• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿದ್ಯಾರಣ್ಯದಲ್ಲಿ ರಂಗೇರಿದ ಸರ್ವಜಿತ್‌ ಯುಗಾದಿ

By Staff
|

Kids dancing at Vidyaranyas Ugadi celebration functionಶಿವನು ಭಿಕ್ಷಕ್ಕೆ ಬಂದ..

ವಿದ್ಯಾರಣ್ಯದ ಸದಸ್ಯೆಯರು ‘ಶಿವನು ಭಿಕ್ಷಕ್ಕೆ ಬಂದ ನೀಡು ಬಾರೆ’ ಎಂಬ ಜನಪದ ಗೀತೆಗೆ ಸೊಗಸಾಗಿ ಹೆಜ್ಜೆ ಹಾಕಿದರು. ವಿವಿಧ ಬಣ್ಣಗಳ ಮೈಸೂರು ರೇಷ್ಮೆ ಸೀರೆಗಳ ಮೆರವಣಿಗೆಯಂತಿದ್ದ ಈ ನೃತ್ಯವನ್ನು ನಮ್ಮ ವಿದ್ಯಾರಣ್ಯ ಕನ್ನಡ ಕೂಟದ ಪ್ರಥಮ ಮಹಿಳೆ ಅಂದರೆ ಅಧ್ಯಕ್ಷ ದತ್ತಮೂರ್ತಿಯವರ ಪತ್ನಿ ಶ್ರೀಮತಿ ಸುಜಾತ ದತ್ತ ಮತ್ತು ತಂಡದವರು ಉತ್ತಮವಾಗಿ ನಡೆಸಿಕೊಟ್ಟರು.

ವಿದ್ಯಾರಣ್ಯದ ಹೆಮ್ಮೆಯ ಕಾಣಿಕೆಯಾದ ‘ಸಂಗಮ’ ವನ್ನು ಸಂಗಮದ ಮಾಜಿ ಸಂಪಾದಕರಲ್ಲಿ ಒಬ್ಬರಾದ ಡಾ। ಅಣ್ಣಾಪುರ್‌ ಶಿವಕುಮಾರ್‌ ಬಿಡುಗಡೆ ಮಾಡಿದರು. ‘ಚೈತ್ರದ ಕೋಗಿಲೆ’ ಮುಖಪುಟ ಹೊತ್ತ ಸಂಗಮ ಸಭಿಕರ ಮುಂದೆ ಅನಾವರಣಗೊಂಡಿತು. ಸಂಪಾದಕೀಯ ಸಮಿತಿಯಲ್ಲಿ ಒಬ್ಬರಾದ ತ್ರಿವೇಣಿಯವರಿಂದ (ಈ ವರದಿ ಬರೆಯುತ್ತಿರುವ ಲೇಖಕಿ) ಸಂಗಮದ ಒಳಪುಟಗಳಲ್ಲಿರುವ ಕಥೆ,ಕವನಗಳ ಬಗೆಗೆ ಕಿರು ಪರಿಚಯವಾಯಿತು. ಭೋಜನ ವಿರಾಮದಲ್ಲಿ ಸಂಗಮವನ್ನು ಕೂಪನ್‌ ಜೊತೆಗೆ ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.

ಅನಾಮಿಕ ತಂಡದವರು ವಿಭಿನ್ನ ಶೈಲಿಯ ಪ್ರಹಸನವನ್ನು ನಡೆಸಿಕೊಟ್ಟರು. ಅನಾಮಿಕ ತಂಡದ ಈ ಕಿರುನಾಟಕಕ್ಕೂ ಹೆಸರಿಲ್ಲ! ಇದಕ್ಕೆ ಸೂಕ್ತ ಹೆಸರು ಸೂಚಿಸಲು ಸಭಿಕರನ್ನೇ ಕೇಳಿಕೊಳ್ಳಲಾಯಿತು. ಪುಕ್ಕಟೆಯಲ್ಲ, ಆಯ್ಕೆಯಾದ ಹೆಸರಿಗೆ 25 ಡಾಲರು ಬಹುಮಾನವನ್ನೂ ಘೋಷಿಸಲಾಗಿದೆ. ಚಲನಚಿತ್ರಗಳ ಗೀತೆಗಳನ್ನು ಆಧರಿಸಿದ ಈ ನಾಟಕ ಹಾಸ್ಯಮಯವಾಗಿದ್ದು ಜನಮನ ರಂಜಿಸಿತು.

ಕನ್ನಡದ ಜನಪ್ರಿಯ ಗೀತೆಗಳಾದ ‘‘ಸಂತೋಷಕ್ಕೆ ಹಾಡು ಸಂತೋಷಕ್ಕೆ’’, ‘‘ಚೆಲುವೆ ಒಂದು ಕೇಳ್ತೀನಿ’’, ‘‘ಮೋಸಗಾರನ? ಹೃದಯ ಶೂನ್ಯನಾ?’’, ‘‘ಇದೇನು ಸಭ್ಯತೆ? ಇದೇನು ಸಂಸ್ಕೃತಿ?’’ ಮುಂತಾದ ಹಾಡುಗಳಿಗೆ ಪಾತ್ರಧಾರಿಗಳು ತಮ್ಮ ಅಭಿನಯದಿಂದ ಜೀವ ತುಂಬಿದರು. ಈ ಪ್ರಹಸನದ ನಿರ್ದೇಶಕ ಅರುಣ್‌ ಭಗವಂತ ಮತ್ತು ಸಹ ನಿರ್ದೇಶಕ ಶ್ರೀನಿವಾಸನ್‌ ರಾವ್‌.

ಹರಟೆ.. ಹರಟೆ..

‘‘ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಅನ್ನ’’ ಎಂಬ ಗಾದೆ ಕೇಳಿದ್ದೀರಲ್ಲವೇ? ಈ ಗಾದೆ ಮಾತು ವಿದ್ಯಾರಣ್ಯ ಸದಸ್ಯರ ಪಾಲಿಗೆ ಅಂದು ಅಕ್ಷರಶಃ ನಿಜವೆನಿಸಿತ್ತು. ಹೇಗೆಂದಿರಾ? ‘‘ಗಲಾಟೆ ಮಾಡಬೇಡಿ, ದಯವಿಟ್ಟು ಮಾತಾಡಬೇಡಿ’’ ಎಂದು ಬಾರಿ ಬಾರಿಗೂ ವಿನಂತಿಸಿಕೊಂಡರೂ ಮಾತು ನಿಲ್ಲಿಸದ ನಮ್ಮಂತಹ ಹರಟೆ ಮಲ್ಲಿಯರಿಗೆ ಅಚ್ಚುಕಟ್ಟಾಗಿ ಕುರ್ಚಿಗಳನ್ನು ಹಾಕಿಕೊಟ್ಟು, ಕೈಗೊಂದು ಮೈಕು ಕೊಟ್ಟು ಬಿಟ್ಟರೆ ಹೇಗಿದ್ದೀತು? ಅಲ್ಲಾಗಿದ್ದೂ ಅದೇ! ಅದು ಹೋಳಿಗೆಯೂಟದ ನಂತರ ಪ್ರಾರಂಭವಾದ ಹರಟೆ ಕಾರ್ಯಕ್ರಮ. ಈಗ ಅಮೆರಿಕಾದಲ್ಲಿಯೂ ಲಭ್ಯವಿರುವ ಉದಯ ಟೀವಿಯ ‘‘ಹರಟೆ’’ ಕಾರ್ಯಕ್ರಮದಿಂದ ಪ್ರೇರಣೆ ಪಡೆದಿದ್ದು.

‘‘ಬೆಂಗಳೂರಿನಲ್ಲಿ ಕನ್ನಡ ಕಲೆ, ಸಂಸ್ಕೃತಿ ಉಳಿದಿವೆಯೇ?’’ ‘‘ವೈವಾಹಿಕ ಜೀವನ ಊರಿನಲ್ಲಿ ಚಂದವೋ? ಅಮೆರಿಕೆಯಲ್ಲಿ ಚಂದವೋ?’’ - ಹರಟೆಗೆ ಈ ಎರಡು ವಿಷಯಗಳನ್ನು ಇರಿಸಲಾಗಿತ್ತು. ಇಂತಹ ರುಚಿಕಟ್ಟಾದ ವಿಷಯವಿದ್ದಾಗ ಹರಟೆಗೇನು ಬರ? ಶ್ರೀ ಮತ್ತು ಶ್ರೀಮತಿಯರಾದ - ರೋಹಿಣಿ ಉಡುಪ, ಕೆಂಪೇಗೌಡ, ರತ್ನಾ ಪಾಟೀಲ್‌, ನಳಿನಿ ಮಯ್ಯ, ತ್ರಿವೇಣಿ ಶ್ರೀನಿವಾಸರಾವ್‌, ಜಗನ್ನಾಥ ನಾಯಕ್‌, ಆಶಾ ಗುರುದತ್‌, ಅನುಪಮಾ ಮಂಗಳವೇಢೆ, ರಾಮಾನುಜಂ, ಕಲ್ಯಾಣಿ ರಾಮನುಜಂ, ಲೀಲಾ ಸಿಂಗ್‌ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲಿಂಗರಾಜು ಶಿವಮೂರ್ತಯ್ಯ ಮತ್ತು ಲಕ್ಷ್ಮಣ್‌ ಮಿಟ್ಟೂರ್‌ ನಿರೂಪಿಸಿದರು.

ಹರಟೆಯ ನಡುವೆ ಲಕ್ಷ್ಮಣ್‌ ಮಿಟ್ಟೂರ್‌ ತಮ್ಮ ‘‘ಪಂಚ್‌’’ ಮಾತುಗಳಿಂದ ಸಭಿಕರನ್ನು ನಗಿಸುತ್ತಾ, ಇಡೀ ಕಾರ್ಯಕ್ರಮ ಲವಲವಿಕೆಯಿಂದಿರುವಂತೆ ನೋಡಿಕೊಂಡರು. ಎರಡು ವಿಷಯದ ಬದಲು ಒಂದೇ ವಿಷಯವಿದ್ದಿದ್ದರೆ, ಸ್ಪರ್ಧಿಗಳಿಗೆ ಹರಟಲು ಇನ್ನಷ್ಟು ಹೆಚ್ಚಿನ ಕಾಲಾವಕಾಶ ದೊರೆಯುತ್ತಿತ್ತು ಎಂಬ ಮಾತು ಅಲ್ಲಲ್ಲಿ ಕೇಳಿ ಬಂದಿತು. ಏನೇ ಆದರೂ, ‘‘ಹರಟೆ’’ ಕಾರ್ಯಕ್ರಮದ ಈ ಹೊಸ ಪ್ರಯೋಗ ಬಹುಮಟ್ಟಿಗೆ ಯಶಸ್ವಿಯಾಯಿತು.

ಯುಗಾದಿ ಕಾರ್ಯಕ್ರಮದಲ್ಲಿನ ಮತ್ತಷ್ಟು ಸ್ವಾರಸ್ಯಗಳು :

* ಅಕ್ಕ ಸಮ್ಮೇಳನದ ಸಂಚಾಲಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ವಾಸಂತಿ ಗೌಡ, ಮೋಕ್ಷಗುಂಡಂ ಜಯರಾಮ್‌, ಶಿವಮೂರ್ತಿ ಕೀಲಾರ ಅವರನ್ನು ಸಭೆಗೆ ಪರಿಚಯಿಸಿ, ಅಭಿನಂದಿಸಲಾಯಿತು.

* ಯುಗಾದಿಯ ದಿನದಂದು ನೋಂದಾಯಿಸಿಕೊಂಡ ಇಪ್ಪತ್ತೈದಕ್ಕೂ ಹೆಚ್ಚು ಹೊಸ ಸದಸ್ಯರನ್ನು ಕಾರ್ಯಕ್ರಮದ ನಡುನಡುವೆ ಸಭೆಗೆ ಪರಿಚಯಿಸಿ, ಸ್ವಾಗತ ಕೋರಿದ್ದು ಎಲ್ಲರ ಮೆಚ್ಚುಗೆ ಗಳಿಸಿತು. ಈ ಹೊಸ ಸದಸ್ಯರಲ್ಲಿ, ಅಲಾಸ್ಕಾದಲ್ಲಿ ರೇಡಿಯೋ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಎಲ್ಲರಿಗೂ ಪರಿಚಿತರಾಗಿರುವ ನಾಗಭೂಷಣರಾವ್‌ ಕೂಡ ಒಬ್ಬರು.

* ಕನ್ನಡ ಸಾಹಿತ್ಯ ರಂಗವು ಮೇ 19 ಮತ್ತು 20ರಂದು ಶಿಕಾಗೋದಲ್ಲಿ ನಡೆಸಲಿರುವ ವಸಂತ ಸಾಹಿತ್ಯೋತ್ಸವದ ಬಗೆಗೆ ನಳಿನಿ ಮಯ್ಯ ಅವರಿಂದ ಮತ್ತು ದತ್ತಿನಿಧಿ ಸಮಿತಿಯ ಸಾಧನೆಗಳ ಬಗೆಗೆ ಸುಧಾಕರ್‌ ಮಟ್ಟು ಅವರಿಂದ ಪ್ರಕಟನೆಗಳಿದ್ದವು. ದತ್ತಿನಿಧಿ ಸಂಗ್ರಹಕ್ಕಾಗಿ ಜೂನ್‌ 2 ರಂದು ನಡೆಯಲಿರುವ ಪ್ರವೀಣ್‌ ಗೋಡ್ಖಿಂಡಿಯವರ ಕೊಳಲು ಕಾರ್ಯಕ್ರಮದ ಬಗೆಗೆ ತಿಳಿಸಲಾಯಿತು.

* ನಿತಿನ್‌ ಮಂಗಳವೇಢೆಯವರು ಡಾ।ರಾಜಕುಮಾರ್‌ ನೆನಪಿಗೆಂದು ‘‘ನಾದಮಯ ಈ ಲೋಕವೆಲ್ಲಾ’’ ಹಾಡಲೆಂದು ಪ್ರಾರಂಭದ ಆಲಾಪನೆ ಮುಗಿಸಿ, ಮುಂದಿನ ಕರೋಕಿ ಸಂಗೀತಕ್ಕೆ ಕಾಯುತ್ತಾ ನಿಂತಿದ್ದಾಗ ಸೀಡಿ ಮುಷ್ಕರ ಹೂಡಿ, ಸಭೆಯಲ್ಲಿ ರಸಾಭಾಸ ಉಂಟು ಮಾಡಿತು. ಮುಂಚಿನ ಕೆಲವು ನೃತ್ಯಗಳಲ್ಲಿಯೂ ಇಂತಹ ತಾಂತ್ರಿಕ ತೊಂದರೆಗಳು ತಲೆದೋರಿದ್ದವು. ಮುಂಬರುವ ಕಾರ್ಯಕ್ರಮಗಳಲ್ಲಿ ಮತ್ತಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಲ್ಲಿ, ಸಮಯದ ಉಳಿತಾಯವಾಗಬಹುದು.

* ಬೇವು-ಬೆಲ್ಲ ಎಂಬ ವಿನೂತನ ಕಾರ್ಯಕ್ರಮವೊಂದನ್ನು ಪ್ರಸ್ತುತ ಪಡಿಸುವ ಬಗ್ಗೆ ಪ್ರಕಟಿಸಲಾಗಿತ್ತು. ಆದರೆ ಸಮಯದ ಅಭಾವದಿಂದ ಸಾಧ್ಯವಾಗಲಿಲ್ಲ.

* ಈ ಸಲ ಸಭಿಕರ ಸಾಲಿನಲ್ಲಿ ಅದೇಕೋ ಏನೋ ಭಾರೀ ಗಜಿಬಿಜಿ, ಗುಜುಗುಜು! ಕಾರ್ಯಕ್ರಮದ ಶುರುವಿನಲ್ಲಿ ಹೀಗಿದ್ದು, ಕ್ರಮೇಣ ತಣ್ಣಗಾಗುತ್ತಿದ್ದ ಗದ್ದಲ ಈ ಬಾರಿಯೇಕೋ ಕೊನೆವರೆಗೆ ಶಾಂತವಾಗಲೇ ಇಲ್ಲ.

ಹಾಡು, ನೃತ್ಯ, ಮಾತು-ಕತೆ, ಸಿಹಿಯೂಟ, ಪೂರ್ಣ ಮನರಂಜನೆಯಾಂದಿಗೆ ಗರಿಬಿಚ್ಚಿದ ‘‘ಸರ್ವಜಿತ್‌’’ ಯುಗಾದಿ ಸಂಭ್ರಮಕ್ಕೆ ರಮೇಶ್‌ ರಂಗಶಾಮ್‌ ಅವರ ವಂದನಾರ್ಪಣೆಯಾಂದಿಗೆ ತೆರೆ ಬಿದ್ದಿತ್ತು.

ಯುಗಾದಿ ಕಾರ್ಯಕ್ರಮದ ಎಲ್ಲಾ ಚಿತ್ರಗಳಿಗೆ ಇಲ್ಲಿಗೆ ಭೇಟಿ ಕೊಡಿ. - http://www.dhaatri.com/photos/

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more