ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಾ! ನಾನು ನೂರು ಲೇಖನ ಬರೆದೆನಾ!

By Staff
|
Google Oneindia Kannada News


ಸೆಪ್ಟೆಂಬರ್ 14, 2003 ರಂದು ಹಾಕ್ತಾರೋ ಇಲ್ಲವೋ ಎಂಬ ಅನುಮಾನದಿಂದಲೇ ರವಾನಿಸಿದೆ ದೇವೀ ಸ್ತುತಿ, ದಟ್ಸ್ ಕನ್ನಡ ಪೀಡ್‌ಬ್ಯಾಕ್ ವಿಳಾಸಕ್ಕೆ. ಒಂದೆರಡು ದಿನ ಮೈಲ್ ಓಪನಿಸಿ ನೋಡಿದ್ದೇ, ನೋಡಿದ್ದು. ಉತ್ತರ ಶೂನ್ಯ. ಟುಸ್ಸೆಂದಿತು ನನ್ನ ಬರವಣಿಗೆಯ ಸ್ಪೂರ್ತಿ. ಎನ್.ಆರ್.ಐ ಪೇಪರ್ ಅದು, ಅಲ್ಲಿ ಯಾರೂ ಹಾಕ್ತಾರೆ ಎಂದು ಹೊರಟಿತು ಉದ್ಗಾರ. ಬೇಸರಗೊಂಡು ದಟ್ಸ್ ಕನ್ನಡ ನೋಡಿರಲಿಲ್ಲ ಒಂದು ವಾರ.

ಸೆಪ್ಟೆಂಬರ್ 23, 2003 ಈ-ಮೇಲ್ ನೋಡುತ್ತಿದ್ದಾಗ ಕಂಡಿತು ಸಂಪಾದಕರ ಪತ್ರ, ಜೊತೆಗಿತ್ತು ನನ್ನ ಲೇಖನಿಯ ಲಿಂಕ್. ಸ್ವರ್ಗ ಮೂರೇ ಗೇಣು. ನಾನಂದು ಅದುವೆ ಕನ್ನಡದ ಬರಹದ ಮೈದಾನದಲಿ ಇಳಿದಿದ್ದೆ. ಈ ಕನ್ನಡಭಾಷೆಯ ಬರಹ ಮೈದಾನದಲಿ ಜೊತೆಯಾದರು ಸಹ-ಬರಹಗಾರರು. ಪ್ರತಿಯೊಂದು ಲೇಖನ ಬರೆದಾಗಲೂ ಪರಿಚಯಿಸಿಕೊಂಡು, ಪ್ರತಿಕ್ರಯಿಸಿ, ಪ್ರೋತ್ಸಾಹಿಸಿ, ಪ್ರೇರಣೆಯನಿತ್ತವರು ನೀವುಗಳು. ನನ್ನ ಲೇಖನದ ಅಂಕು-ಡೊಂಕುಗಳನ್ನು ತಿದ್ದಿ, ತೀಡಿ ನಿಮ್ಮ ಮುಂದಿಟ್ಟಿದ್ದು ದಟ್ಸ್‌ಕನ್ನಡ ಡಾಟ್‌ಕಾಂ.

2003-2007ರ ವರೆಗೆ ಹೊಡೆದದ್ದು ವರುಷಕ್ಕೆ 25 ರನ್. ಮಂತ್ರಾಲಯದ ಮಂಚಾಲಮ್ಮನಿಗೆ ಶರಣು ಹೊಡೆದು ಪ್ರಾರಂಭಗೊಂಡ ಬರಹದ ಬಾಲು ನೂರಾದದ್ದು ಸಿಂಗಪುರದ ವರಮಹಾಲಚುಮಿಯ ನೋಂಪಿನಲ್ಲಿ. ಮೊದಲ ಬೌಂಡರಿ ಬಾರಿಸಿದ್ದು ನೃತ್ಯಪಟು ಶ್ರೀಧರ್-ರಾಧಾ ಅವರ ಅಮೋಘ ನೃತ್ಯಕ್ಕೆ ಮರುಳಾಗಿ, 50ನೆಯ ಬರಹ ಕೂಡ ಅವರದೇ ನೃತ್ಯದ ಬಗ್ಗೆಯಾದದ್ದು ಕಾಕತಾಳೀಯ.

ಈ ಬರಹದ ಮೈದಾನದಲಿ ನಾ ಮುಖತಃ ಭೇಟಿಯಾದೆ ಕರ್ನಾಟಕದ ಪ್ರತಿಭಾನ್ವಿತರಾದ ಗಿರೀಶ್ ಕಾರ್ನಾಡ್, ಮಾಸ್ಟರ್ ಹಿರಣ್ಣಯ್ಯ, ಅರಳುಮಲ್ಲಿಗೆ ಪಾರ್ಥಸಾರಥಿ, ನಾರಾಯಣ ಮೂರ್ತಿ ದಂಪತಿಗಳನು, ಯಶವಂತ ಸರ ದೇಶಪಾಂಡೆ, ನಾಗತಿಹಳ್ಳಿ ಚಂದ್ರಶೇಖರ್, ಗಿರೀಶ್ ಕಾಸರವಳ್ಳಿ, ದಯಾನಂದ್, ರಾಜು ಅನಂತಸ್ವಾಮಿ, ಸುಧಾಬರಗೂರು.

ಯಾರ್ಯಾರ ನೆನೆಯಲಿ...

ಋಣಾನುಬಂಧ ರೂಪೇಣ..ಸತಿ, ಸುತರಿಗೇ ಅಲ್ಲ ಸ್ನೇಹಕ್ಕೂ ಅನ್ವಯ. 2003 ಅಕ್ಟೋಬರ್‍ನಲ್ಲಿ ರಾಧಾ-ಶ್ರೀಧರ್ ಅವರ "ಭಳಾರೆ ನಾಟ್ಯ" ದಿಂದ ಪ್ರಾರಂಭಗೊಂಡ ಅದುವೆ ಕನ್ನಡದ ವಸುಧೈವ ಕುಟುಂಬಕಮ್‌ನ ಈ-ಮೇಲ್ ಸ್ನೇಹವೃತ್ತ ಅನುಗಾಲವಿಲ್ಲದೆ ಇಂದಿಗೂ ನಡೆಯುತ್ತಿದೆ.

ಸಿಂಗಪುರದಿಂದ ಅದುವೆ ಕನ್ನಡಕ್ಕಾಗಿ ಬರೆದ ಮೊದಲ ಲೇಖನಕ್ಕೆ ಸ್ವಾಗತವಿತ್ತು, 2004 ಜನವರಿ ಚೀನಿಯರ ಹೊಸವರುಷಕ್ಕೆ ಬಂದ ಪೆಜತ್ತಾಯ ಅವರೊಡನೆ ಪತ್ರ ವ್ಯವಹಾರ ಮುನ್ನಡೆದಂತೆ ಬಂಧಿಸಿತು ನನ್ನನ್ನು ಅವರ ಆತ್ಮೀಯತೆ, ಪ್ರೀತಿ, ಕಳಕಳಿ, ಮುಕ್ತ ಪ್ರಶಂಸೆ, ಅಭಿಪ್ರಾಯ, ಸಲಹೆಗಳ ಸ್ನೇಹ ಸಂಕೋಲೆಯಲಿ.

ಶೌಚ, ಬೃಹನ್ನಳೆ, ದೇವದಾಸಿ, ಶಾರ್ಕ್, ಮೊಲೆಸ್ಟೇಷನ್, ಗ್ರಾಹಕ, ಹೆಣ್ಣಿನ ಅಳಲಿನಲ್ಲಿ, ಮರುಮದುವೆ ಹೀಗೆ ಅನೇಕ ಸಾಮಾಜಿಕ ಹಿನ್ನಲೆಯಲ್ಲಿ ಬರೆದ ಲೇಖನಗಳಿಗೆ ಪ್ರತಿಕ್ರಯಿಸಿ, ಪ್ರಶಂಸಿ, ಅನುಮೋದಿಸಿದರು : ಸ್ಮಿತ, ಹರಿ, ನಂಜುಂಡ, ಗೀತ, ಸುಭಾಷ್, ರಾಮದಾಸ್ ಕುರುಬರ್, ಜನಾರ್ಧನ, ರಾಮಚಂದ್ರಹೆಗ್ಡೆ, ಗಿರೀಶ್, ಹರೀಶ್, ನಾಗರಾಜ್, ವೆಂಕಟ್, ವಸಂತ್, ಗೀತಾ, ಶಾರದೆ, ಗೋಪಾಲ್, ರಾಜೇಶ್, ದಿವ್ಯಾ, ಸಂಗೀತ.

ದಸರಾ ಹಬ್ಬದ ನೆನಪಿನಲಿ, ಬದುಕೆಂಬ ಬಂಡಿಗೆ, ವ್ಯಾಲಂಟೈನ್ಸ್ ಡೇ, ಸ್ಪಂದಿಸಿದರು : ವಿಟ್ಟಲ್, ವಾಸುದೇವ್, ವಿಶ್ವನಾಥ್ ಶೆಟ್ಟಿ, ಮಧುಕೃಷ್ಣಮೂರ್ತಿ, ರಶ್ಮಿಸುಧೀಂದ್ರ, ರಾಧಾ.

ವ್ಯಕ್ತಿ-ವಿಚಾರ ಅಶ್ವಥ್ ಅವರ ಲೇಖನಕ್ಕೆ ಮೊದಲ ಪ್ರತಿಕ್ರಿಯೆ ಎಡಕಲ್ಲುಗುಡ್ಡದ ಚಂದ್ರು, ಕಾಳಿಂಗರಾವ್, ಬಿ.ಸರೋಜಾದೇವಿ, ನರಸಿಂಹರಾಜು, ಫಾಲ್ಕೆ, ಮಧುಬಾಲರ ಲೇಖನಗಳಿಗೆ ಬಿಜಾಪುರ, ಪುಣೆ, ಹಾಂಕ್‌ಕಾಂಗ್, ಆಸ್ಟ್ರೇಲಿಯಾದಿಂದ ಕನ್ನಡಿಗರನೇಕರು ಪತ್ರ ಬರೆದರು. ಮುತ್ತಿನ ಲೇಖನ ಭರ್ಜರಿ ಸಿಕ್ಸರ್ ಬಾರಿಸಿತು.

ಕನ್ನಡ ಚಲನಚಿತ್ರ ವಿಮರ್ಶೆಗೆ ಪುಷ್ಟಿಯನಿತ್ತರು ಪ್ರಕಾಶ್. ಅನುಭವ, ಪ್ರವಾಸ ಲೇಖನಗಳಿಗೆ ಬಂದಿತು ಆತ್ಮೀಯ ಪತ್ರ ಬಿಜಾಪುರದಿಂದ ಭಿಮಾಶಂಕರ್, ಹೊಸಪೇಟೆಯಿಂದ ಅಬ್ದುಲ್, ದುಬೈನಿಂದ ಬಶೀರ್, ಟಿ.ನರಸೀಪುರದ ನರಸಿಂಹ, ಸೋಸಲೆಯ ಸಿದ್ದೇಗೌಡರಿಂದ. ರಾಮಾಯಣ, ಮಹಾಭಾರತ, ಬರ್ಡ್‌ಫ್ಲೂಗಳ ಲೇಖನಗಳನ್ನೋದಿ ಮುಕ್ತ ಅನಿಸಿಕೆಗಳ ಬರೆದರು ಹಿರಿಯ ಐತಾಳರು.

ಹೀಗೆ ನನ್ನ ಲೇಖನಿಯ ಓದುಗ ಕುಟುಂಬ ಬೆಳೆದಂತೆ ಸಿಂಗಪುರದ ಮಾರ್ಗವಾಗಿ ತಾಯ್ನಾಡಿನತ್ತ ಹೋಗುವಾಗ ಮರೆಯದೆ ಫೋನಾಯಿಸಿ ಮನೆಗೆ ಬಂದು ಭೇಟಿಯಿತ್ತವರು ಸವಿತ ಮತ್ತು ರವಿ, ಬಾಬು ಮತ್ತು ಬಾನು, ಐತಾಳ್ ಹಾಗು ಹರಿ ದಂಪತಿಗಳು.

ಏರ್ ಪೋರ್ಟ್ ನಿಂದ ಅಭಿನಂದಿಸಿ ಫೋನಾಯಿಸಿದರು ಪಾಟಿಲ್, ಶ್ರೀನಿವಾಸ್, ಪ್ರೇಮ. ಪ್ರತಿಯೊಂದು ಲೇಖನಕ್ಕೂ ತಕ್ಷಣ ಉತ್ತರಿಸುವ ಭಲ್ಲೆ ಆತ್ಮೀಯರೆನಿಸಿದರು, ವೀಣಾ ಮಗಳಾದಳು, ರಾಘವೇಂದ್ರ ಮಗನೆನಿಸಿದ, ಬಸವ್, ಹರಿ ಆತ್ಮೀಯ ಸ್ನೇಹಿತರಾದರು. ಹೀಗೆ ಬರೆಯಲು ಕುಳಿತಲ್ಲಿ ದೊಡ್ಡ ಪಟ್ಟಿಯೇ ಬೆಳೆದೀತು. (ನನ್ನ ಲೇಖನಗಳಿಗೆ ಪ್ರತಿಕ್ರಯಿಸಿದ ಇನ್ನೂ ಅನೇಕ ಆತ್ಮೀಯರ ಹೆಸರುಗಳನ್ನು ಬರೆಯಲಾಗದಿದುದ್ದಕ್ಕೆ, ಕ್ಷಮೆ ಇರಲಿ).

ಲೇಖನ ಬರೆಯಲು ಪುಷ್ಟಿ ನೀಡಿದ್ದು ಸಿಂಗಪುರ ಕನ್ನಡ ಸಂಘದ ಕಾರ್ಯಕ್ರಮಗಳು ನಡೆಸಿದ ಕಾರ್ಯಕ್ರಮಗಳಿಗೆ ಆಹ್ವಾನಿತರಾಗಿ ಬಂದಿದ್ದ ಅನೇಕ ಕಲಾವಿದರು. ಮಾಸ್ಟರ್ ಹಿರಣ್ಣಯ್ಯ, ಅರಳುಮಲ್ಲಿಗೆ ಪಾರ್ಥಸಾರಥಿಯವರ ಕುಟುಂಬ, ಯಶವಂತ ಸರ ದೇಶಪಾಂಡೆಯವರು ಮನೆಗೆ ಔತಣಕ್ಕೆ ಬಂದಾಗ ಕೃತಾರ್ಥಳಾದೆ. ನಾರಾಯಣ ಮೂರ್ತಿ ದಂಪತಿಗಳಿಂದ ಕಲಿತದ್ದು "ಸಿಂಪಲ್ ಲಿವಿಂಗ್, ಹೈ ಥಿಂಕಿಂಗ್". ಹಿರಣ್ಣಯ್ಯ ಅವರ ಆತ್ಮೀಯತೆ, ಅರಳುಮಲ್ಲಿಗೆಯವರ ಮಾತುಗಾರಿಕೆ, ಗಿರೀಶ್ ಕಾರ್ನಾಡ ಪ್ರತಿಭೆ ಎದುರು ನಾ ಸೋತೆ. ಎರಡು ಮಾತನಾಡಿದಾಗ "ದಿಗ್ಗಜದ ಮುಂದೆ ಕುಬ್ಜತೆಯ ಅರಿವಾಯ್ತು".

ಪ್ರಾಯಶಃ ಬೆಂಗಳೂರಿನಲ್ಲಿದ್ದರೆ ಟಿ.ವಿ.ಯಲ್ಲಿ ಈ ಕಲಾವಿದರನ್ನು ನೋಡಿ ಸಂತೋಷಿಸುತ್ತಿದ್ದೆ. ಸಿಂಗಪುರ ಕರ್ನಾಟಕದ ಅತ್ಯುತ್ತಮ ಕಲಾವಿದರ, ನಿರ್ದೇಶಕರ ಸಂದರ್ಶನ, ಅನುಭವಗಳನ್ನು ನಾನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಇಂಬು ಕೊಟ್ಟಿತು. ಇವೆಲ್ಲಕ್ಕಿಂತ ಮಿಗಿಲಾಗಿ ಪರಿಚಯವಿಲ್ಲದೆ, ಪರಸ್ಪರರ ಅರಿಯದೇ ನನ್ನನ್ನು ನಿಮ್ಮೊಂದಿಗೆ ಬೆಸೆಯಿತು "ಅದುವೆ ಕನ್ನಡ"ದ ಕೊಂಡಿ.

ಈ ಬರಹದ ಮೈದಾನದಲ್ಲಿ ಅನುಭವವಿಲ್ಲದೆಯೇ ಇಳಿದ ನನ್ನ ಲೇಖನಿಗೆ ಸ್ಪೂರ್ತಿ, ಪುಷ್ಟಿ ದೊರೆತದ್ದು ನಿಮ್ಮಂತಹ ಸಹೃದಯ ಓದುಗರಿಂದ. ನಿಮ್ಮಗಳ ಮುಕ್ತ ಅಭಿಪ್ರಾಯ, ಸೂಚನೆ, ಸಲಹೆ, ಪ್ರಶಂಸೆ, ಮಾಹಿತಿ, ಟಿಪ್ಪಣಿಗಳು ನೀಡಿತು ನಾನೂ ಬರೆಯಬಲ್ಲೆನೆಂಬ ಆತ್ಮವಿಶ್ವಾಸ. ಈ ವಿಶ್ವದಲ್ಲಿ ಪ್ರತಿಯೋರ್ವನೂ ವಿದ್ಯಾರ್ಥಿಯೇ. ಈ ವಿಧ್ಯಾರ್ಥಿನಿಯಲಿ ಬರೆಯುವ ಆತ್ಮವಿಶ್ವಾಸ ಕಂಗೆಡದಂತೆ ಮಾಡುತ್ತಿರುವ ಸಮಸ್ತ ಅದುವೆ ಕನ್ನಡದ ಓದುಗರಿಗೆ ಈ ಶಿಕ್ಷಕರ ದಿನದಂದು ನನ್ನ ವಂದನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X