ಮಣಿಪುರದ ಉಕ್ಕಿನ ಮಹಿಳೆಯನ್ನು ಮರೆತುಬಿಟ್ರಾ?

ಶರ್ಮಿಳಾ ಅವರು, "ಅಣ್ಣಾ ಹಜಾರೆ ಮಣಿಪುರಕ್ಕೆ ಬಂದು ಪ್ರಜೆಗಳಿಗೆ ಮಾರಕವಾದ ಆಫ್ಸ್ಪಾ ಕಾಯ್ದೆಯ ವಿರುದ್ದ ಹೋರಾಟನಡೆಸುವ ನನಗೆ ಬೆಂಬಲ ನೀಡಲಿ. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ಹೋರಾಟ ಕೇವಲ 13 ದಿನಗಳಲ್ಲಿ ಮುಗಿದು ಅದಕ್ಕೆ ತಕ್ಕ ಫಲ ದೊರೆತಿದ್ದರಲ್ಲಿ ನನಗೆ ಸಂತೋಷವಿದೆ. ಆದರೆ ನಾನು ಸತತ 11 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೀನಿ, ನನ್ನ ಹೋರಾಟದ ಬಗ್ಗೆ ಎಲ್ಲರೂ ಚರ್ಚೆ ಮಾಡ್ತಾರೆ ಹೊರತು ಯಾರು ಯಾವುದೇ ರೀತಿಯ ಕ್ರಮಗಳನ್ನು ಕೈತೆಗೆದುಕೊಳ್ತಿಲ್ಲ. ಒಂದು ವೇಳೆ ನಾನು ದಿಲ್ಲಿಯಲ್ಲಿದ್ದಿದ್ದರೆ ಇಷ್ಟೊತ್ತಿಗೆ ಏನಾದರು ಪ್ರತಿಫಲ ಸಿಗುತಿತ್ತೋ ಏನೋ?" ಎಂದು ವಿಷಾದ ವ್ಯಕ್ತಪಡಿಸುತ್ತಾರೆ.
ಇನ್ನು ದೆಹಲಿ ಹೈಕೋರ್ಟ್ ನಲ್ಲಿ ಬಾಂಬ್ ಸ್ಪೋಟ, ಅಮರ್ ಸಿಂಗ್ ಬಂಧನ, ಜನಾರ್ಧನ ರೆಡ್ಡಿ ಸೆರೆ ಹೀಗೆ ಬೇರೆ ವಿಷಯಗಳು ಜನರನ್ನು ಬೇರೆ ದಿಕ್ಕಿನೆಡೆಗೆ ಕೊಂಡೊಯ್ದಿವೆ. ಮಾಧ್ಯಮಗಳಲ್ಲೆಲ್ಲಾ ಅವರೇ ತುಂಬಿಕೊಂಡಿದ್ದಾರೆ. ಅಣ್ಣಾ ಹಜಾರೆ, ಇರೋಮ್ ಶರ್ಮಿಳಾ ಚಾನು ಅಂಥವರು ಮರೆಯಾಗಿಹೋಗಿದ್ದಾರೆ. ಅಣ್ಣಾಗೆ ಬೆಂಬಲ ಕೊಟ್ಟ ಕಾರ್ಪೊರೇಟ್ ಜನ, ಬಿಜೆಪಿ, ಆರ್ಎಸ್ಎಸ್ ಮತ್ತು ಐಟಿ ಬಿಟಿ ಮಂದಿ ಇತ್ತ ಕಣ್ಣು ಹಾಯಿಸುವರೆ? ಎಂದು ಪ್ರಶ್ನೆ ಕೇಳುತ್ತಾರೆ ಶರ್ಮಿಳಾ.
ಇದೆಂಥ ಕಾನೂನು? : ಮಣಿಪುರದಲ್ಲಿ ಹೇರಲಾಗಿರುವ ಸಶಸ್ತ್ರ ಪಡೆ (ವಿಶೇಷ ಅಧಿಕಾರ) ಕಾಯ್ದೆ (ಎಎಫ್‌ಎಸ್‌ಪಿಎ) ಕಂಡಲ್ಲಿ ಗುಂಡಿಕ್ಕುವ ಮತ್ತು ವಾರಂಟ್ ಅಥವಾ ಪೂರ್ವಸೂಚನೆ ಇಲ್ಲದೆ ಯಾರನ್ನು ಬೇಕಾದರೂ ಬಂಧಿಸುವ ಅಧಿಕಾರ ಹೊಂದಿದೆ. ಅಲ್ಲಿನ ಜನರ ನಿದ್ದೆಗೆಡಿಸಿರುವುದೂ ಈ ವಿಶೇಷ ಅಧಿಕಾರವೇ. ಸೇನಾ ಪಡೆಯಂತೂ ಅಲ್ಲಿನ ಜನರನ್ನು ಶತ್ರುಗಳಂತೆ ಕಾಣುತ್ತಿದೆ. ಆರ್ಮಿ ಇಲ್ಲಿ ಅಸಂಖ್ಯಾತ ಜನರ ನೋವಿಗೆ, ನೇರ ಸಾವಿಗೆ, ಅತ್ಯಾಚಾರಕ್ಕೆ ಕಾರಣವಾಗಿದೆ. ಇಲ್ಲಿ ಜನರಿಗೆ ತಮ್ಮ ಮೇಲಿನ ಅನ್ಯಾಯದ ವಿರುದ್ಧ ದೂರು ಹೊತ್ತು ಕೋರ್ಟಿಗೆ ಹೋಗುವ ಹಕ್ಕೇ ಇಲ್ಲ. ಎಎಫ್‌ಎಸ್‌ಪಿಎ ಕಾಯ್ದೆಯನ್ನು 1958ರಲ್ಲಿ ಸಂಸತ್‌ನಲ್ಲಿ ಮಂಡಿಸಿದಾಗ, ಈ ಕಾಯ್ದೆ ಗರಿಷ್ಠವೆಂದರೆ 6 ತಿಂಗಳವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿತ್ತು. ಆದರೆ ಮಸೂದೆ ಮಂಡನೆ ಯಾಗಿ 52 ವರ್ಷಗಳಾದ ಬಳಿಕವೂ ಮಣಿಪುರದಲ್ಲಿ ಅದು ಈಗಲೂ ಜಾರಿಯಲ್ಲಿದೆ. ಜನರಿಗೆ ಮಾರಕವಾದ ಕಾಯ್ದೆಯನ್ನು ಪುನರ್ ಪರಿಶೀಲಿಸಲು ಎಷ್ಟು ದಿನ ಬೇಕಾಗುತ್ತೆ?
ಪರಿಸ್ಥಿತಿಯನ್ನು ನಿಭಾಯಿಸಲು ಇರುವ ಕಾನೂನುಗಳ ಚೌಕಟ್ಟಿನಲ್ಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್, ಪೂನಾ ಮತ್ತು ಮುಂಬಯಿಯಲ್ಲಿ ರೈತರ ಮೇಲೆ ಫೈರಿಂಗ್ ನಂತಹ ಅನೇಕ ಘಟನೆಗಳು ನಡೆದಿರಬೇಕಾದರೆ, ಸಶಸ್ತ್ರ ಪಡೆ (ವಿಶೇಷ ಅಧಿಕಾರ) ಕಾಯ್ದೆ (ಎಎಫ್‌ಎಸ್‌ಪಿಎ) ಇನ್ನೆಷ್ಟು ಬಲವಾಗಿರಬೇಕು? ಅನ್ಯಾಯದ ವಿರುದ್ಧ ದೂರು ಹೊತ್ತು ಕೋರ್ಟಿಗೆ ಹೋಗುವ ಹಕ್ಕೇ ಇಲ್ಲ ಎಂದಾದರೆ ಮಾನವ ಹಕ್ಕುಗಳಿಗೆ ಬೆಲೆ ಎಲ್ಲಿದೆ?
ಈಶಾನ್ಯ ರಾಜ್ಯಗಳ ಪರಿಸ್ಥಿತಿ ಪ್ರತಿಯೊಬ್ಬರಿಗೂ ಗೊತ್ತಿದೆ, ಕೆಲ ಉಗ್ರ ಸಂಘಟನೆಗಳು ದೇಶದ ಏಕತೆಯನ್ನು ಭಂಗಪಡಿಸಲು ಸುಮಾರು ವರ್ಷಗಳಿಂದ ಪ್ರಯತ್ನ ನಡೆಸುತ್ತಿವೆ. ಜತೆಗೆ ಅಕ್ಕ ಪಕ್ಕದಲ್ಲಿರುವ ರಾಷ್ಟ್ರಗಳು ಸಹ ಅಂತಹ ಸಂಘಟನೆಗಳಿಗೆ ಸಹಾಯ ನೀಡುತ್ತಿರುವುದು ಜಗಜ್ಜಾಹೀರಾಗಿದೆ. ರಾಷ್ಟ್ರದ ಒಳಗಿದ್ದು ಇಂತಹ ಮಸಲತ್ತು ಮಾಡುವವರನ್ನು ಬಂಧಿಸಿ ವಿಚಾರಣೆ ನಡೆಸಿ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ಕೊಡಬೇಕು ಇದಕ್ಕೆ ಮೊದಲು ಅಲ್ಲಿ ಆಗಬೇಕಾಗಿರುವ ಅಭಿವೃದ್ದಿ ಕಾರ್ಯಗಳು ಮತ್ತು ಸಾಮಜಿಕ ಸುಧಾರಣೆ ಬಗ್ಗೆ ಗಮನ ವಹಿಸಿ ಜನಸಾಮನ್ಯರನ್ನು ಮೆಚ್ಚಿಸುವ ಕೆಲಸ ಮೊದಲು ಮಾಡಬೇಕಾಗಿದೆ.
ಕಾನೂನಿನ ಸಾಧಕ ಭಾದಕಗಳನ್ನು ಚರ್ಚಿಸಿ, ಆದಷ್ಟು ಬೇಗ ಕೆಲವು ನಿಲುವುಗಳನ್ನು ಸಡಿಲಿಸಿ ಇಂತಹ ಕೆಟ್ಟ ವ್ಯವಸ್ಥೆಯ ವಿರುದ್ಧ ನಿಸ್ವಾರ್ಥವಾಗಿ ಹೋರಾಡುತ್ತಿರುವ ಇರೋಂ ಚಾನು ಶರ್ಮಿಳಾರವರ ಮನಒಲಿಸಿ ಅವರ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಮಾಡಬೇಕು. ದೌರ್ಜನ್ಯ ಎಸಗಿದ ಸೈನ್ಯಾಧಿಕಾರಿಗಳನ್ನು ವಿಚಾರಣೆಗೊಳಪಡಿಸಿ ಶಿಕ್ಷೆ ಆಗುವಂತೆ ಮಾಡುವ ಕೆಲಸ ಮೊದಲು ಆಗಬೇಕು. ಇಲ್ಲಿ ಮಾಧ್ಯಮದ ಪಾತ್ರವೂ ಅಗಾಧವಾಗಿದೆ. ಅಣ್ಣಾ ಹಜಾರೆಗೆ ಕೊಟ್ಟಷ್ಟೇ ಪ್ರಚಾರವನ್ನು ಶರ್ಮಿಳಾ ಅವರಿಗೂ ನೀಡಬೇಕು.












Click it and Unblock the Notifications