ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಣುಕಾ, ಕೃಷ್ಣಮೂರ್ತಿ, ನಾಗೂಗೆ ನಾವಿಕ ಸನ್ಮಾನ

By Shami
|
Google Oneindia Kannada News

Navika felicitates 3 senior citizens
ಬೆಂಗಳೂರು, ಜು. 9 : ಅಮೆರಿಕದಲ್ಲಿ ವಾಸವಾಗಿರುವ ಕನ್ನಡಿಗರ ಸಂಘಟನೆ "ನಾವಿಕ" ಹಮ್ಮಿಕೊಂಡಿರುವ ಮೂರು ದಿನಗಳ ಬೆಂಗಳೂರು " ಅಮೆರಿಕನ್ನಡೋತ್ಸವ" ದ ಎರಡನೇ ದಿನವಾದ ಶನಿವಾರ ರವೀಂದ್ರ ಕಲಾಕ್ಷೇತ್ರ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಪಳಿಗೆ ಸಾಕ್ಷಿಯಾಯಿತು.

ಮೊದಲನೇ ದಿನ ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ Karnataka-USA Business Meet ಇತ್ತು. ಇದರ ಉದ್ದೇಶ ಅನಿವಾಸಿ ಭಾರತೀಯರು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವ ಅವಕಾಶಗಳನ್ನು ಅರಸುವುದಾಗಿರಲಿಲ್ಲ ಎಂದು ನಾವಿಕ ಉಪಾಧ್ಯಕ್ಷ, ವಾಷಿಂಗ್ ಟನ್ ನಿವಾಸಿ ಸುರೇಶ್ ರಾಮಚಂದ್ರ ನಮ್ಮ ಪ್ರತಿನಿಧಿಗೆ ತಿಳಿಸಿದರು.

" ಬದಲಾಗಿ, ಅವಕಾಶಗಳ ಅಮರಾವತಿ ಅಮೆರಿಕಾದಲ್ಲಿ ಉದಯಿಸುತ್ತಿರುವ ಹೊಸ ಬೆಳಕಿನ ಕಡೆಗೆ ನಮ್ಮ ಬೆಳಕು ಹರಿಸುವುದಾಗಿತ್ತು. Pharmacy, Public transport system and Solar Energy ಕ್ಷೇತ್ರಗಳಲ್ಲಿ ಕಾಣುತ್ತಿರುವ ಆಶಾಕಿರಣಗಳಿಗೆ ಮೈಯೊಡ್ಡುವುದಕ್ಕೆ ಅಮೆರಿಕನ್ನಡಿಗರಿಗೆ ದಾರಿದೀಪವಾಗುವ ಪ್ರಯತ್ನ ಅದಾಗಿತ್ತು" ಎಂದು ಸುರೇಶ್ ಹೇಳಿದರು.

ಶನಿವಾರ ಬೆಳಗ್ಗೆ ಸಾರಿಗೆ ಸಚಿವ ಆರ್ ಅಶೋಕ ಅವರು ಅಮೆರಿಕನ್ನಡಿಗರ ಬೆಂಗಳೂರು ಹಬ್ಬವನ್ನು ಎಣ್ಣೆಯ ಬತ್ತಿಗೆ ಮೇಣದಬತ್ತಿಯ ಬೆಳಕು ಅಂಟಿಸುವ ಮೂಲಕ ಉದ್ಘಾಟಿಸಿದರು. ತದನಂತರ, ಗಣ್ಯ ಅತಿಥಿಗಳು ವೇದಿಕೆಯನ್ನು ಖಾಲಿ ಮಾಡಿ ಅಮೆರಿಕನ್ನಡಿಗರ ಹಾಡು, ಹಸೆ, ನೃತ್ಯ, ಹಾಸ್ಯ ಹೊನಲು ಹರಿಸುವ ಕಾರ್ಯಕ್ರಮಗಳಿಗೆ ದಾರಿಮಾಡಿಕೊಟ್ಟರು.

ಓತಪ್ರೋತವಾಗಿ ಜರುಗಿದ ಶನಿವಾರ ಮಧ್ಯಾನ್ಹದ ಸಾಂಸ್ಕೃತಿಕ ಕವಳದಲ್ಲಿ ಪ್ರಧಾನ ಆಕರ್ಷಣೆ ಮಂಗಳೂರಿನ ಸನಾತನ ನಾಟ್ಯಾಲಯದ 35 ಕಲಾವಿದರು ನಡೆಸಿಕೊಟ್ಟ 90 ನಿಮಿಷಗಳ "ರಾಷ್ಟ್ರದೇವೋಭವ". ಕನ್ನಡ ಸಂಗೀತಕ್ಕೆ ನೃತ್ಯ ರೂಪಕಗಳನ್ನು ಹೆಣೆದ ಇದು ಚೆನ್ನಾಗಿತ್ತು ಎನ್ನುವುದು ಪ್ರೇಕ್ಷಕರ ಚಪ್ಪಾಳೆಗಳ ಮೂಲಕ ಋಜುವಾತಾಯಿತು.

ಡಿಎಚ್ ಕರ್ಕಿ ಅವರ "ಹಚ್ಚೇವು ಕನ್ನಡದ ದೀಪ" ಕವನಕ್ಕೆ ಕರಾವಳಿ ಕರ್ನಾಟಕದ ಯುವತಿಯರು ಬ್ಯಾಟರಿ ಚಾಲಿತ ದೀಪಗಳನ್ನು ಹಿಡಿದುಕೊಂಡು ಮಾಡಿದ ಸಮೂಹ ನೃತ್ಯ ಮನಮೋಹಕವಾಗಿತ್ತು. ಆನಂತರ, ನಾವಿಕ ಸ್ಮರಣ ಸಂಚಿಕೆಯನ್ನು (ಸ್ನೇಹಸೇತು) ಮುಖ್ಯಮಂತ್ರಿ ಚಂದ್ರು ಬಿಡುಗಡೆ ಮಾಡಿದರು. ನಾವಿಕದ ವತಿಯಿಂದ ಅನಿರೀಕ್ಷಿತ ಸನ್ಮಾನ ಸ್ವೀಕರಿಸಿದ ಮೂವರು ಹಿರಿಯ ಅಮೆರಿಕನ್ನಡಿಗರು ದಟ್ಸ್ ಕನ್ನಡ ವರದಿಗಾರನೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ಎಂ. ಕೃಷ್ಣಮೂರ್ತಿ : ಇಂಥ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ನಾನು ಎಷ್ಟೋ ಕಷ್ಟ ಪಟ್ಟೆ. ಆದರೆ, ಕಾರಣಾಂತರಗಳಿಂದ ಕೈಗೂಡಿರಲಿಲ್ಲ. ಅಮೆರಿಕ ಕರ್ನಾಟಕದ ಬಾಂಧವ್ಯ ಈ ಮೂಲಕ ಮತ್ತಷ್ಟು ಭದ್ರವಾಗಿದೆ ಇವತ್ತು ಎಂದೆನಿಸುತ್ತಿದೆ. ಇವತ್ತೇ, ನನ್ನನ್ನೂ ವೇದಿಕೆಗೆ ಕರೆದು ಗೌರವ ನೀಡಿರುವುದು ಸಂತೋಷವಾಗಿದೆ ಎಂದರು. ದಕ್ಷಿಣ ಕ್ಯಾಲಿಫೋರ್ನಿಯ ಕನ್ನಡ ಸಂಘದಲ್ಲಿ 35 ವರ್ಷ ಸದಸ್ಯರಾಗಿದ್ದ ಮೂರ್ತಿ ಭಾರತಕ್ಕೆ ಮರಳಿ ಐದು ವರ್ಷಗಳೇ ಉರುಳಿವೆ. ಇದೇ ಜೂನ್ ಮಾಹೆಯಲ್ಲಿ ವೋಕ್ ಹಾರ್ಟ್ ಆಸ್ಪತ್ರೆಯಲ್ಲಿ ಡಬ್ಬಲ್ ಸರ್ಜರಿ ಮಾಡಿಸಿಕೊಂಡ ಅವರು ಪತ್ನೀ ಸಮೇತರಾಗಿ ರವೀಂದ್ರ ಕಲಾಕ್ಷೇತ್ರಕ್ಕೆ ಬಂದಿದ್ದರು.

ಡಾ. ರೇಣುಕಾ ರಾಮಪ್ಪ : ಫ್ಲಾರಿಡಾದ ಟಾಂಪಾ ನಗರದಲ್ಲಿ ಪ್ರಸೂತಿ ವೈದ್ಯ ತಜ್ಞೆಯಾಗಿ ಪ್ರಾಕ್ಟೀಸ್ ಮಾಡುತ್ತಿರುವ ರೇಣುಕಾ ಅವರಿಗೆ ಈ ಸನ್ಮಾನದಿಂದ ಆನಂದವೇ ಉಂಟಾಗಿದೆ. ಅಮೆರಿಕಾದ ವೈದ್ಯಕೀಯ ರಂಗದಲ್ಲಿ ಎಷ್ಟೇ ಸಾಧನೆ ಮಾಡಿದ್ದರೂ ಕೂಡ ನಮ್ಮ ಊರಿನ ಜನರ ನಡುವೆ ಗುರುತಿಸಿಕೊಂದ ತೃಪ್ತಿ ತಮಗಿದೆ ಎಂದರು. ನಮ್ಮ ಜನರ ನಡುವೆ ಗುರುತಿಸಿಕೊಳ್ಳುವುದು ಯಾವತ್ತೂ ಆನಂದದಾಯಕವಾದರೂ ಈ ಸನ್ಮಾನವನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು.

ನಾಗಲಕ್ಷ್ಮಿ ಹರಿಹರೇಶ್ವರ :
ಸಂತೋಷ ಮತ್ತು ಆಶ್ಚರ್ಯ ಏಕಕಾಲದಲ್ಲಿ ಸಂಭವಿಸುತ್ತಿದೆ. ನನ್ನ ಪತಿ ದಿವಂಗತ ಶಿಕಾರಿಪುರ ಹರಿಹರೇಶ್ವರ ಅವರು ಕನ್ನಡ ಭಾಷೆ ಮತ್ತು ಅದರ ಸತ್ವವನ್ನು ಅಮೆರಿಕಾದಲ್ಲಿ ಹರಡುವುದಕ್ಕೆ ಪಟ್ಟ ಕಷ್ಟ ಮತ್ತು ಪ್ರೀತಿಯನ್ನು ನೆನೆಯುವುವವರು ಇನ್ನೂ ಇದ್ದಾರಲ್ಲಾ ಎನ್ನುವುದು ನನ್ನ ಸಂಸತಕ್ಕೆ ಕಾರಣ. ಇದಕ್ಕಿಂತ ಇನ್ನೇನು ಬೇಕು? ಎಂದರು ವಿಶ್ರಾಂತ ಬದುಕನ್ನು ಮೈಸೂರಿನಲ್ಲಿ ಹುಡುಕುತ್ತಿರುವ ನಾಗೂ. [ನಾವಿಕ ಅಮೆರಿಕನ್ನಡೋತ್ಸವ ಚಿತ್ರಗಳು]

English summary
People of Karnataka origin settled in US show-case Kannada language and cultural awareness which they have imbibed and passed on to their kids. Navika Amerikannadotsava [Festival of Amerika Kannada people in Bangalore] Day one Report from Ravindra Kalakshetra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X