ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಂಗ್ ಕಾಂಗಿನ ಭರತ ನಾಟ್ಯ ಪ್ರವೀಣೆ ರೂಪಾ ಕಿರಣ

By Staff
|
Google Oneindia Kannada News

ಬಹಳಷ್ಟು ವಿದ್ಯಾರ್ಥಿಗಳು ರೂಪಾ ಅವರಲ್ಲಿ ನೃತ್ಯ ಅಭ್ಯಾಸ ಮಾಡುತ್ತಿರುವುದು ಕನ್ನಡಿಗರೆಲ್ಲರಿಗೂ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಪರದೇಶದಲ್ಲಿದ್ದರೂ ನಮ್ಮ ದೇಶದ ಮಕ್ಕಳಿಗೆ ಈ ದೇಶದ ಸಂಸ್ಕ್ರತಿಯಾದ ಭರತ ನಾಟ್ಯವನ್ನು ಕಲಿಸುವ ರೂಪಾ ಅವರ ನೃತ್ಯ ಪ್ರೇಮವನ್ನು ಶ್ಲಾಘಿಸಲೇಬೇಕು. ಈಗಾಗಲೇ ದೇಶ ವಿದೇಶಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ರೂಪಾ ಕಿರಣ, ತಮ್ಮ ಗುರುಗಳಾದ ಡಾ.ವಸುಂಧರಾ ದೊರೆಸ್ವಾಮಿ ಅವರ ಕೀರ್ತಿಯನ್ನು ಬೆಳಗುತ್ತಿದ್ದಾರೆ.

  • ಗುರು ಬಬ್ಬಿಗದ್ದೆ, ಹಾಂಗ್ ಕಾಂಗ್
ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು|
ತೊಂದೆ ಧಾನ್ಯವನುಣ್ಣುತೊಂದೆ ನೀರ್‍ಗುಡಿದು||
ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು|
ಬಂದುದೀ ವೈಷಮ್ಯ? ಮಂಕುತಿಮ್ಮ||

ಹಾಂಗ್ ಕಾಂಗಿನ ಭರತ ನಾಟ್ಯ ಪ್ರವೀಣೆ ರೂಪಾ ಕಿರಣ ಹೌದು, ನಾವೆಲ್ಲ ಒಂದು. ನಮ್ಮಲ್ಲಿ ಪ್ರೀತಿಯಿದೆ, ಕರುಣೆಯಿದೆ, ದ್ವೇಷವಿದೆ, ವೈಷಮ್ಯವಿದೆ. ಇಷ್ಟಾದರೂ ಭಾರತ ವೈವಿದ್ಯತೆಯ ತವರೂರು. ನೂರಾರು ಭಾಷೆಗಳು, ನೂರಾರು ವೇಷಗಳು, ಹತ್ತು ಹಲವು ಸಂಸ್ಕ್ರತಿಯ ಬೇರು. ಇಂಥಹ ದೇಶದ ಕಲಾಪ್ರಕಾರವೂ ಅಷ್ಟೇ ವಿಶಿಷ್ಟ. ಪ್ರತೀ ರಾಜ್ಯಕ್ಕೂ ಅದರದೇ ಆದ ನೃತ್ಯ ಶೈಲಿ, ಭಾಷೆ, ವೇಷ. ಭರತನಾಟ್ಯ ಎಂಬುದು ಭರತ ಭೂಮಿಯ ಸಂಸ್ಕ್ರತಿಯನ್ನು ಎತ್ತಿ ಹಿಡಿದಿದೆ. ಇದು ವಿಶ್ವ ಮನ್ನಣೆ ಗಳಿಸಿದ ಚಿರನೂತನ ನೃತ್ಯ.

ಇದೇನಪ್ಪ ಎಲ್ಲಿಯ ಹಾಂಗ್ ಕಾಂಗ್, ಎಲ್ಲಿಯ ಭಾರತ, ಎಲ್ಲಿಯ ಭರತ ನಾಟ್ಯ, ಎಲ್ಲಿಯ ರೂಪಾ ಕಿರಣ ಅಂತಿರಾ? ಅಲ್ಲೇ ಇದೆ ವಿಶೇಷ. ಅನೇಕ ಕಲಾವಿದರು ದೇಶ ಬಿಟ್ಟು ಪರದೇಶಕ್ಕೆ ಬಂದಾಗ ತಮ್ಮ ಕಲೆಗೂ ಎಳ್ಳು ತರ್ಪಣ ಕೊಟ್ಟೇ ಬರುತ್ತಾರೆ. ಆದರೆ ಕಲೆಯ ಮೇಲೆ ಆಸಕ್ತಿ ಇರುವ ಕೆಲವೇ ಕೆಲವರು ಮಾತ್ರ ತಮ್ಮ ಉಸಿರಿನ ಕೊನೆಯವರೆಗೂ ಕಲೆಯ ಸೇವೆ ಮಾಡುತ್ತಿರುತ್ತಾರೆ. ಅಂಥ ವಿಶಿಷ್ಟ ಕಲಾವಿದೆ ರೂಪಾ ಕಿರಣ.

ಕರ್ನಾಟಕದ ಸಂಸ್ಕ್ರತಿಯ ರಾಜಧಾನಿಯೆಂದೇ ಕರೆಯಲ್ಪಡುವ ಮೈಸೂರಿನಲ್ಲಿ ಕಮಲಾ ಹಾಗೂ ನಾಗರಾಜ ದಂಪತಿಗಳ ಮಗಳಾಗಿ ಜನಿಸಿದ ರೂಪಾ ಅವರು, ಬಾಲ್ಯದಿಂದಲೂ ನ್ರತ್ಯದ ಬಗ್ಗೆ ಸೆಳೆತಕ್ಕೆ ಒಳಗಾದವರು. ಆ ಕಾಲದಲ್ಲಿ ವಿಶ್ವಾದ್ಯಂತ ಜನಪ್ರಿಯರಾದ ನೃತ್ಯ ವಿಶಾರದೆ ಡಾ.ವಸುಂಧರಾ ದೊರೆಸ್ವಾಮಿ ಅವರಲ್ಲಿ ಭರತ ನಾಟ್ಯದ ಶಿಕ್ಷಣ ಆರಂಭಿಸಿದರು. ಡಾ.ವಸುಂಧರಾ ದೊರೆಸ್ವಾಮಿ ಅವರಲ್ಲಿ ನೃತ್ಯ ಕಲಿಯುವುದೇ ಒಂದು ಸೌಭಾಗ್ಯ ಅಂದುಕೊಂಡ ವಿಧ್ಯಾರ್ಥಿಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಅಂಥ ಗುರುಗಳ ಸಮರ್ಥ ಮಾರ್ಗದರ್ಶನದಲ್ಲಿ ಬೆಳೆದ ರೂಪಾ ಅವರು, ಭರತ ನಾಟ್ಯದಲ್ಲಿ ತಮ್ಮನ್ನೇ ತಾವು ಅರ್ಪಿಸಿಕೊಂಡವರು.

ಮದುವೆಯ ನಂತರ ಅನೇಕ ದೇಶಗಳಲ್ಲಿ ನೆಲೆಸಿದರೂ ಭರತನಾಟ್ಯದ ಗೀಳು ಅವರನ್ನು ಸದಾ ಚುರುಕಾಗಿರಿಸುತ್ತಿತ್ತು. ಇದೀಗ ಹಾಂಗ್ ಕಾಂಗ್ ನಲ್ಲಿ ನೆಲೆಸಿರುವ ರೂಪಾ, ಇಲ್ಲಿಯೂ ಕಲೆಯ ಪ್ರೀತಿಯನ್ನು ವೈಭವೀಕರಿಸುತ್ತಿದ್ದಾರೆ. ಕಲೆ ಕೇವಲ ಕಲಾವಿದನ ಸ್ವತ್ತಲ್ಲ, ಅದನ್ನು ತಿಳಿದುಕೊಂಡವನೇ ಕಲಾವಿದ ಎನ್ನುವ ರೂಪಾ, ತಮ್ಮಲ್ಲಿರುವ ಭರತ ನಾಟ್ಯ ಕಲೆ ಕೇವಲ ತಮಗೆ ಮಾತ್ರ ಸೀಮಿತವಾಗದೇ ಎಲ್ಲರಿಗೂ ದೊರೆಯಬೇಕು ಎಂಬ ಆಸೆಯಿಂದ ಹಾಂಗ್ ಕಾಂಗ್ ನಲ್ಲಿಯೂ ಭರತನಾಟ್ಯದ ತರಗತಿ ನಡೆಸುತ್ತಿದ್ದಾರೆ.

ಬಹಳಷ್ಟು ವಿದ್ಯಾರ್ಥಿಗಳು ರೂಪಾ ಅವರಲ್ಲಿ ನೃತ್ಯ ಅಭ್ಯಾಸ ಮಾಡುತ್ತಿರುವುದು ಕನ್ನಡಿಗರೆಲ್ಲರಿಗೂ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಪರದೇಶದಲ್ಲಿದ್ದರೂ ನಮ್ಮ ದೇಶದ ಮಕ್ಕಳಿಗೆ ಈ ದೇಶದ ಸಂಸ್ಕ್ರತಿಯಾದ ಭರತ ನಾಟ್ಯವನ್ನು ಕಲಿಸುವ ರೂಪಾ ಅವರ ನೃತ್ಯ ಪ್ರೇಮವನ್ನು ಶ್ಲಾಘಿಸಲೇಬೇಕು. ಈಗಾಗಲೇ ದೇಶ ವಿದೇಶಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ರೂಪಾ ಕಿರಣ, ತಮ್ಮ ಗುರುಗಳಾದ ಡಾ.ವಸುಂಧರಾ ದೊರೆಸ್ವಾಮಿ ಅವರ ಕೀರ್ತಿಯನ್ನು ಬೆಳಗುತ್ತಿದ್ದಾರೆ.

ಭರತ ನಾಟ್ಯಕ್ಕೆ ಬೇಕಾದ ಸಮರ್ಥ ವೇಷ ಭೂಷಣ, ಹಾವ ಭಾವ ಮೇಳೈಸಿರುವ ಈ ಕಲಾವಿದೆಯ ನೃತ್ಯವೂ ಜನ ಮನ ಸೂರೆಗೊಂಡಿದೆ. ತಾನಿನ್ನೂ ಕಲಿಯುವುದು ಬಹಳಷ್ಟಿದೆ, ಕಲಿತದ್ದು ಸ್ವಲ್ಪವೇ ಎಂದು ವಿನಮ್ರದಿಂದ ಹೇಳುವ ರೂಪಾ ತಮ್ಮಲ್ಲಿ ನೃತ್ಯದ ಬಗೆಗೆ ಆಸಕ್ತಿ ಹಾಗೂ ಪ್ರೋತ್ಸಾಹ ನೀಡಿದ ಹಾಗೂ ನೀಡುತ್ತಿರುವ ಡಾ.ವಸುಂಧರಾ ದೊರೆಸ್ವಾಮಿ ( ಅವರ ಪ್ರೀತಿಯ ಅಮ್ಮ) ಅವರನ್ನು ಪ್ರೀತಿಯಿಂದ ನೆನೆಯುತ್ತಾರೆ.

ಭರತನಾಟ್ಯದಲ್ಲಿ ಅರಳುತ್ತಿರುವ ಹಾಗೂ ಅರಳಿಸುತ್ತಿರುವ ಈ ಕಲಾವಿದೆಯ ಕಲಾ ಪ್ರೇಮ ಎಂದಿಗೂ ಶಾಶ್ವತವಾಗಿರಲಿ, ಉತ್ಸಾಹ ಬತ್ತದಿರಲಿ. ಅವರಿಗೆ ಮುಂಬರುವ ದಿನಗಳಲ್ಲಿ ಸದಾ ಯಶಸ್ಸು ಸಿಗಲಿ ಎಂಬ ಹಾರೈಕೆ ನಮ್ಮೆಲ್ಲರದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X