ವಸಂತ ಸಾಹಿತ್ಯೋತ್ಸವಕ್ಕಾಗಿ ಪೆನ್ನು ಕೈಗೆತ್ತಿಕೊಳ್ಳಿ

ಈ ಸಾಹಿತ್ಯೋತ್ಸವದ ಅಂಗವಾಗಿ ಆಯೋಜಿಸಲಿರುವ ಒಂದು ಪ್ರಮುಖ ಕಾರ್ಯಕ್ರಮ ಸಾಹಿತ್ಯ ಸಂಕಿರಣ; ಇದನ್ನು ಆಯೋಜಿಸಿ, ಪ್ರಸ್ತುತ ಪಡಿಸುವ ಜವಾಬುದಾರಿ ಸಾಹಿತ್ಯಗೋಷ್ಠಿಯ ಮೇಲಿದೆ. ಅಮೆರಿಕಾದ ಕನ್ನಡದ ಬರಹಗಾರರನ್ನು ಉದಯೋನ್ಮುಖ ಮತ್ತು ನೆಲೆಯೂರಿದ - ಉತ್ತೇಜಿಸಿ, ಗೌರವಿಸಿವುದು ಇದರ ಉದ್ದೇಶ. ಪ್ರತಿಯೊಬ್ಬ ಲೇಖಕನಿಗೂ ತಾನು ರಚಿಸಿದ ಕೃತಿಯನ್ನು ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ವಾಚಿಸುವ ಅಪೇಕ್ಷೆ ಇರುವುದು ಸಹಜ. ಇಂತಹ ಒಂದು ಸುವರ್ಣಾವಕಾಶವನ್ನು ಈ ಸಾಹಿತ್ಯ ಸಂಕಿರಣ ನಿಮಗೆ ನೀಡುತ್ತಿದೆ.
ಈ ಸಾಹಿತ್ಯ ಸಂಕಿರಣದಲ್ಲಿ ನೀವು ಬರೆದ ಕವನ, ಸಣ್ಣಕಥೆ, ಪ್ರಬಂಧ, ಕಿರು ವಿಮರ್ಶೆ, ಅನುವಾದಿತ ರಚನೆ, ಹಾಸ್ಯ ಚಟಾಕಿ ಅಥವಾ ಸಾಹಿತ್ಯದ ಯಾವುದೇ ಪ್ರಕಾರದ ಕೃತಿಯನ್ನು ಮಂಡಿಸಬಹುದಾಗಿದೆ. (ಇದರಲ್ಲಿ ಅನ್ಯರು ರಚಿಸಿದ ಕೃತಿಯನ್ನು ನೀವು ವಾಚನ ಮಾಡುವ ಹಾಗಿಲ್ಲ!) ಈ ಕಾರ್ಯಕ್ರಮದಲ್ಲಿ ನಾವು ಆದಷ್ಟು ಹೆಚ್ಚಿನ ಲೇಖಕರಿಗೆ ವೇದಿಕೆಯನ್ನು ನೀಡಲು ಉತ್ಸುಕರಾಗಿದ್ದೇವೆ. ವಸ್ತು ವಿಷಯದ ಆಯ್ಕೆ ಮತ್ತು ಅದನ್ನು ಅಭಿವ್ಯಕ್ತಪಡಿಸುವ ತಂತ್ರದ ಬಳಕೆಯ ಸಂಪೂರ್ಣ ಸ್ವಾತಂತ್ರ್ಯವನ್ನು ನಿಮಗೆ ಬಿಡಲಾಗಿದೆ. ಗದ್ಯದ ಮಂಡನೆಗೆ ಕವನದ ವಾಚನಕ್ಕಿಂತ ಹೆಚ್ಚಿನ ಸಮಯ ಬೇಕಾಗಬಹುದೆಂಬುದನ್ನು ಮನಗೊಂಡು, ಗದ್ಯಕ್ಕೆ ಸುಮಾರು 8 ನಿಮಿಷ ಮತ್ತು ಪದ್ಯಕ್ಕೆ 5 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ನಿಮ್ಮ ಸಾಹಿತ್ಯಿಕ ರಚನೆಯ ಮಂಡನೆಗೆ ನೀಡಿದ ಕಾಲಾವಧಿಯನ್ನು ದಯವಿಟ್ಟು ಮೀರಬಾರದೆಂದು ಕೋರುತ್ತೇವೆ.
ಇನ್ನು ತಡವೇತಕೆ? ನಿಮ್ಮ ಬರವಣಿಗೆಯನ್ನು ಆರಂಭಿಸಿ. ನಿಮ್ಮ ಮನಸ್ಸಿನ ತುಡಿತಕ್ಕೊಂದು ಸೃಜನಶೀಲ ಅಭಿವ್ಯಕ್ತಿ ನೀಡಿ. ಸಾವಧಾನದಿಂದ ಅದನ್ನು ಪರಿಷ್ಕರಿಸಿ, ನಂತರ ನಮಗೆ ಕಳುಹಿಸಿಕೊಡಿ. ಉತ್ಸುಕ ಆಭಿಮಾನಿಗಳ ವೃಂದವನ್ನು ನಿಮಗೆ ಒದಗಿಸುವ ಭರವಸೆಯನ್ನು ನಾವು ನೀಡುತ್ತೇವೆ.
ನಿಮ್ಮ ರಚನೆ (ಇಲ್ಲಿಯವರೆಗೆ ಬೇರೆಲ್ಲಿಯೂ ಪ್ರಕಟವಾಗಿರದ ಹೊಚ್ಚ ಹೊಸ ಲೇಖನಗಳಿಗೆ ಆದ್ಯತೆ ಉಂಟು) ಮತ್ತು ನಿಮ್ಮ ಕಿರು ಪರಿಚಯವನ್ನು (80 ಪದಗಳಿಗೆ ಮೀರದಂತೆ), ನಮಗೆ ಕಳುಹಿಸಲು ಕೊನೆಯ ದಿನಾಂಕ ಮಾರ್ಚ್ 31, 2011. ಸಂಪರ್ಕ: ವಿಶ್ವನಾಥ್ ಹುಲಿಕಲ್ ([email protected]; 408-343-3900)
ಸಾಹಿತ್ಯ ಸಂಕಿರಣದಲ್ಲಿ ನಿಮ್ಮ ಕೃತಿಯ ಮಂಡನೆಗೆ ಅವಕಾಶ ಮಾಡಿಕೊಡುವ ನಿರ್ಧಾರ ಮಂಡಳಿಯದು. ಸ್ವೀಕೃತ ಕೃತಿಗಳ ಪಟ್ಟಿ ಏಪ್ರಿಲ್ 15ರ ವೇಳೆಗೆ ಸಿದ್ಧವಾಗಿ, ನಿಮಗೆ ತಿಳಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ನೀವು ಉತ್ಸಾಹದಿಂದ ಪಾಲುಗೊಳ್ಳುವುದನ್ನು ಎದುರುನೋಡುತ್ತೇವೆ.











Click it and Unblock the Notifications