• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಜ್ಞಾನಕ್ಕೆ ಹತ್ತಿರ, ವಿಜ್ಞಾನಿಗಳಿಂದ ದೂರ

By Staff
|

The Most Unpopular Noble Laureateಆತನೊಬ್ಬ ನೊಬೆಲ್ ವಿಜ್ಞಾನಿ. ಸರಿಯೆ. ಆದರೆ ಜತೆಗಾರ ವಿಜ್ಞಾನಿಗಳು ಅವನ ಅನೇಕ ಸಿದ್ಧಾಂತಗಳನ್ನು ಒಪ್ಪುವುದೇ ಇಲ್ಲ. ಅವನನ್ನು ಹತ್ತಿರ ಕೂಡ ಸೇರಿಸುವುದಿಲ್ಲ. ರಸಾಯನ ನೊಬೆಲ್ ಆಸಾಮಿ ವಿಜ್ಞಾನಕ್ಕೆ ಹತ್ತಿರವಾಗಿ ವಿಜ್ಞಾನಿಗಳಿಗೆ ದೂರವಾದ ವೃತ್ತಾಂತ ಬೋಧಿನಿ.

  • ರಾಜಾರಾಮ್ ಕಾವಳೆ, ಹ್ಯಾಂಪ್ ಶಯಿರ್, ಯು ಕೆ.

1983ರ ಮೇ ತಿಂಗಳ ಒಂದು ಶುಕ್ರವಾರ ಸಾಯಂಕಾಲ ವಾರದ ಕೆಲಸವನ್ನು ಮುಗಿಸಿ ಬಹಳ ಆಯಾಸದಿಂದ ಕೆರಿ ಮಲಿಸ್ [Kary B Mullis]ಎಂಬಾತನು ತನ್ನ ಪ್ರೇಯಸಿಯೊಂದಿಗೆ ಉತ್ತರ ಕ್ಯಾಲಿಫೊರ್ನಿಯಾದ ಒಂದು ಕಾಡುದಾರಿಯಲ್ಲಿ ತನ್ನ ಹೋಂಡ ಕಾರಿನಲ್ಲಿ ವಾರಾಂತ್ಯವನ್ನು ಕಳೆಯಲು ಸಾಗುತ್ತಿದ್ದನು. ತಾನು ಸೇರಬೇಕಾಗಿದ್ದ ಸ್ಥಳವು ಬಹಳ ದೂರವಿದ್ದರಿಂದ ಮನಸ್ಸಿನಲ್ಲಿ ಆದಿನ ನಡೆದ ಕೆಲಸದ ವಿಚಾರಗಳನ್ನು ನೆನೆಯುತ್ತಾ ಮೌನವಾಗಿ ತನ್ನಕಾರನ್ನು ಚಲಿಸುತ್ತಿದ್ದನು. ಕತ್ತಲಾಗುತ್ತಿದ್ದಂತೆ ಪೂರ್ಣ ಚಂದ್ರನು ಮೇಲೇರಿ ಆಸಾಯಂಕಾಲವು ಒಂದು ಪ್ರೇಮಭರಿತವಾಗಿದ್ದರೂ ಈ ತನ್ನಸಂಗಡಿಗನ ಮೌನದಿಂದ ನಾನೊಲ್ಲೇ ಎಂಬಂತೆ ಆತನ ಸಂಗಾತಿಯು ಬಹಳ ಆಯಾಸದಿಂದ ಅವನ ಪಕ್ಕದಲ್ಲೇ ನಿದ್ರಿಸತೊಡಗಿದಳು.

ಮೈಲುಗಟ್ಟಳೆ ಮೌನವಾಗಿ ಆ ಒಂಟಿ ಕಾಡುದಾರಿಯಲಿ ಸಾಗುತ್ತಿರಲು, ಆ ಹೋಂಡಾ ಕಾರಿನ ಎಂಜಿನ್ನಿನ ಏಕನಾದದಿಂದ ಆತನ ಸಂಗಾತಿ ಇನ್ನೂ ಗಾಢವಾಗಿ ನಿದ್ರಿಸತೊಡಗಿದಳು. ಚಂದ್ರನು ಮೇಲೇರಿದನು, ಸುತ್ತಮುತ್ತಲಿನ ಬೆಟ್ಟ ಗುಡ್ಡ ಮರಗಳ ನಡುವೆ ಅಲ್ಲಿನ ದೃಶ್ಯವು ಬಹಳ ರಮಣೀಯವಾಗಿ ಕಾಣತೊಡಗಿತು. ಆ ಸಮಯದಲ್ಲಿ ತಕ್ಷಣ ಕೆರಿಮಲೀಸನು ತನ್ನ ಕಾರಿನ ಬ್ರೇಕನ್ನು ಹಾಕಿ ನಿಲ್ಲಿಸಿದನು. ಕಾರು ತಕ್ಷಣ ನಿಂತು ಅಲುಗಾಡಿದ ಆ ಗಲಿಬಿಲಿಯಲ್ಲಿ ಸಂಗಾತಿಯು ಬೆಚ್ಚಿ ಎಚ್ಚರಗೊಂಡು, ಚಂದ್ರನ ಪ್ರಭಾವದಿಂದ ತನ್ನ ಸಂಗಡಿಗನಿಗೆ ಏನಾದರೂ ಕಾಮೋದ್ರೇಕವಾಗಿರಬಹುದೆಂದು ಯೋಚಿಸಿ, ಆತನಿಗೆ ಏನಾಯಿತೆಂದು ಕೇಳಿದಳು.

ಅದಕ್ಕೆ ಅವನು, ಒಂದು ಪೆನ್ಸಿಲ್ ಮತ್ತು ಪೆನ್ನನ್ನು ಬೇಗನೆ ತನ್ನ ಬ್ರೀಫ್ ಕೇಸಿನಿಂದ ಹೊರತೆಗೆದುಕೊಡಬೇಕೆಂದು ಕೇಳಿದನು. ಇದರಿಂದ ಅವಳು ಪ್ರೇಮಭಗ್ನಳಾಗಿ ಬೇಸರಗೊಂಡು ಮತ್ತೆ ನಿದ್ರಿಸತೊಡಗಿದಳು. ಕೆರಿ ಮಲಿಸನು ಯಾವವಾದವನ್ನೂ ಮಾಡದೆ ಕಾರಿನ ಹಿಂದಿನ ಸೀಟಿನಮೇಲಿದ್ದ ತನ್ನ ಬ್ರೀಫ್ ಕೇಸಿನಿಂದ ಒಂದು ಪುಸ್ತಕ ಮತ್ತು ಪೆನ್ಸಿಲ್ಲನ್ನು ತಾನೇ ತೆಗೆದು, ಆ ಬೆಳದಿಂಗಳ ಬೆಳಕಿನಲ್ಲಿ ಹಾಳೆಗಟ್ಟಳೆ ಹುಚ್ಚನಂತೆ ಏನೇನನ್ನೋ ಗೀಚತೊಡಗಿದನು. ಯಾವಮೋಹವಿಲ್ಲದ ಪ್ರೇಮವಿಲ್ಲದ ಆ ವಾರಾಂತ್ಯವನೆಲ್ಲಾ ತನ್ನ ಹುಚ್ಚುಬರವಣಿಗೆಯಲ್ಲೇ ಕಳೆದನು. ತಾನು ಯೋಚಿಸಿದ ಮತ್ತು ನಡೆಸಿದ ಪ್ರಯೋಗಗಳ ಬಗ್ಗೆ ಬರೆದ ಪ್ರಭಂದಗಳನ್ನು ಪ್ರಪಂಚದ ವೈಜ್ಞಾನಿಕ ಸಂಚಿಕೆಗಳಲ್ಲಿ ಪ್ರಕಟಿಸಿದಾಗ ಕೆರಿ ಮಲೀಸನಿಗೆ ಹತ್ತು ವರ್ಷಗಳನಂತರ ಪ್ರಪಂಚದ ಅತ್ಯಂತ ಹೆಮ್ಮೆಯಾದ 1993ರ ನೋಬೆಲ್ ಪಾರಿತೋಷಕವು ರಾಸಾಯನಿಕ ಶಾಸ್ತ್ರದಲ್ಲಿ ದೊರೆಯಿತು.

ಆ ನೋಬೆಲ್ ಪಾರಿತೋಷಕವು ಕೆರಿ ಮಲೀಸನಿಗೆ ದೊರೆಕಿದಕಾರಣಕ್ಕೆ ಆತನು ಮಾಡಿದುದಾದರೂ ಏನು? ಅವನ ಪರಿಶೋಧನೆಯಿಂದ ಸಾಮಾನ್ಯ ಮಾನವನಿಗೇನಾದರೂ ಉಪಯೋಗವಿದೆಯೇ? ಎಂಬ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರ "ಅಹುದು ಬಹಳ ಇದೆ" ಎಂದೇ ಹೇಳಬೇಕು. ಆತನು ಕಂಡುಹಿಡಿದ ತತ್ವ, ಲೂಯೀಸ್ ಪಾಶ್ಚರ್, ರಾಬರ್ಟ್ ಲಿಸ್ಟರ್, ಅಲೆಕ್ಸಾಂಡರ್ ಫ್ಲೆಮಿಂಗ್ ಮುಂತಾದವರು ಕಂಡುಹಿಡಿದ ಸಾಧನೆಗಳಷ್ಟೇ ಸಮಾನವಾಗಿ, ಸಾಮಾನ್ಯ ಮಾನವನಿಗೆ ಉಪಯುಕ್ತವಾಗಿದೆ. ಅಂತಹುದಾದರೂ ಏನಿರಬಹುದೆಂಬ ಪ್ರಶ್ನೆಗೆ ಉತ್ತರ "P.C.R" - Polymerase chain reaction. ಪಿ ಸಿ ಆರ್ ಎಂದರೆ ಏನು ಎನ್ನುವುದನ್ನು ತಿಳಿಯುವುದಕ್ಕೆ ಮುಂಚೆ ಕೆರಿ ಮಲೀಸನ ವಿಚಾರವನ್ನು ಸ್ವಲ್ಪ ತಿಳಿಯೋಣ.

ಕೆರಿ ಮಲೀಸನು ಡಿಸೆಂಬರ್ 28, 1944ರಂದು ಅಮೆರಿಕದ ನಾರ್ತ್ ಕ್ಯಾರೊಲಿನದ ಲೆನೋರ್ ಎಂಬ ಊರಿನಲ್ಲಿ ಜನ್ಮತಾಳಿದನು. ಅವನ ತಂದೆತಾಯಿಯು ಒಂದು ಸಾಧಾರಣ ಸಂಸಾರಿಗಳಾಗಿದ್ದರು. ಅವನ ತಾಯಿಯು ಒಂದುಸಲ ಕ್ರಿಸ್ಮಸ್ ಹಬ್ಬಕ್ಕೆ ಒಂದು ಮಕ್ಕಳ ಕೆಮಿಸ್ಟ್ರಿ ಸೆಟ್ಟನ್ನು ಕೊಟ್ಟಿದ್ದಳು. ಅಂದಿನಿಂದ ಆತನಿಗೆ ರಾಸಾಯಿನಿಕ ಶಾಸ್ತ್ರದಲ್ಲಿ ಆಸಕ್ತಿಯುಂಟಾಯಿತು. ಅದೇ ಊರಿನಲ್ಲಿದ್ದ ರಾಸಾಯಿನಿಕ ವ್ಯಾಪಾರಿಯ ಅಂಗಡಿಯಿಂದ ರಂಜಕ, ಮದ್ದು ಗಂಧಕಗಳನ್ನು ಕೊಂಡು ಮನೆಯಲ್ಲೇ ಸ್ಪೋಟಕಗಳನ್ನು ತಯಾರಿಸಿ ಆತನ ಅಜ್ಜಿಗೆ ಬೆದರಿಸಿ ಮತ್ತು ಮನೆಯ ಹಿಂದಿದ್ದ ಒಂದು ಮರಕ್ಕೆ ಬೆಂಕಿಹಚ್ಚಿದ್ದ. ಆತನ ಪಠ್ಯಪುಸ್ತಕದಲ್ಲಿಲ್ಲದ ರಾಸಾಯಿನಿಕ ಕ್ರಿಯೆಗಳನ್ನು ಪ್ರಯೋಗಿಸುತ್ತಿದ್ದ.

ಜಾರ್ಜಿಯಾದ ಟೆಕ್ನಿಕಲ್ ಕಾಲೇಜಿನ ಪದವಿಪಡೆದು ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯಕ್ಕೆ ಸೇರಿದ. ಆತನು ತನ್ನ ಪಠ್ಯದಲ್ಲೂ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ಬಹಳ ಸೃಜನಶೀಲನಾಗಿದ್ದನು. ತನಗೆಬೇಕಾದ ಎಲ್ ಎಸ್ ಡಿ ಯಂತಹ ಮಾದಕ ದ್ರವ್ಯಗಳನ್ನು ತಯಾರಿಸುವುದರಲ್ಲೂ ಮತ್ತು ಸ್ತ್ರೀಯರ ಒಲುಮೆಯನ್ನು ಗಳಿಸುವುದರಲ್ಲೂ ಬಹಳ ನಿಪುಣನಾಗಿದ್ದನು. ಆನಂತರ ಒಂದು ಸಣ್ಣ ಸೀಟಸ್ ಎಂಬ ಜೀವತಾಂತ್ರಿಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಆ ಕಂಪನಿಯಲ್ಲೇ ಕೆಲಸಮಾಡಿ ದಣಿದು ಆ ರಾತ್ರಿಯಲ್ಲಿ ಉತ್ತರ ಕ್ಯಾಲಿಫೋರ್ನಿಯಾದ ಬೆಟ್ಟಗುಡ್ಡಗಳನಡುವೆ ಬೆಳದಿಂಗಳಲ್ಲಿ ತನ್ನ ಸಂಗಾತಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ಆತನಿಗೆ ಈ ಪಾಲಿಮರೇಸ್ ಚೇಯಿನ್ ರಿಯಾಕ್ಷನ್ ಹೊಳೆದಿದ್ದು.

ಪಿ ಸಿ ಆರ್ ಅಥವ ಪಾಲಿಮರೇಸ್ ಚೇಯಿನ್ ರಿಯಾಕ್ಷನ್ (P.C.R. - Polymerase chain reaction) ಎಂದರೇನು? ಜೀವಕೋಶಗಳ ಕೇಂದ್ರಿಕೆಗಳೊಳಗಿರುವ ಕ್ರೋಮೋಸೋಮುಗಳಲ್ಲಿರುವ ಡಿ ಎನ್ ಎ ಎಂಬ ಪ್ರೋಟಿನ್ ಕಣಗಳನ್ನು ಗುಣಿಸಿ ಹೆಚ್ಚುವರಿ ಮಾಡುವ ವಿಧಾನ. ಈ ಹೆಚ್ಚುವರಿಮಾಡುವ ವಿಧಾನ ಎಲ್ಲಾ ಜೀವಕೋಶಗಳಲ್ಲೂ ಇರುವುದು. ಇದು ಜೀವಕೋಶದ ಬೆಳೆವಣಿಗೆ ಮಾತ್ರವಲ್ಲದೆ ಅವುಗಳ ಮುಂದಿನ ಸಂತಾನಗಳ ಅಭಿವೃದ್ಧಿಗೂ ಅಣಿಯಾಗಿರುವುದು. ಈ ಗುಣವು ಕ್ರಿಮಿ ಕೀಟ ವನ್ಯ ಪಕ್ಷಿಪ್ರಾಣಿಗಳ ಅಂದರೆ ಎಲ್ಲಾಜೀವಿಗಳ ಜೀವಕೋಶಗಳಲ್ಲೂ ಇರುವುದು. ಈ ದ್ವಿಗುಣಕ್ರಿಯೆಗೆ ಬೇಕಾದ ಕಾರ್ಯಪ್ರೇರಕ ವಸ್ತುವನ್ನು (enzyme) ಆಯಾ ಜೀವಕೋಶಗಳು ತಯಾರಿಸುವುವು. ಈ ಕಾರ್ಯಪ್ರೇರಕ ಎನ್ಸೈಮ್ ಗಳು ಆಯಾ ಜೀವಿಗಳ ಉಷ್ಣತೆಗೆ ತಕ್ಕಂತೆ ತಯಾರಾಗಿರುವುವು.

ಎಲ್ಲಕ್ಕಿಂತಲೂ ಆಶ್ಚರ್ಯವೇನೆಂದರೆ, ಈ ಪಾಲಿಮರೇಸ್ ಕಾರ್ಯಪ್ರೇರಕ ಎನ್ಸೈಮು ಜೀವಕೋಶಗಳೊಳಗಲ್ಲದೇ ಹೊರಗಡೆಯ ಪ್ರಾಯೋಗಿಕಶಾಲೆಯಲ್ಲೂ ಕಾರ್ಯಗತಮಾಡಬಹುದು. ಜೀವಿಗಳಿಂದ ಉತ್ಪತ್ತಿಯಾದ ಪಾಲಿಮರೇಸ್ ಒಂದು ಗಾಜಿನ ಸ್ಲೈಡಿನಮೇಲೋ ಅಥವ ಒಂದು ಟೆಸ್ಟ್ ಟೂಬಿನಲ್ಲೋ ಇಟ್ಟು ಅದಕ್ಕೆ ಬೇಕಾದ ಉಪಪದಾರ್ಥಗಳನ್ನು ಮತ್ತು ಅದಕ್ಕೆ ಸರಿಯಾದ ಉಷ್ಣತೆಯನ್ನು ಕೊಟ್ಟಾಗ, ಅದರ ಕಾರ್ಯಾ ಚಟುವಟಿಕೆಗಳು ಪ್ರಾರಂಭವಾಗುವುದು.

ಪಾಲಿಮರೇಸ್ ಹೇಗೆ ಕೆಲಸಮಾಡುವುದು? ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯೋಣ. ಡಿ ಎನ್ ಎ ಎಂದರೆ ಡಿಆಕ್ಸಿ ರೈಬೋ ನೂಕ್ಲಿಯಿಕ್ ಆಸಿಡ್. ಈ, ಡಿ ಎನ್ ಎ ಒಂದು ಸುರುಳಿಸುತ್ತಿದ ರಚನೆಯಲ್ಲಿರುವ ಪ್ರೊಟೀನ್. ಹಳೆಯಕಾಲದ ಕಟ್ಟಡಗಳಲ್ಲಿ ಕಂಡುಬರುವ ಕಬ್ಬಿಣದ ಸುರಳಿಯ ಮಹಡಿಯ ಮೆಟ್ಟಲಿನ ಆಕಾರದಲ್ಲಿರುವುದು. ಸಾಮಾನ್ಯವಾಗಿ ಈತರಹದ ಸುರಳಿಯ ಮೆಟ್ಟಲಿನ ಮಧ್ಯದಲ್ಲಿ ಒಂದು ಕಂಭವಿರುವುದು. ಈ ಕಂಭವಿಲ್ಲದಿದ್ದರೆ ಹೇಗೆ ಕಾಣುವುದೋ ಹಾಗೆ ಈ ಡಿ ಎನ್ ಎ ರಚನೆಯಿರುವುದು. ಇನ್ನೂ ಸುಲಭವಾಗಿ ಅರಿಯಬೇಕಾದರೆ ಅದು ಒಂದು ಏಣಿಯನ್ನು ಚೆನ್ನಾಗಿ ತಿರುಚಿದರೆ ಹೇಗೆ ಕಾಣುವುದೋ ಹಾಗೆ ಇರುವುದು. ಈ ಡಿ ಎನ್ ಎ ಪ್ರೋಟೀನು ನಾಲ್ಕು ಬಗೆಯ ಇಟ್ಟಿಗೆಗಳಿಂದ ಕಟ್ಟಿದ ಗೋಡೆಯಹಾಗೆ ಇರುವುದು. ಈ ಇಟ್ಟಿಗೆಗಳನ್ನು ನ್ಯೂಕ್ಲಿಯೋಟೈಡ್ ಎಂದು ಕರೆಯಲಾಗಿ ಇವುಗಳು ಕ್ರಮವಾಗಿ ಎ ಜಿ ಸಿ ಟಿ ನ್ಯೂಕ್ಲಿಯೋಟೈಡ್ (AGCT Adenine Guanine Cytosine Timidine) ಎಂದು ಕರೆಯಲಾಗಿದೆ.

ಈ ನ್ಯೂಕ್ಲಿಯೋಟೈಡುಗಳಲ್ಲಿರುವ ಶುಗರ್ ಮತ್ತು ಫಾಸ್ಫೇಟ್ ಭಾಗಗಳು ಒಂದಾಗಿ ಆ ಏಣಿಯ ಎರಡು ಕಂಭಗಳಾಗಿ ಇರುವಾಗ ಅವುಗಳಮೇಲಿರುವ ನ್ಯೂಕ್ಲಿಯೋಟೈಡುಗಳು ಎದುರಿಗಿರುವ ಕಂಭದ ನ್ಯೂಕ್ಲಿಯೋಟೈಡುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಒಂದು ಸುರುಳಿದ ಏಣಿಯ ಆಕಾರದಲ್ಲಿ ಈ ಡಿ ಎನ್ ಎ ಇರುವುದು. ಒಂದು ಪ್ರಯೋಗನಾಳದಲ್ಲಿ ಸರಿಯಾದ ದ್ರವಗಳೊಂದಿಗೆ ಮತ್ತು ಶಂಕಿಸಿದ ರೋಗಾಣುವಿನ ಪಾಲಿಮರೇಸ್ ಒಂದಿಗೆ, ಒಂದು ರೋಗಿಯ ರಕ್ತವನ್ನು ಬೆರೆಸಿ ಅದರ ಉಷ್ಣವನ್ನು ಹೆಚ್ಚಿಸಿದಾಗ, ಡಿ ಎನ್ ಎ ಏಣಿಯು ಎರಡುಭಾಗವಾಗುವುದು.

ಆನಂತರ ಅದರ ಉಷ್ಣವನ್ನು ಇಳಿಸಿ ಅದಕ್ಕೆ ಪಾಲಿಮರೇಸ್ ಮತ್ತು ಇತರ ಉಪಭಾಗಗಳನ್ನು ಸೇರಿಸಿ ಮತ್ತೆ ಉಷ್ಣವನ್ನು ಇಳಿಸಿದಾಗ, ಇಬ್ಭಾಗವಾದ ಏಣಿಯು ಇತರ ಉಪಭಾಗಳೊಂದಿಗೆ ಸೇರಿ ಎರಡು ಹೊಸ ಏಣಿಗಳಾಗಿ ಪರಿವರ್ತಿಸುವುದು. ಅದನ್ನು ಮತ್ತೆ ಕಾಯಿಸಿ ಉಷ್ಣವನ್ನು ಹೆಚ್ಚಿಸಿ ಮತ್ತೆ ತಗ್ಗಿಸಿದಾಗ ಆ ಎರಡು ಏಣಿಗಳು ನಾಲ್ಕು ಏಣಿಗಳಾಗುವುವು. ಇದೇ ರೀತಿ ಇಪ್ಪತ್ತು ಅಥವ ಮೂವತ್ತು ಸಲ ಉಷ್ಣವನ್ನು ಏರಿಳಿಸಿದಾಗ ಆ ಶಂಕಿತ ರೋಗವು ಇದ್ದಾಗ ಆ ಪ್ರಯೋಗನಾಳದಲ್ಲಿ ಒಂದು ಮಿಲಿಯನ್ನಿನಷ್ಟು ಆ ರೋಗಾಣುವಿನ ಡಿ ಎನ್ ಎ ಹೆಚ್ಚಾಗಿಬೆಳೆದಿರುವುದು. ಇದರಿಂದ ಆ ರೋಗಿಯಲ್ಲಿ ಆ ಶಂಕಿತರೋಗವಿರಬಹುದೆಂದು ಸಾದರಪಡಿಸಬಹುದು. ಇದೇ ಪಾಲಿಮರೇಸ್ ಚೇಯಿನ್ ರಿಯಾಕ್ಷನ್.

ಪಿ ಸಿ ಆರ್ ನಿಂದ ರೋಗಾಣುಗಳನ್ನು ರೋಗಿಯ ರಕ್ತದಲ್ಲಿ ಕಂಡುಹಿಡಿಯುವುದರಲ್ಲದೆ ಮತ್ತೆ ಅನೇಕ ಉಪಯೋಗಗಳಿವೆ. ಮಾನವನ ಜೀನೋಮ್ ಮ್ಯಾಪಿಂಗ್ ಪ್ರಾಜೆಕ್ಟ್ ಪಿ ಸಿ ಆರ್ ಇಲ್ಲದಿದ್ದರೆ ಕಾರ್ಯಗತ ಮಾಡುವುದಕ್ಕಾಗುತ್ತಿರಲಿಲ್ಲ. ಕ್ಯಾನ್ಸರ್ ಸಂಶೋಧನೆಯಲ್ಲಿ, ಹೊಸದಾಗಿ ಕಾಣಿಸಿಕೊಂಡ ಪರಿವರ್ತಿಸಿದ (ಮ್ಯೂಟೆಂಟ್) ಜೀನನ್ನು ಪಿ ಸಿ ಆರ್ ನಿಂದ ಹೆಚ್ಚುವರಿಸಿ ಕ್ಯಾನ್ಸರ್ ಬರುವ ಪೂರ್ವದಲ್ಲೇ ಅದನ್ನು ಕಂಡುಹಿಡಿಯಬಹುದು. ಪೋಲಿಸಿನ ತನಿಖೆಯಲ್ಲಿ, ಶಂಕಿತ ಅಪರಾಧಿಯ ಡಿ ಎನ್ ಎ ಯನ್ನು ದುಷ್ಕೃತ್ಯಕ್ಕೆ ಈಡಾದವರ ಮೇಲೆ ಇರುವುದನ್ನು ಪಿ ಸಿ ಆರ್ ನಿಂದಲೇ ಪತ್ತೆಮಾಡುವುದು ಈಗ ಸುಲಭಸಾಧ್ಯ. ಆದರೆ ಇದೀಗ ಇಂಗ್ಲೆಂಡಿನಲ್ಲಿ ಸಧ್ಯಕ್ಕೆ ಈ ಸಾಕ್ಷಾನಿದರ್ಶನವನ್ನು ತಡೆಹಿಡಿದಿದ್ದಾರೆ. ಏಕೆಂದರೆ ಪೋಲೀಸಿನವರ ವಿಧಾನದಲ್ಲಿ ಏನಾದರು ತಪ್ಪಿದ್ದಲ್ಲಿ ಅದು ತಪ್ಪುಫಲಿತಾಂಶವನ್ನು ಕೊಡಬಹುದು. ಆದರೆ ಅದು ಪಿ ಸಿ ಆರ್ ನ ತಪ್ಪಲ್ಲ. ಪಿ ಸಿ ಆರ್ ನ ಕಾರ್ಯಾಚರಣೆಯನ್ನು ಅರಿಯಲು ಇಲ್ಲಿ ಕ್ಲಿಕ್ಕಿಸಬಹುದು.

ಮಾನವಕುಲಕ್ಕೇ ಒಂದು ದೇವರ ವರ ಎನ್ನಬಹುದಾದ ರಾಸಾಯನಿಕ ಪರೀಕ್ಷಾವಿಧಾನವನ್ನು ಕಂಡುಹಿಡಿದು ನೋಬೆಲ್ ಪಾರಿತೋಷಕವನ್ನು ಗಳಿಸಿದ್ದರೂ ಕೆರಿಮಲೀಸನು ಏಕೆ ಅಷ್ಟು ಪ್ರಖ್ಯಾತನಾಗಿಲ್ಲ? ಅವನ ಹೆಸರನ್ನು ಕೇಳರಿಯದವರೇ ಹೆಚ್ಚು. ವಿಜ್ಞಾನಿಗಳ ವಲಯಗಳಲ್ಲಿ ಅವನಬಗ್ಗೆ ಒಂದು ಬಗೆಯ ಅಸಮಾಧಾನ ಮತ್ತು ಅವರುಗಳಿಂದ ಅವನಿಗೆ ಹೆಚ್ಚು ಆಮಂತ್ರಣವಿಲ್ಲ. ಅದೇಕೆಂದರೆ, ಅವನ ಪ್ರಕಾರದ ಅನೇಕ ಅಭಿಪ್ರಾಯಗಳನ್ನು ಪ್ರಸ್ತುತ ವಿಜ್ಞಾನಿಗಳು ಒಪ್ಪುವುದಿಲ್ಲ. ಉದಾಹರಣೆಗೆ ಭೌಗೋಳಿಕ ಉಷ್ಣದ ಉಲ್ಭಣೆಯ ಬಗ್ಗೆ ಮಾನವರು ಏನೂಮಾಡುವುದಕ್ಕಾಗುವುದಿಲ್ಲ ಎಂದು ಅವನ ಅಭಿಪ್ರಾಯ. ಇನ್ನೊಬ್ಬರ ಮನಸ್ಸಿನಲ್ಲೇನಿದೆ ಯೆಂದು ಓದುವುದಕ್ಕಾಗುವುದು ಎಂಬ ಅವನ ಇನ್ನೊಂದು ಅಭಿಪ್ರಾಯ. ಅವನಿಗೆ ಈಗಲೂ ಇರುವ ಎಲ್ ಎಸ್ ಡಿ ಸೇವನೆಯ ಮತ್ತು ಅತಿಯಾದ ಸ್ತ್ರೀವ್ಯಾಮೊಹ ಮೊದಲಾದ ಹವ್ಯಾಸಗಳಿಂದ ಅವನಿಗೆ ವಿಜ್ಞಾನಿಗಳಿಂದ ಅಷ್ಟು ಆದರ ಸಿಕ್ಕಿಲ್ಲ. ಆದರೂ ಕೆರಿಮಲೀಸನು ತನ್ನ ಪ್ರಯೋಗಗಳನ್ನು ಬಿಟ್ಟಿಲ್ಲ. ಯಾರಿಗೆ ಗೊತ್ತು ಪಿ ಸಿ ಆರ್ ತರಹ ಬಹಳ ಪ್ರಯೋಜನಕಾರಿಯಾದ ಮತ್ತೊಂದು ಸಂಶೋಧನೆಯನ್ನು ಇಷ್ಟರಲ್ಲೇ ಅವನು ಮಾಡಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more