ಟೆಕ್ಸಾಸ್ನಲ್ಲಿ ಶಾಸ್ತ್ರೀಯ ಸಂಗೀತ ಸಂಜೆ.ಪ್ರವೇಶ ಉಚಿತ
ಮೀನಾಕ್ಷಿ ಪಣಂಬೂರು, ಹ್ಯೂಸ್ಟನ್, ಉತ್ತರ ಅಮೇರಿಕ
ಮೆರು ಎಜುಕೇಷನ್ ಫೌಂಡೇಶನ್ , ಲೆಕ್ಸಿಂಗ್ ಟನ್ MA ಪ್ರಸ್ತುತಪಡಿಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಕಾರ್ಯಕ್ರಮಕ್ಕೆ ಸ್ವಾಗತ. ದಿನಾಂಕ ಮಾರ್ಚ್ 15, ಶನಿವಾರ ಸಂಜೆ 6 ರಿಂದ 8 ಗಂಟೆ . ಸ್ಥಳ : ಲಿವಿಂಗ್ ವರಲ್ಡ್ಸ್ ಇವಾಂಜಲಿಕಲ್ ಲೂದರನ್ ಚರ್ಚ್, 3700, ಎಸ್ ಮೇಸನ್ ರಸ್ತೆ, Katy TX 77450.
ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ : ವಿದುಷಿ ರಾಜೇಶ್ವರಿ ಭಟ್. ಪಕ್ಕವಾದ್ಯ ವಿದ್ವಾನ್ ವಿಠಲ್ ರಾಮಮೂರ್ತಿ, (ಪಿಟೀಲು), ವಿದ್ವಾನ್ ಪೂವಲೂರ್ ಶ್ರೀನಿವಾಸನ್ ( ಮೃದಂಗ). ಪ್ರವೇಶ ಉಚಿತ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ವಾಸು ಐತಾಳ, (713) 480- 7821
"ಸಂಗೀತ ರಾಯಭಾರಿ" ವಿದುಷಿ ರಾಜರಾಜೇಶ್ವರಿ ಭಟ್ :
ಹ್ಯೂಸ್ಟನ್ ನ ಭಾರತೀಯ ಶಾಸ್ತ್ರೀಯ ಸಂಗೀತ ವಲಯದಲ್ಲಿ ಕಳೆದ ಎರಡು ವರ್ಷಗಳಿಂದ ಚಿರಪರಿಚಿತವಾಗಿರುವ ಹೆಸರು ಶ್ರೀಮತಿ ರಾಜೇಶ್ವರಿ ಭಟ್. ಶ್ರೀಮತಿ ಭಟ್ ಮೂಲತಃ ಧರ್ಮಸ್ಠಳ ಸಮೀಪದ ನಿಡ್ಲೆ ಗ್ರಾಮದ ಸುಬ್ರಾಯ ಹೆಬ್ಬಾರ್ ಹಾಗೂ ಶ್ರೀಮತಿ ಕೃಷ್ಣವೇಣಿ ದಂಪತಿಗಳ ಸುಪುತ್ರಿ ಹಾಗೂ ಮಡಂತ್ಯಾರು ಹರೀಶ್ ಭಟ್ ಇವರ ಧರ್ಮಪತ್ನಿ. ಸಂಗೀತಕಾರರ ಮನೆತನದಲ್ಲಿ ಹುಟ್ಟಿದ ಇವರಿಗೆ ತಾಯಿಯೇ ಮೊದಲ ಗುರು. ನಂತರ ಪಿಟೀಲು ವಾದನದಲ್ಲಿ ಇಂದು ಹೆಸರುವಾಸಿಯಾಗಿರುವ ಅಣ್ಣ ವಿಠಲ ರಾಮಮೂರ್ತಿಯವರ (ಲಾಲ್ಗುಡಿ ಜಯರಾಮರ ಶಿಷ್ಯ) ಮಾರ್ಗದರ್ಶನದಲ್ಲಿ ಹೆಚ್ಚಿನ ಅಭ್ಯಾಸ. ಸೇತಲಪತಿ ಬಾಲಸುಬ್ರಹ್ಮಣ್ಯಂ, ಶ್ರೀಮತಿ ರುಕ್ಮಿಣಿ ರಮಣಿ, ನೈವೇಲಿ ಸಂತಾನಗೋಪಾಲನ್ ಹಾಗೂ ಸಂಗೀತ ಕಲಾಚಾರ್ಯ ಚೆಂಗಲಪೇಟೆ ರಂಗನಾಥನ್ ಇವರಿಂದಲೂ ಸಂಗೀತಾಭ್ಯಾಸವನ್ನು ಪಡೆದರು.
ಆಕಾಶವಾಣಿಯ ಮೊದಲ ದರ್ಜೆಯ ಕಲಾವಿದೆ, ದೂರದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಭಾರತದಾದ್ಯಂತ ಸಂಗೀತ ಕಛೇರಿ ನಡೆಸಿದವರು, 2003 ರಲ್ಲಿ ಚೆನ್ನೈಯ "ಕೃಷ್ಣಗಾನ ಸಭಾ" ದ "ಅತ್ಯುತ್ತಮ ಕಛೇರಿ" ಪ್ರಶಸ್ತಿವಿಜೇತೆ , ಹೀಗೆ ಇವರ ಗರಿಮೆಗೆ ಹತ್ತು ಹಲವು ಕಾರಣಗಳಿದ್ದರೂ ಅದರಲ್ಲಿ ಎದ್ದು ಕಾಣುವುದು ಶ್ರೀಮತಿ ಭಟ್ ಅವರು ಸ್ಠಾಪಿಸಿ ಬೆಳೆಸಿದ "ಕೃಷ್ಣ ಗಾನ ಸುಧಾ ಸಂಗೀತ ವಿದ್ಯಾಲಯ". ಗ್ರಾಮೀಣ ಮಕ್ಕಳಿಗೆ ಸಂಗೀತ ಕಲಿಸುವುದರ ಮೂಲಕ ಉತ್ತಮ ಮಟ್ಟದ ಕಲಾವಿದರ ಹಾಗೂ ಶ್ರೋತೃ ವರ್ಗದವರ ನಿರ್ಮಾಣ ಮಾಡುವ ಉದ್ದೇಶದಿಂದ ಹುಟ್ಟಿದ ಈ ಸಂಸ್ಠೆ ಇಂದು 250 ಮಕ್ಕಳಿಗೆ 5 ಶಾಖೆಗಳಲ್ಲಿ ಉಚಿತ ಸಂಗೀತ ಶಿಕ್ಷಣ ನೀಡುತ್ತಿದೆ.
ಪಟ್ಟಣದ ಗೌಜಿ-ಗದ್ದಲಗಳಿಲ್ಲದೆ, ಹಳ್ಳಿಯ ಪ್ರಶಾಂತ ನೈಸರ್ಗಿಕ ವಾತಾವರಣದಲ್ಲಿ ಪ್ರತಿವರ್ಷವೂ ಸಂಗೀತೋತ್ಸವ, ಶಾರದೋತ್ಸವ ಹಾಗೂ ವಸಂತ ಸಂಗೀತ ಶಿಬಿರ (ಸಮ್ಮರ್ ಕ್ಯಾಂಪ್) ನಡೆಸಿ, ಖ್ಯಾತ ಸಂಗೀತ ವಿದ್ವಾಂಸರುಗಳನ್ನು ಕರೆಸಿ ಅವರ ಕಛೇರಿ, ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ ಆ ಮೂಲಕ ವಿದ್ಯಾರ್ಥಿಗಳಿಗೆ ಸರ್ವತೋಮುಖ ಶಿಕ್ಷಣ ನೀಡುವುದರಲ್ಲಿ ಈ ಸಂಸ್ಥೆ ಸಫಲವಾಗಿದೆ. ಲಾಲ್ಗುಡಿ ಜಯರಾಮ್, ನೈವೇಲಿ ಸಂತಾನ ಗೋಪಾಲನ್, ಎಸ್. ಪಿ. ರಾಮ್, ಸೆತಲಪತಿ ಬಾಲಸುಬ್ರಹ್ಮಣ್ಯ, ವಿದ್ಯಾ ವೆಂಕಟಾಚಲಂ, ಕಸ್ತೂರಿ ರಂಗನ್, ವಿಜಯ ಶಿವ, ಟಿ. ಎಂ. ಕೃಷ್ಣನ್ ಇವರೆಲ್ಲ ಇಲ್ಲಿ ಕಛೇರಿ, ಕಮ್ಮಟ ನಡೆಸಿದ ಕೆಲವು ಶ್ರೇಷ್ಠ ಸಂಗೀತಕಾರರು. ಎರಡು ವಾರಗಳ ಕಾಲ ನಡೆಯುವ ಬೇಸಿಗೆಯ ಶಿಬಿರದಲ್ಲಿ ಪಿಟೀಲು ಅಭ್ಯಾಸ, ಸಂಗೀತ ಬೋಧನೆ, ರಸಪ್ರಶ್ನೆ, ವೇದಿಕೆಯ ಅವಕಾಶ ಹೀಗೆ ಮುಂಜಾನೆಯಿಂದ ರಾತ್ರಿಯ ವರೆಗೂ ಹಲವಾರು ಚಟುವಟಿಕೆಗಳನ್ನು ನಡೆಸಲಾಗುತ್ತದೆ.
ಶಿಬಿರಾರ್ಥಿಗಳಿಗೆ ಉಚಿತ ವಸತಿ ಆಹಾರಗಳನ್ನು ಕುಂದಿಲ್ಲದಂತೆ ಏರ್ಪಡಿಸುವುದರೊಂದಿಗೆ ಅವರನ್ನೆಲ್ಲಾ ಸ್ವಂತ ಮನೆಯವರಂತೇ ಪ್ರೀತಿಯಿಂದ ನೋಡಿಕೊಳ್ಳುವ ವಿಶಾಲ ಹೃದಯ ಶ್ರೀಮತಿ ಭಟ್ ಹಾಗು ಅವರ ಕುಟುಂಬದವರದ್ದು. ಇದಕ್ಕೆ ಊರಿನ ಸಂಗೀತಪ್ರೇಮಿಗಳ ಆತ್ಮೀಯ ಸಹಕಾರವೂ ದೊರೆಯುತ್ತಿದೆ. ಈ ವಿದ್ಯಾಲಯದ ಅನೇಕ ವಿದ್ಯಾರ್ಥಿಗಳಿಗೆ ರಾಜ್ಯ ರಾಷ್ಟ್ರಮಟ್ಟದ ಪ್ರಶಸ್ತಿಗಳು ಬಂದಿದ್ದು, ರಾಜ್ಯ ರಾಷ್ಟ್ರ ಮಟ್ಟದ ವಿದ್ಯಾರ್ಥಿ ವೇತನವನ್ನು ಪಡೆಯುತ್ತಿದ್ದಾರೆ.
ಶ್ರೀಮತಿ ಭಟ್ ಹಾಗೂ ಅವರ ಅಣ್ಣ ವಿಠಲ ರಾಮಮೂರ್ತಿಯವರ ನಿಷ್ಠೆ ಸಾಧನೆಗಳನ್ನು ಗುರುತಿಸಿದ ಹ್ಯೂಸ್ಟನ್ ನ "ಸ್ವರಾಲಯ ಆರ್ಟ್ಸ್ ಫಾರಂ" ನ ನಿರ್ದೇಶಕ ರವಿ ಅಯ್ಯರ್ ಇವರು ಶ್ರೀಮತಿ ಭಟ್ ಅವರನ್ನು ತಮ್ಮ ಸಂಸ್ಠೆಯಲ್ಲಿ ಶಿಕ್ಷಕಿಯಾಗಿ ಕರೆಸಿಕೊಂಡಿದ್ದಾರೆ. ಈಗ ಇಲ್ಲಿನ ಸಂಗೀತಾಸಕ್ತರಿಗೆ (2 ವರ್ಷದಿಂದ 90 ವರ್ಷದವರೆಗಿನವರು!) ಅದೇ ಶ್ರದ್ಧೆ ಹಾಗೂ ಪ್ರೀತಿಯಿಂದ ಅಭ್ಯಾಸ ಮಾಡಿಸುತ್ತಿದ್ದಾರೆ. ತಾಳ್ಮೆಯೇ ಮೂರ್ತಿವೆತ್ತಂತ "ರಾಜೇಶ್ವರಿ ಮೇಡಂ" ನ ಸಮ್ಮುಖದಲ್ಲಿ ಮಕ್ಕಳು ತಾವಾಗಿ ಅರಳುತ್ತಾರೆ.
ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುವಂತೆ ಅನೇಕ ನವನವೀನ ವಿಧಾನಗಳನ್ನು ಇವರು ಅಳವವಡಿಸಿಕೊಂಡಿದ್ದಾರೆ. ಅದರಲ್ಲಿ ಗಮನೀಯವಾದದ್ದು "ಗೃಹ ಸಂಗೀತ". ಸಂಗೀತ ವಿದ್ಯಾರ್ಥಿಗಳೇ ಅವರವರ ಮನೆಯಲ್ಲಿ ಒಂದು ಗಂಟೆ ಕಾಲ ಕಛೇರಿ ನಡೆಸುತ್ತಾರೆ. ಪಕ್ಕವಾದ್ಯಕೂ ವಿದ್ಯಾರ್ಥಿಗಳೇ. ಬಂಧು ಮಿತ್ರರು ಹಾಗೂ ಸಹಪಾಠಿಗಳ ಸಮ್ಮುಖದಲ್ಲಿ ನಡೆಯುವ ಈ ಕಛೇರಿ ಕಲಿಕೆಗೆ ಹೊಸ ಆಯಾಮವನ್ನೇ ನೀಡುತ್ತದೆ. ಹ್ಯೂಸ್ಟನ್ ಚಿಲ್ಡ್ರನ್ ಮ್ಯೂಸಿಯಂನಲ್ಲಿ ದೀಪಾವಳಿ, ಕ್ರಿಸ್ಮಸ್ ಸಮಯದಲ್ಲಿ ಮಕ್ಕಳಿಂದ ಸಂಗೀತ ಕಛೇರಿ, ತ್ಯಾಗರಾಜ ಆರಾಧನೆ, ಪುರಂದರ ದಾಸ ಆರಾಧನೆ ಇವೇ ಮೊದಲಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಾರೆ.
ಉಜಿರೆಯ ಕೃಷ್ಣಗಾನ ಸುಧಾ ಸಂಗೀತ ವಿದ್ಯಾಲಯವನ್ನು ಇಲ್ಲಿಂದಲೇ ಬೆಂಬಲಿಸಿ ನಿರ್ದೇಶಿಸುತ್ತಿದ್ದಾರೆ. ಈ ಶಾಲೆಯನ್ನು ಕರ್ನಾಟಕದ "ಕಲಾಕ್ಷೇತ್ರ" ವಾಗಿಸುವ ಇವರ ಕನಸು ನನಸಾಗಲಿ ಎಂಬುದೇ ಅವರ ಅಭಿಮಾನಿಗಳ ಹಾರೈಕೆ.


Click it and Unblock the Notifications
