• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನುಷ್ಯ ಜೀವಿ ಸೃಷ್ಟಿ ಹಿಂದಿನ ಬ್ರಹ್ಮರಹಸ್ಯ!

By Staff
|

ಮನುಷ್ಯ ಜೀವಿ ಸೃಷ್ಟಿಯಾಗೋದರ ಹಿಂದೆ ಎಷ್ಟೆಲ್ಲ ರಾಜಕೀಯ ಇದೆ, ಕುರ್ಚಿ ಪ್ರೀತಿಯಿದೆ ಮತ್ತು ತಂತ್ರಗಾರಿಕೆ ಇದೆ ಅನ್ನೋದನ್ನು ತಿಳಿಯಬೇಕಾ? ಓದಿ ಈ ನಗೆಬರಹ.

Brahma Rahasya, a humorous write up by Srinath Bhalleಅದು ದೇವಲೋಕದ Performance evaluation ಸಮಯ. ಜಗತ್ತಿನಲ್ಲಿ ಅಚ್ಚರಿ ಹುಟ್ಟಿಸುವಂತಹ ಕೆಲಸವೇನೂ ನಡೆಯುತ್ತಿಲ್ಲ. ಅವೇ ಪ್ರಾಣಿಗಳು ಅವೇ ಪಕ್ಷಿಗಳು. ದೊಡ್ಡ ಪ್ರಾಣಿಗಳು ತಮ್ಮ ಉಳಿವಿಗಾಗಿ ಸಣ್ಣ ಪ್ರಾಣಿಗಳನ್ನು ಕೊಳ್ಳುವುದು, ಹಕ್ಕಿಗಳು ಮೊಟ್ಟೆ ಇಡುವುದು, ಪ್ರಾಣಿಗಳು ಮರಿ ಹಾಕುವುದು ಹೀಗೆ. ಎಲ್ಲವೂ ತನ್ನ ಪಾಡಿಗೆ ತಾನು ನಡೆದಿತ್ತು.

ಇತ್ತೀಚೆಗೆ ಬ್ರಹ್ಮನೂ ತನ್ನ ಮಾಮೂಲಿ ಕೆಲಸದಲ್ಲೊಂದಾದ ಹಣೆಬರಹ ಬರೆವ ಕೆಲಸವನ್ನು ಗಂಧರ್ವ ಗ್ರೂಪ್‌ ಆಫ್‌ ಕಂಪನೀಸ್‌ಗೆ ಔಟ್‌ ಸೋರ್ಸ್‌ ಮಾಡಿದ್ದಾನೆ. ಅವರೋ conveyer belt ಮೇಲೆ ಬಂದ ಪ್ರಾಣಿಗಳನ್ನು ನೋಡಿ ಅದರದರ ಹಣೆಬರಹದ ಸೀಲನ್ನು ಠಸ್ಸೆ ಹೊಡೆದು ಮುಂದಕ್ಕೆ ಕಳಿಸಲು, ಡಿಸ್‌ಪ್ಯಾಚ್‌ ಸೆಕ್ಷನ್‌ಗೆ ಸಂಬಂಧಪಟ್ಟವರು ಅವುಗಳನ್ನು ಅವು ಸೇರಬೇಕಾದ ಸ್ಥಾನಕ್ಕೆ ರವಾನಿಸುತ್ತಿದ್ದರು. ಕೆಲಸವು ಸಮಯಕ್ಕೆ ಸರಿಯಾಗಿ ಮುಗಿದರೆ ಅನ್‌ಟೈಮ್‌ ಡೆಲಿವರಿ!! ಬೇಗ ಮುಗಿದಲ್ಲಿ pre-mature ಪ್ರಾಣಿಗಳು ಇಲ್ಲವಾದಲ್ಲಿ post-mature ಪ್ರಾಣಿಗಳು ಹೊರಬರುವುದು ಸರ್ವೇಸಾಮಾನ್ಯ ವಿಷಯ !!

ಹೀಗಿರುವಾಗ ನಾರದರು ಬ್ರಹ್ಮನಲ್ಲಿ ಬಂದು ಉಭಯಕುಶಲೋಪರಿ ವಿಚಾರಿಸಿದರು. ನಂತರ ‘ಬ್ರಹ್ಮದೇವಾ ಇದು ಮೊದಲೇ performance evaluation ಸಮಯ. ಈ ವರ್ಷ ನಿನ್ನ ಸಾಧನೆ ಏನು?’ ಎಂದು ಮಹಾವಿಷ್ಣು ನಿನ್ನನ್ನು ಕೇಳಿದರೆ ಏನು ಹೇಳುವೆ?’ ಎಂದು ಕೇಳಿದರು.

ವರ್ಷದ ಮೊದಲಿಂದ ನಿದ್ರಿಸಿ, ಕೊನೆಯವೇಳೆಗೆ ಈ ಸಂದಿಗ್ಧ ಬಂದೊದಗಿದ್ದು, ತನ್ನ ಸ್ಥಾನಕ್ಕೆ ಚ್ಯುತಿ ಬಂದು ಎಲ್ಲಿ ತಾನು ‘ಅಗ್ನಿ’ಯಾಗುತ್ತೇನೋ ಎಂಬ ಭಯದಲ್ಲಿ ನಾರದರನ್ನೇ ಏನಾದರೂ ದಾರಿ ತೋರುವಂತೆ ಕೇಳಿದರು. ಆಗ ನಾರದರು ಸ್ವಲ್ಪ ಯೋಚನೆ ಮಾಡಿ ‘ಹೊಸ ಜೀವ ಸೃಷ್ಟಿ’ಯ ಪ್ರಾಜಕ್ಟ್‌ ಏಕೆ ತೆಗೆದುಕೊಳ್ಳಬಾರದು ಎಂದು ಸೂಚನೆ ಕೊಟ್ಟರು. ಕೆಲಸವಿಲ್ಲದೆ ಕುಳಿತ R&D departmentಗೆ ಕೂಡ ಕೆಲಸಕೊಟ್ಟಂತೆ ಆಗುತ್ತದೆ, ನಿನಗೂ ಬೇಸರ ಕಳೆಯುತ್ತದೆ ಎಂದೂ ಸೇರಿಸಿದರು.

ಘನವಾದ ಆಲೋಚನೆಗೆ ನಾರದರಿಗೆ ಶಭಾಷ್‌ ಗಿರಿ ನೀಡಿದ ಬ್ರಹ್ಮದೇವನು, ಹೊಸ ಸೃಷ್ಟಿಯ ರೂಪುರೇಖೆಗಳನ್ನೂ ನೀನೇ ಆಲೋಚಿಸಿ ಹೇಳು ಎಂದು ಕೆಲಸ ಹಚ್ಚಿದನು. ಸಲಹೆ ನೀಡಿದವರೇ ಉಸ್ತುವಾರಿವಹಿಸಿಕೊಳ್ಳಬೇಕಾದ್ದು ಅಂದಿನಿಂದಲೂ ನಡೆದು ಬಂದಿದೆ. ನಾನು ಪೇಳುವಂತವನಾಗುತ್ತೇನೆ ತಾವು ಬರೆದುಕೊಳ್ಳುವರಂಥವರಾಗಿ ಎಂದು ನುಡಿದ ನಾರದರು ಇಂತೆಂದರು :

‘ಈ ನವಜೀವಿಯು ಶಕ್ತಿಶಾಲಿಯಾಗಿ ಅದಕ್ಕಿಂತಲೂ ಹೆಚ್ಚು ಬುದ್ದಿಶಾಲಿಯಾಗಿ ಇರಲಿ. ಜಗತ್ತಿನಲ್ಲಿರುವ ಜೀವಿಗಳನ್ನು ತನ್ನ ಸ್ವಂತ ಸುಖಕ್ಕಾಗಿ ಬಳಸಿಕೊಳ್ಳುವಷ್ಟು ಸಾಮರ್ಥ್ಯ ಉಳ್ಳದ್ದಾಗಿರಲಿ. ತನ್ನ ಮೈಬಲದಿಂದಾಗದ ಕೆಲಸಕ್ಕೆ ಬೇರೆ ಸಾಧನಗಳನ್ನು ಉಪಯೋಗಿಸಿ ಕೆಲಸ ಮಾಡುವಷ್ಟು ಚತುರತೆ ಉಳ್ಳದ್ದಾಗಿರಲಿ. ಇಂತಹ ಸಾಧನಗಳು ತನ್ನ ಸುತ್ತಲು ಇರದಿದ್ದಲ್ಲಿ ಸೃಷ್ಟಿ ಮಾಡುವಷ್ಟು ಜಾಣ್ಮೆ ಇರುವಂತಹುದಾಗಿರಲಿ’ ಎಂದು ಆರಂಭ ಮಾಡಿದರು.

ಬ್ರಹ್ಮ ಅಲ್ಲೇ ತಡೆದು ‘ಅಂದರೆ ನನ್ನ ಹಾಗೆ ಸೃಷ್ಟಿಕರ್ತನ ಕೆಲಸ ಕೂಡ ಮಾಡ ಬಲ್ಲದ್ದಾಗಿರುವುದು ಎಂದರ್ಥ, ಅಲ್ಲವೇ? ’ ಎನ್ನಲು ನಾರದರು ಅಹುದೆಂದರು. ಬ್ರಹ್ಮನು ಮತ್ತೆ ಮೂಗು(ಗಳನ್ನು) ತೂರಿಸಿ ‘ನನ್ನಂತೆಯೇ ಮತ್ತೊಂದು ಜೀವಿ ಇದ್ದಲ್ಲಿ ನನ್ನ ಗತಿ ಏನು ?’ ಎಂದರು. ಅದಕ್ಕೆ ನಾರದರು ‘ಬ್ರಹ್ಮ ದೇವ, ಈ ಜೀವಿ ತನ್ನ ಸುತ್ತಲೂ ಇರುವ ವಸ್ತುಗಳನ್ನಷ್ಟೇ ರೂಪ ಬದಲಾಯಿಸುವಷ್ಟು ಸೃಷ್ಟಿ ಕೆಲಸ ಮಾಡುವುದೇ ಹೊರತು ನಿನ್ನ ಹಾಗೆ ಹೊಸ ಜೀವಿಯ ಸೃಷ್ಟಿಯನ್ನಲ್ಲ. ಅಲ್ಲದೇ, ಇಷ್ಟು ಹೊತ್ತೂ ಹೇಳಿದ್ದು ಈ ಹೊಸ ಜೀವಿಯ ಗುಣಗಳ ಕೇವಲ ಒಂದು ಭಾಗ, ಅಷ್ಟೇ. ಮುಂದೆ ಕೇಳು’ ಎಂದು ಮುಂದುವರೆಸಿದರು.

‘ಈ ಕುಲದ ಪ್ರತಿ ಜೀವಿಯು ಗುಣದಲ್ಲಿ ಮತ್ತೊಂದಕ್ಕಿಂತ ಭಿನ್ನವಾಗಿದ್ದು, ಹತ್ತು ಹಲವು ಪ್ರಾಣಿ-ಪಕ್ಷಿಗಳಲ್ಲಿರುವ ಗುಣಗಳನ್ನು ಒಂದೇ ಜೀವಿಯು ಹೊಂದಿರುತ್ತದೆ. ಜನ್ಮತ: ಬಂದ ಬುದ್ದಿಯನ್ನು ಉಪಯೋಗಿಸಿ ಹತ್ತು ಹಲವು ಒಳಿತು-ಕೆಡುಕು ವಿದ್ಯೆಗಳನ್ನು ಜೀವನಪರ್ಯಂತ ಕಲಿಯುತ್ತದೆ ’

‘ತನ್ನಂತಹ ಚೆಲುವು ಮತ್ತೊಬ್ಬರಿಗೆ ಇಲ್ಲ ಎಂದು ಬೀಗುತ್ತಾ ತನ್ನ ವರ್ಗದ ಜೀವಿಯನ್ನೇ ಕೀಳಾಗಿ ಕಾಣುವ ಗುಣವನ್ನು ಹೊಂದಿರುವುದು. ತನ್ನಿಂದಲೇ ಎಲ್ಲ, ತಾನೇ ಎಲ್ಲಾ, ತನ್ನ ಬಿಟ್ಟರೆ ಮತ್ತೊಬ್ಬನಿಲ್ಲ ಎಂದೆನಿವಷ್ಟು ಅಹಂಕಾರ ತುಂಬಿಕೊಂಡು ತನ್ನ ವರ್ಗದ ಜನರನ್ನೇ ದಮನ ಮಾಡುವಷ್ಟು ನೀಚ ಗುಣ ಹೊಂದಿರುತ್ತದೆ’. ಬ್ರಹ್ಮನು ಅಲ್ಲೇ ತಡೆದು ‘ಸೌಂದರ್ಯದ ವಿಷಯದಲ್ಲಿ ಗಂಧರ್ವರೂ, ಅಪ್ಸರೆಯರಿಗೂ ಇರುವ ಗುಣ ಹೋಲುವುದು, ಮತ್ತೆ ಈ ದಮನ ಮಾಡುವ ವಿಷಯದಲ್ಲಿ ಕ್ರೂರ ಪ್ರಾಣಿಗಳನ್ನು ಹೋಲುವುದು ಎಂದಂತಾಯಿತು, ಅಲ್ಲವೇ? ’. ನಾರದರು ಹೌದೆಂದು ಮತ್ತೆ ಮುಂದುವರೆಸಿದರು.

‘ಮೂಕ ಪ್ರಾಣಿಗಳಿಂತೆ, ತನ್ನಿಂದ ಜನಿಸಲ್ಪಟ್ಟ ಕಿರಿಯ ಜೀವಿಗಳ ಮೇಲೆ ಅತ್ಯಂತ ವ್ಯಾಮೋಹಕ್ಕೆ ಒಳಗಾಗುತ್ತದೆ. ಆದರೆ, ಇದೇ ಕಿರಿಯ ಜೀವಿಗಳು ಹಿರಿದಾದ ಮೇಲೆ ಸಾಕಿ ಸಲುಹಿದ ಹಿರಿಯ ಜೀವಿಗಳನ್ನು ಹೀನವಾಗಿ ಕಾಣುತ್ತವೆ’ ಎಂದ ನಾರದರು, ಮತ್ತೆ ಮುಂದುವರೆಸಿದರು.

‘ನಾಳಿನ ಸುಖಕ್ಕಾಗಿ ಇಂದು ಕಷ್ಟ ಪಡುವ, ಬರೀ ನಾಳಿನ ಚಿಂತೆಯಲ್ಲೇ ದಿನ ನೂಕುವ, ಇಂದು ಸಿಗುವ ಸುಖವನ್ನು ಅನುಭವಿಸದೆ ನಾಳೆ ಸಿಗಬಹುದಾದ ಸುಖಕ್ಕಾಗಿಯೇ ಅರಸುವ, ತನ್ನ ಸುಖಕ್ಕಾಗಿ ಪ್ರಕೃತಿ ಸೌಂದರ್ಯವನ್ನು ದೋಚುವ ವಿಶಿಷ್ಟ ಜೀವಿಯೇ ಈ ಹೊಸ ಜೀವಿ’.

ಬ್ರಹ್ಮನಿಗೆ ಮತ್ತೊಂದು ಅನುಮಾನ ಹೆಡೆ ಎತ್ತಿತು. ‘ಅಲ್ಲಾ ನಾರದರೇ, ಇಷ್ಟೆಲ್ಲಾ ಗುಣಗಳನ್ನೂ ಒಂದೇ ಜೀವಿಯಲ್ಲಿ ತುಂಬಿದರೆ ನಾಳೆ ಈ ಜೀವಿ ದೇವಲೋಕಕ್ಕೂ ದಾಳಿಯಿಟ್ಟಲ್ಲಿ ಗತಿ ಏನು?’. ನಾರದರು ನಸುನಕ್ಕು ‘ನಿಜ, ಇಷ್ಟೆಲ್ಲ ವಿಶೇಷ ಗುಣವುಳ್ಳದ್ದಾಗಿದ್ದರೂ ತನ್ನಲ್ಲಿರುವ ಸಾಮರ್ಥ್ಯ ಅರಿಯದಷ್ಟು ಮೂರ್ಖನತನವಿರುತ್ತದೆ. ಕೆಲಸವೇ ಮಾಡದೆ ಸುಖಬೇಕೆನ್ನುವ ಸೋಮಾರಿತನವೆಂಬ ಮಾಯೆ ಮುಸುಕಿರುತ್ತದೆ. ಜಗತ್ತನ್ನೇ ಗೆಲ್ಲಬಲ್ಲ ಶಕ್ತಿ ಇದ್ದರೂ ತನ್ನ ಅವಗುಣಗಳನ್ನೇ ಗೆಲ್ಲಲಾರದೆ ಸೋಲುತ್ತದೆ. ಅವಗುಣಗಳಿಲ್ಲದೇ, ಪರೋಪಕಾರಕ್ಕಾಗಿಯೇ ತಮ್ಮ ಜೀವನ ಮುಡುಪಾಗಿಟ್ಟಲ್ಲಿ ಪರಮಾತ್ಮನಲ್ಲಿ ಒಂದಾಗುತ್ತದೆಯೇ ಹೊರತು ಅವನನ್ನೇ ಗೆಲ್ಲಲಾರಾರು ’ ಎಂದು ಸಮಾಧಾನ ನುಡಿದರು.

ಒಂದೇ ಜೀವಿಯಲ್ಲಿ ಇಷ್ಟು ಗುಣವಿಶೇಷಣಗಳೇ? ಅಂದರೆ ತನ್ನ ಕೆಲಸ ಇನ್ನು ಮುಂದೆ ಬರೀ ಡೆವಲಪ್‌ಮೆಂಟ್‌ ಅಲ್ಲದೇ ಪ್ರೊಡಕ್ಷನ್‌ ಸಪೋರ್ಟ್‌ ಕೂಡ ಮಾಡಬೇಕಾಗುತ್ತದೆ ಎಂದು ಯೋಚಿಸಿ ಬ್ರಹ್ಮ ಕೇಳುತ್ತಾನೆ ‘ಲೋಕವು ಈಗ ಇರುವಂತೆ ಇದ್ದಲ್ಲಿ ಎಲ್ಲ ಸಂಪನ್ಮೂಲಗಳು ಸುಭಿಕ್ಷವಾಗಿದ್ದು ಎಲ್ಲೆಡೆ ಸುಖ-ಸಂತೋಷ ಇರುವುದು ಅಲ್ಲವೇ? ಈ ಹೊಸ ಜೀವಿಯ ಡಿಸೈನೇ ನನಗೆ ಹೆದರಿಕೆ ತರುತ್ತಿದೆ. ನನ್ನ ಕೇಳಿದರೆ ಈ ಹೊಸ ಯೋಜನೆ ಕೈಬಿಡುವುದು ಲೇಸು ಎನಿಸುತ್ತದೆ’ ಅಂದ.

ನಾರದರು ಅದಕ್ಕೆ ‘ಪ್ರಕೃತಿಯ ಧರ್ಮದಲ್ಲಿ ಬದಲಾವಣೆ ಅತ್ಯಗತ್ಯ. ಈ ನವ ಜೀವಿಯನ್ನು ನೀನು ಸೃಷ್ಟಿಸಿದಲ್ಲಿ, ಬದಲಾವಣೆಗಳು ತಂತಾನೇ ನಡೆಯುತ್ತದೆ. ನೀನು ಸೃಷ್ಟಿಸಿದ ಜೀವಿಗಳು ತಮ್ಮನ್ನು ಕಾಪಾಡು ಎಂದು ನಿತ್ಯ ನಿನ್ನನ್ನೇ ಅವಲಂಬಿಸುತ್ತಾರೆ. ಹಾಗಾಗಿ ನಿನ್ನ ಮೇಲಿನ ಡಿಪೆಂಡೆನ್ಸಿ ಹೆಚ್ಚಾಗಿ ನಿನ್ನ ಮೇಲಧಿಕಾರಿಗಳಿಗೆ ನಿನ್ನನ್ನು ಕೆಲಸದಿಂದ ತೆಗೆದು ಹಾಕುವ ಪ್ರಮೇಯವೇ ಇರುವುದಿಲ್ಲ. ಯೋಚನೆ ಮಾಡು...’ ಎಂದರು.

‘ಕೆಲಸ ಭದ್ರ’ ಎಂಬ ನಾರದರ ಸೂಚ್ಯ ಮಾತು ಬ್ರಹ್ಮ ದೇವನಿಗೆ ಬಲವಾಗೇ ನಾಟಿತು. ಈಗ ಉತ್ಸುಕತೆಯಿಂದ ಪ್ರಶ್ನೆ ಮಾಡಿದನು ‘ಅದು ಸರಿ. ಈ ಹೊಸ ಜೀವಿಯ ಕುಲದ ನಾಮಧೇಯವೇನು ?’. ನಾರದರು ‘ಮಾನವ’ ಎಂದರು.

ನಾರದರ ಡಿಸೈನ್‌ ಬಳಸಿಕೊಂಡು, Apsara Consultancy ಅವರಿಂದ ಬರೆಸಿದ ಆ program ಚೆನ್ನಾಗಿ ನಡೆದಾಗ ಜನ್ಮಿಸಿದ ಪುಣ್ಯಾತ್ಮರು ಹಲವರು! ಚೆನ್ನಾಗಿ ನಡೆಯದೆ program errors ಬಂದಾಗ ಜನಿಸಿದವರು ಅಸಂಖ್ಯಾತರು!

server crash ಆದರೆ ಪ್ರಳಯ ಆಗುತ್ತದೆ ಎಂದೂ ಕೆಲವರು ಹೇಳುತ್ತಾರೆ. ಇರಲಿ ಈಗ ಮೂಲ ವಿಷಯಕ್ಕೆ ಬರೋಣ..... ತನಗೂ ತನ್ನ ಸಿಬ್ಬಂದಿ ವರ್ಗದವರಿಗೂ ಹೆಚ್ಚು ಕೆಲಸವಿಲ್ಲದೆ ಇರುವುದರಿಂದ, ಎಲ್ಲಿ ತನ್ನ ಮೇಲಾಧಿಕಾರಿಗಳು ತನ್ನ ಡಿಪಾರ್ಟ್‌ಮೆಂಟ್‌ ಮುಚ್ಚಿಬಿಡುತ್ತಾರೋ ಎಂದು ಹೆದರಿ, ನಾರದರ ಮೊರೆ ಹೊಕ್ಕು, ಬ್ರಹ್ಮನ ಕಿವಿ ಚುಚ್ಚಿಸಿ, ‘ಮಾನವ’ ಜೀವಿಯ ನಿರ್ಮಾಣದ ಕೆಲಸ ಕೊಟ್ಟು, ತನ್ನ ಸಿಬ್ಬಂದಿಗಳಿಗೆ ಎಣ್ಣೆ ಬಾಂಡ್ಲೆಗಳನ್ನು ಸಿದ್ದ ಪಡಿಸುವುವಂತೆ ಅಜ್ಞಾಪಿಸಿದವರು; ಯಮ ಧರ್ಮರಾಯ!!!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X