• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ನಿಂದ ಸಾಧ್ಯ ಅಂದುಕೊಂಡರೆ,ಅರ್ಧ ಕೆಲಸ ಪೂರ್ಣ!

By Staff
|

ಸಿಂಗಪುರ ಕನ್ನಡ ಸಂಘದಲ್ಲೊಂದು ವಿಶೇಷ ಕಾರ್ಯಕ್ರಮ. ಅಂದು ಶ್ರೀ ನಿರ್ಭಯಾನಂದ ಸ್ವಾಮೀಜಿ ಅವರಿಂದ ಆತ್ಮವಿಶ್ವಾಸದ ಅಮೃತ ವಿತರಣೆ...


The Power of Positive Thinking!ಪ್ರತಿ ನಿತ್ಯ ನಮ್ಮ ಈ ಯಾಂತ್ರಿಕ ಜೀವನಲ್ಲಿ ಏರುಪೇರು ಸಹಜ. ಹಲವಾರು ಕಾರಣಗಳಿಂದ ನಮ್ಮ ಆತ್ಮವಿಶ್ವಾಸ ಕುಗ್ಗುತ್ತದೆ. ಹೀಗಾಗಿ ನಾವು ನಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು. ವ್ಯಕ್ತಿತ್ವ ಸೃಷ್ಟಿಸಿಕೊಳ್ಳಬಹುದು. ಉನ್ನತಿ-ಅವನತಿಗಳೆರಡೂ ನಮ್ಮ ಕೈಯಲ್ಲೇ ಇದೆ ಎಂದು ಬಿಜಾಪುರ ಮತ್ತು ಗದಗಿನ ರಾಮಕೃಷ್ಣ-ವಿವೇಕಾನಂದಾಶ್ರಮದ ಶ್ರೀ ನಿರ್ಭಯಾನಂದ ಸ್ವಾಮೀಜಿ ಹೇಳಿದರು. ಜು.21ರ ಸಂಜೆ ಸಿಂಗಪುರ ಕನ್ನಡಸಂಘದ 2007,08ನೇ ಸಾಲಿನ ನೂತನ ಸಮಿತಿಯ ಮೊಟ್ಟದ ಮೊದಲ ಕಾರ್ಯಕ್ರಮ ಆರಂಭಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀಗಳ ವಿಶೇಷ ಪ್ರವಚನ ನಡೆಯಿತು. ಧನಾತ್ಮಕ ಧೋರಣೆಯ ಪ್ರಯೋಜನಗಳ ಬಗ್ಗೆ ಅವರು ಅಂದು ಮಾತನಾಡಿದರು.

ಸ್ವಾಮಿ ವಿವೇಕಾನಂದರು "ನಾನು ಕೈಲಾಗದವನು" ಎಂದುಕೊಳ್ಳುವುದು ನಾವು ಮಾಡುವ ಮಹಾಪಾಪ ಎಂದಿದ್ದಾರೆ. ಶರೀರಕ್ಕೆ ಸಾವಿದೆ, ಆತ್ಮಕ್ಕೆ ಸಾವಿಲ್ಲ. ನಾನು ಯಾರಿಗೂ ಕಡಿಮೆ ಇಲ್ಲ, ನನ್ನಲ್ಲೂ ಸಾಧಿಸಬಹುದಾದ ಶಕ್ತಿ ಇದೆ, ನಾನೂ ಸಾಧಿಸಬಲ್ಲೆನು ಎಂಬ ಆತ್ಮವಿಶ್ವಾಸ ನಾವು ಬೆಳೆಸಿಕೊಳ್ಳಬೇಕು. ಮಕ್ಕಳಲ್ಲಿ ನಾವು ಆತ್ಮವಿಶ್ವಾಸವನ್ನು ಬೆಳೆಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಒಂದು ಸಲ ಇಂಗ್ಲೆಂಡಿನ ರಾಜಕೀಯ ದಿಗ್ಗಜ ವಿನ್ಸೆಂಟ್ ಚರ್ಚಿಲ್,ತಾವು ಓದಿದ ಶಾಲೆಯ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಹೋಗಿದ್ದರಂತೆ. ಅಂದು ಅವರು ವೇದಿಕೆಯಲ್ಲಿ ಹೇಳಿದ್ದು ಮತ್ತು ಮಾತನಾಡಿದ್ದು "ನೆವರ್ ನೆವರ್ ನೆವರ್ ಗಿವ್ ಅಪ್"ಇಷ್ಟೇ. ಸುವರ್ಣಾಕ್ಷರಗಳಲ್ಲಿ ಬರೆದು ಪ್ರತಿಯೋರ್ವನೂ ಜೀವನದಲ್ಲಿ ಪಾಲಿಸಬೇಕಾದ ಮಂತ್ರವಿದು.

ಆತ್ಮವಿಶ್ವಾಸವಿದ್ದರೇ, ಅಸಾಧ್ಯಗಳು ಸಾಧ್ಯವಾಗುತ್ತವೆ ಎನ್ನುವುದಕ್ಕೆ ಉತ್ತಮ ಉದಾಹರಣೆ; ಅಮೆರಿಕದ ಓಟಗಾರ್ತಿ ವಿಲ್ಮಾ ರುಡಾಲ್ಪ್.ಟೆನೆಸ್ಸೀ ಪ್ರಾಂತ್ಯದ ಸೈಂಟ್ ಬೆಥ್ಲೆಹೆಮ್‌ನಲ್ಲಿ ಪೋಲಿಯೋ ಪೀಡಿತಳಾಗಿ ಜನಿಸಿದ ವಿಲ್ಮಾಳ ಕಾಲನ್ನು ಯಾವ ವೈದ್ಯರು ಸರಿಪಡಿಸಲಾಗಲಿಲ್ಲ. ಧೃತಿಗೆಡದ ವಿಲ್ಮಾಳ ತಾಯಿ ಮಗಳ ಕಾಲಿಗೆ ಮನೆಯ ಮದ್ದುಗಳನ್ನು ದಿನಾ ಐದು ತಾಸು ಸವರುತ್ತಾ, ಆ ಪೋಲಿಯೋ ಆದ ಕಾಲಿಗೆ ವ್ಯಾಯಾಮ ಮಾಡಿಸುತ್ತಾ ಮಗಳಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದಳು. ಮುಂದೆ ಪೋಲಿಯೋ ಪೀಡಿತೆ ವಿಲ್ಮಾ,1960ರ ರೋಮ್ ಒಲಂಪಿಕ್ಸ್‌ನಲ್ಲಿ ನೂರು, ಇನ್ನೂರು ಹಾಗೂ ನಾಲ್ಕುನೂರು ಮೀಟರ್ ರಿಲೆಯಲ್ಲಿ ಮೊದಲ ಬಹುಮಾನ ಪಡೆದು ಆತ್ಮವಿಶ್ವಾಸದ ಪ್ರತೀಕವೆನಿಸಿದಳು ಎಂದು ಶ್ರೀಗಳು ವಿವರಿಸಿದರು.

ಜೀವನದಲ್ಲಿ ಶ್ರದ್ಧೆ, ಒಳ್ಳೆಯ ನಡವಳಿಕೆ, ಆತ್ಮವಿಶ್ವಾಸಗಳನ್ನು ಇಂದಿನ ಮಕ್ಕಳಿಗೆ ಚಿಕ್ಕಂದಿನಲ್ಲೇ ತಂದೆ-ತಾಯಿಯರು ಕಲಿಸಬೇಕು ಎಂದು ಮಹಾಭಾರತದ ಒಂದು ದೃಷ್ಟಾಂತವನ್ನು ಶ್ರೀಗಳು ಹೇಳಿದರು.

ಮಹಾಭಾರತ ಯುದ್ದ ಮುಗಿದ ಮೇಲೆ ಗಾಂಧಾರಿ, "ಪೂಜೆಗೆ, ಭಕ್ತಿಗೆ ಒಲಿಯುವ ಶ್ರೀಹರಿ, ಕುಂತಿ ಮಾಡಿದ ಪೂಜೆಗೆ ಅವಳಿಗೆ ಒಳ್ಳೆಯ ಮಕ್ಕಳ ಕೊಟ್ಟೆ. ಅವಳಂತೆಯೇ ನಿನ್ನನ್ನು ಪೂಜಿಸಿದ ನನಗೆ ನೂರು ಮಕ್ಕಳ ಸಾವನ್ನು ನೀಡಿದೆ. ಇದೇಕೆ ನಿನ್ನ ತಾರತಮ್ಯ?ಎಂದು ಕೃಷ್ಣನನ್ನು ಕೇಳುತ್ತಾಳೆ.

ಇದಕ್ಕೆ ಕೃಷ್ಣನ ಉತ್ತರ ;ಗಾಂಧಾರಿ, ಇದಕ್ಕೆ ನಾನು ಕಾರಣನಲ್ಲ. ನೀನೇ ಕಾರಣ. ಧೃತರಾಷ್ಟ್ರನನ್ನು ಮದುವೆಯಾದಾಗ ನೀನು ಅವನಿಗಿಲ್ಲದ ದೃಷ್ಟಿ ನನಗೇಕೆ ಎಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡೆ. ಅಂದು ನೀನು ಕಟ್ಟಿಕೊಂಡ ಅಂಧತ್ವ, ಮಕ್ಕಳು ಬೆಳೆದಂತೆ ಅವರ ತಪ್ಪು-ಒಪ್ಪುಗಳನ್ನು ಕಾಣಲಾಗಲಿಲ್ಲ. ಮುಂದೆ ಆ ಅಂಧತ್ವ ನಿನ್ನ ಮನ್ನಕ್ಕೂ ಕವಿಯಿತು. ಪಾಂಡು, ಮಾದ್ರಿ ಇಬ್ಬರು ತೀರಿಕೊಂಡ ನಂತರವೂ ಕುಂತಿ, ಕಣ್ಣಿಗೆ ಎಣ್ಣೆ ಹಾಕಿಕೊಂಡು ಮಕ್ಕಳ ತಪ್ಪು-ಒಪ್ಪುಗಳನ್ನು ತಿದ್ದಿ ಬೆಳೆಸಿದಳು. ಅದರ ಫಲವೇ ಇದೀಗ ನೀವುಗಳು ಅನುಭವಿಸುತ್ತಿರುವುದು. ಶ್ರೀಗಳು ನೀಡಿದ ದೃಷ್ಟಾಂತ ನೆರೆದವರ ಮನಮುಟ್ಟಿತು.

ಸಂಘದ ನೂತನ ಅಧ್ಯಕ್ಷ ಬಿ.ಕೆ.ರಾಮದಾಸ್ ಅವರಿಂದ ಸ್ವಾಗತ ಭಾಷಣ ಮುಗಿದ ನಂತರ, ಸ್ವಾಮೀಜಿಯವರೇ ಗಣೇಶ ಸ್ತುತಿಯಿಂದ ಕಾರ್ಯಕ್ರಮ ಪ್ರಾರಂಭ ಮಾಡಿದರು. ಸಂಘದ ಕಾರ್ಯದರ್ಶಿ ಸುರೇಶ್ ವಂದನಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡಿದರು.

ಕಾರ್ಯಕ್ರಮ ಮುಗಿದರೂ, ನಾನಿನ್ನೂ ಆ ಗುಂಗಿನಲ್ಲಿಯೇ ಇದ್ದೆ. ಮನದಲ್ಲಿ ಏನೇನೋ ಚಿಂತನ ಮತ್ತು ಮಂಥನ. ದಿನನಿತ್ಯ ಎಲ್ಲೆಡೆ ಡಾಂಬರಿನ ರಸ್ತೆ ಅಗಲವಾಗುತ್ತಿದೆ,ಮನದ ರಸ್ತೆ ಕಿರಿದಾಗುತ್ತಿದೆ. ಸಮಯದ ಬೆಲೆ ಹೆಚ್ಚಾದಂತೆ ಮನೆ, ಮನಗಳಲ್ಲಿ "ಅ೦ತರ ಹೆಚ್ಚುತ್ತಿದೆ. ಆರ್ಥಿಕತೆ ಬೆಳೆದಂತೆ ಗುಣಗಳು ಬಡವಾಗುತ್ತಿದೆ. ಮೌಲ್ಯಗಳು ಕುಸಿಯುತ್ತಿವೆ. ಅ೦ತರ೦ಗದಲ್ಲಿ ಕತ್ತಲೆಯಾಗುತ್ತಿವೆ. ಸ್ಪರ್ಧಾತ್ಮಕ ಮನೋಭಾವ ಹೆಚ್ಚು ಹೆಚ್ಚಾಗಿ ಬೆಳೆಯುತ್ತಲಿದ್ದು, ಒಂಟಿತನ ಮತ್ತು ಕೀಳರಿಮೆ ಸ್ಪರ್ಧಾತ್ಮಕ ಮನೋಭಾವ ಇಲ್ಲದವರನ್ನು ಕಾಡುತ್ತಿದೆ. ನಮ್ಮಲ್ಲೇ ಬೆಳೆಯುವ ಕೀಳರಿಮೆಯ ಗುಣವನ್ನು ಬೆಳೆಯುವ ಮೊದಲೇ ಚಿವುಟಬೇಕು. ಇಂದಿನ ಪರಿಸರದಲ್ಲಿ ಸದ್ವಿಚಾರ, ನಿದರ್ಶನಗಳನ್ನೊಂಡ ಇಂತಹ ಪ್ರವಚನಗಳು ಅನೇಕ ಬಾರಿ ಕುಗ್ಗಿದ ಮನಸ್ಸಿಗೆ ಚೇತನವನ್ನಿತ್ತು, ಮನುಷ್ಯನನ್ನು ಯೋಚಿಸುವಂತೆ ಮಾಡಿ ಅಡಗಿದ್ದ ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ಮಾಡುತ್ತದೆ. ಹೌದು ನಿಜ ಅಲ್ವಾ?

***

ಸ್ವಾಮಿ ನಿರ್ಭಯಾನಂದರ ಬಗ್ಗೆ :

1993ರಲ್ಲಿ ಸನ್ಯಾಸ ಸ್ವೀಕರಿಸಿದ ಶ್ರೀ ನಿರ್ಭಯಾನಂದ ಸ್ವಾಮೀಜಿಯವರು, ಗದಗ-ಬಿಜಾಪುರದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕವೇ ಅಲ್ಲದೆ, 2004ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ, ಜಿನಿವಾದ ಟ್ಯೂರಿನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಹಿಂದೂ ಧರ್ಮದ ಮಹತ್ವ, ಆಚಾರ, ವಿಚಾರಗಳ ಬಗ್ಗೆ, ವಿವೇಕಾನಂದರ ಸುಭಾಷಿತಗಳನ್ನು, ಉಪನಿಷದ್, ಭಗವದ್ಗಿತೆಗಳ ಪರಿಚಯವನ್ನು ನೀಡಿದ್ದಾರೆ.

ಬಿಜಾಪುರದಲ್ಲಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ಸ್ವಾಮೀಜಿಯವರು, ಸುಮಾರು 60 ಜನ ಅನಾಥ ಮಕ್ಕಳಿಗೆ ಆಶ್ರಯದಾತರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X