಿಕ್ಕುತಪ್ಪಿ ನಿಧಾನವಾಗಿ ಉರುಳಿದಂತೆ ಕಾಣಿಸಿ ಪಕ್ಕದ ಮೋರಿ(!)ಯ ಕಡೆಗೆ ಮುನ್ನುಗ್ಗುವ ಗುಂಡುಗಳನ್ನು ಶಪಿಸುತ್ತಾ ಮತ್ತೆ ಇನ್ನೊಂದು ಬಣ್ಣದ ಗುಂಡನ್ನು ಕೈಯಲ್ಲಿಡಿದು ಅದೃಷ್ಟ ಪರೀಕ್ಷೆಗೆ ಪರಿತಪಿಸುವವರು ಇನ್ನೊಂದು ಕಡೆ. ಅವರು ಆಡುತ್ತಿದ್ದ ರೀತಿಯೇ ಮಜವಾಗಿತ್ತು.
ಕನ್ನಡ ಸಂಘದ ಉಪಾಧ್ಯಕ್ಷರಾದ ವಿಜಯ ರಂಗ ಪ್ರಸಾದ್ ಅವರು ಸ್ಪರ್ಧೆಗಳು ಶುರುವಾಗುವುದಕ್ಕೆ ಮುಂಚಿತವಾಗಿ, ಭಾಗವಹಿಸಿದ ಎಲ್ಲ ಸದಸ್ಯರ ಸ್ವಾಗತಕೋರಿ ಇದೇ ರೀತಿಯಲ್ಲಿ ಮುಂಬರುವ ಕನ್ನಡ ಸಂಘದ ಸ್ಪರ್ಧೆಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಂಡು, ಸದಸ್ಯರು ತೋರಿದ ಪ್ರತಿಕ್ರಿಯೆಗೆ ಮೆಚ್ಚಿಗೆಯನ್ನು ಸೂಚಿಸಿ ಎಲ್ಲರಿಗೂ ಶುಭ ಹಾರೈಕೆ ಮಾಡಿ, ತಾವೂ ಸಹ ಅವಸರವಸರವಾಗಿ ತಮ್ಮ ಗುಂಡನ್ನು ಎತ್ತಲು ತಮ್ಮ ಸಾಲಿಗೆ ರವಾನೆಯಾದರು.
ವಿಜಯ ರಂಗ ಪ್ರಸಾದ್ ಅವರು ವಿಜೇತರ ಪಟ್ಟಿಯನ್ನು ಘೋಷಿಸಿದರು. ಮೊದಲನೆಯ ಸ್ಥಾನದಲ್ಲಿ "ಅರವಿಂದ್ ನಿಂಬರಗಿ, ಕೆ.ಎ.ಕನಕೇಶ್, ಜಿ.ರಂಗಸ್ವಾಮಿ ಮತ್ತು ಸ್ಮಿತಾ ಹೆಚ್.ಡಿ. ಅವರ ತಂಡ 1453 ಅಂಕಗಳೊಂದಿಗೆ ತಮ್ಮ ಸ್ಥಾನವನ್ನು ಭದ್ರಗೊಳಿಸಿದರೆ, ಎರಡನೆ ಸ್ಥಾನದಲ್ಲಿ ಜಯಶಂಕರ್ ಗೌಡ, ವೆಂಕಟ್, ಸತೀಶ್ ಅಲ್ಲಮ್‍ಪಲ್ಲಿ ಮತ್ತು ನಿರಂಜನ್ ಕುಮಾರ್ ಮೈಲಾರೆ ಅವರ ತಂಡ 1394 ಅಂಕ ಗಳಿಸಿದರು. ವ್ಯೆಯಕ್ತಿಕವಾಗಿ ಅತ್ಯಧಿಕ ಅಂಕಗಳನ್ನು ಪಡೆದವರ ಪಟ್ಟಿಯಲ್ಲಿ ಪುರುಷರ ವಿಭಾಗದಲ್ಲಿ ಶ್ರೀರಾಮ್ 497 ಅಂಕಗಳೊಂದಿಗೆ ಮತ್ತು ಮಹಿಳೆಯರ ವಿಭಾಗದಲ್ಲಿ ಗಾಯಿತ್ರಿ ಜೋಯಿಸ್ ಅವರು 334 ಅಂಕಗಳೊಂದಿಗೆ ಅಗ್ರರೆನಿಸಿದರು. ಎಲ್ಲ ವಿಜೇತರಿಗೆ ಕನ್ನಡ ಸಂಘ(ಸಿಂಗಪುರ) ನವೆಂಬರ್ 3ರಂದು ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ"ದ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು.












Click it and Unblock the Notifications