ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಕಾರ್ತವೀರ್ಯಾರ್ಜುನ ಕಾಳಗ

By * ಸಾಧ್ವಿ ಸಂಧ್ಯಾ, ಸಿಂಗಪುರ
|
Google Oneindia Kannada News

Yakshagana Prasanga in Singapore
ಕನ್ನಡ ಸಂಘ (ಸಿಂಗಪುರ), Woodlands CC IEAC ಹಾಗು ಯುನೈಟೆಡ್ ಲ್ಯಾಂಡ್ ಬ್ಯಾಂಕ್ ಜಂಟಿಯಾಗಿ ಫೆ. 25ರಂದು ರಿಪಬ್ಲಿಕ್ ಪಾಲಿಟೆಕ್ನಿಕ್‌ನ ಸಾಂಸ್ಕೃತಿಕ ಕೇಂದ್ರದಲ್ಲಿನ ಸಭಾಂಗಣದಲ್ಲಿ ಶ್ರೀ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ(ರಿ), ಕುಂಭಾಶಿ ತಂಡದವರಿಂದ "ಕಾರ್ತವೀರ್ಯಾರ್ಜುನ ಕಾಳಗ" ಪ್ರಸಂಗದ ಯಕ್ಷಗಾನವನ್ನು ಏರ್ಪಡಿಸಿತ್ತು. ಉತ್ತಮ ಸಾಹಿತ್ಯ, ಛಂದೋಬದ್ಧದಿಂದ ಕೂಡಿದ ಈ ಪ್ರಸಂಗ ರಸವತ್ತಾಗಿ ಮೂಡಿಬಂತು.

ಪುಟಾಣಿ ಕಾರ್ತಿಕ್‌ನ ಪ್ರಾರ್ಥನೆಯಿಂದ ಕಾರ್ಯಕ್ರಮದ ಶುಭಾರಂಭವಾಯಿತು. ಕನ್ನಡ ಸಂಘದ ಅಧ್ಯಕ್ಷರಾದ ಡಾ.ವಿಜಯಕುಮಾರ್ ಅವರು ಸ್ವಾಗತಭಾಷಣವನ್ನು ನೀಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೆಂಬವಾಂಗ್ ಜೆ.ಆರ್.ಸಿ ಯ ಸಂಸತ್ ಸದಸ್ಯೆ ಮಿಸ್.ಎಲೀನ್ ಲೀ, ವುಡ್‌ಲ್ಯಾಂಡ್ಸ್ IEACಯ ಅಜೇಯನ್, ಭಾರತೀಯ ರಾಯಭಾರಿ ಕಚೇರಿಯ ಟಿ.ಆರ್. ವಿ. ರಾಘವನ್ ಹಾಗೂ ಇತರ ಗಣ್ಯರಿಗೂ, ಸಭಿಕರಿಗೂ ಸ್ವಾಗತ ಕೋರಿದರು.

ರಾವಣನ ಒಡ್ಡೋಲಗದೊಂದಿಗೆ ಯಕ್ಷಗಾನ ಪ್ರಾರಂಭವಾಯಿತು. ವಿಶೇಷರೂಪದೊಂದಿಗೆ ರಾವಣನ ಸಹಜ ದರ್ಪವನ್ನು ಬಿಂಬಿಸುತ್ತಾ ಕಿರೀಟ ವೇಷಧಾರಿ ತೋಟಿಯವರು ಪ್ರಸಂಗಕ್ಕೆ ನಾಂದಿಹಾಡಿದರು. ಸಂಜಯ್, ನಾಗೇಂದ್ರ ಭಟ್ಟ್ ವಿಭೀಷಣ ಮತ್ತು ಪ್ರಹಸ್ತನ ಪಾತ್ರದಲ್ಲಿ ಉತ್ತಮವಾಗಿ ಸಹಕರಿಸಿದರು. ಬಡುಗುತಿಟ್ಟಿನ ಹೆಸರುವಾಸಿ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆಯವರು ಕಾರ್ತವೀರ್ಯಾರ್ಜುನನ ಪಾತ್ರಧಾರಿಯಾಗಿ ಗಂಭೀರ ಶೈಲಿಯಲ್ಲಿ ಗಮನ ಸೆಳೆದರೆ, ರಾವಣ ಪಾತ್ರಧಾರಿಯಾದ ಗಣಪತಿ ಹೆಗಡೆ ತೋಟಿಯವರ ದರ್ಪದ ಅಭಿನಯ, ತಿಳಿಹಾಸ್ಯದ ಸಂಭಾಷಣೆ ಸಭಿಕರನ್ನು ಮೋಡಿಮಾಡಿತು.

ಮೊದಲಬಾರಿಗೆ ಯಕ್ಷಗಾನ ವೀಕ್ಷಿಸಿದ ಕೆಲವು ಪ್ರೇಕ್ಷಕರು ಕಿರೀಟ, ಪಗಡೆ, ಭುಜಕೀರ್ತಿ, ಎದೆಕಟ್ಟು, ವಡ್ಯಾಣ ಮುಂತಾದವುಗಳಿಂದ ಕೂಡಿದ ಇವರ ಭರ್ಜರಿ ವೇಷಭೂಷಣ ಮತ್ತು ವೈವಿಧ್ಯಮಯ ರಂಗುರಂಗಿನ ಮುಖವರ್ಣಿಕೆಯನ್ನು ಕಂಡು ಹುಬ್ಬೇರಿಸಿದರು. ಮೂರು ಬಗೆಯ ದೂತನ ಪಾತ್ರಗಳನ್ನು ನಿರ್ವಹಿಸಿದ ಶ್ರೀಧರ ಹೆಗಡೆ ಚಪ್ಪರಮನೆಯವರಂತೂ ಹಾಸ್ಯದ ಹೊನಲನ್ನೇ ಹರಿಸಿದರು. ರಂಗಧರ್ಮ ಮತ್ತು ಸಭ್ಯತೆಯ ಎಲ್ಲೆಯನ್ನೂ ಮಿರದೇ, ಸುಸಂಸ್ಕೃತವಾಗಿ ತಮ್ಮ ಪಾತ್ರಪೋಷಣೆ ಮಾಡುತ್ತಾ ಎಲ್ಲರ ಮನಗೆದ್ದರು.

ಸ್ತ್ರೀವೇಷಧಾರಿಗಳಾದ ಶಂಕರ್ ಹೆಗಡೆ ಮತ್ತು ಮಹಾಬಲೇಶ್ವರ ಭಟ್ಟ್ ತಮ್ಮ ನರ್ತನದಿಂದ ಜನರ ಗಮನಸೆಳೆದರು. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ ಮತ್ತು ಪ್ರಸನ್ನ ಭಟ್ಟ್ ತಮ್ಮ ಸುಶ್ರಾವ್ಯ ಗಾಯನದಿಂದ ಪ್ರೇಕ್ಷಕರ ಮನದಣಿಸಿದರು. ಭಾಗವತರ ಸೊಗಸಾದ ಪದ್ಯಗಳಿಗೆ ಲಕ್ಷ್ಮೀನಾರಾಯಣ ಸಂಪ, ನಾಗಭೂಷಣ್ ತಮ್ಮ ಚಂಡೆ ಮತ್ತು ಮದ್ದಲೆ ನಾದದೊಂದಿಗೆ ರಂಗಕ್ಕೆ ರಂಗೇರಿಸಿದರು. ಪ್ರಪ್ರಥಮ ಬಾರಿಗೆ ಯಕ್ಷಗಾನವನ್ನು ವೀಕ್ಷಿಸಿದ ಹಲವು ಸಿಂಗನ್ನಡಿಗರಿಗೆ ಹಾಗು ಕನ್ನಡೇತರರಿಗೆ ಈ ಕಾರ್ಯಕ್ರಮ ಯಕ್ಷಗಾನ ಕಲೆಯ ಬಗ್ಗೆ ವಿಶೇಷ ಆಸಕ್ತಿಯನ್ನೂ, ಗೌರವವನ್ನೂ ಮೂಡಿಸಿತೆಂದರೆ ಅತಿಶಯೋಕ್ತಿಯಾಗಲಾರದು.

ಮಿಸ್.ಎಲೀನ್ ಲೀ ಮತ್ತು ಸಂಘದ ಮಾಜಿ ಅಧ್ಯಕ್ಷರಾದ ಎ.ಎನ್.ರಾವ್ ಅವರಿಂದ ಕಲಾವಿದರಿಗೆಲ್ಲರಿಗೂ ಕಿರುಗಾಣಿಕೆಯನ್ನು ನೀಡಿ ಗೌರವಿಸಲಾಯಿತು. ವಿಜಯರಂಗ ಅವರು ವಂದನಾರ್ಪಣೆಯ ಮೂಲಕ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ವಿಶೇಷವಾಗಿ ಈ ಕಾರ್ಯಕ್ರಮದ ಸಹ ಪ್ರಾಯೋಜಕರಾದ ಡಾ.ಸಿ.ಕೆ.ಮೂರ್ತಿ, ಸುಮ ಮೂರ್ತಿ, ವೆಂಕಟೇಶ್ ಮೂರ್ತಿ, ಅನುಪಮ ಮೂರ್ತಿ, ಕರ್ನಾಟಕ ಸರ್ಕಾರ ಮತ್ತು Aeromac Engg Pte Ltd ಅವರಿಗೆ ಸಂಘದ ಪರವಾಗಿ ಧನ್ಯವಾದಗಳನ್ನು ಕೋರಲಾಯಿತು. ಈ ಕಾರ್ಯಕ್ರಮದ ಸಾರಥ್ಯವನ್ನು ಸುಮನಾ ವೆಂಕಟ್ ಮತ್ತು ದಿವ್ಯಾ ರಾಜೇಶ್ ವಹಿಸಿದ್ದರು.

English summary
Poornachandra Yakshakala Pratishthana gave wonder Yakshagana performance in Singapore, which was organized by Kannada Sangha Singapore and United Land Bank jointly. Report by Sadhwi Sandhya, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X