• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಕ್ಲೆಂಡಿನ ಚುಮುಚುಮು ಚಳಿ ಮಧ್ಯೆ ಯುಗಾದಿ ಸಂಭ್ರಮ

By Staff
|

ನ್ಯೂಜಿಲೆಂಡ್‌ ಕನ್ನಡ ಕೂಟದ ಸದಸ್ಯರಿಗೆ ಡಬ್ಬಲ್‌ ಸಡಗರ. ಯುಗಾದಿ ಸಮಾರಂಭಕ್ಕೆ ಚಿತ್ರದುರ್ಗದ ಶ್ರೀಗಳ ಜೊತೆಗೆ ಇನ್ನೊಬ್ಬರು ವಿಶೇಷ ಅತಿಥಿ ಬಂದಿದ್ದರು. ಅವರು ಯಾರು ಅಂದ್ರೆ... ?

Ugadi celebration in New Zealandಇದು ಯಾವ ಯುಗಾದಿ ಎಂದಿರಾ? ಹೌದು. ನಮ್ಮ ನ್ಯೂಜಿಲೆಂಡಿನಲ್ಲಿ ಇನ್ನೇನು ಚಳಿಗಾಲ ಪ್ರಾರಂಭವಾಗಲಿದೆ. ಶಾಲಾ ಕಾಲೇಜುಗಳ ಮಧ್ಯಂತರ ಬಿಡುವು, ಈಸ್ಟರ್‌ ಹಬ್ಬದ ವಿಸ್ತೃತ ವಾರಾಂತ್ಯ ಇವುಗಳ ಕಾರಣ ಈ ಬಾರಿಯ ಸರ್ವಜಿತ್‌ ಸಂವತ್ಸರದ ಆಚರಣೆಗೆ ಒಂದಿಷ್ಟು ತಡವಾಯಿತಷ್ಟೆ. ಹಾಗೆಂದು ಸಂಭ್ರಮಕ್ಕೇನೂ ಕಡಿಮೆಯಾಗಲಿಲ್ಲ.

ಈ ದೇಶದ ಇತಿಹಾಸದಲ್ಲಿ ಅತ್ಯುನ್ನತ ಗವರ್ನರ್‌ ಜನರಲ್‌ ಹುದ್ದೆಯನ್ನಲಂಕರಿಸಿದ ಮೊದಲ ಭಾರತೀಯ ಸಂಜಾತರಾದ ಆನಂದ್‌ ಸತ್ಯಾನಂದ್‌ ಹಾಗೂ ಅವರ ಪತ್ನಿ ಸೂಸನ್‌ ಸತ್ಯಾನಂದ್‌, ಭಾರತದ ಹೈಕಮಿಶನರ್‌ ಕೆ.ಪಿ. ಅರ್ನೆಸ್ಟ್‌, ಭಾರತೀಯ ಸಮಾಜದ ಅಧ್ಯಕ್ಷರು ಹಾಗೂ ಕನ್ನಡ ಕೂಟದ ಪೋಷಕರು ಆದ ಚಂದು ಭಾಯಿ ದಾರ್ಜಿ ಹಾಗೂ ಅನೇಕ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಆಹ್ವಾನಿತರಾಗಿ ಆಗಮಿಸಿದ್ದ ಈ ಸಭೆಗೆ ಚಿತ್ರದುರ್ಗದ ಬೃಹನ್ಮಠದ ಸ್ವಾಮೀಜಿ ಶ್ರೀ ಶಿವಮೂರ್ತಿ ಮುರುಘ ರಾಜೇಂದ್ರ ಶರಣರು ಬಂದಿದ್ದು ಹೆಚ್ಚಿನ ಕಳೆ ತಂದಿತ್ತು.

ಕಾರ್ಯಕ್ರಮದ ಆರಂಭವಾಗುವ ಮುನ್ನ ಪ್ರಭಾಕರ್‌ ಅವರು ಪೂಜೆ ಸಲ್ಲಿಸಿ ಸಕಲರಿಗೂ ಮಂಗಳವಾಗಲೆಂದು ಕೋರಿದರು. ಹೆಸರಾಂತ ಗಾಯಕಿ ಚೈತ್ರ ರವಿಶಂಕರ್‌ ಅವರ ಪ್ರಾರ್ಥನೆ ನಂತರ ನ್ಯೂಜಿಲೆಂಡ್‌ ಕನ್ನಡ ಕೂಟದ ಅಧ್ಯಕ್ಷರಾದ ಡಾ.ಲಿಂಗಪ್ಪ ಕಲ್ಬುರ್ಗಿ ಅವರು ಸ್ವಾಗತ ಭಾಷಣ ಮಾಡಿ ಕೂಟದ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾದ ಗವರ್ನರ್‌ ಜನರಲ್‌ ಆನಂದ್‌ ಸತ್ಯಾನಂದ್‌ ಅವರು ನ್ಯೂಜಿಲೆಂಡ್‌ನಲ್ಲಿರುವ ಭಾರತೀಯ ಸಮುದಾಯದ ಬಗ್ಗೆ ಬಹಳ ಅಭಿಮಾನದ ಮಾತುಗಳನ್ನ್ನಾಡಿ, ನಿಮ್ಮ ಭಾಷೆ ಮತ್ತು ಸಾಂಸ್ಕೃತಿಕ ಬೇರುಗಳನ್ನು ಉಳಿಸಿಕೊಳ್ಳಿ ಹಾಗೂ ನಿಮ್ಮಲ್ಲಿರುವ ಕ್ರಿಯಾಶಕ್ತಿಯನ್ನು ಪ್ರದರ್ಶಿಸಲು ಹಿಂಜರಿಯ ಬೇಡಿ ಎಂದರು.

ಭಾರತದ ಹೈ ಕಮಿಷನರ್‌ ಕೆ.ಪಿ. ಅರ್ನೆಸ್ಟ್‌ ಅವರು ಕರ್ನಾಟಕದ ಪ್ರಗತಿಯ ಬಗ್ಗೆ ಪ್ರಶಂಸೆಯ ಮಳೆಗರೆದು ಕನ್ನಡಿಗರ ಸಾಧನೆಗಳ ಸರಮಾಲೆಯನ್ನೇ ಸಭಿಕರ ಮುಂದಿಟ್ಟರು. ನ್ಯೂಜಿಲೆಂಡ್‌ ಪ್ರಜೆಗಳಾದ ನೀವು ನಿಮ್ಮತನ ಉಳಿಸಿಕೊಂಡೆ ಬೆಳೆಯಿರಿ ಎಂದು ಹಾರೈಸಿದರು.

ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು, ಇಡೀ ಕಾರ್ಯಕ್ರಮವನ್ನು ವೀಕ್ಷಿಸಿದ್ದು ಭಾಗವಹಿಸಿದವರಲ್ಲಿ ಉತ್ಸಾಹ ಮೂಡಿಸುವಲ್ಲಿ ಸಹಕಾರಿಯಾಯಿತು ಹಾಗೂ ಅವರ ಆಶೀರ್ವಚನ ಚೇತೋಹಾರಿಯಾಗಿತ್ತು.

ಅತ್ಯಂತ ವೈವಿಧ್ಯಮಯವಾದ ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಲವು ವಿಧದ ಹಾಡುಗಳು, ನೃತ್ಯಗಳು ಮತ್ತು ಮಕ್ಕಳೇ ಅಭಿನಯಿಸಿದ್ದ ಕಿರು ನಾಟಕ ಸೇರಿತ್ತು. ಆಕ್ಲೆಂಡಿಗೆ ಪ್ರವಾಸಿಯಾಗಿ ಬಂದಿರುವ ಶ್ರೀಮತಿ ಸುಗುಣ ಶ್ರೀನಿವಾಸ್‌ ಅವರ ವಯೋಲಿನ್‌ ವಾದನದಲ್ಲಿ ಪುರಂದರ ದಾಸರ ಗೀತೆಗಳು ಅತ್ಯುತ್ತಮವಾಗಿ ಮೂಡಿಬಂತು. ಚೈತ್ರಾ ರವಿ, ಅನುಪಮ ಪ್ರಭಾಕರ್‌, ಸ್ಮಿತ ಗೌರಿ , ಪವನ್‌ ಕೌಶಿಕ್‌, ಮೇಧಾ ಘಟ್ಕೆ, ವಿನಯ್‌ು, ಪ್ರಸಾದ್‌ ರಾವ್‌, ಇವರುಗಳು ಹರಿಸಿದ ಗಾನಾಮೃತಕ್ಕೆ ಸ್ಥಳೀಯ ರೇಡಿಯೋ ಗಾಯಕ ರವಿ ಶೆಟ್ಟಿಯವರು ಸಹ ಕೊಡುಗೆ ನೀಡಿದರು.

ಬಾಲ ನರ್ತಕಿಯರಾದ ಕು.ಮಾಯಂಕ, ವರ್ಷ ಪೈ, ಪೂಜಾ ಭಗತ್‌,ಅಖಿಲಾ ಪುತ್ತಿಗೆ,ಹಳೇ ಹುಲಿ ಪ್ರಭಾಕರ್‌ ಮತ್ತು ಮಹಿಳಾ ನೃತ್ಯ ವೃಂದದವರ ಮುಂಜಾನೆದ್ದು ಕುಂಬಾರಣ್ಣ ಜಾನಪದ ನೃತ್ಯ ರೂಪಕಗಳು, ಎಲ್ಲರೂ ತಾವೂ ಕುಣಿದು ಪ್ರೇಕ್ಷಕರೂ ಕುಳಿತಲ್ಲೇ ಕುಣಿಯುವಂತೆ ಪ್ರೇರೇಪಿಸಿದರು.

ಕನ್ನಡ ತಾಯಿಗೆ ಯಾವ ಊರಿನವರು ಹೆಚ್ಚು ಪ್ರಿಯ? ಬೆಂಗಳೂರಿನವರೋ? ಮಂಗಳೂರಿನವರೋ? ಅಥವಾ ಬೇರೆ ಇನ್ಯಾರೋ? ಪ್ರಕಾಶ್‌ ರಾಜಾರಾವ್‌ ವಿರಚಿತ ಆಗ್ರಪೂಜೆ ನಾಟಕದಲ್ಲಿ ಈ ಪ್ರಶ್ನೆಗೆ ಸ್ವಯಂ ಕನ್ನಡಮ್ಮನೇ (ಕ್ಷಮಿಸಿ ಆ ಮಾತೆಯ ಪಾತ್ರಧಾರಿ) ಉತ್ತರಿಸಿ , ನಿಜವಾದ ಅಭಿಮಾನದಿಂದ ಕನ್ನಡ ಕಲಿಯುತ್ತಾ ಇರುವ ಅವರು ನನಗೆ ಇಷ್ಟ ಎಂದು ಕೂಟ ನಡೆಸುತ್ತಿರುವ ಕುವೆಂಪು ಕನ್ನಡ ಶಾಲೆಯ ಪುಟಾಣಿ ವಿದ್ಯಾರ್ಥಿಗಳತ್ತ ಕೈ ತೋರಿದಾಗ ಪ್ರೇಕ್ಷಕರು ಹರ್ಷೋದ್ಗಾರ ಮಾಡಿದರು.

ಅನೇಕ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸ್ಥಳೀಯ ಕ್ರಿಕೆಟ್‌ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಕ್ರಿಕೆಟರ್‌ ಪ್ರಶಸ್ತಿ ಗಳಿಸಿದ ಪವನ್‌ ಕೌಶಿಕ್‌ ಹಾಗೂ ಅಂತ್ಯಾಕ್ಷರಿ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾದ ರಾಜ್‌ ಕುಮಾರ್‌ ದಂಪತಿಗಳು ಬಹುಮಾನವನ್ನಷ್ಟೇ ಅಲ್ಲ ಎಲ್ಲರ ಮೆಚ್ಚುಗೆಯನ್ನೂ ಗಳಿಸಿದರು.

ಕನ್ನಡ ಕೂಟದ ಉಪಾಧ್ಯಕ್ಷ ಪ್ರಕಾಶ್‌ ಬಿರಾದರ್‌ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಿಗೆ ವಂದನೆ ಸಲ್ಲಿಸಿದರು. ಕಾರ್ಯದರ್ಶಿ ಚಕ್ರಪಾಣಿಯವರು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಹಾಗೂ ಕನ್ನಡ ಕೂಟಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿರುವ ಭಾರತೀಯ ಸಮಾಜದವರಿಗೆ ಕೃತಜ್ಞ್ನತೆ ಅರ್ಪಿಸಿದರು.

ನ್ಯೂಜಿಲೆಂಡ್‌ ಮತ್ತು ಭಾರತದ ರಾಷ್ಟ್ರಗೀತೆಗಳನ್ನು ಹಾಗೂ ಕರ್ನಾಟಕದ ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಇವುಗಳನ್ನು ಎಲ್ಲರೂ ಹಾಡುವ ಮೂಲಕ ಒಂದು ಸುಂದರ ಸಂಜೆಯ ಕಾರ್ಯಕ್ರಮ ಮುಕ್ತಾಯವಾಯಿತು. ವಿಶ್ವನಾಥ್‌ ಮತ್ತು ಅನುಪಮ ಪ್ರಭಾಕರ್‌ ಅವರ ಕಾರ್ಯಕ್ರಮ ನಿರೂಪಣೆ ಆಕರ್ಷಣೀಯವಾಗಿತ್ತು.

ಊಟ ಹಾಕದಿದ್ರೆ (ಕನ್ನಡ) ಕೂಟ ಇರೋದು ಯಾಕೆ? ಅನ್ನೋದು ಹಳೆಯ ಜೋಕು. ಪಾಪ. ಈ ಬಾರಿ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯವರು ಅಕ್ಷರಶಃ ಹಗಲಿರುಳು ಶ್ರಮಿಸಿ ಸರ್ವಜಿತ್‌ ಯುಗಾದಿಗೆ ಒಂದು ಒಳ್ಳೆಯ ಕಾರ್ಯಕ್ರಮ ಅಯೋಜಿಸಿದ್ದಲ್ಲದೆ ಸೊಗಸಾದ ಒಬ್ಬಟ್ಟಿನ ಹಬ್ಬದೂಟವನ್ನು ಏರ್ಪಡಿಸಿದ್ದರು. ಕಲ್ಬುರ್ಗಿ, ಬಿರಾದರ್‌, ಚಕ್ರಪಾಣಿ ತಂಡಕ್ಕೆ ನಮೋನಮಃ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more