ಇದುಭಾಗ್ಯ ಇದುಭಾಗ್ಯ ಎಂದ ಸಿಂಗಪುರ ಕನ್ನಡಿಗರು
ವರದಿ : ವಾಣಿ ರಾಮದಾಸ್, ಸಿಂಗಪುರ
ಪುರಂದರ ಆರಾಧನೆ-ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರಿಗೆ ಸಂಗೀತ ಕಲಿತ, ಕಲಿಯುವ, ಸಂಗೀತ ಕಲಾಭಿಮಾನಿಗಳು ಸಲ್ಲಿಪ "ಗುರುವಂದನೆ". ತಮ್ಮ ಸರಳ, ಸುಂದರ, ಸುಲಲಿತ ರಚನೆಗಳಿಂದ ಸಾಮಾನ್ಯ ಜನರ ನಾಲಿಗೆಯಲ್ಲಿ ಭಕ್ತಿರಸವನ್ನು ಹೊರ ಹೊಮ್ಮಿಸಿ ರಾಮನಾಮ ಪಾಯಸಕ್ಕೆ, ಕೃಷ್ಣನಾಮ ಸಕ್ಕರೆ ಎಂದುಲಿದ ದಾಸವರೇಣ್ಯರನು ನೆನೆದು, ನಮಿಪ "ಪುರಂದರ ನಮನ" ದ ಸದವಕಾಶ ಇದೇ ಫೆಬ್ರವರಿ 17ರ ಸಂಜೆ, ಸಿಂಗಪುರ ಕನ್ನಡ ಸಂಘದ ವತಿಯಿಂದ ಸಿಂಗಪುರದ ವಡಪತ್ತಿರೈ ಕಾಳಿಯಮ್ಮನ್ ದೇಗುಲದಲ್ಲಿ ನಡೆಯಿತು.
ಏಳು ಸ್ವರವು ಸೇರಿ ಸಂಗೀತವಾಯಿತು ಎಂಬುದು ಎಲ್ಲರೂ ಅರಿತ ವಿಷಯ. ಈ ಸಪ್ತ ಸ್ವರಗಳ ಸುಮಧುರತೆಯನ್ನು ಸರಳೆ ವರಸೆ, ಜಂಟಿ ವರಸೆ, ದಾಟುವರಸೆ, ಮೇಲುಸ್ಥಾಯಿ, ಅಲಂಕಾರಗಳೆಂದು ವಿಂಗಡಿಸಿ ಅದಕ್ಕೆ ವೇಗ, ಲಯ, ತಾಳ, ರಾಗ ಪದ್ಧತಿಗಳ ನಿಯಮಗಳನ್ನು ಅಳವಡಿಸಿ, ಕರ್ನಾಟಕ ಸಂಗೀತ ಕಲಿಕೆಯಲಿ ಪ್ರಥಮ ಪಾಠದ, ಮೊದಲ ಭದ್ರ ಬುನಾದಿ ಹಾಕಿದವರು ದಾಸವರೇಣ್ಯ ಪುರಂದರದಾಸರು. ಈ ನಿಯಮಾವಳಿಗಳನ್ನು ಅವರು ಸುಮಾರು 500 ವರುಷಗಳ ಹಿಂದೆ ಕರ್ನಾಟಕ ಸಂಗೀತದಲ್ಲಿ ಅಳವಡಿಸಿ "ಕರ್ನಾಟಕ ಸಂಗೀತ ಪಿತಾಮಹ" ಎಂದೆನಿಸಿಕೊಂಡರು.
ದಾಸ ಸಾಹಿತ್ಯದ ಇತಿಹಾಸದಲ್ಲಿ ಪುರಂದರದಾಸರಿಗೆ ಅಗ್ರಗಣ್ಯ ಸ್ಥಾನ. ದಾಸರು ಹಿರಿಯ ಭಕ್ತ, ಹಾಡುಗಾರ, ಕೀರ್ತನಕಾರ. ಪುರಂದರ ದಾಸರ ಕೀರ್ತನೆಗಳಲ್ಲಿ ಸಮಾಜ ವಿಮರ್ಶೆ, ಸಮಾಜ ಬೋಧನೆ, ದೇವರ ನಾಮ ಮಹಿಮೆ, ಅಂತರಂಗ ನಿವೇದನೆ, ಆಧ್ಯಾತ್ಮಿಕ ಕಲ್ಪನೆಗಳು ಕಂಡು ಬರುತ್ತದೆ. ದಾಸರ ಕೃತಿಗಳಲ್ಲಿ ಭಕ್ತನ ಸಂಪೂರ್ಣ ಸಮಪರ್ಣೆಯ ಸಾಕ್ಷಾತ್ಕಾರ ಸುಂದರ ರೂಪ ಕಂಡು ಬರುತ್ತದೆ. ಹಾಗೆಯೇ ಭಕ್ತಿ, ಶೃಂಗಾರ, ಹಾಸ್ಯ, ವಾತ್ಸಲ್ಯ, ವೈರಾಗ್ಯ, ನೀತಿಭೋಧೆ, ಜೀವನ ನಿಷ್ಠೆ ಇದೆ.
ಹಲವಾರು ವರುಷಗಳಿಂದ ಸಿಂಗಪುರದಲ್ಲಿ ನಡೆಯುತ್ತಿರುವ ಪುರಂದರ ನಮನದ ಮುಖ್ಯ ರೂವಾರಿ ಕನ್ನಡಿಗರಾದ ಸಂಗೀತ ವಿದುಷಿ ಶ್ರೀಮತಿ ಭಾಗ್ಯಮೂರ್ತಿ. ಭ್ಯಾಗ್ಯಮೂರ್ತಿ ಅವರ ಶಿಷ್ಯವೃಂದದಿಂದ ಪಿಳ್ಳಾರಿ ಗೀತೆಗಳು, ಶ್ರೀಗಣನಾಥ, ಕೆರೆಯ ನೀರನು ಕೆರೆಗೆ ಚೆಲ್ಲಿ, ವೆಂಕಟರಮಣನೆ ಬಾರೋ ಹಾಗು ಜಗದೋದ್ಧಾರನ ಕನ್ನಡೇತರರ ನಾಲಿಗೆಯಲ್ಲಿ ಸುಶ್ರಾವ್ಯವಾಗಿ, ಸರಿಯಾದ ಉಚ್ಚಾರಣೆಯಲ್ಲಿ ಮೂಡಿ ಬಂದದ್ದು ಶ್ಲಾಘನೀಯ.
'ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ' ಎಂದು ಭಕ್ತಿ ಸಕ್ಕರೆಯ ಹಂಚಿದ ಆದಿಗುರು ಪುರಂದರರ ಪೂರ್ವೇತಿಹಾಸ, ರಚನೆಗಳ ಮಾಹಿತಿಯನ್ನು ಸಂಗೀತ ವಿದುಷಿ ಡಾ.ಸರೋಜಾ ಶ್ರೀನಾಥ್ ಹಾಗೂ ನೃತ್ಯಪಟು ಡಾ.ಸಿರಿರಾಮ ನೀಡಿದರು.
ಕನ್ನಡಿಗರು ಹಾಗೂ ಸ್ಥಳೀಯ ಸಂಗೀತಗಾರರಿಂದ ನರಜನ್ಮ ಬಂದಾಗ, ಕಂಡೆನಾ ಉಡುಪಿಯ ಕೃಷ್ಣನಾ, ಕಂಡೆನಾ ಗೋವಿಂದನ, ಇದು ಭಾಗ್ಯ, ಇದು ಭಾಗ್ಯ, ಕ್ಷೀರಾಬ್ಧಿ ಕನ್ನಿಕೆ ಕೀರ್ತನೆಗಳು ಸಂಗೀತ ಕಲಾಭಿಮಾನಿಗಳಿಗೆ ಪುರಂದರ ರಚನೆಗಳನು ಮತ್ತೆ ಮತ್ತೆ ಕೇಳುವ ಭಾಗ್ಯ ಕೊಟ್ಟಿತು. ಸರವಣನ್ ತಂಡವರಿಂದ ಮೂಡಿದ ಪುರಂದರರ ರಾಮನಾಮವ ನುಡಿ, ನುಡಿ, ಕಾಮಕ್ರೋಧಗಳ ಬಿಡಿ, ಬಿಡಿ- ಕಿವಿಗಿಂಪಾಗಿತ್ತು, ಹೊಸದೆನಿಸಿತ್ತು ಕೂಡ.
ಗಾಯನವೇ ಏಕೆ, ನೃತ್ಯ ರೂಪ ನಮನವೂ ಸಲ್ಲಿಪೆವೆಂದು ಏನು ಮಾಡೆನೋ ರಂಗಾ, ಏಕೆ ಬೆಳಗಾಯಿತು ಎನ್ನುತ್ತಾ ಉತ್ತಮ ನೃತ್ಯಗೈದು ಮನಗೆದ್ದರು ನೃತ್ಯಶಿಕ್ಷಕಿ ವಿಘ್ನೇಶ್ವರಿ. ದಾಸಶ್ರೇಷ್ಠನಿಗೆಂದೇ ಮೀಸಲಾದ ಅಂದಿನ ಕಾರ್ಯಕ್ರಮದಲ್ಲಿ ಜಗನ್ಮೋಹನನೇ ಕೃಷ್ಣ, ನೀನೇ ಅನಾಥಬಂಧು, ಮನ್ನಾರು ಕೃಷ್ಣಗೆ ಮಂಗಳ, ಕೆರೆಯ ನೀರನು ಕೆರೆಗೆ ಚೆಲ್ಲಿ, ಭಾಗ್ಯಾದ ಲಕ್ಷ್ಮಿ ಬಾರಮ್ಮ ಹಾಡುಗಳಿಗೆ ನೃತ್ಯ ನಮನ ಸಲ್ಲಿಸಿದರು ರಂಜನಿ, ಕನಕಸಭ ಹಾಗೂ ಜಿ.ಐ.ಸಿ.ಸಿ. ತಂಡದವರು.
ಪಿತಾಮಹನ ಆರಾಧನೆಯ ವೇದಿಕೆ ಹಾಡುಗಾರ ವೇದಿಕೆ. ಪ್ರತಿಯೋರ್ವ ಸಂಗೀತ ಪ್ರೇಮಿಯೂ ಹಿರಿಯ ವ್ಯಕ್ತಿಗೆ ಸಂಗೀತದ ಮೂಲಕ ಸಲ್ಲಿಸುವ ಪುರಂದರ ನಮನವೆಂಬ ಪೂಜೆಗೆ ಪಕ್ಕವಾಧ್ಯಗಳ ತಕ್ಕ ಸಾರಥ್ಯ ನೀಡಿದರು ಅಖಿಲೇಶ್ ಮೃದಂಗ, ಆದಿತ್ಯ-ವಯಲಿನ್. ಸಿಂಗಪುರ ಕನ್ನಡಸಂಘದ ಅಧ್ಯಕ್ಷರಾದ ಬಿ.ಕೆ.ರಾಮದಾಸ್ ಸ್ವಾಗತ ಭಾಷಣ, ಡಾ.ವಿಜಯಕುಮಾರ್ ವಂದನಾರ್ಪಣೆ, ವಿಶಾಲಾಕ್ಷಿ ವೈದ್ಯ-ನಿರೂಪಣೆಯ ಕಾರ್ಯ ನಿರ್ವಹಿಸಿದರು.
ಅಂದು ಸಂಗೀತವೇ ವೇದಿಕೆ, ಸ್ವರ, ರಾಗ, ತಾಳಗಳೇ ಪಕ್ಕವಾದ್ಯಗಳು. ಭಾಷೆ, ಪ್ರಾಂತ್ಯಗಳ ಅಹಂ ಬಿಟ್ಟು ಸ್ವಯಂ ಪ್ರೇರಿತರಾಗಿ ಹಾಡಲು, ಕೇಳಲು ಬಂದ ಸಭಿಕರು ತಂಬೂರಿ ಮೀಟಿದವ, ಭವಾಬ್ಧಿ ದಾಟಿದವ ಪದಕ್ಕೆ ಧ್ವನಿಗೂಡಿಸಿ ಸಂಗೀತಾರಧನೆಯ ಸವಿದು, ಧನ್ಯತೆ ಪಡೆದರು. ಸಂಗೀತಾಭಿಮಾನಿಗಳ ಮನದಲಿ ಪದಗಳ ಭಕ್ತಿ ರಸದ ತಂಬೂರಿ ಮೀಟಿ, ಸಂಗೀತ ಪ್ರೇಮಿಗಳ ಭವಾಬ್ಧಿ ದಾಟಿಸಿ, ಮನದ ತಾಳವ ತಟ್ಟಿ, ಪುರಂದರನ ನೆನೆದೇವಾ ಎಂಬ ಭಾವನೆ ಹೊತ್ತು ಇದು ಭಾಗ್ಯ, ಇದು ಭಾಗ್ಯ ಎಂದರು ಸಿಂಗಪುರದ ಪುರಂದರ ಭಕ್ತರು.


Click it and Unblock the Notifications
