ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

33ನೇ ವೀರಶೈವ ಸಮ್ಮೇಳನ ಟೊರೊಂಟೊ

By * ಮಾಧವಿ ಬಾಗೇವಾಡಿ, ಟೊರೊಂಟೊ
|
Google Oneindia Kannada News

Basavanna
ಹನ್ನೆರಡನೇ ಶತಮಾನದಲ್ಲಿ ಮೈದಾಳಿದ ಶಿವಶರಣರ ಅನುಭವ ಮಂಟಪ ಹೊಸ ವಿಚಾರಗಳ ತೊಟ್ಟಿಲು. ಅನುಭವ ಮಂಟಪದಲ್ಲಿ ನಮ್ಮ ಶರಣರು ನಿಜ ಜೀವನದ ಅನುಭವಗಳನ್ನು ವಚನ ರೂಪದಲ್ಲಿ ರಚಿಸುತ್ತಿದ್ದರು. 800 ವರ್ಷಗಳ ಹಿಂದೆ ಒಂದು ಮಹಾನ್ ಕ್ರಾಂತಿಯಾಯಿತು. ಅದು ಅಂತಿಂಥ ಕ್ರಾಂತಿಯಲ್ಲ. ಕರ್ಮ ಸಿದ್ದಾಂತವನ್ನು ಅಳಿಸಿ "ಕಾಯಕ ಸಿದ್ದಾಂತ"ದ ಸ್ಥಾಪನೆಯ ಕ್ರಾಂತಿ. ಅದಕ್ಕಾಗಿ ಜಗಜ್ಯೋತಿ ಬಸವಣ್ಣನವರು ತಮ್ಮ ಜೀವನವನ್ನೇ ಸವೆಸಿದರು.

ಜನಪರ ಸಿದ್ಧಾಂತವನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಅನೇಕ ಶರಣರು ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟಿದ್ದಾರೆ, ಪ್ರಾಣವನ್ನೇ ತೆತ್ತರು. ಅಂತಹ ಮಹಾನ್ ಶರಣರ ವಿಚಾರಗಳು, ವಚನಗಳು ಎಲ್ಲೆಡೆ ಹಬ್ಬಬೇಕು. ಯುವಜನಾಂಗದಲ್ಲಿ ಬಸವ ತತ್ವಗಳ ಅರಿವು ಮೂಡಿಸಬೇಕು. ಬಸವ ತತ್ವ ವಿಶ್ವ ಮಾನವ ಧರ್ಮವಾಗಿರುವುದರಿಂದ ಇಲ್ಲಿ ಮೇಲು ಕೀಳು ಎಂಬುದಿಲ್ಲ."ಎಲ್ಲರೂ ಸಮಾನರು" ಎಂಬ ತತ್ವವೇ ಇದರ ಅಡಿಪಾಯ."ಸಕಲ ಜೀವಾತ್ಮರಿಗೂ ಲೇಸ ಬಯಸುವ ಧರ್ಮವಾಗಿದೆ". ಈ ಧರ್ಮವನ್ನು ಅರಿತುದರ ಅರಿವನ್ನು ಲೋಕಕ್ಕೆ ಹರಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.

ಮೇಲೆ ಹೇಳಿದ ಉದಾತ್ತ ನಿಲವುಗಳನ್ನು ಮೈಗೂಡಿಸಿಕೊಂಡ ಒಂದು ಸಂಸ್ಥೆ ಟೊರೊಂಟೊ ವೀರಶೈವ ಸಮುದಾಯ. ಜುಲೈ 3 ಮತ್ತು 4 ಇಲ್ಲಿ ತನ್ನ 33ನೇ ವೀರಶೈವ ಸಮ್ಮೇಳನವನ್ನು ಆಯೋಜಿಸಿತ್ತು. ಎರಡು ದಿನಗಳ ಈ ಸಮಾವೇಶ ಶೆರಟಾನ್ ಪಾರ್ಕ್ ವೇ ಹೋಟೆಲ್ ರಿಚಮಂಡ್ ಹಿಲ್ಲ್ ಓಂಟಾರಿಯೊ ಕೆನಡಾದಲ್ಲಿ ಜರುಗಿತು. ಸುಮಾರು 350ಕ್ಕೂ ಹೆಚ್ಚು ಜನರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ವೀರಶೈವ ಧರ್ಮ ಗುರುಗಳಾದ ಶ್ರೀ ಶಿವಮೂರ್ತಿ ಮುರುಘ ಶರಣರು, ಶರಣ ಸಂಸ್ಕ್ರತಿಯನ್ನು ಆಳವಾಗಿ ಅಧ್ಯಯನ ಮಾಡಿರುವ ರಮ್ ಜಾನ್ ದರ್ಗಾ, ಕಲಾವಿದ ಜೆ.ಎಸ್. ಖಂಡೇರಾವ್, ರಾಣಿ ಸತೀಶ್, ರವಿ ಕೃಷ್ಣಾ ರೆಡ್ಡಿ, ಬಿ.ವಿ.ನಾಗರಾಜು ಮುಂತಾದವರು ಅತಿಥಿ ಭಾಷಣಕಾರರಾಗಿ ಸಮ್ಮೇಳನಕ್ಕೆ ಆಗಮಿಸಿದ್ದರು.

"ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ" ಎಂಬ ವಸ್ತು ವಿಷಯ ಸಮ್ಮೇಳನದ ಕೇಂದ್ರ ಬಿಂದುವಾಗಿತ್ತು. ಲಿಂಗಪೂಜೆ, ಶರಣರ ನಾಮಾವಳಿ, ವಚನ ಗಾಯನದಿಂದ ಶುರುವಾದ ಸಮಾವೇಶ ಆಧ್ಯಾತ್ಮಿಕ ಅನುಭವ ಮಂಟಪ, ಚರ್ಚಾವೇದಿಕೆ, ಸಾಂಸ್ಕ್ರತಿ ಕಾರ್ಯಕ್ರಮಗಳು, ವ್ಯವಹಾರ ವೇದಿಕೆ, ಮಕ್ಕಳಿಗಾಗಿ ಸ್ಪರ್ಧೆಗಳನ್ನು ಒಳಗೊಂಡಿತ್ತು.

ಶ್ರೀ ಶಿವಮೂರ್ತಿ ಮುರುಘ ಶರಣರು ಶರಣ ಸಂಸ್ಕ್ರತಿಯ ಬಗ್ಗೆ ಎಲ್ಲರಲ್ಲಿ ತಿಳಿವಳಿಕೆ ಮೂಡಿಸಿದರು. ರಮಜಾನ್ ದರ್ಗಾ ಅವರ ಭಾಷಣ ಅತ್ಯಂತ ಅರ್ಥಪೂರ್ಣವಾಗಿತ್ತು. ಶರಣ ಧರ್ಮದ ಮೂಲ ತತ್ವಗಳನ್ನು ಅವರು ಹೇಳುತ್ತಿರುವಾಗ ಎಲ್ಲರೂ ತನ್ಮತೆಯಿಂದ ಆಲಿಸುತ್ತಿದ್ದರು. ರಾಣಿ ಸತೀಶ ಅವರು "ಸಮಾಜದಲ್ಲಿ ಮಹಿಳೆಯ ಪಾತ್ರ ಎಂಬ ವಿಷಯವಾಗಿ ಮಾತನಾಡಿದರು. ರವಿ ರೆಡ್ಡಿ, ಬಿ.ವಿ.ನಾಗರಾಜು ಅವರು ಸಮ್ಮೇಳನ ಆಯೋಜಕರಿಗೆ ಕೆಲವೊಂದು ಉತ್ತಮ ಸಲಹೆಗಳನ್ನು ಕೊಟ್ಟರು.

ಚರ್ಚಾವೇದಿಕೆಯಲ್ಲಿ "ಭಾವನಾತ್ಮಕ ಸಂವೇದನಾಶೀಲತೆ"ಎಂಬ ವಿಷಯವಾಗಿ ಚರ್ಚಿಸಲಾಯಿತು. ಹಳೇಬೇರು ಹೊಸ ಚಿಗುರು ಎಂಬಂತೆ ಹಿರಿಯರ ಮತ್ತು ಕಿರಿಯರ ವಿಚಾರಧಾರೆ ತುಂಬಾ ಗಹನವಾಗಿತ್ತು. ಸಾಂಸ್ಕ್ರತಿಕ ಕಾರ್ಯಕ್ರಮಗಳು ರಸಮಯ, ಅರ್ಥಪೂರ್ಣಗಿದ್ದವು. ವಿಶೇಷವಾಗಿ ತಯಾರಿಸಿದ ಊಟ ತಿಂಡಿಯ, ಅತಿಥಿಗಳಿಗೆ ತಂಗುವ ವ್ಯವಸ್ಥೆ ಸುಸೂತ್ರವಾಗಿತ್ತು. ಸಮ್ಮೇಳನದ ಸೂತ್ರಧಾರ ಯುವರಾಜ ಪಾಟೀಲ ಮತ್ತು ತಂಡದವರ ಶ್ರಮ ಮತ್ತು ಶರಣ ಸಮುದಾಯ ಪ್ರೀತಿ ಶ್ಲಾಘನೀಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X