• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ಬರೀ ಯುಗಾದಿಯಲ್ಲ.. ಎಲ್ಲರಿಗೂ ಹೊಸ ಹಾದಿ..!

By Staff
|

ಕನ್ನಡಿಗರ ದೃಷ್ಟಿ ಸಮನ್ವಯಕ್ಕೆ ಗೆಜ್ಜೆ ಕಟ್ಟಿ ಕುಣಿದ ಬೇ ಏರಿಯ ಸಮೂಹ... ಬೆಂಗಳೂರಿನ ಶಂಕರ್‌ ಐ ಫೌಂಡೇಶನ್‌ಗೆ 60ಸಾವಿರ ಡಾಲರ್‌ ನಿಧಿ ಸಂಗ್ರಹ... ಕೆಕೆಎನ್‌ಸಿ ಯುಗಾದಿಯಲ್ಲಿ ಈ ವರ್ಷ ಸಂಭ್ರಮ ಮತ್ತು ಉತ್ಸಾಹದ ಜೊತೆಗೆ ಧನ್ಯತೆಯ ಬೆಳಕು.

Ugadi celebrated in KKNCಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟ ಪ್ರತಿ ವರ್ಷವೂ ಯುಗಾದಿಯನ್ನು ಸಂಭ್ರಮದಿಂದ ಆಚರಿಸುತ್ತ ಹೊಸ ವರ್ಷವನ್ನು ಸ್ವಾಗತಿಸುತ್ತದೆ. ಆದರೆ ಈ ಬಾರಿ, ಎಂದಿನ ಹಾಗೆ ಇರಲಿಲ್ಲ. ಕೇವಲ ಸಂಭ್ರಮ ಮತ್ತು ಉತ್ಸಾಹವಷ್ಟೇ ಅಲ್ಲ, ಯಾವುದೋ ಧನ್ಯತೆಯ ಬೆಳಕು ಯುಗಾದಿ ಕಾರ್ಯಕ್ರಮವನ್ನು ಆವರಿಸಿತ್ತು.

ಪ್ರತಿ ಕಾರ್ಯಕರ್ತರ ಮುಖದಲ್ಲೂ ಹೊಸ ಕಳೆ, ಹೊಸ ಹುರುಪು; ತಮಗಿಂತ ದೊಡ್ಡದಾದ ಕಾರ್ಯದಲ್ಲಿ ಭಾಗವಹಿಸಿದಾಗ ಆಗುವ ಅನುಭೂತಿ. ಕನ್ನಡ ಸೇವೆಗಿಂತ ದೊಡ್ಡ ಕಾಯಕ ಯಾವುದು ಅಂತ ನಿಮಗೆ ಅನ್ನಿಸುತ್ತ ಇದ್ದರೆ ಆಶ್ಚರ್ಯವೇನೂ ಇಲ್ಲ. ಒಂದು ರೀತಿಯಲ್ಲಿ ಹೇಳೋದಾದ್ರೆ, ಈ ಬಾರಿಯ ಯುಗಾದಿ ಕೂಟದ ಹೊಸ ಹಂಬಲಗಳ ಪ್ರಥಮ ಹೆಜ್ಜೆ.

ಈ ವಿಶೇಷ ಕಾರ್ಯಕ್ರಮದ ಬಗ್ಗೆ ಹೇಳೋಕ್ಕೆ ಮುಂಚೆ, ದಿನದ ಮಿಕ್ಕ ಕಾರ್ಯಕ್ರಮಗಳವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಸನ್ನಿವೇಲ್‌ ದೇವಸ್ಥಾನದಲ್ಲಿ..

ಏಪ್ರಿಲ್‌ 21ರಂದು, ಸನ್ನಿವೇಲ್‌ ಹಿಂದೂ ದೇವಾಲಯದ ಸಭಾಂಗಣ ಬೆಂಗಳೂರಿನ ಕಲ್ಯಾಣ ಮಂಟಪಗಳ ಸಡಗರವನ್ನು ಹಸಿರಾಗಿಸುತ್ತಿತ್ತು: ಎಲ್ಲಿ ನೋಡಿದರಲ್ಲಿ, ಕುಂಕುಮ-ಶೋಭಿತ, ರತ್ನ-ಸ್ವರ್ಣ-ಖಚಿತ ರೇಶ್ಮಾಂಬರಾಲಂಕೃತ ಲಲನಾಮಣಿಗಳು, ಕೈ-ಕಾಲಿಗೆ ಸಿಕ್ಕುತ್ತಿದ್ದ ತಮ್ಮದೆ ಆಟದಲ್ಲಿ ಲೀನರಾಗಿದ್ದ ಬಣ್ಣಬಣ್ಣದ ಅಂಗಿ ತೊಟ್ಟ ಹುಡುಗ-ಹುಡುಗಿಯರು, ಬಾಗಿಲಲ್ಲೇ ವೈಶಾಖದ ಬಿಸಿಲಲ್ಲಿ ಬಳಿದು ಬಂದವರಿಗೆ ಆತ್ಮೀಯವಾಗಿ ಸವಿಮಾತಿನಿಂದ ಆಮಂತ್ರಿಸಿ ತಣ್ಣನೆಯ ಪಾನಕ ನೀಡಿ ತಣಿಸುತ್ತಿದ್ದ ಹಸನ್ಮುಖ ಕಾರ್ಯಕರ್ತೆಯರು, ಪಕ್ಕದಲ್ಲೇ ಯುಗಾದಿಯ ಸಾಂಪ್ರದಾಯಿಕ ಪಂಚಾಂಗ ಶ್ರವಣದ ಅಲಂಕಾರದ ಸೊಗಸು - ರೂಪಾ ಗುತ್ತಾಲ್‌ ಮತ್ತು ಅವರ ಸೃಜನಾತ್ಮಕ ಸಮಿತಿಯ ಕೈಚಳಕದಲ್ಲಿ ದೇವಸ್ಥಾನದ ಪ್ರಾಂಗಣ, ಅದರಲ್ಲಿ ಕುಳಿತ ಜೋಯಿಸರು, ಎಲ್ಲವೂ ಬಹಳ ನೈಜವಾಗಿ, ಮನೋಹರವಾಗಿ ಮೂಡಿತ್ತು.

ಇಷ್ಟೆ ಅಲ್ಲ, ಯುವಕರು ಹುಡುಗರು ಮುತ್ತಿಗೆ ಹಾಕಿದ್ದ ಕನ್ನಡ ಚಿತ್ರಗಳ ಡಿವಿಡಿ-ವಿಸಿಡಿಗಳ ಅಂಗಡಿ ಮತ್ತು ನಿಲ್ಲಲೂ ಜಾಗ ಸಿಗದಷ್ಟು ಜನ-ದಟ್ಟಣಿ ಇದ್ದ ಆಭರಣದ ಅಂಗಡಿ ನಮ್ಮೂರಿನ ಜಾತ್ರೆಯ ನೆನಪಿಸಿತ್ತು. ಇದನೆಲ್ಲಾ ದಾಟಿ ಒಳಗೆ ಹೋದರೆ, ರಂಗಮಂಚದ ಅಕ್ಕಪಕ್ಕದ ಸಂಗೀತ ವಾದ್ಯಗಳ ಶೃಂಗಾರ ‘ಕಣ್ಣ’ನ್ನು ಸೆಳೆದಿದ್ದಲ್ಲದೆ, ಮುಂದಿನ ಕಾರ್ಯಕ್ರಮಗಳ ಸನ್ನೆ ಕೂಡ ನೀಡಿತ್ತು.

ಧ್ವನಿ ವ್ಯವಸ್ಥೆಯ ತೊಂದರೆಯಿಂದ ದಿನದ ಕಾರ್ಯಕ್ರಮಗಳು ಸ್ವಲ್ಪ ತಡವಾಗಿ ಪ್ರಾರಂಭವಾದರೂ, ಕನ್ನಡಕಲಿಯ ನೂರಕ್ಕು ಹೆಚ್ಚು ಮಕ್ಕಳ (ಹೌದು, ಈಗ ಕನ್ನಡಕೂಟದ ‘ಕನ್ನಡಕಲಿ’ ವಿದ್ಯಾರ್ಥಿಗಳ ಸಂಖ್ಯೆ ಸೆಂಚುರಿ ಬಾರಿಸಿದೆ!) ಒಕ್ಕೊರಳ ಸುಶ್ರಾವ್ಯ ಹಾಡುಗಳನ್ನು ಕೇಳಿದಾಗ, ನೆರೆದ ಜನರ ಬೇಸರ ಕಳೆದು ನಗೆ ಮರಳಿ ಅರಳಿತು. ಸಂಧ್ಯಾ ಮತ್ತು ರವಿ ರವೀಂದ್ರನಾಥ್‌ ಅವರು ಮಕ್ಕಳಿಗೆ ತರಬೇತಿ ನೀಡಿದ್ದಲ್ಲದೇ, ಸಂಗೀತ ಸಂಯೋಜನೆಯನ್ನು ಮಾಡಿ, ಕೃತಿಕಾರರೂ ಆಗಿದ್ದು ಅವರ ಬಹುಮುಖ ಪ್ರತಿಭೆಯ ಕುರುಹು.

ಇದಾದ ಮೇಲೆ ಲಕ್ಷ್ಮೀ ಶೇಷಾದ್ರಿ ಮತ್ತು ಸುಭದ್ರಾ ಸುಬ್ಬಾರಾವ್‌ ಅವರ ನಿರ್ದೇಶನದಲ್ಲಿ ಪುಟಾಣಿಗಳು ನೃತ್ಯ, ಸಂಗೀತ ಮತ್ತು ಅಭಿನಯದ ಮೂಲಕ ನಮ್ಮ ತಾಯ್ನಾಡು ಕರ್ನಾಟಕದ ಪ್ರಕೃತಿ ಮತ್ತು ಕಲಾ ಸೌಂದರ್ಯದ ವೈಭವವನ್ನು ಬಹಳ ಸೊಗಸಾಗಿ ಪ್ರದರ್ಶಿಸಿದರು. ವೀಕ್ಷಕರನ್ನೆಲ್ಲ ಕೆಲವು ಕ್ಷಣ ಮತ್ತೆ ಕನ್ನಡನಾಡಿಗೆ ಕರೆದುಕೊಂಡು ಹೋದರು. ಜನರು ಇದರ ಗುಂಗಿನಲ್ಲೇ ಇದ್ದಾಗ, ಅವರಿಗೆ ‘‘ನಮ್ಮಮ್ಮ ಶಾರದೆ’’ ಮತ್ತು ‘‘ನಮಸ್ತೇಸ್ತು ಮಹಾಮಾಯೆ’’ಗೆ ದೀಪಗಳ ಜೊತೆ ಶಾಸ್ತ್ರೀಯವಾಗಿ ನೃತ್ತಿಸುತ್ತ ಪುಟ್ಟ ಹುಡುಗಿಯರು ಭಕ್ತಿಲೋಕದ ದಾರಿ ಬೆಳಗಿಸಿದರು. ರೀಮಾ ಕಶ್ಯಪ್‌ ಅವರು ಈ ನೃತ್ಯವನ್ನು ನಿರೂಪಿಸಿದ್ದರು.

ಕುಣಿಯೋಣ ಬಾರಾ..

ಮಕ್ಕಳ ಈ ನಂದನವನದಲ್ಲಿ ವಿಹರಿಸುತ್ತಿದ್ದ ಸಭಿಕರನ್ನು ಕುಣಿಸಲು, ವಸಂತಕಾಲದ ಹೊಸಹುಟ್ಟಿನ ಉತ್ಸಾಹದ ಯುಗಾದಿ ನೃತ್ಯವನ್ನು ಮಾಡುತ್ತ ಬಂದರು ನಿತ್ಯಾ ಸೋಮಯಾಜಿ, ನಿಖಿಲಾ ರಾವ್‌ ಮತ್ತು ತಂಡದವರು. ಆ ಹಾಡು ಮುಗಿಯುವಷ್ಟರಲ್ಲಿ ಜನರೆಲ್ಲರೂ ಕುಣಿಯುತ್ತಿದ್ದರು ಅಂತ ಬೇರೇನು ಹೇಳಬೇಕಿಲ್ಲ ತಾನೆ?

ಈ ಎಲ್ಲ ರಂಜಕ ಕಾರ್ಯಕ್ರಮಗಳ ಜೊತೆ, ಯುಗಾದಿಗೆ ಸೂಕ್ತವಾದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇದ್ದವು. ಪ್ರಾರಂಭದಲ್ಲಿ ಸ್ಥಳೀಯ ಪಂಡಿತರಿಂದ ಚುಟುಕಾದ ಪಂಚಾಂಗ ಶ್ರವಣವಿದ್ದರೆ, ಊಟಕ್ಕೆ ಮುಂಚೆ, ಕೂಟದ ಹಿರಿಯರಾದ ಸುಭದ್ರಾ ಸುಬ್ಬರಾವ್‌, ಸತ್ಯವತಿ ರಾವ್‌ ಮತ್ತು ಸೀತಾಲಕ್ಷ್ಮೀ ಕೃಷ್ಣಮೂರ್ತಿ ಅವರಿಂದ ಯುಗಾದಿ ಹಬ್ಬದ ಆಚರಣೆ, ವೈಶಿಷ್ಟ್ಯ, ಮತ್ತು ಅಮೆರಿಕನ್ನಡಿಗರ ಜೀವನದಲ್ಲಿ ಅದರ ಮಹತ್ವ ಈ ಎಲ್ಲ ಗಹನ ವಿಚಾರಗಳ ಚಿಂತನೆ ನಡೆಯಿತು. ಈ ಆಸಕ್ತಿಕರ ಚರ್ಚೆ ಎಲ್ಲಾ ಸಭಿಕರ ಗಮನ ಯಶಸ್ವಿಯಾಗಿ ಹಿಡಿದಿಟ್ಟಿತ್ತು.

ನಂತರ? ಭೋಜನ!

ಆದೂ ಬಹಳ ವಿಶಿಷ್ಟವಾದ ಏರ್ಪಾಟಿನ ಭೋಜನ. ಅಂದಿನ ಕಾರ್ಯಕ್ರಮಕ್ಕೆ ಒಂದು ವಿಶೇಷ ಕಾರಣವಿತ್ತು ಅಂತ ಮೊದಲೇ ಹೇಳಿದ್ದೆ ಅಲ್ವೇ? ಆ ಕಾರ್ಯಕ್ಕೆ ತಾವು ಕಾಣಿಕೆ ಸಲ್ಲಿಸಬೇಕೆಂದು, ಕೂಟದ ಸಮಿತಿಯ ಸದಸ್ಯರು ಮತ್ತು ಇಲ್ಲಿನ ಶ್ರೀ ವ್ಯಾಸ ಭಜನ ಮಂಡಳಿಯ ಸ್ವಯಂಸೇವಕರು ಸುಧಾ ಪ್ರಭುನಂದನ್‌ ಅವರ ನಾಯಕತ್ವದಲ್ಲಿ, ಬಂದ ಸಾವಿರಕ್ಕೂ ಹೆಚ್ಚು ಸಭಿಕರಿಗೆ ಸ್ಥಳದಲ್ಲೇ ಅಡುಗೆ ಮಾಡಿ, ರಸದೂಟ ಬಡಿಸಿದರು. ಸಂಗ್ರಹವಾದ ಹಣವನ್ನು ಆ ಸಾರ್ಥಕ ಕಾರಣಕ್ಕೆ ದಾನ ಮಾಡಿದರು!

ಸುನಯನ ಅಂದ್ರೆ ಏನ್‌ ಗೊತ್ತೆ?

ನಿರ್ದಿಷ್ಟವಾಗಿ ತಿಳಿಸದೆ ‘ವಿಶೇಷ’ ಕಾರಣ ಹೀಗೆ ಹಾಗೆ ಅಂತ ಹೇಳಿ ನಿಮ್ಮ ಕುತೂಹಲವನ್ನು ಇಲ್ಲಿಯವರೆಗೂ ಹಿಡಿದಿಟ್ಟಿದೀನಿ ಅಂತ ಆಶಿಸುತ್ತೇನೆ. ಬನ್ನಿ, ಈಗ ಹೇಳೇ ಬಿಡ್ತಿನಿ. ಮೊದಲ ಬಾರಿಗೆ ರೂಢಿಯ ಕಾರ್ಯಕ್ರಮದ ಜೊತೆ ಸಾರ್ಥಕ ಸಮಾಜಸೇವೆ ಮಾಡುತ್ತಿರುವ ಸಂಸ್ಥೆಯ ಸಹಾಯಾರ್ಥ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿದ್ದರು - ಶಂಕರ ಐ ಫೌಂಡೇಷನ್‌ ಅವರು ಬೆಂಗಳೂರಿನಲ್ಲಿ ಕಟ್ಟುತ್ತಿರುವ ಆಧುನಿಕ ನೇತ್ರಾಲಯದ ಸಹಾಯಾರ್ಥ ಧನ ಸಂಗ್ರಹಕ್ಕೆಂದೇ ಕನ್ನಡಕೂಟ ಹಮ್ಮಿಕೊಂಡ ವಿಶೇಷ ಸಂಗೀತ ಕಾರ್ಯಕ್ರಮ - ‘‘ಸುನಯನ.’’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X