ಸಿಂಗಪುರದಲ್ಲಿ 'ವಿಶ್ವ ಮಾನವ ಕುವೆಂಪು' ಕಲಾ ಉತ್ಸವ

ಇಂಥದೇ ಮತ್ತೊಂದು ಮೆಗಾ ಕಾರ್ಯಕ್ರಮವನ್ನು ನೋಡಿ ಆನಂದಿಸುವ ಅವಕಾಶ ಸಿಂಗನ್ನಡಿಗರಿಗೆ ದೊರೆತಿದೆ. ಜೂನ್ 5, 2011 ಭಾನುವಾರದ ದಿನ ಕನ್ನಡ ಸಂಘದ(ಸಿಂಗಪುರ)ದ ಆಶ್ರಯದಲ್ಲಿ, "ಕುವೆಂಪು ಕಲಾನಿಕೇತನ" ಹಾಗೂ "ಯುನೈಟೆಡ್ ಲ್ಯಾಂಡ್ ಬ್ಯಾಂಕ್"ನ ಸಹಯೋಗದಲ್ಲಿ "ವಿಶ್ವ ಮಾನವ ಕುವೆಂಪು" ಕಲಾ ಉತ್ಸವ ಕಾರ್ಯಕ್ರಮವು ಇಲ್ಲಿನ ಡೋವರ್ ಕನ್ವೆನ್ಷನ್ ಸಭಾಂಗಣದಲ್ಲಿ ನೆರವೇರಲಿದೆ. ಕನ್ನಡದ ರಸ ಋಷಿ, ರಾಷ್ಟ್ರಕವಿ, ವಿಶ್ವ ಮಾನವ ಕವಿಯ ಬದುಕು, ಹಿರಿಮೆ ಮತ್ತು ಲೋಕಕ್ಕೆ ಅವರಿತ್ತ ಸಂದೇಶಗಳನ್ನು ಸಾರಲು, ಕನ್ನಡದ ಹೃದಯಗಳನ್ನು ಮತ್ತೊಮ್ಮೆ ಮೀಟಲು, ಏರ್ಪಡಿಸಲಾಗಿರುವ ಈ ಕಾರ್ಯಕ್ರಮ ಸಿಂಗಪುರದ ಕನ್ನಡ ಜನತೆಯಲ್ಲಿ ಉತ್ಸಾಹ ಮೂಡಿಸಿದೆ ಎಂದರೆ ಅತಿಶಯೋಕ್ತಿಯೇನಾಗದು.
ಕಾರ್ಯಕ್ರಮದ ಮುಖ್ಯ ಆಕರ್ಷಣೆಗಳು:
* ಕನ್ನಡ ನಟ, ದಿಗ್ದರ್ಶಕ ಸಿ.ಆರ್. ಸಿಂಹ ಮತ್ತು ತಂಡದವರಿಂದ - "ಕುವೆಂಪು ರಸಋಷಿ"
* ರತ್ನಮಾಲಾ ಪ್ರಕಾಶ್ ಮತ್ತು ತಂಡದವರಿಂದ ಸುಶ್ರಾವ್ಯ ಸಂಗೀತ - "ಕುವೆಂಪು ನಮನ"
* "ಕರ್ನಾಟಕ ರತ್ನ" ಡಾ. ದೇ. ಜವರೇಗೌಡ, "ಕುವೆಂಪು ಭಾಷಾ ಭಾರತಿ" ಅಧ್ಯಕ್ಷರಾದ ಡಾ. ಪ್ರಧಾನ ಗುರುದತ್ ಮುಂತಾದವರಿಂದ "ಕುವೆಂಪು ಸಾಹಿತ್ಯ ಗೋಷ್ಠಿ"
* ನಾಗರಾಜ್ ಕೋಟೆ ಮತ್ತು ತಂಡದವರಿಂದ "ಹಾಸ್ಯಗೋಷ್ಠಿ"
* "ಕುವೆಂಪು ನೃತ್ಯ ರೂಪಕ"
* ರಘು ದೀಕ್ಷಿತ್ ಮತ್ತು ತಂಡದವರಿಂದ "ಸಂಗೀತ ಗೋಷ್ಠಿ"
* ಜಾನಪದ ಕಲಾಪ್ರದರ್ಶನ
* ಸ್ಯಾಂಡಲ್ ವುಡ್ ಕಲಾವಿದರಿಂದ ಕುವೆಂಪು ಅವರ ಕೃತಿ-ಕೊಡುಗೆಗಳ ಆಧಾರಿತ ಕಾರ್ಯಕ್ರಮ
ಈ ಅದ್ದೂರಿಯ ಕಾರ್ಯಕ್ರಮಕ್ಕೆ ನಮ್ಮ ತಾಯ್ನಾಡಿನಿಂದ ಬರಲಿರುವ ಕಲಾವಿದರನ್ನು, ಕವಿವರೇಣ್ಯರನ್ನು, ಚಲನಚಿತ್ರ ನಟ-ನಟಿಯರನ್ನು, ರಾಜಕಾರಣಿಗಳನ್ನು ನೋಡಲು ಸಿಂಗನ್ನಡಿಗರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಕಾರ್ಯಕ್ರಮವನ್ನು 7ನೇ ವಿಶ್ವಕನ್ನಡ ಸಮ್ಮೇಳನದ ರೀತಿಯಲ್ಲೇ ಅದ್ದೂರಿಯಾಗಿ ನಡೆಸಿಕೊಡಲು ಸಿಂಗಪುರ ಕನ್ನಡ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಸ್ವಯಂಸೇವಕರಿಂದ ಭರದಿಂದ ಸಿದ್ಧತೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾವು ಸಂಘದ ಅಧ್ಯಕ್ಷರಾದ ಡಾ. ವಿಜಯಕುಮಾರ್ ಅವರನ್ನು ಸಂಪರ್ಕಿಸಿ ಈ ಕಾರ್ಯಕ್ರಮದ ಮೂಲೋದ್ದೇಶವನ್ನು ಕೇಳಿದೆವು. ಆಗ ಅವರು ತಿಳಿಸಿದ ವಿಚಾರ-ವಿವರಗಳು ಹೀಗಿವೆ.
"ಕುವೆಂಪು ಅವರು ಕೇವಲ ಕವಿಗಳ ಸ್ವತ್ತೂ ಅಲ್ಲ, ಕರ್ನಾಟಕದ ಸ್ವತ್ತೂ ಅಲ್ಲ. ಅವರು ಭಾರತದ, ವಿಶ್ವದ ಅನಿವಾಸೀ ಕನ್ನಡಿಗರೆಲ್ಲರ ಹೆಮ್ಮೆಯ ಸ್ವತ್ತು. ಅನಿವಾಸಿ ಕನ್ನಡಿಗರಿಗೆ ಕನ್ನಡದ ಇಂತಹ ಮಹಾನ್ ವ್ಯಕ್ತಿಯ ಮತ್ತವರ ಕೃತಿಗಳ ಪರಿಚಯ ನೀಡುವಂತಹ ಪ್ರಯತ್ನ ಈ ಮೊದಲು ನಡೆದಿಲ್ಲ. ಕುವೆಂಪುರವರ ಸಾಹಿತ್ಯ, ಕೃತಿಗಳ ಪರಿಚಯ ನೀಡಲು ಒಂದೆರಡು ದಿನ ಸಾಲದು. ಆದರೂ ಇದೊಂದು ಸಾಂಕೇತಿಕ ಪ್ರಯತ್ನ. ಇನ್ನು ಮುಂದೆ ಕರ್ನಾಟಕದ ಎಲ್ಲಾ ಕವಿಗಳನ್ನು ಅನಿವಾಸಿ ಕನ್ನಡಿಗರಿಗೆ ಪರಿಚಯಿಸುವಂತಹ ಇದೇ ತರಹದ ಕಾರ್ಯಕ್ರಮಗಳು ಎಲ್ಲೇಡೆ ನಡೆಯಲಿ ಎಂಬುದೇ ನಮ್ಮ ಆಶಯ".
ಕನ್ನಡನಾಡಿನಾಚೆಯಲ್ಲಿ ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳಸುವ ಈ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಕನ್ನಡಿಗರೆಲ್ಲರ ಬೆಂಬಲ, ಪ್ರೋತ್ಸಾಹ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಉತ್ಸಾಹದಿಂದ ಭಾಗವಹಿಸಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಜೂನ್ 5ರಂದು ಭೇಟಿಯಾಗೋಣ.
ಸುರೇಶ ಎಚ್. ಸಿ. ಮತ್ತು ವಸಂತ ಕುಲಕರ್ಣಿ,
ಸುದ್ದಿವಾಹಿನಿ ತಂಡ (ಸಿಂಗಪುರ)












Click it and Unblock the Notifications