ಸಿಡ್ನಿ ಕನ್ನಡಿಗರ ಮನಮುದಗೊಳಿಸಿದ ದಸರಾ ಸಂಭ್ರಮ
ಸಿಡ್ನಿ ಕನ್ನಡಿಗರ ಸಾಂಸ್ಕೃತಿಕ ಸೇತುವೆಯಂತಿರುವ 'ಸುಗಮ ಕನ್ನಡ ಬಳಗ' ಅಕ್ಟೋಬರ್ 13ರಂದು ದಸರಾ ಸಂಭ್ರಮವನ್ನು ಹಮ್ಮಿಕೊಂಡಿತ್ತು. ಮಕ್ಕಳು ವಯಸ್ಕರೆನ್ನದೆ ಎಲ್ಲ ವಯೋಮಾನದ ಕನ್ನಡ ಪ್ರೇಮಿಗಳಲ್ಲಿ ಉತ್ಸಾಹದ ಮಹಾಪೂರ ಅಂದು ಮೇಳೈಸಿತ್ತು.
ಕಳೆದ ಒಂದು ವರ್ಷದಿಂದ ಸೃಜನಾತ್ಮಕ ಕಾರ್ಯಕ್ರಮಗಳನ್ನು ಕಮ್ಮಿಕೊಳ್ಳುತ್ತ ಬಂದಿರುವ ಸುಗಮ ಕನ್ನಡ ಸಂಸ್ಥೆ ಈ ಬಾರಿ ಕೂಡ ಎಲ್ಲರ ನಿರೀಕ್ಷೆಯಂತೆ ನಾಡಹಬ್ಬದ ಆಚರಣೆಯ ನಿಮ್ಮಿತ್ತ ಸಿಡ್ನಿ ಕನ್ನಡಿಗರನ್ನು ಒಗ್ಗೂಡಿಸಿತ್ತು, ಮನೋರಂಜನೆಯ ರಸದೌತಣ ಬಡಿಸಿತ್ತು.
ಶುಭಶ್ರೀ ಸಂಗಡಿಗರು ಹಾಡಿದ ಕರ್ಕಿಯವರ 'ಹಚ್ಚೇವು ಕನ್ನಡದ ದೀಪ' ಗೀತೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿತ್ತು. ಕನ್ನಡದ ಖ್ಯಾತ ಸಿನಿಮಾ, ಟಿವಿ ನಟಿ ಅಖಿಲಾರವರು ದೀಪ ಬೆಳಗಿಸಿ ಮನರಂಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಮ್ಮ ಬಳಗದ ಗಾಯಕರುಗಳಾದ ಪುಷ್ಪಾ, ಕು.ಅಪೂರ್ವ, ರಾಜು, ಶ್ರೀನಿವಾಸ ಇನ್ನೂ ಅನೇಕರು ಕಿಕ್ಕಿರಿದ ಸಭಾಂಗಣದಲ್ಲಿ ನೆರೆದಿದ್ದ ಶ್ರೋತೃಗಳನ್ನು ತಮ್ಮ ಮಧುರವಾದ ಕನ್ನಡ ಹಾಡುಗಳಿಂದ ರಂಜಿಸಿದರು.
ಭಕ್ತಿಗೀತೆ (ಗಜಮುಖನೆ..) ದಾಸರಪದಗಳು (ಅಚಾರವಿಲ್ಲದ ನಾಲಿಗೆ..) ಜಾನಪದ (ನಿಂಬೀಯಾ..ಪಂಚಮಿಹಬ್ಬ..) ಭಾವಗೀತೆಗಳು, ಯುಗಳಗೀತೆಗಳು, ಹಳೆಚಿತ್ರಗೀತೆಗಳು, ಹೊಸಗೀತೆಗಳು ನೆರೆದಿದ್ದ ಚಿತ್ರರಸಿಕರ ಮನಸೂರೆಗೊಂಡವು. ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿಯಾಗಿ ಹಾಡಲಾದ 'ನಾದಮಯ' ಹಾಗೂ 'ಆರಾಧಿಸುವೆ ಮದನಾರಿ' ಗೀತೆಗಳಂತೂ ಕಾರ್ಯಕ್ರಮದ ಹೈಲೈಟ್. ಈ ಹಾಡುಗಳು ನಾವು ಕರ್ನಾಟಕದಿಂದ ಹೊರಗಿದ್ದೇವೆಂಬ ಭಾವವನ್ನು ಹೊಡೆದುಹಾಕಿತ್ತು. ಅತ್ಯದ್ಭುತ ರಂಗಸಜ್ಜಿಕೆ, ಕಾರ್ಯಕ್ರಮದ ನಿರೂಪಣೆ ಒಂದು ಬಗೆಯ ಕಳೆಯನ್ನು ತಂದುಕೊಟ್ಟಿತ್ತು.
ಇಲ್ಲಿನ ಮಕ್ಕಳು ನಮ್ಮ ಭಾಷೆ ಸಂಸ್ಕೃತಿ ಎತ್ತಿಹಿಡಿಯುವುದರಲ್ಲಿ ಮೆರೆಸುವುದರಲ್ಲಿ ಬರೀ ಇಲ್ಲಿನ ಹಿರಿಯರಿಗಷ್ಟೇ ಅಲ್ಲ ಕರ್ನಾಟಕದಲ್ಲಿರುವ ಯಾವುದೇ ಮಕ್ಕಳಿಗೂ ಸರಿಸಾಟಿಯಾಗಬಲ್ಲರು ಎಂಬ ಮಾತು ಉತ್ಪ್ರೇಕ್ಷೆಯಲ್ಲ. ಮಕ್ಕಳು ಆಯ್ಕೆ ಮಾಡಿದ ಹಾಡುಗಳು, ಅವುಗಳನ್ನು ಹಾಡಿದ-ಆಡಿದ ರೀತಿ ಎಷ್ಟು ಹೊಗಳಿದರೂ ಸಾಲದು. ಪ್ರತಿಯೊಂದು ಹಾಡಿಗೂ ಸಭಿಕರ ಕಡೆಯಿಂದ ಬಂದ 'ಒನ್ಸ್ ಮೋರ್' ಒಕ್ಕೊರಲಿನಿಂದ ಮಕ್ಕಳ ಉತ್ಸಾಹ ಮತ್ತು ಸ್ಫೂರ್ತಿ ಇಮ್ಮಡಿಸಿತ್ತು. ಕುಮಾರಿಯರಾದ ಅಂಕಿತ, ಅಮಿತ,ಸೌಮ್ಯ, ಸಂಜನ, ಸಿರಿ, ಸುಪ್ರಿಯ, ಸವಿತ, ಕೃತಿಕ, ಕೀರ್ತನಾ,ಭಾವನ ಹಾಗೂ ಚಿರಂಜೀವಿಗಳಾದ ಅಕ್ಷಯ್ ಮತ್ತು ಸಂಜಯ್ ಹಾಡುತಿರಲು 'ಎದೆತುಂಬಿ ಹಾಡುವೆನು' ಟಿವಿ ಕಾರ್ಯಕ್ರಮ ಕಣ್ಮುಂದೆ ಬಂದಂತಿತ್ತು. ಪ್ರತಿ ಹಾಡಿನ ಮಧ್ಯೆ ನೀಡುತ್ತಿದ್ದ ದಸರಾ ಕುರಿತ ವಿವರಣೆ, ಹಿನ್ನೆಲೆ ಗಾಯಕರ ಪರಿಚಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ದಕ್ಷಿಣಾಮೂರ್ತಿ ಮತ್ತು ನಾಗರಾಜು ಸಜ್ಜುಗೊಳಿಸಿದ್ದ ಸುಗಮ ಕನ್ನಡ ಸಂಘದ ಅಂತರ್ಜಾಲ ತಾಣದ ಉದ್ಘಾಟಣೆಯನ್ನು ಸಿಡ್ನಿಯ 'ವಿಚಾರಸಂಧ್ಯಾ' ಎಂಬ ಕನ್ನಡ ಆಧ್ಯಾತ್ಮ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾದ ಅಶೋಕ್‌ರವರು ನೆರವೇರಿಸಿಕೊಟ್ಟರು. ಈ ಅಂತರ್ಜಾಲ ನಿರ್ಮಾಣದ ಅಂತ್ಯದ ಘಟ್ಟದಲ್ಲಿದ್ದು ಈಗ ಎಲ್ಲಾ ವಿಶ್ವ ಕನ್ನಡ ಬಂಧುಗಳಿಗೂ ಲಭ್ಯ. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ: http://www.sugamakannada.com/
ಬೊಂಬೆ ಹಬ್ಬ : ಹಾಡುಗಳ ರಂಜನೆ ಒಂದು ನಮೂನೆಯಾದರೆ ಬೊಂಬೆಗಳ ಪ್ರದರ್ಶನ ನೋಡುಗರನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ದಿತ್ತು. ಮೈಸೂರು ಅರಮನೆ-ಚಾಮುಂಡಿಬೆಟ್ಟದ ಸೆಟ್ ಅಂತೂ ಮೈಸೂರನ್ನೇ ಕಣ್ಮುಂದೆ ತಂದರೆ, ಹಂಪೆಯ ಕಲ್ಲುರಥದ ಸೆಟ್ ನಿಜವಾಗಲೂ ಕಲ್ಲಿನಿಂದಲೇ ಮಾಡಿಸಿದ್ದಿರಬೇಕು ಎಂದು ಎಲ್ಲರೂ ಮುಟ್ಟಿನೋಡಿ ಖಾತ್ರಿಪಡಿಸಿಕೊಳ್ಳುವಂತಿತ್ತು. ಸಿಡ್ನಿಯ ಕನ್ನಡದ ಮಕ್ಕಳು ಮೊಟ್ಟಮೊದಲ ದಸರೆ ನೋಡಿ ಆನಂದಿಸಿದರು. ಅದ್ದೂರಿ ದಸರಾ ಬೊಂಬೆ ಪ್ರದರ್ಶನವನ್ನು ಆಸ್ಟ್ರೇಲಿಯಾ ಹಿಂದೂ ಕೌನ್ಸಿಲ್‌ನ ಮುಖ್ಯಸ್ಥರಾದ ಡಾ|| ಬಾಲಸುಬ್ರಮಣ್ಯಮ್ ನಡೆಸಿಕೊಟ್ಟರು.
ಕಾರ್ಯಕ್ರಮದ ಕೊನೆಗೆ ಪ್ರತಿ ವರುಷದ ರೂಢಿಯಂತೆ ಸಮುದಾಯದಲ್ಲಿ ಕನ್ನಡ ಸೇವೆಗೈವ ಗಣ್ಯರನ್ನು ಗುರುತಿಸುವ ನಿಟ್ಟಿನಲ್ಲಿ ಈಬಾರಿ ಸುದರ್ಶನ ಅವರನ್ನು ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ "ರಂಗ ಭೂಷಣ" ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು.
ಪೂರಕ ಓದಿಗೆ-
ಬೊಂಬೆಗಳಲ್ಲಿ ರಾಮಾಯಣ ಕೂಡಿಸಿದ ಸವಿತಾ ರವಿಶಂಕರ್
ರಾಮಾಯಣ ದರ್ಶನ ಬೊಂಬೆಗಳ ಫೋಟೋ ಗ್ಯಾಲರಿ












Click it and Unblock the Notifications