ಸರ್ವಶಕ್ತ ತಂದೆಗೆ ಒಂದು ಶಿರಸಾಷ್ಟಾಂಗ ನಮಸ್ಕಾರ!

ನನ್ನ ಅಪ್ಪನಿಗೆ ಏನು ಗೊತ್ತಿಲ್ಲ... ನನ್ನ ಹದಿಹರೆಯದ ತಲ್ಲಣಗಳು, ಪ್ರೀತಿ ಪ್ರೇಮ ಮತ್ತು ನನ್ನ ಕನಸು ನನ್ನ ಅಪ್ಪನಿಗೆ ಅರ್ಥವಾಗುವುದಿಲ್ಲ ಎಂದು ತಿರ್ಮಾನಿಸಿ ಮುಂದೆ ಸಾಗುವ ಮಗ... ಇಲ್ಲ ನನ್ನ ತಂದೆ ಕೂಡ ಹೇಳಿದ್ದು ಸರಿ ನನ್ನ ಅಪ್ಪನ ಅನುಭವದ ಮಾತು ಸತ್ಯ ಎಂದು ತಿರ್ಮಾನಿಸುವಷ್ಟರಲ್ಲಿ, ಅರ್ಥ ಮಾಡಿಕೊಳ್ಳುವಷ್ಟರಲ್ಲಿ ತಂದೆಯಾಗಿರುತ್ತಾನೆ! ತಂದೆಯ ಜೊತೆ ಸಾಗಂತ್ಯ ಮತ್ತು ಸಂಘರ್ಷದೊಂದಿಗೆ ಬೆಳೆಯುವ ಮಗನ ಕಲಿಕೆಯ ಒಂದು ವೃತ್ತ ಇದು.
ಮೊನ್ನೆ ಟುಲೂಸ್-ನಲ್ಲಿ (ಫ್ರಾನ್ಸ್) ನನ್ನ ಆರು ವರುಷದ ಮಗ ಅದ್ವೈತ್ ಜೊತೆ ಜಪಾನೀಸ್ ಉದ್ಯಾನವನಕ್ಕೆ ಹೋಗಿದ್ದೆ. ಅಲ್ಲಿ ಒಂದು ದೊಡ್ಡ ಕಾರಂಜಿ. ಸುಮಾರು ಹತ್ತು ಅಡಿ ಎತ್ತರ ಚಿಮ್ಮುತಿತ್ತು. ಅದ್ದನ್ನು ನೋಡಿ ಮಗ ಕೇಳಿದ "ಅಪ್ಪ! ಅವರು ಆಕಾಶ ಯಾಕೆ ತೋಳಿತಾಯಿದ್ದಾರೆ?" ಏನಂತ ಉತ್ತರಿಸಲಿ? ಆದ್ರೆ ತಂದೆಯಾದವನು ಎಲ್ಲಾ ತಿಳಿದಿರಬೇಕು ನೋಡಿ! "ಮಳೆ ಬಂದು ಆಕಾಶ ಕೊಳೆ ಆಗಿದೆ ಅದಕ್ಕೆ!" ಎಂದು ಸಮಾಧಾನ ಹೇಳಿದೆ.
ನಾನು ತುಂಬ ಇಷ್ಟಪಡುವ ಕೆಲ್ವಿನ್ ಅಂಡ್ ಹಾಬ್ಸ್ (Calvin and Hobbes) ಕಾಮಿಕ್ಸ್-ನಲ್ಲಿ, ಕೆಲ್ವಿನ್ ಅವನ ಅಪ್ಪನನ್ನು ಕೇಳ್ತಾನೆ "ಎಟಿಎಂನಿಂದ ಹೇಗೆ ದುಡ್ಡು ಬರುತ್ತೆ?" ಅವನ ತಂದೆ ತುಂಟತನದಿಂದ ಉತ್ತರಿಸುತ್ತಾನೆ "ಎಟಿಎಂನಲ್ಲಿ ಒಬ್ಬ ಮನುಷ್ಯ ಕೂತಿರುತ್ತಾನೆ ನಾವು ಕಾರ್ಡ್ ಹಾಕಿದ ತಕ್ಷಣ ಅ ಕಡೆಯಿಂದ ದುಡ್ಡು ತಳ್ಳುತ್ತಾನೆ! " ಮಗ ಕೆಲ್ವಿನ್-ಗೆ ಇನ್ನೂ ಸಮಾಧಾನವಿಲ್ಲ, ಇನ್ನೂ ಅನುಮಾನ! ಮನದಲ್ಲಿ ಮತ್ತೊಂದು ಪ್ರಶ್ನೆ "ಅಪ್ಪ ಆ ವಿಷಯ ನಿನಗೆ ಹೇಗೆ ಗೊತ್ತು ಅಪ್ಪ?" ಕೆಲ್ವಿನ್-ನ ಅಪ್ಪ ತುಂಟತನದಿಂದ ಉತ್ತರಿಸುತ್ತಾನೆ "ಆ ದೇವರು ಪತ್ರಿಯೊಬ್ಬ ತಂದೆಗೂ ಒಂದು ಪುಸ್ತಕ ಕೊಟ್ಟಿರುತ್ತಾನೆ, ಅ ಪುಸ್ತಕದಲ್ಲಿ ಈ ಎಲ್ಲಾ ವಿಷಯ ಇರುತ್ತೆ!"
ಎಲ್ಲಾರಿಗೂ ಪುಸ್ತಕ ಕೊಟ್ಟ ದೇವರು ನನ್ನ ಮರೆತನೆ? ಎಂಬುದು ಈಗ ನನ್ನ ಮನದಲ್ಲಿ ಎದ್ದಿರುವ ಪ್ರಶ್ನೆ! ನನ್ನ ಅಪ್ಪನ್ನ ಕೇಳಬೇಕಿದೆ!
***
ನಮ್ಮ ಭಾವಕೋಶದಲ್ಲಿ ಭದ್ರತೆಯ ಭಾವ ಪೋಷಿಸುವ ತಂದೆ... ನಡಿಗೆ, ಮಾತು, ಈಜು, ಮರ ಹತ್ತುವುದು, ಸೈಕಲ್ ನಿಂದ ಹಿಡಿದು ಓದು ಬರಹ, ಜೀವನ ಎಲ್ಲಾ ಕಲಿಸುವ.. ಎಲ್ಲಾ ಕಲಿಕೆಯ ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸುವ ತಂದೆಗೆ... ಮಗನ ಎಲ್ಲಾ ಗೆಲುವುಗಳೊಂದಿಗೆ ಗುರುತಿಸಿಕೊಳ್ಳುವ ತಂದೆಗೆ... ತಂದೆ ಎಂಬ ಭಾವಕ್ಕೆ... ತಂದೆಯಂದಿರ ದಿನಾಚರಣೆಯ ದಿನ ಒಂದು ಶಿರಸಾಷ್ಟಾಂಗ ನಮಸ್ಕಾರ! [ಪ್ರೀತಿಯ ಅಪ್ಪನಿಗೊಂದು ಹೂಗುಚ್ಛ]












Click it and Unblock the Notifications