ಧರೆಯ ಸ್ವರ್ಗ ಅಮೆರಿಕಾದ ನ್ಯೂ ಹ್ಯಾಂಪ್ ಷೈರ್

ಬೇಸಿಗೆ ಮುಗಿದು ಇನ್ನೇನು ಚಳಿರಾಯ ನಾ ಬರಲೇ ಎಂದು ಇಣುಕಿ ನೋಡುತ್ತಿರುವ ಸಮಯದಲ್ಲಿ ಬರುವ ಈ ಫಾಲ್ (autumn) ಸೀಸನ್ ನೋಡುವುದೇ ಒಂದು ಸೊಬಗು. ಹವಾಮಾನದಲ್ಲಿನ ಬದಲಾವಣೆ, ಹೆಚ್ಚಾಗುವ ರಾತ್ರಿ ವೇಳೆ, ಚಳಿಗಾಳಿ, ಮಳೆ, ಕಡಿಮೆಯಾಗುವ ಸೂರ್ಯನ ಪ್ರಖರತೆ ಇವೆಲ್ಲ ಕಾರಣಗಳಿಂದ ಎಲೆಗಳಲ್ಲಿ ಕ್ರೋಮೊಫ್ಹಿಲ್ ಉತ್ಪಾದನೆ ಕಡಿಮೆಯಾಗಿ, ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಹೊರಗಡೆ ಹೋಗದೆ ಎಲ್ಲ ಗಿಡಮರಗಳಲ್ಲಿನ ಎಲೆಗಳು ತಮ್ಮ ಹಸಿರು ಬಣ್ಣದಿಂದ ಕೆಂಪು, ಹಳದಿ, ಕಂದು, ಪಿಂಕ್ ಬಣ್ಣಗಳಿಂದ ಕಂಗೊಳಿಸಲು ಪ್ರಾರಂಭಿಸುತ್ತವೆ. ಜೋರಾಗಿ ಬೀಸುವ ತಂಗಾಳಿಗೆ ಎಲ್ಲ ಎಲೆಗಳು ಬಿದ್ದು ಹೋಗಿ ಕಾಣುವ ದೃಶ್ಯ ನಿಜಕ್ಕೂ ನಯನ ಮನೋಹರ. [ಗ್ಯಾಲರಿ : ಅದ್ಭುತ ಅತ್ಯದ್ಭುತ]
ನ್ಯೂಯಾರ್ಕ್ ನಿಂದ 6 ಗಂಟೆ ದೂರದಲ್ಲಿ, ಕೆನಡ ದೇಶಕ್ಕೆ ಹೊಂದಿಕೊಂಡಿರುವ ಈ ನ್ಯೂ ಹ್ಯಾಂಪ್ ಷೈರ್ನಲ್ಲಿರುವ ವೈಟ್ ಮೌಂಟೈನ್ (ಬಿಳಿ ಪರ್ವತಗಳು) ಈ ಸಮಯದಲ್ಲಿ ಬಣ್ಣ ಬಣ್ಣದ ಹೂವಿನ ಸೀರೆಯಿಂದ ಅಲಂಕೃತಳಾದ ನವ ವಧುವಿನಂತೆ ಕಂಗೊಳಿಸುತ್ತಾ ವಿಶ್ವದೆಲ್ಲೆಡೆಯಿಂದ ಜನರನ್ನು ಆಕರ್ಷಿಸುತ್ತದೆ. ಬೇಸಿಗೆಯಲ್ಲಿ ಹಚ್ಚ ಹಸಿರಿನಿಂದ, ಚಳಿಗಾಲದಲ್ಲಿ ಹಿಮದಿಂದ ಆವೃತವಾಗಿ ಬೆಳ್ಳಗೆ ಕಾಣಿಸುವ ಈ ನಯನ ಮನೋಹರ ನ್ಯೂ ಹ್ಯಾಂಪ್ ಷೈರ್ ಪ್ರಣಯಿಗಳಿಗೆ, ಹನಿಮೂನ್ ಜೋಡಿಗಳಿಗೆ, ಛಾಯಚಿತ್ರಕಾರರಿಗೆ, ಬೆಟ್ಟಹತ್ತುವ ಸಾಹಸಿಗರಿಗೆ, ಸ್ಕೀಯಿಂಗ್ ಮಾಡುವವರಿಗೆ, ಹಾಯಾಗಿ ನಿವೃತ್ತ ಜೀವನ ಮಾಡಲು ಬಯಸುವ ಹಿರಿಯರಿಗೆ ಭೂಲೋಕದಲ್ಲಿನ ಸ್ವರ್ಗವಿದ್ದಂತೆ ಭಾಸವಾಗುತ್ತದೆ.
ಒಂದು ಕಡೆ ಹಾ ಹಾ ಏನು ಸುಂದರವಾಗಿದ್ದಾವಲ್ಲ ಈ ಗಿಡಮರಗಳು ಅನ್ನುತ್ತ ತಮ್ಮ ಕಣ್ಮನ ತುಂಬಿಕೊಳ್ಳುವ ಮನುಜರು... ಮತ್ತೊಂದು ಕಡೆ ತಮ್ಮಲ್ಲಿನ ಎಲ್ಲ ಎಲೆಗಳನ್ನು ಕಳೆದುಕೊಂಡು ನಗ್ನತೆಯಿಂದ ಮೈ ಕೊರೆಯುವ ಚಳಿಗೆ ಮೈಯೊಡ್ಡಿ ನಿಲ್ಲಲು ಬೇಸರಿಸಿಕೊಂಡು ತಯಾರಾಗುತ್ತಿರುವ ಈ ಗಿಡಮರಗಳು... ಆಹಾ ಎಲ್ಲ ಪ್ರಕೃತಿಯ ವಿಸ್ಮಯ! ಜೀವನದಲ್ಲಿ ಒಮ್ಮೆಯಾದರೂ ಈ ಫಾಲ್ ಸೀಸನ್ ಕಲರ್ಸ್ ನೋಡಲೇಬೇಕು. [ಬಣ್ಣಬಣ್ಣದ ಲೋಕಕ್ಕೆ ಸ್ವಾಗತ]












Click it and Unblock the Notifications