Get Updates
Get notified of breaking news, exclusive insights, and must-see stories!

ಮರಗಟ್ಟಿದ ಮನವನು ಬೆಚ್ಚಗಾಗಿಸಿದ ರಾಜ್ಯೋತ್ಸವ

Kannada rajyotsava in Reading, UK
ನವೆಂಬರ್ 8ರಂದು, ಆಂಗ್ಲನಾಡಿನ ರೆಡಿಂಗ್ ನಗರದಲ್ಲಿ ಕನ್ನಡಿಗರು ಯು.ಕೆ ಸಂಘ ರಾಜ್ಯೋತ್ಸವ 2008 ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಹೇಮಂತ ಋತುವಿನಲ್ಲಿ ಮಂಜಿನಿಂದ ಬಾಡಬೇಕಿದ್ದ ಮನಕ್ಕೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದಕ್ಕಿದ್ದು ಕನ್ನಡಿಗರೆಲ್ಲರ ಮನ ಮುದಗೊಳಿಸಿತ್ತು, ರಾಜ್ಯೋತ್ಸವದ ಆಚರಣೆಗೆ ಮತ್ತಷ್ಟು ಕಳೆ ತಂದಿತ್ತು.

* ಪವನ್ ಮೈಸೂರ್, ಯು.ಕೆ

ನವೆಂಬರ್ 8ರಂದು ಕೊರೆವ ಚಳಿಯಲ್ಲಿ, ಜಿನುಗುವ ಸೋನೆ ಮಳೆಯಲ್ಲಿ ತನುವೆಲ್ಲ ಮರಗಟ್ಟುವ ವಾತವರಣದಲ್ಲಿ, ಬೆಚ್ಚನೆಯ ಭಾವನೆಗಳೊಂದಿಗೆ ರಾಜ್ಯೋತ್ಸವ ಆಚರಿಸಲಾಯಿತು. ಕನ್ನಡಿಗರು ಯು.ಕೆ ಈ ಬಾರಿ ಪ್ರಸಿದ್ದ ಹಿಂದೂಸ್ತಾನಿ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿಯವರನ್ನು ಈ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮನ್ನೆಲ್ಲ ರಂಜಿಸಲು ಕೇಳಿಕೊಂಡಿತ್ತು. ಪತ್ರಕರ್ತ ರವಿ ಬೆಳೆಗೆರೆಯವರೂ ಕೂಡ ಬರುವೆನೆಂದು ನುಡಿದಿದ್ದರು. ಆದರೂ, ಕಡೆ ಘಳಿಗೆಯಲ್ಲಿ, ರವಿ ಕಾರಣಾಂತರದಿಂದ ಇಲ್ಲಿ ಬರಲೇ ಇಲ್ಲ. ಬಹುಶ: "ಆಂಗ್ಲನಾಡಿನಲ್ಲಿ ರವಿ ಮೂಡಿ ನಲಿಯುವ ಅವಕಾಶವಿರಲಿಲ್ಲ".

ಇನ್ನೇನು,ರಾಜ್ಯೋತ್ಸವಕ್ಕೆ ಎಲ್ಲ ಅಣಿಯಾಯಿತು ಎನ್ನುವಷ್ಟರಲ್ಲಿ ಸಿಲ್ಲಿ ಲಲ್ಲಿ ಖ್ಯಾತಿಯ "ಲಲ್ಲಿ ಮತ್ತು ಪಲ್ಲಿ" ಅಂದರೆ ರೂಪಾ ಪ್ರಭಾಕರ್ ಮತ್ತು ಅವರ ಪತಿದೇವರಾದ ಪ್ರಶಾಂತ್ ಅವರ ಪರಿಚಯ ಸ್ನೇಹಿತರಾದ ಪ್ರಸಾದ್ ಅವರಿಂದ ಆಯಿತು. ಲಲ್ಲಿ ಪಲ್ಲಿ, ನಮ್ಮ ಕಾರ್ಯಕ್ರಮವನ್ನು ನಿರೂಪಿಸಲು ಬಹಳ ಆಸ್ಥೆಯಿಂದ ಮುಂದಾದರು. ಇವೆಲ್ಲಾ ನಡೆದು, ನವೆಂಬರ್ 8ರಂದು 300 ಕನ್ನಡಿಗರು ಬರುವರೆಂದು ತಿಳಿದ ನಮ್ಮ ಲೆಕ್ಕಾಚಾರವೆಲ್ಲಾ ತಲೆಕೆಳಕಾಗಿ, ಪವಾಡ ಸದೃಷವಾದಂತೆ 500 ಕನ್ನಡಿಗರು ಜಮಾಯಿಸಿದರು. ಈ ಅನುಭವ ಒಂದು ವಿಧದಲ್ಲಿ ಹಿತವಾದ ಬಿಕ್ಕಟ್ಟು. ಕನ್ನಡಿಗರು ಯು.ಕೆ ಹಿಗ್ಗಿ ತಬ್ಬಿಬ್ಬಾಗಿದ್ದರಲ್ಲಿ ಆಶ್ಚರ್ಯವೇ ಇಲ್ಲ. ಎಲ್ಲರಿಗೂ ಕಡೆಯ ಘಳಿಗೆಯ ಊಟ, ಕಾಫಿ, ತಿಂಡಿ ತಿನಿಸುಗಳ ವ್ಯವಸ್ಥೆಯಾಯಿತು.

ಕಾರ್ಯಕ್ರಮ ಸ್ವಲ್ಪ ತಡವಾಗಿ ಪ್ರಾರಂಭವಾದರೂ, ಅರುಣ್ ತಂಡದಿಂದ ಕನ್ನಡ ಗೀತೆಗಳು, ರಷ್ಮಿ ತಂಡದ ಜನಪದ ನೃತ್ಯ, ಮುರಳಿಧರ ಅವರ ಹಾಸ್ಯಭರಿತ ನಾಟಕ, ಜ್ಯೋತಿ ಅರ್ಪಿತ ತಂಡದಿಂದ "ಕನ್ನಡಮ್ಮನ ದೆವಾಲಯ"ಹಾಡಿಗೆ ನೃತ್ಯ, ಅನು ಸೋನು ಸೋದರಿಯರಿಂದ ಅಂದಿನ 50ರ ದಶಕದ ಎಲ್.ಆರ್.ಈಶ್ವರಿ ಅವರು ಹಾಡಿದ್ದ ಹಾಡು, ಇಂದಿನ ತಾಜ್ ಮಹಲ್ ಹಾಡಿಗೆ ನೃತ್ಯ ಸಖತ್ತಾಗಿ ರಂಜಿಸಿದವು. ಮತ್ತು ಇವಕ್ಕೆಲ್ಲ ಕಳಶವಿಟ್ಟಂತೆ ರೂಪಾ ಮತ್ತು ಪ್ರಶಾಂತ್ ಅವರ ಹಾಸ್ಯಭರಿತ ನಿರೂಪಣೆ ನೆರೆದಿದ್ದ ಕನ್ನಡಿಗರನ್ನು ಆನಂದ ಸಾಗರದಲ್ಲಿ ಮುಳುಗೇಳಿಸಿದವು. ಗುರು ಪಟ್ಟಭಿರಾಮರ ಆಧ್ಯಾತ್ಮದ ನುಡಿ ಮುತ್ತುಗಳು ಮತ್ತು ಸಮೂಹ ಧ್ಯಾನ ನಮ್ಮ ಯಾಂತ್ರೀಕೃತ ಮತ್ತು ಪ್ರಕ್ಷುಬ್ದಮಯ ದೈನಂದಿನ ಜೀವನ ಶೈಲಿಯನ್ನು ಸ್ವಲ್ಪ ಬದಿಗಿಡಲು ಸಹಾಯ ಮಾಡಿತು.

ಇವೆಲ್ಲಾ ಮುಗಿದ ಮೇಲೆ ಸಂಗೀತ ಕಟ್ಟಿಯವರ ಗಾಯನ ಪ್ರಾರಂಭವಾಯಿತು. ಆಂಗ್ಲ ನಾಡಿನ ಪ್ರಸಿದ್ದ ತಬಲ ವಾದಕ ಪಂ|| ರಾಜ್ ಕುಮಾರ್ ಮಿಶ್ರಾ ಮತ್ತು ನಮ್ಮ ಕನ್ನಡ ಪ್ರತಿಭೆಯಾದ ಪ್ರತಾಪ್ ತಬಲಾದಲ್ಲಿ ಸಾಥ್ ಕೊಟ್ಟರೆ, ರಾತ್ರಿಯೆಲ್ಲಾ ನಿದ್ದೆಗೆಟ್ಟು ನೂರಾರು ಮೈಲಿ ಪಯಣಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಯುವಕ ಮುಖೇಶ್ ಕೀಬೋರ್ಡ್ ಜತೆ ಶೃತಿ ಸೇರಿಸಿದರು. ಅನಿಲ್ ಎಲೆಕ್ಟ್ರಿಕ್ ರಿದಮ್ ಪ್ಯಾಡ್ ಹಿಡಿದಿದ್ದರು. ಸಂಗೀತರ ಸಂಗೀತ ನಮ್ಮೆಲ್ಲರನ್ನೂ ಗಂಧರ್ವ ಲೋಕಕ್ಕೆ ಸೆಳೆದೊಯ್ದಿತ್ತು. ರಾತ್ರಿ 10 ಗಂಟೆಯಾಗಿದ್ದು ನಮ್ಮೆಲರಿಗೂ ಮರೆತೇ ಹೋಗಿತ್ತು. ಸಭಾಂಗಣದ ವ್ಯವಸ್ಥಾಪಕರು ಮೈಕ್ ಆಫ್ ಮಾಡಿದ ಮೇಲೇ ತಿಳಿದಿದ್ದು. "ಹಿಂದೆ ಅಲ್ಲಿದ್ದು ಆಳಿದರು, ಈಗ ಇಲ್ಲಿದ್ದು ಆಳ್ತಾರಲ್ಲ" ಎಂಬ ಭಾವನೆ ಮನದಲ್ಲಿ ಸುಳಿಯದೇ ಇರಲಿಲ್ಲ. ಹೇಗೋ ಗೋಗರೆದು ಇನ್ನೊಂದಷ್ಟು ಸಮಯವನ್ನು ಸಂಪಾದಿಸಿದೆವು. "ಜಯ ಭಾರತ ಜನನಿಯ ತನುಜಾತೆ" ಮತ್ತು "ವಂದೇ ಮಾತರಂ" ಹಾಡುಗಳನ್ನು ಎದ್ದು ನಿಂತು ಹಾಡಿ ಸಂಗೀತ ತಮ್ಮ ಸಂಗೀತವನ್ನು ಮುಗಿಸಿದೆವು.

ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ, ಭೋಜನಕ್ಕೆ ತೆರಳಿದೆವು. ಬಂದ 500 ಕನ್ನಡಿಗರೆಲ್ಲ ನಿಧಾನವಾಗಿ ಕತ್ತಲಲ್ಲಿ ಮಂಜಿನಂತೆ ಕರಗಿ ಮನೆಕಡೆ ನಡೆದರೆ, ಕನ್ನಡಿಗರು ಯು.ಕೆ ಯ ಸದಸ್ಯರು ಮತ್ತು ಕೆಲವು ಸ್ನೇಹಿತರು ಸಭಾಂಗಣವನ್ನು ಸ್ವಚ್ಚಗೊಳಿಸಲು ತೊಡಗಿದೆವು. ಅಬ್ಬಾ ಅದೆಷ್ಟು ಕಸ ಹರಡಿತ್ತು ಅಲ್ಲಿ, ನಮ್ಮವರೇ ಆದ ಕನ್ನಡಿಗರ ಬಗ್ಗೆ ಸ್ವಲ್ಪ ನಿರಾಸೆಯಾದದ್ದು ನಿಜ. "ನಾವೇಕೆ ಇಲ್ಲಿನ ಜನದ ಹಾಗೆ ಸಮಯ, ಸ್ವಚ್ಚತೆ ಮತ್ತು ಗಾಂಭೀರ್ಯತೆಯನ್ನು ಕಲಿಯುವುದಿಲ್ಲ?" ಇನ್ನಾದರೂ ಕಲಿಯೋಣ ಅಲ್ಲವೇ?

ಸತತವಾಗಿ 4 ಗಂಟೆಗಳ ಕಾಲ ಎಲ್ಲವನ್ನೂ ಸ್ವಚ್ಚಗೊಳಿಸಿದರೂ ಮಾರನೆಯ ದಿನ ಬೆಳಗ್ಗೆ ಸಭಾಂಗಣದ ವ್ಯವಸ್ಥಾಪಕರಿಂದ ಕೊಂಚ ಬುದ್ದಿವಾದ ಮತ್ತು ಹಿತವಾದ ಬೈಗುಳವನ್ನು ಕೇಳಿದ್ದಲ್ಲದೆ "ಶಿವ ಧನಸ್ಸು" ಎತ್ತಬೇಕಾಯಿತು. (ಅಂದರೆ, ಸ್ವಲ್ಪ ಹೆಚ್ಚಾದ ಬಿಲ್ಲು..) ಇದರಿಂದ ಕಲಿತ ಪಾಠ, ಸ್ವಲ್ಪ ನಾವೆಲ್ಲರೂ ಸಮಯ ತತ್ಪರತೆ ಮತ್ತು ಸ್ವಚ್ಚತೆಯ ಬಗ್ಗೆ ಗಮನ ಕೊಟ್ಟು ಅಸ್ಥೆ ವಹಿಸಿದರೆ, ಮುಂದೆ ಇಂತಹ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಯಶಸ್ವಿಯಾಗಿ ನಿರ್ವಹಿಸುವುದರಲ್ಲಿ ಯಾವುದೇ ಶಂಕೆಯಿಲ್ಲ. ಕನ್ನಡಿಗರು ಯು.ಕೆ ಈ ಬಾರಿಯ ಕಾರ್ಯಕ್ರಮದಲ್ಲಿ ಕಂಡ ಕುಂದು-ಕೊರತೆಗಳನ್ನು ಮುಂದೆ ತಿದ್ದಿಗೊಂಡು ಉತ್ತಮ ನಿರ್ವಹಣೆಯನ್ನು ತೋರುತ್ತದೆ ಎಂಬುವುದರಲ್ಲಿ ಎಳ್ಳಷ್ಟೂ ಸಂಶಯ ಬೇಡ.

ಇನ್ನೊಂದು ಮಾತು, ಇಂಗ್ಲೆಂಡಿನಲ್ಲಿ ಪ್ರತೀ ವರ್ಷವೂ ಕಡೆಯ ಪಕ್ಷ 2 ಅಥವಾ 3 ಕಾರ್ಯಕ್ರಮಗಳನ್ನು ನಿಯೋಜಿಸಿತ್ತಿರುವ ಕನ್ನಡಿಗರು ಯು.ಕೆ, ಕಳೆದ ವಾರವೇ, ನವೆಂಬರ್ 1ರಂದು "ಸೈಕೋ" ಚಿತ್ರವನ್ನೂ ಲಂಡನ್ ನಲ್ಲಿ ಬಿಡುಗಡೆ ಮಾಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+