ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರೈವಿಂಗ್ ಲೈಸೆನ್ಸಿಗಾಗಿ ಎಷ್ಟೆಲ್ಲ ಪರದಾಟ!

By Staff
|
Google Oneindia Kannada News

Poornima Bhat, London
ಪ್ರತಿದಿನ ನಾವು ಒಂದಲ್ಲ ಒಂದು ಪರೀಕ್ಷೆಗೆ ಸಿದ್ಧವಾಗಬೇಕಾಗುತ್ತದೆ. ಬೇಕೋ ಬೇಡವೋ; ಪಾಸೋ ಫೇಲೋ. ಅಂತೂ ಬದುಕಿನ ಬಂಡಿ ತನ್ನ ಗುರಿಯತ್ತ, ವೇಗವಾಗಿ ಆದರೆ ಸುರಕ್ಷಿತವಾಗಿ ಸಾಗುತ್ತಿರಬೇಕು. ಇದಕ್ಕೆ ನಮ್ಮ ಪೂರ್ಣಿಮಾನೇ ಒಂದು ಸಾಕ್ಷಿ. ಅವರು ಈಗಷ್ಟೆ ಬ್ರಿಟನ್ ಮೋಟಾರ್ ಡ್ರೈವಿಂಗ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಅವರ ಆತ್ಮ ವಿಶ್ವಾಸದ ಟ್ಯಾಂಕ್ ತುಂಬಿದೆ. ಇನ್ನು ಸ್ವಲ್ಪ ದಿವಸ ಕಾಯುವುದಂತೆ. ಅವರ ಕಾರು ಗಂಡನ ಕಾರಿಗಿಂತ ಸ್ಪೀಡಾಗಿ ಸೇಫಾಗಿ ಲಂಡನ್ನಿನ ಬೌಲೇವಾರ್ಡ್ಗಳಲ್ಲಿ ಓಡುವುದನ್ನು ನೀವೇ ನೋಡುವಿರಂತೆ.

*ಪೂರ್ಣಿಮಾ ಭಟ್ಟ ಸಣ್ಣಕೇರಿ, ಲಂಡನ್

ಉಫ್..' ಅಂತ ನಿಟ್ಟುಸಿರುಬಿಟ್ಟಿದ್ದೆ. ಅಷ್ಟು ಸಶಬ್ದವಾಗಿ ಉಸಿರು ಹೊರ ಹಾಕಿದ್ದಕ್ಕೋ ಏನೋ, ಎಕ್ಸಾಮಿನರ್ ಏನಾಯ್ತು ಇವಳಿಗೆ' ಅನ್ನೋ ರೀತಿಯಲ್ಲಿ ಕಣ್ಣರಳಿಸಿದ್ದ. ಆ ಕ್ಷಣಕ್ಕೆ- ಕಳೆದ ನಲವತ್ತೈದು ನಿಮಿಷ ತಾಳ್ಮೆ ವಹಿಸಿ ನನ್ನ ಪರೀಕ್ಷೆ ತೆಗೆದುಕೊಂಡಿದ್ದ ಎಕ್ಸಾಮಿನರ್ ಕೈ ಕುಲುಕುವುದನ್ನೂ ಮರೆತಿದ್ದೆ. 'ನೀನು ರಸ್ತೆಯ ಮೇಲೆ ಸೇಫ್ ಅನ್ನಿಸುತ್ತೀಯಾ ಈಗ. ಫ್ರಂ ನೌ ಆನ್, ಯೂ ಆರ್ ಎ ಫುಲ್ಲೀ ಲೈಸೆನ್ಸ್ಡ್ ಡ್ರೈವರ್' ಅಂದಾಗ ಇಡೀ ಮೈ ನಿರಾಳ, ಹಗುರ.

ಎಕ್ಸಾಮಿನರ್ 'ಗುಡ್ ಲಕ್' ಅಂದು ಕಾರಿಳಿದು ಹೋದ ಮೇಲೆ ಏನಿಲ್ಲವೆಂದರೂ ಐದು ನಿಮಿಷ ಬೇಕಾಯ್ತು ಸುಧಾರಿಸಿಕೊಳ್ಳಲು. ಇದೆಲ್ಲ ಶುರುವಾಗಿ ಹತ್ತಾರು ತಿಂಗಳೇ ಆಯಿತು. ಮೊದಲಷ್ಟು ದಿನ ಬಸ್ಸಿನಲ್ಲೇ ಆಫೀಸಿಗೆ ಅಡ್ಡಾಡಿದೆ. ನಂತರ ಮನೆಯಲ್ಲೇ ಯಾಕೆ ಕಾರ್ ನಿಲ್ಲಿಸಬೇಕು, ಅದರಲ್ಲೇ ಆಫೀಸಿಗೆ ಹೋಗಿ ಬರೋಣ ಅಂತ ನಿರ್ಧಾರವಾಯಿತು. ಹೇಗೂ ಬೆಂಗಳೂರಿನಲ್ಲಿ ಹತ್ತು ಡ್ರೈವಿಂಗ್ ಕ್ಲಾಸ್ ಮುಗಿಸಿ 'ಇಂಡಿಯನ್ ಡ್ರೈವಿಂಗ್ ಲೈಸೆನ್ಸ್" ಗಿಟ್ಟಿಸಿಕೊಂಡಾಗಿತ್ತು. ಈ ದೇಶದಲ್ಲಿ ಒಂದು ವರ್ಷ ಕಾರ್ ಇನ್ಶೂರೆನ್ಸ್ ಸಿಕ್ಕಲು 'ಇಂಡಿಯನ್ ಡ್ರೈವಿಂಗ್ ಲೈಸೆನ್ಸ್" ಸಾಕಲ್ಲ!

ಒಂದು ವರ್ಷದ ಒಳಗೆ ಯುನೈಟೆಡ್ ಕಿಂಗ್ಡಮ್ ಲೈಸೆನ್ಸ್ ತೆಗೆದುಕೊಳ್ಳೋದು ಯಾವ ಮಹಾ ವಿಷಯ ಅಂದುಕೊಂಡಿದ್ದೂ ಆಯ್ತು. ಮೊದಮೊದಲು ಇಲ್ಲಿಯ ಡ್ರೈವಿಂಗ್ ಸ್ಕೂಲಿನಲ್ಲಿ ತೆಗೆದುಕೊಂಡ ಮೂರ್ನಾಲ್ಕು ಕ್ಲಾಸುಗಳು, ಪ್ಯಾಸೆಂಜರ್ ಸೀಟಿನಲ್ಲಿ ಕೂತೇ ಗುರುತಿಸಲು ಕಲಿತ ರೋಡ್ ಸಿಗ್ನಲ್ಗಳು, ಗಂಡನನ್ನು ಜೊತೆಗಿಟ್ಟುಕೊಂಡು ಶಾಂತವಾಗಿದ್ದ ರೋಡಿನಲ್ಲಿ ಕೆಲಬಾರಿ ಮಾಡಿದ ಡ್ರೈವ್, ಇದಲ್ಲಕ್ಕಿಂತ ಹೆಚ್ಚಾಗಿ ಭಂಡ ಧೈರ್ಯ - ಇಷ್ಟು ಕಾರಣಗಳು ಸಾಕದವು ನಾನು ಕಾರಿನೊಂದಿಗೆ ರೋಡಿಗಿಳಿಯಲು!

ಬರೀ ನಾಲ್ಕು ಮೈಲಿ ದೂರದಲ್ಲಿರುವ ಆಫೀಸ್. ಒಂದೇ ವಾರದಲ್ಲಿ ರಸ್ತೆ ಪರಿಚಿತವಾಗಿಹೋಯ್ತು. ಈ ರಸ್ತೆಯನ್ನು ಬಿಟ್ಟರೆ ಬೇರೆ ರೋಡಿನಲ್ಲಿ ಡ್ರೈವ್ ಮಾಡುವ ಪ್ರಮೇಯವೇ ಬರಲಿಲ್ಲ. ಈ ಸಡಗರದಲ್ಲಿ ತಿಂಗಳುಗಳು ಉರುಳಿದ್ದೂ ಗೊತ್ತಾಗಲಿಲ್ಲ. ಸರಿ, ಒಂದಲ್ಲ ಒಂದು ದಿನ ಈ ಡ್ರೈವಿಂಗ್ ಟೆಸ್ಟ್ ಅನ್ನೋ ಮಹಾಯುದ್ಧಕ್ಕೆ ಸಿದ್ಧವಾಗಲೇ ಬೇಕಲ್ಲ. ಪ್ರಾಕ್ಟಿಕಲ್ ತೆಗೆದುಕೊಳ್ಳುವ ಮೊದಲು ಥಿಯರಿ! ನೂರಾರು ಪುಟದ "ದಿ ಹೈ ವೇ ಕೋಡ್" ಅನ್ನೋ ಪುಸ್ತಕ, ಸಾವಿರಾರು ಪ್ರಶ್ನೋತ್ತರಗಳಿರುವ "ಪಾಸಿಂಗ್ ದ್ ಥಿಯರಿ ಟೆಸ್ಟ್" ಸಿ.ಡಿ, ಹತ್ತಾರು ಕ್ವಿಝ್ ಇವುಗಳೊಂದಿಗೆ ವಾರಗಟ್ಟಲೇ ಗುದ್ದಾಡಿದ್ದಾಯ್ತು.

'ಪಾಪ, ನಮ್ ಹುಡ್ಗಿ- ಪಿಯೂಸಿ ಎಕ್ಸಾಮಿಗೂ ಇಷ್ಟು ಕಷ್ಟಪಟ್ಟು ಓದಿರಲಿಕ್ಕಿಲ್ಲ" ಅಂದ ಗಂಡನ ಕೀಟಲೆ ಮಾತಿಗೆ ಪೆದ್ದು ಪೆದ್ದಾಗಿ ನಕ್ಕರೂ ಥಿಯರಿ ಟೆಸ್ಟ್ ಪಾಸ್ ಮಾಡಿದೆ. ನಂತರವೇ ಗೊತ್ತಾಗಿದ್ದು - ಮುಂದಿದೆ ಮಾರಿಹಬ್ಬ ಎಂದು! ಹತ್ತು ಸಲ ತಾರೀಕು ನೋಡಿ, ನನ್ನ ಡ್ರೈವಿಂಗ್ ಅಷ್ಟೇನೂ ಖರಾಬಾಗಿಲ್ಲ ಅಲ್ಲವಾ ಎಂದು ಹೆಜ್ಜೆ ಹೆಜ್ಜೆಗೂ ಕೇಳಿ, ಇನ್ನೇನು - ತಿಂಗಳು ಕಳೆದರೆ ಇನ್ಶೂರೆನ್ಸ್ ಸಿಗದೆ ಪರದಾಡಬೇಕಾಗುತ್ತದೆ ಅಂತಾದ ಮೇಲೆ ಪ್ರಾಕ್ಟಿಕಲ್ ಡ್ರೈವಿಂಗ್ ಟೆಸ್ಟ್ ಬುಕ್ ಮಾಡಿದ್ದೆ. ನಂತರವೂ 'ಮೀಟರ್" ಸಾಕಾಗದೇ ಒಮ್ಮೆ ಮುಂದೂಡಿದ್ದೆ.

ಈ ಬಾರಿ ಮಾತ್ರ, ಆಗಿದ್ದಾಗಲಿ - ಒಂದು ಕೈ ನೋಡೇ ಬಿಡೋಣ ಎಂದೇ ಧೈರ್ಯ ಮಾಡಿದ್ದೆ. ಬೇರೆ ಬೇರೆ ರೋಡಿನಲ್ಲಿ ಡ್ರೈವ್ ಮಾಡಲು ಶುರುವಿಟ್ಟಿದ್ದೇ ಪ್ರಾಕ್ಟಿಕಲ್ ಟೆಸ್ಟಿನ ಭಯಂಕರ ರೂಪ ಬಿಚ್ಚಿಕೊಳ್ಳತೊಡಗಿತು. ಬರೋಬ್ಬರಿ 45 ನಿಮಿಷಗಳ ಟೆಸ್ಟ್. ಡ್ರೈವ್ ಮಾಡುವ ವ್ಯಕ್ತಿಗೆ ಕಣ್ಣು ಸರಿಯಾಗಿ ಕಾಣುತ್ತದೆಯಾ ಎಂಬಲ್ಲಿಂದ ಶುರುವಾಗುತ್ತದೆ ಈ ಪರೀಕ್ಷೆ. ಬಾನೆಟ್ ತೆಗೆದು ಇಂಜಿನ್ ಆಯಿಲ್, ಬ್ರೇಕ್ ಆಯಿಲ್, ಕೂಲಂಟ್ ದ್ರವ ಸುಡುಗಾಡು - ಸುಂಟಿಗಳೆಲ್ಲ ಎಲ್ಲೆಲ್ಲಿ ಎಷ್ಟೆಷ್ಟು ಇರಬೇಕು ಗೊತ್ತಿದೆಯಾ.. ಕಾರಿನ ಒಳಗೆ ಇರುವ ಎಲ್ಲಾ ಅದುಮುಗುಂಡಿಗಳ ಕಾರ್ಯಾಚರಣೆಯ ಪರಿಚಯ ಇದೆಯಾ.. ಬ್ರೇಕ್ ಲೈಟ್, ಇಂಡಿಕೇಟರ್, ಫಾಗ್ ಲೈಟ್ ಎಲ್ಲವನ್ನೂ ಆಪರೇಟ್ ಮಾಡುವುದು ಗೊತ್ತಾ?

ಇದು ಎರಡನೇ ಹಂತ. ನಂತರ ನಲವತ್ತು ನಿಮಿಷಗಳ ಡ್ರೈವಿಂಗ್ ಸಮಯದಲ್ಲಿ ಪ್ರತಿ ಬಾರಿಯೂ 360 ಕೋನದಲ್ಲಿ ತಲೆ - ಕಣ್ಣು ತಿರುಗಿಸಿ ಸೇಫ್ ಆಗಿ ಡ್ರೈವ್ ಮಾಡುತ್ತಿದ್ದೀನಾ ಎಂದು ಪರೀಕ್ಷೆ ಮಾಡು, ಪಕ್ಕದಲ್ಲೇ ಕೂತು ಸೂಚನೆ ಕೊಡುತ್ತಿರುವ ಎಕ್ಸಾಮಿನರ್ ಹೇಳಿದ್ದೆಲ್ಲವನ್ನೂ ಮಾಡು, ಕನಿಷ್ಠ ಐದು ಬಾರಿ ರೋಡಿನ ಎಡ ಭಾಗದಲ್ಲಿ ಫುಟ್ ಪಾತಿಗೆ ಸಮಾನಾಂತರದಲ್ಲಿ ಕಾರ್ ನಿಲ್ಲಿಸು, ನಿಲ್ಲಿಸುವಾಗ ಇಂಡಿಕೇಟರ್ ಹಾಕು, ಮತ್ತೆ ಹೊರಡುವಾಗ ಪಾದಚಾರಿಗಳ ಕಡೆ ಲಕ್ಷ್ಯವಿಡು, ವೇಗದ ಮಿತಿ ಇರುವ ರಸ್ತೆಯಲ್ಲಿ ಅಷ್ಟೇ ವೇಗವನ್ನು ಕಾಯ್ದುಕೋ, ಬೇರೆ ವಾಹನಗಳು ಕಂಡಾಗ/ಬಂದಾಗ ಸಜ್ಜನನಂತೆ ವರ್ತಿಸು, ಪ್ರತೀ ಎರಡು ನಿಮಿಷಕ್ಕೊಮ್ಮೆ ಕಾರಿನ ಕನ್ನಡಿಯನ್ನು ಗಮನಿಸುತ್ತಿರು... ಈ ನಿಯಮಗಳ ಪಟ್ಟಿ ಅನಂತ, ಅಗಾಧ!

ಎಲ್ಲಕ್ಕಿಂತ ಕಠಿಣವಾದದ್ದು- 50 ಅಥವಾ 60 ಮೈಲಿ ವೇಗದ ಮಿತಿಯ ರೋಡಿನಲ್ಲಿ 40 ಮೈಲಿ ವೇಗದಲ್ಲಿ ಹೋದರೆ - ಅದು ಆತ್ಮ ವಿಶ್ವಾಸದ ಕೊರತೆ! ಯಾವುದೇ ಒಂದು ನಿಯಮವನ್ನು ಪಾಲಿಸದಿದ್ದರೆ ಅದು 'ಮೈನರ್ ಮಿಸ್ಟೇಕ್" ಅಥವಾ ಗಂಭೀರವಲ್ಲದ ತಪ್ಪು. ಬೇರೆ ವಾಹನ ಚಾಲಕರನ್ನು, ಪಾದಚಾರಿಗಳನ್ನು, ಸೈಕಲ್ ಸವಾರರನ್ನು ಕಡೆಗಣಿಸಿದರೆ ಅಥವಾ ಸಿಟ್ಟಿಗೇಳಿಸಿದರೆ ಅದು 'ಸೀರಿಯಸ್ ಮಿಸ್ಟೇಕ್" ಅಥವಾ ಗಂಭೀರ ತಪ್ಪು. ಇಂತಹ ಒಂದು ತಪ್ಪು ಸಾಕು - ಡ್ರೈವಿಂಗ್ ಟೆಸ್ಟ್ ತಲೆ ಕೆಳಗಾಗಲು! ನನಗಿಂತ ಮೊದಲೇ ಟೆಸ್ಟ್ ಪಾಸಾದ ಗಂಡ, ಸಾಕಷ್ಟು ಬೆವರು ಸುರಿಸಿದ ನನ್ನಿಂದ ಪದೇ ಪದೇ ಆಗುತ್ತಿರುವ ತಪ್ಪುಗಳನ್ನು ಸರಿಪಡಿಸಲು. ಪ್ರತಿ ಬಾರಿ ಡ್ರೈವಿಂಗ್ ಪ್ರಾಕ್ಟೀಸ್ ಮಾಡಲು ಹೊರಟಾಗಲೂ ಖುಷಿ ಖುಷಿಯಾಗಿ ಹೊರಡುವ ನಾವು ಹತ್ತೇ ನಿಮಿಷದಲ್ಲಿ ಗಲಾಟೆ ಶುರುಮಾಡಿಕೊಳ್ಳುತ್ತಿದ್ದೆವು.

'ಬೇರೆಲ್ಲಾ ನೀಟಾಗಿ ಮಾಡ್ತೀಯಾ - ಇಷ್ಟೆಲ್ಲ ಪಟಾಕಿ ಹೊಡೀತೀಯಾ, ಮ್ಯಾಥ್ಸು - ಡ್ರೈವಿಂಗ್ ಎರಡು ಮಾತ್ರ ಯಾಕೆ ಇಷ್ಟೆಲ್ಲ ಕಷ್ಟ ನಿಂಗೆ?" ಗಂಡನ ತಮಾಷೆ. 'ಜಗತ್ತಿನ ಎಲ್ಲ ಗಂಡಸರೂ ತಮ್ಮಷ್ಟು ಶ್ರೇಷ್ಠ ಡ್ರೈವರ್ಸ್ ಯಾರೂ ಇಲ್ಲ ಅಂದುಕೋತಾರೆ. ಅವರಲ್ಲಿ ನೀನೂ ಒಬ್ಬ" ನನ್ನ ಬಿಗುಮಾನ. ನಾನು ಇನ್ನೊಬ್ಬ ಡ್ರೈವಿಂಗ್ ಟೀಚರ್ರಿಗೆ ಶರಣಾದದ್ದು, ಪ್ರತಿ ಬಾರಿಯೂ ನಾ ಮಾಡುವ ಹೊಸ ಹೊಸ ತಪ್ಪುಗಳಿಗೆ ಅವರೂ ಬೆರಗಾದದ್ದು ಬೇರೆಯದೇ ವಿಷಯ ಬಿಡಿ. ಇಷ್ಟೆಲ್ಲ ಥರಾವರಿ 'ಡ್ರೈವಿಂಗ್ ಹಿಸ್ಟರಿ"ಯನ್ನು ಕಂಕುಳಿನಲ್ಲಿ ಇಟ್ಟುಕೊಂಡೇ ರಸ್ತೆಗಿಳಿದಿದ್ದೆ ನಾನು ಎಕ್ಸಾಮಿನರ್ ಜೊತೆಗೆ.

ಹಿಂದಿನ ರಾತ್ರಿ ಸುಮಾರು ಒಂದು ಗಂಟೆಯವರೆಗೂ ನಿದ್ದೆ ಬಂದಿರಲಿಲ್ಲ. ಒಂದು ವಾರದಿಂದಲೂ ಡ್ರೈವಿಂಗ್ ಟೆಸ್ಟ್ ಫೇಲ್ ಆದಂತೆ ಕನಸು ಬೇರೆ! ಪರೀಕ್ಷೆಯ ಸಮಯದಲ್ಲಿ ಅದೆಲ್ಲ ನೆನಪಾಗುತ್ತಿತ್ತು. ಆದರೂ ಸುಮಾರು ಇಪ್ಪತ್ತು ನಿಮಿಷಗಳ ಕಾಲ ವಾಹನ ಚಲಾವಣೆಯನ್ನು ಸರಿಯಾಗಿಯೇ ಮಾಡಿದೆ. ಒಂದು ಹಂತದಲ್ಲಿ ಎಕ್ಸಾಮಿನರ್ 'ಟೇಕ್ ಲೆಫ್ಟ್" ಅಂದಾಗ ಬಲ ಯಾವುದು ಎಡ ಯಾವುದು ಎಂದು ದಿಗಿಲಾದರೂ ಹೇಗೋ ಮ್ಯಾನೇಜ್ ಮಾಡಿದ್ದೆ. ಇನ್ನೇನು - ಹತ್ತು ನಿಮಿಷದಲ್ಲಿ ಟೆಸ್ಟ್ ಮುಗಿಯುತ್ತಿದೆ ಅನ್ನುವಾಗ ಅದೆಲ್ಲಿಂದಲೋ ಒಂದು ಕಾರು ಅಡ್ಡ ಬಂದದ್ದರಿಂದ ಬಲವಾಗಿ ಬ್ರೇಕ್ ಒತ್ತಲೇ ಬೇಕಾಯ್ತು.

ಎಕ್ಸಾಮಿನರ್ ಮೆಟ್ಟಿ ಬಿದ್ದಿದ್ದ! ಅಲ್ಲಿಗೆ - ನನ್ನ ಹಣೆಯ ಬರಹ ಊಹಿಸಿಬಿಟ್ಟಿದ್ದೆ. ಆಮೇಲೆ 'ಫೇಲ್ ಆಗಿಯಾಯ್ತು - ಇನ್ನೇನು" ಎಂಬ ನಿರಾಳತೆಯಿಂದ ಕಾರು ಓಡಿಸಿದ್ದೆ. ಆಗಲೇ ಈ ಪವಾಡ ಸಂಭವಿಸಿದ್ದು! ಎಕ್ಸಾಮಿನರ್ 'ಯೂ ಹ್ಯಾವ್ ಪಾಸ್ಡ್ ಯುವರ್ ಡ್ರೈವಿಂಗ್ ಟೆಸ್ಟ್" ಅಂದು ಬಿಟ್ಟ! ಆಗಲೇ ನಾನು ನಿಟ್ಟುಸಿರಿಟ್ಟಿದ್ದು, ಎಕ್ಸಾಮಿನರ್ ಕೈ ಕುಲುಕುವುದನ್ನೂ ಮರೆತದ್ದು! ನಂತರ ಆಫೀಸಿನಿಲ್ಲಿ ನನ್ನ ವೀರಗಾಥೆ ಕೇಳಿ ಸನ್ಮಾನಿಸುವುದು ಒಂದೇ ಬಾಕಿ. ಕಿರಿಯ ಸಹೋದ್ಯೋಗಿಯೊಬ್ಬ ತನ್ನ ಡ್ರೈವಿಂಗ್ ಟೆಸ್ಟ್ ಮುಂದಿನ ತಿಂಗಳಿದೆ - ಏನಾಗಲಿದೆಯೋ ಗೊತ್ತಿಲ್ಲ ಎಂದು ಮುಖ ಚಿಕ್ಕದು ಮಾಡಿದಾಗ 'ನಾಟ್ ಟು ವರಿ ಮೇಟ್. ಈಸಿಯಾಗಿ ಪಾಸ್ ಆಗ್ತೀಯಾ" ಅಂತ ಹೇಳುವಷ್ಟು ಆತ್ಮ ವಿಶ್ವಾಸ ನನಗೆ ಎಲ್ಲಿಂದ ಬಂತು ಅನ್ನುವುದಕ್ಕೆ ಇನ್ನೂ ಉತ್ತರ ಹುಡುಕಲು ಸಾಧ್ಯವಾಗಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X