ಮಲ್ಲಿಗೆ ಚಪ್ಪರದ ಕೆಳಗೆ ಸಂಕ್ರಾಂತಿ ಹಾಡು
ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣದೆಡೆಗೆ ತನ್ನ ಚಲನೆಯನ್ನು ಬದಲಿಸಿ ಮಕರ ರಾಶಿಯನ್ನು ಪ್ರವೇಶ ಮಾಡುವ ವೇಳೆಯನ್ನು ಭಾರತದ ಹಲವಾರು ಪ್ರದೇಶಗಳಲ್ಲಿ ಮಕರ ಸಂಕ್ರಾಂತಿಯಾಗಿ ಆಚರಿಸಲಾಗುತ್ತದೆ. ಸರಿ ಸುಮಾರು ಇದೇ ವೇಳೆಗೆ ಧಾನ್ಯಗಳ ಫಸಲು ಕೈತುಂಬುವುದರಿಂದ ಈ ಹಬ್ಬವು ಕರ್ನಾಟಕದ ಎಲ್ಲೆಡೆ ಸುಗ್ಗಿಯ ಆಚರಣೆಯೂ ಆಗಿದೆ. ಮಧ್ಯ ಇಂಡಿಯಾನ ಕನ್ನಡ ಕೂಟ 'ಮಲ್ಲಿಗೆ' ಮೊನ್ನೆ ಭಾನುವಾರ ಜನವರಿ 20ರಂದು ಇಲ್ಲಿನ ಇಂಡಿಯ ಕಮ್ಯುನಿಟಿ ಸೆಂಟರಿನಲ್ಲಿ ಸಡಗರದ ಸಂಕ್ರಾಂತಿಯನ್ನು ಆಚರಿಸಿತು. ಈ ಬಾರಿಯ ಸಂಕ್ರಾಂತಿಯ ಎಲ್ಲಾ ಕಾರ್ಯಕ್ರಮಗಳು ಸುಗ್ಗಿ ಹಾಗು ಜಾನಪದದ ಕುರುಹಾಗಿತ್ತು.
ಮೈ ಕೊರೆಯುವ ಚಳಿ, ಗಾಳಿಯಿದ್ದರೂ ಇಂಡಿಯಾನಪೊಲಿಸ್ ಉತ್ತರ ದಕ್ಷಿಣಗಳಿಂದ ಕನ್ನಡಿಗರು ಬಂದು ನೆರೆದಿದ್ದ ಸಭಾಂಗಣದಲ್ಲಿ ಮಲ್ಲಿಗೆ ಕನ್ನಡ ಕೂಟದ ಅಧ್ಯಕ್ಷಿಣಿ ಶಾರದ ಮಣಿಯವರು ತಮ್ಮ ಸ್ವಾಗತ ಭಾಷಣದೊಂದಿಗೆ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ನಾಂದಿ ಹಾಡಿದರು. ಹಿನ್ನೆಲೆ ಸಂಗೀತವನ್ನು ಸಿದ್ಧಪಡಿಸಿಕೊಳ್ಳುವ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ರಸಪ್ರಶ್ನೆಯ ರೂಪದಲ್ಲಿ ಕರ್ನಾಟಕ ಜಾನಪದದ ಬಗ್ಗೆ ಸಭಿಕರ ಮೆದುಳಿಗೆ ಕಸರತ್ತನ್ನು ನೀಡಿದ್ದು ಶ್ರೀಮಾಲಾ ಮೂರ್ತಿ ಮತ್ತು ಶ್ರೀಧರ್ ಅವರ ತಂಡ.
ಸರ್ವಾಂತರ್ಯಾಮಿಯಾದ, ಪ್ರತ್ಯಕ್ಷ ದೈವವಾದ ಸೂರ್ಯ ಭಗವಂತನಿಗೆ ವಂದಿಸುವ ಮೂಲಕ ಕಾರ್ಯಕ್ರಮಗಳು ಆರಂಭವಾದವು. ಪುಟಾಣಿಗಳಾದ ಅಂಜನ, ಈಶಾನಿ, ಐಶ್ವರ್ಯ, ಮಿಲನ, ನಂದಿತ ಮತ್ತು ಸಂಜನ "ಮರದ ಮೇಲಿನ ಮಂಗಣ್ಣ" ಹಾಡಿಗೆ ಮುದ್ದಾಗಿ ಹೆಜ್ಜೆ ಹಾಕಿ ಎಲ್ಲರನ್ನು ರಂಜಿಸಿದರೆ ಆರುಶ್, ಆತ್ರೇಯ, ಕುಶಲ್, ಸವೀರ್, ಸಾತ್ವಿಕ್ ಹಾಗು ಸಪ್ನ ಇವರುಗಳು ಎಲ್ಲರಿಗೂ ಚಿರಪರಿಚಿತವಾದ "ಅಚ್ಚಚ್ಚು ಬೆಲ್ಲದಚ್ಚು, ರತ್ತೋರತ್ತೋ ರಾಯನ ಮಗಳೇ" ಹಾಡುಗಳಿಗೆ ಉತ್ಸಾಹಭರಿತ ನಾಟ್ಯ ಪ್ರದರ್ಶಿಸಿದರು. ಸುಶ್ರಾವ್ಯವಾದ "ಮೂಡಲ್ ಕುಂಡಲ್ ಕೆರೆ" ಹಾಡಿಗೆ ಅಭಿನಯ ನೀಡಿ ಪ್ರೇಕ್ಷಕರನ್ನು ಸಂತೋಷ ಪಡಿಸಿದ್ದು ಅನೀಷ್, ಅಭಿಶೇಕ್, ಸುರೇನ್, ನೈನ, ನಿಧಿ ಮತ್ತು ನಿವೇದಿತ, ಸೊಂಪಾಗಿ ಬೆಳೆದ ಫಸಲಿನಿಂದಾಗಿ ಸಂತೃಪ್ತಗೊಂಡ ಕರ್ನಾಟಕದ ರೈತ ಜನತೆಯ ಸಡಗರವನ್ನು ಈ ಮಕ್ಕಳು ಕಣ್ತುಂಬುವಂತೆ ನಾಟ್ಯ ಮುಖೇನ ಮಾಡಿ ಪ್ರೇಕ್ಷಕರ ಮನ ತಣಿಸಿದರು.
ಅಕ್ಷತ, ಇಂಚರ, ನಮ್ರತ, ಪ್ರಿಯಾಂಕ, ಶ್ರೇಯ ಮತ್ತು ಸೌಮ್ಯ ಮಾಡಿದ ಕೋಲಾಟ ಪ್ರದರ್ಶನ ಬಹಳ ಸೊಗಸಾಗಿತ್ತು. ಪುಟ್ಟ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರ್ಯಕ್ರಮದಲ್ಲಿ ಸ್ವಲ್ಪ ಭಿನ್ನವಾಗಿ ಕಂಡು ಬಂದದ್ದು ಶಾಂತಾರಾಮ್ ಅವರ ಕೊಳಲುವಾದನದ "ಘಲ್ಲು ಘಲ್ಲೆನುತಾ ಗೆಜ್ಜೆ.." ಮತ್ತು ಶ್ರೀಧರ್ ಹಾಗು ಅಶ್ವಿನಿ ಅವರ ಜಾನಪದ ಹಾಡುಗಳು. ಕುಮಾರಿ ಅಕ್ಷತಾ ಬಹಳ ಸೊಗಸಾಗಿ ಕಾರ್ಯಕ್ರಮಗಳ ನಿರೂಪಣೆ ಮಾಡಿಕೊಟ್ಟಳು.
ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಇನ್ನಿಲ್ಲದ ಕಳೆ ಬಂದದ್ದು ಶ್ರೀಮಾಲಾ ಮೂರ್ತಿ ಮತ್ತು ಗುಂಪಿನವರ ಸಂಕ್ರಾಂತಿ ರೂಪಕದಿಂದ. ಸಭಾಂಗಣದಲ್ಲಿ ನೆರೆದಿದ್ದ ಚಿಕ್ಕ ಮಕ್ಕಳು ಹಾಗೂ ತಾಯಂದಿರನ್ನು ಕೂರಿಸಿ ಎಳ್ಳು ಬೆಲ್ಲದ ಧಾರೆಯೆರೆದು ಆರತಿ ಬೆಳಗಿದ್ದು ನೋಟ ಬಹಳ ಆಪ್ಯಾಯಮಾನವಾಗಿತ್ತು. ಎಲಚಿ ಹಣ್ಣು, ಕಬ್ಬಿನ ತುಂಡುಗಳ ಕೊರತೆ ತುಂಬಿದ್ದು ಆ ತಾಯಂದಿರ ನಗು ಮುಖ ಮತ್ತು ಮಕ್ಕಳ ಆಶ್ಚರ್ಯ ಚಕಿತ ನೋಟ.
ಈ ಚಳಿಕಾಲದಲ್ಲಿ, ತಮ್ಮ ದೈನಂದಿನ ಬಿಡುವಿಲ್ಲದ ಕೆಲಸದ ನಡುವೆ ಸಮಯ ಸಾಧಿಸಿ ಮಕ್ಕಳಿಗೆ ತರಬೇತಿ ನೀಡಿದ ಶ್ರೀಮಾಲಾ ಮೂರ್ತಿ, ವಸುಂಧರ ಪ್ರಸಾದರ ಉತ್ಸಾಹ ನಿಜಕ್ಕೂ ಶ್ಲಾಘನೀಯವಾದದ್ದು. ಕಣ್ಣಿಗೆ, ಮೆದುಳಿಗೆ ಕಸರತ್ತಿನ ನಂತರ ಚುರುಗುಟ್ಟುತ್ತಿದ್ದ ಹೊಟ್ಟೆ ಪೂಜೆಯ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ನಿಭಾಯಿಸಲಾಗಿತ್ತು. ವೀಣ, ಸವಿತ, ಪೂಜ ಹಾಗು ಅಶ್ವಿನಿ ಇವರುಗಳ ನೇತ್ರತ್ವದಲ್ಲಿ ಏರ್ಪಾಡಾಗಿದ್ದ ಪುಷ್ಕಳ ಭೋಜನ ಸವಿದು, ಎಳ್ಳು ಬೆಲ್ಲ, ಸಕ್ಕರೆ ಅಚ್ಚಿನ ಸುಂದರ ಪೊಟ್ಟಣಗಳೊಂದಿಗೆ ಎಲ್ಲರು ಮನೆಯ ಕಡೆಗೆ ನಡೆದಾಗ ಸಂಕ್ರಾಂತಿ 2008ಸಂಭ್ರಮಕ್ಕೆ ತೆರೆ ಬಿದ್ದಿತು.


Click it and Unblock the Notifications
