ಆಕ್ಲೆಂಡಲ್ಲಿ ಅಗಲಿದ ವಿಷ್ಣು, ಅಶ್ವತ್ಥ್ ನೆನಕೆ

ಆಕ್ಲೆಂಡ್ ನಗರದ ಡೊಮಿನಿಯನ್ ರಸ್ತೆಯ ಹಿರಿಯ ನಾಗರೀಕರ ಸಭಾಂಗಣದಲ್ಲಿ ಜನವರಿ ಒಂದನೇ ತಾರೀಕು ನ್ಯೂಜಿಲೆಂಡ್ ಕನ್ನಡ ಕೂಟ ಆಯೋಜಿಸಿದ್ದ ಹೊಸವರ್ಷದ ಸಮಾರಂಭವನ್ನು ಅಗಲಿದ ಕಲಾವಿದರ ಗೌರವಾರ್ಥ ಎರಡು ನಿಮಿಷಗಳ ಕಾಲ ಮೌನವಾಚರಿಸುವುದರೊಂದಿಗೆ ಆರಂಭಿಸಲಾಯಿತು. ಕನ್ನಡ ಕೂಟದ ಅಧ್ಯಕ್ಷ ರವಿ ಶಂಕರ್ ರಾವ್ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿ ಶುಭಕೋರಿದರು. ಡಾ.ವಿಷ್ಣು ಅವರ ಚಿತ್ರಗಳಿಂದಾಯ್ದ ಕೆಲವು ಸನ್ನಿವೇಶಗಳನ್ನು ಮತ್ತು ಹಾಡುಗಳನ್ನು ಪರದೆಯ ಮೇಲೆ ಪ್ರದರ್ಶಿಸಿದಾಗ ವಿಷ್ಣು ಎಲ್ಲೂ ಹೋಗಿಲ್ಲ ನಮ್ಮೊಡನೆಯೇ ಇದ್ದಾರೆ ಎನಿಸಿತು.
ಸಾಮಾನ್ಯವಾಗಿ ಕ್ರಿಸ್ಮಸ್ ಹಬ್ಬದ ವೇಳೆಗೆ ಬರುವ ಸಾಂತಾ ಸಭೆಗೆ ಆಗಮಿಸಿದಾಗ ನೆರೆದಿದ್ದವರಲ್ಲಿ ಅದರಲ್ಲೂ ಮಕ್ಕಳಲ್ಲಿ ಹರ್ಷೊಲ್ಲಾಸ ಮೂಡಿತು. ಸಾಂತಾನೊಡನೆ ಫೋಟೊ ತೆಗೆಸಿಕೊಂಡ ಮಕ್ಕಳು ಅವನಿಂದಲೇ ಉಡುಗೊರೆ ಸ್ವೀಕರಿಸಿ ಕುಣಿದಾಡಿದರು.
ನಂತರ ಕೂಟದ ಉಪಾಧ್ಯಕ್ಷ ವಸಂತ್ ಅವರು ಬೆಂಗಳೂರಿನ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥಾಪನಾ ಕಾರ್ಯದರ್ಶಿ ಶ್ರೀಹರಿಯವರನ್ನು ಸಭೆಗೆ ಪರಿಚಯಿಸಿದರು. ಶ್ರೀಹರಿಯವರು ಮಾತನಾಡಿ, ಕನ್ನಡ ನಾಡಿನಿಂದ ದೂರವಾದರೂ ಕನ್ನಡಕ್ಕೆ ಹತ್ತಿರವಿರುವ ನಿಮ್ಮನ್ನು ನೋಡಿ ಸಂತೋಷವಾಗಿದೆ ಎಂದರು. ಅವರು ಕನ್ನಡಕ್ಕೊಬ್ಬನೇ ಕೈ ಎಂದು ಪ್ರಸಿದ್ಧರಾದ ಟಿ.ಪಿ.ಕೈಲಾಸಂ ಅವರ ನಾಟಕಗಳಿಂದಾಯ್ದ ಕೆಲವು ಭಾಗಗಳ ರಸ ಘಳಿಗೆಗಳನ್ನು ಶ್ರೋತೃಗಳೊಂದಿಗೆ ವಿನಿಮಯ ಮಾಡಿಕೊಂಡರು.
ಗಂಗಾವತಿ ನರಸಿಂಹ ಜೋಶಿಯವರ ಹಾಸ್ಯದ ತುಣುಕುಗಳ ಪ್ರದರ್ಶನ, ಗುರು ಶಿಷ್ಯರು ಚಿತ್ರದ ಕೆಲವು ಸನ್ನಿವೇಶಗಳ ಮಿಮಿಕ್ರಿ, ಹಾಡು, ಕುಣಿತ, ಜೋಕ್ಸ್, ಎಲ್ಲವೂ ಕೂಡಿ ಹೊಸ ವರುಷಕೆ ಹೊಸ ಹರುಷವ ತಂದಿತು. ಸಭಿಕರಲ್ಲಿ ನಡೆದ ಸ್ಪರ್ಧೆಯ ಗಾನ ವಿನೋದ ಮಿಮಿಕ್ರಿಗಳಲ್ಲಿ ಡಾ. ವಿಷ್ಣು ಅಭಿನಯದ ಚಿತ್ರಗಳೇ ರಾರಾಜಿಸಿದ್ದು ಸಂದರ್ಭೋಚಿತವಾಗಿತ್ತು.
ಸಾಂತಾ ವೇಷಕ್ಕೆ ಕಳೆತಂದ ಬೆಂಗಳೂರು ಪ್ರಭಾಕರ್, ಕಾರ್ಯಕ್ರಮ ನಿರೂಪಕರಾದ ಸತ್ಯಕುಮಾರ್ ಕಟ್ಟೆ, ಗುರು ಶಿಷ್ಯರು ಚಿತ್ರದ ಮಿಮಿಕ್ರಿ ಮಾಡಿದ ಚಿ. ಸುಮಂತ ಮೀನಾಕ್ಷಿ, ಗಾಯಕಿ ಸುಷ್ಮಿತಾ ದೇಶಪಾಂಡೆ ಹಾಗೂ ಭಾಗವಹಿಸಿದ ಎಲ್ಲರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ಶ್ರದ್ಧೆಯಿಂದ ಆಯೋಜಿಸಿ, ಸೊಗಸಾದ ಭೋಜನ ಪ್ರಾಯೋಜಿಸಿದ ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯರು, ಕಾರ್ಯದರ್ಶಿ ಪ್ರಕಾಶ್ ಬಿರಾದರ್ ಮತ್ತು ಸಭಾಂಗಣ ನೈರ್ಮಲ್ಯದ ಬಗ್ಗೆ ಶ್ರಮಿಸಿದ ಸ್ವಯಂ ಸೇವಕರಾದ ಜಯಸಿಂಹ ವಡ್ಡಗಿರಿ ಹಾಗೂ ವಿನಯ್ ಅಂಗಡಿ ಎಲ್ಲರ ಮೆಚ್ಚುಗೆ ಗಳಿಸಿದರು.












Click it and Unblock the Notifications