ಅಮೆರಿಕೆಯ ರಾಜಧಾನಿಯಲ್ಲಿ ಶಾಸಕರ ಔತಣಕೂಟ

ಸಂಜೆಯ ರವಿ ಮುಳುಗುತ್ತಾ ಕತ್ತಲಾದರೂ ಕರ್ನಾಟಕದಿಂದ ಬಂದ ಅತಿಥಿಗಳ ಸುಳಿವಿಲ್ಲ. ಬಂದ ಕನ್ನಡಿಗರು ಹರಟೆ ಹೊಡೆಯುತ್ತಾ ಅಂತೂ ಗಡಿಯಾರ 8ರ ಗಡಿ ದಾಟಿತ್ತು. ವಿಧಾನಸಭೆ ಸ್ಪೀಕರ್ ಬರುತ್ತಿದ್ದಾರಂತೆ, ವಿಧಾನ ಪರಿಷತ್ ಸಭಾಪತಿಯವರೂ ಬರುತ್ತಿದ್ದಾರಂತೆ. ಅವರಗಳ ಹೆಸರುಗಳನ್ನು ನೆನೆಸಿಕೊಂಡು ಕಡೆಗೂ ಜಗದೀಶ್ ಶೆಟ್ಟರ್ ಅವರನ್ನು ಗುರುತಿಸಿದರು. ಉದಯ ಟಿವಿಯಲ್ಲಿ ನೋಡಿದ್ದೇನೆ ಎಂದು ಒಬ್ಬರು ಹೇಳಿದರೆ, ಬಿಜೆಪಿಯಲ್ಲಿನ ಹಿರಿಯ ರಾಜಕಾರಣಿ ಎಂದು ಮತ್ತೊಬ್ಬರು ಉಲಿದರು. ಮುಖ್ಯಮಂತ್ರಿ ಚಂದ್ರು ಅವರೂ ಬರುತ್ತಿದ್ದಾರೆ ಎಂದು ತಿಳಿದು ಅವರ ಬಗ್ಗೆ ಎಲ್ಲರೂ ತಮಗೆ ಪರಿಚಯ ಇರುವ ರೀತಿ ಮಾತನಾಡಿಕೊಂಡರು.
ಅಂತೂ ಗಡಿಯಾರ 9 ಮುಟ್ಟುವ ಹೊತ್ತಿಗೆ ಶಾಸಕರ ದಂಡೇ ಬಂತು. ಎಲ್ಲರಿಗೂ ಆಶ್ಚರ್ಯ. 30ಕ್ಕೂ ಹೆಚ್ಚು ಜನರ ತಂಡ. ಮನೆಗೆ ಬಂದ ಅತಿಥಿಗಳ ಸಂಖ್ಯೆಯೂ 70ರಷ್ಟಿತ್ತು. ಹೀಗಾಗಿ ಒಟ್ಟಾಗಿ ಅತಿಥಿಗಳ ಸಂಖ್ಯೆ 100ರ ಹತ್ತಿರವಾಗಿತ್ತು. ಈ ಭೋಜನಕೂಟ ಅನೌಪಚಾರಿಕವಾಗಿದ್ದರೂ ನಾವಿಕ ಪದಾಧಿಕಾರಿಗಳಾದ ಡಾ|| ರಾಮಪ್ಪ, ಡಾ||ಕೇಶವ ಬಾಬು, ಸುರೇಶ್ ರಾಮಚಂದ್ರ ಹಾಗೂ ವಲ್ಲೀಶ ಶಾಸ್ತ್ರಿಗಳು, ಕರ್ನಾಟಕ ವಿಧಾನ ಪರಿಷತ್ ಸಭಾಪತಿ ವೀರಣ್ಣ ಮತ್ತಿಕಟ್ಟಿ ಹಾಗೂ ವಿಧಾನ ಸಭಾಪತಿ ಜಗದೀಶ್ ಶೆಟ್ಟರ್ ಅವರ ನೇತೃತ್ವದ ಈ ಶಾಸಕರ ನಿಯೋಗವನ್ನು ವಿಶೇಷವಾಗಿ ಸ್ವಾಗತಿಸಿದರು.
ಯಾವುದೇ ಅಧಿಕೃತ ಕಾರ್ಯಕ್ರಮವಿಲ್ಲದಿದ್ದರೂ ಎಲ್ಲರ ಕ್ಷಿಪ್ರ ಸ್ವಪರಿಚಯದೊಂದಿಗೆ ಅನೌಪಚಾರಿಕ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಶಾಸಕರ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು. ನಂತರ ಮಾತನಾಡಿದ ಶೆಟ್ಟರ್ ಹೊಸ ಸಂಘ ನಾವಿಕ ಮೂಲಕ ಕನ್ನಡ ಸೇವೆಗೆ ಮುಂದಾಗಿರುವುದನ್ನು ಶ್ಲಾಘಿಸಿ ಮುಂದಿನ ವರ್ಷ ಜುಲೈನಲ್ಲಿ ಬರುವ ಸಮ್ಮೇಳನಕ್ಕೆ ಶುಭಹಾರೈಸಿ ತಮ್ಮಿಂದಾಗುವ ಎಲ್ಲ ಸಹಕಾರವನ್ನು ಕೊಡುವುದಾಗಿ ಹೇಳಿದರು.
ಅದೇ ಮಾತನ್ನು ಮುಂದುವರಿಸಿದ ಮುಖ್ಯಮಂತ್ರಿ ಚಂದ್ರು ಅವರೂ ಸಹ ಎಲ್ಲ ಸಹಾಯವನ್ನು ಮಾಡುವುದಾಗಿ ಹೇಳಿದರು. ಆಗಮಿಸಿದ್ದ ಶಾಸಕರುಗಳು ಸಹ ಮಾತನಾಡಿ ಮಾತೃಭೂಮಿಯಿಂದ ದೂರವಾಗಿದ್ದರೂ ಕನ್ನಡದ ಬಗ್ಗೆ ಇಷ್ಟೊಂದು ಅಭಿಮಾನ ಇಟ್ಟಿರುವುದನ್ನು ಆಶ್ಚರ್ಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಅತಿಥಿ ಸತ್ಕಾರದಲ್ಲಿ ಸ್ಥಳೀಯ ಕನ್ನಡಿಗರಲ್ಲಿ ಸೈಎನಿಸಿಕೊಂಡಿರುವ ಸುರೇಶ್ ದಂಪತಿಗಳು ಏರ್ಪಡಿಸಿದ್ದ ಭರ್ಜರಿ ಭೋಜನಕೋಟ ಮುಗಿಸಿ ಬೈ ಹೇಳುವ ಹೊತ್ತಿಗೆ ಗಡಿಯಾರ ರಾತ್ರಿ 11ನ್ನು ಹೊಡೆಯುತ್ತಿತ್ತು.












Click it and Unblock the Notifications