• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐತಿಹಾಸಿಕ ಕ್ಷಣವೊಂದಕ್ಕೆ ಪ್ರತ್ಯಕ್ಷ ಸಾಕ್ಷಿ

By * ಜಿ.ಎಸ್.ಸತ್ಯ, ಸ್ಯಾನ್ ಹೊಸೆ
|

ಎ.ಆರ್. ಕೃಷ್ಣಶಾಸ್ತ್ರಿಗಳ ಬಗೆಗೆ ಮಂಜುನಾಥ ಅಜ್ಜಂಪುರ ಅವರು ಬರೆದ "ವಚನ ಭಾರತಕ್ಕೆ ಅರುವತ್ತು ವರ್ಷ" ಲೇಖನ ಓದಿದೆ. ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ. ಗತಕಾಲದ ಶ್ರೇಷ್ಠವ್ಯಕ್ತಿಗಳನ್ನು ಮತ್ತು ವಿಶೇಷಗಳನ್ನು ಸ್ಮರಿಸುವುದರಲ್ಲಿ, ಗೌರವಿಸುವುದರಲ್ಲಿ ಬಾಳಿನ ಸಾರ್ಥಕತೆ ಇದೆ ಎನ್ನುತ್ತಾರೆ. ಅಂತಹ ದಿವ್ಯಸ್ಮರಣೆಯಲ್ಲಿ ಮಂಜುನಾಥ ಅಜ್ಜಂಪುರ ಅವರಂತೆ, ದಟ್ಸ್ ಕನ್ನಡ ಜಾಲತಾಣದ ಓದುಗ ಬಂಧುಗಳೊಂದಿಗೆ ಕೃಷ್ಣಶಾಸ್ತ್ರಿಗಳನ್ನು ನೋಡಿದ, ಅವರೊಂದಿಗೆ ಮಾತನಾಡಿದ ದಿವ್ಯಾನುಭವವನ್ನು ನಾನೂ ಹಂಚಿಕೊಳ್ಳುತ್ತಿದ್ದೇನೆ.

ಅಂತಹ ಭಾಗ್ಯವಂತರು ಮತ್ತು ಐತಿಹಾಸಿಕ ಕ್ಷಣವೊಂದಕ್ಕೆ ಪ್ರತ್ಯಕ್ಷ ಸಾಕ್ಷಿಯಾದವರು, ಬಹುಶಃ ತುಂಬ ಕಡಿಮೆ. ಅರಾಕೃ (ಅಂಬಳೆ ರಾಮಕೃಷ್ಣಶಾಸ್ತ್ರಿ ಕೃಷ್ಣಶಾಸ್ತ್ರಿ) ಅವರನ್ನು ಅರ್ಧ ಶತಮಾನದ ಹಿಂದೆ, ಕೇಂದ್ರ ಸಾಹಿತ್ಯ ಅಕಾಡೆಮಿಯು ಅವರ ಮನೆಯಲ್ಲಿಯೇ ಗೌರವಿಸಿದಾಗ ಕಣ್ಣಾರೆ ಕಂಡವನು ನಾನು. ಅದನ್ನು ನನ್ನ ಭಾಗ್ಯವೆಂದೇ ಭಾವಿಸುವೆ. ನನ್ನ ನೆನಪಿನ ಅಂಗಳದಲ್ಲಿ ಅದಿನ್ನೂ ಹಚ್ಚಹಸಿರಾಗಿದೆ.

ನಾನು ಜಿ.ಎಸ್. ಸತ್ಯ. ನನ್ನ ಹುಟ್ಟೂರು ಕನಕಪುರ. ಮಾಧ್ಯಮಿಕ ಶಾಲೆಯ ಎರಡನೆಯ ವರ್ಷಕ್ಕೆ ಅರಾಕೃ ಅವರ "ವಚನ ಭಾರತ"ದ ಅರಣ್ಯಪರ್ವದ ಸಂಗ್ರಹವು ಪಠ್ಯವಾಗಿತ್ತು. ನಮ್ಮ ಗುರುದೇವ ನಂಜುಂಡಪ್ಪನವರನ್ನು ಇಲ್ಲಿ ಸ್ಮರಿಸಲೇಬೇಕು. ಕನಕಪುರದಲ್ಲಿ ಕರ್ಣಾಟಕ ಸಂಘವನ್ನು ಪ್ರಾರಂಭಿಸಿದ ಆದ್ಯರು ಅವರು. "ವಚನ ಭಾರತ"ದೊಂದಿಗಿನ ಈ ನನ್ನ ಪರಿಚಯಜ್ಞಾನ, ಮುಂದೆ ಐದಾರು ವರ್ಷಗಳ ನಂತರ, ಗ್ರಂಥಕರ್ತರಾದ ಅರಾಕೃ ಅವರನ್ನು ಕಾಣಲು, ಮಾತನಾಡಿಸಲು ಹಿನ್ನೆಲೆಯಾಯಿತು, ಪ್ರೇರಣೆಯಾಯಿತು.

1956ರಲ್ಲಿ ನಾನು ಬೆಂಗಳೂರಿನ ಸುವಿಖ್ಯಾತ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಕೃಷ್ಣರಾಜೇಂದ್ರ ರಸ್ತೆಯಲ್ಲಿ ರೂಮ್ ಮಾಡಿಕೊಂಡು ಓದುತ್ತಿದ್ದೆ. ಅರಾಕೃ ಅವರು ನಿವೃತ್ತರಾದ ನಂತರ ಹತ್ತಿರದಲ್ಲಿಯೇ ವಾಸಿಸುತ್ತಿದ್ದರು. ಅದು ನನ್ನ ಅದೃಷ್ಟವೇ ಇರಬೇಕು. ಅಲ್ಲಿ ಮೈಸೂರು ಬ್ಯಾಂಕಿಗಿಂತ ಮುಂಚೆಯೇ, ಸೇಲಂ ಬ್ಯಾಂಕ್ ಇತ್ತು. ಶ್ವೇತಶುಭ್ರ ಕಚ್ಚೆಪಂಚೆ, ಅಂಗಿ ಧರಿಸಿದ ಮತ್ತು ಲಕೋಟೆ, ಲೇಖನಿ ಕೈಯಲ್ಲಿ ಹಿಡಿದುಕೊಂಡು ಸರ್ವೇಯರ್ ಸ್ಟ್ರೀಟ್‌ನಿಂದ ಬ್ಯಾಂಕಿಗೆ ಬರುತ್ತಿದ್ದ ಹಿರಿಯರೊಬ್ಬರನ್ನು ಆಗಾಗ ನೋಡುತ್ತಿದ್ದೆ. ಅಂದಿನ ಬೆಂಗಳೂರಿನ ವಾತಾವರಣದಲ್ಲಿ ಇನ್ನೂ ಕಿರಿವಯಸ್ಸಿನ ಹುಡುಗನಾದ ನನಗೆ ಪರಿಚಯವಿಲ್ಲದ ಹಿರಿಯರನ್ನು ಮಾತನಾಡಿಸಲು ಸಾಕಷ್ಟು ಧೈರ್ಯವಿರಲಿಲ್ಲ.

ಒಂದೆರಡು ತಿಂಗಳ ನಂತರ, ನಾನಿದ್ದ ಕಟ್ಟಡದ ಮಾಲೀಕರಾದ ಸಿ.ಆರ್. ಚಕ್ರಪಾಣಿ ರಾಯರು, "ಅವರು ಎ.ಆರ್. ಕೃಷ್ಣಶಾಸ್ತ್ರಿಗಳು ಕಣೋ", ಎಂದರು. "ವಚನ ಭಾರತ"ದ ಪರಿಚಯವಿದ್ದ ನನಗೆ ಶಾಸ್ತ್ರಿಗಳನ್ನು ಮಾತನಾಡಿಸುವ ಆಸೆ. ಒಮ್ಮೆ ಧೈರ್ಯ ತಂದುಕೊಂಡು, "ನಮಸ್ಕಾರ ಸರ್", ಎಂದೆ. ಅವರು ಪ್ರತಿವಂದಿಸಿ ನನ್ನ ಸಂಕೋಚ ಕಡಿಮೆಯಾಗಲು ಸಹಾಯ ಮಾಡಿದರು. ಅವರು ತಮ್ಮ ನಿವೃತ್ತಿ ವೇತನಕ್ಕೆ ಸಂಬಂಧಿಸಿದಂತೆ, ಆ ಸೇಲಂ ಬ್ಯಾಂಕಿಗೆ ಬರುತ್ತಿದ್ದರೆಂದು ಆಮೇಲೆ ನನಗೆ ತಿಳಿಯಿತು.

ಒಂದು ದಿನ ಕುತೂಹಲದಿಂದ, ನಾನು ಅವರ ಹಿಂದೆಯೇ ನಿಧಾನವಾಗಿ ಹೋಗಿ ಸರ್ವೇಯರ್ ಸ್ಟ್ರೀಟ್‌ನಲ್ಲಿದ್ದ ಅವರ ಮನೆ ನೋಡಿದೆ. ನನ್ನ ವಿಸ್ಮಯಕ್ಕೆ, ನ್ಯಾಷನಲ್ ಕಾಲೇಜಿನ ನನ್ನ ಪ್ರೀತಿಯ ಇಂಗ್ಲಿಷ್ ಉಪನ್ಯಾಸಕರಾದ ಟಿ. ಸುಬ್ರಹ್ಮಣ್ಯಂ ಅವರು, ಅರಾಕೃ ಅವರ ಮನೆಯ ಮುಂದೆಯೇ ನಿಂತಿದ್ದರು. ಸುಬ್ರಹ್ಮಣ್ಯಂ ಅವರು ಅರಾಕೃ ಅವರ ಬಂಧು ಎಂಬುದು ತಿಳಿದು ಇನ್ನಷ್ಟು ವಿಸ್ಮಯವಾಯಿತು. "ಬಾರಯ್ಯಾ ಒಳಗೆ", ಎಂದು ನನ್ನನ್ನು ಅವರ ಮನೆಯೊಳಕ್ಕೇ ಕರೆದುಕೊಂಡು ಹೋದರು. ನಾನು ಮಾಧ್ಯಮಿಕ ಶಾಲೆಯಲ್ಲಿದ್ದಾಗ ಅವರ "ಅರಣ್ಯಪರ್ವ ಸಂಗ್ರಹ" ಓದಿದ್ದು ಹೇಳಿದೆ. ಅದರ ಕೆಲವು ಸಾಲುಗಳನ್ನು ಜ್ಞಾಪಿಸಿಕೊಂಡು ಹೇಳಿಯೂಬಿಟ್ಟೆ. ತುಂಬ ದೊಡ್ಡವರಾದ ಶಾಸ್ತ್ರಿಗಳಿಗೆ ಏನೆನ್ನಿಸಿತ್ತೋ ಏನೋ ನನಗೆ ತಿಳಿಯದು, ಆದರೆ ನನಗೆ ಮಾತ್ರ ರೋಮಾಂಚನವಾಗಿತ್ತು. ಅವರ ಮನೆಯಲ್ಲಿ ತಿಂಡಿ ತಿಂದು ಕಾಫಿ ಕುಡಿದು, ನನ್ನ ರೂಮಿನ ಕಡೆ ಹೊರಟಾಗ, ನನ್ನಲ್ಲಿ ಕುಣಿದು ಕುಪ್ಪಳಿಸುವಂತಹ ಸಂಭ್ರಮ.

ಇದಾದ ಕೆಲವು ತಿಂಗಳ ನಂತರ, ಒಂದು ದಿನ ನಾನು ಕಾಲೇಜಿಗೆ ಹೊರಟಾಗ, ನಮ್ಮ ಕಟ್ಟಡದ ಬಳಿಯ ಸಿಟಿ ಬಸ್‌ಸ್ಟಾಪ್ ಬಳಿ, 11ನೇ ನಂಬರ್ ಮಾರ್ಗದ ಬಿಟಿಎಸ್ ಬಸ್ಸಿನಿಂದ ಕೆಲವರು ಇಳಿಯುತ್ತಿದ್ದುದನ್ನು ನೋಡಿದೆ. ಅವರ ಕೈಯಲ್ಲಿ ಹೂವು, ಹಣ್ಣು, ಪೆಟ್ಟಿಗೆ ಕಾಣಿಸಿತು. ಸೂಟುಧಾರಿಯೊಬ್ಬರು ಬ್ರೀಫ್‌ಕೇಸ್ ಹಿಡಿದಿದ್ದರು. ಅವರ ನಡುವೆ ಕ್ಯಾಮೆರಾ ಮತ್ತಿತರ ಉಪಕರಣಗಳೊಂದಿಗೆ ಪರಿಚಿತರೊಬ್ಬರನ್ನು ನೋಡಿದಂತಾಯಿತು. ಅರೆ, ಇವರು ಪ್ರಖ್ಯಾತ ಫೋಟೋಗ್ರಾಫರ್ ಟಿ.ಎಲ್. ರಾಮಸ್ವಾಮಿಯವರಲ್ಲವೇ ಎಂದುಕೊಂಡೆ, ಮಾತನಾಡಿಸಿದೆ. ಆಗ ಅವರು ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಪ್ರೆಸ್ ಫೋಟೋಗ್ರಾಫರ್ ಆಗಿದ್ದರು, ಅನೇಕ ಪ್ರಶಸ್ತಿಗಳನ್ನೂ ಪಡೆದಿದ್ದರು. ಆಗ "ಪ್ರಜಾವಾಣಿ"ಯಲ್ಲಿ ಸಹಾಯಕ ಸಂಪಾದಕರಾಗಿದ್ದ ವೈ.ಎನ್.ಕೆ. (ವೈ.ಎನ್. ಕೃಷ್ಣಮೂರ್ತಿ) ನನ್ನ ಪ್ರಿಯಮಿತ್ರರು. ಕೆಲವು ವಾರಗಳ ಹಿಂದೆ, ಇದೇ ವೈಎನ್‌ಕೆ, ಟಿ.ಎಲ್. ರಾಮಸ್ವಾಮಿಯವರ ಪರಿಚಯವನ್ನೂ ಮಾಡಿಸಿದ್ದರು. "ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (1961)ಯನ್ನು ಎ.ಆರ್. ಕೃಷ್ಣಶಾಸ್ತ್ರಿಗಳಿಗೆ ನೀಡಲಾಗಿದೆ. ಅವರ ಮನೆಯಲ್ಲಿಯೇ ಅವರನ್ನು ಗೌರವಿಸಲು ಅಕಾಡೆಮಿಯಿಂದ ಬಂದಿದ್ದಾರೆ. ಅವರ ಮನೆ ತೋರಿಸು, ಬಾ" ಎಂದರು ಟಿ.ಎಲ್. ರಾಮಸ್ವಾಮಿ. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಕ್ಲಾಸಿಗೆ ಚಕ್ಕರ್ ಹೊಡೆದು ಅವರನ್ನೆಲ್ಲಾ ಕರೆದುಕೊಂಡು ಹೊರಟೇಬಿಟ್ಟೆ.

ಅಕಾಡೆಮಿಯ ಗೌರವ ಸ್ವೀಕಾರಕ್ಕೆ, ಕೃಷ್ಣಶಾಸ್ತ್ರಿಗಳು ದೆಹಲಿಗೆ ಹೋಗಲಾಗಿರಲಿಲ್ಲ. ಹಾಗಾಗಿ ಅಕಾಡೆಮಿಯ ಉನ್ನತಾಧಿಕಾರಿಯೊಬ್ಬರು ಸ್ವತಃ ಬಂದಿದ್ದರು. ಸ್ವತಃ ಶಾಸ್ತ್ರಿಗಳೇ ನಮ್ಮನ್ನೆಲ್ಲಾ ಸ್ವಾಗತಿಸಿ ಒಳಗೆ ಕರೆದುಕೊಂಡು ಹೋದರು. ಅವರ ಮನೆಯ ಪಡಸಾಲೆಯಲ್ಲಿ ಬೆತ್ತದ ಕುರ್ಚಿಯೊಂದನ್ನು ಅಲಂಕರಿಸಿ ಸಿದ್ಧಪಡಿಸಲಾಗಿತ್ತು. ಮನೆಯವರ ಜೊತೆ ನೆರೆಹೊರೆಯವರೂ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಹೆಂಗಸರು, ಮಕ್ಕಳೇ ಜಾಸ್ತಿ. ಸರಳ ಸಮಾರಂಭ. ದೆಹಲಿಯಿಂದ ಬಂದಿದ್ದ ಅಕಾಡೆಮಿಯ ಅಧಿಕಾರಿ ಸನ್ಮಾನ ಪತ್ರವನ್ನು ಓದಿ, ಪ್ರಶಸ್ತಿ ನೀಡಿ, ಹೂವು ಹಣ್ಣು ಕೊಟ್ಟು ಶಾಸ್ತ್ರಿಗಳನ್ನು ಗೌರವಿಸಿದರು.

ಶಾಸ್ತ್ರಿಗಳಿಗೆ ಸಂದ ಈ ಗೌರವ, ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಮಹತ್ತ್ವದ ಕೊಡುಗೆಗೋ, ಬಂಗಾಳಿ ಸಾಹಿತ್ಯ ಅನುವಾದ ಮಾಡಿದುದಕ್ಕೋ, ಅಥವಾ ಎರಡೂ ಸೇವೆಗೋ ನನಗೆ ಆಗ ಗೊತ್ತಾಗಲಿಲ್ಲ. ಪತ್ರಿಕಾ ವರದಿಗಾರರು ಟಿಪ್ಪಣಿ ಮಾಡಿಕೊಂಡರಾ? ಟಿ.ಎಲ್.ರಾಮಸ್ವಾಮಿಯವರು ಛಾಯಾಚಿತ್ರಗಳನ್ನು ತೆಗೆದರು. ನಂತರ ಎಲ್ಲರಿಗೂ ಉಪಾಹಾರವಾಯಿತು. ನಾನು ಈ ಕ್ಷಣದ ಪ್ರತ್ಯಕ್ಷ ಸಾಕ್ಷಿಯಾದದ್ದು, ನನ್ನ ದೇಹ ಆತ್ಮ ಚೈತನ್ಯಗಳಿಗೆ ದಿವ್ಯಾನುಭೂತಿ ದೊರೆತಂತಾಯಿತು. ಅಂದು ನಾನು ಎಷ್ಟು ಮುಗ್ಧ ಎಂದರೆ, ಮರುದಿನದ ಕೆಲವು ವೃತ್ತಪತ್ರಿಕೆಗಳನ್ನು ಕೊಂಡುಕೊಂಡು ಜೀವನಾನುಭವಗಳ ನಿಘಂಟಿನಲ್ಲಿ ಸೇರಿಸಬಹುದು ಎಂಬುದು ಹೊಳೆಯಲಿಲ್ಲ. ನನಗೆ ಆ ಕುರಿತು ಈಗಲೂ ಪಶ್ಚಾತ್ತಾಪವಿದೆ.

ಅರಾಕೃ ಅವರ ಮೊಮ್ಮಗ ಶ್ರೀಧರ ರಾವ್ ಅವರು ಸ್ಯಾನ್‌ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದ ಕನ್ನಡ ಕೂಟಗಳ ದೀರ್ಘಕಾಲದ ಪೋಷಕರು ಮತ್ತು ಹಿಂದಿನ ಅಧ್ಯಕ್ಷರು. ಫ್ಲೋರಿಡಾದಲ್ಲಿ 2004ರಲ್ಲಿ ನಡೆದ ಅಮೆರಿಕಾ ಕನ್ನಡ ಕೂಟಗಳ ಸಮಾವೇಶ (AKKA)ದಲ್ಲಿ, ನಾನು ಮೇಲಿನ ಘಟನೆಯನ್ನು ಶ್ರೀಧರ ರಾಯರಿಗೆ ಹೇಳಿದೆ, ಮತ್ತು "ಆಗ ನೀವೇನಾದರೂ ಅಲ್ಲಿ ಇದ್ದಿರಾ?" ಎಂದು ಪ್ರಶ್ನಿಸಿದೆ. ಅವರೂ ಆಗ ತುಂಬ ಪುಟ್ಟಹುಡುಗ. ಅಕಾಡೆಮಿಯ ಸನ್ಮಾನದ ಆ ಸಂಭ್ರಮ ಅವರಿಗೆ ನೆನಪಿದೆ. ಆದರೆ ತುಂಬ ಚಿಕ್ಕವರಾದುದರಿಂದ ಏನಾಗುತ್ತಿದೆ, ಏಕೆ ಎಂಬುದು ಆಗ ತಿಳಿದಿರಲಿಲ್ಲವಂತೆ.

ನನ್ನ ಸ್ಮೃತಿಕೋಶಗಳಲ್ಲಿ ತುಂಬಿರುವ, ಅರ್ಧ ಶತಮಾನದ ಹಿಂದಿನ ಈ ಘಟನೆ ನೆನೆದಾಗ, ಇನ್ನೊಂದು ಅಂತಹುದೇ ಘಟನೆ ನೆನಪಾಗುತ್ತದೆ. ಭಾರತದ ಕೀರ್ತಿಯನ್ನು ವಿಶ್ವಾದ್ಯಂತ ಹರಡಿದ ಸತ್ಯಜಿತ ರಾಯ್ ಆಗ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. 1992ರ ಆಸ್ಕರ್ ಜೀವಮಾನದ ಸಾಧನೆಯ ಪ್ರಶಸ್ತಿಯನ್ನು ಆಸ್ಪತ್ರೆಯಲ್ಲಿಯೇ ರಾಯ್ ಅವರಿಗೆ ನೀಡಲಾಯಿತು. ನಾವೆಲ್ಲ ಅದರ ವಿವರಗಳನ್ನು ಕಿರುತೆರೆಯಲ್ಲಿ ನೋಡಿ ಸಂಭ್ರಮಿಸಿದೆವು. ಆ ಪ್ರಶಸ್ತಿಯನ್ನು ಅಮೆರಿಕೆಯ ಹಾಲಿವುಡ್‌ನಿಂದ ಭಾರತದ ತಾಲಿವುಡ್‌ಗೆ ತೆಗೆದುಕೊಂಡು ಹೋದವರು ನನ್ನ ಬಂಗಾಳಿ ಪ್ರಿಯಮಿತ್ರ ಡಾ|| ದಿಲೀಪ್ ಬಸು. ಬಸು ಅವರು ಸಾಂತಾ ಕ್ರೂಜ್‌ನಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿದ್ದಾರೆ. ಅವರು ಮದುವೆಯಾಗಿರುವ ದಯಾನಿ, ಕನ್ನಡತಿ; ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ "ಸತ್ಯಜಿತ ರಾಯ್ ಫಿಲ್ಮ್ ಆರ್ಕೈವ್ಸ್"ನ ಕ್ಯೂರೇಟರ್. ಇದೊಂದು ಬಂಗಾಳ ಕರ್ನಾಟಕದ ಅಪರೂಪ ವಿವಾಹಾನುಬಂಧ. ಕೃಷ್ಣಶಾಸ್ತ್ರಿಗಳು ಆ ಕಾಲದಲ್ಲಿಯೇ ಬಂಗಾಳಿ ಕಲಿತು, ನೇರವಾಗಿ ಬಂಗಾಳಿಯಿಂದ ಕನ್ನಡಕ್ಕೆ ಅನುವಾದ ಮಾಡಿ "ಭಾಷಾ ಸೇತುವೆ" ನಿರ್ಮಿಸಿದ್ದರು. ಬಸು, ದಯಾನಿ ಜೋಡಿ ನೋಡಿದಾಗ, ಶಾಸ್ತ್ರಿಗಳು ಹಾಕಿದ ಬುನಾದಿಯ ಮೇಲೆ ನಿರ್ಮಾಣವಾದ ಶ್ರೀಗಂಧದ ಸೇತುವೆ (Golden Gate Bridge) ಇದು ಎನ್ನಿಸುತ್ತದೆ.

ನಮ್ಮಲ್ಲಿ ಅರವತ್ತು ವರ್ಷ ಪೂರೈಸಿದವರಿಗೆ ಷಷ್ಟಿಪೂರ್ತಿ ಶಾಂತಿ ಮಾಡುತ್ತೇವೆ. ಅದು ನಮ್ಮ ಸನಾತನ ಧರ್ಮ ಸಂಸ್ಕಾರ. ಎ.ಆರ್. ಕೃಷ್ಣಶಾಸ್ತ್ರಿಗಳ ಮಹದ್ಭವ್ಯ ಕೃತಿ "ವಚನ ಭಾರತ"ಕ್ಕೆ ಈಗ ಅಂತಹ ಷಷ್ಟ್ಯಬ್ದ ಸಂಭ್ರಮ. ನಾವು ಕೃತಿಯನ್ನೂ, ಕರ್ತೃವನ್ನೂ ಸ್ಮರಿಸಲು ಗೌರವಿಸಲು ಇದು ಸಕಾಲ. ಈ ಸಂಭ್ರಮದಲ್ಲಿ, ನಾನು ಸ್ವತಃ ಸಾಕ್ಷಿಯಾಗಿದ್ದ ಐತಿಹಾಸಿಕ ಕ್ಷಣವೊಂದನ್ನು ಇದೀಗ ಕನ್ನಡದ ಬಂಧುಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಎ.ಆರ್. ಕೃಷ್ಣಶಾಸ್ತ್ರಿಗಳನ್ನು ಹತ್ತಿರದಿಂದ ಸ್ವತಃ ಕಂಡು ಮಾತನಾಡಿಸಿದ ಧನ್ಯತೆ ನನ್ನಲ್ಲಿ ತುಂಬಿದೆ. ಅಂತರಜಾಲಕ್ಕೆ, ದಟ್ಸ್‌ಕನ್ನಡ ಜಾಲತಾಣಕ್ಕೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಸಿರಿಗನ್ನಡಂ ಗೆಲ್ಗೆ. (ಕನ್ನಡಾನುವಾದ : ಮಂಜುನಾಥ ಅಜ್ಜಂಪುರ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more