ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಇದ್ದ ಬ್ಯಾಗ್ ಪತ್ತೆ: ಶಂಕಿತ ಪೊಲೀಸ್ ವಶಕ್ಕೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಗರದ ಆರ್ಟ್ ಆಫ್ ಲಿವಿಂಗ್ ಕೇಂದ್ರಕ್ಕೆ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು ಭದ್ರತಾ ತಪಾಸಣೆ ವೇಳೆ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಸ್ಫೋಟಕಗಳು ಪತ್ತೆಯಾದ ಕೂಡಲೇ ಭದ್ರತಾ ಏಜೆನ್ಸಿಗಳು ಸ್ಥಳದಲ್ಲಿ ಕಟ್ಟೆಚ್ಚರ ವಹಿಸಿವೆ.
ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‌ನ 45ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಆಗಮಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ನಡೆಸುತ್ತಿದ್ದ ಕಡ್ಡಾಯ ಭದ್ರತಾ ತಪಾಸಣೆಯ ವೇಳೆ ಫುಟ್‌ಪಾತ್ ಬದಿಯಲ್ಲಿದ್ದ ಒಂದು ಪ್ಯಾಕೆಟ್‌ನಲ್ಲಿ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಮುಖ್ಯ ಕಾರ್ಯಕ್ರಮ ನಡೆಯುವ ಸ್ಥಳದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿ ಈ ಸ್ಫೋಟಕಗಳು ಪತ್ತೆಯಾಗಿರುವುದು ಭದ್ರತಾ ಲೋಪದ ಶಂಕೆಯನ್ನು ಹುಟ್ಟುಹಾಕಿದೆ.

ಭದ್ರತಾ ವ್ಯವಸ್ಥೆ ಚುರುಕು
ಸ್ಫೋಟಕ ಪತ್ತೆಯಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಭದ್ರತಾ ಅಧಿಕಾರಿಗಳು, ವಿವಿಐಪಿ ಭದ್ರತೆಯ ಬಹುಪದರದ ಕವಚವನ್ನು ಮತ್ತಷ್ಟು ಬಿಗಿಗೊಳಿಸಿದರು. ಕೂಡಲೇ ಬಾಂಬ್ ಪತ್ತೆ ಮತ್ತು ವಿಲೇವಾರಿ ದಳದ (BDDS) ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ, ಸ್ಫೋಟಕಗಳನ್ನು ಸುರಕ್ಷಿತವಾಗಿ ವಶಪಡಿಸಿಕೊಳ್ಳಲಾಯಿತು. ಅಲ್ಲದೆ, ಆ ಪ್ರದೇಶದ ಸುತ್ತಮುತ್ತ ಮತ್ತೊಮ್ಮೆ ಕೂಲಂಕಷವಾಗಿ ತಪಾಸಣೆ ನಡೆಸಲಾಯಿತು.
ಸ್ಫೋಟಕ ಭೀತಿಯ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆಗಳಾಗಲಿಲ್ಲ. ಅವರು ನಿಗದಿತ ಸಮಯದಂತೆ ಕೇಂದ್ರಕ್ಕೆ ಆಗಮಿಸಿ, ಸಂಸ್ಥೆಯ 45ನೇ ವರ್ಷಾಚರಣೆಯ ಅಂಗವಾಗಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಭಕ್ತರು ಹಾಗೂ ಗಣ್ಯರನ್ನು ಉದ್ದೇಶಿಸಿ ಮಾತನಾಡಿದರು.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿವಿಧ ಆಯಾಮಗಳಿಂದ ತನಿಖೆ ಆರಂಭಿಸಿದ್ದಾರೆ. ಯಾರಾದರೂ ಉದ್ದೇಶಪೂರ್ವಕವಾಗಿ ಪ್ರಧಾನಿಯವರ ಭೇಟಿಯ ಸಮಯದಲ್ಲೇ ಇಲ್ಲಿ ಇಟ್ಟಿದ್ದರೇ? ಅಥವಾ ಸ್ಥಳೀಯ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದ ನಿರ್ಲಕ್ಷ್ಯದಿಂದ ಅಲ್ಲಿ ಉಳಿದುಕೊಂಡಿದ್ದವೇ? ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಮೊಬೈಲ್ ಟವರ್ ಡೇಟಾ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಒಬ್ಬ ಪೊಲೀಸರ ವಶ
ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಹಾಗೂ ರಾಮನಗರ ಜಿಲ್ಲೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಬೆಂಗಳೂರು ನಗರ ಮತ್ತು ರಾಮನಗರ ಪೊಲೀಸರು ಜಂಟಿ ತಂಡವನ್ನು ರಚಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು. ಖಚಿತ ಮಾಹಿತಿಯ ಮೇರೆಗೆ ಬೆಂಗಳೂರಿನ ಕೋರಮಂಗಲದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, ಅಲ್ಲಿ ಅಡಗಿದ್ದ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆತನನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಾತಗುಣಿ ಎಂಬಲ್ಲಿ ಅನುಮಾನಾಸ್ಪದ ಬ್ಯಾಗ್ ಒಂದು ಪತ್ತೆಯಾಗಿತ್ತು. ಇದನ್ನು ಪರಿಶೀಲಿಸಿದಾಗ ಅದರಲ್ಲಿ ಗೆಲಟಿನ್ ಕಡ್ಡಿಗಳಿರುವುದು ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ಈ ವ್ಯಕ್ತಿ ಸ್ಫೋಟಕಗಳನ್ನು ಅಲ್ಲಿಗೆ ತಂದಿದ್ದನೇ ಅಥವಾ ಈ ಸಂಚಿನ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಆ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ, ಸ್ಫೋಟಕದ ಮೂಲ ಮತ್ತು ಉದ್ದೇಶವನ್ನು ಶೀಘ್ರದಲ್ಲೇ ಪತ್ತೆಹಚ್ಚಲಾಗುವುದು ಎಂದು ಮೂಲಗಳು ತಿಳಿಸಿವೆ.













Click it and Unblock the Notifications