ಪುಟ್ಟ ಪಾದಗಳಿಗೆ ಹೆಜ್ಜೆ ಗೆಜ್ಜೆಯ ಒಲವು

ನನ್ನ ಎರಡು ವರ್ಷ ಮೂರು ತಿಂಗಳು ಪ್ರಾಯದ ಮಗ ಪುಟ್ಟ ಸಾರಂಗನಿಗೆ ಮಧ್ಯಾಹ್ನದ ನಿದ್ರೆ ಸ್ವಲ್ಪ ತಡವಾಗಿಯೇ ಹತ್ತಿ ಸಂಜೆಯ ಆರು ಗಂಟೆಯ ಹೊತ್ತಿಗೆ ಅಪ್ಪನ ಮೃದು ದನಿ ಎಚ್ಚರಿಸಿತು. ಕನಸಿನಲ್ಲಿ ಸಮುದ್ರ ದಡದಲ್ಲಿ ಆಡುತ್ತಿದ್ದ ಮಗು, ಕೈಗಂಟಿದ ಮರಳಿನ ಕೊಳೆಯನ್ನು ಕಲ್ಪಿಸುತ್ತ ಕೈತೊಳೆಯಬೇಕೆಂದು ಬಚ್ಚಲಿನಡೆ ಹೆಜ್ಜೆ ಹಾಕತೊಡಗುತ್ತಿದ್ದಂತೆ ನೆನಪಾಯಿತು ಕೃಷ್ಣ ವೇಷ ತೊಡಸಲಿದ್ದಾಳೆ ಅಮ್ಮ, ತಾನೀಗ ಜಗದೋದ್ಧಾರನ ಹಾಡಿಗೆ ರಂಗದ ಮೇಲೆ ಹೋಗಬೇಕೆಂದು. ನಿದ್ದೆಯ ಮಂಪರಿನಲ್ಲೇ ಅಮ್ಮ ಕೊಟ್ಟ ಸೇಬಿನ ಹಣ್ಣನ್ನು ತಿನ್ನುತ್ತ ವೇಷ ಧರಿಸಿಕೊಂಡು ತಯಾರಾದ.
ಗಡಿಬಿಡಿಯಲ್ಲಿ ನನ್ನ ಕೈ ನಡುಗುತ್ತಿದ್ದರೂ ತಾನೇ ನೆನಪಿಸಿ ಕಣ್ಣಿನ ಕಾಡಿಗೆಯನ್ನು ಹಾಕಿಸಿಕೊಂಡೇ ಬಿಟ್ಟ. ಹಿನ್ನೆಲೆ ಸಂಗೀತ ಬಂದು ರಂಗವನ್ನು ಪ್ರವೇಶಿಸಿ ಮುಖದ ಮೇಲೆ ಬಿದ್ದ ಬೆಳಕು ಸಭಿಕರ ಉದ್ಗಾರಕ್ಕೆ ಒಮ್ಮೆ ಅವಾಕ್ಕಾದ ಮಗು ನಂತರ ಸುಧಾರಿಸಿಕೊಂಡು ಮುಗುಳ್ನಕ್ಕಿತು. ಮತ್ತೆ ಯಶೋಧೆಯೊಂದಿಗೆ ಆಟವಾಡುತ್ತ ತಿರುಗಿದ, ತಟ್ಟೆಯಲ್ಲಿಟ್ಟ ತಿಂಡಿ ತಿಂದ, ಅಮ್ಮ ಚಂದಮಾಮನನ್ನು ತೋರಿಸಿದ್ದನ್ನು ನೋಡಿದ, ಕಚಗುಳಿ ಮಾಡಿದಾಗ ಮನಸಾರೆ ನಕ್ಕ, ಕಣ್ಣಾ ಮುಚ್ಚಾಲೆಯಾಡುವಾಗ ಕೈಗೆ ಸಿಕ್ಕಿ, ಅಮ್ಮನ ಬೆನ್ನಿನ ಮೇಲೆ ಉಪ್ಪು ಮೂಟೆಯಾಗಿ ರಂಗದಿಂದ ನಿರ್ಗಮಿಸಿದ.
ಸಿದ್ಧತೆ ನಡೆಸುತ್ತಿದ್ದಾಗ ನಾನು ಅಗಣಿತ ಮಹಿಮ, ಮಗುಗಳ ಮಾಣಿಕ್ಯ, ಪರಮಪುರುಷನಾದ ಪುರಂದರ ವಿಠ್ಠಲನನ್ನು ಸ್ತುತಿಸಿ ಅಭಿನಯಿಸುತ್ತಿರುವಾಗಲೆಲ್ಲ ಕೈಕಾಲಿಗೆ ಅಡ್ಡಕಟ್ಟಿ ತಡೆಯುತ್ತಿದ್ದ ಹುಡುಗ ರಂಗದ ಮೇಲೆ ಸುಭಗನಂತೆ ಇದ್ದುದನ್ನು ಕಂಡು ಅಮ್ಮನಾದ ನನಗೇ ಆಶ್ಚರ್ಯ. ನಾನು ಮುಂದಿನ ಪ್ರದರ್ಶನ ಅವಕಾಶಗಳಿಗೆ ಅಭ್ಯಾಸ ನಡೆಸುತ್ತಿದ್ದಂತೆ ಮತ್ತೆ ಮತ್ತೆ ಜಗದೋದ್ಧಾರನ ಅಭಿನಯಿಸುವ ಆಸಕ್ತಿ ತೋರಿಸಿ ಬಾಸ್ಟನ್ ಹಾಗೂ ಕನ್ನೆಕ್ಟಿಕಟ್ ಕನ್ನಡ ಕೂಟಗಳಲ್ಲಿ ನನ್ನೊಂದಿಗೆ ರಂಗದ ಮೇಲೆ ಬಂದು ಖುಷಿ ಪಟ್ಟದ್ದನ್ನು ನಿಮ್ಮೆಲ್ಲರೊಂದಿಗೆ ಹೀಗೆ ಹಂಚಿಕೊಳ್ಳುತ್ತಿದ್ದೇನೆ.
ಒಂದು ಪ್ರದರ್ಶನದಲ್ಲಿ ಗಣಪನಿಗರ್ಪಿಸಿದ ಬಾಳೆ ಹಣ್ಣು ಬಾಲಕೃಷ್ಣನಿಗೆ ನೈವೇದ್ಯವಾಯಿತು ಇನ್ನೊಂದು ಪ್ರದರ್ಶನದಲ್ಲಿ ತಿನ್ನಲು ಏನೂ ಸಿಕ್ಕದೆ ಕಳ್ಳ ನೋಟ ಬೀರಿ ರಂಗದಿಂದ ಮರೆಯಾಗಲು ಪ್ರಯತ್ನಿಸಿದವನನ್ನು ಪುನಃ ತಿರುಗಿಸಿದ್ದು ಜಾಸ್ತಿಯಾಗಿ ತಲೆ ತಿರುಗಿ ಬಿದ್ದ ಸಹಜ ಸ್ಥಿತಿ ನನ್ನನ್ನೂ ಮತ್ತು ನೆರೆದ ಎಲ್ಲರನ್ನೂ ಅಚ್ಚರಿಗೊಳಿಸಿತ್ತು.












Click it and Unblock the Notifications